ಬೆಂಬಲಿಗರು

ಭಾನುವಾರ, ಆಗಸ್ಟ್ 15, 2021

ಡಾಕ್ಟರ್ ಸುಂದರ ರಾಯರು

                            ಡಾಕ್ಟರ್ ಸುಂದರ ರಾಯರು  

ನನ್ನ ಅಜ್ಜ  ಆಗಾಗ ಪುತ್ತೂರಿನ ಡಾಕ್ಟರ್ ಸುಂದರ ರಾಯರ ಬಗ್ಗೆ ಹೇಳುತ್ತಿದ್ದರು . ಅವರ ಪೂರ್ಣ ನಾಮ ಸತ್ಯ ಸುಂದರ ರಾವು .ಸುಂದರ ರಾಯರ ಮಾತು ಅಜ್ಜನಿಗೆ ವೇದ ವಾಕ್ಯ ಆಗಿತ್ತು . ನೈಜ ಮತ್ತು ಕಲ್ಪಿತ ಆರೋಗ್ಯ ಸಮಸ್ಯೆಗಳಿಗಾಗಿ ಕೋರ್ಟ್ ರೋಡ್ ನಲ್ಲಿರುವ ಅವರ ಷಾಪ್ ಗೆ ಹೋಗಿ ಬಂದು ,ಸುಂದರ ರಾಯ ಅಲ್ಲಿ ಕುಟ್ಟಿದ ,ಇಲ್ಲಿ ಕುಟ್ಟಿದ , ಎದೆಲಿ ಟ್ಯೂಬು ಮಡುಗಿ ನೋಡಿದ ಇತ್ಯಾದಿ ಅಭಿನಯಿಸಿ ತೋರಿಸುತ್ತಿದ್ದರು. ಅಲ್ಲದೆ ಅವರು ಕೊಟ್ಟ ಟಾನಿಕ್ ಗಳನ್ನು ಭಕ್ತಿ ಶ್ರದ್ದೆಯಿಂದ  ತಪ್ಪದೇ ಸೇವಿಸುವರು . 

ನನ್ನ ಅಜ್ಜನಿಗೆ ಮಾತ್ರವಲ್ಲ ,ಈ ಭಾಗದ ಹಳ್ಳಿ ಪಟ್ಟಣದ ಮಂದಿಗೆ ಅವರು ಸಾಕ್ಷಾತ್ ದೇವರ ಪ್ರತಿ ರೂಪವೇ ಆಗಿದ್ದು ,ಅವರ ಅಭಿಪ್ರಾಯಕ್ಕೆ ಅಪೀಲ್ ಇರಲಿಲ್ಲ . ಅವರ ತಂದೆ ಲಕ್ಷ್ಮೀನಾರಾಣಯ್ಯ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ಬ್ರಿಟಿಷರ ವಿರುದ್ದ ಹೊರಡುವುದಕ್ಕಾಗಿ ರಾಜೀನಾಮೆ ಕೊಟ್ಟವರು; ಸ್ವಯಂ ಆಯುರ್ವೇದ ಅಧ್ಯಯನ ಮಾಡಿ ವೈದ್ಯರಾದವರು. ಸತ್ಯ ಸುಂದರ ರಾವ್ ಮದ್ರಾಸ್  ಪ್ರಸಿದ್ದ  ಸ್ಟ್ಯಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿ ಆಗಿನ ಎಲ್ ಎಂ ಪಿ ಪದವಿ ಗಳಿಸಿ ಪುತ್ತೂರಿನ  ಕೋರ್ಟ್ ರಸ್ತೆಯಲ್ಲಿ ಪ್ರಾಕ್ಟೀಸ್ ಆರಂಬಿಸಿ , ೧೯೩೫ ರಲ್ಲಿ ಸಣ್ಣ ಪ್ರಮಾಣದ ಆಸ್ಪತ್ರೆಯನ್ನು ಕೂಡ ಅಭಿವೃದ್ದಿ ಪಡಿಸಿದರು .

ಸತ್ಯ ಸುಂದರ ರಾವ್ ಮತ್ತು ಅವರ ಸಹೋದರ ಪ್ರಸಿದ್ದ ವಕೀಲ ಸದಾಶಿವ ರಾವ್ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡಾ ಕ್ರಿಯಾತ್ಮಕ ಪಾತ್ರ ವಹಿದ್ದರು .ಮಹಾತ್ಮ ಗಾಂಧಿಯವರು ಪುತ್ತೂರಿಗೆ ಬಂದಾಗ ಇವರ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು .

ಸತ್ಯ ಸುಂದರ ರಾಯರ ನಂತರ ಡಾ ನಾರಾಯಣ ರಾಯರು ಎಂ ಬಿ ಬಿ ಎಸ್ ಪದವಿ ಗಳಿಸಿ ಆಸ್ಪತ್ರೆಯನ್ನು ಮುನ್ನಡೆಸಿದರು .ಅವರು ಸತ್ಯ ಸಾಯಿ ಬಾಬಾ ಅವರ ಭಕ್ತರಾಗಿದ್ದು ಆಸ್ಪತ್ರೆಯ ಪಕ್ಕ ಸಾಯಿ ಮಂದಿರ ನಿರ್ಮಿಸಿ ಅನೇಕ ಧಾರ್ಮಿಕ ಮತ್ತು ಸೇವಾ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟರು .

ನಾರಾಯಣ ರಾಯರ ಮಗ ಡಾ ಸತ್ಯ ಸುಂದರ್ ಮೂಳೆ ತಜ್ನರಾಗಿದ್ದು ಈಗ ಆಸ್ಪತ್ರೆ ನಡೆಸುತ್ತಿದ್ದಾರೆ .ಅವರ ಒಬ್ಬ ಮಗ ಶ್ರೀ ಹರಿ ಕೂಡಾ ಉತ್ಸಾಹಿ ಉದಯೋನ್ಮುಖ ಒರ್ಥೋ ಪೀಡಿಶಿಯನ್ ಆಗಿದ್ದಾರೆ.

 ಚಿತ್ರದಲ್ಲಿ ಗಾಂಧೀಜಿ ಜತೆ ಸತ್ಯ ಸುಂದರ ರಾವ್ ,ಶಿವರಾಮ ಕಾರಂತ ಮತ್ತು ಸದಾಶಿವ ರಾವ್ . 


 ಉಪನಯನ ವೊಂದರ ಸಂದರ್ಭ ತೆಗೆದ ಗ್ರೂಪ್ ಫೋಟೋ ದಲ್ಲಿ ಸತ್ಯ ಸುಂದರ ರಾವ್ . 

              


ಡಾ ನಾರಾಯಣ ರಾವ್ 


ಸತ್ಯ ಸಾಯಿ ಆಸ್ಪತ್ರೆ ಮತ್ತ ಸುಂದರ ರಾಯರ ಮನೆ 





 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ