ಶಿಂಗಣ್ಣ ಮತ್ತು ಕನ್ನೆಪ್ಪಾಡಿ ರಾಮಕೃಷ್ಣ ಶಾಸ್ತ್ರಿ
ಕರಾವಳಿ ಭಾಗದ ದಿನ ಪತ್ರಿಕೆ ಎಂದರೆ ನವಭಾರತ ಆಗಿತ್ತು .ದಿ ವಾಮನ ಶ್ರೀನಿವಾಸ ಕುಡ್ವರು ೧೯೪೧ ರಲ್ಲಿ ಆರಂಭಿಸಿದ ಪತ್ರಿಕೆ ಎಲ್ಲರ ಮನೆಯ ಪತ್ರಿಕೆ .ವಿ ಎಸ ಕುಡ್ವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುದಕ್ಕೋಸ್ಕರ ಮುಂಬೈ ಯಲ್ಲಿ ತಮ್ಮ ಇಂಜಿನಿಯರಿಂಗ್ ಅಧ್ಯಯನ ಅರ್ಧಕ್ಕೆ ನಿಲ್ಲಿಸಿ ಬಂದವರು . ನವಭಾರತದ ಸಂಪಾದಕರೂ ಆಗಿ ಕಾರ್ಯ ನಿರ್ವಸಿದವರು .
ನವಭಾರತ ಪತ್ರಿಕೆಯನ್ನು ತೆರೆದೊಡನೆ ಕಣ್ಣು ಹಾಯುವುದು ಕಾರ್ಟೂನ್ ಶಿಂಗಣ್ಣನ ಕಡೆಗೆ .ಉದ್ದ ಮೂಗಿನ ಜನಸಾಮಾನ್ಯ ಒಂದೂವರೆ ದಶಕಗಳ ಕಾಲ ವಿಡಂಬನಾತ್ಮಕ ರಂಜನೆ ಓದುಗರಿಗೆ ನಿರಂತರ ನೀಡಿ ಜನಪ್ರಿಯನಾದ ." ರಘು "ಎಂಬ ಕಿರು ನಾಮದಲ್ಲಿ ಅದನ್ನು ರಚಿಸುತ್ತಿದ್ದವರು ಕನ್ನೆಪ್ಪಾಡಿ ರಾಮಕೃಷ್ಣ ಶಾಸ್ತ್ರಿಗಳು . ಶ್ರೀ ಎಂ ವಿ ಹೆಗ್ಡೆಯವರ ಸಂಪಾದಕೀಯ ಮತ್ತು ಅರ್ಥ ಗರ್ಭಿತ ವಾರ್ತೆಗಳು(ಇವರ ದ್ದು ಅಲ್ಲ ) ಎಂಬ ವಾರ್ತಾ ವಿಮರ್ಶೆ ಒಳ ಪುಟಗಳಲ್ಲಿ ಬರುತಿದ್ದು ಅದೂ ಜನಪ್ರಿಯಆಗಿತ್ತು.
೨೯.೪.೧೯೨೫ ೨೩.೭.೨೦೦೦ ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಅಷ್ಟೇನೂ ಪ್ರಾಮುಖ್ಯತೆ ಇರದಿದ್ದಕಾಲದಲ್ಲೇ ’ಶಿಂಗಣ್ಣ’ ಎಂಬ ಕಾಲ್ಪನಿಕ ಹೆಸರುಕೊಟ್ಟು ವ್ಯಂಗ್ಯ ಚಿತ್ರ ರಚಿಸಿ ಹೆಸರು ಮಾಡಿದ ರಾಮಕೃಷ್ಣರು ಹುಟ್ಟಿದ್ದು ಪುತ್ತೂರು ಬಳಿ ಹಾರಾಡಿ. ತಂದೆ ಪರಮೇಶ್ವರ ಶಾಸ್ತ್ರಿ, ತಾಯಿ ಸತ್ಯ ಸತ್ಯಭಾಮಾ ದೇವಿ, ೧೯೪೩ ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ವ್ಯಂಗ್ಯ ಚಿತ್ರ ಕಲ್ಕತ್ತಾದಿಂದ ಹೊರಡುತ್ತಿದ್ದ ಓರಿಯಂಟ್ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿತ. ಓದಿದ್ದು ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ಪದವಿ. ಸಾಬೂನು ತಯಾರಿಕಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಕಲಿತ ಪದವಿಗಳನ್ನು ಬದಿಗಿಟ್ಟು ಆಯ್ಕೆ ಮಡಿಕೊಂಡದ್ದು ವ್ಯಂಗ್ಯ ಚಿತ್ರ ರಚನೆಯ ಬದುಕು. ಬನಾರಸ್ ’ಆಜ್’, ಅಲಹಾಬಾದಿನ ’ಅಮೃತ ಬಜಾರ್’ ಪತ್ರಿಕೆಗಳಿಗೆ ನಿಯಮಿತವಾಗಿ ರಚಿಸಿದ ವ್ಯಂಗ್ಯ ಚಿತ್ರಗಳು. ಆಗಿನ ಸಂಭಾವನೆ ಕೇವಲ ೧೦ ರೂ. ಸಂಭಾವನೆ ಹತ್ತು ರೂ ಪಡೆದ ಹೆಮ್ಮೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ.ಎಸ್. ರಾಧಾ ಕೃಷ್ಣನ್ ಮತ್ತು ಮದನಮೋಹನ ಮಾಳವೀಯರು ಮುಂತಾದವರಿಂದ ದೊರೆತ ಪ್ರಶಂಸೆ. ೧೯೪೫ ಪೂರ್ಣಕಾಲಿಕ ವ್ಯಂಗ್ಯ ಚಿತ್ರಕಾರರಾಗಿ ’ಕಲ್ಕಿ’ ಪತ್ರಿಕಾ ಬಳಗ ಸೇರ್ಪಡೆ. ತಮಿಳು ಕಲಿತು ರಚಿಸಿದ ವ್ಯಂಗ್ಯ ಚಿತ್ರಗಳು. ಇವರ ವ್ಯಂಗ್ಯ ಚಿತ್ರಗಳ ಪ್ರಭಾವದಿಂದ ಕಲ್ಕಿ ಪ್ರಸಾರ ೩೫ ಸಾವಿರದಿಂದ ಲಕ್ಷಕ್ಕೇರಿಕೆ. ಬೇರೆ ಬೇರೆ ಲೇಖನಿ ನಾಮದಿಂದ ’ಕುಮದಂ’. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾಗೂ ವ್ಯಂಗ್ಯ ಚಿತ್ರ ರಚನೆ. ಆಗಿನ ಕಾಲದಲ್ಲೆ ಅಮೆರಿಕಾದ ಪತ್ರಿಕೆಯೊಂದು ಇವರ ವ್ಯಂಗ್ಯ ಚಿತ್ರವನ್ನು ೧೦೦ ಡಾಲರಿಗೆ ಖರೀದಿಸಿ ಸಲ್ಲಿಸಿದ ಗೌರವ. ತಾಯ್ನಾಡಿಗೆ ಮರಳಿ ಬಂದು ಕೈಗೊಂಡ ವಕೀಲಿ ವೃತ್ತಿ ಕೆಲಕಾಲ. ೧೯೬೦ರ ದಶಕದಲ್ಲಿ ನವಭಾರತ ಸಂಪಾದಕರಾದ ವಿ.ಎಸ್. ಕುಡ್ವ ಮತ್ತು ರಾಮಕೃಷ್ಣರಿಬ್ಬರು ಯೋಚಿಸಿ, ವ್ಯಂಗ್ಯಚಿತ್ರದ ಶೀರ್ಷಿಕೆ ’ಶಿಂಗಣ್ಣ’ನ ಉದಯ. ೧೪ವರ್ಷ ಕಾಲ ಕರಾವಳಿಯ ಜನರಿಗೆ ಶಿಂಗಣ್ಣ ಒದಗಿಸಿದ ಪಕ್ಷಾತೀತ, ಮದ್ಯ, ಬೀಡಿ, ಸಿಗರೇಟು ವರ್ಜಿಸಿದ ಶಿಂಗಣ್ಣನ ಕಾರುಬಾರು. ಕೆಲ ಕಾಲ ಉದಯವಾಣಿಯಲ್ಲಿ, ಟಿ.ಎಸ್.ಆರ್. ಒತ್ತಾಯದ ಮೇರೆಗೆ ಪ್ರಜಾವಾಣಿ, ಸುಧಾ, ಮಯೂರಗಳಲ್ಲೂ ಶಿಂಗಣ್ಣನ ಪ್ರವೇಶ. ಭಾಷೆಯ ನಿರ್ಬಂಧವಿಲ್ಲದೆ ಇವರ ಹಲವಾರು ವ್ಯಂಗ್ಯ ಚಿತ್ರಗಳು ಕೇರಳದ ಮಾತೃಭೂಮಿ, ಮಲಯಾಳಂನ ಮನೋರಮಾ ಪತ್ರಿಕೆಯಲ್ಲೂ ಪ್ರಕಟಿತ.1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆದ ಮೇಲೆ ಶಿಂಗಣ್ಣ ಮೌನಿಯಾದನು. ೧೯೯೨ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕ ಸನ್ಮಾನ. ೧೯೬೯ ರಲ್ಲಿ ಪತ್ರಿಕಾ ಅಕಾಡಮಿ ಪ್ರಶಸ್ತಿ ಮುಂತಾದ ಗೌರವಗಳು. ಶಿಂಗಣ್ಣನ ವ್ಯಂಗ್ಯ ಚಿತ್ರ ಸಂಕಲನ, ವ್ಯಂಗ್ಯ ಬದುಕು (ಕನ್ನೆಪ್ಪಾಡಿ ಜೀವನಗಾಥೆ) ಪ್ರಕಟಿತ ಕೃತಿಗಳು.
ಹುಟ್ಟೂರು ಪುತ್ತೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು .ರಾಶಿಯವರ ಕೊರವಂಜಿ ಮಾದರಿಯಲ್ಲಿ "ಇಂದ್ರ ದನುಸ್ "ಎಂಬ ಮಾಸಿಕ ಹುಟ್ಟು ಹಾಕಿ ಕೆಲವು ಕಾಲ ನಡೆಸಿದರು .ಈ ಪತ್ರಿಕೆ ಯಲ್ಲಿ ಬಲ್ನಾಡು ಸುಬ್ಬಣ್ಣ ಭಟ್ ಎಸ್ ಬಿ ಹೇಟ್ ಎಂಬ ಹೆಸರಿನಲ್ಲಿ ಚುಟುಕು ,ಲೇಖನ ಬರೆಯುತ್ತಿದ್ದರು .ಇನ್ನೂ ಹಲವು ಉದಯೋನ್ಮುಖ ಲೇಖಕರಿಗೆ ಅದು ವೇದಿಕೆಯಾಯಿತು .ಮುಂದೆ ಉದಯವಾಣಿ ಸಾಪ್ತಾಹಿಕದಲ್ಲಿ ಇವರು ರಚಿಸುತ್ತಿದ್ದ 'ದಮ್ಮ ದಿಮ್ಮಿ ಟಾಮಿ 'ಎಂಬ ವ್ಯಂಗ್ಯ ಚಿತ್ರ ಮಾಲಿಕೆ ಮಕ್ಕಳಿಗೆ ಭಾರೀ ಪ್ರೀತಿ .
ಲೇಖಕಿ ಮನೋರಮಾ ಭಟ್ ಇವರ ಸಹೋದರಿ (ಮುಳಿಯ ಮಹಾಬಲ ಭಟ್ ಅವರ ಪತ್ನಿ ).ಇವರಂತೆ ಪ್ರತಿಭಾನ್ವಿತೆ.
ಒಂದು ಬಾರಿ ಆಗ ಮುಖ್ಯ ಮಂತ್ರಿ ಯಾಗಿದ್ದ ಶ್ರೀ ನಿಜಲಿಂಗಪ್ಪ ಮಂಗಳೂರಿಗೆ ಬಂದಿದ್ದಾಗ ಶಿಂಗಣ್ಣ ನ ರಾಜಕೀಯ ವಿಡಂಬನೆಗೆ ರೋಸಿ ಪತ್ರಿಕಾ ಗೋಷ್ಠಿಯಲ್ಲಿ "ದಡ್ಡ ಶಿಂಗಣ್ಣ "ಎಂದು ಕರೆದರು . ಮರು ದಿನ ವೇ ಉತ್ತರವಾಗಿ "ನಾನು ದಡ್ಡನಾದುದರಿಂದಲೇ ಹೀಗಿದ್ದೇನೆ ,ಇಲ್ಲದಿದ್ದರೆ ಪುಡಾರಿಯೋ ಮಂತ್ರಿಯೋ ಆಗುತ್ತಿದ್ದೆ "ಎಂದು ಶಿಂಗಣ್ಣನ ಮೂಲಕವೇ ಉತ್ತರಿಸಿದ ನೆನಪು . (ಈಗಿನವರಿಗೆ ಹೋಲಿಸಿದರೆ ನಿಜಲಿಂಗಪ್ಪ ಎಷ್ಟೋ ಪ್ರಾಮಾಣಿಕರು ,ನಿರ್ಮಲ ಹಸ್ತರು .ಆ ವಿಚಾರ ಬೇರೆ ).
ನನ್ನ ಸಹೋದ್ಯೋಗಿ ಡಾ ಭಾಸ್ಕರ್ ಕಾರ್ಟೂನ್ ಕಲೆ ಕಲಿಯಲೆಂದು ರಾಮಕೃಷ್ಣ ಶಾಸ್ತ್ರಿಗಳ ಶಿಷ್ಯರಾಗಿದ್ದಾರಂತೆ .ಅವರ ಕೆಲವು ರಚನೆಗಳನ್ನು ನನ್ನೊಡನೆ ಹಂಚಿಕೊಂಡಿದ್ದಾರೆ .
2000 ರ ಜುಲಾಯಿ ತಿಂಗಳು ನಿಧನರಾದ ರಾಮಕೃಷ್ಣ ಶಾಸ್ತ್ರಿ ಪುತ್ತೂರಿನ ಹೆಮ್ಮೆ .ಮರೆಯ ಬಾರದ ಸಾಧಕ .
(ಕೆಲ ವಿವರಗಳನ್ನು ಒದಗಿಸಿದ ಅವರ ಪುತ್ರ ಡಾ ಪ್ರಸಾದ್ ಅವರಿಗೆ ಆಭಾರಿ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ