ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 6, 2021

ಗಲ್ಫ್ ಕನಸು

ನಾನು ಕೆಲ ಸಮಯ ಸೌದಿ  ಅರೇಬಿಯಾದ ತಾಯೀಫ್ ಸಮೀಪ ಸರಕಾರಿ  ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದೆ .ನಗರದಲ್ಲಿ ರಾಜಗೋಪಾಲ್ (ಹೆಸರು ಬದಲಿಸಿದ್ದೇನೆ )ಎಂಬವರು ಬಹಳ ವರ್ಷಗಳಿಂದ  ಅಲ್ಲಿ ಗ್ಯಾರೇಜು ನಡೆಸುತ್ತ್ತಿದ್ದ ತಮಿಳು ಮಿತ್ರರು ಇದ್ದರು . ದಕ್ಷಿಣ ಭಾರತದಿಂದ ಬಂದವರಿಗೆ ಬಹಳ ಸಹಾಯ  ಮಾಡುತ್ತಿದ್ದರು . ಅರಬರ ಪೈಕಿಯೂ ಅವರು  ಜನಪ್ರಿಯರು . ರಜಾ ದಿನಗಳಂದು ನಾನು ಮತ್ತು ನನ್ನ ತರುಣ ಮಿತ್ರ ಫಿಸಿಯೋ ಥೆರಪಿಸ್ಟ್ ಜಾನ್ ಎಂಬವರು ಅವರ ವಸತಿಗೆ ಹೋಗಿ ಹರಟೆ ಹೊಡೆಯುತ್ತಿದ್ದೆವು . ಅಲ್ಲಿಯೇ ಊಟ ಕೂಡಾ .

ಒಂದು ಶುಕ್ರವಾರ (ಅಲ್ಲಿ ಶುಕ್ರವಾರ ವಾರದ  ರಜೆ )ಅಲ್ಲಿ ಹೋಗಿದ್ದಾಗ ಸುಮಾರು  ನಲುವತ್ತು ವರ್ಷ ಪ್ರಾಯದ ವ್ಯಕ್ತಿಯನ್ನು ಪರಿಚಯ ಮಾಡಿಸಿದರು .ಅವರು ನಮ್ಮ ಮಂಜೇಶ್ವರ ದವರೇ . ಹೆಸರು ಉಸ್ಮಾನ್ ಎಂದು ಇಟ್ಟು ಕೊಳ್ಳೋಣ .ಹೊರದೇಶಕ್ಕೆ ಹೋದಾಗ ದೊಡ್ಡ ಕೆಲಸದವನು ಸಣ್ಣ ಕೆಲಸದವನು ,ಆ ಜಾತಿ ಈ ಜಾತಿ ಎಂದು ಇಲ್ಲಾ .ನಾವೆಲ್ಲಾ ಒಂದೇ ,ಊರಿನವರು ,ಭಾರತೀಯರು . ರಾಜಗೋಪಾಲ್ ಡಾಕ್ಟ್ರೇ ಇವನಿಗೆ ಸ್ವಲ್ಪ ಧೈರ್ಯ ಹೇಳಿ ಎಂದರು .ಏನಪ್ಪಾ ಸಮಸ್ಯೆ ಎನಲು ಉಸ್ಮಾನ್ ಜೋರಾಗಿ ಅಳಲು ಆರಂಭ ಮಾಡಿದರು .ಅವರು ಸೌದಿಗೆ ಕೆಲಸಕ್ಕೆ ಬಂದು ಎರಡು ತಿಂಗಳು ಆಯಿತು .ಧಣಿ ಒಳ್ಳೆಯವರೇ . ಆದರೆ ಊರಿನಲ್ಲಿರುವ ಹೆಂಡತಿ ,ಮಕ್ಕಳು ಮತ್ತು ಉಮ್ಮ ನನ್ನು ಬಿಟ್ಟು ಹೇಗೆ ಇರುವದು ? ನನಿಗೆ ಏನೂ  ಬೇಡ ಊರಿಗೆ ಹೋಗುತ್ತೇನೆ  ಎಂದು ಹಠ . ಒಂದು ತರಹದ ಹೋಂ ಸಿಕ್ ನೆಸ್ . ಈ ತರಹ ಹಲವು ಮಂದಿ ಕಂಡಿದ್ದೇನೆ .ಊರಿನಲ್ಲಿ ಇರುವವವರು ನಮ್ಮವ ಗಲ್ಫ್ ನಲ್ಲಿ ಸುಖವಾಗಿ ಇದ್ದು ಕೇಳಿದಾಗ ಹಣ ಬರುತ್ತದೆ ಎಂಬ ಭಾವನೆಯಲ್ಲಿ ಇರುವರು 

ಊರಿನಲ್ಲಿ ಅಕ್ಕ ಪಕ್ಕದವರು ಗಲ್ಫ್ ಗೆ ಹೋಗಿ ಮನೆಕಟ್ಟುವುದು ,ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಕಳುಹಿಸುವುದು ಇತ್ಯಾದಿ ನೋಡುವಾಗ ನಾವೂ ಒಂದು ಕೈ ನೋಡಿದರೆ ಹೇಗೆ ಎಂದು ಆಗುವುದು .ಕೆಲವೊಮ್ಮೆ ಮನೆಯವರೇ ಒತ್ತಡ ಹಾಕುವರು . ಸಾಲ ಸೋಲ ಮಾಡಿ ವೀಸಾ ಸಂಪಾದಿಸಿ ಕನಸಿನ ನಾಡಿಗೆ ಹೋಗುವುದು . ಅಲ್ಲಿ ಮನಸು ಹಂಚಿಕೊಳ್ಳಲು ಮನೆಯವರು ಇಲ್ಲ ..ಈಗ ಮೊಬೈಲ್ ಆದರೂ ಇದೆ .. ಅಲ್ಲಿ ಅವರು ಭಾವನಾತ್ಮಕ ಹಸಿವಿನಿಂದ ಬಳಲಿದರೆ  ಇಲ್ಲಿ ಇವರು . ಇನ್ನು ಕೆಲವು ನತದೃಷ್ಟರಿಗೆ ಅಲ್ಲಿಯ ಉದ್ಯೋಗದಾತ (ಕಫೀಲ್ )ನಕ್ಷತ್ರಿಕ . ಅದು ಬೇರೆ ಸಮಸ್ಯೆ . ಒಟ್ಟಿನಲ್ಲಿ ಅಲ್ಲಿರಲಾರೆ ಊರಿಗೆ ಮರಳಲಾಗದು ಎಂಬ ಸ್ಥಿತಿ . ಅಂತೂ ಉಸ್ಮಾನ್ ಗೆ ಧೈರ್ಯ ಹೇಳಿ ಕಳುಹಿಸಿದೆ . ದೊಡ್ಡ ದೊಡ್ಡ ಕೆಲಸದವರಿಗೆ ಮಾತ್ರ ಕುಟುಂಬ ವೀಸಾ ಕೊಡುವರು . 

ರಾಜಗೋಪಾಲ್  ಬಡ  ವಲಸೆ ಕೂಲಿ ಕಾರ್ಮಿಕರಿಗೆ ಅರೋಗ್ಯ ಸಮಸ್ಯೆ ಇದ್ದರೆ ನನ್ನಲ್ಲಿ ತೋರಿಸಿ ಸಲಹೆ ಕೇಳುವರು .ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಹೊರ ದೇಶದವರಿಗೆ ಚಿಕಿತ್ಸೆ ಗೆ  ಅನುಮತಿ ಇರಲಿಲ್ಲ .ಖಾಸಗಿ ದುಬಾರಿ .ಹಲವು ಬಾರಿ ನಮ್ಮ ಹೆಸರು ಹಾಕಿ ಔಷಧಿ ತೆಗೆದುಕೊಂಡು ಇಂತಹವರಿಗೆ ಕೊಟ್ಟದ್ದಿದೆ . 

ಇಂತಹವರೂ ಮತ್ತು ಇವರ ಕುಟುಂಬದವರೂ ನಾಳೆಯ ಕನಸುಗಳನ್ನು ಸಾಕಾರ ಗೊಳಿಸಲು ತಮ್ಮ ಇಂದನ್ನು ಕಳೆದು ಕೊಳ್ಳುವರು . ಇಲ್ಲಿ ಇರುವವರೂ ತಲೆ ನೋವು ತಲೆ ಸುತ್ತುವುದು ಎಂದು ಡಾಕ್ಟರ್ ಬಳಿ ಬರುವರು .ಅದಕ್ಕೆ ಗಲ್ಫ್ ಸಿಂಡ್ರೋಮ್ ಎಂದೂ ಕರೆಯುವ ಕ್ರಮ ಇದೆ . 

"ವರವೇಲ್ಪು " ಎಂಬ ಮಲಯಾಳಂ ಸಿನಿಮಾ ಗಲ್ಫ್ ಮಲಯಾಳಿಗಳ ;ಮುಖ್ಯವಾಗಿ ಅಲ್ಲಿಂದ ಮರಳಿದವರ ಕತೆ .ಮೋಹನಲಾಲ ನಾಯಕ . ಈ ಸಮಸ್ಯೆಯನ್ನು ಹೃದ ಯಂಗಮ ವಾಗಿ ಚಿತ್ರಿಸಿದ್ದಾರೆ .. ವರ್ಷದಂತೆ ನಾಯಕ ಗಲ್ಫ್ ನಿಂದ ರಜೆಯಲ್ಲಿ ಉಡುಗೊರೆ ಗಳೊಂದಿಗೆ ಊರಿಗೆ ಬರುವಾಗ ಎಲ್ಲರೂ ಆತನ ಸಮ್ಮಾನ ಮಾಡುವವರೇ . ಅವನ ಊಟಕ್ಕೆ ಕೋಳಿಯೇನು ,ಮೀನು ಏನು ? ಆದರೆ ಈ ಬಾರಿ ಅವನು ವಾಪಾಸು ಹೋಗದಿರುವ ನಿರ್ಧಾರ ಪ್ರಕಟಿಸಿದಾಗ ಹಠಾತ್ ಎಲ್ಲಾ ನಿಲ್ಲುವುದು .ಏನೂ ಇಲ್ಲದಿದ್ದರೂ ನಮ್ಮವ ಗಲ್ಫ್ ನಲ್ಲಿ ಇದ್ದಾನೆ ಎಂದು ಹೇಳಿ ಕೊಳ್ಳುವುದು ತಪ್ಪುವುದಲ್ಲವೇ ?.ನೀವು ಇನ್ನೂ ನೋಡಿಲ್ಲವಾದರೆ ನೋಡಿ .ಯು ಟ್ಯೂಬ್ ನಲ್ಲಿ ಇದೆ . 

 https://youtu.be/k7b202W79-I

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ