ನನ್ನ ಅಪ್ಪಚ್ಚಿ (ಚಿಕ್ಕಪ್ಪ )
ಹಿಂದೆ ಬರೆದಂತೆ ನನ್ನ ಮನೆ ಅಜ್ಜನಿಗೆ ಮೂವರು ಗಂಡು ಮಕ್ಕಳು . ನನ್ನ ತಂದೆ ನಡುವಿನವರು . ನಾಲ್ಕು ಹೆಣ್ಣು ಮಕ್ಕಳು .ದೊಡ್ಡಪ್ಪ ಸಿನೆಮಾ ನಟರಾಗಿ ಮದ್ರಾಸ್ ನಲ್ಲಿ ಇದ್ದರು . ಚಿಕ್ಕಪ್ಪ ಪೆರ್ಲ ಶಾಲೆಯಲ್ಲಿ ಎಸ ಎಸ ಎಲ್ ಸಿ ವರೆಗೆ ಕಲಿತಿದ್ದರು .ಅವರು ಶಾಲೆಗೆ ಹೋದ ಕಾರಣ ಸೋದರ ಅಳಿಯಂದಿರು ಶಾಲೆ ಮಾವ ಎಂದು ಕರೆಯುತ್ತಿದ್ದರು . ನನ್ನ ಅಪ್ಪ ಮೂರೋ ನಾಲ್ಕೋ ಕ್ಲಾಸ್ ಓದಿರ ಬಹುದು . ಅಜ್ಜ ಮನೆಯ ವ್ಯವಹಾರ ದಿಂದ ಸ್ವಯಂ ನಿವೃತ್ತಿ ಘೋಷಿಸಿದಾಗ ಮನೆ ವಾರ್ತೆ ಚಿಕ್ಕಪ್ಪ ವಹಿಸಿದರು . ನನ್ನ ತಂದೆ ಸಲಹೆ ಸೂಚನೆ ಕೊಡುವರು . ಚಿಕ್ಕಪ್ಪ ಮತ್ತು ಅಪ್ಪ ಪ್ರಧಾನಿ ಮತ್ತು ರಾಷ್ಟಪತಿ ಇದ್ದಂತೆ ಇದ್ದರು .
ಚಿಕ್ಕಪ್ಪನ ಹೆಸರು ಶಂಕರ ನಾರಾಯಣ ಭಟ್ .ಅವರ ಕೋಣೆ ಮನೆಯ ಪಶ್ಚಿಮ ಭಾಗದಲ್ಲಿ ಇದ್ದು ಬೆಳಿಗ್ಗೆ ಎದ್ದು ಪಕ್ಕದಲ್ಲಿಯೇ ಚಾವಡಿಯಲ್ಲಿ ಉತ್ತರಕ್ಕೆ ಮುಖ್ಯ ಬಾಗಿಲು ಇದ್ದರೂ ಪೂರ್ವದ ಬಾಗಿಲಿನಿಂದಲೇಹೊರ ಬಂದು ಸೂರ್ಯನಿಗೆ ನಮಸ್ಕಾರ ಮಾಡಿ ವಿಶಾಲವಾಗಿ ಹರಡಿದ್ದ ತೋಟಕ್ಕೆ ಒಂದು ಪ್ರದಕ್ಷಿಣೆ ಹಾಕಿ ಬಂದು ತಿಂಡಿ ಕಾಪಿ ಸೇವಿಸುವರು .ಅವರು ಕುಳಿತು ಕೊಳ್ಳುತ್ತಿದ್ದ ಮಣೆ ಸ್ವಲ್ಪ ಎತ್ತರದ್ದು . ಅವರು ಕುಳಿತೊಡನೆ ಎರಡು ಬೆಕ್ಕುಗಳು ಮಿಯಾಂ ಎಂದು ಬಂದು ಪಕ್ಕದಲ್ಲಿ ಕುಳಿತು ಕೊಳ್ಳುವವು .ಸ್ವಲ್ಪ ತಿಂಡಿ ಅವಕ್ಕೆ ಹಾಕಿಯೇ ಇವರು ತಿನ್ನುವರು .ಊಟದ ಸಮಯವೂ ಹಾಗೆಯೇ . ಚಿಕ್ಕಪ್ಪನದ್ದು ನೀರು ಕುಡಿಯುವ ಒಂದು ಸ್ಟಯಿಲ್ ಇದ್ದಿತು . ಬಾಯಿಯ ಒಂದು ಮೂಲೆಯಿಂದ ಹೀರುವುದು . ಮಕ್ಕಳು ಒಂದು ಸಾಲು ,ಹಿರಿಯರು ಒಂದು ಸಾಲು ;ನಮಗೆ ಬಟ್ಟಲು ,ಅವರಿಗೆ ಬಾಳೆ ಎಲೆ ;ಜತೆಯಾಗಿ ತುಂಬಿ ತುಳುಕುವ ಭೋಜನ ಶಾಲೆ ,ನೆನೆಸಿಕೊಳ್ಳುವಾಗ ಮನಸು ಮುದವಾಗುವುದು.
ಮಧ್ಯಾಹ್ನ ದ ವರೆಗೆ ಕೃಷಿ ಚಟುವಟಿಕೆ ಯಲ್ಲಿ ಭಾಗವಹಿಸಿ ಮಧ್ಯಾಹ್ನ ಕೆಲವೊಮ್ಮೆ ಪೂಜೆ (ಅಜ್ಜ,ಅಪ್ಪ ಇಲ್ಲದಿದ್ದರೆ ),ಆಮೇಲೆ ಊಟ ಮತ್ತು ಸ್ವಲ್ಪ ವಿಶ್ರಾಂತಿ .ಬಳಿಕ ಎದ್ದು ಕೊಟ್ಯ (ಕೊಟ್ಟಿಗೆ )ಯಲ್ಲಿ ವಿಶ್ರಮಿಸುತ್ತಿರುವ ಕೆಲಸಗಾರರನ್ನು' ಲಕ್ಕಿ ಲಕ್ಕಿ 'ಎಂದು ಎಬ್ಬಿಸುವರು .ಮತ್ತೆ ಸಂಜೆ ತನಕ ತೋಟ ಗದ್ದೆ .
ಅಪ್ಪ ಚಿಕ್ಕಪ್ಪ ಅನ್ಯೋನ್ಯ ವಾಗಿದ್ದರು . ಚಿಕ್ಕಪ್ಪನಿಗೆ ಅಜ್ಜನೊಡನೆ ಮಾತು ಕಡಿಮೆ .ಆದುದರಿಂದ ಅವರ ನಡುವೆ ಸಂದೇಶ ವಾಹಕರಾಗಿ ಮನೆಯ ಇತರರು ಕಾರ್ಯ ನಿರ್ವಹಿಸುತ್ತಿದ್ದರು . ಚಿಕ್ಕಪ್ಪ ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಾರಣ ನಮಗೆ ಏನಾದರೂ ಹಣ ಬೇಕಾದರೆ ಅವರನ್ನು ಕೇಳ ಬೇಕಿತ್ತು . ಅವರು ಕೇಳಿದ ಕೂಡಲೇ ಕೊಡರು .ಎರಡು ಮೂರು ಸಲ ನೆನೆಪಿಸಿದಾಗ ಕೊಡುವರು . ಈ ಅಭ್ಯಾಸ ನನಗೂ ಇದೆ ಎಂದು ನನ್ನ ಹೆಂಡತಿ ಹೇಳುವಳು .ನಾಲ್ಕೈದು ಸಾರಿ ಒರಂಜಿ ದ ಮೇಲೆ ಹಣ ಸ್ಯಾಂಕ್ಷನ್ ಮಾಡುತ್ತೇನೆ ಎಂದು ಅವಳ ಆರೋಪ .
ಬೆಳೆದ ಅಡಿಕೆಯನ್ನು ಮಂಗಳೂರು ಭಂಡಸಾಲೆ ಗೆ ಕಳುಹಿಸಿ ,ಬಂದರಿನಿಂದ ಮನೆಗೆ ಮುಖ್ಯ ಸಾಮಾನುಗಳು ಬರುತ್ತಿದ್ದವು . ಮಂಗಳೂರಿಗೆ ಚಿಕ್ಕಪ್ಪ ಹೋಗುವ ಮುನ್ನಾ ದಿನ ಅನೌನ್ಸ್ಮೆಂಟ್ ಮಾಡುವರು .ನಾವು ಏನಾದರೂ ಬೇಕಾದರೆ (ಪುಸ್ತಕ ,ಕೊಡೆ ಇತ್ಯಾದಿ )ಪಟ್ಟಿ ಕೊಡಬೇಕು .ಬೆಳಿಗ್ಗೆ ಅವಲಕ್ಕಿ ಮೊಸರು ತಿಂದು ರಾಂಪನ ಸಿ ಪಿ ಸಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ರಾತ್ರಿ ಬರುವರು .ನಾವು ಚಾತಕ ಪಕ್ಷಿಗಳಂತೆ ಅವರ ಬರುವಿಕೆ ಗೆ ಕಾಯುವೆವೆವು . ಒಂದು ನಾವು ಕೊಟ್ಟ ಪಟ್ಟಿಯ ವಸ್ತು ಸ್ವೀಕರಿಸಲು ,ಇನ್ನೊಂದು ಅವರು ಯಾವಾಗಲೂ ಮಕ್ಕಳಿಗೆ ತರುತ್ತಿದ್ದ ಪೆಪ್ಪರ್ ಮೆಂಟ್ (ಹೆಚ್ಚಾಗಿ ಅರ್ಧ ಚಂದ್ರಾಕಾರದ ನಿಂಬೆ ಹುಳಿ ಮಿಠಾಯಿ )ಅಥವಾ ಚಾಕಲೇಟ್ ಗಾಗಿ .ನನ್ನ ಅಪ್ಪ ಮತ್ತು ಚಿಕ್ಕಪ್ಪ ಕನ್ಯಾನ ಪೇಟೆಗೆ ಬರುತ್ತಿದ್ದುದು ಅಪರೂಪ .
ಶನಿವಾರ ಕೆಲಸದವರಿಗೆ ಸಂಬಳ ಬಟವಾಡೆ . ತಂದೆ ಲೆಕ್ಕ ಮಾಡಿ ಹೇಳುವರು .ಚಿಕ್ಕಪ್ಪ ಅದಕ್ಕನುಗುಣ ವಾಗಿ ಹಣ ಎಣಿಸಿ ಕೊಡುವರು .
ಮನೆಯವರನ್ನು ಮಕ್ಕಳು ಸಹಿತ ತೀರ್ಥ ಸ್ಥಳ ಗಳಿಗೆ ಕರೆದೊಯ್ಯುವುದು ಅವರಿಗೆ ಪ್ರೀತಿ .ಅವರೊಡನೆ ನಾನು ಮಧೂರು ದೇವಸ್ಥಾನ ದ ಉತ್ಸವ ,ಬಜ್ಪೆ ವಿಮಾನ ನಿಲ್ದಾಣ ನೋಡಲು ಹೋದ ನೆನಪು . ನೆಂಟರ ಮನೆಯ ಕಾರ್ಯಕ್ರಮಗಳಿಗೂ ಅಪ್ಪನಿಗಿಂತ ಹೆಚ್ಚು ಚಿಕ್ಕಪ್ಪನೇ ಹೋಗುವರು .
ಚಿಕ್ಕಪ್ಪ
ಬುಕ್ ಮಾಡಿ ಬಹಳ ವರ್ಷ ಕಾದು ಒಂದು ಲ್ಯಾಂಬ್ರೇಟ್ಟಾ ಸ್ಕೂಟರ್ ಕೊಂಡರು.ಸೈಕಲ್ ಕೂಡಾ
ಇಲ್ಲದ ನಮ್ಮ ಮನೆಯಲ್ಲಿ ಭಾರೀ ಸಂಭ್ರಮ .ಅದನ್ನು ಕಲಿಯುವಾಗ ಅವರ ಹಿಂದೆ ಧೈರ್ಯಕ್ಕೆ
ನಾನು .ಅವರು ಕುಳಿತರು ;ನಾನು ಹಿಂದೆ ,ಹೋಗುವನಾ ,ನಾನು ರೈಟ್ ಎಂದೆ.ಆಕ್ಸಲರೇಟರ್
ಕೊಟ್ಟರು ,ಕ್ಲಚ್ ಬಿಟ್ಟರು ,ಚರಳು ಕಲ್ಲಿನ ಮೇಲೆ .ಹ್ಯಾಂಡಿಲ್ ಅತ್ತ,ಸ್ಕೂಟರ್ ಇತ್ತ.
ನಾವು ಇಬ್ಬರೂ ಧರಾಶಾಯಿ .ಪುಣ್ಯಕ್ಕೆ ದೊಡ್ಡ ಗಾಯ ಆಗಿರಲಿಲ್ಲ .ನನ್ನ ಎಸ್ ಎಸ್ ಎಲ್ ಸಿ
ಪರೀಕ್ಷಾ ಸಮಯ ಬೇರೆ .
ಚಿಕ್ಕಮ್ಮನ ಹೆಸರು ಸಾವಿತ್ರಿ .ಅವರ ತಂದೆ ಮನೆ ಈಶ್ವರ ಮಂಗಲ ಸಮೀಪ ಹೊಸಂಗಡಿ . ಚಿಕ್ಕಮ್ಮನ ಬಳಿ ಒಂದು ಹಾರ್ಮೋನಿಯಂ ಪೆಟ್ಟಿಗೆ ಇತ್ತು .ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದರು .ಅವರು ವಾರಕ್ಕೊಮ್ಮೆ ಸಂಜೆ ಹಾಡುವರು ,ನಾವೆಲ್ಲಾ ಅವರ ಸುತ್ತ ಕುಳಿತು ಕೇಳುವೆವು .. ನಮ್ಮ ಅಮ್ಮ ಮತ್ತು ಚಿಕ್ಕಮ್ಮ ಸಂಜೆ ಹೊತ್ತು ಒಂದು ಭಾರೀ ಅರೆಯುವ ಕಲ್ಲಿನಲ್ಲಿ ಜತೆಯಾಗಿ ಮರುದಿನದ ತಿಂಡಿಗೆ ಅಕ್ಕಿ ಉದ್ದು ಇತ್ಯಾದಿ ಅರೆಯುವರು .
ಚಿಕ್ಕಮ್ಮನ ತಮ್ಮಂದಿರು ನಮ್ಮ ಮನೆಗೆ ಆಗಾಗ ಬರುತ್ತಿದ್ದು ನನ್ನ ಅಣ್ಣಂದಿರ ಸರೀಕರು .
ಅವರು ಎಲ್ಲರೂ ಸೇರಿ ಕೇರಂ ಆಡುತ್ತಿದ್ದರು .ದೀಪಾವಳಿ ಸಮಯ ಪಟಾಕಿ ತರುವರು . ಚಿಕ್ಕಪ್ಪನಿಗೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳು . ಚಿಕ್ಕಮ್ಮ ಬೇಗನೇ ತೀರಿ ಕೊಂಡರು . ಆ ಕಾಲಕ್ಕೆ ನಮಗೆ ಪಾಲು ಆಗಿತ್ತು . ಮಕ್ಕಳೆಲ್ಲಾ ಈಗ ಒಂದು ನೆಲೆಗೆ ಬಂದಿದ್ದಾರೆ .ಅವರ ಅಜ್ಜನ ಮನೆಯವರು ಸಹಾಯಕ್ಕೆ ನಿಂತರು .
ನನ್ನ ದೊಡ್ಡಪ್ಪ ತೀರಿ ಕೊಂಡಾಗ ದೊಡ್ಡಮ್ಮನ ಅಪೇಕ್ಷೆ ಮೇರೆಗೆ ಅಸ್ತಿ ವಿಭಜನೆ ಆಯಿತು .ಒಟ್ಟಿಗಿದ್ದ ನಮಗೆ ಮನಸಿಗೆ ಭಾರೀ ಬೇಸರ . ಚಿಕ್ಕಪ್ಪ ಒಳ್ಳೆಯ ಮನಸ್ಸಿನವರು .ಆದರೆ ಅವರ ಆರ್ಥಿಕ ವ್ಯವಹಾರಗಳಲ್ಲಿ ಶಿಸ್ತು ಇರಲಿಲ್ಲ . ಸ್ವಲ್ಪ ಹಣ ಕೈಯಲ್ಲಿ ಬಂದೊಡನೆ ದೊಡ್ಡ ದೊಡ್ಡ ಯೋಜನೆ ಕೈಗೆತ್ತಿ ಕೊಳ್ಳುವರು ;ಹಣ ಸಾಕಾಗದೆ ಸಾಲ ಮಾಡುವರು .ಸಾಲ ಇದ್ದರೂ ಸಾರ್ವಜನಿಕ ಕೆಲಸಕ್ಕೆ ಇತ್ಯಾದಿ ಕೇಳಿದೊಡನೆ ಕೊಡುವರು .ಇವರ ಈ ದೌರ್ಬಲ್ಯ ವನ್ನು ಅನೇಕರು ಉಪಯೋಗ ಪಡಿಸಿ ಕೊಂಡರು .. ತಮ್ಮ ಜೀವನದ ಕೊನೆ ದಿನಗಳಲ್ಲಿ ತುಂಬಾ ಕಷ್ಟ ಪಟ್ಟರು . ಅವರು ತೀರಿಕೊಂಡ ದಿನ ನಾನು ಊರಿನಲ್ಲಿ ಇದ್ದೆ . ನನ್ನ ತಂದೆಯವರು ಸಾಮನ್ಯವಾಗಿ ಯಾವುದೇ ದುಃಖ ಅಥವಾ ಸಂತೋಷ ಹೆಚ್ಚು ತೋರಿಸಿ ಕೊಳ್ಳುವವರು ಅಲ್ಲ .ಆ ದಿನ ತಮ್ಮನನ್ನು ಕಳೆದು ಕೊಂಡ ಅವರ ಮುಖ ಮ್ಲಾನವಾಗಿತ್ತು .
ಚಿಕ್ಕಪ್ಪನ ಮಕ್ಕಳೂ ನಾವೂ ಈಗಲೂ ಅನ್ಯೋನ್ಯವಾಗಿ ಇರುವೆವು .