ದೃಷ್ಟಿ ತಾಗುವುದು (ಕಣ್ಣು ಮುಟ್ಟುವುದು)
ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ
ಕೆಟ್ಟ ಪಾಪಿ ದೃಷ್ಟಿ ತಾಗಿತು ||
ಶಿಶು ಹಸಿದನೆಂದು ಗೋಪಿ
ಮೊಸರು ಕುಡಿಸುತ್ತಿರಲು ನೋಡಿ
ಹಸಿದ ಬಾಲರ ದೃಷ್ಟಿ ತಾಗಿ
ಮೊಸರು ಕುಡಿಯಲೊಲ್ಲನೆ ||
ಕೃಷ್ಣ ಹಸಿದನೆಂದು ಗೋಪಿ
ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ
ಕೊಟ್ಟ ಹಾಲು ಮುಟ್ಟನೆ ||
ಚಿಣ್ಣ ಹಸಿದನೆಂದು ಗೋಪಿ
ಬೆಣ್ಣೆ ಕೈಯಲಿ ಕೊಡಲು ನೋಡಿ
ಸಣ್ಣ ಬಾಲರ ದೃಷ್ಟಿ ತಾಗಿ
ಬೆಣ್ಣೆ ವಿಷಮವಾಯಿತೆ ||
ಅಂಗಿ ಹಾಕಿ ಉಂಗುರವಿಟ್ಟು
ಕಂಗಳಿಗೆ ಕಪ್ಪನಿಟ್ಟು
ಅಂಗಳದೊಳು ಆಡೊ ಕೃಷ್ಣಗೆ
ಹೆಂಗಳಾ ದೃಷ್ಟಿ ಇದೇನೋ ||
ಶಲ್ಲೆ ಉಡಿಸಿ ಮಲ್ಲೆ ಮುಡಿಸಿ
ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರವಿಠಲನ
ಫುಲ್ಲನೇತ್ರರು ನೋಡಿದರೇನೋ ||
ದೃಷ್ಟಿ ತಾಗುವುದು ಮತ್ತು ದೃಷ್ಟಿ ತೆಗೆಯುವುದು ಎಂಬ ನಂಬಿಕೆ ಜನರಲ್ಲಿ ತಲೆ ತಲಾಂತರಗಳಿಂದ ನೆಲೆಯೂರಿದೆ. ಹೆಚ್ಚಾಗಿ ಪುಟ್ಟ ಕಂದಮ್ಮಗಳಿಗೆ ದೃಷ್ಟಿ ತಾಗುವುದು ಎಂಬ ಭಯ . ವೈಜ್ನಾನಿಕವಾಗಿ ಯೋಚಿಸಿದರೆ ಮಕ್ಕಳ ನಾಮಕರಣ ,ಅನ್ನ ಪ್ರಾಶನ ಇತ್ಯಾದಿ ಕಾರ್ಯಕ್ರಮಗಳಿಗೆ ಬಂದ ಅತಿಥಿಗಳಲ್ಲಿ ಯಾರಿಗಾದರೂ ವೈರಸ್ ಕಾಯಿಲೆ ,ಕೆಮ್ಮು ಇತ್ಯಾದಿ ಯಾರಿಗಾದರೂ ಇರುವುದು ,ಮಗುವಿಗೆ ಗಾಳಿ ಮೂಲಕ ಹರಡಿ ಜ್ವರ ಶೀತ ಇತ್ಯಾದಿ ಉಂಟಾಗುವುದು .ಮಗುವಿಗೆ ಅನ್ನ ಉಣ್ಣಿಸುವವರ ಮತ್ತು ಜೇನು ನಕ್ಕಿಸುವವರ ಕೈಯಲ್ಲಿ ರೋಗಾಣು ಇರ ಬಹುದು ; ಜತೆಗೆ ಮಕ್ಕಳ ಕೈಯಲ್ಲಿ ನೋಟು ಉಡುಗೊರೆಯಾಗಿ ಇಡುವರು .ನೋಟುಗಳ ನೈರ್ಮಲ್ಯ ನೀವು ಕಂಡೇ ಇರುವಿರಿ .ಅವುಗಳಿಂದ ಮಗುವಿಗೆ ಭೇದಿ ಆಗ ಬಹುದು .ಇದನ್ನೆಲ್ಲಾ ' ದೃಷ್ಟಿ' ಎಂದು ವೈಜ್ಣಾನಿಕ ದೃಷ್ಟಿ ಇಲ್ಲದವರು ಕರೆವರು .
ಇದೇ ಸಮಸ್ಯೆ ಗರ್ಭಿಣಿ ಯ ಸೀಮಂತ ಕಾರ್ಯಕ್ರಮದಲ್ಲಿಯೂ ಆಗ ಬಹುದು .
ನಾಳಿಗೆಯಲ್ಲಿ ಮಚ್ಚೆ ಇರುವವರು ಏನಾದರೂ ಕಾಮೆಂಟ್ ಮಾಡಿದರೆ ದುಷ್ಪರಿಣಾಮ ಜಾಸ್ತಿ ಎನ್ನುವರು . ಇಂತಹ ಕೆಲವರನ್ನು ಕುಖ್ಯಾತ ದೃಷ್ಟಿ ತಾಗಿಸುವವರ ಪಟ್ಟಿಗೆ ಸೇರಿಸಿ ಜನರು ಅವರನ್ನು ದೂರ ಇಡುವರು . ನಾಗವೇಣಿ ಸುಂದರಿಯನ್ನು ಎಷ್ಟು ಉದ್ದ ಮಾರಾಯತಿ ನಿನ್ನ ಜಡೆ ಎಂದು ಅವರು ಅಂದರೆ ಸಾಕು ಚಳಿಕಾಲದಲ್ಲಿ ಉದುರುವ ಮರದ ಎಲೆಗಳಂತೆ ಉದುರಿ ಅವಳ ತಲೆ ಬೋಳಾಗಿ ಉದುರಿ ಉಪಯೋಗಿಸ ಬೇಕಾಗುವುದು .
ನಂಬುವವರ ಪ್ರಕಾರ ಬೆಳೆದ ಬೆಳೆ ,ವ್ಯಾಪಾರ ವ್ಯವಹಾರ ಇತ್ಯಾದಿ ಎಲ್ಲದಕ್ಕೂ ಕಣ್ಣು ಮುಟ್ಟ ಬಹುದು .
ದೃಷ್ಟಿ ತಾಗದಂತೆ ಮಕ್ಕಳಿಗೆ ಕಾಡಿಗೆ ಹಚ್ಚುವರು ,ಕೈಗೆ ಕರಿಮಣಿ ತೊಡಿಸುವರು . ಮಗುವಿಗೆ ಸುತ್ತಿ ಸಾಸಿವೆ ಉಪ್ಪು ಬೆಂಕಿಗೆ ಹಾಕುವರು . ನನ್ನ ಚಿಕ್ಕಂದಿನಲ್ಲಿ ಬಳ್ಳಿ ಬ್ಯಾರಿ ಎಂಬವರು ಮಂತರಿಸಿ ನಮ್ಮ ತಲೆಗೆ ಸೊಪ್ಪಿನಿಂದ ತಟ್ಟಿ ದೃಷ್ಟಿ ತೆಗೆಯುತ್ತಿದ್ದರು .
ಕೆಲವು ದೃಷ್ಟಿಯ ಕಟ್ಟು ಕತೆಗಳೂ ಇವೆ . ಒಂದು ದೊಡ್ಡ ಬಂಡೆಗಲ್ಲು ಒಡೆಯಲು ಯಾರಿಗೂ ಸಾಧ್ಯವಾಗಲಿಲ್ಲವಂತೆ .ಆಗ ಊರಿನ ದೊರೆ ಕುಖ್ಯಾತ ನಾಲಿಗೆಯ ಒಬ್ಬನ ಸಹಾಯ ಕೇಳುತ್ತಾನೆ .ಆತ ರಾತ್ರಿ ಒಂದು ದೊಡ್ಡ ವಸ್ತ್ರವನ್ನು ಬಂಡೆಗೆ ಹೊಡಿಸಿ ,ಮುಂಜಾನೆ ಬಂದು ದಾನೆ ಮಾರಾಯ ನಣಲಾ ನಿಕ್ಕು ಬೋಲ್ಪು ಅತೀಜ್ಯ ,ಲಕ್ಕುದಿಜ್ಯ ,ದಾನೆ "ಎಂದೊಡನೆ ಬಂಡೆ ತಾನೇ ಒಡೆದು ಚೂರು ಚೂರು ಆಯಿತಂತೆ .
ಫೇಸ್ ಬುಕ್ ನಲ್ಲಿ ನನ್ನನ್ನು ಮತ್ತು ನನ್ನ ಬರವಣಿಗೆ ನೋಡಿ ನಿಮ್ಮ ಕಣ್ಣು ಮುಟ್ಟೀತು ಎಂದು ನನ್ನ ಹೆಂಡತಿ ದಿನಾಲೂ ಸಾಂಭ್ರಾಣಿ ಸೊಪ್ಪಿನ ಹೊಗೆ ಹಾಕಿ ನನ್ನನ್ನು ಸೇನಿಟೈಸ್ ಮಾಡುವಳು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ