ನನ್ನ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ . ಅಲ್ಲಿಯೇ ಸಮೀಪ ನೆಲ್ಲಿಕುಂಜೆ ಮಾಂಕು ಎಂಬ ಪ್ರಸಿದ್ಧ ನಾಟಿ ವೈದ್ಯರು ಇದ್ದು ,ವಾತ ರೋಗಕ್ಕೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದರು . ಕಂಗಿಲ ಶಂಭಟ್ಟರು ಮೂಳೆ ಮುರಿತಗಳನ್ನು ಸರಿ ಮಾಡುವುದರಲ್ಲಿ ಸಿದ್ದ ಹಸ್ತರು .ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ನಾರಾಯಣ ಭಟ್ಟರೂ ಪಥ ಪ್ರದರ್ಶಕರು.ಈಗ ಅವರ ಮಗ ಡಾ ಜಯ ಗೋವಿಂದ ಅದನ್ನು ಅಭಿವೃದ್ದಿ ಪಡಿಸಿ ನಡೆಸಿಕೊಂಡು ಬರುತ್ತಿರುವ ಉತ್ಸಾಹಿ ..
ನನ್ನ ತಾಯಿಯ ಒಬ್ಬ ಸೋದರ ಅತ್ತೆ ಹೊನ್ನಮ್ಮ ;ಅವರ ಮಕ್ಕಳು ಶಾಮ ಭಟ್ ,ನಾರಾಯಣ ಭಟ್ ಮತ್ತು ಕೃಷ್ಣ ಭಟ್ . ಶಾಮ ಭಟ್ ಮತ್ತು ಕೃಷ್ಣ ಭಟ್ ಅವರು ಸಂಸ್ಕೃತ ವಿದ್ವಾನ್ ಗಳು .ನಾರಾಯಣ ಭಟ್ ಕನ್ನಡ ಪಂಡಿತರು .ಕೃಷ್ಣ ಭಟ್ ಮತ್ತು ನಾರಾಯಣ ಭಟ್ ಕೆಲವು ವರ್ಷ ಪೆರ್ಲ ಶಾಲೆಯಲ್ಲಿ ಅಧ್ಯಾಪನ ಮಾಡಿದ್ದರು . ಶಾಮ ಭಟ್ ಮತ್ತು ನಾರಾಯಣ ಭಟ್ ಮುಂದೆ ಕನಕಮಜಲು ಬಳಿ ಆಸ್ತಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿ ಕೊಂಡರು.ನಾರಾಯಣ ಭಟ್ ಅವರ ಪುತ್ರ ಬಾಲಸುಬ್ರಹ್ಮಣ್ಯ ನನ್ನ ಸಹಪಾಠಿ ಮಿತ್ರ ಈಗ ಮುಂಬೈ ಯಲ್ಲಿ ಉದ್ಯಮಿ .ಅವರ ಸಹೋದರಿ ಡಾ ಕಲಾ ಮುಳ್ಳೇರಿಯಾದಲ್ಲಿ ಜನಪ್ರಿಯ ವೈದ್ಯೆ. ಶಾಮ ಭಟ್ ಕೂಡಾ ವೈದ್ಯರಾಗಿದ್ದರು ಎಂದು ತಿಳಿದಿದ್ದೇನೆ .
ಕಂಗಿಲ ಕೃಷ್ಣ ಭಟ್ ಎಂದು ವೈದ್ಯರಾಗಿ ಪ್ರಸಿದ್ದರಾದವರು ಇವರಲ್ಲಿ ಒಬ್ಬರು . ಆಯುರ್ವೇದ ವೈದ್ಯ ಪದ್ದತಿಯನ್ನು ಆಳವಾಗಿ ಅಧ್ಯಯನ ಮಾಡಿ ಪ್ರಯೋಗಕ್ಕೆ ತಂದವರು .ಆಜಾನು ಭಾಹು ,ನಗು ಮುಖ , ಸದಾ ಶ್ವೇತ ವಸನ ಧಾರಿ . ಪೆರ್ಲಕ್ಕೆ ಸಮೀಪ ಇದ್ದ ಇವರ ಮನೆ ಮುನಿ ಕುಟೀರದಂತೆ ಇತ್ತು .ಸುತ್ತಲೂ ಬಣ್ಣ ಬಣ್ಣದ ಹೂ ಗಿಡಗಳು ;ಉಳಿದ ಸ್ಥಳದಲ್ಲಿ ಗಿಡ ಮೂಲಿಕೆಗಳು . ಸದಾ ರೋಗಿಗಳ ಜನ ಸಂದಣಿ .ಮಧ್ಯಾಹ್ನ ಬಂದವರಿಗೆ ಊಟ ಉಪಚಾರ ಕೂಡಾ .
ಕಂಗಿಲ ಕೃಷ್ಣ ಭಟ್ಟರು ಅಧ್ಯಯನ ಶೀಲರು .ವೈದ್ಯಕೀಯ ಮತ್ತು ಸಾಹಿತ್ಯ ಪುಸ್ತಕಗಳನ್ನು ದೇಶ ವಿದೇಶದಿಂದ ತರಿಸಿ ಓದುತ್ತಿದ್ದರು. ಅವರ ಜತೆ ಮಾತನಾಡಿದಾಗಲೇ ಅರ್ಧ ರೋಗ ಗುಣವಾಗುವುದು ಎಂದು ಜನರು ಹೇಳುತ್ತಿದ್ದರು .
ಕೃಷ್ಣ ಭಟ್ಟರ ಇಬ್ಬರು ಮಕ್ಕಳು ವೈದ್ಯರು .ಹಿರಿಯವರು ಸುಬ್ರಹ್ಮಣ್ಯ ಭಟ್ ನನ್ನ ಸ್ನೇಹಿತರು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಜನಪ್ರಿಯ ವೈದ್ಯರು .ಅವರ ತಮ್ಮ ಡಾ ಜಯದೇವ ಕಂಗಿಲ ಕಾಸರಗೋಡಿನ ಪ್ರಖ್ಯಾತ ಫಿಸಿಷಿಯನ್ . ಕೃಷ್ಣ ಭಟ್ ತಮ್ಮ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದರು . ಕಂಗಿಲ ಕುಟುಂಬದವರು ಎಲ್ಲರೂ ಸಚ್ಚಾರಿತ್ಯರೂ,ಮೃದು ಭಾಷಿಯಾಗಳೂ ,ಅಧ್ಯಯನಶೀಲರೂ ಆಗಿ ಮನ್ನಣೆ ಪಡೆದಿದ್ದಾರೆ .
ಒಂದು ವಿವಾಹ ಸಮಾರಂಭಕ್ಕೆ ನಾನು ಕಂಗಿಲಕ್ಕೆ ಹೋಗಿದ್ದೆ .ಹೊನ್ನಮ್ಮ ಅಜ್ಜಿ ಹಣ್ಣು ಹಣ್ಣು ಮುದುಕಿ ಆಗಿದ್ದರು .ಆಗಿನ ಪದ್ದತಿಯಂತೆ ಅವರನ್ನು ಮಾತನಾಡಿಸಿ ಗೌರವ ಸೂಚಿಸಲು ಹೋದಾಗ "ನೀನು ಅಬ್ಬುವಿನ(ನನ್ನ ತಾಯಿಯ ಅಡ್ಡ ಹೆಸರು )ಮಗನಾ'' ಎಂದು ಕೈ ಹಿಡಿದು ಸಂತೋಷ ಪಟ್ಟರು .ಒಡ ಹುಟ್ಟಿದವರು ಅವರ ಸಂಸಾರ ಭೇಟಿಯಾದಾಗ ಆ ಕಾಲದಲ್ಲಿ ಪಡುತ್ತಿದ್ದ ಸಂಭ್ರಮ ಈಗ ನೆನಪು ಮಾತ್ರ .
ಬಾಲಂಗೋಚಿ :ಕಂಗಿಲ ಅಜ್ಜಿಯ ಮಗಳನ್ನು ಪಕ್ಕದ ಸರ್ಪಂಗಳ ಕ್ಕೆ ಕೊಟ್ಟಿದ್ದು ಅವರ ಪುತ್ರ ಕೃಷ್ಣ ಭಟ್ ಉಜಿರೆ ಎಸ್ ಡಿ ಎಂ ಕಾಲೇಜ್ ನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕ ರಾಗಿದ್ದರು .ಅವರ ಮಗಳು ಪುತ್ತೂರಿನ ಜನಪ್ರಿಯ ವೈದ್ಯ ಬಡೆಕಿಲ ಶ್ಯಾಮ ಅವರ ಪತ್ನಿ .ಅವರ ಮಕ್ಕಳಿಬ್ಬರೂ ವೈದ್ಯರು . ಮತ್ತೊಬ್ಬ ಮಗ ಸುಬ್ರಹ್ಮಣ್ಯ ಭಟ್ ಅವರ ಪುತ್ರ ಮಹಾಲಿಂಗೇಶ್ವರ ಭಟ್ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ನರು ;ನನ್ನ ಸಹೋದ್ಯೋಗಿ .ಎಲ್ಲಾ ರೂಪು ನಡವಳಿಕೆಯಲ್ಲಿ ಕಂಗಿಲ ಛಾಯೆ ಇದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ