ಬೆಂಬಲಿಗರು

ಶನಿವಾರ, ಸೆಪ್ಟೆಂಬರ್ 4, 2021

ನಿರ್ಭಯಾಗ್ರಫಿ

 

                        G. P. Rajarathnam - Wikipedia 

ಬೀಚಿ ಪ್ರಸಿದ್ಧ ಹಾಸ್ಯ ಸಾಹಿತಿ . ಮೂಢ ನಂಬಿಕೆಗಳ ಕಟ್ಟಾ ವಿರೋಧಿ ಮತ್ತು ತಮ್ಮದೇ ಭಾಷೆಯಲ್ಲಿ ಅವುಗಳ ವಿಡಂಬನೆಗಳಿಗೆ ಹೆಸರಾದವರು .ಅವರ ಆತ್ಮ ಚರಿತ್ರೆ ಹೆಸರು 'ಭಯಾಗ್ರಫಿ "ಸುಧಾ ದಲ್ಲಿ ಅವರು ನೀವು ಕೇಳಿದಿರಿ ಕಾಲಮ್ಮಿನಲ್ಲಿ ಬರೆದ  ಪ್ರಶ್ನೋತ್ತರಗಳ ಸಂಗ್ರಹ' ಉತ್ತರ ಭೂಪ 'ಕೂಡಾ ಜನಪ್ರಿಯ ಕೃತಿ . ಅನಕೃ ಗರಡಿಯಲ್ಲಿ ಬೆಳೆದವರು . 

ಜಿ ಪಿ ರಾಜರತ್ನಂ ಕನ್ನಡದ ಕಟ್ಟಾಳು . ಇವರ ಶಿಶು ಗೀತೆಗಳು ಬಹಳ ಪ್ರಸಿದ್ಧ . ಉದಾ ಬಣ್ಣದ ತಗಡಿನ ತುತ್ತೂರಿ ಮತ್ತು ನಾಯಿ ಮರಿ ತಿಂಡಿ ಬೇಕೇ ?.ಇನ್ನು  ರತ್ನನ ಪದಗಳು. ಕೂಡಾ ..ಕೈಲಾಸಂ ಇವರ ಮೇಲೆ ಬಹಳ ಪ್ರಭಾವ ಬೀರಿರ ಬೇಕು .ಮಾಸ್ತಿ ಇವರ ಪ್ರತಿಭೆ ಗುರುತಿಸಿ ಪೋಷಿಸಿದವರು .ಇಬ್ಬರ ಬಗ್ಗೆಯೂ ಬರೆದಿದ್ದಾರೆ .ಪದ್ಯಗಳಲ್ಲದೆ ಹಲವು ಮೌಲಿಕ  ಗದ್ಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟವರು ಇವರದು ಕಂಚಿನ ಕಂಠ .ಭಾಷಣ ಕೇಳಲು ಬಹು ಸೊಗಸು . ಇವರ ಹೆಗಲಲ್ಲಿ ಯಾವಾಗಲೂ ಒಂದು ಚೀಲ .ಅದರಲ್ಲಿ ಕನ್ನಡ ಪುಸ್ತಕಗಳು . 

ಸುಧಾ ವಾರ ಪತ್ರಿಕೆಯಲ್ಲಿ ಬರುತ್ತಿದ್ದ ಇವರ ಅಂಕಣ' ವಿಚಾರ ರಶ್ಮಿ' ಪ್ರಸಿದ್ಧ .'ಭ್ರಮರ 'ಎಂಬ ಕಾವ್ಯ ನಾಮದಿಂದ ಬರೆಯುತ್ತಿದ್ದರು . ಇವರು ಕೂಡಾ ಅನಕೃ ಆಪ್ತ ವರ್ಗಕ್ಕೆ ಸೇರಿದವರು . 

ರಾಜರತ್ನಂ ಓರ್ವ ದೇವಮಾನವನ ಭಕ್ತರು .ಅದು ಬೀಚಿಗೆ ಇಷ್ಟವಿಲ್ಲ . ಅದನ್ನು ಲೇಖನಗಳ  ಠೀಕಾ ಪ್ರವಾಹದ ಮೂಲಕ ಪ್ರಕಟ ಪಡಿಸಲು ಆರಂಭಿಸಿದರು . ರಾಜರತ್ನಂ ಅವರನ್ನು 'ಚಕ್ರವರ್ತಿ ವಜ್ರ'ಎಂದು ಸೂಚ್ಯವಾಗಿ ಸಂಬೋಧಿಸುತ್ತಿದ್ದರು .ರಾಜರತ್ನಮ್ ಮನ ನೊಂದು ನಿರ್ಭಯಾ ಗ್ರಫಿ ಎಂಬ ಹೊತ್ತಿಗೆಗಳನ್ನು ಬರೆದು ಪ್ರಕಟಿಸಿದರು .ನಿರ್ಭಯಾಗ್ರಫಿ ,'ವಜ್ರ 'ವಾದ 'ರತ್ನ'ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಇದರಲ್ಲಿ ಒಂದು ಕಂತು "ಶಿಶುಪಾಲ ವಧ "ಎಂದು ಇದೆ .ಅದರಲ್ಲಿ ಲಕ್ಷ್ಮೀಶ ಎಂಬ ಓದುಗರ ಪತ್ರ ಪ್ರಕಟವಾಗಿದೆ . ನನಗೆ ಅದು ಹಿರಿಯ ವಿದ್ವಾಂಸ ರಾದ ಶ್ರೀ ಲಕ್ಷ್ಮೀಶ ತೊಲ್ಪಾಡಿ ಯವರು ಎಂದು ಸಂಶಯ ಬಂದು ಇಂದು ಬೆಳಿಗ್ಗೆ ಅವರಿಗೆ ಫೋನ್ ಮಾಡಿ ದೃಢ ಪಡಿಸಿ ಕೊಂಡೆನು .ಲಕ್ಷ್ಮೀಶ ತೋಲ್ಪಾಡಿ ನಾನು ಅತ್ಯಂತ ಗೌರವಿಸುವ ಲೇಖಕರು .ಅವರ ಅಧ್ಯಯನ ವಿಶಾಲತೆ ಬೆರಗು ಹುಟ್ಟಿಸುತ್ತದೆ .ಅವರು ಯಾವುದೇ ಗಹನ ವಿಚಾರದ ಬಗ್ಗೆ ಮಾತನಾಡುವಾಗ ಏಕ ಕಾಲಕ್ಕೆ ಆ ವಸ್ತುವಿನ ಹಲವು ಮಗ್ಗುಲುಗಳನ್ನು ಕಾಣುತ್ತಾ ವಿಚಾರ ಮಂಡಿಸುವುದರಿಂದ ಮಾತು ನಿಧಾನ .ಕೆಲವೊಮ್ಮೆ ಅಂತರ್ಮುಖಿಯಾದಂತೆ ತೋರುವುದು . ಅನುರಾಗ ವಠಾರದ ಅಟ್ಟದಲ್ಲಿ ಡಿ ವಿ ಜಿ ಬಗ್ಗೆ  ಮಹಾಭಾರತ ಬಗ್ಗೆ ಅವರ ಪ್ರವಚನ ಕೇಳಿ ಪ್ರಭಾವಿತನಾಗಿದ್ದೇನೆ . 

ನಿರ್ಭಯಾಗ್ರಫಿಯಲ್ಲಿನ ಅವರ ರಾಜರತ್ನಂ ಗೆ ಬರೆದ ಪತ್ರದ ಕೆಲವು ಸಾಲುಗಳು . 

ಪೂಜ್ಯರೇ ,

'ಭಿನ್ನ ಮತ ,ಅನ್ಯ ಮತ ,ವಿರೋಧ ಮತಗಳಿದ್ದೂ ಸಹಜೀವನ ಸಾಧ್ಯ ಎನ್ನುವ ಡೆಮಾಕ್ರೆಟಿಕ್ ಮನೋ ಧರ್ಮ ವನ್ನೇ ಧಿಕ್ಕರಿಸುವುದು ಮಾನಸಿಕ ಆರೋಗ್ಯದ ಲಕ್ಷಣ ಅಲ್ಲ .ವೈಚಾರಿಕತೆಯ ಲಕ್ಷಣ ಖಂಡಿತ ಅಲ್ಲ .ಕಾರಂತರನ್ನು ನೋಡಿ ;,ಕಲೆಯ ಕ್ಷೇತ್ರದಲ್ಲಾಗಲೀ ,ರಾಜಕೀಯ ಧಾರ್ಮಿಕ ಕ್ಷೇತ್ರದಲ್ಲಾಗಲಿ ಸ್ವಾನುಭವವೇ ಪರಮ ಪ್ರಮಾಣವಾದ ಬುದ್ದಿ ವೈಭವದ ಆ  ಮಹಾನುಭಾವ ಒಂದೆಡೆ ಹೀಗೆಂದರು 'ನನ್ನನ್ನು ಕುರುಡು ಒಪ್ಪಿಕೊಳ್ಳುವ ಹಿಂಬಾಲಕರಿಗಿಂತ ನನ್ನೊಡನೆ ಭಿನ್ನಮತವನ್ನು ಪ್ರಕಟಿಸುವ ಬುದ್ದಿಜೀವಿ ನನಗೆ ಪ್ರಿಯ 'ಇದು ಲಿಬರಲ್ ಮನೋಧರ್ಮ 'satire ಎನ್ನುವುದು ಎಂಥಾ ಕಲೆ ಎನ್ನುವುದು ಶಾ ಓದಿದರೆ ತಿಳಿದೀತು ,ಕೈಲಾಸಂ ಓದಿದರೆ ತಿಳಿದೀತು ,ಆ ಲೇಖನ (ರಾಜರತ್ನಂ ಟೀಕಿಸಿದವರ ) ಓದಿದರಂತೂ satire ಎಂಬ ಮಾತಿನ ಕಲೆ retire ಆಗಿರುವುದು ಖಂಡಿತ ತಿಳಿದೀತು "  ಲಕ್ಷ್ಮೀಶ (ಕೆಲವು ಸಾಲುಗಳನ್ನು ಬಿಟ್ಟಿರುವೆನು ). 

ಲೇಖಕರಾಗಿ ಇಬ್ಬರೂ ನಮಗೆ ಮಾನ್ಯರು . ಒಬ್ಬರ ನಂಬಿಕೆ ಬಗ್ಗೆ ಇನ್ನೊಬ್ಬರು ಒಂದು ಪರಿಧಿಯ ಮೇಲೆ ಟೀಕೆ ಮಾಡಿದ್ದು ಸರಿಯೇ ಎಂಬುದು ಪ್ರಶ್ನಾರ್ಹ ಅಷ್ಟೇ .

               

ಅಣ್ಣನ ನೆನಪು ಪುಸ್ತಕದಲ್ಲಿ ತೇಜಸ್ವಿ ಬಾಲ್ಯದಲ್ಲಿ ರಾಜರತ್ನಂ ಕುವೆಂಪು ಅವರನ್ನು ಕಾಣಲು ಬಂದಾಗ ಯಾವುದೊ ಶುಭ್ರ ವಸನ ಧಾರೀ ಭಿಕ್ಷುಕ ಎಂದು ಕೊಂಡು 'ಮುಂದೆ ಹೋಗಪ್ಪ 'ಎಂದರೂ ಹೋಗದಿದ್ದಾಗ ತಂದೆಯಲ್ಲಿ ದೂರು ಹೇಳಲು ಅವರೇ ನಿಜ ಕಂಡು ಸ್ವತಃ ಗೇಟಿನ ಬಾಗಿಲು ತೆರೆದು ಒಳಕರೆದು ,ಇವರು ತುತ್ತೂರಿ ಬರೆದ ಕವಿ ಎಂದು ಪರಿಚಯಿಸಿದಾಗ ವಿಸ್ಮಯ ಗೊಂಡು ಕವಿತೆಗಳು ಕೂಡ ಮರ ಗಿಡ ಮಕ್ಕಳು ಇರುವಂತೆ ವಸ್ತುಗಳು ಎಂದು ತಿಳಿದುಕೊಂಡಿದ್ದ ತಮಗೆ ಅವನ್ನು ಕವಿಗಳು ಬರೆಯುತ್ತಾರೆ ಎಂದು ತಿಳಿದದ್ದೇ ಅವತ್ತು 'ಎಂದು ಬರೆದಿದ್ದಾರೆ . 

೧೯೭೯ ರ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಿಂದ ಮರಳಿದವರೇ ರಾಜರತ್ನಂ  ತೀರಿ ಕೊಂಡ ಸುದ್ದಿ ಕೇಳಿದಾಗ ಅವರ ಶಿಷ್ಯನಲ್ಲದ ಶಿಷ್ಯ ಎಂದು ಕರೆದು ಕೊಳ್ಳುತ್ತಿದ್ದ ಇನ್ನೊಬ್ಬ ಸಾಹಿತ್ಯ ಪರಿಚಾರಕ ಕಾರ್ಕಳ ಎಂ ರಾಮಚಂದ್ರ ಅವರಿಗೆ ಪ್ರಿಯವಾಗಿದ್ದ ರನ್ನನ ಗಧಾಯುದ್ದದ ಈ ಸಾಲುಗಳನ್ನು ನೆನೆಯುತ್ತಾರೆ . 

ನಯನದೊಳಂ  ಎರ್ದೆ ಯೊಳಂ ನಿ 

ನ್ನಯ ರೂಪು ಇರ್ದಪುದು ,ನಿನ್ನ ಮಾತು ಇರ್ದಪುದು ಎ 

ನ್ನಯ ಕಿವಿಯೊಳಗೆ ,ಇನನಂದನ 

ವಿಯೋಗಂ ಎಂತಾದುದರಿಯೆನ್ ಅಂಗಾಧಿಪತೀ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ