ನಿನ್ನೆ ಹಿರಿಯ ಲೇಖಕಿ ಭುವನೇಶ್ವರಿ ಹೆಗ್ಡೆ ಅವರು ನಾನು ವಾಕಿಂಗ್ ಹೋಗಿ ಬರುವಾಗ ಚಂಡಿ ಆಗಿದ್ದೆ ಎಂಬುದನ್ನು ದಕ್ಷಿಣ ಕನ್ನಡೇತರ ರಿಗಾಗಿ ಚಂಡಿ ಎಂದರೆ ಒದ್ದೆ ಎಂದು ವಿಶದೀಕರಿಸಿದ್ದರು . ಅದಕ್ಕೆ ಉತ್ತರವಾಗಿ ನಾನು ಸೂಕ್ತ ಪದಾರ್ಥ ಎಂದು ಬರೆದಿದ್ದೆ . ಗ್ರಾಂಥಿಕವಾಗಿ ಪದಾರ್ಥ ಎಂಬುದು ಪದದ ಅರ್ಥ .ಪಾ ವೆಂ ಆಚಾರ್ಯರ 'ಪದಾರ್ಥ ಚಿಂತಾಮಣಿ ' ಇದು ಇದೇ ಆಶಯದ ಕೃತಿ.ಪಂಜೆ ಮಂಗೇಶ ರಾಯರ 'ಪದಾರ್ಥವೇನು ?'ಎಂಬ ಪ್ರಭಂದ ಆರಂಭದಲ್ಲಿ ಅಡಿಗೆ ಪದಾರ್ಥ ವನ್ನು ವಿವರಿಸಿದರೂ ಮುಂದೆ ಶಬ್ದ ಗಳ ವ್ಯುತ್ಪತ್ತಿ ಯನ್ನು ವಿಶ್ಲೇಷಣೆ ಮಾಡುತ್ತದೆ . ಉದಾಹರಣೆ ಗೆ ಬೀಳ್ಕೊಡು ಎಂಬುದು ವೀಳ್ಯ ಕೊಡು ಎಂಬುದರಿಂದ ಬಂದಿರ ಬಹುದು ಇತ್ಯಾದಿ .
ಆದರೆ ವಾಡಿಕೆಯಲ್ಲಿ ಪದಾರ್ಥ ಎಂದರೆ ತಿನ್ನುವ ಅನ್ನ ,ಹೈನೇತರ ಅಡಿಗೆ ಮಾಡಿ ತಯಾರು ಮಾಡುವ ವಸ್ತು .ತರಕಾರಿ ,ಮಾಂಸ ಮೀನು ಇತ್ಯಾದಿಗಳು ಮುಖ್ಯ ವಸ್ತುಗಳು . ತುಳುವಿನ ಕಜಿಪ್ಪು .
ಕೆಲ ತಿಂಗಳುಗಳ ಹಿಂದೆ ನಮ್ಮ ರಸ್ತೆ ಮೋರಿ ನಿರ್ಮಾಣಕ್ಕಾಗಿ ಬಂದ್ ಆಗಿತ್ತು . ಆದ್ದರಿಂದ ನಾನು ಮುಖ್ಯ ರಸ್ತೆಯ ವರೆಗೆ ನಡೆದು ಆಟೋ ಹಿಡಿದು ಹೋಗುತ್ತಿದ್ದೆ . ಒಂದು ದಿನ ರಸ್ತೆಯಲ್ಲಿ ನಿತ್ಯ ಓಡಾಡುವ ಹುಡುಗಿ ಒಬ್ಬಾಕೆ ಸಿಕ್ಕಿದಳು . ವರ್ಕ್ ಶಾಪ್ ಒಂದರ ಉದ್ಯೋಗಿ . ನನ್ನನ್ನು ಕಂಡು ನಮಸ್ಕಾರ ಮಾಡಿ ಜತೆಗೇ ನಡೆಯುತ್ತಾ 'ಸಾರ್ ನೀವು ಗೋ ಡಾಕ್ಟ್ರಾ ?'ಎಂದು ಪ್ರಶ್ನೆ ಮಾಡಿದಳು .(ನಮ್ಮ ರಸ್ತೆಯಲ್ಲಿ ಓರ್ವ ಹಿರಿಯ ಪಶು ವೈದ್ಯರು ಇದ್ದಾರೆ . )ನಾನು 'ಇಲ್ಲಕ್ಕ ಈಗ ನಡೆದೇ go ಮಾಡುವ (ನಡೆದು ಹೋಗುವ )ಡಾಕ್ರು . ನಾನು ಒಂದೇ ಪ್ರಾಣಿಯನ್ನು ಚಿಕಿತ್ಸೆ ಮಾಡ ಬಲ್ಲೆ . ಗೋ ಡಾಕ್ಟ್ರು ಹಲವು ಪ್ರಾಣಿಗಳನ್ನು ಮಾಡ ಬಲ್ಲರು . "ಎಂದೆ .ಯಾಕೆ ಕೇಳಿದ್ದು ಎಂದುದಕ್ಕೆ 'ಸುಮ್ಮನೇ ' ಎಂದಳು :ಬಹುಶಃ ಆಕೆಯ ಮನೆಯಲ್ಲಿ ಹಸು ಸಾಕುತ್ತಿರ ಬಹುದು .
ಆಮೇಲೆ ಮಾತು ಮುಂದುವರಿಸುತ್ತಾ 'ನಿಮಗೆ ಏನು ತಿಂಡಿ?'ಎಂದಳು .ನಾನು 'ಪುಂಡಿ 'ಎಂದೆ .ಕೂಡಲೇ 'ಪದಾರ್ಥ ಎಂತದ್ದು ?'ಎಂಬ ಪ್ರಶ್ನೆ .ನಾನು' ಬಸಳೆ 'ಎಂದೆ . ಪದಾರ್ಥ ಶಬ್ದ ಕೇಳಿ ಬಹಳ ಸಂತೋಷ ಆಯಿತು .ಹೀಗೆ ಮಾತನಾಡುತ್ತಾ ಮುಖ್ಯ ರಸ್ತೆ ಬಂದುದೇ ತಿಳಿಯಲಿಲ್ಲ .
ಈಗಲೂ ನನಗೆ ಕಜಿಪ್ಪಿಗೆ ಪದಾರ್ಥ ಎಂದು ಏಕೆ ಹೆಸರು ಬಂತು ಎಂದು ತಿಳಿದಿಲ್ಲ .
ಬಾಲಂಗೋಚಿ ; ಕೆಲವರಿಗೆ ದಾರಿಯಲ್ಲಿ ಈ ತರಹ ಪ್ರಶ್ನೆ ಇಷ್ಟ ಆಗುವುದಿಲ್ಲ .ಆಗ ಕೋಪದಲ್ಲಿ "ಅಂಬಟೆ ಕಾಯಿ ಕೊರಂಟು ,ನಿನಗ್ಯಾಕೆ ?"ಎನ್ನುವರು ಎಂದು ಪಂಜೆಯವರ ಪ್ರಬಂಧ ದಲ್ಲಿ ಬರುತ್ತದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ