ವಿ ಬಿ ಅರ್ತಿಕಜೆ
ನಿಮಗೆಲ್ಲಾ ಇತಿಹಾಸ ಪ್ರಾಧ್ಯಾಪಕ ,ಪತ್ರಕರ್ತ ,ಸಾಹಿತಿ ಮತ್ತು ಸಂಘಟಕ ಎಂದು ಪರಿಚಿತರಾದ ಶ್ರೀ ವಿ ಬಿ ಅರ್ತಿಕಜೆ ನನ್ನ ಅಕ್ಕ (ಒಪ್ಪಕ್ಕ )ಭಾಗ್ಯ ಲಕ್ಷ್ಮಿ ಯ ಪತಿ . ಹೆಚ್ಚು ಕಡಿಮೆ ಐದು ದಶಕಗಳ ದಾಂಪತ್ಯ ಜೀವನ .
ನಾನು ಕಂಡಂದಿನಿಂದ ಇಂದಿನ ವರೆಗೆ ಅರ್ತಿಕಜೆ ಯವರ ದಿನಚರಿ ಮುಂಜಾನೆ ಕಾವಿ ಧೋತಿ ಉಟ್ಟು ತಮ್ಮ ಹಿತ್ತಿಲಿನಲ್ಲಿ ಇರುವ ತೆಂಗಿನ ಮರಗಳಿಗೆ ನೀರು ಉಣಿಸುವದರಿಂದ ಆರಂಭ .ಮೊದಲು ಬಾವಿಯಿಂದ ನೀರು ಸೇದಿ ಕೊಡಪಾನದಲ್ಲಿ ,ಆಮೇಲೆ ಈಗ ಪೈಪಿನ ಮೂಲಕ . ಮಳೆಗಾಲದಲ್ಲಿ ತೋಟದ ಕಸ ಗರಿ ಗಳನ್ನು ತೆಗೆದು ಸ್ವಚ್ಛ ಮಾಡುವುದು . ಆಮೇಲೆ ಪುಸ್ತಕ ರಾಶಿಯಿಂದ ಆವೃತ್ತವಾದ ತಮ್ಮ ಕೋಣೆ ಯಲ್ಲಿ ಕುಳಿತು ಬರವಣಿಗೆ . ಕಾಪಿ ತಿಂಡಿ ಆದ ಮೇಲೆ ಕೊಲೇಜಿಗೆ (ನಿವೃತ್ತ ರಾಗುವ ವರೆಗೆ ) .ಪುತ್ತೂರು ಪೇಟೆಯ ವರೆಗೆ ನಡಿಗೆ ಆಮೇಲೆ ನಗರಕ್ಕೆ ಆಟೋ .ನಗರದಿಂದ ಕಾಲೇಜ್ ವರೆಗೆ ಪುನಃ ನಡಿಗೆ . ಸಂಜೆ ಇದೇ ಮನೆ ಕಡೆಗೆ .
ಈಗ ಕಾಲೇಜ್ ಇಲ್ಲದ ಕಾರಣ ಮುಂಜಾನೆ ಪೇಟೆಗೆ ಒಂದು ನಡಿಗೆ ,ಪೇಪರ್ ಕೊಂಡು ವಾಪಾಸು .. ಆಮೇಲೆ ಯಥಾ ಪ್ರಕಾರ ಬರವಣಿಗೆ . ನೆಂಟರು ,ಅತಿಥಿ ಗಳು ಬಂದರೆ ಅಲ್ಲಿಂದಲೇ ನಮಸ್ಕಾರ ಮಾಡಿ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಬಂದು ಭೇಟಿ .
ಸಂಜೆ ತಪ್ಪದೇ ಕುಟುಂಬದ ಜತೆ ಭಜನೆ ಕಾರ್ಯಕ್ರಮ .
ಶಾಲಾ ಕಾಲೇಜ್ ವಿದ್ಯಾರ್ಜನೆ ಬಡತನದ ನಡುವೆ . ಆಮೇಲೆ ತಾವು ಒಂದು ನೆಲೆಗೆ ಬಂದಮೇಲೆ ಇಡೀ ಕುಟುಂಬದ ಆಧಾರ . ತಂದೆ ತಾಯಿಯನ್ನು ನೋಡಿ ಕೊಳ್ಳುವುದರ ಜತೆ ತಮ್ಮ ತಂಗಿಯರಿಗೆ ಆಸರೆ .
ಈ ಸಂದರ್ಭದಲ್ಲಿ ಅವರು ಆಗಾಗ ನೆನಪಿಸಿ ಕೊಳ್ಳುವುದು ಫಿಲೋಮಿನಾ ಹೈ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ಶ್ರೀ ಡೆನ್ನಿಸ್ ಡಿ ಸೋಜಾ ಅವರ ನಿಷ್ಕಲ್ಮಶ ಶಿಷ್ಯ ಪ್ರೀತಿ ಮತ್ತು ಪ್ರೋತ್ಸಾಹ . ಅದೇ ಹೈ ಸ್ಕೂಲ್ ನಲ್ಲಿ ಸ್ವಲ್ಪ ಸಮಯ ಅಧ್ಯಾಪನ .ಆಮೇಲೆ ಮೈಸೂರು ವಿಶ್ವ ವಿದ್ಯಾಲಯದಿಂದ ಚರಿತ್ರೆ ಯಲ್ಲಿ ಎಂ ಎ . ಮಾಡಿ ವಿವೇಕಾನಂದ ಕಾಲೇಜು ನಲ್ಲಿ ಅಧ್ಯಾಪನ .ಕಾಲೇಜಿನ ಸ್ಥಾಪಕ ಆಡಳಿತ ಗಾರ ದಿ. ಉರಿಮಜಲು ರಾಮ ಭಟ್ ಅವರಲ್ಲಿ ಅತೀವ ಗೌರವ ಮತ್ತು ಪ್ರೀತಿ .
ಪ್ರಾಧ್ಯಾಪಕ ರಾಗಿ ಇದ್ದಾಗಲೇ ನವಭಾರತ ,ಉದಯವಾಣಿಗೆ ನಂತರ ಕರಾವಳಿ ಅಲೆ ,ಹೊಸ ದಿಗಂತ ಪತ್ರಿಕೆಗಳಲ್ಲಿ ನಿಯತವಾಗಿ ಬರವಣಿಗೆ . ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ದಶಕಗಳ ನಿರ್ವಹಣೆ ಮತ್ತು ಪ್ರಸ್ತುತ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೈನಿಕ ಅಂಕಣ .ವಿವೇಕಾನಂದ ಕಾಲೇಜು ನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ನಾಂದಿ ಹಾಕಿದವರು .
ಪುತ್ತೂರಿನಲ್ಲಿ ಬೋಳಂತಕೋಡಿ ಈಶ್ವರ ಭಟ್ ಅವರ ಕನ್ನಡ ಸಂಘ ಚಟುವಟಿಕೆಗಳು ಉತ್ತುಂಗ ಸ್ಥಿತಿ ಯಲ್ಲಿ ಇದ್ದ ಕಾಲ . ಬೋಳಂತ ಕೋಡಿ ,ಅರ್ತಿಕಜೆ ಮತ್ತು ಮೊಳೆಯಾರ್ (ವಿ ಬಿ ಮೊಳೆಯಾರ್ )ಎಂಬ ತ್ರಿಮೂರ್ತಿಗಳು ಊರೆಲ್ಲಾ ಕಾಲು ನಡಿಗೆಯಲ್ಲಿ ಮತ್ತು ದೂರಕ್ಕೆ ರಾಮ ಭಟ್ಟರ (ಕಾರ್ ರಾಮ ಭಟ್ ಅವರು )ಕಾರಿನಲ್ಲಿ ಸುತ್ತಿದಕ್ಕೆ ಲೆಕ್ಕ ಇಲ್ಲ . ಅವರು ಸಂಘಟಿಸಿದ ಕಾರ್ಯ ಕ್ರಮಗಳು ಎಷ್ಟೋ ,ಪ್ರಕಟಿಸಿದ ಅಮೂಲ್ಯ ಗ್ರಂಥಗಳು ಎಷ್ಟೋ ?ಬೋಳಂತ ಕೋಡಿ ಈಶ್ವರ ಭಟ್ ಅವರನ್ನು ಯಾವಾಗಲೂ ಸ್ಮರಿಸುತ್ತ ಇರುತ್ತಾರೆ .
ಇಳಿ ವಯಸ್ಸಿನಲ್ಲಿ ಕೂಡಾ ವಿಟ್ಲ ಸಮೀಪ ಮೈತ್ರೆಯೀ ಗುರುಕುಲಕ್ಕೆ ಗೌರವ ಅಧ್ಯಾಪಕೆರಾಗಿ ಹೋಗಿ ಪಾಠ ಮಾಡುತ್ತಿದ್ದರು .
ಅವರದು ತುಂಬು ಕುಟುಂಬ ಆಗಿತ್ತು . ತಮ್ಮಂದಿರು ,ಅವರ ಕುಟುಂಬ ಮಕ್ಕಳು ,ತಂದೆ ತಾಯಿ ಎಲ್ಲರೂ ಒಟ್ಟಿಗೇ ಇದ್ದು ಮನೆಯಲ್ಲಿ ನಮ್ಮಂತಹ ನೆಂಟರು ಸದಾ ಇರುತ್ತಿದ್ದರು . ಜಾತ್ರೆಯ ಸಮಯ ಇದು ಇನ್ನೂ ಜಾಸ್ತಿ . ಎಲ್ಲಾ ಗದ್ದಲಗಳ ನಡುವೆ ಇವರ ಅಧ್ಯಯನ ಬರವಣಿಗೆ ;ಜತೆಗೆ ಸಭೆ ಸಮಾರಂಭಗಳಿಗೆ ಅಹ್ವಾನ ,ಯುವ ಬರಹಗಾರರಿಗೆ ಸಲಹೆ ,ಮುನ್ನುಡಿ ಇತ್ಯಾದಿ ಬರೆಯುವುದು .ಇವರ ಪುಸ್ತಕ ಸಂಗ್ರಹ ನನಗೆ ಅಲ್ಲಿ ಆಗಾಗ ಹೋಗಲು ಮುಖ್ಯ ಆಕರ್ಷಣೆ ಆಗಿತ್ತು . ನಾನು ಮತ್ತು ಅವರು ಹಲವು ಪುಸ್ತಕಗಳನ್ನು ವಿನಿಮಯ ಮಾಡಿ ಕೊಂಡಿದ್ದೇವೆ . ಸಾವಿರಾರು ರೂಪಾಯಿ ಬೆಲೆ ಬಾಳುವ ಗ್ರಂಥಗಳನ್ನು ಶಾಲೆಗಳಿಗೆ ನೀಡಿದ್ದಾರೆ
ಸಾಧ್ಯವಾದಷ್ಟು ನಡಿಗೆ ,ಶ್ರಮ ಜೀವನಕ್ಕೆ ಕೊಡದ ವಿರಾಮ ಇವರ ಆರೋಗ್ಯ ಕಾಪಾಡಿದೆ ;ಪಂಚೆ ಷರಟು ಸರಳ ಉಡುಗೆ ಇವರ ಟ್ರೇಡ್ ಮಾರ್ಕ್ . . ಪರ್ಲಡ್ಕದ ಹಳೇ ಹಂಚಿನ ಮನೆಯಲ್ಲಿ ಈಗಲೂ ವಾಸ
ಅವರಿಗೆ ದೊರೆತ ಸನ್ಮಾನ ,ಬಿರುದು ಗಳ ಉಲ್ಲೇಖ ನಾನು ಮಾಡುವುದಿಲ್ಲ ..ಬಹಳಷ್ಟು ಗಳಿಕೆಯನ್ನು ಸಾಹಿತ್ಯ ಸೇವೆಗೆ ,ಅಶಕ್ತರ ಸಹಾಯಕ್ಕೆ ಅವರು ವಿನಿಯೋಗಿಸಿದ್ದಾರೆ