ಮಿತ್ರ ಭಗವಾನ್ ಸಿಂಗ್
ನನ್ನ ಎಂ ಬಿ ಬಿ ಎಸ್ ಸಹಪಾಠಿ ಶ್ರೀ ಭಗವಾನ್ ಸಿಂಗ್ . ನನ್ನ ಬ್ಯಾಚ್ ಮೇಟ್ ಕೂಡಾ .ಹಾಸ್ಟೆಲ್ ನಲ್ಲಿ ಮೊದಲ ಎರಡು ವರ್ಷ ನನ್ನ ರೂಮಿನ ನೇರ ಎದುರು ಕೊಠಡಿ . ಸ್ನೇಹಜೀವಿ ;ಅಪರೂಪದ ಹಾಸ್ಯ ಪ್ರಜ್ಞೆ ಇತ್ತು .
ಈತ ಹುಟ್ಟಿ ಬೆಳೆದದ್ದು ಮಲೇಷ್ಯಾ ದೇಶದಲ್ಲಿ . ಈ ದೇಶದಲ್ಲಿ ಸ್ಥಳೀಯ ಮಲಯಾ ನಿವಾಸಿಗಳು ,ಚೈನೀಸ್ ಬಿಟ್ಟರೆ ಮೂರನೇ ಸ್ಥಾನದಲ್ಲಿ ಭಾರತೀಯ ಮೂಲದವರು ಇದ್ದಾರೆ .ಇವರಲ್ಲಿ ಕೂಡಾ ತಮಿಳರು ,ಮಲಯಾಳಿಗಳು ಮತ್ತು ತೆಲುಗರು ಅಧಿಕ ಸಂಖ್ಯೆಯಲ್ಲಿ ಇದ್ದು ರಬ್ಬರ್ ತೋಟ ಮತ್ತು ಕೈಗಾರಿಗೆ ,ನಿರ್ಮಾಣ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ . ಸಿಖ್ಖರು ಅಲ್ಪ ಸಂಖ್ಯೆಯಲ್ಲಿ ಇದ್ದು ಮೂಲತಃ ಸೈನ್ಯ ,ಪೋಲಿಸ್ ಮತ್ತು ನಾಗರೀಕ ಸೇವಾ ವೃತ್ತಿಗಳಿಗಾಗಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ನೇಮಕವಾದವರು . ಜಗತ್ತಿನ ಎಲ್ಲೆಡೆಯಂತೆ ಇವರು ಶ್ರಮ ಜೀವಿಗಳು ;ಒಳ್ಳೆಯ ಸ್ನೇಹಿತರು .
ಭಗವಾನ್ ಸಿಂಗ್ ಯಾವತ್ತೂ ನಗುಮುಖ .ಹಾಸ್ಟೆಲ್ ಕಾರಿಡಾರ್ ನಲ್ಲಿ ಹಿಂದಿ ಹಾಡು ಗಟ್ಟಿಯಾಗಿ ಹಾಡುತ್ತಾ ಹೋಗುವರು . ಮಾತು ಮಾತಿಗೆ ಲಾ ಲಾ ಎಂಬ ಶಬ್ದ ಸೇರಿಸುವರು .ಉದಾ ಟುಡೇ ನೋ ಕ್ಲಾಸ್ ಲಾ .,ಬ್ರೇಕ್ಫಾಸ್ಟ್ ಇಡ್ಲಿ ಲಾ ಇತ್ಯಾದಿ .ಮೊದಲು ನಾನು ಈತ ಮಾತ್ರ ಹೀಗೆ ಎಂದು ತಿಳಿದು ಕೊಂಡಿದ್ದೆ .ಆಮೇಲೆ ಮಲೇಷ್ಯಾ ಕ್ಕೆ ಭೇಟಿ ನೀಡಿದಾಗ ಎಲ್ಲಾ ಭಾರತೀಯ ಮೂಲದವರ ಅಭ್ಯಾಸ ಎಂಬುದು ತಿಳಿಯಿತು .
ನಾವು ಕ್ಲಿನಿಕಲ್ ತರಗತಿಯಲ್ಲಿ ಇರುವಾಗ ಈತ ರೋಗಿಗಳ ಜೊತೆ ಕನ್ನಡದಲ್ಲಿ ಮಾತನಾಡುವದು ಅನಿವಾರ್ಯ ಆಯಿತು . ರೋಗಿಗಳ ಜತೆ "ನಿಮ್ ಹೆಸರೇನು .,ಏನ್ ಮಾಡ್ತಾರಾ ,ಏನ್ ತೊನ್ದ್ರ ,ಇತ್ಯಾದಿ ಮಾತನಾಡುವನು . ನಮ್ಮ ಸರ್ಜರಿ ಪ್ರಾಧ್ಯಾಪಕ ಡಾ ಕೆ ಜಿ ನಾಯಕ್ ಇವನನ್ನು ಸಿಂಗೂ ಎಂದು ಕರೆಯುವರು .ವ್ಹಾಟ್ ಸಿಂಗೂ ವಾಟ್ ಐಸ್ ಯುವರ್ ಡೈಗನೊಸಿಸ್ ?ಈತ ಗಡ್ಡ ಕೆರೆದು ಕೊಂಡು ಸಂಶಯದಲ್ಲಿ ಒಂದು ಉತ್ತರ ನೀಡುವನು . ಏನಾ ಸಿಂಗು ಏನಾದರೂ ಬಾಯಿಗೆ ಬಂದ ಹಾಗೆ ಹೇಳುತ್ತಾನೆ ಎಂದು ಪ್ರೀತಿಯಿಂದ ಬೈಯ್ಯುವರು .ನನಗೂ ಏನಾ ಭಟ್ಟು ನೀನು ಸರಿ ಓದಿ ಬರುವುದಿಲ್ಲ ಎನ್ನುವರು .
ಭಗವಾನ್ ಸಿಂಗ್ ಭಾರತ ಸರಕಾರದ ಕೋಟ ದಲ್ಲಿ ಕೆ ಎಂ ಸಿ ಹುಬ್ಬಳ್ಳಿಗೆ ಬಂದವನು . ಹೌಸ್ ಸರ್ಜೆನ್ಸಿ ಕೂಡಾ ನಾವು ಜತೆಯಾಗಿ ಮಾಡಿದೆವು . ಮರಳಿ ತನ್ನ ದೇಶಕ್ಕೆ ತೆರಳಿ ಪ್ರಾಕ್ಟೀಸ್ ಆರಂಭಿಸಿ ಜನಪ್ರಿಯ ವೈದ್ಯ .ಆತನ ಪತ್ನಿ ಅಮರಜಿತ್ . ಅನ್ಯೋನ್ಯ ಕುಟುಂಬ ..ಸಹಪಾಠಿಗಳ ಜತೆ ನಿರಂತರ ಸಂಪರ್ಕ .ಅವರ ಮಕ್ಕಳ ಮದುವೆಗೆ ದೂರದ ಮಲೇಷ್ಯಾ ದಿಂದ ಕುಟುಂಬ ಸಮೇತ ಬರುವರು . ನನ್ನ ಮಗನ ಮದುವೆಗೆ ಪುತ್ತೂರಿಗೆ ಬಂದು ಎರಡು ದಿನ ನಮ್ಮ ಅತಿಥಿಯಾಗಿದ್ದು ಸಂತೋಷ ಪಟ್ಟರು .ನಮಗೆ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಆಗಲಿಲ್ಲ .
ಭಗವಾನ್ ಗೆ ಅರುವತ್ತು ವರ್ಷ ಆದ ಸಂದರ್ಭ ನಾವು ಕೆಲವು ಮಿತ್ರರು ಅವರಿಗೆ ತಿಳಿಯದಂತೆ (ಪತ್ನಿಗೆ ತಿಳಿಸಿದ್ದೆವು )ಕ್ವಾ ಲಾ ಲಂಪುರ್ ಗೆ ತೆರಳಿ ಅಲ್ಲಿ ಸ್ಥಳೀಯ ಬಂಧುಗಳು ಆಯೋಜಿಸಿದ್ದ ಷಷ್ಠ್ಯಬ್ದಿ ಸಮಾರಂಭಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟಾಗ ಅವರ ಸಂತಸ ಗಗನಕ್ಕೆ .ನಾನೂ ಆ ದಿನ ಜೀವನದಲ್ಲಿ ಮೊದಲ ಭಾರಿ ನೃತ್ಯ ಅದೂ ಬಾಂಗ್ರಾ ಮಾಡಿದೆ .
ನನಗೆ ಓದುವ ಹವ್ಯಾಸ ಇದೆ ಎಂದು ಮಲೇಶಿಯಾದಿಂದ ಒಂದು ಭಾರೀ ಪುಸ್ತಕದ ಕಟ್ಟು ಪಾರ್ಸೆಲ್ ಮಾಡಿದ್ದರು .
ನಾನು ವೈದ್ಯನಾಗಿ ಧನಾರ್ಜನೆ ಮಾಡಿದ್ದು ಏನೇನೂ ಸಾಲದು ಎಂದು ನನ್ನ ಹಿತೈಷಿಯಗಳು ಕನಿಕರ ಪಡುವರು ;ಆದರೆ ಕಾಲ ಕಾಲಕ್ಕೆ ನನಗೆ ಒದಗಿ ಬಂದ ನಿರ್ಧನ ನಿರ್ಮಲ ನಿರ್ಮತ್ಸರ ಸ್ನೇಹ ಸಂಪತ್ತು ನನ್ನ ಭಾಗ್ಯ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ