ಬಂಗಾರಡ್ಕ ರಾಮಕೃಷ್ಣ ಭಟ್
ನಿನ್ನೆ ನಿಧನರಾದ ಬಂಗಾರಡ್ಕ ರಾಮಕೃಷ್ಣ ಭಟ್ ಅವರನ್ನು ಹತ್ತು ವರ್ಷಗಳಿಂದ ನೋಡುತ್ತಿದ್ದೇನೆ . ಹಳೇ ತಲೆಮಾರಿನ ಒಂದು ಕೊಂಡಿಯಂತೆ ನನಗೆ ಕಾಣಿಸುತ್ತಿದ್ದರು . ನಾವೂ ಅವರೂ ಒಂದೇ ಮೂಲ ಕುಟುಂಬದವರು .ಅವರನ್ನು ಕಾಣುವಾಗ ನನ್ನ ಅಜ್ಜನ ನೆನಪು ಆಗುತ್ತಿತ್ತು . ತಮ್ಮ ಬಾಲ್ಯ ಯೌವನದಲ್ಲಿ ಇದ್ದಾಗ ನಡವಳಿಕೆಗಳನ್ನು ಅವರು ನಿರೀಕ್ಷಿಸುತ್ತಿದ್ದುದು ನನಗೆ ತಪ್ಪು ಎಂದು ಎನಿಸುವುದಿಲ್ಲ . ರಾಮಕೃಷ್ಣ ಭಟ್ ಮೇಲ್ನೋಟಕ್ಕೆ ಒರಟರಂತೆ ಕಂಡರೂ ಅವರ ಒಳಗೆ ಒಂದು ಮಗು ಇತ್ತು . ತಮಗೆ ಹಿಡಿಸದಿದ್ದರೆ ಕಡಾ ಕಡಿಯಾಗಿ ಮುಚ್ಚು ಮರೆ ಇಲ್ಲದೆ ಹೇಳುವರು ,ಅವರ ಸಿಟ್ಟಿನಲ್ಲಿ ಒಂದು ಕಿರು ತುಂಟ ನಗು ಯಾವಾಗಲೂ ಅಡಗಿರುತ್ತಿತ್ತು .
ಕೆಲ ವರ್ಷಗಳ ಹಿಂದೆ ಒಂದು ದಿನ ಬೆಳಗ್ಗೆ ಅವರ ಮಾತು ಹಠಾತ್ ನಿಂತು ಹೋಯಿತು . ಕೂಡಲೇ ಆಸ್ಪತ್ರೆಗೆ ಕರೆ ತಂದರು . ನಮ್ಮ ಮಾತು ಅವರಿಗೆ ಅರ್ಥ ಆಗುತ್ತಿತ್ತು .ಉತ್ತರ ಹೇಳಲು ಬರುತ್ತಿರಲ್ಲ .ಅಸಹಾಯಕ ಪರಿಸ್ಥಿತಿ . ನಮ್ಮ ಎಡ ಮೆದುಳಿನಲ್ಲಿ ಮಾತಿನ ಕೇಂದ್ರ ಒಂದು ಇದೆ .ಇದನ್ನು' ಬ್ರೋಕನ ಪ್ರದೇಶ "ಎನ್ನುವರು .ನಾವು ಮಾತು ಆರಂಭಿಸಲು ಇಲ್ಲಿಂದ ಆದೇಶ ಹೋಗ ಬೇಕು . ಅವರನ್ನು ಪರೀಕ್ಷಿಸಿದ ನಾನು ಅವರಿಗೆ ಈ ಪ್ರದೇಶದ ರಕ್ತ ಚಲನೆ ನಿಂತು ಹೋಗಿರಬೇಕು ಎಂದು ನಿಶ್ಚಯಿಸಿ ,ತಲೆಯ ಸ್ಕ್ಯಾನ್ ಮಾಡಿಸಿದಾಗ ಏನೂ ಕಾಣಲಿಲ್ಲ . ಸ್ಕ್ಯಾನ್ ನಲ್ಲಿ ಪ್ರಕಟ ಆಗ ಬೇಕಾದರೆ ಸ್ವಲ್ಪ ಸಮಯ ತೆಗೆದು ಕೊಳ್ಳುವುದು . ಆದ ಕಾರಣ ಕೂಡಲೇ ಅವರನ್ನು ಮಂಗಳೂರಿನ ಪ್ರಸಿದ್ಧ ನರ ರೋಗದ ಆಸ್ಪತ್ರೆಗೆ ಕಳುಹಿಸಲಾಗಿ ಅವರು ನನ್ನ ಡಯಗ್ನೋಸಿಸ್ ದೃಢ ಪಡಿಸಿ ,ಆ ಪ್ರದೇಶದ ರಕ್ತ ನಾಳದಲ್ಲಿ ಹೆಪ್ಪು ಗಟ್ಟಿದ ರಕ್ತ ವನ್ನು ನೀರಾಗಿಸುವ ಚುಚ್ಚು ಮದ್ದು ಕೊಟ್ಟರು . ತುರಂತ್ ಅವರು ಮಾತನಾಡಲು ಆರಂಭಿಸಿದರು . ಮೊದಲಿನ ವೇಗ ಇಲ್ಲದಿದ್ದರೂ .
ಮಂಗಳೂರಿನಿಂದ ವಾಪಸು ಬಂದ ಮೇಲೆ ನನ್ನ ನ್ನು ನೋಡಲು ಬಂದವರು ನನಗೆ ಕೃತಜ್ನತೆ ಹೇಳಿ ಒಂದು ವಿನಂತಿ ಮಾಡಿದರು ."ಡಾಕ್ಟ್ರೇ ಈ ಸುಡೋಕು ಉಂಟಲ್ಲ ಅದನ್ನು ಬ್ಯಾನ್ ಮಾಡ ಬೇಕು .ನನಗೆ ಅದನ್ನು ಬಿಡಿಸುವ ಚಟ .ಅದರಲ್ಲಿ ಮಗ್ನ ನಾಗಿ ಇರುವಾಗ ನನಗೆ ಸ್ಟ್ರೋಕ್ ಆಯಿತು . ತುಂಬಾ ಅಪಾಯಕಾರಿ."ಎಂದು ಆವೇಶ ಭರಿತರಾಗಿ ಹೇಳಿದರು . ನಾನು ಅವರಿಗೆ ಸಮಾಧಾನ ಮಾಡಿ ಕಳುಹಿಸಿದೆ .ಮುಂದೆ ಕೂಡಾ ಅವರಿಗೆ ಮಾತು ಮುಂದುವರಿಸಲು ಒಂದು ಪ್ರಾಮ್ಪ್ಟಿಂಗ್ ಬೇಕಿತ್ತು . ಈ ಇಳಿ ವಯಸ್ಸಿನಲ್ಲಿಯೂ ಸುಡೋಕು ಬಿಡಿಸುವ ಅವರ ಉತ್ಸಾಹ ಕೇಳಿ ಬೆರಗಾದೆ . ಇವರು ತೀರಿ ಕೊಳ್ಳುವ ಎರಡು ದಿನ ಮೊದಲು ಸುಡೋಕು ಹುಟ್ಟು ಹಾಕಿದ ಮಾಕಿ ಕಾಜಿ ತೀರಿ ಕೊಂಡ ವಾರ್ತೆ ಪತ್ರಿಕೆಯಲ್ಲಿ ಓದಿದೊಡನೆ ನನಗೆ ನೆನಪಿಗೆ ಬಂದುದು ರಾಮಕೃಷ್ಣ ಭಟ್ ಅವರನ್ನು . ಸ್ವರ್ಗದಲ್ಲಿ ಅವರಿಬ್ಬರ ಭೇಟಿ ಆಗ ಬಹುದು .
ಇಲ್ಲಿ ಒಂದು ವಿಷಯ .ಯಾವುದೇ ಕಾಯಿಲೆ ಗುಣವಾಗುವುದಕ್ಕೆ ನಾವು ಒಂದು ನಿಮಿತ್ತ ಮಾತ್ರ .ಆ ದಿನ ಭಟ್ಟರು ಮಾತನಾಡದೇ ಇದ್ದುದನ್ನು ಮಕ್ಕಳು ಕೂಡಲೇ ಗುರುತಿಸಿದರು .ತಂದೆ ಕೋಪದ ಮೌನ ವೃತ ದಲ್ಲಿ ಇದ್ದಾರೆ ಎಂದು ನಿರ್ಲಕ್ಷ್ಯ ಮಾಡಲಿಲ್ಲ .ಅವರು ಬರುವಾಗ ನಾನು ಆಸ್ಪತ್ರೆಯಲ್ಲಿ ಸಿದ್ದನಾಗಿ ಇದ್ದೆ ,ಸ್ಕ್ಯಾನ್ ಯಂತ್ರ ಬಿಡುವಾಗಿತ್ತು . ಕೂಡಲೇ ಪರಿಶೀಲನೆ ನಡೆದು ಮೂರು ಗಂಟೆಯ ಒಳಗೆ ನರ ರೋಗ ತಜ್ಞರು ಚಿಕೆತ್ಸೆ ಆರಂಭಿಸಿದ್ದರು .ತಡವಾದರೆ ಅವರು ಮಾತಿಲ್ಲದೆಯೇ ಅಸಹಾಯಕರಾಗಿ ಬದುಕ ಬೇಕಿತ್ತು ."ಯತ್ ಕೃಪಾ ತಮಹಮ್ ವಂದೇ ಪರಮಾನಂದ ಮಾಧವನ್ ಮೂಕಮ್ ಕರೋತಿ ವಾಚಾಲಮ್ "ಎಂಬಂತೆ ಯಾವುದೇ ಕಾಯಿಲೆಯಲ್ಲಿ ನಮ್ಮ ಯೋಗಧಾನಕ್ಕೆ ಮೀರಿದ ಒಂದು ಅಂಶ ಇದೆ ಎಂದು ನಾನು ಕಂಡು ಕೊಂಡಿದ್ದೇನೆ .
ರಾಮಕೃಷ್ಣ ಭಟ್ ತುಂಬು ಜೀವನ ನಡೆಸಿದವರು .ಮಕ್ಕಳು ,ಮೊಮ್ಮಕ್ಕಳು ಮತ್ತು ಅವರ ಮಕ್ಕಳ ಬೆಳವಣಿಗೆ ನೋಡುವ ಮತ್ತು ಕೊನೆಯ ಕಾಲದಲ್ಲಿ ಅವರೊಡನೆ ಇರುವ ಭಾಗ್ಯ ಅವರಿಗೆ ಇತ್ತು . ಅದುವೇ ಒಂದು ಸಂತೋಷ ಮತ್ತು ನಿಜ ಸಂಪತ್ತು . ತಾಳ್ಮೆ ಯಿಂದ ಅವರ ಕೊನೆಯ ದಿನಗಳಲ್ಲಿ ಅವರನ್ನು ನೋಡಿ ಕೊಂಡ ಕುಟುಂಬವರಿಗೂ ಒಳ್ಳೆಯದಾಗಲಿ .
ರಾಮಕೃಷ್ಣ ಭಟ್ ಅವರಿಗೆ ನನ್ನ ಶ್ರದ್ಧಾಂಜಲಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ