ಸ್ನೇಹದ ದೃಷ್ಟಿ ಕಾಪಿಟ್ಟವರು
ನನ್ನ ಎಂ ಬಿ ಬಿ ಎಸ್ ಸಹಪಾಠಿ ಗಳ ಪೈಕಿ ನನ್ನ ಮೂವರು ಆಪ್ತ ಮಿತ್ರರು ನೇತ್ರ ವೈದ್ಯ ದಲ್ಲಿ ಉನ್ನತ ಶಿಕ್ಷಣ ಪಡೆದು ಸೇವೆ ಸಲ್ಲಿಸಿದವರು .
1. ಡಾ ಯೆಲ್ಲಪ್ಪಾ ಭಜಂತ್ರಿ .
ಇವರು ಬೆಳಗಾಂ ಜಿಲ್ಲೆ ಖಾನಾಪೂರ ತಾಲೂಕಿನವರು . ನಮ್ಮಲ್ಲಿ ದೇವಾಡಿಗ ,ಮೊಯ್ಲಿ ಇರುವಂತೆ ಮೂಲತಃ ವಾದ್ಯ ಕಲಾವಿದರ ಕುಟುಂಬ .ತಾನೂ ಚಿಕ್ಕಂದಿನಲ್ಲಿ ಹಿರಿಯರ ಜೊತೆ ತಾಳ ಹಿಡಿಯಲು ಹೋಗುತ್ತಿದ್ದೆ ;ಆದರೆ ನನಗೆ ಆ ವಿದ್ಯೆ ಹಿಡಿಯಲೇ ಇಲ್ಲ .ಅದಕ್ಕೆ ವೈದ್ಯನಾದೆ ಎನ್ನುತ್ತಾರೆ ಡಾ ಭಜಂತ್ರಿ . ಭಗವಾನ್ ಸಿಂಗ್ ರಂತೆ ಇವರೂ ನನ್ನ ಬ್ಯಾಚ್ .ನಮ್ಮ ಬ್ಯಾಚ್ ನಲ್ಲಿ ಅತ್ಯಂತ ಬುದ್ದಿಶಾಲಿ .ಬಡತನದ ಹಿನ್ನಲೆಯಿಂದ ಬಂದ ಇವರು ಕಠಿಣ ಪರಿಶ್ರಮಿ . ಕಣ್ಣಿನ ವಿಷಯದಲ್ಲಿ ಎಂ ಎಸ್ ಮಾಡಿ ತಾವು ಕಲಿತ ಕೆ ಎಂ ಸಿ ಹುಬ್ಬಳ್ಳಿ (ಈಗ ಕಿಮ್ಸ್ )ನಲ್ಲಿ ಸೇರಿ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು . ಆ ಸಂಸ್ಥೆಯ ನಿರ್ದೇಶಕ ಹುದ್ದೆ ಸ್ವಲ್ಪದರಲ್ಲಿಯೇ ತಪ್ಪಿತು . ಹುಬ್ಬಳ್ಳಿಯಲ್ಲಿಯೇ ನೆಲೆಸಿರುವ ಇವರ ಮನೆಯೇ ನಾನು ಆ ಭಾಗಕ್ಕೆ ಭೇಟಿ ನೀಡಿದಾಗ ನನ್ನ ವಾಸ್ತವ್ಯ ತಾಣ .ಇವರ ಪತ್ನಿ ವಿಜಯಲಕ್ಷ್ಮಿ ಒಳ್ಳೆಯ ಅತಿಥೇಯರು .ಆಗಾಗ ವಕ್ಕರಿಸುವ ನನಗೆ ರೊಟ್ಟಿ ಊಟ ಸಂಭ್ರಮ ದಿಂದ ಮಾಡಿ ಬಡಿಸುವರು .
2 . ಡಾ ಬನಕೇಸರಿ ಶೆಟ್ಟಿ
ಹೆಸರು ಕೇಳಿ ಹೆದರ ಬೇಡಿ .ಇವರು ಭಾಳ ಸೌಮ್ಯ ಸ್ವಭಾವದವರು .ಇವರು ಕುಂದಾಪುರ ಬಳಿ ಹಳ್ಳಿಯವರು . ನೇತ್ರ ವೈದ್ಯದಲ್ಲಿ ಎಫ್ ಆರ್ ಸಿ ಎಸ್ ಮಾಡಿ ಕೆನಡ ದೇಶದಲ್ಲಿ ನೆಲೆಸಿದ್ದಾರೆ . ಕುಂದಾ ಪುರದವರು ಆದುದರಿಂದ ಇವರಿಗೆ ತುಳು ಬರುತ್ತಿರಲಿಲ್ಲ .ಮದುವೆಯಾದ ಮೇಲೆ ಕಲಿತಿರ ಬಹುದು . ಇವರೂ ಕಲಿಕೆಯಲ್ಲಿ ಜಾಣ . ಹಾಸ್ಯ ಪ್ರಜ್ನೆಯುಳ್ಳವರು . ದಿನಾ ಸಂಜೆ ಸಂಗೀತಾ ಹೊಟೇಲ್ ಗೆ ಚಹಕ್ಕೆ ಹೋಗುವಾಗ ಕಂಪನಿ .ರಜೆಯಲ್ಲಿ ಊರಿಗೆ ಬರುವಾಗ ಜತೆ .ಆಗ ಇಂದಿನಂತೆ ಖಾಸಗಿ ರಾತ್ರಿ ಬಸ್ ಗಳು ಇರಲಿಲ್ಲ .ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಂಗಳೂರು ಕಡೆ ಬಸ್ ಬಂದೊಡನೆ ಓಡುವುದು;ಕಿಟಿಕಿಯಿಂದ ಟವಲ್ ಹಾಕಿ ಸೀಟ್ ಹಿಡಿಯುವುದು ಇತ್ಯಾದಿ ಮಾಡಬೇಕಿತ್ತು . ಹಲವು ಭಾರಿ ಶಿರಸಿ ವರೆಗೆ ನಿಂತೇ ಬಂದದ್ದು ಇದೆ ,
ಇವರು ಕೆನಡ ದೇಶವಾಸಿಯಾದ ಮೇಲೆ ವರ್ಷ ವರ್ಷವೂ ಊರಿಗೆ ಬರುವರು ,ಮಂಗಳೂರಿನಲ್ಲಿ ಬಂಧುಗಳು ಮತ್ತು ಸ್ನೇಹಿತರಿಗೆ ಒಂದು ಭೋಜನ ಕೂಟ ತಪ್ಪದೇ ಏರ್ಪಡಿಸಿ ನಮ್ಮನ್ನು ಹುಡುಕಿ ಕರೆಯುವರು .ಇವರ ಪತ್ನಿ ನಾಗಮಣಿ ಇವರಂತೆ ಸ್ನೇಹ ಜೀವಿ . ಇವರು ತಪ್ಪದೇ ಮಾಡುವ ಒಂದು ಕಾರ್ಯ ಯಾವುದೇ ಪ್ರಚಾರವಿಲ್ಲದೆ ಊರಿನ ಒಳ್ಳೆಯ ಸೇವಾ ಸಂಸ್ಥೆ ಗಳನ್ನು ಹುಡುಕಿ ಅವುಗಳಿಗೆ ದೊಡ್ಡ ಮೊತ್ತದ ಧನ ಸಹಾಯ ಮಾಡುವುದು .
3 ಡಾ ವಿವೇಕ ವಾಣಿ .
ಇವರ ಹೆಸರೇ ಸೂಚಿಸುವಂತೆ ಇವರು ಇವರು ಮತ್ತು ಇವರ ಮಾತು .ಇವರೂ ಬೆಳಗಾಂ ಜಿಲ್ಲೆಯವರು .ಬಹುಮುಖ ಪ್ರತಿಭೆ .ಸಾಹಿತ್ಯ ,ಸಂಗೀತ ಇತ್ಯಾದಿಗಳಲ್ಲಿ ಅತೀವ ಆಸಕ್ತಿ . ಕಾಲೇಜು ನಲ್ಲಿ ಒಂದು ನಾಟಕ ದಿಗ್ದರ್ಶನ ಯಶಸ್ವಿಯಾಗಿ ಮಾಡಿದ್ದರು . ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಯೂ ಇದ್ದವರು . ಎಂ ಎಸ .ಎಫ್ ಆರ್ ಸಿ ಎಸ ಮಾಡಿ ಕುವೈಟ್ ನಾಡಿನಲ್ಲಿ ಹಲವು ದಶಕ ಇದ್ದು ಈಗ ಬೆಳಗಾವಿಯಲ್ಲಿ ನೆಲೆಸಿದ್ದು ,ಅಲ್ಲಿಯೇ ಕ್ಲಿನಿಕ್ ತೆರೆದಿದ್ದಾರೆ .ಅಕ್ಷಿ ಪಟದ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ .ಕುವೈಟ್ ನಲ್ಲಿ ಕನ್ನಡ ಕೂಟದ ಕ್ರಿಯಾಶೀಲ ಸದಸ್ಯರು ಮತ್ತು ಅಧ್ಯಕ್ಷರಾಗಿ ಬಹಳ ಕೆಲಸ ಮಾಡಿ ಜನ ಮನ್ನಣೆ . ಇವರ ಪತ್ನಿ ಡಾ ರಮಾ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಯಾಗಿ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದವರು
ಈ ಮೂವರೂ ಯಾವುದೇ ಹಮ್ಮು ಬಿಮ್ಮು ಇಲ್ಲದ ಸರಳ ಸ್ನೇಹ ಜೀವಿಗಳು . ಪುತ್ತೂರಿಗೆ ನನ್ನ ಮಗನ ಮದುವೆಗೆ ಬಂದು ಆಶೀರ್ವಾದ ಮಾಡಿದ್ದರು . (ವಿವೇಕ್ ಮತ್ತು ಬನಕೇಸರಿ ಇದಕ್ಕಾಗಿಯೇ ವಿದೇಶದಿಂದ ಬಂದಿದ್ದುದು ಗಮನಾರ್ಹ . ನಾನು ವೃತ್ತಿಯಲ್ಲಿ ಬಹಳ ಸಾಧಿಸ ದಿದ್ದರೂ ನನ್ನ ಮಿತ್ರರ ಈ ಸಾಧನೆ ನನ್ನದೆಂದೇ ತಿಳಿದು ಕೊಂಡಿದ್ದೇನೆ .ಈಗ ಹೇಳಿ ನಾನು ಶ್ರೀಮಂತನಲ್ಲವೇ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ