ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 8, 2021

ನನ್ನ ಮದುವೆ

                             ನಾನೂ ಮದುವೆಯಾದೆ.

ನಮ್ಮದು 35 ವರ್ಷಗಳ ಅನ್ಯೋನ್ಯ ದಾಂಪತ್ಯ . ಅನ್ಯ ಅಂದರೆ ವಿರಸ ಓನ್ಯ ಅಂದರೆ ಸರಸ (ಇದು ನನ್ನದೇ ಅರ್ಥ ವಿನ್ಯಾಸ ).ಹಾಗೆ ಸಮರಸ ದಿಂದ ನಡೆದಿದೆ .ಪತ್ನಿಯ ಹೆಸರು ಉಷಾ .ಬಾಳ ಸಂಧ್ಯೆಯಲ್ಲಿ ಕೂಡಾ ಉಷಾ ಕಿರಣ ಸಾನ್ನಿಧ್ಯ .

 ನನ್ನ ಹೆಂಡತಿ ಕೋಪ ಬಂದಾಗ ಒಂದು ಮೂಲ ಭೂತ ಪ್ರಶ್ನೆ ಕೇಳುತ್ತಾಳೆ ."ನಿಮ್ಮಂತ ವರಿಗೆ ಮದುವೆ ಏಕೆ ಬೇಕಿತ್ತು ?ಎಲ್ಲರೂ ಮದುವೆ ಆಗುವರೆಂದು ನೀವು ಅದುದೋ ? " ಇದನ್ನು ಗಹನವಾಗಿ ಆಲೋಚಿಸುತ್ತಿದ್ದೇನೆ . ಈಗ ತೋರುತ್ತದೆ ಇಷ್ಟರ ವರೆಗೆ ಬ್ರಹ್ಮಚಾರಿ ಆಗಿ ಉಳಿಯಬಹುದಿತ್ತು ;ಆದರೆ  ಮುದಿ ವಯಸ್ಸಿನಲ್ಲಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ದೊಡ್ಡ ಊರುಗೋಲು .ವೈದ್ಯರ  ಕುಟುಂಬ (ಗಂಡ ಅಥವಾ ಹೆಂಡತಿ )ತುಂಬಾ ತ್ಯಾಗ ಮಾಡಬೇಕಾಗುತ್ತದೆ . 

ನಾನು ಹುಡುಗಿಯ ಜಾತಕ  ನೋಡದೆ ಮದುವೆಯಾದೆ .  ನನ್ನ ಪತ್ನಿಗೆ ಆ ಬಗ್ಗೆ ಹೆಮ್ಮೆ ಮತ್ತು ಕೃತಜ್ನತೆ ಇಲ್ಲ .  ಆಗಾಗ ನೀವು ಅದೆಲ್ಲಾ ನೋಡದೆ ಮದುವೆಯಾದದ್ದೇ ಅವಾಂತರಕ್ಕೆ ಕಾರಣ ಎಂದು . 

ನನ್ನ ವಿವಾಹ ೨೫. ೧. ೧೯೮೭ ರಂದು ಕಂಬಳಿ ಬೆಟ್ಟಿನಲ್ಲಿ ನೆರವೇರಿತು . ನಾನು ಆಗ ಪುತ್ತೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ .ನನ್ನ ಬಳಿ ಸಾಲ ಮಾಡಿ ಕೊಂಡ ಒಂದು ಬೈಕ್ ಇತ್ತು . ಬ್ಯಾಂಕ್ ಬ್ಯಾಲೆನ್ಸ್ ಬಂದ ಸಂಬಳ ಮಾತ್ರ .ಚಿಮಿಣಿ ಎಣ್ಣೆ ಸ್ಟವ್ ಮತ್ತು ಒಂದು ಸಿಲಿಂಡರ್ ಗ್ಯಾಸ್ ಸ್ಟವ್,ಅರೆಯುವ ಕಲ್ಲು ಇದ್ದುದು ಮದುವೆಗೆ ಅರ್ಹತೆ . 

ಮದುವೆ ದಿಬ್ಬಣ ಸರ್ವಿಸ್ ಬಸ್ ನಲ್ಲಿ . ನನ್ನ ಮದುವೆಗೆ ನೆಂಟರಿಷ್ಟರು ನೂರೈವತ್ತು ಜನ ಆದರೆ ರೈಲ್ವೆ ನೌಕರರು ಅಷ್ಟೇ ಮಂದಿ ಬಂದಿದ್ದರು .ರೈಲ್ವೆ ಯಲ್ಲಿ  ಕಠಿಣ ಪರಿಶ್ರಮಿಗಳಾದ ಗ್ಯಾಂಗ್ ಮೆನ್  ಗಳನ್ನು  ನೀವು ನೋಡಿರ ಬಹುದು . ಹಳಿಯನ್ನು ಸುಸ್ಥಿತಿ ಯಲ್ಲಿ ಇಡಲು ದುಡಿಯುತ್ತಿರುತ್ತಾರೆ . ಅವರೇ ಬಂದವರಲ್ಲಿ ಅಧಿಕ .ನನ್ನ ಆಪ್ತರಾದ ನಾಗರಾಜಪ್ಪ ಎಂಬವರು ಅವರಿಗೆಲ್ಲ ಉಸ್ತುವಾರಿ ಎಂಜಿನಿಯರ್ .ದೊಡ್ಡ ಮನಸು ಮಾಡಿ ತಮ್ಮ ಲೋರಿಯನ್ನೇ ಮದುವೆಗೆ ಹೋಗಲು ಕೊಟ್ಟಿದ್ದರು .ಇದರಿಂದ ಲೋರಿ ಯಂತಹ ದೊಡ್ಡ ವಾಹನದಲ್ಲಿ ಮದುವೆಗೆ ಅತಿಥಿಗಳು ಬಂದ ಹೆಮ್ಮೆ ನನಗೆ . 

          ಹಿಂದೆಯೇ ನಾನು ಬರೆದಂತೆ ಮದುವೆಯ ದಿನ ವರನಿಗೆ ಹಿಡಿಯಲು ಕೊಡೆ ಒಯ್ಯಲು ಮರೆತಿದ್ದೆವು .ಕೊನೆಗೆ ಹುಡುಗಿಯ ಕೊಡೆಯನ್ನೇ ಕಡ ತೆಗೆದುಕೊಂಡಾಗ 'ಕೊಡೆ ಇಲ್ಲದ ಹುಡುಗನಿಗೆ ಹುಡುಗಿಯ ಕೊಡೆ "ಎಂಬ ಪನ್ ಹುಟ್ಟಿಕೊಂಡಿತು . 

                ಜಾತಿ ಅಂತಸ್ತು ನೋಡದೆ ಎಲ್ಲರೂ ಊಟ ಮಾಡಿದರು .ಆಗಿನ್ನೂ ಬಫೆ ಆರಂಭವಾಗಿ ಇರಲಿಲ್ಲ . ಪರವೂರಿನ ನೌಕರರಿಗೆ ನಮ್ಮ ಭಟ್ರ ಮದುವೆ ಊಟದ ಕ್ರಮಾವಳಿ ತಿಳಿದಿಲ್ಲವೆ ಎಡವಟ್ಟಾಯಿತು . ನಮ್ಮಲ್ಲಿ ಮೊದಲು ಅನ್ನ ಸಾರು ,ಪುನಃ ಅದರ ವಿಚಾರಣೆ ,ಮುಂದೆ ಸಾಂಬಾರು ಮತ್ತು ವಿಚಾರಣೆ ,ಪಾಯಸ,ಸ್ವೀಟ್  ,ಮಜ್ಜಿಗೆ ಹುಳಿ ,ಕೊನೆಗೆ ಮಜ್ಜಿಗೆ ಬರುವದು .ಹೊರಗಿಂದ ಬಂದವರು ಎರಡು ಎರಡು ಸಾರಿ ಸಾರು ಮತ್ತು ಸಾಂಭಾರ್ ನಲ್ಲಿ ಅನ್ನ ಕಲಸಿ ಹೊಟ್ಟೆ ತುಂಬಿಸಿ ಕೊಂಡು ಇನ್ನೂ ಐಟಂ ಗಳು ಬರುವಾಗ ಕೈ ಬಾಯಿ ಬಿಟ್ಟರು . ಈಗ ಬಫೆ ಬಂದಿದೆ ;ಮತ್ತು ಮೆನು ಕೂಡಾ ಹಾಕಿರುತ್ತಾರೆ . 

ಮದುವೆಗೆ ನನ್ನ ಎಂ ಬಿ  ಬಿ ಎಸ್ ಸಹಪಾಠಿ ಡಾ ಶ್ರೀಪತಿ ಒಬ್ಬರೇ ಬಂದಿದ್ದು .ಆಗ ಇನ್ನೂ ಮೊಬೈಲ್ ವ್ಹಾಟ್ಸ್ ಅಪ್ಪ್ ಇತ್ಯಾದಿ ಬಿಟ್ಟು ಲ್ಯಾಂಡ್ ಲೈನ್ ಕೂಡಾ ಇಲ್ಲದ ಕಾಲ . ನನ್ನ ಮಗನ ಮದುವೆ  ಕಾಲಕ್ಕೆ ಕಡಿದುಹೋದ   ಸಂಪರ್ಕ ಪುನಃ ಸ್ಥಾಪಿಸಲ್ಪಟ್ಟು ಸುಮಾರು  40 ಮಂದಿ  ಕುಟುಂಬ ಸಮೇತ  ಬಂದು ಹರಸಿದ್ದು  ವಿಶೇಷ .

ನನ್ನ ಮದುವೆಯ ಫೋಟೋಗ್ರಾಫರ್ ನಿಮಗೆಲ್ಲಾ ಪರಿಚಿತರಾದ ಶ್ರೀ ಶಂಕರ ಸಾರಡ್ಕ .ಕೊಡೆ ಹಿಡಿದವರು  ನನ್ನ ಅಕ್ಕನ ಗಂಡ ವಿ ಬಿ ಅರ್ತಿಕಜೆ .





 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ