ಬೆಂಬಲಿಗರು

ಶನಿವಾರ, ಆಗಸ್ಟ್ 14, 2021

ಮೊಬೈಲ್ ಜೀವನ

                       



 

  ೫೦ ವರ್ಷ ಪ್ರಾಯದ ವರೆಗೆ ನನ್ನಲ್ಲಿ ಪರ್ಸ್ ಇರಲಿಲ್ಲ .ಅಂಗಿ ಜೇಬಿನಲ್ಲಿ ಒಂದೆರಡು ನೋಟ್ ಮತ್ತು ಚಿಲ್ಲರೆ ಕಾಸು ;ಎಷ್ಟು ದೂರ ಪ್ರಯಾಣ ಮಾಡುತ್ತಿದ್ದರೂ . ಈಗ ಈ ಕಾರ್ಡುಗಳು ಬಂದ ಮೇಲೆ ಪರ್ಸ್ ಉಪಯೋಗಿಯಲೇ ಬೇಕಾಗಿದೆ . ಬೆಳಿಗ್ಗೆ ಪ್ಯಾಂಟಿನ ಒಂದು ಜೇಬಿನಲ್ಲಿ ಏನೋ ಒಂದು ಭಾರ ಹೋಗದಿದ್ದರೆ ಕಾಲು ಮುಂದೆ ಹೋಗದು . ಜತೆಗೆ ಈಗ ಮೊಬೈಲ್ ಇನ್ನೊಂದು ಜೇಬಿನಲ್ಲಿ . ಕೋವಿಡ್ ಪರ್ವದಲ್ಲಿ  ಮುಖಕ್ಕೆ ಮಾಸ್ಕ್ . ಆಸ್ಪತ್ರೆಗೆ ಹೊರಡುವಾಗ ಯಾವುದಾದರೂ ಒಂದು ಮರೆತು ಹೋಗಿ ಬಹಳ ಸಾರಿ ವಾಪಸು ಬಂದದ್ದಿದೆ . 

ಮುಂಜಾನೆ ಮನೆಪಕ್ಕದ ಡಿಪಾರ್ಟ್ಮೆಂಟ್ ಸ್ಟೋರ್ ಗೆ  ಡ್ಯೂಟಿ ಗೆ ಹೋಗುವ ಲಲನೆಯರು ಕೈಯಲ್ಲಿ ಮೊಬೈಲ್ ನೋಡಿಕೊಂಡು ಸಾಲಾಗಿ ಹೋಗುವ ದೃಶ್ಯ ದಿನವೂ ಸಿಗುವುದು .ನಾನು ಕಾರ್ ನಿಲ್ಲಿಸಿ ಅವರ ಏಕಾಗ್ರತೆಗೆ ಭಂಗ ಬಾರದಂತೆ  ರಸ್ತೆ ದಾಟಲು ಅನುವು ಮಾಡುವೆನು .ನಡೆಯುವ ರಸ್ತೆಯ ಮೇಲೆ ಅವರ ಗಮನ ಇರುವುದಿಲ್ಲ . ಹಂಸ ಲೇಖಾ ಬರೆದಂತೆ ಬಹಳ  ಮಂದಿ (ಹೇಳೇ ನೀ ಚೆಲುವೇ ತನ್ನಷ್ಟಕ್ಕೆ ತಾನೇ ನಗುವೇ )ತನ್ನಷ್ಟಕ್ಕೇ ತಾನೇ ನಗುತ್ತಿರುವರು .ಇನ್ನು ಕೆಲವರು ಹೆಬ್ಬೆರಳಿನಲ್ಲಿ ವಾಟ್ಸಪ್ಪ್ ಮೆಸೇಜ್ ಟೈಪ್ ಮಾಡಿ ಉತ್ತರಕ್ಕೆ ಕಾಯುವವವರು . ಆ ಕಡೆಯಿಂದ ಬಂದ ಕಚಗುಳಿಗೆ ನಗುವರು . ಹೊರ ಜಗದ ಪರಿವೇ ಇರದು . 

              ಪಕ್ಕದ ಮನೆಯ ಮಕ್ಕಳು ಅಭಿಮನ್ಯು ವಿನಂತೆ  ಆಗಿ ಹೋಗಿರುವರು . ಕೋವಿಡ್ ಕಾಲದಲ್ಲಿ ಕಾಲಕ್ಷೇಪಕ್ಕೆ ಮತ್ತು ವಿದ್ಯಾರ್ಜನೆಗೆ ಮೊಬೈಲ್ ಎಂಬ ಚಕ್ರ ವ್ಯೂಹ ಹೊಗ್ಗಿದ ಅವರಿಗೆ ಹೊರ ಬರುವ ವಿದ್ಯೆ ಇನ್ನೂ ಕರಗತ ಆಗಿಲ್ಲ .ನಮ್ಮ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮತ್ತು ಪ್ರಸೂತಿ ತಜ್ಞೆಯರ ಕೊಠಡಿಯ ಹೊರಗೆ ಕಾಯುತ್ತಿರುವ ಗರ್ಭಿಣಿಯರು ಮೊಬೈಲ್ ನಲ್ಲಿ ಕಾರ್ಯ ನಿರತರಾಗಿ ಇರುವರು .ಅದನ್ನು ನೋಡಿ ನನಗೆ ಉತ್ತರೆಯ ಗರ್ಭದಲ್ಲಿ ಇದ್ದ ಅಭಿಮನ್ಯು ನೆನಪಾಗುವುದು .. 

ತಾಯಂದಿರು ಕಾಪಿ ತಿಂಡಿಗೆ ಕೂಡಾ ಕೃಷ್ಣಾ ನೀ ಬೇಗನೆ ಬಾರೋ ಎಂದು ಹಲವು ಬಾರಿ ಕೂಗಿ ಕರೆದರೂ ಮಕ್ಕಳು  ಮೊಬೈಲ್ ನಿಂದ ಹೊರ ಬಾರರು . ಬಂದರೂ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ,ದೊಗಲೆ ಪೀತಾಂಬರ ಕೈಯಲ್ಲಿ ಮೊಬೈಲ್ ಧಾರಿ  ಯಾಗಿ ಬರುವರು . ಪುರಾಣದ ಕೃಷ್ಣನು ಬಾಯಲ್ಲಿ ಮೂಜಗ ತೋರಿದರೆ ಇವರು ಅಂಗೈಯಲ್ಲಿ (ಮೊಬೈಲ್ ಮೂಲಕ )ತೋರುವರು. 

ಡಾಕ್ಟರ್ ರೂಮಿಗೆ ಪ್ರವೇಶಿಸಿದ ಹಲವರು ,ನಿಮಗೆ ಏನಾಗಿದೆ ಎಂದು ಕೇಳಿದರೆ "ಸ್ವಲ್ಪ ಇರಿ ಡಾಕ್ಟ್ರೇ ,ಹಲ್ಲೋ ನಾನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಇದ್ದೇನೆ ,ಅಲ್ಲಿ ಅಡಿಗೆ ಮನೆಯ ಶೆಲ್ಫಿನಲ್ಲಿ ಭರಣಿಯ ಒಳಗೆ ಇಟ್ಟಿದ್ದೇನೆ ನೋಡ್ರಿ . ಮಕ್ಕಳು  ಏನು ಮಾಡುತ್ತಿದ್ದಾರೆ ?"ಇತ್ಯಾದಿ ಮಾತನಾಡಿ ತಾವು ಯಾಕೆ ಆಸ್ಪತ್ರಗೆ ಬಂದೆ ಎಂದು ನೆನಪಿಸಿ ಕೊಳ್ಳಲು ಐದು ನಿಮಿಷ ತೆಗೆದು ಕೊಳ್ಳುವರು . ಇನ್ನು ಕೆಲವರು ಕ್ರಿಕೆಟ್ ಬೌಲರ್ ಗಳಂತೆ  ಮೊಬೈಲ್ ತೊಡೆಗೆ ಉಜ್ಜಿ ನಮ್ಮ ಮುಂದೆ ಹಿಡಿದು ಅವರ ಹಳೇ ರಿಪೋರ್ಟ್ಸ ತೋರಿಸುವರು ಮತ್ತು ದುಬಾಯಿ ಯಲ್ಲಿ ಇರುವ ತಮ್ಮ ಬಂಧುಗಳ ಬಳಿ ಮಾತನಾಡಲು ಹೇಳುವರು

 


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ