ಓದಿನ ಹುಚ್ಚು
ಬಾಲ್ಯದಲ್ಲಿ ಹುಚ್ಚು ಇತ್ತು .ಸಿಕ್ಕಿದ ಚಂದಮಾಮ ,ಅಟ್ಟದಲ್ಲಿ ಸಿಕ್ಕಿದ ಹಳೇ ಕತೆ ಪುಸ್ತಕ ಎಲ್ಲಾ ಒಂದೇ ಉಸಿರಿನಲ್ಲಿ ಮುಗಿಯುವುವು . ಪ್ರೈಮರಿ ಶಾಲೆಯಲ್ಲಿ ವಾಚನಾಲಯ ಕ್ಕೆ ಪ್ರವೇಶ ಇರಲಿಲ್ಲ .ಹೈ ಸ್ಕೂಲ್ ನಲ್ಲಿ ಡ್ರಾಯಿಂಗ್ ಮಾಸ್ಟ್ರು ಲೈಬ್ರರಿ ಹೆಚ್ಚುವರಿ ಕರ್ತವ್ಯದಲ್ಲಿ .ಅವರಿಗೆ ಮನಸು ಬಂದರೆ ,ಸಮಯ ಸಿಕ್ಕಿದರೆ ನಮಗೆ ಪುಸ್ತಕ .
ಅದಕ್ಕೆಂದೇ ನಾನು ಕನ್ಯಾನ ಪಂಚಾಯತ್ ಲೈಬ್ರರಿ ಗೆ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಸದಸ್ಯ ಆಗಿದ್ದೆ .ಅಲ್ಲಿ ಒಳ್ಳೆ ಒಳ್ಳೆಯ ಪುಸ್ತಕಗಳು ಇದ್ದವು .ಗ್ರಾಮ ಕರಣಿಕರು ಲೈಬ್ರರಿಯನ್ . ವಾರಕ್ಕೊಮ್ಮ್ಮೆ ಪುಸ್ತಕ ಕೊಡುತ್ತಿದ್ದರು . ಕಾರಂತ ,ರಾವ್ ಬಹಾದ್ದೂರ್ ,ಕುವೆಂಪು ಮತ್ತು ಅನಕೃ ಕಾದಂಬರಿಗಳ ಮೊದಲ ಓದು ಇಲ್ಲಿಯೇ ಆದುದು .
ಮುಂದೆ ಹೈ ಸ್ಕೂಲ್ ಗೆ ಬಂದಾಗ ಪುತ್ತೂರು ನಗರ ಗ್ರಂಥಾಲಯ ಕ್ಕೆ ಸದಸ್ಯನಾದೆ . ಅದು ಟೌನ್ ಬ್ಯಾಂಕ್ ಕಾಂಪೌಂಡ್ ನಲ್ಲಿ ಇದ್ದು ವಿಸ್ತಾರವಾಗಿ ಗಾಳಿ ಬೆಳಕು ಇತ್ತು . ಅಲ್ಲಿ ಒಬ್ಬರು ಒಳ್ಳೆಯ ಗ್ರಂಥ ಪಾಲಕ (ಹೆಸರು ಲಾರೆನ್ಸ್ ?)ಇದ್ದರು .ಉತ್ಸಾಹಿ ಮತ್ತು ತಮ್ಮ ಕೆಲಸದಲ್ಲಿ ಅಭಿಮಾನ ಪ್ರಾಮಾಣಿಕತೆ ಇದ್ದವರು .ಇಲ್ಲಿ ನನ್ನ ಇಂಗ್ಲಿಷ್ ಪುಸ್ತಕಗಳ ಓದು ಆರಂಭ .ಪರ್ಲ್ ಎಸ ಬಕ್ ,ಟಾಲ್ ಸ್ಟಾಯ್ ,ಕೆ ಪಿ ಎಸ ಮೆನನ್ ಅವರ ಪುಸ್ತಕಗಳನ್ನು ಇಲ್ಲಿಂದ ಕೊಂಡು ಹೋಗಿ ಓದಿದ ನೆನಪು ಇದೆ . ಒಳ್ಳೆಯ ಕನ್ನಡ ಗ್ರಂಥಗಳೂ ಇದ್ದವು . ಈಗಿನ ಸಾರ್ವಜನಿಕ ಗ್ರಂಥಾಲಯ ದಲ್ಲಿ ಗಾಳಿ ,ಬೆಳಕು ಮತ್ತು ಸ್ಥಳಾವಕಾಶ ಕಡಿಮೆ .ನನ್ನ ಸಂಗ್ರಹದಿಂದ ಹಲವು ಅಮೂಲ್ಯ ಗ್ರಂಥಗಳನ್ನು ಅದಕ್ಕೆ ಕೊಟ್ಟಿದ್ದೇನೆ .
ಮುಂದೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಗ್ರಂಥಾಲಯ ,ಹೊಸೂರಿನ ಸಾರ್ವಜನಿಕ ಗ್ರಂಥಾಲಯ (ಅದರ ಶಾಖೆ ಒಂದು ಕೆ ಎಂ ಸಿ ಆಸ್ಪತ್ರೆಯಲ್ಲಿ ಕೂಡಾ ಇತ್ತು )ನನ್ನ ಓದಿನ ಹಸಿವು ನೀಗಿದವುರಜೆಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಕಾರಣ ಅಲ್ಲಿ ಕಬ್ಬನ್ ಪಾರ್ಕ್ ಸ್ಟೇಟ್ ಲೈಬ್ರರಿ ಮತ್ತು ಸೌತ್ ಎಂಡ್ ಸರ್ಕಲ್ ಲೈಬ್ರರಿಗಳಲ್ಲಿಯೂ ಪುಸ್ತಕ ಬೇಟೆ . ಉದ್ಯೋಗಿ ಯಾದ ಮೇಲೆ ಮಡಿಕೇರಿ ಜಿಲ್ಲಾ ಗ್ರಂಥಾಲಯ (ಇದು ಹಳೆ ಅರಮನೆ ಆವರಣದ ಒಳಗೆ ಇತ್ತು ),ಮೈಸೂರು ನಗರ ಗ್ರಂಥಾಲಯ ,ಸಕಲೇಶಪುರ ನಗರ ಲೈಬ್ರರಿ ಮತ್ತು ಹಾಸನ ಜಿಲ್ಲಾ ಗ್ರಂಥಾಲಯ ,ಮಂಗಳೂರು ನಗರ ಗ್ರಂಥಾಲಯ ,ಚೆನ್ನೈ ಅಯ್ಯನಾವರಂ ಕನ್ನಡ ಸಂಘ ಲೈಬ್ರರಿ ..ಮೌಂಟ್ ರೋಡಿನಲ್ಲಿ ಇದ್ದ ಜಿಲ್ಲಾ ವಾಚನಾಲಯ ,ಕನ್ನೆಮರ ರಾಷ್ಟ್ರೀಯ ಲೈಬ್ರರಿ ,ಪಾಲಕ್ಕಾಡ್ ಮತ್ತು ಕಲ್ಲಿಕೋಟೆ ನಗರ ಗ್ರಂಥಾಲಯ ಇವುಗಳ ಸದಸ್ಯತ್ವ .ಪಾಲಕ್ಕಾಡ್ ನಲ್ಲಿ ಒಬ್ಬರು ಸಂಚಾರಿ ಎರವಲು ಲೈಬ್ರರೀ ನಡೆಸುತ್ತಿದ್ದು ಚೀಲಗಳ ತುಂಬಾ ಪುಸ್ತಕ ಮನೆ ಮನೆಗೆ ತಂದುನಮಗೆ ಆಯ್ಕೆ ಮಾಡಲು ಕೊಡುವರು ಮತ್ತು ನಿಗದಿತ ದಿನ ಅವರೇ ಬಂದು ಒಯ್ಯುತ್ತಿದ್ದರು .
ಇವಲ್ಲಿ ಯಾವ ಲೈಬ್ರರಿಯಲ್ಲಿಯೂ ನಾನು ಸದಸ್ಯತ್ವ ವನ್ನು ರದ್ದು ಮಾಡಿಸಿಲ್ಲ .ನಾನು ಈ ಬಾರಿ ಪುತ್ತೂರಿಗೆ ಬಂದಾಗ ಕಲ್ಲಿಕೋಟೆ ಲೈಬ್ರರಿಯಿಂದ ನನಗೆ ಒಂದು ನೋಟೀಸ್ ಬಂತು .ನನ್ನ ಮಂಗಳೂರು ವಿಳಾಸಕ್ಕೆ ಬಂದ ಪತ್ರವನ್ನು ರೀಡೈರೆಕ್ಟ್ ಮಾಡಿದ್ದರು .ಅಲ್ಲಿಯ ನನ್ನ ಕಾರ್ಡ್ ನಲ್ಲಿ ನನ್ನ ಮಿತ್ರರು ಪುಸ್ತಕ ಎರವಲು ಪಡೆದು ಹಿಂತಿರುಗಿಸಿರಲಿಲ್ಲ . ಅಲ್ಲಿಯ ಯುವ ಜಿಲ್ಲಾಧಿಕಾರಿ ವಾಚಾಲಯದಲ್ಲಿ ಅತೀವ ಆಸಕ್ತಿ ಹೊಂದಿದ್ದು ಪುಸ್ತಕ ಹಿಂತಿರುಗಿಸದಿರುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು . ನನಗೆ ಬೇಸರ ಬದಲು ಸಂತೋಷ ಆಯಿತು .ಕೂಡಲೇ ನನ್ನ ಹೆಸರಿನಲ್ಲಿ ಕೊಂಡ ಪುಸ್ತಕಗಳ ಹೊಸಾ ಆವೃತ್ತಿ ಖರೀದಿಸಿ ಅದರೊಡನೆ ದಂಡ ಮೊತ್ತ ಕಳುಹಿಸಿ ನನ್ನ ಮೆಂಬರ್ ಶಿಪ್ ಕ್ಲೋಸ್ ಮಾಡಲು ಅರ್ಜಿ ಹಾಕಿದೆ .
ಈಗ ನಾನು ಲೈಬ್ರರಿ ಗೆ ಹೋಗುವದು ಕಡಿಮೆ .ಪುಸ್ತಕ ಖರೀದಿಸಿ ಓದುವುದೇ ಹೆಚ್ಚು .ಆದರೂ ಪುತ್ತೂರಿಗೆ ಒಂದು ಒಳ್ಳೆಯ ಲೈಬ್ರರಿ ಬೇಕು . ಗಾಳಿ ಬೆಳಕು ಚೆನ್ನಾಗಿರುವ , ಹೋಗಿ ಬರುವುದಕ್ಕೆ (ವಾಹನ ಇಲ್ಲದವರಿಗೆ )ಅನುಕೂಲ ಇರುವ ಜಾಗದಲ್ಲಿ ಇದ್ದರೆ ಉತ್ತಮ . ಹಲವಾರು ಸರಕಾರಿ ಕಚೇರಿಗಳು ,ಕೋರ್ಟ್ ಇತ್ಯಾದಿ ಸ್ಥಳಾಂತರ ಆಗುವಾಗ ಅವುಗಳಲ್ಲಿ ಯಾವುದಾದರೂ ಒಳ್ಳೆಯ ಜಾಗ ಸಿಕ್ಕಿದರೂ ಆದೀತು .
ಬಾಲಂಗೋಚಿ :ನನ್ನ ಅಜ್ಜನ ಮನೆಯ ಶಾಖೆ ಒಂದು ಈಶ್ವರ ಮಂಗಳ ಬಳಿ ಸಾರು ಕೂಟೆಲ್ ನಲ್ಲಿ ಇದ್ದು ಅಲ್ಲಿ ನನ್ನ ಪುಟ್ಟು ಮಾವ ಶಂಕರ ಜೋಷಿ ಅವರು ಒಂದು ಗೃಹ ಪುಸ್ತಕ ಭಂಡಾರ ಅಭಿವೃದ್ದಿ ಪಡಿಸಿದ್ದು ನಮಗೆ ರಜೆಯಲ್ಲಿ ಅಲ್ಲಿಗೆ ಹೋಗಲು ಆಕರ್ಷಣೆ . ಮುಂದೆ ನನ್ನ ಅಕ್ಕನ ಮನೆಯಲ್ಲಿ ನಾನೇ ಒಂದು ಲೈಬ್ರರಿ ಮಾಡಿಕೊಟ್ಟೆ .ನನ್ನ ಎರಡನೇ ಅಕ್ಕನ ಗಂಡ ವಿ ಬಿ ಅರ್ತಿಕಜೆ ಅವರು ಪುಸ್ತಕಗಳ ನಡುವೆ ಇರುವವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ