ಇಬ್ಬರು ಮಲಯಾಳಿ ಮಿತ್ರರು
ಮಲಯಾಳ ತುಳುನಾಡಿನಲ್ಲಿ ಹಾಸು ಹೊಕ್ಕಾದ ಭಾಷೆ . ಕಾಸರಗೋಡಿನ ಹವ್ಯಕ ,ತುಳು ಮತ್ತು ಕನ್ನಡದಲ್ಲಿ ಹಲವು ಮಲಯಾಳ ಶಬ್ದಗಳು ಇವೆ .ಉದಾ ಮೋಳೆ, ಕೊರೆ ಙ, ಇತ್ಯಾದಿ.ಅಲ್ಲದೆ ಇಲ್ಲಿಯ ಗಾಣಿಗರು ,ಬೆಳ್ಚಪ್ಪಾಡ ,ಭಂಡಾರಿಗಳು ಮತ್ತು ಬ್ಯಾರಿಗಳ ಮನೆಮಾತು ಮಲೆಯಾಳ.ತುಳುನಾಡ ಕೃಷಿ ಪದ್ದತಿ ,ಆಚರಣೆಗಳು(ಉದಾ ವಿಶು), ಮತ್ತು ಸಂಸ್ಕೃತಿ( ಉದಾ ಭೂತಾರಾಧನೆ- ತೆಯ್ಯಂ,ಯಕ್ಷಗಾನ-ಕಥಕ್ಕಳಿ),ಉಡುಗೆ ತೊಡುಗೆ, ಆಹಾರ ಇತ್ಯಾದಿ ಮಲಯಾಳಕ್ಕೆ ಹತ್ತಿರವಾದವು,ನಮ್ಮ ದೇವಾಲಯಗಳ ವಾಸ್ತು ಕೂಡಾ.ಮಲಯಾಳಿ ಸಿನೆಮಾದಲ್ಲಿ ಭಾಷೆ ಒಂದು ಬಿಟ್ಟರೆ ಮಿಕ್ಕಲ್ಲಾ ನಮಗೆ ಹತ್ತಿರ.
ಮಲಯಾಳಿಗಳು ಒಳ್ಳೆಯ ಸಾಹಿತ್ಯಾಭಿಮಾನಿ ಗಳು . ಶ್ರೀಕೃಷ್ಣ ಅಲನಹಳ್ಳಿ ಯವರ ಭುಜಂಗಯ್ಯನ ದಶಾವತಾರ ಗಳು ಕಾದಂಬರಿಯನ್ನು ಕನ್ನಡಿಗರಿಗಿಂತ ಹೆಚ್ಚು ಮಲಯಾಳಿಗಳು (ಅನುವಾದದಲ್ಲಿ )ಓದಿರ ಬಹುದು .
ಎಸ್ ಕೆ ಪೊಟ್ಟೆಕ್ಕಾಟ್ ,ಮಹಮ್ಮದ್ ಬಶೀರ್ ,ಎಂ ಟಿ ವಾಸುದೇವನ್ ನಾಯರ್ ,ತಗಳಿ ಶಿವಶಂಕರ ಪಿಳ್ಳೈ ,ಲಲಿತಾಂಬಿಕ ಅಂತರ್ಜನಮ್ ,ಪುನತಿಲ್ ಕುನ್ಹಬ್ದುಲ್ಲಾ ,ಮುಕುಂದನ್ ಮುಂತಾದ ಲೇಖಕರ ಕೃತಿಗಳ ಅನುವಾದ ರೂಪವನ್ನು ಮೆಚ್ಚಿದ್ದೇನೆ . ಅವು ನಮಗೆ ಆಪ್ಯಾಯಮಾನವಾಗಲು ಪಾತ್ರಗಳು ಹಿನ್ನಲೆ ಮತ್ತು ನಮಗೆ ಸಮೀಪ ವಾಗಿದ್ದು ಕಾರಂತರ ಕಾದಂಬರಿಗಳನ್ನು ಹೋಲುತ್ತವೆ .ಗಡಿ ಜಿಲ್ಲೆಯವರಾದ ನಾವು (ಮುಖ್ಯವಾಗಿ ವಿದ್ಯಾರ್ಥಿಗಳು )ಮಲಯಾಳ ಸಾಹಿತ್ಯ ,ಸಿನೆಮಾ ಇತ್ಯಾದಿಗಳತ್ತ ಮಡಿವಂತಿಗೆ ಇಲ್ಲದೆ ನೋಡುವಂತಾಗ ಬೇಕು .
ನನಗೆ ಎರಡು ಮರೆಯಲಾಗದ ಮಲೆಯಾಳಿ ಮಿತ್ರರು ಇದ್ದಾರೆ.
1 .ಶ್ರೀ ಜೋಸ್ ಚೆರಿಯನ್
ಇವರು ಎಂ ಬಿ ಬಿ ಎಸ್ ನಲ್ಲಿ ನನ್ನ ಸಹಪಾಠಿ ,ಅಷ್ಟೇ ಅಲ್ಲ ಎರಡು ವರ್ಷ ಹಾಸ್ಟಲ್ ನಲ್ಲಿ ರೂಂ ಮೇಟ್ . ಇವರ ತಂದೆ ಅಂಡಮಾನ್ ನಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಧಾನ ರಕ್ಷಕರಾಗಿ ನಿವೃತ್ತಿ ಹೊಂದಿದರು . ಜೋಸ್ ತಮ್ಮ ಮೃದು ಸ್ವಭಾವ ಮತ್ತು ಸ್ನೇಹಶೀಲ ಗುಣಕ್ಕೆ ಹೆಸರಾಗಿದ್ದವರು . ನನ್ನ ಮಲಯಾಳ ಗುರುಗಳು .ಇವರಲ್ಲಿ ಮಾತನಾಡಿ ನನ್ನ ಮಲಯಾಳ ಜ್ನಾನ ವೃದ್ದಿಸಿತು . ರಜೆಯಿಂದ ಬರುವಾಗ ಸಿಹಿ ಅಕ್ಕಿ ಪುಡಿ ತರುತ್ತಿದ್ದರು .ಅಂಡಮಾನ್ ನಿಂದ ನಮ್ಮ ಮನೆಗೆ ಒಳ್ಳೆಯ ಶಂಖ ತಂದು ಕೊಟ್ಟಿದ್ದರು . ಇವರ ಹೆತ್ತವರು ಬಂದಿದ್ದಾಗ ಜತೆಗೆ ಬೆಂಗಳೂರು ಪ್ರವಾಸದಲ್ಲಿ ನಾನೂ ಜತೆಯಾಗಿದ್ದೆ . ಹುಬ್ಬಳ್ಳಿಗೆ ಸಮೀಪ ಉತ್ತರ ಕನ್ನಡದ ಮುಂಡಗೊಡ ದಲ್ಲಿ ಟಿಬೆಟ್ ಪುನರ್ವಾಸ ಇದೆ .ಇಲ್ಲಿ ನಮ್ಮ ನೆಲ್ಯಾಡಿಯಂತೆ ತಲೆಮಾರುಗಳ ಹಿಂದೆ ಬಂದ ಮಲಯಾಳಿ ಕುಟುಂಬಗಳು ಇವೆ . ನಾನು ಮತ್ತು ಜೋಸ್ ಜತೆಯಾಗಿ ಅಲ್ಲಿ ಇಂತಹ ಒಂದು ಕುಟುಂಬದ ಅತಿಥಿಯಾಗಿ ಹೋಗಿದ್ದೆವು .
ಜೋಸ್ ಈಗ ಕೇರಳ ದ ತಿರುವೆಲ್ಲಾ ಸಮೀಪ ಈ ಎನ್ ಟಿ ತಜ್ನರಾಗಿ ಕೆಲಸ ಮಾಡುತ್ತಿದ್ದು ಅವರ ಪತ್ನಿ ಡಾ ಸಿಲ್ವಿ ಪ್ರಸೂತಿ ತಜ್ನೆ . ನನ್ನ ಮತ್ತು ಅವರ ಕುಟುಂಬ ಜತೆಯಾಗಿ ಮಲಶಿಯಾ ಪ್ರವಾಸ ಕೈಗೊಂಡಿದ್ದೆವು .ಎರಡು ವರ್ಷಗಳ ಹಿಂದೆ ನಾನು ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿ ,ಹಳೆಯ ನೆನಪುಗಳನ್ನು ಮೆಲುಕು ಹಾಕಿದೆವು .ಪುತ್ತೂರಿಗೂ ಡಾ ಜೋಸ್ ಭೇಟಿ ನೀಡಿದ್ದಾರೆ .
2 ಶ್ರೀ ವಿಜಯನ್
ಇವರು ರೈಲ್ವೇ ಯಲ್ಲಿ ಫರ್ಮಾಸಿಸ್ಟ್ ಆಗಿ ಮಂಗಳೂರಿನಲ್ಲಿ ಇದ್ದಾರೆ . ನಾನು ಹಿಂದೆ ಪುತ್ತೂರು ರೈಲ್ವೇ ಆರೋಗ್ಯ ಕೇಂದ್ರದಲ್ಲಿ ಇದ್ದಾಗ ಮೊದಲು ನೆಟ್ಟಣ (ಸುಬ್ರಹ್ಮಣ್ಯ ರೋಡ್ )ಮೆಡಿಕಲ್ ಔಟ್ ಪೋಸ್ಟ್ ನಲ್ಲಿ ,ಆಮೇಲೆ ಪುತ್ತೂರು ಆರೋಗ್ಯ ಕೇಂದ್ರ ದಲ್ಲಿ ನನ್ನ ಜತೆ ಇದ್ದು ,ನಾನು ಮಂಗಳೂರಿಗೆ ವರ್ಗ ಆದಾಗ ಅಲ್ಲಿಗೆ ಕೂಡಾ ಬಂದರು .ಪುತ್ತೂರಿನಿಂದ ನಾನು ವಾರಕ್ಕೆ ಎರಡು ಬಾರಿ ನೆಟ್ಟಣಕ್ಕೆ ಕರ್ತವ್ಯ ದಲ್ಲಿ ಹೋಗುತ್ತಿದ್ದು ಅವರ ವಸತಿ ಗೃಹದಲ್ಲಿಯೇ ಊಟ.ಸಂಜೆ ನಾವು ಬಿಳಿನೆಲೆ ಅಥವಾ ಸಿರಿವಾಗಿಲು ಕಡೆ ನಡಿಗೆಯಲ್ಲಿ ಹೋಗುತ್ತಿದ್ದೆವು ,ವಿಜಯನ್ ಮೂಲತಃ ಕಾಸರಗೋಡ್ ಸಮೀಪ ಪನತ್ತಡಿ ಯವರು . ಒಳ್ಳೆಯ ಓದುಗರು ,ಮಲಯಾಳ ಸಾಹಿತ್ಯ ಓದಿ ನನ್ನೊಡನೆ ಚರ್ಚಿಸುವರು .ನೆಟ್ಟಣದ ಹುಡುಗಿಯನ್ನು ಪ್ರೀತಿಸಿ ವಿವಾಹವಾದರು.ನಾನು ಹಿಂದೆ ರೈಲ್ವೇ ಉದ್ಯೋಗಿಯಾಗಿ ಚೆನ್ನೈ ನಲ್ಲಿ ಇದ್ದಾಗ ದಾರಿಯಲ್ಲಿ ಇವರ ಮನೆಯಲ್ಲಿ ತಂಗಿ ಊಟ ಮಾಡಿಯೇ ಮುಂದುವರಿಯುತ್ತಿದ್ದೆ .ಚೆನ್ನೈ ನಲ್ಲಿ ನಾವು ಇದ್ದಾಗ ಕುಟುಂಬ ಸಹಿತ ಬಂದು ನಮ್ಮೊಡನೆ ಇದ್ದರು.
ಮುಂದೆ ನಾನು ರೈಲ್ವೇ ಬಿಟ್ಟು ಮಂಗಳೂರಿಗೆ ಬಂದಾಗ ಕೂಡಾ ಅವರ ಸಂಪರ್ಕ ಮುಂದುವರಿಯಿತು . ನನ್ನ ಮಲಯಾಳ ಜ್ನಾನ ಉಳಿಸಿ ಬೆಳೆಸಲು ಇವರೂ ಕಾರಣ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ