ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 30, 2021

ಸರಕಾರಿ ಕಚೇರಿಯ ಒಂದು ಅಪರೂಪದ ಅನುಭವ

 ನನ್ನ ಮತ್ತು ಶ್ರೀಮತಿಯವರ ಪಾಸ್ ಪೋರ್ಟ್  ಕೆಲವೇ ತಿಂಗಳುಗಳಲ್ಲಿ ಅವಧಿ ಮುಗಿಯುವುದರಲ್ಲಿ ಇತ್ತು . ಪಾಸ್ ಪೋರ್ಟ್ ಒಂದು ವರ್ಷಕ್ಕೆ ಮೊದಲೇ ನವೀಕರಿಸ ಬಹುದು . ನನಗೆ ಸ್ವಲ್ಪ ಬಿಡುವು ಜಾಸ್ತಿ ಇದ್ದ ಕಾರಣ  ಈಗಲೇ ನವೀಕರಿಸುವ ಯೋಚನೆ ಮಾಡಿ ಅದಕ್ಕೆ ಅರ್ಜಿ  ಹಾಕಲು ಮಿತ್ರ ಸುಬ್ಬಣ್ಣ ಶಾಸ್ತ್ರಿಗಳನ್ನು ಕೇಳಿಕೊಂಡೆ . ಮೊದಲು ನಾನೇ ಆನ್ಲೈನ್ ಅಪ್ಲಿಕೇಶನ್ ಮಾಡುತ್ತಿದ್ದು ;ಈಗೀಗ ವಯಸ್ಸಾದ ಕಾರಣ ತಪ್ಪು ಆಗುವುದು ಬೇಡ ಎಂದು ಅವರ ಸಹಾಯ . ೨೩ ನೇ ತಾರೀಕು ಸಾಯಂಕಾಲ ೩. ೪೫ ಕ್ಕೆ ಅಪ್ಪೋಯಿಂಟ್ಮೆಂಟ್ . 

ಸಂಜೆ ಮೂರಕ್ಕೆ ಕೊಡಿಯಾಲ ಬೈಲಿನಲ್ಲಿ ಇರುವ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ತಲುಪಿದೆ .. ಇನ್ನೂ ಅರ್ಧ ಗಂಟೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ  ಸೆಕ್ಯೂರಿಟಿ ನನ್ನ ಅರ್ಜಿ ಕಾಪಿ ನೋಡಿ ಈಗಲೇ ಒಳ ಹೋಗಿ ಸರ್ ಎಂದ . ಅಲ್ಲಿ ಸ್ವಾಗತಕಾರಿಣಿ ಯವರು ನಮ್ಮ ಅರ್ಜಿ ಪರಿಶೀಲಿಸಿ ಟೋಕನ್ ಕೊಟ್ಟರು .ನನಗೆ ಸೀನಿಯರ್ ಸಿಟಿಝೆನ್ ಎಂದು ಬೇರೆ ನಂಬರ್ . ನಂಬರ್ ಬಿದ್ದ ಒಡೆನೇ  ಓರ್ವ ಹುಡುಗಿ ಬನ್ನಿ ಸಾರ್ ಎಂದು ಪ್ರಾಥಮಿಕ ಪರಿಶೀಲನಾ ಕೌಂಟರ್ ತೋರಿಸಿದಳು . ಮೇಲೆ  ವಿದ್ಯುನ್ಮಾನ ಸೂಚಕ ಗಳಲ್ಲಿ ನಮ್ಮ ನಂಬರ್ ಯಾವ ಕೌಂಟರ್ ಎಂದು ಬರುತ್ತದೆ .ಆದರೆ ಯಾವುದೇ ಗಲಿಬಿಲಿ ಅಸೌಕರ್ಯ ಆಗದಂತೆ ಸಹಾಯ ಮಾಡಲು ತುದಿ ಗಾಲಿನಲ್ಲಿ ನಿಂತ ಸಹಾಯಕಿಯರು . ಹತ್ತು ನಿಮಿಷದಲ್ಲಿ ನನ್ನ ಕೆಲಸ ಆಯಿತು .(ಸೀನಿಯರ್ ಆದ ಕಾರಣ ).ಇನ್ನು ಒಂದು ಕಾಲು ಗಂಟೆಯಲ್ಲಿ ನನ್ನ ಪತ್ನಿಯ ಕೆಲಸವೂ ಆಯಿತು .ಹೊರಗೆ ಕಾಯುತ್ತಿದ್ದ ನನ್ನ ಬಳಿಗೆ ಒಬ್ಬಳು ಹುಡುಗಿ ಅವಳನ್ನು ಕರೆದು ಕೊಂಡು ಬಂದಳು . 

ವಾಪಾಸು ಪುತ್ತೂರಿಗೆ ಬರುವಷ್ಟರಲ್ಲಿ ಬೆಂಗಳೂರು ಪಾಸ್ ಪೋರ್ಟ್ ಆಫೀಸ್ ನಿಂದ ನಿಮ್ಮ ಪಾಸ್ ಪೋರ್ಟ್ ಮುದ್ರಣ ಕಾರ್ಯ ಮುಗಿದಿದೆ ಎಂಬ ಸಂದೇಶ . ಗುರುವಾರ ಸಂಜೆ ನಾವು ಈ ಕೆಲಸಕ್ಕೆ ಮಂಗಳೂರಿಗೆ ಹೋಗಿದ್ದು ,ಶನಿವಾರ ಪಾಸ್ ಪೋರ್ಟ್ ಬಂದೂ ಆಯಿತು . 

ನಿಮಗೆ ತಿಳಿದಿರುವಂತೆ ಪಾಸ್ಪೋರ್ಟ್ ಸೇವಾ ಕೇಂದ್ರ ಗಳನ್ನು  ಟಿ ಸಿ ಎಸ ಕಂಪನಿ ಯವರಿಗೆ ಹೊರ ಗುತ್ತಿಗೆ ನೀಡಿದ್ದು ,ಕಾರ್ಯ ಕ್ಷಮತೆ ಒಳ್ಳೆಯ ಮಟ್ಟದಲ್ಲಿ ಇದೆ . ಅಲ್ಲಿ ಹಿರಿಯ ನಾಗರಿಕರಿಗೆ , ಅವಿದ್ಯಾವಂತರಿಗೆ ಸಹಾಯ ಹಸ್ತ ಇದೆ . ಕಚೇರಿಯಲ್ಲಿ ನಾಗರಿಕ ಸೌಲಭ್ಯ  ಚೆನ್ನಾಗಿ ಇದೆ . ನಮಗೆ ಅನಿಸುವದು ಒಂದೇ , ನಮ್ಮ ಮುಖ್ಯವಾಗಿ  ರಾಜ್ಯ ಸರಕಾರದ ಕಚೇರಿಗಳು ಎಂದು ಹೀಗೆ ಸೇವೆ ನೀಡಿಯಾವು ?

ಬಾಲಂಗೋಚಿ :ಕೋವಿಡ್  ಕಾರಣ ರಶ್ ಕಮ್ಮಿ ಇರುವುದು ಒಂದು ಕಾರಣ ಇರ ಬಹುದು .ಕಳೆದ ಸಾರಿ ಹತ್ತು ವರ್ಷ ಮೊದಲೂ ಜನ ಜಂಗುಳಿ ಇದ್ದರೂ ಸೇವೆ ಉತ್ತಮ ಇತ್ತು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ