ಬೆಂಬಲಿಗರು

ಸೋಮವಾರ, ಜುಲೈ 11, 2022

ಕನ್ಯಾನದ ಕೆಲವು ನೆನಪುಗಳು

ವಿಟ್ಲ ಕಡೆಯಿಂದ  ಕನ್ಯಾನ ಕ್ಕೆ ಬರುತ್ತಿದ್ದಂತೆ ಬಲಕ್ಕೆ ಪಂಜಾಜೆ ,ಎಡಕ್ಕೆ ಅರ್ಪಿಣಿ . ಪೇಟೆ ಎಂದು ಸಾರಲು ಕೆಲವು ಕಟ್ಟಡಗಳು . ಬಲ ಬದಿಗೆ ಅಧಿಕ . ಕೇಕಣಾಜೆ ಶೆಟ್ಟರ ಗದ್ದೆ ,ತೋಟ ,ಡ್ರೈವರ್ ಗೋಪಾಲ ನ ಮನೆ , ಬಾಡಿಗೆ ಸಾಲು  ಮನೆಗಳು .ಇವುಗಳಲ್ಲಿ ಒಂದರಲ್ಲಿ ನಮ್ಮ ಜನಾರ್ಧನ ಶೆಟ್ಟಿ ಮೇಷ್ಟ್ರ ಕುಟುಂಬ ವಾಸ . ಮಾಸ್ಟ್ರು ಸಜ್ಜನಿಕೆಯ ಮೂರ್ತಿವೆತ್ತ ವರು . ಸುಶ್ರ್ಯಾವ್ಯ ವಾಗಿ ಹಾಡುತ್ತಿದ್ದರು .ಅವರ ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು . 

ನಂತರದ ಮನೆಯಲ್ಲಿ  ಮಿಡ್ ವೈಫ್ ಅವರ ಕುಟುಂಬ . ಶಾಲೆ ಮಕ್ಕಳಿಗೆ ಚುಚ್ಚು ಮದ್ದು ಕೊಡಲು ಬರುವರು .ಹಳ್ಳಿಯಲ್ಲಿ ಯಾರಿಗಾದರೂ ಹೆರಿಗೆ ನೋವು ಬಂದರೆ ಅಲ್ಲಿಗೆ ಧಾವಿಸುವರು . ನನಗೆ  ಜ್ಞಾಪಕ ಇರುವಂತೆ ಶಾಂಭವಿ ಅಕ್ಕ ಎಂಬವರು ಇದ್ದರು . ನಮ್ಮ ಕೂಡು ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ ಒಂದು ಜನನ ಇರುತ್ತಿದ್ದು ಅವರು ನಮಗೆ ಆಪತ್ಭಾಂಧವರು . ಎಷ್ಟೋ ಬಾರಿ ತಾವು ಹೋದ ಮನೆಗಳಲ್ಲೇ ತಂಗಿ ಹೆರಿಗೆ ಆದ ಮೇಲೆಯೇ ವಾಪಾಸು ಆಗುವರು . 

ಅದು ಬಿಟ್ಟರೆ  ಡಾ ಬಿ ಕೆ ಎಸ್ ಭಟ್ ಅವರ ಶಾಪ್ . ಇವರು ಕೇರಳ ಗಡಿಗೆ ತಾಗಿ ಇರುವ ಬೇತದವರು . ಕಾಂಗ್ರೆಸ್ ಪಕ್ಷದ ನಾಯಕರು . ತಾಲೂಕು ,ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿದ್ದರು . 

ಪಶ್ಚಿಮಕ್ಕೆ ತಾಗಿ ಇರುವ ಕಟ್ಟಡದಲ್ಲಿ ಕನ್ಯಾನದ ಮೊದಲ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಆರಂಭವಾಯಿತು .ಊರಿಗೆಲ್ಲಾ ಇದು ದೊಡ್ಡ ಸಂಭವ . ಅಲ್ಲಿ ಉದ್ಯೋಗಿಯಾಗಿ ಬಂದ ಉಡುಪಿಯ ಮಧ್ಯಸ್ಥ ಎಂಬ ಸ್ಪುರ ದ್ರೂಪಿ ತರುಣ ಒಬ್ಬರು ಇದ್ದರು .ನಗು ಮುಖ .ಹಳ್ಳಿಯವರಿಗೆಲ್ಲಾ  ಸದಾ ಸಹಾಯ ಹಸ್ತ ;ಚಲಂ ತುಂಬುಬುವುದು ,ಚೆಕ್ ಬರೆಯುವುದು ಎಲ್ಲಾ ಅವರೇ ಮಾಡುವುದು .ಆಗಿನ್ನೂ ಬ್ಯಾಂಕ್ ರಾಷ್ಟ್ರೀಕರಣ ಆಗಿರಲಿಲ್ಲ . 

ಬ್ಯಾಂಕಿನ ಪಕ್ಕದಲ್ಲಿ ಭಾರತ ಸೇವಾಶ್ರಮ ದವರ ಒಂದು ಕೋಣೆ ಇದ್ದದ್ದು ನೆನಪು . ಅಲ್ಲಿ ಅಗರಬತ್ತಿ ತಯಾರು ಮಾಡುತ್ತಿದ್ದರು .ಮುಂದೆ ಇದೇ ಜಾಗದಲ್ಲಿ ಡಾ ಸುಬ್ರಹ್ಮಣ್ಯ ಭಟ್  (ಕನ್ಯಾನದ ಮೊದಲ ಎಂ ಬಿ ಬಿ ಎಸ ಡಾಕ್ಟರ್ )ಹಲವು ವರ್ಷ ತಮ್ಮ ಕ್ಲಿನಿಕ್ ಮೂಲಕ ಜನ ಸೇವೆ ಮಾಡಿದರು . 

ಇನ್ನು ಅರ್ಪಿಣಿ ಬದಿಗೆ ಬಂದರೆ ಅಲ್ಲಿ ಒಂದು ಸಾಯ್ಬರ ಅಂಗಡಿ . ಸುತ್ತ ಮುತ್ತ ಬೇಸಾಯದ ಗದ್ದೆಗಳು . ಇಲ್ಲಿಯೇ ಭಾರತ ಸೇವಾಶ್ರಮ ಆರಂಭವಾಗಿ ಇಂದು ಒಳ್ಳೆಯ ಹೆಸರು ಪಡೆದಿದೆ . ಸೇವಾಶ್ರಮವನ್ನು ೧೯೬೪ ರಲ್ಲಿ  ಮೂಲತಃ ಪೂರ್ವ ಬಂಗಾಳದವರಾದ ,ಗಣಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಇದ್ದ  ದೇವೇಂದ್ರನಾಥ ಭಟ್ಟಾಚಾರ್ಯ ಎಂಬ ಮಹಾತ್ಮರು ಸ್ಥಾಪಿಸಿದರು .ಅವರಿಗೆ ಉದ್ದನೆಯ ಗಡ್ಡ ಇದ್ದು ರವೀಂದ್ರನಾಥ ಟಾಗೋರ್ ಅವರಂತೆ ಕಾಣುತ್ತಿದ್ದರು . ಊರವರು ಅವರನ್ನು ಭಟ್ಟಾಚಾರಿ ಎಂದು ಹೃಸ್ವ ನಾಮದಿಂದ ಕರೆಯುತ್ತಿದ್ದರು . ಅವರು ಊರ ಪರವೂರ ದಾನಿಗಳನ್ನು ಬೇಡಿ ಈ ಸಂಸ್ಥೆ ಆರಂಭಿಸಿದರು . ಮೊದಲಿಗೆ ಅದು ಅನಾಥಾಶ್ರಮ ಆಗಿತ್ತು . ನನ್ನ ತರಗತಿಯಲ್ಲಿ ಕೃಷ್ಣ ಪುರುಷ ಎಂಬ ಹುಡುಗ ಅಲ್ಲಿಂದ ಬರುತ್ತಿದ್ದು ,ನಮ್ಮ ಕಬಡಿ ಟೀಮ್ ನ ನಾಯಕ ಆಗಿದ್ದನು . ಅದುವರೆಗೆ ಬೀಡಿ ಕಟ್ಟುವ ಗೃಹ ಉದ್ಯಮ ಮಾತ್ರ ಕಂಡಿದ್ದ ನಮಗೆ ಆಗರ ಬತ್ತಿ ಸುತ್ತುವ ಹೊಸ ವೃತ್ತಿ ತೋರಿದವರು ಶ್ರೀ ಭಟ್ಟಾಚಾರ್ಯರು . ಅವರು ವಾರಕ್ಕೊಂಮ್ಮೆ ಮುಂಜಾನೆ ರಾಂಪಣ್ಣ ನ ಬಸ್ಸಿನಲ್ಲಿ ಮಂಗಳೂರಿಗೆ ಅದನ್ನು ಸಾಗಿಸಿ ಅಲ್ಲಿಂದ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ತರುತ್ತಿದ್ದ್ದರು . ಆಶ್ರಮದಲ್ಲಿಯೇ ಬೆಳೆದ ಶ್ರೀ ಈಶ್ವರ ಭಟ್ ಈಗ ಅದನ್ನು ನಡೆಸುತ್ತಿದ್ದಾರೆ , ಬೈರಿಕಟ್ಟೆ ಬಳಿ ಕಳಂಜಿ ಮೂಲೆ ತಪ್ಪಲಲ್ಲಿ ಇನ್ನೊಂದು ದೊಡ್ಡ ಕ್ಯಾಂಪಸ್ ನಿರ್ಮಿಸಿದ್ದಾರೆ . ಈಗ ಹಿರಿಯರ ನ್ನು ನೋಡಿ ಕೊಳ್ಳುವ ವ್ಯವಸ್ಥೆಯೂ ಇದೆ 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ