ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ
ನನಗೆ ಒಂದು ಅಭ್ಯಾಸ ಇದೆ . ಊರಿಗೆ ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದವರು ಮತ್ತು ಅವರ ಕುಟುಂಬದವರು ಆಸ್ಪತ್ರೆಗೆ ಬಂದರೆ ಸಿಬಂದಿಗೆ ಅವರ ಪರಿಚಯ ಇದೆಯೇ ಎಂದು ಕೇಳುವುದು ಮತ್ತು ಅವರ ಬಗ್ಗೆ ತಿಳಿ ಹೇಳಿ ಅವರು ಬಂದಾಗ ವಿಶೇಷ ಗಮನ ಕೊಡುವಂತೆ ಹೇಳುವುದು .ಹೆಚ್ಚಾಗಿ ಇಂತಹವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು ವಿಶೇಷ ಗಮನ ನಿರೀಕ್ಷಿಸುವುದಿಲ್ಲವಾದರೂ ಅದು ನಮ್ಮ ಕರ್ತವ್ಯ ಮತ್ತು ಉಪಕಾರ ಸ್ಮರಣೆಯ ಭಾಗ ಎಂದು ತಿಳಿದು ಕೊಂಡಿದ್ದೇನೆ . ನಿನ್ನೆ ದಿ ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಅವರ ಮಗ ಮತ್ತು ಮೊಮ್ಮಗ ಆಸ್ಪತ್ರೆಗೆ ಬಂದಿದ್ದರು .ಆಗಲೂ ಇದುವೇ ಕಾರ್ಯ ನಡೆಯಿತು .
ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ಖಾದಿ ಅಂಗಿ ,ದೊಗಲೆ ಪಾಯಿಜಾಮ ,ಕೊರಳಲ್ಲಿ ಒಂದು ಚೀಲಒಬ್ಬ ವ್ಯಕ್ತಿ ಬಂದು ಕನ್ನಡ ಗೀತೆಗಳನ್ನು ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿ ರಂಜಿಸಿ ,ತಾವು ರಚಿಸಿದ ಸರಳ ಪದ್ಯಗಳ ಕಿರು ಪುಸ್ತಕಗಳನ್ನು ಬೇಕಾದವರಿಗೆ ಕೊಟ್ಟು ಹೋಗುತ್ತಿದ್ದರು . ಜಿ ಪಿ ರಾಜರತ್ನಂ ಅವರ ಹೆಂಡ್ಕುಡ್ಕ ರತ್ನ ಪದ್ಯವನ್ನು ನಾನು ಮೊದಲು ಕೇಳಿದ್ದೇ ಅವರ ಕಂಠದಿಂದ .ಬೇಂದ್ರೆಯವರ ಇಳಿದು ಬಾ ತಾಯಿ ಹಾಡು ಕೂಡಾ .
ಸುಬ್ರಹ್ಮಣ್ಯ ಜನಿಸಿದ್ದು ಚಾಮರಾಜ ನಗರ ಜಿಲ್ಲೆಯ ಬೆಂಡರವಾಡಿಯಲ್ಲಿ . ಎಳವೆಯಲ್ಲಿ ಹೆತ್ತವರನ್ನು ಕಳೆದುಕೊಂಡು ನಾಟಕ ಕಂಪನಿಯಲ್ಲಿ ಕೆಲಸ ಮಾಡಿದ ಅವರು ಕಾಳಿಂಗ ರಾವ್ ಅವರ ಒಡನಾಡಿಯಾಗಿದ್ದು ಅವರ ಪ್ರಭಾವ ಇವರ ಮೇಲೆ ಇದೆ . ೧೯೬೦ ರಲ್ಲಿ ಪುತ್ತೂರಿಗೆ ಬಂದು ನೆಲೆಸಿದ ಇವರು ಜಿಲ್ಲೆಯಾದ್ಯಂತ ಶಾಲೆಗಳಿಗೆ ಬಸ್ ಪ್ರಯಾಣ ಮತ್ತು ಕಾಲ್ನಡಿಗೆ ಯಲ್ಲಿ ಹೋಗಿ ಕನ್ನಡ ಕಂಪು ಹರಡಿಸುವ ಕಾಯಕ ಮಾಡಿದರು . ಕೊನೆಯ ದಿನಗಳಲ್ಲಿ ಅವರು ಪಾರ್ಶ್ವ ವಾಯು ವಿನಿಂದ ಬಳಲಿ ತಮ್ಮ ಕಾಯಕ ನಿಲ್ಲಿಸ ಬೇಕಾಯಿತು .ನಮ್ಮ ಆಸ್ಪತ್ರೆಗೆ ಹಲವು ಭಾರಿ ಬಂದಿದ್ದು ಅವರ ಉಪಚಾರ ಮಾಡುವ ಭಾಗ್ಯ ಸಿಕ್ಕಿದ್ದು ಸಂತೋಷ ..೨೦೧೮ ರಲ್ಲಿ ಇವರು ತೀರಿ ಕೊಂಡಾಗ "ಕನ್ನಡಕ್ಕೇ ಬದುಕು ಅರ್ಪಿಸಿದ ನಿರ್ಲಿಪ್ತ ಸಂತ "ಎಂದು ಪ್ರಜಾವಾಣಿ ಪತ್ರಿಕೆ ಇವರನ್ನು ವರ್ಣಿಸಿದ್ದರಲ್ಲಿ ಅತಿಶಯೋಕ್ತಿ ಇಲ್ಲ .
ಇವರು ಬರೆದು ಪ್ರಕಟಿಸಿದ 18 ಕಿರು ಹೊತ್ತಗೆಗಳು
1. ಶಾಲೆ ದೇವರ ಮಂದಿರ (ಮಕ್ಕಳ ಗೀತೆ)
2. ವಿಶ್ವ ಭಾರತಿ (ಮಕ್ಕಳ ಗೀತೆ)
3. ಸಕ್ಕರೆ ಗೊಂಬೆ (ಮಕ್ಕಳ ಗೀತೆ)
4. ಅಪ್ಪಕಜ್ಜಾಯ (ಮಕ್ಕಳ ಗೀತೆ)
5. ಚಂದಮಾಮ (ಮಕ್ಕಳ ಗೀತೆ)
6. ಪುಟ್ಟನ ಹಾಡು (ಮಕ್ಕಳ ಗೀತೆ)
7. ಪೀ ಪೀ ಹಾಡು (ಮಕ್ಕಳ ಗೀತೆ)
8. ತಾಯಿ ದೇವರು (ಮಕ್ಕಳ ಗೀತೆ)
9. ವಿದ್ಯಾ ಸರಸ್ವತಿ (ಮಕ್ಕಳ ಗೀತೆ)
10. ಗಿಡ್ಡು ಪುಟಾಣಿ (ಮಕ್ಕಳ ಗೀತೆ)
11. ಗುರುವಂದನೆ (ಮಕ್ಕಳ ಗೀತೆ)
12. ಬತ್ತಾಸು (ಮಕ್ಕಳ ಗೀತೆ)
13. ಕಿಂದರಿ ಜೋಗಿ (ಮಕ್ಕಳ ಗೀತೆ)
14. ಕೋಲಾಟದ ಹಾಡು (ಮಕ್ಕಳ ಗೀತೆ)
15. ಪಾಪುನ ಪೀಪಿ (ಮಕ್ಕಳ ಗೀತೆ)
16. ಸುವ್ವಾಲೆ (ಮಕ್ಕಳ ಗೀತೆ)
17. ಚಂದನ (ಮಕ್ಕಳ ಗೀತೆ)
18. ಶ್ರೀಗಂಧ (ಮಕ್ಕಳ ಗೀತೆ)
ಕವನ ಸಂಕಲನಗಳು
1. ಪ್ರವಾಳ (ದ.ಕ ಜಿಲ್ಲೆ ಉಡುಪಿ, ಕಾಸರಗೋಡು ಜಿಲ್ಲೆಯ 77 ಕವಿಗಳ ಕವಿತಾ ಸಂಕಲನ)
2. ಕಾಡಿನ ಹಾಡು (ಪ್ರಕೃತಿ ಗೀತೆಗಳು)
3. ಸ್ಪಂದನ (ನವೋದಯ ಕವಿತಗಳು)
4. ಸಿರಿಸಂಪಿಗೆ (ಜನವಪದ ಗೀತೆಗಳ ಸಂಗ್ರಹ)
5. ರಾಗರಂಜಿನಿ (ಕನ್ನಡಪರ ಗೀತೆಗಳು)
6. 108 ಪೆಪ್ಪರಮೆಂಟು (ನಗೆಹನಿಗಳು)
ರೇಡಿಯೋ ನಾಟಕಗಳು
1. ಅಕ್ಕನ ಮಗಳು (ಸಾಂಸಾರಿಕ)
2. ಸಾಗರ ಸಂಗಮ (ಬಸವಣ್ಣನ ಬಗ್ಗೆ)
3. ಚಟ್‍ಪಟ್ ಲೇಡಿ (ವಿಡಂಬನೆ)
4. ನಮ್ಮೂರ ಅಜ್ಜ ಅಥವಾ ಘಾಟಿ ಮುದುಕ (ಹಾಸ್ಯ ನಾಟಕ)
ಧ್ವನಿಸುರುಳಿಗಳು
1. ಬಣ್ಣದ ಬೊಂಬೆ (ಮಕ್ಕಳ ಹಾಡು)
2. ಚಿನ್ನದ ಮೊಟ್ಟೆ (ಪಂಚತಂತ್ರ ಕಥೆ-ಹಾಡು)
3. ಪುಟ್ಟಿ ಪುಟ್ಟಿ (ಎಚ್. ಆರ್. ಲೀಲಾವತಿ, ಮೈಸೂರು)
4. ಪಾಪಚ್ಚಿ (ಬಾಶೆಲ್ ಮಿಷನ್, ಮಂಗಳೂರು)
5. ಕೋಲು ಕೋಲೆನ್ನೀರೆ (ಜನಪದ ಗೀತೆ)
6. ಭಾವಗಾನ (ಕನ್ನಡ ಗೀತೆಗಳು)
ಆಗೆಲ್ಲಾ ಶಾಲೆಗಳಿಗೆ ಹರಿದಾಸರು ,ಇಂದ್ರಜಾಲ ಮಾಡುವವರು ಮತ್ತು ಗಮಕಿಗಳು ಆಗಾಗ ಬಂದು ನಮ್ಮನ್ನು ರಂಜಿಸುತ್ತಿದ್ದರು .ಮಕ್ಕಳಿಗೆ ಕ್ಲಾಸ್ ಇಲ್ಲಾ ಎಂಬ ಸಂತೋಷ . ಏಕತಾನತೆ ತಪ್ಪುವುದು ;ಮನೋರಂಜನೆಯೊಂದಿಗೆ ಕಲಿಯುವಿಕೆ ..ಮೊದಲು ಒಂದಾಣೆ ,ಆಮೇಲೆ ಹತ್ತು ಪೈಸೆ ಇದ್ದವರು ಕೊಟ್ಟು ಸೇರಿಸಿ ಕಲಾವಿದರಿಗೆ ಕೊಡುವದು .ಈಗಲೂ ಇಂತಹ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತಿದೆಯೇ ಎಂದು ಗೊತ್ತಿಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ