ಸತ್ಯ ಸಾಯಿ ಬಾಬಾ ದರ್ಶನ
೨೦ ವರ್ಷಗಳ ಹಿಂದೆ ನಾನು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಅಧ್ಯಾಪಕ ನಾಗಿ ಇದ್ದ ಸಮಯ . ಶ್ರೀ ಸತ್ಯ ಸಾಯಿ ಬಾಬಾ ಅಳಿಕೆಗೆ ಭೇಟಿ ಇಟ್ಟು ,ಅಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಅಲ್ಲ ಸುಪೀರಿಯರ್ ಆಸ್ಪತ್ರೆ(ಇದು ಅವರ ನುಡಿಗಟ್ಟು ) ನಿರ್ಮಿಸುವ ಆಶ್ವಾಸನೆ ಕೊಟ್ಟರು ..ಅಳಿಕೆ ನನ್ನ ಜನ್ಮ ಸ್ಥಳವಾದ ಅಂಗ್ರಿಗೆ ಅರ್ಧ ಮೈಲು ದೂರ . ನಾನು ಶಾಲೆಗೆ ಕನ್ಯಾನಕ್ಕೆ ಹೋದರೂ . ಗ್ರಾಮೀಣ ಪ್ರದೇಶವಾದ ನಮ್ಮ ಊರಲ್ಲಿ ದೊಡ್ಡ ಆಸ್ಪತ್ರೆ ಬರುವದು ಕೇಳಿ ಸಂತೋಷ ಆಯಿತು . ಅಲ್ಲದೆ ಸಾಯಿ ಬಾಬಾ ನಡೆಸುವ ಆಸ್ಪತೆಗಳಲ್ಲಿ ಬಿಲ್ ಕೌಂಟರ್ ಇಲ್ಲಾ .ಎಲ್ಲಾ ಉಚಿತ .
ಸಂಬಳ ಕಡಿಮೆ ಇದ್ದರೂ (ಎಷ್ಟು ಎಂದು ಗೊತ್ತಿರಲಿಲ್ಲ )ಊರಿನ ಜನರ ಸೇವೆ ಮಾಡುವ ಅವಕಾಶ ಎಂದು ಅಲ್ಲಿ ಕೆಲಸ ಮಾಡುವ ಇಚ್ಛೆ ಯನ್ನು ಉಳುವಾನ ಗಂಗಾಧರ ಭಟ್ ಅವರಲ್ಲಿ ಅರುಹಿದೆ . ತಾವು ಈ ಬಗ್ಗೆ ಶ್ರೀ ಸತ್ಯ ಸಾಯಿ ಬಾಬಾ ಅವರನ್ನು ಭೇಟಿ ಮಾಡಲು ಬೆಂಗಳೂರು ವೈಟ್ ಫೀಲ್ಡ್ ನಲ್ಲಿರುವ ಅವರ ಆಶ್ರಮಕ್ಕೆ ಹೋಗುವುದಾಗಿಯೂ ,ತಾವೂ ಜತೆ ಗೂಡಿ ಎಂದು ತಿಳಿಸಿದರು .
ಗಂಗಾಧರ ಭಟ್ ,ನಾನು ಮತ್ತು ಇನ್ನಿತರ ವೈದ್ಯರು (ಅವರು ಈರ್ವರೂ ಸಾಯಿ ಬಾಬಾ ಅವರ ಕಟ್ಟಾ ಭಕ್ತರು ),ಅಳಿಕೆ ಶಾಲೆಯ ಇನ್ನಿಬ್ಬರು ಜತೆ ಗೂಡಿ ಬೆಂಗಳೂರಿಗೆ ಗೊತ್ತು ಪಡಿಸಿದ ದಿನ ತೆರಳಿದೆವು .ಮುದ್ದೇನ ಹಳ್ಳಿಯಿಂದ ಶ್ರೀ ನಾರಾಯಣ ರಾಯರು ನಮ್ಮನ್ನು ಸೇರಿ ಕೊಂಡರು . ವೈಟ್ ಫೀಲ್ಡ್ ಆಶ್ರಮದಲ್ಲಿ ನಮಗೆ ವಸತಿ ವ್ಯವಸ್ಥೆ ಆಗಿತ್ತು . ಮುಂಜಾನೆ ಉಪಹಾರ ಸೇವನೆ ,ಎಲ್ಲೆಲ್ಲ್ಲೂ ಶ್ವೇತ ವಸ್ತ್ರ ಧಾರಿ ಹಸನ್ಮುಖಿ ಸ್ವಯಂ ಸೇವಕರು . ದೇಶ ವಿದೇಶದವರು . ಜಗತ್ತಿನ ಎಲ್ಲಾ ಖಂಡದವರೂ ಭಕ್ತರಾಗಿ ಸ್ವಯಂ ಸೇವಕರಾಗಿ ಓಡಾಡುತ್ತಿದ್ದರು .. ಸೇವೆ ಮಾಡುವ ಕೈಗಳು ಪೂಜಿಸುವ ಕೈಗಳಿಗಿಂತ ಮೇಲು ಎಂಬ ಗೋಡೆ ಬರಹ ನನ್ನ ಗಮನ ಸೆಳೆಯಿತು
ಸಾಮೂಹಿಕ ದರ್ಶನಕ್ಕೆ ದೊಡ್ಡ ಹಾಲ್ ಇದೆ .ಎಲ್ಲರೂ ಜಾತಿ ಅಂತಸ್ತು ಭೇದ ಇಲ್ಲದೆ ಕುಳಿತಿದ್ದು ಬಾಬಾ ಅವರಿಗೆ ಕಾಯುವರು . ಸ್ವಲ್ಪ ಹೊತ್ತಿನಲ್ಲಿ ದೀಪಗಳು ಬೆಳಗಿದವು ,ಸಣ್ಣ ದನಿಯಲ್ಲಿ ವಾದ್ಯ ಸಂಗೀತ ಆರಂಭವಾಯಿತು .ಬಾಬಾ ತಮ್ಮ ಕೊಠಡಿ ಯಿಂದ ಮೆಲ್ಲ ಮೆಲ್ಲನೆ ಭಕ್ತ ಸಮೂಹದ ಮಧ್ಯೆ ಬಂದರು . ಅವರ ಹಿಂದೆ ,ಅಕ್ಕ ಪಕ್ಕದಲ್ಲಿ ಸಹಾಯಕರು . ಬಾಬಾ ಅವರನ್ನು ಮಾತನಾಡಿಸಲು ,ತಾವು ಬರೆದು ತಂದ ನಿವೇದನೆಗಳನ್ನು ಅವರಿಗೆ ಕೊಡಲು ಎಲ್ಲರಿಗೂ ಕಾತರ . ಬಾಬಾ ಅದರಲ್ಲಿ ಕೆಲವರತ್ತ ಮಾತ್ರ ದೃಷ್ಟಿ ಬೀರುವರು ,ಕೆಲವರ ಪತ್ರಗಳನ್ನು ಕೈಯಲ್ಲಿ ಸ್ವೀಕರಿಸಿ ಸಹಾಯಕರಿಗೆ ಕೊಡುವರು . ನಮ್ಮ ಬಳಿಗೆ ಬಂದೊಡನೆ ಅಳಿಕೆಯವರನ್ನು ಗುರುತಿಸಿ ಕ್ಷೇಮವೇ ಎಂದು ಕೇಳಿ ಆಮೇಲೆ ಬಂದು ಕಾಣಿರಿ ಎಂದು ಸೂಚಿಸಿದರು .
ಅಂತೆಯೇ ಸಮೂಹ ದರ್ಶನವಾದ ಕೂಡಲೇ ನಾವು ಅವರ ದರ್ಶನ ಕೊಠಡಿಗೆ ತೆರಳಿದೆವು . ಅಲ್ಲಿ ಅವರು ಆಸ್ಪತ್ರೆ ಬಗ್ಗೆ ತಮ್ಮ ಆಶಯವನ್ನು ವಿವರಿಸಿದರು . ಒಂದು ವಿಚಾರ ಸ್ಪಷ್ಟ ;ಅವರು ತಾವು ನಡೆಸುವ ಶಿಕ್ಷಣ ಮತ್ತು ಅರೋಗ್ಯ ಸಂಸ್ಥೆ ಗಳು ವಾಣಿಜ್ಯ ಕರಣ ಆಗುವದು ಬಯಸುವುದಿಲ್ಲ .ತಮ್ಮ ವೈಟ್ ಫೀಲ್ಡ್ ಆಸ್ಪತ್ರೆಯನ್ನು ಭಕ್ತರೇ ಆದ ಉದ್ಯಮಿಗಳು ಮೆಡಿಕಲ್ ಕಾಲೇಜು ನಡೆಸಲು ಅಟ್ಯಾಚ್ಮೆಂಟ್ ಕೋರಿದಾಗ ಇದೇ ಕಾರಣಕ್ಕೆ ನಿರಾಕರಿಸಿದ ವಿಷಯ ತಿಳಿಸಿದರು .ಬಾಬಾ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದರು . ಅರ್ಧ ಗಂಟೆ ಸಂದರ್ಶನ ಮುಗಿದ ಮೇಲೆ ಕಯ್ಯಿಂದ ಭಸ್ಮ ಎಲ್ಲರಿಗೂ ಕೊಟ್ಟುದಲ್ಲದೆ ಅದನ್ನು ಕಟ್ಟಿಕೊಳ್ಳಲು ಪೇಪರ್ ತುಂಡು ಕೂಡಾ . ಆಮೇಲೆ ಬಾಗಿಲಿನ ವರೆಗೆ ಬಂದು ನಮ್ಮನ್ನು ಬೀಳ್ಕೊಟ್ಟರು . ತಮ್ಮ ಕಾಲಿಗೆ ಬೀಳುವುದು ,ಅತೀವ ಭಕ್ತಿ ಪ್ರದರ್ಶನ ಮಾಡುವುದು ಇತ್ಯಾದಿ ಕಡೆಗೆ ಅವರು ಹೆಚ್ಚು ಗಮನ ಕೊಟ್ಟಂತೆ ಕಾಣುವುದಿಲ್ಲ .
ಸಂದರ್ಶನ ಮುಗಿಸಿ ನಾವು ಊರಿಗೆ ಮರಳಿದೆವು .ನನ್ನ ಬಂಧು ಮತ್ತು ಗೆಳೆಯ ಸಾಯಿ ಭಕ್ತರು ನಾನು ಅದೃಷ್ಟ ಶಾಲಿ ;ಸಾಯಿ ದರ್ಶನ ಮೊದಲ ದಿನವೇ ಆಯಿತು ಎಂದು ಸಂತೋಷ ಪಟ್ಟರು .ಮುಂದೆ ಸಮೀಪದಲ್ಲಿ ಬಾಬಾ ಅರೋಗ್ಯ ಕೈಕೊಟ್ಟುದರಿಂದ ದೊಡ್ಡ ಮಟ್ಟದ ಆಸ್ಪತ್ರೆ ಆಗಲಿಲ್ಲ ..ಹೊರ ರೋಗ ವಿಭಾಗ ಮಾತ್ರ ಆರಂಭವಾಗಿ ಈಗಲೂ ನಡೆಯುತ್ತಿದೆ . ನನ್ನೊಡನೆ ಬಂದಿದ್ದ ಡಾ ಆನಂದ ಬೆಟ್ಟದೂರ್ ಕಿಮ್ಸ್ ಹುಬ್ಬಳ್ಳಿಯ ತಮ್ಮ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು ಅಳಿಕೆ ಆಸ್ಪತ್ರೆಗೆ ಬಂದರು ,ಸಜ್ಜನ .ವಿ . ಕೆ .ಗೋಕಾಕ ಅವರ ಬಂಧು . ನಾನು ಕೆ ಎಸ ಹೆಗ್ಡೆ ಆಸ್ಪತ್ರೆಯಲ್ಲಿ ಮುಂದುವರಿದೆನು .
ನಾನು ಸಾಯಿ ಬಾಬಾ ಅವರ ಕಟ್ಟಾ ಭಕ್ತ ಅಲ್ಲ . ಅವರನ್ನೂ ಅವರ ಪವಾಡಗಳನ್ನು ಪ್ರಶ್ನಿಸಿಸಿದ ಡಾ ಎಚ್ ನರಸಿಂಹಯ್ಯ ಅವರನ್ನೂ ಬೇರೆ ಬೇರೆ ಕಾರಣಗಳಿಗೆ ಏಕ ಕಾಲಕ್ಕೆ ಮೆಚ್ಚಿ ಗೌರವಿಸಿದವನು . ಬಾಬಾ ಅವರನ್ನು ದೇವ ಮಾನವ ಎಂಬುದಕ್ಕಿಂತಲೂ ಸಕಲರಿಗೆ ಉಳಿತನ್ನು ಬಯಸುವ ಹೃದಯ ವಂತ ನಾಗಿ ಕಂಡೆ .
ಮನುಜ ಕುಲಮ್ ತಾನೊಂದೆ ವಲಮ್ ಎಂಬ ಧ್ಯೇಯದೊಂದಿಗೆ ಎಲ್ಲ ಜಾತಿ ಮತದವರಿಗೂ ಭೇದವಿಲ್ಲದೆ , ಯಾವುದೇ ಧನಾರ್ಜನೆಯ ಉದ್ದೇಶ ಹೊರತಾಗಿ ಆಸ್ಪತ್ರೆ ಮತ್ತು ವಿದ್ಯಾ ಸಂಸ್ಥೆ ಗಳನ್ನು ಸ್ಥಾಪಿಸಿ ನಡೆಸಿಕೊಂಡು ಬಂದುದಲ್ಲದೆ ತಮ್ಮ ನಂತರವೂ ಅವು ಮುಂದುವರಿಯುವಂತೆ ಮಾಡಿದುದೇ ದೊಡ್ಡ ಪವಾಡ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ