ಪಾಪ್ಯುಲರ್ ನ್ಯೂಸ್ ಏಜೆನ್ಸೀ ಪುತ್ತೂರು
ಪುತ್ತೂರಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಕೊಡುಗೆ ಕೊಟ್ಟ ಸಂಸ್ಥೆ ಪಾಪ್ಯುಲರ್ ನ್ಯೂಸ್ ಏಜೆನ್ಸೀ .
1937 ರಲ್ಲಿ ಶ್ರೀ ಶಂಕರನಾರಾಯಣ ಮಯ್ಯ ಅವರಿಂದ ಸ್ಥಾಪಿಸಲ್ಪಟ್ಟಿದ್ದು ಶತಮಾನೋತ್ಸವದ ಹಾದಿಯಲ್ಲಿ ಇದೆ .ದಿನ ಪತ್ರಿಕೆ ಮತ್ತು ನಿಯತಕಾಲಿಗಳನ್ನು ವಿತರಿಸುವ ಉದ್ದೇಶದಿಂದ ಆರಂಭವಾದ ಇದರ ಮೂಲಕ ಕನ್ನಡ ಪತ್ರಿಕೆಗಳೊಡನೆ ಮದ್ರಾಸ್ ನ ಮದ್ರಾಸ್ ಮೈಲ್ ಮತ್ತು ದಿ ಹಿಂದೂ ವಾಚಕರಿಗೆ ಲಭ್ಯವಾಗುತ್ತಿತ್ತು .
ಮಯ್ಯರ ನಂತರ ಅವರ ಅಳಿಯ ಕೆ ಶಿವರಾಮ ಹೊಳ್ಳ ಇದರ ಜವಾಬ್ದಾರಿ ವಹಿಸಿ ಕೊಂಡರು.ಅವರ ಕಾಲ ಸಂಸ್ಥೆಯ ಸುವರ್ಣ ಯುಗ . ಹಳೇ ಪೋಲೀಸು ಸ್ಟೇಷನ್ ಬಳಿ ಮುಖ್ಯ ಅಂಗಡಿಯಲ್ಲದೆ ಬಸ್ ಸ್ಟಾಂಡ್ ನಲ್ಲಿಯ ಪತ್ರಿಕಾ ಮಳಿಗೆ ಕೂಡಾ ಇತ್ತು . ಓದುಗರ ಸಂಖ್ಯೆ ಮತ್ತು ಪತ್ರಿಕೆಗಳೂ ಹೆಚ್ಚಾದುವು.ಪುತ್ತೂರು ಪಟ್ಟಣದ ಮನೆ ಮನೆಗೆ ಪತ್ರಿಕೆ ಗಳು ಇವರ ಮೂಲಕವೇ ಬರುತ್ತಿದ್ದುವು .
ಹೆಸರು ನ್ಯೂಸ್ ಏಜೆನ್ಸೀ ಎಂದು ಇದ್ದರೂ ಇದು ಪುತ್ತೂರಿನ ಸಕಲ ಪುಸ್ತಕ ಭಂಡಾರ ಆಗಿದ್ದು ,ಸುತ್ತ ಮುತ್ತಲಿನ ಸಾಹಿತ್ಯಾಸಕ್ತರ ಬೇಡಿಕೆಗಳನ್ನು ಪೂರೈಸುವ ಏಕ ಮೇವ ತಾಣ ಆಗಿತ್ತು . ಹೊಳ್ಳರು ಪುಸ್ತಕ ಪ್ರಕಾಶನ ಕೂಡಾ ಆರಂಭಿಸಿದ್ದರು .ಎ ಪಿ ಸುಬ್ಬಯ್ಯ ನವರ' ದುಖಾ:ರ್ಥರು ' ಮತ್ತು ಪೆರ್ಲ ಕೃಷ್ಣ ಭಟ್ಟರ "ತಾಳ ಮದ್ದಳೆ "ಇವರು ಪ್ರಕಟಿಸಿದ ಎರಡು ಪ್ರಾಮುಖ್ಯ ಕೃತಿಗಳು .
ಶಾಲಾ ಪಠ್ಯ ಪುಸ್ತಕಗಳ ವಿತರಣೆ ಕೂಡಾ ಮಾಡುತ್ತಿದ್ದು ,ಜತೆಗೆ ಪಾಪ್ಯುಲರ್ ಬ್ರಾಂಡ್ ಹೆಸರಿನಲ್ಲಿ ಲೇಖನ ಪುಸ್ತಕಗಳು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದಿದ್ದೆವು . ನಾನೂ ಹಲವು ವರ್ಷ ಶಾಲಾರಂಭದಲ್ಲಿ ಇಲ್ಲಿ ಬಂದು ನಮ್ಮ ಅವಶ್ಯಕತೆ ಗಳ ಪೂರಣ ಮಾಡುತ್ತಿದ್ದೆ .
ಈಗ ಸತ್ಯ ಶಂಕರ ಮತ್ತು ಸತ್ಯ ಪ್ರಕಾಶ ಹೊಳ್ಳರು ವ್ಯವಹಾರ ಮುನ್ನಡೆಸುತ್ತಿದ್ದಾರೆ .ಇವರ ಕುಟುಂಬದವರು ಎಲ್ಲರೂ ಧರ್ಮ ನಿಷ್ಟರೂ ,ಸಮಾಜ ಮುಖಿಗಳೂ ಆಗಿದ್ದು ಜನ ಮನ್ನಣೆ ಗಳಿಸಿದ್ದಾರೆ .
ಕಾಲ ಉರುಳಿದಂತೆ ಹಳೆಯ ಸಂಸ್ಥೆಗಳ ಸಾಧನೆ ,ಸೇವೆಗಳು ಮರವೆಯಾಗುತ್ತವೆ .ಸ್ಪರ್ಧಾತ್ಮಕ ದಿನಗಳಲ್ಲಿ ಹೊಸಬರು ಬರುತ್ತಾರೆ .ಆದರೆ ಪುತ್ತೂರಿನ ಸಾರಸ್ವತ ಲೋಕಕ್ಕೆ ಈ ಬಂಧುಗಳು ಕೊಟ್ಟ ಕೊಡುಗೆ ಸ್ಥಾಯಿ ಯಾಗಿ ಉಳಿಯಬೇಕು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ