ಬೆಂಬಲಿಗರು

ಗುರುವಾರ, ಆಗಸ್ಟ್ 26, 2021

ಮುಂಜಾನೆ ನಡೆ



ಮುಂಜಾನೆ ವಾಕಿಂಗ್ ಗೆ ತೆರಳಲು ಕಾಂಪೌಂಡ್ ಗೇಟ್ ತೆರೆದಾಗ ಬೀದಿ ನಾಯಿ ಮರಿಗಳು ತಮ್ಮ ಬ್ರೇಕ್ ಫಾಸ್ಟ್ ಗೆ ಕಾಯುತ್ತಾ ಕುಳಿತಿದ್ದವು ನನ್ನನ್ನು ಕಂಡು ಎದ್ದು ನಿಂತು ಜೋರಾಗಿ ಬಾಲವಾಡಿಸಲು ಅವುಗಳಿಗೆ ಜೂನಿಯರ್ ಪೆಡಿಗ್ರೀ ಹಾಕಿ ಮುಂದುವರಿಯಲು ಅದನ್ನು ತಿನ್ನುವುದೋ ನನ್ನ ಹಿಂದೆ ಬರುವುದೋ ಎಂಬ ಕನ್ಫ್ಯೂಷನ್ ಅವಕ್ಕೆ . ಒಮ್ಮೆ ಆಚೆ ,ಇನ್ನೊಮ್ಮೆ ಈಚೆ . ಸ್ವಲ್ಪ ದೂರ ನನ್ನೊಡನೆ ಬಂದ ಅವನ್ನು ಹಿಂದಕ್ಕೆ ಓಡಿಸುವೆನು . 

ನಮ್ಮ ಮನೆಯಿಂದ ಅರ್ಧ ಫರ್ಲಾಂಗ್ ಕಾಂಕ್ರೀಟ್ ರೋಡಿನಲ್ಲಿ ನಡೆದರೆ ಮಡಿಕೇರಿ ಮೈಸೂರು ರಾಜ ಮಾರ್ಗ . ನಮ್ಮ ಮನೆಯ ಸಮೀಪ ಇರುವ ಬಾಡಿಗೆ ಮನೆಯಲ್ಲಿ ಇರುವ ತಾಯಿ ಪ್ರತಿ ದಿನ ಮುಂಜಾನೆ ರಸ್ತೆಯಲ್ಲಿ ಬಿದ್ದ ,ಮರದ ಎಲೆಗಳು ಮತ್ತು ಕಾಯಿಗಳನ್ನು ಗುಡಿಸಿ ಸ್ವಚ್ಛ ಮಾಡುತ್ತಲಿರುವರು . ಅವರಿಗೆ ನಮಸ್ಕಾರ ಮಾಡುವೆನು .ರಸ್ತೆಗೆ ಕಸ ಹಾಕುವವರೇ ಇರುವ ಕಾಲದಲ್ಲಿ ಇಂತಹವರೂ ಇದ್ದಾರೆ . 

ರಸ್ತೆ ಪಕ್ಕದಲ್ಲಿ ಇರುವ  ಪೆಟ್ರೋಲ್ ಬಂಕ್ ನಲ್ಲಿ ರಾತ್ರಿ ತಂಗಿದ್ದ  ಬಸ್ ಗಳು ಎದ್ದು ಮೈಮೂರಿ ತೆಗೆದು  ಉತ್ಸಾಹದಿಂದ ಹೊರಟರೆ  ಹಳದಿ ಬಣ್ಣದ ಶಾಲಾ ಬಸುಗಳು ಸೋಮಾರಿಗಳಂತೆ  ಮಲಗಿವೆ .

ರಾಜ ಮಾರ್ಗದಲ್ಲಿ  ಈಗ ಬೆಂಗಳೂರು  ರಾತ್ರಿ ಬಸ್ಸುಗಳು ,ಭಾರೀ  ಲಾರಿಗಳು ಓಡುತ್ತಿವೆ ;ಶಿರಾಡಿ ಘಾಟಿ ಬಂದ್ ಆದ ಕಾರಣ . ಈ ದೊಡ್ಡ ವಾಹನಗಲ್ಲಿ  ಆಲ್ ಇಂಡಿಯಾ ಪರ್ಮಿಟ್ ಎಂದು ಬರೆದಿರುತ್ತದೆ . ಆದುದರಿಂದ ನಾನು ಹೆದರಿ ರಸ್ತೆಯ ಬದಿ ಸಾಧ್ಯವಾದಷ್ಟು ಸರಿದು ನಡೆಯುವೆನು . ಬೀದಿ ನಾಯಿಗಳು ಹೆಚ್ಚಿನವು ನನಗೆ ಪರಿಚಯದವು ಆದ್ದರಿಂದ ಅವುಗಳ ಹೆದರಿಕೆ ಇಲ್ಲ . ಈ ನಾಯಿಗಳು ,ಸ್ವಚ್ಚಂದವಾಗಿ ಹಾಡುತ್ತಿರುವ ಪಕ್ಷಿಗಳು ಮುಖಕ್ಕೆ  ಮಾಸ್ಕ ಧರಿಸಿ  ಉಸಿರಾಡಲು ಕಷ್ಟ ಪಡುತ್ತಿರುವ ನಮ್ಮ ನಾಯಿ ಪಾಡನ್ನು ಕಂಡು ಕನಿಕರಿಸುತ್ತಿರುವ ಹಾಗೆ ತೋರುತ್ತದೆ . 

ದಿನಾಲೂ  ಕ್ರಷ್ಣಾ ಡ್ರೈವಿಂಗ್  ಸ್ಕೂಲ್ ನ ಕಲಿಕಾ ವಾಹನ ಎದುರಾಗುವುದು .ಲಾಕ್ ಡೌನ್ ಪರ್ವದಲ್ಲಿ ವಾಹನ ಚಾಲನೆ ಕಲಿಯುವವರು ಹೆಚ್ಚಾದಂತೆ ತೋರುತ್ತದೆ . ನನ್ನನ್ನು ಕಂಡೊಡನೆ  ಡ್ರೈವಿಂಗ್ ಸ್ಕೂಲ್ ನ ಓನರ್ ಕಮ್ ಟೀಚರ್ ಸದಾನಂದ ಕೃಷ್ಣ ಹಾರ್ನ್ ಮಾಡಿ ಎರಡೂ  ಕೈಗಳನ್ನು ಹೊರಹಾಕಿ ಜೋಡಿಸಿ ನಮಸ್ಕಾರ ಮಾಡುವರು . ಮುಂಜಾನೆ ಮುಗುಳು ನಕ್ಕು  ಶುಭ ಹಾರೈಸಿದರೆ ನಮ್ಮ ಶರೀರದಲ್ಲಿ ಒಳ್ಳೆಯ ರಾಸಾಯನಿಕಗಳು ಉತ್ಪತ್ತಿಯಾಗಿ ಉಲ್ಲಾಸ ಉಂಟು ಮಾಡುವವು .ಸದಾನಂದ ಮತ್ತು ದಯಾನಂದ ಅವಳಿ ಜವಳಿಗಳು . ಪ್ರತ್ಯೇಕವಾಗಿ ಸಿಕ್ಕಿದರೆ ಯಾರು ಯಾರು ಎಂದು ಗೊತ್ತಾಗುವುದಿಲ್ಲ .ಮೊನ್ನೆ ಚಂದ್ರಗಿರಿಯವರ ಮನೆಯಲ್ಲಿ ಮಾತನಾಡುತ್ತಿದ್ದಾಗ  ಇವರಲ್ಲಿ   ಒಬ್ಬರು ಆಮಂತ್ರಣ ನೀಡಲು ಬಂದವರು ನನ್ನನ್ನು ಕಂಡು ನಮಸ್ಕರಿಸಿದರು.;ಗುರುತಿಗೆ ಡ್ರೈವಿಂಗ್ ಸ್ಕೂಲ್ ಕಾರ್ ಎಂದರು .ಕೃಷ್ಣಾ ಡ್ರೈವಿಂಗ್ ಸ್ಕೂಲ್ ಹೆಸರು ಬಹಳ ಅನ್ವರ್ಥಕ .ಅರ್ಜುನನ ರಥವನ್ನು ನಡೆಸಿದವನೇ ಕೃಷ್ಣ . ಲಾರಿ ವ್ಯಾನ್ ಗಳ ಹಿಂಭಾಗ ಅರ್ಥಗರ್ಭಿತ ಸಂದೇಶ ಇರುವುದು . ಮುಂಜಾನೆ ಕಾಣಸಿಗುವುದು ಎಳನೀರು ,ತರಕಾರಿ ಮತ್ತು ಕುಕ್ಕುಟ ವಾಹನಗಳು .ಕೊನೆಯದರ ಬಳಿಯಿಂದ ನಾಸಿಕಾಘಾತ ವಾಸನೆ ಬರುವುದು 

ಮುಂದೆ  ಹಾಲಿನ ಸುರೇಶಣ್ಣ  ಬೈಕಿನ ಇಕ್ಕೆಲಗಳಲ್ಲಿ ಹಾಲಿನ ಚೀಲ ಹಾಕಿಕೊಂಡು ಹೋಗುವವರು ಎಷ್ಟು ಅರ್ಜೆಂಟ್ ಇರಲಿ ,ಮಳೆಯಿರಲಿ ,ಗಾಡಿ ಸ್ಲೋ ಮಾಡಿ ನಮಸ್ಕರಿಸುವರು . ಶೆಡ್ಡೆ ಪೆಟ್ರೋಲ್ ಬಂಕಿನ  ಧಣಿ ಶೆಡ್ಡೆಯವರು ಕೂಡಾ ಬೆಳಿಗ್ಗೆ ಪಂಪ್ ತೆರೆದು ಬರುವಾಗ ನಮಸ್ಕಾರ ಮತ್ತು ಟಾ ಟಾ ಮಾಡುವರು .ಹೀಗೆ ನೆಹರೂನಗರ ಜಂಕ್ಷನ್ ಬಂದದ್ದೇ ತಿಳಿಯುವುದಿಲ್ಲ .ಅಲ್ಲಿ  ಆಟೋ ಬಾಲಕೃಷ್ಣರು ಕಸ ಗುಡಿಸಿ ಸ್ವಚ್ಚ ಮಾಡಿ ಎಲೆ ಅಡಿಕೆ ಮೆಲ್ಲುತ್ತಿರುವರು .ನನ್ನನ್ನು ಕಂಡು ಸಂತೋಷದಿಂದ ದೊಡ್ಡ ನಮಸ್ಕಾರ ಮಾಡುವರು . 

ತಿರುಗಿ ವಿವೇಕಾನಂದ ಕಾಲೇಜು ರೋಡಿನ ಆರಂಭದಲ್ಲಿ ಕೆನರಾ ಬ್ಯಾಂಕ್ ಏಟಿಎಂ ಕೋಣೆಯ ಒಳಗೆ ಎರಡು ಕಸದ ಡಬ್ಬಿಗಳು  ತುಂಬದೇ ಇದ್ದರೂ ಎಟಿಎಂ  ರಶೀದಿಗಳು ನೆಲದ ಮೇಲೆ ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಡಬ್ಬಿಗಳು ನಮ್ಮವರ ನೈರ್ಮಲ್ಯ ಪ್ರಜ್ಞೆಗೆ ದುರಂತ ಸಾಕ್ಷಿಯಾಗಿ ಸ್ವಾಗತಿಸುತ್ತವೆ .. 

ಮುಂದೆ ರೈಲ್ವೆ ಓವರ್ ಬ್ರಿಜ್ ;ಬೆಳಗಿನ ಬೆಂಗಳೂರು ರೈಲು ಊರು ಸೇರಲು ತವಕದಿಂದ ಓದುತ್ತಿದ್ದು ,ಮಾಜಿ ರೈಲ್ವೆ ಯವನಾದ ನನ್ನನ್ನು ಗುರುತಿಸಿ ಸಿಳ್ಳೆ ಹಾಕುತ್ತದೆ . 

ಮುಂದೆ ಭಗವತಿ ಟೀ ಸ್ಟಾಲ್ ನ ಅಕ್ಕ ಬಾಗಿಲು ತೆರೆಯುತ್ತಿದ್ದು ,ಒಳಗಿನಿಂದ ಜತೆಗೆ ಮೂರು ಬೆಕ್ಕಿನ ಮರಿಗಳೂ ಜತೆಗೆ ಬರುತ್ತವೆ . ಅಲ್ಲಿಯೇ ಎದುರುಗಡೆ ಒಂದು ರೋಡ್ ಮೇಲಕ್ಕೆ ಹೋಗಿತ್ತದೆ .ಅಲ್ಲಿಂದ ದಿನವೂ ಪೂವಪ್ಪ ನಾಯ್ಕ್ ಎಂಬ ನಿವೃತ್ತ ಬ್ಯಾಂಕ ಅಧಿಕಾರಿ ವಾಕಿಂಗ್ ಬರುತ್ತಿದ್ದು ,ಪರಸ್ಪರ ವಿಶ್ ಮಾಡುತ್ತಿದ್ದೆವು .ತಿಂಗಳ ಹಿಂದೆ ತೀರಿ ಕೊಂಡರು .ಆದರೂ ಆ ಜಾಗಕ್ಕೆ ಬರುವಾಗ ಅವರ ಜ್ಞಾಪಕ ಬರುವುದು . 

ಇನ್ನು ರಸ್ತೆ ಎರಡಾಗಿ ಒಂದು ಕೆಳಗೆ ನೇರ ಇಂಜಿನಿಯರಿಂಗ್ ಕಾಲೇಜು ಎದುರಾಗಿ ಹೋದರೆ ಮುಖ್ಯ ರಸ್ತೆ ಉಪ್ಪಿನಂಗಡಿ ಕಡೆ ಮುಂದುವರಿಯುವುದು . ಇಲ್ಲಿ ದೂರಕ್ಕೆ ಹೋಗುವ ಗಾಡಿಗಳು ಗಲಿ ಬಿಲಿ ಗೊಂಡು ನಮ್ಮನ್ನು ಕರೆದು ದಾರಿ ಕೇಳುವವು . ವಿವೇಕಾನಂದ ಕಾಲೇಜ್ ರೋಡಿನ ವಿಭಾಜಗಕ್ಕೆ ಮೂರು ಸುತ್ತು ಹಾಕುವೆನು .ಇಲ್ಲಿ ಕೂಡಾ ಪರಿಚಯದ ವರ ವಂದನೆ ಪ್ರತಿ ವಂದನೆ ನಡೆಯುವದು .ಅವರಲ್ಲಿ ಕೃಷ್ಣ ಪ್ರಸಾದ್ ಎಂಬ ವರು ಕೆಲ ತಿಂಗಳ ಹಿಂದೆ ತೀರಿ ಕೊಂಡರು .ಹತ್ತು ವರ್ಷ ನಾವು ಮುಖಾ ಮುಖಿಗಳಾಗುತ್ತಿದ್ದೆವು .ಮೊದಲ ಕೆಲ ವರ್ಷ ವಿವೇಕಾನಂದ ಕಾಲೇಜು ಕ್ಯಾಂಪಸ್ ಒಳಗೆ ಸುತ್ತು ಹಾಕುತ್ತಿದ್ದು ,ಮುಂದೆ ಸಾರ್ವಜನಿಕರಿಗೆ ಅಲ್ಲಿ ಪ್ರವೇಶ ನಿರ್ಬಂಧಿಸಿದ್ದರಿಂದ ಬಾಗಿಲನು ತೆರೆದು ಎಂದು ಹಾಡದೆ ಹೊರಗಡೆ ನಮ್ಮ ನಡೆಯನ್ನು ಸೀಮಿತ ಗೊಳಿಸಿದೆನು . ನಾನು ವರ್ಷಗಳ ಹಿಂದೆ ಬೈಕ್ ಸವಾರಿ ಕಲಿತುದು ಇಲ್ಲಿಯೇ ,ನನಗೆ ಕಲಿಸಿದವನು ನನ್ನ ಕಿರಿಯ ತಮ್ಮ ಶ್ರೀನಿವಾಸ . 

ಇಂಜಿನಿಯರಿಂಗ್ ಕಾಲೇಜ್ ರಸ್ತೆಯಲ್ಲಿ ಇಳಿದರೆ ಎಡಗಡೆ ರಘು ಅಣ್ಣನ "ಕಾಡು "ಸಿಗುವುದು .ರಘು ಅಣ್ಣ ಮತ್ತು ವೀಣಾ ಪ್ರತಿಭಾವಂತ ದಂಪತಿಗಳು .ಕಾಡುವಿನಲ್ಲಿ ಪಿ ಜಿ ನಡೆಸುವುದರೊಂದಿದೆ  ಅಲ್ಲಿರುವ ಬಯಲು ರಂಗ ಮಂದಿರದಲ್ಲಿ  ಸಂಗೀತ ಕಚೇರಿ ,ನೀನಾಸಮ್ ಅವರ ನಾಟಕ ವರ್ಷ0ಪ್ರತಿ ನಡೆಸುವರು .ಹಿಂದೆ ಮುಂಜಾನೆ ಅವರ ದರುಶನ ಆಗುತ್ತಿತ್ತು ,ಈಗ ಕಾಣುತ್ತಿಲ್ಲ .

                   ಹಿಂತಿರುಗಿ ಹೋಗುವಾಗ ಪೇಪರ್ ಅಂಗಡಿ ಭಟ್ಟರು ಮಯೂರ ಬಂದಿದೆ ಎಂದು ಕರೆದು ಹೇಳುವರು . ಅಲ್ಲಿ ಹೋದಾಗ ಮಾಸಿಕ ಕೈಗೆ ಕೊಟ್ಟು ಈಗ ಫ್ರೆಷ್ ಆಗಿ ಬಂದ ಬ್ರೆಡ್ ,ಹೋಳಿಗೆ ಇದೆ ಎಂದು ನನ್ನ ಮನಸ್ಸನ್ನು ಚಂಚಲ ಗೊಳಿಸಲು ಯತ್ನಿಸುವರು . ನನ್ನ ಅಣ್ಣ ಗಣಪತಿ ಭಟ್ ಅಲ್ಲಿ ನನಗೆ ಕಾಯುತ್ತಿದ್ದು ಒಟ್ಟಾಗಿ  ಹಿಂದೆ ಬರುವೆವು . ಮನೆಯಲ್ಲಿ ಬಿಸಿ ಬಿಸಿ ದೋಸೆ ,ಚಹಾ ರೆಡಿ ಆಗಿ ಇರುವುದು ,ಟಿವಿಯಲ್ಲಿ  ಇನ್ ಸಿಂಕ್ ಚಾನೆಲ್ ನಲ್ಲಿ ಕರ್ನಾಟಕ ಸಂಗೀತ ಬರುತ್ತಿರುವುದು . ಸುತ್ತ ಮುತ್ತಲ ಮರಗಳಲ್ಲಿ ಪಕ್ಷಿ ಸಂಕುಲ ದ ಚಿಲಿ ಪಿಲಿ ಸಂಗೀತಕ್ಕೆ ತನಿ ಆವರ್ತನದಂತೆ ತೋರುವುದು . 












 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ