ಪುಸ್ತಕ ಪರಿಚಾರಕ ಪ್ರಕಾಶ ಕೊಡೆಂಕಿರಿ
ಮೊನ್ನೆ ನನ್ನ ಸಹೋದರ ಶಾಲೆಗಳಲ್ಲಿ ಹಂಚಲೆಂದು ಒಂದು ಪುಸ್ತಕ ಕಟ್ಟು ಹೋಗಿದ್ದನು . ಅದನ್ನು ತಲುಪಿಸುವದು ಹೇಗೆ ಎಂದು ಆಲೋಚಿಸುವಾಗ ನೆನಪಿಗೆ ಬಂದವರು ಕೊಡೆಂಕಿರಿ ಪ್ರಕಾಶ್ .ಇಂದು ಆಸ್ಪತ್ರೆಗೆ ಬಂದವರು ೧೦ ಕಿಲೋ ಭಾರದ ಅದನ್ನು ಹೇಗೆ ಕೊಂಡು ಹೋಗುವಿರಿ ,ಆಟೋ ಮಾಡಿ ಕೊಡುವೆ ಎಂದಾಗ' ಸಾರ್ ನೀವು ಯೋಚನೆ ಮಾಡ ಬೇಡಿರಿ ಎಂದು ಅದನ್ನು ಹೆಗಲ ಮೇಲೆ ಹೊತ್ತು ನಡೆದರು . ಆಸ್ಪತ್ರೆಯಿಂದ ಅವರ ಅಂಗಡಿಗೆ ಮುಕ್ಕಾಲು ಕಿಲೋಮೀಟರ್ ದೂರ .
ಪ್ರಕಾಶ್ ಬೋಳಂತಕೋಡಿ ಈಶ್ವರ ಭಟ್ ಗರಡಿಯಲ್ಲಿ ತಯಾರು ಆದವರು . ಶೋಭಾ ಪುಸ್ತಕಾಲಯ ವನ್ನು ರಾಜೇಶ್ ಪವರ್ ಪ್ರೆಸ್ ನವರಿಂದ ಖರೀದಿಸಿ ಬೋಳಂತಕೋಡಿ ನಡೆಸುತ್ತಿದ್ದರು .ಅವರಿಗೆ ಸಹಾಯಕರಾಗಿ ಸೇರಿಕೊಂಡ ಅವರು ಪುಸ್ತಕ ವ್ಯಾಪಾರ ದ ಒಳ ಹೊರಗು ಕಲಿತರು .ಮುಂದೆ ತಮ್ಮದೇ ಆದ ಜ್ಞಾನ ಗಂಗಾ ಪುಸ್ತಕ ಮಳಿಗೆಯನ್ನು ಆರಂಭಿಸಿದರು . ಇವರದು ಸ್ಥಾವರ ಉದ್ಯಮದೊಂದಿಗೆ ಸಂಚಾರಿ ಪುಸ್ತಕ ವ್ಯಾಪಾರ ಕೂಡಾ ಇದೆ .
ಕರ್ನಾಟಕದಾದ್ಯಂತ ಸಾಹಿತ್ಯ ಸಮ್ಮೇಳನ ,ಸುತ್ತ ಮುತ್ತಲಿನ ಶಾಲಾ ವಾರ್ಷಿಕೋತ್ಸವ ,ಮದುವೆ ,ಗೃಹ ಪ್ರವೇಶ ,ಮುಂಜಿಗಳಗಳಲ್ಲಿ ಇವರು ಮತ್ತು ಇವರ ಪುಸ್ತಕ ಸಂಗ್ರಹ ಹಾಜರ್ . ನಾನೂ ಯಾರಿಗಾದರೂ ಉಡುಗೊರೆ ಕೊಡುವುದಿದ್ದರೆ ಅವರಿಗೆ ಫೋನಾಯಿಸುವೆನು .ಸಂದರ್ಭಾನುಸಾರ ಅವರು ಪುಸ್ತಕ ಕಟ್ಟು ಆಸ್ಪತ್ರೆಗೆ ತಲುಪಿಸುವರು .
ಪ್ರಕಾಶ್ ಹೆಸರಿಗೆ ತಕ್ಕಂತೆ ಪುಸ್ತಕ ಪ್ರಕಾಶಕರೂ ಹೌದು .ದೇರಾಜೆ ಸೀತಾರಾಮಯ್ಯ ನವರ ಭಾರತ ಮತ್ತು ರಾಮಾಯಣ ಪುಸ್ತಕ ಪುನರ್ಮುದ್ರಣ ಮಾಡಿದ್ದಾರೆ .ಹಲವು ಯಕ್ಷಗಾನ ಪ್ರಸಂಗಗಳು .,ಸಾಮಗ ಪಡಿದನಿ .ಕಡಂಬಿಲ ಅಡುಗೆ ಮುಂತಾದ ಐವತ್ತಕ್ಕೂ ಮೀರಿ ಕೃತಿಗಳು ಇವರಿಂದ ಪ್ರಕಾಶಿಸ ಲ್ಪಟ್ಟಿವೆ . ೨೦೦೪ ರಲ್ಲಿ ತಮ್ಮ ಮನೆಯಲ್ಲಿ ಪ್ರಥಮ ಗೃಹ ಸಾಹಿತ್ಯ ಸಮ್ಮೇಳನ ನಡೆಸಿದ ಶ್ರೇಯ ಇವರದು . ತಮ್ಮ ಗುರುಗಳಾದ ಬೋಳಂತಕೋಡಿ ಯವರ ಸ್ಮರಣಾರ್ಥ ನೆನಪಿನ ಕಾರ್ಯಕ್ರಮ ಯೋಚನೆ ,ಯೋಜನೆ ,ಪ್ರಶಸ್ತಿ ಪ್ರಧಾನ ರೂಪೀಕರಣ ಮತ್ತು ಅನುಷ್ಠಾನ ಇವರ ಸಾಧನೆ .
ಇವರಿಗೆ ೨೦೧೪ ರ ಸರಸ್ವತಿ ಪುರಸ್ಕಾರ .ಕಾಂತಾವರ ಕನ್ನಡ ಸಂಘದ ಗೌರವ ,ಸವಣೂರು ಮಂಗಳ ಕಲಾ ವೇದಿಕೆ ಸಂಮ್ಮಾನ ,ಜೇಸಿ ಯವರ ಸಾಧನಾ ಪ್ರಶಸ್ತಿ ,೨೦೧೭ ಕಡಬ ತಾಲೂಕು ಸಮ್ಮೇಳನದಲ್ಲಿ ಸಮ್ಮಾನ ಇತ್ಯಾದಿ ಲಭಿಸಿದ್ದು ಅರ್ಹತೆಯಿಂದ ಗಳಿಸಿರುವರು .
ಪ್ರವಾಸ ಪ್ರಿಯರಾದ ಪ್ರಕಾಶರು ವೈಷನೋ ದೇವಿ ,ಅಸ್ಸಾಮ ಮೇಘಾಲಯ ಮತ್ತು ಅರುಣಾಚಲ ಪ್ರದೇಶ ಸಂಚಾರ ಕೈಗೊಂಡಿದ್ದಾರಲ್ಲದೆ ಕರ್ನಾಟಕದ ವಿವಿಧ ಪ್ರವಾಸಿ ತಾಣಗಳನ್ನು ಬಿಟ್ಟಿಲ್ಲ .
ಪುಸ್ತಕ ವ್ಯಾಪಾರದಲ್ಲಿ ಹಲವು ವಿನೋದಕರ ಘಟನೆ ಅವರು ನೆನಪು ಮಾಡಿಕೊಳ್ಳುತ್ತಾರೆ .ಒಂದು ಕಡೆ ಪುಸ್ತಕ ಪ್ರದರ್ಶನದಲ್ಲಿ ಓರ್ವ ಅಧ್ಯಾಪಕರು ಕಾರಂತರ ಬಾಲ ಪ್ರಪಂಚ ಪುಸ್ತಕದ ಹಾಳೆಗಳನ್ನು ಮಗುಚಿ ಹಾಕಿ ಕಾರಂತರು ಬರೆಯುತ್ತಾರಾ ?ಎಂದು ಕೇಳಿದರಂತೆ .ಇನ್ನೊಂದು ಕಡೆ ಮಗು ಅಸೆ ಪಟ್ಟಿತು ಎಂದು ಪುಸ್ತಕ ಕೊಂಡ ತಂದೆ ಸ್ವಲ್ಪ ಬಿಟ್ಟು ಒಬ್ಬರೇ ಬಂದು ಮಗು ಸಮಾಧಾನ ಮಾಡಲು ಕೊಂಡ ಹಾಗೆ ಮಾಡಿದೆ ,ಪುಸ್ತಕ ತೆಗೆದು ಕೊಂಡು ದುಡ್ಡು ವಾಪಸು ಕೊಡಿ ಎಂದರಂತೆ..
ನನ್ನೊಡನೆ ಹವ್ಯಕ ಭಾಷೆಯಲ್ಲಿಯೇ ಮಾತುಕತೆ(ಅವರ ಮಾತೃಭಾಷೆ ತುಳು ) . ಅವರ ಅಮ್ಮ ಶಾರದಾ ,ಪತ್ನಿ ಸುಜಾತಾ ಮತ್ತು ಮಗ ಆದಿತ್ಯ ಕೂಡಾ ಇವರಿಗೆ ಬೇಕಾದ ಸಹಕಾರ ನೀಡುವರು .
ಹಿಂದೆ ಜಿ ಪಿ ರಾಜರತ್ನಂ ಯಾವಾಗಲೂ ತಮ್ಮ ಜೋಳಿಗೆಯಲ್ಲಿ ಮಾರಾಟಕ್ಕೆ ಕನ್ನಡ ಪುಸ್ತಕಗಳನ್ನು ಇಟ್ಟು ಕೊಂಡಿರುತ್ತರಂತೆ ;ಉಡುಪಿ ಯಲ್ಲಿ ಕು. ಗೋ. ಕೂಡಾ .ಅವರಂತೆ ತಮ್ಮದೇ ಮಾರ್ಗದಲ್ಲಿ ನಮ್ಮ ಪ್ರಕಾಶಣ್ಣ.