ಕನ್ಯಾನ ,ಕರೋಪಾಡಿ ಮತ್ತು ಸನಿಹದ ಕೇರಳಕ್ಕೆ ಸೇರಿದ ಬಾಯಾರು ಆನೇಕಲ್ ವರೆಗಿನ ವಿಸ್ತಾರವಾದ ಪ್ರದೇಶದ ಜನ ಔಷದೋಪಚಾರ ಕ್ಕಾಗಿ ಕನ್ಯಾನವನ್ನು ಅವಲಂಬಿಸಿದ್ದರು .ಕನ್ಯಾನದಲ್ಲಿ ಇದ್ದವರು ಒಬ್ಬರೇ ಡಾಕ್ಟರ್ ಡಾ ಮಹಾದೇವ ಶಾಸ್ತ್ರಿಗಳು . ಆಮೇಲೆ ಕೋಡ್ಲ ವೆಂಕಟ್ರಮಣ ಭಟ್ ಎಂಬ ಆಯುರ್ವೇದ ವೈದ್ಯರು ಬಂದರು . ಎಂ ಬಿ ಬಿ ಎಸ್ ಪದವಿ ಪಡೆದು ಇಲ್ಲಿ ಸೇವೆ ಸಲ್ಲಿಸಲು ಬಂದ ಮೊದಲ ವೈದ್ಯ ಡಾ ಸುಬ್ರಹ್ಮಣ್ಯ ಭಟ್ (1979).ಅವರು ,ಮೂಲತಃ ಬಂಟ್ವಾಳ ಸಮೀಪ ಪ್ರಸಿದ್ದ ತೀರ್ಥ ಕ್ಷೇತ್ರ ಕಾರಿಂಜದವರು .ಪ್ರತಿಭಾವಂತರಾದ ಇವರು ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು . ಕನ್ಯಾನ ಕೆಳಗಿನ ಪೇಟೆ ವಿಟ್ಲ ರಸ್ತೆಯಲ್ಲಿ ಇವರ ಕ್ಲಿನಿಕ್ ಇತ್ತು ,ಮುಂದೆ ಅದನ್ನು ಮಂಜೇಶ್ವರ ರೋಡ್ ಗೆ ಸ್ಥಳಾಂತರಿಸಿದರು . ಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗ ಬೇಕಿದ್ದ ಅನೇಕ ರೋಗಿಗಳನ್ನು ತಾವೇ ಚಿಕಿತ್ಸೆ ಮಾಡಿ ,ಹಳ್ಳಿಯ ಜನರ ಕಷ್ಟ ಹಗುರವಾಗುವಂತೆ ಮಾಡಿದರು . ಆಗಿನ ಹಳ್ಳಿ ಪ್ರಾಕ್ಟೀಸ್ ನಲ್ಲಿ ಇವರು ರೋಗಿಯ ಭೇಟಿಗಾಗಿ ಸವೆದ ಕಟ್ಟ ಪ್ಪುಣಿ ಗಳೆಷ್ಟೋ ?ಹಾರಿದ ತಡಮ್ಮೆಗಳೆಷ್ಟೋ ?ನಡೆದ ಒರುಂಕು ಗಳೆಷ್ಟೋ ? ಜಾತಿ ,ಆರ್ಥಿಕ ಸ್ಥಿತಿ ನೋಡದೆ ಸಲ್ಲಿಸಿದ ಸೇವೆ .ಮದುವೆಯಾದ ಮೇಲೆ ಪುತ್ತೂರಿನಲ್ಲಿ ಮನೆ ಮಾಡಿ ಬಸ್ ,ಮೋಟಾರ್ ಸೈಕಲ್ ನಲ್ಲಿ ಕನ್ಯಾನಕ್ಕೆ .ಕೆಲ ವರ್ಷಗಳ ಹಿಂದೆ ಸೂಕ್ಷ್ಮಣು ಶಾಸ್ತ್ರದಲ್ಲಿ ಎಂ ಡಿ ಮಾಡಿ ವೈದ್ಯಕೀಯ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿರುವರು .ಆದರೂ ಕನ್ಯಾನದ ಮೇಲಿನ ಪ್ರೀತಿಯಿಂದ ವಾರಕ್ಕೊಮ್ಮೆ ಭಾನುವಾರ ಅಲ್ಲಿಗೆ ತಪ್ಪದೇ ಭೇಟಿ ನೀಡಿ ವೈದ್ಯಕೀಯ ಸಲಹೆ ನೀಡುತ್ತಲಿರುವರು .
ಡಾ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಪ್ರಸಿದ್ದ ಸ್ತ್ರೀ ರೋಗ ಮತ್ತು ಪ್ರಸವ ಶಾಸ್ತ್ರ ತಜ್ನೆ ಡಾ ಪ್ರತಿಭಾ ಭಟ್ . ಹೆಸರಿಗೆ ತಕ್ಕಂತೆ ಪ್ರತಿಭಾ ವಂತರು . ನನ್ನ ಹಾಗೆ ಅವರೂ ಕೆ ಎಂ ಸಿ ಹುಬ್ಬಳ್ಳಿ ವಿದ್ಯಾರ್ಥಿನಿ .ವೈದ್ಯಕೀಯ ಕ್ಷೇತ್ರದ ದಂತ ಕತೆ ಡಾ ಎಸ್ ಎನ್ ಕೌಲ್ ಗುಡ್ ಅವರ ಶಿಷ್ಯೆ .(ನಾನೂ ಕೌಲ್ ಗುಡ್ ಶಿಷ್ಯ ) . ಪುತ್ತೂರಿನ ಗಿರಿಜಾ ಕ್ಲಿನಿಕ್ ನಲ್ಲಿ ಆರಂಭಿಸಿ ಪ್ರಸ್ತುತ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ . ಯಥಾ ಗುರು ತಥಾ ಶಿಷ್ಯ ಎಂಬಂತೆ ಕೌಲ್ಗುಡ್ ಅವರ ಸರಳತೆ ಮತ್ತು ವೃತ್ತಿ ಪ್ರಾವೀಣ್ಯತೆ ಇವರನ್ನು ಜನಪ್ರಿಯರನ್ನಾಗಿ ಮಾಡಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ