ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 31, 2021

ಬೀಳ್ಕೊಡಿಗೆ

                     ಬೀಳ್ಕೊಡಿಗೆ 

ನಮ್ಮ ದೇಶದ ಹೆಚ್ಚಿನ ಸಂಸ್ಥೆಗಳಲ್ಲಿ ಒಂದು ಮ್ಯಾನೇಜ್ಮೆಂಟ್ ಲೋಪ ಇದೆ . ಸಂಸ್ಥೆಗೆ ಪ್ರಾಮಾಣಿಕವಾಗಿ ದುಡಿದು ಕಾರಣಾಂತರ ಗಳಿಂದ  ನೌಕರ ಕೆಲಸ ಬಿಡುವಾಗ ಅವನು ಸಂಸ್ಥೆಗೆ ಮಾಡಿದ ಒಳ್ಳೆಯ ಸೇವೆಯನ್ನು ಸ್ಮರಿಸಿ ಒಳ್ಳೆಯ ಮಾತುಗಳನ್ನು ಆಡಿ ,ಪುನಃ ಇಲ್ಲಿಗೆ ಬರುವುದಿದ್ದರೆ ಸ್ವಾಗತ ಎಂದು ಹೇಳುವುದು ಕೆಲವೇ ಖಾಸಗಿ ಉದ್ದಿಮೆಗಳಲ್ಲಿ ಕಂಡು ಬರುತ್ತದೆ .ಮಿಕ್ಕ ಕಡೆ ಹೋಗಿ ಬರುತ್ತೇನೆ ಎಂದು ಹೇಳುವಾಗ "ನೀನು ಇಷ್ಟು ದಿನ ಇಲ್ಲಿ ಇದ್ದದ್ದೇ ಗೊತ್ತಿರಲಿಲ್ಲ "ಎಂದು ರಾಶಿಯವರ ಕೊರವಂಜಿ ಕಾಡಿಗೆ ಹೋಗುವಾಗ ಕನ್ನಡಿಗರು ಹೇಳಿದಂತೆ ಉದ್ಘಾರ ತೆಗೆಯುವವರೇ ಹೆಚ್ಚು . ಮನಸಿನಲ್ಲಿ 'ಹಾಳಾಗಿ ಹೋಗು 'ಅನ್ನುವವರು ಕಡಿಮೆ ಇಲ್ಲ . 

ನಾನು ಇದನ್ನು ನನ್ನ ಸೇವಾ ಅವಧಿಯಲ್ಲಿ ಬಹಳ ಕಂಡಿದ್ದೇನೆ . ಹೆಚ್ಚಿನ ಕಡೆ ಸಣ್ಣ ಸಣ್ಣ ಊರುಗಳಲ್ಲಿ ನಾವು ವರ್ಗವಾಗಿ ಹೋಗುವಾಗ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದೂ ಇದೆ . ಇನ್ನು ಕೆಲವು ದೊಡ್ಡ ಊರುಗಳಲ್ಲಿ ನೀವು ಇಲ್ಲಿ ಬಂದು ಇದ್ದದ್ದೇ ಗೊತ್ತಿಲ್ಲ ಎಂದು ವರ್ತಿಸಿದ ಘಟನೆ ನೆನಪಿನಲ್ಲಿ ಇದೆ .ಒಂದು ರೀತಿಯಲ್ಲಿ ನಾವು ಈ ಜಗತ್ತನ್ನು ಬಿಡುವಾಗ ಕೂಡಾ ಇದಕ್ಕೆಲ್ಲಾ ಮಾನಸಿಕವಾಗಿ ಇರಲು ತಯಾರು ಎಂದು ಕೊಂಡಿದ್ದೇನೆ . 

ಒಂದು ಖಾಸಗಿ ಸಂಸ್ಥೆಯಲ್ಲಿ ನಾನು ಸಾಮಾನ್ಯ ಎರಡು ವರ್ಷ ಕೆಲಸ ಮಾಡಿದ್ದೆ . ಅಲ್ಲಿ ಯ ವಿಭಾಗ ಮುಖ್ಯಸ್ಥ ನನಗಿಂತ ವಯಸ್ಸು ,ಅನುಭವ ಎರಡರಲ್ಲಿಯೂ ಕಿರಿಯನಾದರೂ ತಾಂತ್ರಿಕ ಕಾರಣಗಳಿಂದ ಹುದ್ದೆಯಲ್ಲಿ ಇದ್ದರು .ನಾನು ವಿಭಾಗ ಸೇರಿ ಯಾವತ್ತಿನ ಸಮಯ ಪಾಲನೆ ಮತ್ತು ಕ್ರಮ ಪ್ರಕಾರ ಕೆಲಸ ಆರಂಭಿಸಿದ ಮೇಲೆ ಆತ ಬೆಳಿಗ್ಗೆ ಬಂದವರು ಮತ್ತೊಂದು ವಿಭಾಗದಲ್ಲಿ ಇದ್ದ ತನ್ನ ಬಂಧುವಿನ ಜತೆ ಸಮಯ ಕಳೆಯಲು ಹೋಗುವರು ..ಔಟ್ ಪೇಷಂಟ್ ದಿನವೂ ಒಮ್ಮೆ ಮುಖ ತೋರಿಸಿ ಹೋಗುವರು .ಕೊನೆಗೆ ನಾನು ಅಲ್ಲಿ ರಾಜೀನಾಮೆ ಕೊಟ್ಟು ಹೋಗುವಾಗ ಕೂಡಾ ಬಂದು ನನ್ನೊಡನೆ ಮಾತನಾಡುವ ಸೌಜನ್ಯ ತೋರಲಿಲ್ಲ . ಆದರೆ ನನ್ನೊಡನೆ ಇದ್ದ  ನನ್ನ ವಿದ್ಯಾರ್ಥಿಗಳು ,ಇಂಟರ್ನ್ ಗಳು ಮತ್ತು ಕಿರಿಯ ವೈದ್ಯರು ಪ್ರೀತಿಯ ಮಾತುಗಳನ್ನು ಅಡಿ ಬಿಟ್ಟು ಕೊಟ್ಟರು . 

ಇದನ್ನು ಬರೆಯಲು ಕಾರಣ ,ನಮ್ಮ ಮನೆಯಲ್ಲಿ ಅಥವಾ ಸಂಸ್ಥೆಯಲ್ಲಿ ತಮ್ಮ ಶಕ್ತ್ಯಾನುಸಾರ ಪ್ರಾಮಾಣಿಕವಾಗಿ ದುಡಿದವರು ಬಿಟ್ಟು ಹೋಗುವಾಗ ಒಳ್ಳೆಯ ನುಡಿಗಳನ್ನು ಅಡಿ ಕಳುಹಿಸುವುದು ಒಳ್ಳೆಯ ಸಂಪ್ರದಾಯ .ಅದೇ ರೀತಿ ತಮಗೆ ಕೆಲಸ ಕೊಟ್ಟು ನೆಲೆ ಒದಗಿಸಿದವರನ್ನು ಬಿಡುವಾಗ ಮುಂದಾಗಿ ಕ್ರಮ ಪ್ರಕಾರ ತಿಳಿಸಿ ಕೃತಜತೆ ಸಲ್ಲಿಸುವುದು ನೌಕರನ ಕರ್ತವ್ಯ ;ಬೇರೆ ಕಡೆ ಹಸಿರು ಹುಲ್ಲುಗಾವಲು ಕಂಡಾಗ ಪಣಾಂದೆ ಪೋ ಮಾಡ ಬಾರದು  

ಮಂಗಳವಾರ, ಡಿಸೆಂಬರ್ 28, 2021

ಕಳಚಿದ ಕೊಂಡಿ ಬೃಜ್ ವಿ ಲಾಲ್

                                                     Brij Lal (historian) - Wikipedia

                                                                  The Encyclopaedia of the Indian Diaspora by Brij V. Lal: Very Good (2007) |  AwesomeBooks        

                                                               ON THE OTHER SIDE OF MIDNIGHT: A Fijian Journey ಮೊನ್ನೆ ೨೫ . ೧೨. ೨೦೨೧ ರಂದು ಬ್ರಿಜ್ ವಿ ಲಾಲ್  ಆಸ್ಟ್ರೇಲಿಯಾ ದೇಶದಲ್ಲಿ ತೀರಿ ಕೊಂಡ ವಾರ್ತೆ ಬಂದಿದೆ . ಜಗತ್ತಿನಾದ್ಯಂತ ಭಾರತೀಯರ ವಲಸೆ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ ,ಹಲವು ಮೌಲಿಕ ಗ್ರಂಥಗಳನ್ನು ಕೊಟ್ಟವರು.

 ಭಾರತೀಯರ ವಲಸೆ ಚರಿತ್ರೆಯನ್ನು ಅಧ್ಯಯನ ಮಾಡುವುದು  ನನಗೆ ಬಹಳ ಇಷ್ಟ . ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಈಗಿನ ವೆಸ್ಟ್ ಇಂಡಿಸ್ ,ಮಾರಿಷಿಯಸ್ ,ಸೂರಿನಾಮೆ ಮತ್ತು ಪೂರ್ವದಲ್ಲಿ ಫಿಜಿ ದೇಶಕ್ಕೆ ಮುಖ್ಯವಾಗಿ  ಈಗಿನ  ಉತ್ತರ ಪ್ರದೇಶ ಮತ್ತು ದಕ್ಷಿಣದ ತಮಿಳುನಾಡು ರಾಜ್ಯಗಳಿಂದ  ಸಾವಿರಾರು  ಕಾರ್ಮಿಕರನ್ನು (ಇವರನ್ನು ಗಿರ್ಮಿಟ್ಟಿಯಾ ಎಂದು ಕರೆಯುತ್ತಿದ್ದರು ) ಕರೆದೊಯ್ಯಲಾಗಿತ್ತು . ಮುಂದೆ ಅವರು ಅಲ್ಲಿಯೇ ನೆಲಸಿ ಬದುಕು ಕಟ್ಟಿಕೊಂಡರು . ಇನ್ನು ಮಲೇಷ್ಯಾ ,ಸಿಂಗಾಪುರ್ ,ಆಫ್ರಿಕಾ ದ ದೇಶಗಳಲ್ಲಿ ಕೂಡಾ ಬೇರೆ ಬೇರೆ ಕಾರಣಕ್ಕೆ ಭಾರತೀಯರು ತೆರಳಿ ಅಲ್ಲಿಯೇ ನೆಲೆಸಿರುವರು . ಅವರು ತಮ್ಮೊಡನೆ ನಾಡಿನ ಸಂಸ್ಕೃತಿ ,ಉಡುಗೆ ತೊಡುಗೆ ,ಭಾಷೆ ಇತ್ಯಾದಿಗಳನ್ನೂ ಒಯ್ದು ಕಾಪಾಡಿ ಕೊಂಡು ಬಂದಿರುವರು . 

ಬ್ರಿಜ್ ವಿ ಲಾಲ್ ಅವರ ಅಜ್ಜ ಈ ರೀತಿ ಫಿಜಿ ದೇಶಕ್ಕೆ ಬಂದವರು . ಬ್ರಿಜ್ ವಿ ಲಾಲ್ ಅಲ್ಲಿಯೇ ಹುಟ್ಟಿ ಬೆಳೆದು ,ಇತಿಹಾಸದಲ್ಲಿ ಉನ್ನತ ಅಧ್ಯಯನ ಮಾಡಿ  ದೇಶದ ರಾಜಕಾರಣದಲ್ಲಿಯೂ ಪಾಲ್ಗೊಂಡವರು . ಫಿಜಿಯ ಮಿಲಿಟರಿ ಕ್ರಾಂತಿ ಯ ಬಳಿಕ ಅವರನ್ನು ಗಡೀಪಾರು ಮಾಡಲಾಗಿ ಆಸ್ಟೇಲಿಯಾ ದೇಶದಲ್ಲಿ ನೆಲಸಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು .ಫಿಜಿ ಭಾರತೀಯ ಜನಜೀವನ ವಸ್ತುವಾಗಿ ಉಳ್ಳ ಕಥಾ ಸಂಕಲಗಳನ್ನು ರಚಿಸಿದ್ದಾರೆ . ಇವರ ಬಹಳ ಮುಖ್ಯ ಕೊಡುಗೆ  ಭಾರತೀಯ ವಲಸೆ ಚರಿತ್ರೆಯ ವಿಶ್ವಕೋಶ . ನನ್ನಲ್ಲಿ ಕೂಡಾ ಒಂದು ಪ್ರತಿ ಇದ್ದು ಒಳ್ಳೆಯ ಆಕರ ಗ್ರಂಥ . 'ಮಿಸ್ಟರ್ ತುಳಸಿಸ್ ಸ್ಟೋರ್ .ಎ ಫಿಜಿಯನ್ ಜರ್ನಿ " ಎಂಬ ಆತ್ಮಕಥೆ ಬಹಳ ಜನಪ್ರಿಯ ಕೃತಿ.

ಇವರ ಪ್ರಸಿದ್ಧ ಕಥಾ ಸಂಕಲನ "ಆನ್ ದಿ ಅದರ್ ಸೈಡ್ ಒಫ್ ಮಿಡ್ ನೈಟ್ "ನಮ್ಮ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ್ದು ಲಭ್ಯವಿದೆ . ಲಿಂಕ್ ಕೆಳಗೆ ಕೊಟ್ಟಿದೆ . 

 https://www.nbtindia.gov.in/books_detail__7__indian-diaspora-studies__2416__on-the-other-side-of-midnight.nbt

 

ಮದ್ಯಪಾನ ಮತ್ತು ಆರೋಗ್ಯ

ಚಳಿಗಾಲ ತಡವಾಗಿ ಬಂದಿದೆ . ನಮ್ಮ ಊರಿನಲ್ಲಿ ಅರೋಗ್ಯ ಕರ ದಿನಗಳು ಎನ್ನ ಬಹುದು . ಇದಕ್ಕೆ ಅಪವಾದ ಎಂಬಂತೆ ಕೆಮ್ಮು ದಮ್ಮು ಕಾಯಿಲೆಗಳು ,ಜತೆಗೆ  ಮದ್ಯಪಾನ ಸಂಬಂದಿ ರೋಗಗಳು ಮಾತ್ರ ಸ್ವಲ್ಪ ಹೆಚ್ಚು . 

ಮದ್ಯಪಾನ ಅತಿಯಾದರೆ ಆರೋಗ್ಯಕ್ಕೆ ಹಾನಿಕರ . ಒಂದು ಸಮಸ್ಯೆ ಇದೆ ,ಒಬ್ಬನ ಮಿತಿಯೂ ಇನ್ನೊಬ್ಬನಿಗೆ ಅತಿ ಆಗಬಹದು . 

ಆಲ್ಕೋಹಾಲ್ ತಲೆಯಿಂದ ಕಾಲಿನ ವರೆಗೆ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರ ಬಲ್ಲುದು . ಹಲವು ವರ್ಷ ಮದ್ಯ ಪಾನ ಮಾಡುತ್ತ ಇದ್ದವರು ಅದರ ಮೇಲೆ  ಮಾನಸಿಕ ಮತ್ತು ಶಾರೀರಿಕವಾಗಿ ಅವಲಂಬಿತ ವಾಗುವುದು ಕೂಡಾ ಕಾಯಿಲೆ ಎಂದು ಪರಿಗಣಿಸಲ್ಪಡುತ್ತದೆ .(Alcohol Dependence). 

ಇಂತಹವರು ಏಕಾ  ಏಕಿ ಮದ್ಯ ಸೇವನೆ ನಿಲ್ಲಿಸಿದರೆ (ಅಥವಾ ಸೇವಿಸಲು ಸಿಗದಿದ್ದರೆ )ಕೈ ಕಾಲು ನಡುಗುವುದು ,ನಿದ್ದೆ ಬರದು ,ಯಾರ್ಯಾರೋ ಆಕ್ರಮಣ ಮಾಡಲು ,ಕೊಲ್ಲಲು ಬಂದಂತೆ ಕಾಣುವುದು ,ಕೆಲವೊಮ್ಮೆ ಅಪಸ್ಮಾರ ಬರುವುದು . ಇಂತಹವರಿಗೆ ಮದ್ಯಪಾನ ಹುಲಿಯ ಮೇಲಿನ ಸವಾರಿಯಂತೆ . ಅವರಿಗೆ ಮದ್ಯ ವರ್ಜನೆಗೆ ಸಹಾಯ ಮಾಡಲು ವೈಜ್ಞಾನಿಕ ಮಾರ್ಗಗ ಳು ಇವೆ . 

ಇನ್ನು ಎಲ್ಲರೂ ಬಲ್ಲಂತೆ ಮದ್ಯವು ವಿಶೇಷ ಹಾನಿ ಮಾಡುವದು ಲಿವರ್ ಗೆ .ಲಿವರ್ ನಮ್ಮ ಶರೀರದ ಮುಖ್ಯ ಕಾರ್ಯಾಂಗ ಮತ್ತು ಗೋದಾಮು .. ಇಲ್ಲಿಯೇ ಹಲವು ವಿಷಗಳ ನಿಷ್ಕ್ರಿಯ ಗೊಳಿಸುವಿಕೆ ಕೂಡಾ . ದೇಹಕ್ಕೆ ಬೇಕಾದ ಗ್ಲುಕೋಸ್ ,ಸಸಾರ ಜನಕ , ಪಿತ್ತರಸ ,ರಕ್ತ ಹೆಪ್ಪುಗಟ್ಟಿಸುವ ವಸ್ತುಗಳ ಉತ್ಪಾದನೆ ,ವಿಟಮಿನ್ ಗಳ ನಿರ್ವಹಣೆ ಇಲ್ಲಾ ಮಾಡುವ ಅಂಗ . 

ದೀರ್ಘಕಾಲ ಮದ್ಯ ಸೇವನೆ ಮೊದಲು ಲಿವರ್ ನಲ್ಲಿ ಕೊಬ್ಬು ಹೆಚ್ಚು ಮಾಡುವುದು .ಇದನ್ನು ಫ್ಯಾಟಿ ಲಿವರ್ ಎನ್ನುವರು .(ಇದು ಬೊಜ್ಜು ಇರುವವರಲ್ಲಿ ,ಸಕ್ಕರೆ ಕಾಯಿಲೆ ಉಳ್ಳವರಲ್ಲಿ ಕೂಡಾ ಇರುವದು .). ಮುಂದೆ ಲಿವರ್ ನ ಉರಿಯೂತ ಉಂಟು ಮಾಡಿ  ಜಾಂಡೀಸ್ ಪ್ರಕಟ ಆಗ ಬಹುದು . ಇದಕ್ಕೆ ಮದ್ಯಪಾನ ನಿಲುಗಡೆ ಮತ್ತು ಉತ್ತಮ ಆಹಾರ ಸೇವನೆಯೇ ಚಿಕಿತ್ಸೆ . ಅವಗಣಿಸಿದರೆ ಮುಂದೆ ಲಿವರ್ ನ ಜೀವ ಕೋಶಗಳು ನಶಿಸಿ ,ಅದರ ಬದಲಿಗೆ ನಿಷ್ಕ್ರಿಯ ನಾರು  ಬರುವದು . ಇದನ್ನೇ  ಲಿವರ್ ಸಿರೋಸಿಸ್ ಎನ್ನುವರು .ಇದು ಮುಂದೆ ಲಿವರ್ ಕ್ಯಾನ್ಸರ್ ಕೂಡಾ ಆಗ ಬಹುದು . 

 Morphology of Alcoholic Liver Disease | Medchrome(ಮುಂದುವರಿಯುವುದು )

ಸೋಮವಾರ, ಡಿಸೆಂಬರ್ 27, 2021

ಮರೆಯಲಾಗದ ಹಾಡು

                         ಮರೆಯಲಾಗದ ಹಾಡು 

೧೯೭೭ ರಲ್ಲಿ ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಪ್ರಸಿದ್ಧ ಕೃತಿ ಹೇಮಾವತಿಯನ್ನು ಆದರಿಸಿ ಅದೇ ಹೆಸರಿನ ಚಿತ್ರ ಬಂದಿತ್ತು . ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದಲ್ಲಿ ಜಿ ವಿ ಐಯ್ಯರ್ ನಟಿಸಿದ್ದು ವಿಶೇಷ . 

ಚಿತ್ರಕ್ಕೆ ಸಂಗೀತ ಸಂಯೋಜನೆ ಎಲ್ ವೈದ್ಯನಾಥನ್ . ಇವರು ಪ್ರಸಿದ್ಧ  ವಯೊಲಿನ್ ತ್ರಿಮೂರ್ತಿ ಸಹೋದರರಾದ ಎಲ್ ಸುಬ್ರಹ್ಮಣ್ಯಂ ,ಎಲ್ ಶಂಕರ್ ಮತ್ತು ಎಲ್ ವೈದ್ಯನಾಥನ್ ಪೈಕಿ ಓರ್ವರು . 

ಚಿತ್ರದಲ್ಲಿ ಚಿ ಉದಯ ಶಂಕರ್ ಬರೆದ ಶಿವ ಶಿವ ಎನ್ನದ ಎಂಬ ಹಾಡು ಇದೆ .ಕಚೇರಿ ರೂಪದಲ್ಲಿ ಚಿತ್ರೀಕರಣ .ವೈದ್ಯನಾಥನ್ ಆಭೋಗಿ ಮತ್ತು ತೋಡಿ ಯಲ್ಲಿ ಇದನ್ನು ಅಳವಡಿಸಿ  ದೀರ್ಘ ನೆರವಲ್ ಇಡುವ ಯೋಜನೆ ಹಾಕಿದ್ದು ,ಗಾಯಕಿ ಎಸ ಜಾನಕಿಯವರಿಗೆ  ಪಕ್ಕ ವಾದ್ಯಕ್ಕೆ ದಿಗ್ಗಜ  ಪಿಟೀಲು ವಾದಕ ಎಂ ಎಸ ಗೋಪಾಲಕೃಷ್ಣನ್ ಅವರನ್ನು ಕೇಳಿದ್ದರು . ವೈದ್ಯನಾಥನ್ ಕೇಳಿಕೊಂಡ ಕಾರಣ ಎಂ ಎಸ ಜಿ ಒಪ್ಪಿಕೊಂಡಿರಬೇಕು . 

ಹಾಡಿನ ಸಂಗೀತ ಹರಹು ನೋಡಿದ ಎಂ ಎಸ ಗೋಪಾಲಕೃಷ್ಣನ್ ಕೊನೆಯ ನೆರವಲ್ ಭಾಗ ಸಂಕೀರ್ಣವೂ ,ವೇಗವಾದ ತಾಳದಲ್ಲಿಯೂ ಇರುವ  ಸ್ವಯಂ ಶಾಸ್ತ್ರೀಯ ಸಂಗೀತ ವಿದುಷಿ ಅಲ್ಲದ ಕಾರಣ ಎಸ್ ಜಾನಕಿಯವರಿಗೆ ಕಷ್ಟವಾದೀತು ;ಆ ಭಾಗವನ್ನು ತಾನು ಮಾತ್ರ  ವಯಲಿನ್ ನಲ್ಲಿ  ನುಡಿಸುವೆನು ಎಂದರಂತೆ .ಅದಕ್ಕೆ ಎಸ ಜಾನಕಿಯವರ ಪ್ರತಿಭೆಯನ್ನು ಸರಿಯಾಗಿ ಬಲ್ಲ  ನಿರ್ದೇಶಕ 'ಇಲ್ಲ ಅವರು ಚೆನ್ನಾಗಿ ಹಾಡಿಯಾರು "ಎಂದು  ಎಂ ಎಸ ಜಿ ವಯೊಲಿನ್ ಜತೆ ಅವರ ಹಾಡು ಯಶಸ್ವಿ ಯಾಗಿ ರೆಕಾರ್ಡ್ ಮಾಡಿದರಂತೆ . ಗೋಪಾಲಕೃಷ್ಣನ್ ಅವರು ತುಂಬಾ ಸಂತೋಷ ಪಟ್ಟು ತಲೆದೂಗಿದರಂತೆ .. 

 S. Janaki - WikipediaL. Vaidyanathan - WikipediaLegendary violinist MS Gopalakrishnan passes away at 82-Entertainment News  , Firstpost

Chi. Udayashankar - Wikipedia                   https://youtu.be/Xbo9sVrlz0k

ಶನಿವಾರ, ಡಿಸೆಂಬರ್ 25, 2021

ಮಂಜು ಹಿಮ ಮತ್ತು ಇಬ್ಬನಿ

                           ಮಂಜು ,ಹಿಮ ಮತ್ತು ಇಬ್ಬನಿ 

ಈಗ ಚಳಿಗಾಲ . ವಾತಾವರಣದಲ್ಲಿ ಉಷ್ಣತೆ ಕಡಿಮೆ ಆಗಿ ಮೇಲೆ ಇರುವ ನೀರಾವಿ ಸಾಂದ್ರ ಗೊಂಡು ಇಳೆಗೆ ಇಳಿಯುವುದು .ಇವುಗಳ ನಾಮಕರಣ ದ  ಬಗ್ಗೆ ಕೆಲವರಲ್ಲಿ  ಗೊಂದಲ ಇದ್ದು ಅದರ ನಿವಾರಣೆಗೆ ಈ ಲೇಖನ .

ಮಂಜು

 ಇವು ನೀರ ಹನಿಗಳಾಗಿ  ಮೋಡ ಮುಸುಕಿದ ತರಹ ಇದ್ದರೆ  ಮಂಜು ಎನ್ನುತ್ತೇವೆ . ತಮ್ಮೊಡನೆ ವಾತಾವರಣದ  ಧೂಳು  ಕಲ್ಮಶಗಳನ್ನೂ ಒಳಗೊಂಡು ಇರುವ ಕಾರಣ ಅಲರ್ಜಿ ಉಂಟು ಮಾಡ ಬಲ್ಲವು  . ತಲೆಗೆ ಟೊಪ್ಪಿ ಶಾಲು ಹಾಕಿದರೆ ಇದನ್ನು ತಡೆಗಟ್ಟಲು ಅಸಾಧ್ಯ . ಹೊರ ಹೋಗುವಾಗ ಸಾಮಾನ್ಯ ಮಾಸ್ಕ್ ಹಾಕಿಕೊಂಡರೆ ಸಾಕು . ಚಳಿಗಾಲದಲ್ಲಿ ನಮ್ಮ ಚರ್ಮದಂತೆ ,ಶ್ವಾಸ ನಾಳದ ಒಳಮೈ ಒಣಗಿದ್ದು ,ಯಾವತ್ತೂ ಅದರ ಮೇಲಿರುವ ರಕ್ಷಣಾತ್ಮಕ ಆರ್ದ್ರತೆ ಯೂ ಕಡಿಮೆ ಇರುವುದು ಕೆಮ್ಮು ದಮ್ಮು ಆರಂಭಕ್ಕೆ ಕಾರಣ .

Hills, Trees, Fog, Morning Fog, Foggy

               

                                                                                                                                                   

ಹಿಮ 

ಗಗನದಲ್ಲಿ ಮೋಡದೊಳಗಣ ಅವಿ ತಂಪಾಗಿ ಹರಳುಗಟ್ಟಿ ಭುವಿಗೆ ಧವಳ  ಹಾಸು ವಾಗುವುದನ್ನು  ಹಿಮ ಎನ್ನುವರು . 

 7 Best Places to See Snowfall in India | Winter Snow Destinations                                                                                                    

ಇಬ್ಬನಿ 

ಸಾಂದ್ರ ಗೊಂಡ ನೀರ ಹನಿಗಳು ಹುಲ್ಲು , ಮರ ಗಿಡಗಳ ಎಲೆಗಳು ,ಜೇಡರ ಬಲೆ ,ಮನೆಯ ಮಾಡು ಇತ್ಯಾದಿಗಳ ಮೇಲೆ ಸಲಿಲ ಬಿಂದುಗಳಾಗಿ ,ಇಬ್ಬನಿ ಎಂದು ಕರೆಯಲ್ಪಡುತ್ತವೆ . ತೋಟಕ್ಕೆ ಹೋದಾಗ ಗಾಳಿ ಬೀಸಿದೊಡನೆ ನಮ್ಮ ಮೇಲೆ ಪನ್ನೀರ ಸಿಂಚನ ಆಗುವುದು . 

dew point | meteorology | Britannica


ಶುಕ್ರವಾರ, ಡಿಸೆಂಬರ್ 24, 2021

English ಯಕ್ಷಗಾನ ಮತ್ತು ಪಿ ವಿ ಐತಾಳ ಕುಟುಂಬದ ಕೊಡುಗೆ

                                    


೧೯೭೩ ನೇ ಇಸವಿ ಇರಬೇಕು . ಮಂಗಳೂರು ಕೊಡಿಯಾಲ ಬೈಲಿನ ಕರ್ನಾಟಕ  ಬ್ಯಾಂಕ್ ಹಾಲ್ ನಲ್ಲಿ ಒಂದು ಅಪೂರ್ವ ಕಾರ್ಯಕ್ರಮಕ್ಕೆ ಹೋಗಿದ್ದೆ .ಎಂದು ಇಂಗ್ಲಿಷ್ ತಾಳಮದ್ದಳೆ . ಪ್ರಸಂಗ ನೆನಪಿಲ್ಲ .ಎಲ್ ಐ ಸಿ ಅನಂತ ರಾಮ ರಾವ್ ಮತ್ತು ಪ್ರಭಾಕರ ಜೋಶಿ ಮುಖ್ಯ ಅರ್ಥ ದಾರಿಗಳು .ಭಾಗವತರು ಕನ್ನಡದಲ್ಲಿಯೇ ಪದ ಹೇಳುವರು ;ಅರ್ಥ ದಾರಿಗಳು ಮಾತ್ರ ಇಂಗ್ಲಿಷ್ ನಲ್ಲಿ ಸಂಭಾಷಣೆ . ಕಮ್ ಆನ್ ಭೀಮ ಸೇನಾ  ಲೆಟ್ ಅಸ್ ಫೈಟ್ ಇತ್ಯಾದಿ ಇರಬೇಕು . ಕನ್ನಡ ಭಾಷೆ ಬಾರದವರಿಗೆ ತಾಳಮದ್ದಳೆ ಪರಿಚಯಿಸುವ ಒಳ್ಳೆಯ ಪ್ರಯತ್ನ .ಶಿವರಾಮ ಕಾರಂತರು ಸಂಭಾಷಣೆ ಇಲ್ಲದೆಯೇ ಅಭಿನಯದಿಂದ ಅರ್ಥ ಸೂಚಿಸುವ ಬ್ಯಾಲೆ ಮಾಡಿದ್ದರು .ಆದರೆ ಯಕ್ಷಗಾನದಲ್ಲಿ ಸಂಭಾಷಣೆ ಒಂದು ಕಲೆ ; ಒಂದು ವಿಚಾರಕ್ಕೆ ಹಲವು ಮಗ್ಗುಲುಗಳನ್ನು ತೋರ ಬಲ್ಲ ಸಂಹವನ ಅಲ್ಲದೆ ಪಾಮರರಿಗೆ ಕಲೆಯನ್ನು ಹತ್ತಿರ ಒಯ್ಯಲು ಸಾಧನ . 

ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಶ್ರೀ ಪಿ ಐತಾಳ್ ಇಂಗ್ಲಿಷ್ ಯಕ್ಷಗಾನದ ಸಾಹಸ ಕ್ಕೆ ಕೈ ಹಾಕಿ ಶ್ರದ್ದೆಯಿಂದ ಬೆಳೆಸಿದವರು .ಅವರ ಮಕ್ಕಳಾದ ಡಾ ಸತ್ಯ ಮೂರ್ತಿ ಐತಾಳ ಮತ್ತು ಸಂತೋಷ ಐತಾಳ ಮತ್ತು ಕುಟುಂಬದವರು ಅದನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತೋಷ .. ಇವರ ತಂಡದವರು ಶಾಸ್ತ್ರೀಯ ವಾದ  ನಟನೆ ಕಲಿತು ಕುಣಿತ  ,ಸಂಭಾಷಣೆ ಮಾತ್ರ ಇಂಗ್ಲಿಷ್ ನಲ್ಲಿ , ಸ್ವಲ್ಪ ಗ್ರಾಂಥಿಕ ಇಂಗ್ಲಿಷ್ ಆದುದರಿಂದ  ಅಭಾಸ ಎನಿಸುವುದಿಲ್ಲ . ಉದಾ
I am Tarakasura, the indomitable emperor of Rakshasas at Shonikapura..The kind and merciful Lord Bramhadeva manifested before me and granted me a boon to the effect that I have no death except from the offspring of Lord Shankara.. HA HA HA.”

 ಅಖಿಲ ಭಾರತೀಯ ಸಮ್ಮೇಳನ ಗಳಲ್ಲಿ ಇವರ ತಂಡ ತಮ್ಮ ಕಾರ್ಯಕ್ರಮ ಪ್ರದರ್ಶಿಸಿ ಮೆಚ್ಚಿಗೆ ಗಳಿಸಿದೆ . ಡಾ ಸತ್ಯಮೂರ್ತಿ ಐತಾಳರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಮೆಡಿಕಲ್ ಕಾಲೇಜು ಪ್ರಾಧ್ಯಾಪಕರು ,ನನ್ನ ಸನ್ಮಿತ್ರರು . ಅವರ ಭಾವ ಚಿತ್ರ ಮತ್ತು ಯಕ್ಷಗಾನ ವೇಷದ ಚಿತ್ರ ಇದರೊಂದಿಗೆ ಕೊಟ್ಟಿದ್ದೇನೆ .. 

ಪೂರ್ಣ ಇಂಗ್ಲಿಷ್ ಯಕ್ಷಗಾನ "ಗದಾ ಯುದ್ದ "ಪ್ರಸಂಗ ನೋಡಲು ಕೆಳಗಿನ ಲಿಂಕ್ ಬಳಸಿರಿ

 https://youtu.be/tW_jSHLjh7k

 

ಗುರುವಾರ, ಡಿಸೆಂಬರ್ 23, 2021

ಸವ್ಯ ಸಾಚಿ ಶಿರಂಕಲ್ಲು ಈಶ್ವರ ಭಟ್

 

                                                               5.9.1922----28.1.2008

 

ಕನ್ಯಾನದಿಂದ ದಕ್ಷಿಣಕ್ಕೆ ಪಿಲಿಂಗುಳಿ ಗುಡ್ಡ ದಾಟಿ ಎರಡು ಮೈಲಿ ದೂರದಲ್ಲಿ ಶಿರಂಕಲ್ಲು ;ಹಿಂದೆ ಕಾಲು ದಾರಿ ಮಾತ್ರವಿದ್ದು ಈಗ ರಸ್ತೆ ಸೌಕರ್ಯ ಇದೆ . 

ಶಿರಂಕಲ್ಲು ಎಂದೊಡನೆ ಥಟ್ಟ್ ಎಂದು ನೆನಪಿಗೆ ಬರುವುದು ಶಿರಂಕಲ್ಲು ಈಶ್ವರ ಭಟ್ . ಇವರು ಪ್ರಗತಿಪರ  ಕೃಷಿಕ ,ಶಿಕ್ಷಣ ಪೋಷಕ , ವಾಗ್ಮಿ ,ಲೇಖಕ ,ಜ್ಯೋತಿಷಿ ,ಯಕ್ಷಗಾನ ಅರ್ಥದಾರಿ ಮತ್ತು ಎಣೆಯಿಲ್ಲದ ದಣಿವಿಲ್ಲದ ಪ್ರವಾಸಿ .  ೧೯೫೨ ರಿಂದ ೨೦೦೦ ಇಸವಿ ವರೆಗೆ ಹಲವು ಬಾರಿ ನೇಪಾಳ ಸೇರಿ ಹಿಮಾಲಯ ದರ್ಶನ ,ಚತುರ್ಧಾಮ ಪ್ರವಾಸ .ಅಮರನಾಥ ,ಮುಕ್ತಿನಾಥ ಯಾತ್ರೆ ಸೇರಿ . ಮೊದಮೊದಲ ಯಾತ್ರೆಗಳ ಸಮಯ ಸರಿಯಾದ ರಸ್ತೆಗಳು ,ಸೌಕರ್ಯ ಇತ್ಯಾದಿ ಇರಲಿಲ್ಲ ,ಈಗಿನಂತೆ ಫೋನ್ ಸೌಕರ್ಯ ಹೇಗೂ ಇಲ್ಲ . ತಮ್ಮ ಹಿಂದಿ ಭಾಷಾ ಜ್ಞಾನ ಮತ್ತು ದೃಢ ಸಂಕಲ್ಪ ಇವರಿಗೆ ಜತೆ . 

ಈ ಪ್ರವಾಸಗಳ ನಂತರ ಶಾಲೆಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು ಅವರ ಭಾಷಣ ಕೇಳಲು ಸುತ್ತ ಮುತ್ತಲಿನ ಆಸಕ್ತರು ಬರುತ್ತಿದ್ದರು .ಇವು ಕೆಲವು ಅಳಿಕೆಯಿಂದ ಬರುತ್ತಿದ್ದ ಸೇವಾಮೃತದಲ್ಲಿ ಧಾರವಾಹಿ ಯಾಗಿ ಬಂದು ಪುಸ್ತಕ ರೂಪ ತಾಳಿದವು .ಮುಕ್ತಿನಾಥನ ಪಥದಲ್ಲಿ ,ಅಮರನಾಥ ದರ್ಶನ ,ಹಿಮಾಲಯದ ಚತುರ್ಧಾಮ ದರ್ಶನ ,ಭಾರತದ ಚತುರ್ಧಾಮ ಯಾತ್ರೆ ,ಅವಂತಿಕಾ ಪ್ರವಾಸ ಇವರ ಜನಪ್ರಿಯ ಪ್ರವಾಸ ಕಥನಗಳು .. 

ಇದಲ್ಲದೆ  ಶಂಕರ ಭಗವತ್ಪಾದರು ,ವಿಶ್ವ ಮಾನವಧರ್ಮ ಇತ್ಯಾದಿ  ಮೌಲಿಕ ಕೃತಿಗಳನ್ನೂ ಬರೆದು ಪ್ರಕಟಿಸಿರುವರು . 

ಇವರು ಮತ್ತು ತಮ್ಮ ನಾರಾಯಣ ಭಟ್  ಜ್ಯೋತಿಷ್ಯ ಶಾಸ್ತ್ರ  ಪಾರಂಗತರು .  ಹಲವು ವರ್ಷ ಕಾಲ ವೈಜಯಂತಿ  ಪಂಚಾಂಗದ  ಸಹ ಕರ್ತೃ ಆಗಿದ್ದು ಹೊಸ ಪಂಚಾಂಗ  ಬಂದೊಡನೆ ನಮ್ಮೂರಿನವರಾದ ಅವರ ಹೆಸರು ಓದಿ ಸಂತೋಷ ಪಡುತ್ತಿದ್ದೆವು . ಇವರ ಮನೆಯವರು ಯಾರೂ ಧನಾರ್ಜನೆಗಾಗಿ ಈ ವೃತ್ತಿಯನ್ನು  ಕೈಕೊಂಡ ಹಾಗೆ ಇಲ್ಲ . 

ಕುಗ್ರಾಮ ಶಿರಂಕಲ್ಲು ವಿನಲ್ಲಿ  ಪ್ರಾಥಮಿಕ ಶಾಲೆ ಇವರ ಪ್ರಯತ್ನ ದಿಂದಲೇ ಆರಂಭವಾಗಿ ಸುತ್ತು ಮುತ್ತಲಿನ ಮಕ್ಕಳಿಗೆ ವಿದ್ಯಾರ್ಜನೆಗೆ  ಬಹಳ ಅನುಕೂಲ ಆಯಿತು . 

ಈಶ್ವರ ಭಟ್ ಶ್ರಮ ಜೀವಿ ,ಸರಳ ಶ್ವೇತ ವಸನಧಾರಿ ,ಶ್ಯಾಮ ವರ್ಣ ,ಮುಖದಲ್ಲಿ ಮಂದಹಾಸ ,ಮೃದು ಮತ್ತು ಮಿತ ಭಾಷಿ . ಸಭೆಯಲ್ಲಿ ಮಂತ್ರ ಮುಗ್ದ ಮಾಡುವ ವಾಗ್ಮಿ .ಸಂಸ್ಕೃತ ,ಕನ್ನಡ ಮತ್ತು ಹಿಂದಿ ಭಾಷೆ ಗಳಲ್ಲಿ ಪಾಂಡಿತ್ಯ . ಅವರ  ಪ್ರವಾಸ ಅನುಭವ ಭಾಷಣ ಮತ್ತು ಶಾಲಾ ವಾರ್ಷಿಕೋತ್ಸವಗಳಲ್ಲಿ ಅತಿಥಿಯಾಗಿ ಮಾತು  ಕನ್ಯಾನ ಶಾಲೆಯಲ್ಲಿ ಕೇಳಿ ಪ್ರಭಾವಿತನಾಗಿದ್ದೆ .ನಮ್ಮ  ಕುಟುಂಬದ ಹಿತೈಷಿ ಮತ್ತು ಮಾರ್ಗದರ್ಶಿ ಯಾಗಿದ್ದ ಅವರು ನಮ್ಮ ತಂದೆಯವರ ಬಗ್ಗೆ ಅವರ ವೈಕುಂಠ ಸಮಾರಾಧನೆ ದಿನ ಆಡಿದ ಮಾತು ನಮ್ಮೆಲ್ಲರ ನೆನಪಿನಲ್ಲಿ ಇನ್ನೂ ಇದೆ . 

            ಈಶ್ವರ ಭಟ್ ಸಂಸಾರಿ ಯಾಗಿದ್ದೂ ಋಷಿಯಂತೆ ಬಾಳಿದವರು . ನಮ್ಮ ಊರಿಗೆ ಒಳ್ಳೆಯ ಹೆಸರು ತಂದವರು .ಮಡದಿ ದೇವಕಿ ಅಮ್ಮ ಅವರ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವರು . ಮಕ್ಕಳು ಹೈ ಸ್ಕೂಲ್ ಗೆ ಕನ್ಯಾನ ಕ್ಕೆ ಬರುತ್ತಿದ್ದು ನಮ್ಮ ಮಿತ್ರರು . ಶಿವರಾಮ ಭಟ್ ನನ್ನ ಸಹಪಾಠಿ . 

ಇವರ ಬಗ್ಗೆ ಶಿರಂಕಲ್ಲು ಗಣಪತಿ ಭಟ್ ಅವರು ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ "ಹಿಮಾಲಯ ಸದೃಶ ಕರ್ಮಯೋಗಿ ಶಿರಂಕಲ್ಲು ಈಶ್ವರ ಭಟ್ಟ"ಎಂಬ ಪುಸ್ತಕ ಬರೆದಿದ್ದಾರೆ .

                         



ಬುಧವಾರ, ಡಿಸೆಂಬರ್ 22, 2021

ಖ್ಯಾತ ಅರ್ಥ ಶಾಸ್ತ್ರಜ್ನ ಮತ್ತು ಭಾರತ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ಪಾಲಿಸಿ ಮೇಕರ್ಸ್ ಜರ್ನಲ್ ಓದುತ್ತಿದ್ದೇನೆ .ಡೈರಿ ಬರಹಗಳ ಸಂಕಲನ . ಪುಸ್ತಕದ ಉದ್ದಕ್ಕೂ ಲೇಖಕರ ಹಾಸ್ಯ ಪ್ರಜ್ನೆ ಮತ್ತು ಡೌನ್ ಟು ಅರ್ಥ್ ಎನ್ನಬಹುದಾದ  ನಿಲುವು ನಮ್ಮನ್ನು ಸರಾಗ ಓದಿಸಿ ಕೊಂಡು ಹೋಗುತ್ತದೆ . 

ಇದರಲ್ಲಿನ ಒಂದು ಉಲ್ಲೇಖ ; ಲೇಖಕರು ತಮ್ಮ ಹಳೆಯ ಪ್ರಬಂಧ ಗಳ ಸಂಕಲನ 'ಏಕೋನೋಮಿಸ್ತ್ಸ್ ಮಿಸೆಲೆನಿ ' ಎಂಬ ಹೆಸರಿನಿಂದ ಆಕ್ಸ್ ಫರ್ಡ್ ಯೂನಿವರ್ಸಿಟೀ ಪ್ರೆಸ್ ಪ್ರಕಟಿಸಲಿದ್ದು ,ಅದರಲ್ಲಿ ತಾವು ಡಾ ಮನ ಮೋಹನ್ ಸಿಂಗ್ ಅವರನ್ನು ಮೊದಲು ಭೇಟಿಯಾದ ಬಗ್ಗೆ (ಸಿಂಗ್ ರಾಜ ಕಾರಣಕ್ಕೆ ಬರುವ ಮೊದಲು ),ಮತ್ತು ಅದರಲ್ಲಿ ಅವರ ವಿನಯ ಮತ್ತು ಸರಳತೆಯ ಬಗ್ಗೆ ಉಲ್ಲೇಖ ಇತ್ತು .ತಾವು ಸದ್ಯ ಸರಕಾರದ ಸೇವೆಯಲ್ಲಿ ಇರುವ ಕಾರಣ ಪ್ರಧಾನ ಮಂತ್ರಿಯ ಕಚೇರಿಗೆ ಆ ಲೇಖನ ಸೇರಿಸಲು ,(ಕಾನೂನು ಪ್ರಕಾರ ಅವಶ್ಯಕತೆ ಇಲ್ಲದಿದ್ದರೂ )ಅನುಮತಿ ಕೇಳಿ ಪತ್ರ ಬರೆದಿದ್ದುದಾಗಿಯೂ ,ಕೆಲ ದಿನಗಳ ನಂತರ ಪ್ರಧಾನಿಯವರ ಕಾರ್ಯದರ್ಶಿ ಫೋನ್ ಮಾಡಿ ಅದನ್ನು ಸೇರಿಸದಿರಲು ಸಲಹೆ ಮಾಡಿದುದಾಗಿ ಬರೆಯುತ್ತಾರೆ . ಯಾವುದೇ ರಾಜಕಾರಿಣಿ ತನ್ನನ್ನು ಹೊಗಳಿಸಿ ಕೊಳ್ಳುವ ಅವಕಾಶ ಬಿಡುವುದುಂಟೇ ?ಎಂದು ಆಶ್ಚರ್ಯ ಪಡುವ ಸರದಿ ಲೇಖಕರದ್ದು . 

ಇನ್ನೊಂದು ಪ್ರಸಂಗ .ಅಮಾರ್ತ್ಯ ಸೇನ್ ಒಂದು ಸಭೆಯಲ್ಲಿ ಮನಮೋಹನ್ ಸಿಂಗ್ ಮಯನ್ಮಾರ್ ಸೈನ್ಯ ಆಡಳಿತ ಬಗ್ಗೆ ಕಠಿಣ ನಿಲುವು ತೆಗೆದು ಕೊಳ್ಳದ ಬಗ್ಗೆ ಅವರ ಸನ್ಮುಖದಲ್ಲಿಯೇ  ಟೀಕಿಸುತ್ತಾರೆ .ಆದರೆ ಸಿಂಗ್ ಅವರ ದೊಡ್ಡ ಗುಣ ಟೀಕೆ ಮತ್ತು ಹೊಗಳಿಕೆಗಳನ್ನು ಕ್ರೀಡಾ ಮನೋಭಾವ ದಿಂದ ಸಮವಾಗಿ ಸ್ವೀಕರಿಸುವುದು ಎಂದು ಬರೆದಿದ್ದಾರೆ .

ಮಂಗಳವಾರ, ಡಿಸೆಂಬರ್ 21, 2021

ಡಾ ಎನ್ ಟಿ ಭಟ್

              ಡಾ ಎನ್ ಟಿ ಭಟ್ 

                    

ಕೆಲವು ವರ್ಷಗಳ ಹಿಂದೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಓರ್ವ ಹಿರಿಯರು ತಮ್ಮ ವಿಡಿಯೋ ಉಪಕರಣಗಳ ಸಹಿತ ಹಾಜರಾಗಿ ಯಾರದೇ ಸಹಾಯ ಇಲ್ಲದೆ .   ದಾಖಲೀಕರಿಸುವದನ್ನು ಕುತೂಹಲದಿಂದ ನೋಡಿ  ಆಶ್ಚರ್ಯ ಪಡುತ್ತಿದ್ದೆ .ಇವರು ಬೇರಾರೂ ಅಲ್ಲ ಬಹು ಭಾಷಾ ಪಂಡಿತರೂ ,ಲೇಖಕರೂ ,ನಿವೃತ್ತ ಪ್ರಾಧ್ಯಾಪಕರೂ ಆದ ಶ್ರೀ ಏನ್ ಟಿ ಭಟ್ (ನೀರ್ಕಜೆ ತಿರುಮಲೇಶ್ವರ ಭಟ್ )ಅವರು . ೮೨ ವರ್ಷದ ಯುವಕರು . ಮೊನ್ನೆ ಕಾರ್ಯಕ್ರಮ ವೊಂದಕ್ಕೆ ಪುತ್ತೂರಿಗೆ ಬಂದವರು ನನ್ನ ಅಹ್ವಾನ ಸ್ವೀಕರಿಸಿ ಮನೆಗೆ ಬಂದಿದ್ದು ,ಯಾವುದೇ ವಿಶ್ರಾಂತಿ ಗೆ ಒಪ್ಪದೇ ಸಾಹಿತ್ಯ ಮತ್ತು ಪುಸ್ತಕಗಳ ಬಗ್ಗೆ  ಮೂರು ಗಂಟೆಗಳ ವಿಚಾರ ವಿನಿಮಯ ಆಯಿತು . ಬಹಳ ಸಂತೋಷದ ವಿಚಾರ . 

ಎನ್ ಟಿ  ಭಟ್ ಉಡುಪಿ ಎಂ ಜಿ ಎಂ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಇದ್ದವರು . ಜರ್ಮನ್ ಭಾಷೆಯಲ್ಲಿ  ಪಾರಂಗತರು . ಜರ್ಮನಿಯಲ್ಲಿ ಪಿ ಎಚ್ ಡಿ ಗಳಿಸಿರುವ ಇವರು ಈ ಭಾಷೆಯಿಂದ ಮತ್ತು ಭಾಷೆಗೆ ಹಲವು ಕೃತಿಗಳನ್ನು ಮತ್ತು ಕನ್ನಡದಿಂದ ಇಂಗ್ಲಿಷ್ ಗೆ ಕೂಡಾ ಹಲವನ್ನು ಭಾಷಾಂತರ ಮಾಡಿದ್ದಾರೆ .ತಮ್ಮ  ಜರ್ಮನಿ ದಿನಗಳನ್ನು ಕುರಿತ ಪುಸ್ತಕದಿಂದ ಹಿಡಿದು ಇತ್ತೀಚೆಗಿನ ಭಾಷಾಂತರ ಸಹಾಯಕ ಕೈಪಿಡಿಯ  ವರೆಗೆ ಹಲವು ಮೌಲಿಕ ಕೃತಿಗಳನ್ನು ನೀಡಿದ್ದಾರೆ .  ಎಂ ಗೋವಿಂದ ಪೈ , ಕು ಶಿ ಹರಿದಾಸ್ ಭಟ್ , ಡಾ ಕೆ  ಪಿ  ರಾವ್ ,ಹೇರಂಜೆ ಕೃಷ್ಣ ಭಟ್ ಬಗ್ಗೆ ಬರೆದ ಪರಿಚಯಾತ್ಮಕ ಪುಸ್ತಕಗಳು ಸೇರಿವೆ . ಆತ್ಮ ಚರಿತ್ರೆ ಕೂಡಾ.

 

ಇವರಿಗೆ  ಸೇಡಿಯಾಪು ಪ್ರಶಸ್ತಿ ,ಜರ್ಮನ್ ಸರಕಾರದ ಆರ್ಡರ್ ಆಫ್ ಮೆರಿಟ್ ಇತ್ಯಾದಿ ಪ್ರಶಸ್ತಿಗಳು ಇವರನ್ನು ಅರಸಿ ಬಂದವು . ಇನ್ನೂ ಕೊಡ ಮಾಡಿಲ್ಲದ ಎಷ್ಟೋ ಉಪಾಧಿಗಳಿಗೆ ಇವರು ನಿಜಕ್ಕೂ ಅರ್ಹರು . 

ನನ್ನ ಪತ್ನಿ .ಅಣ್ಣಂದಿರಿಗೆ ಇವರು ಕಲಿಸಿದ ಗುರುಗಳು .ಇವರ ಮಕ್ಕಳು ಸೊಸೆಯಂದಿರು ಎಲ್ಲಾ ತಜ್ಞ  ಮತ್ತು ಹೆಸರು ಮಾಡಿದ ವೈದ್ಯ ವೈದ್ಯೆಯರು.

ಇವರ ಜೀವನೋತ್ಸಹ ಕುಂದದಿರಲಿ . ಅರೋಗ್ಯ ,ಮನ ಶಾಂತಿ ಯಿಂದ ಇರಲಿ ಎಂದು ಹಾರೈಸೋಣ

ಸೋಮವಾರ, ಡಿಸೆಂಬರ್ 20, 2021

ಕಾನತಿಲ ಮಹಾಲಿಂಗ ಭಟ್


 ನಾನು ಚೆನ್ನೈ ರೈಲ್ವೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯ .ನಮ್ಮ ಊರಿನವರು ಒಬ್ಬರು ಶ್ರೀ ನಾರಾಯಣ ಭಟ್ ಎಂಬ ಸಜ್ಜನ ಮೆದುಳಿನ ಗಡ್ಡೆಯ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದರು .ಅವರಿಗೆ ಶಸ್ತ್ರ ಚಿಕಿತ್ಸೆ ಆಗಿ ಹಲವು ದಿನ ಆಸ್ಪತೆಯಲ್ಲಿಯೇ ಇದ್ದರು .ಅವರ ಜತೆ ಅವರ ಪತ್ನಿ ,ಮಗ ಮತ್ತು ಕೆಲವು ಹಿತೈಷಿಗಳು ಉಪಚಾರಕ್ಕೆ ನಿಲ್ಲುತ್ತಿದ್ದರು . 

ಒಂದು ದಿನ ಓರ್ವ ಹಿರಿಯರು ಹೀಗೆ ಅವರಿಗೆ ಸಹಾಯಕ್ಕೆ ಬಂದವರ ಪರಿಚಯ ಆಯಿತು .ಅವರು ಚೆನ್ನೈ ನ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನ ಸಂಸ್ಕೃತ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು .ವಿಶ್ವ ವಿದ್ಯಾಲಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದ್ದು ,ಸೆನೆಟ್ ಸದಸ್ಯರೂ ಆಗಿದ್ದರು ಎಂದು ನೆನಪು . ಅವರು ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ನೆಲದಲ್ಲಿ ಶೀಟ್ ಹಾಕಿ ಕೊಂಡು ಮಲಗಿ ರೋಗಿಯ ಉಪಚಾರ ಮಾಡಿ ,ಮೆನೆಯವರಿಗೆ ಸ್ವಲ್ಪ ವಿಶ್ರಾಂತಿ ಕೊಡುವರು . ಸ್ವಯಂ ಹಿರಿಯ ಪ್ರಾಧ್ಯಾಪಕರು ,;ರೋಗಿ ತನ್ನ ಮನೆಯವರೋ ಅಲ್ಲ . ಪರಿಚಯದವರು ,ಊರಿನವರು ತಮ್ಮಿಂದಾದ ಸಹಾಯ ಮಾಡುವಾ ಎಂದು ಬಂದವರು . 

ಹೀಗೆ ಪರಿಚಯವಾಗಿ ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸುವ ಅವಕಾಶವೂ ಸಿಕ್ಕಿತ್ತು .ಚೆನ್ನೈ ಕನ್ನಡ ವಲಯದಲ್ಲಿ ಅವರಿಗೆ ತುಂಬಾ ಗೌರವ ಸ್ಥಾನ ಇತ್ತು .ನಿವೃತ್ತರಾದ ಬಳಿಕ ಊರಿಗೆ ಮರಳಿ    ಕೃಷಿ ಮತ್ತು ಸಂಸ್ಕೃತ ಭಾಷಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಒಂದು ವರ್ಷದ ಹಿಂದೆ ತೀರಿ ಕೊಂಡರು. 

ಹಿರಿಯ  ಚೇತನಕ್ಕೆ  ನಮನ .

ಶನಿವಾರ, ಡಿಸೆಂಬರ್ 18, 2021

ಎಂ ಎಲ್ ವಸಂತಕುಮಾರಿ ,ಪುರಂದರ ದಾಸ ,ಯು ರಾಮ ರಾವು

 ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀಮುಕುಂದ ಬಂದಂತೆ                                                   ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ನಿನ್ನ ನಾಮವು ಎಲ್ಲ ನಾಲಿಗೆಯಲಿ ಬಂದು
ಸಲಹೋ ಪುರಂದರವಿಠಲ.

ಈ ಉಗಾಭೋಗ ಕೇಳಿದೊಡನೆ ನೆನಪಾಗುವುದು ಎಂ ಎಲ್ ವಿ ಅಮ್ಮ

 मङ्गलम् on Twitter: "The credit for popularizing Purandara Dasa  compositions in Tamil Nadu must go to the great Madras Lalithangi. She not  only mastered them but also published a book 'Purandara ManiM L Vasanthakumari ಇಂದು ನಾವು ಕಚೇರಿಗಳಲ್ಲಿ  ಪುರಂದರ ದಾಸರ ದೇವರ ನಾಮಗಳನ್ನು ಕೇಳಿ ಸಂತೋಷ ಪಡುತ್ತೇವೆ . ಇವುಗಳನ್ನು ಸಂಗ್ರಹಿಸಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವಲ್ಲಿ  ಖ್ಯಾತ ಕಲಾವಿದೆ ಎಂ ಎಲ್ ವಸಂತ ಕುಮಾರಿ ಮತ್ತು ಅವರ ತಾಯಿ ಮದ್ರಾಸ್ ಲತಾಂಗಿ ಅವರ ಕೊಡುಗೆ  ಅನನ್ಯ ವಾಗಿದ್ದು ರಸಿಕರು ಸದಾ ನೆನಪಿನಲ್ಲಿ ಇಟ್ಟು ಕೊಳ್ಳ ಬೇಕಾದುದು . 

ಡಾಕ್ಟರ್ ಉಡುಪಿ ರಾಮ ರಾವ್  (೧೮೭೪-೧೯೫೨)ಉಡುಪಿಯಿಂದ  ಮದ್ರಾಸ್ ನಗರಕ್ಕೆ ಬಂದು ವೈದ್ಯಕೀಯ ಕಲಿತು ಅಲ್ಲಿಯೇ ವೃತ್ತ್ತಿ ಆರಂಭಿಸಿ ಜನ ಪ್ರಿಯರಾದುದಲ್ಲದೆ , ಸಾಮಾಜಿಕ ,ರಾಜಕೀಯ ಮತ್ತು ಕಲಾ ರಂಗಗಳಲ್ಲಿ ತೊಡಗಿಸಿ ಪ್ರಸಿದ್ದರಾದವರು . ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ಆಯ್ಕೆಯಾಗಿ ಅದರ ಅಧ್ಯಕ್ಷರೂ ಆಗಿದ್ದವರು . ಸಂಗೀತ ಪ್ರಿಯರು ಆಗಿದ್ದ ಇವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪಕ ರಲ್ಲಿ ಒಬ್ಬರು ಮತ್ತು ಅದರ ಅಧ್ಯಕ್ಷರೂ  ಆಗಿದ್ದವರು .ಅವರ ಹೆಸರಿನ ಕಲಾ ಸಭಾಭವನ ಚೆನ್ನೈನಲ್ಲಿ ಇದೆ . 

ಮದ್ರಾಸ್ ಲತಾಂಗಿ ವೈದ್ಯಕೀಯ ಸಲಹೆಗಾಗಿ ಬಂದು ಮತ್ತು ಹಾಡುಗಾರ್ತಿಯಾಗಿ ರಾಮರಾಯರಿಗೆ ಪರಿಚಿತ.ರಾಮರಾಯರ ಮನೆಗೆ ಪುರಂಧರ ದಾಸರ ಪೀಳಿಗೆಯ ಶ್ರೀ ನರಸಿಂಹ ದಾಸ ಎಂಬುವರು  ಬಂದಿದ್ದು ,ಅವರ  ಸಂಗ್ರಹದಲ್ಲಿ ಹಲವು ದೇವರ ನಾಮಗಳು ಇವೆಯೆಂದು ಅರಿತ ರಾಮರಾಯರು ಅವನ್ನು ಶಾಸ್ತ್ರೀಯವಾಗಿ ಸಂಗ್ರಹಿಸಲು ಲತಾಂಗಿ ಯವರಿಗೆ ಸೂಚಿಸಲು ತಾಯಿ ಮಗಳು ಸುಮಾರು ಒಂದು ವರ್ಷ ಆಗಾಗ ಅವರನ್ನು ಭೇಟಿ ಮಾಡಿ ಆ ಕಾರ್ಯವನ್ನು ಭಕ್ತಿ ಪೂರ್ವಕ ಮಾಡಿದರು . 

        ಆದರೆ ಅದನ್ನು ಪ್ರಕಟಿಸ ಬೇಕೆನ್ನುವಾಗ ಎರಡನೇ ಮಹಾ ಯುದ್ಧ ದ  ಕಾರಣ  ತಮ್ಮ ವರಮಾನ ಕಡಿತವಾಗಿ ಅವರಿಗೆ ಕಷ್ಟವಾಯಿತು . ಆಗ ಶ್ರೀ ರಂಗ ರಾಮಾನುಜ ಅಯ್ಯಂಗಾರ್ ಎಂಬ ಸಂಗೀತಜ್ಞ ಮತ್ತು  ಇಂಗ್ಲಿಷ್ ಅಧ್ಯಾಪಕರು ತಮ್ಮ ಅಸ್ತಿ ಸ್ವಲ್ಪ ಮಾರಿ  ಈ ಒಳ್ಳೆಯ ಕಾರ್ಯಕ್ಕೆ ಹಣ ಕೂಡಿಸಿ  ಕೊಟ್ಟುದಲ್ಲದೆ ಹಿಂದೂ ಪತ್ರಿಕೆಯ ಶ್ರೀ ಕಸ್ತೂರಿ ಶ್ರೀನಿವಾಸನ್ ಅವರಿಗೆ ವಿನಂತಿ ಮಾಡಿ  ಪತ್ರಿಕಾ ಕಾಗದ ಸಂಪಾದಿಸಿ ಕೊಟ್ಟು ,"ಪುರಂದರ ದಾಸ ಮಣಿಮಾಲಾ "ಎಂಬ  ಅಪೂರ್ವ ಮೌಲಿಕ ಕೃತಿ ಬಿಡುಗಡೆಗೆ ಪೂರಕ ಶಕ್ತಿಯಾಗುತ್ತಾರೆ . 

ಎಂ ಎಲ್ ವಸಂತ ಕುಮಾರಿ (ಮದ್ರಾಸ್ ಲತಾಂಗಿ ವಸಂತ ಕುಮಾರಿ )ದಾಸರ ಕೃತಿಗಳನ್ನು ತಮ್ಮ ಕಚೇರಿಗಳಲ್ಲಿ ಹಾಡಿ  ಪ್ರಚುರ ಪಡಿಸಿದ್ದಲ್ಲದೆ ,ಗ್ರಾಮೋಫೋನ್  ರೆಕಾರ್ಡ್ ಗಳನ್ನೂ ತಂದರು . ಅವರ ಕನ್ನಡ  ಸಾಹಿತ್ಯ ಶುದ್ಧ , ;ತಪ್ಪುಗಳು ಸಿಗವು .. ಅವರಿಗೆ ೧೯೭೬ ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು  ಎಲ್ಲಾ ರೀತಿಯಲ್ಲಿಯೂ ಅವರು ಅರ್ಹರು . 

ದಾಸರ ಅನೇಕ ರಚನೆಗಳನ್ನು ಉಗಾಭೋಗ ವಾಗಿ ಹಾಡಿ  ಪ್ರಸಿದ್ಧ ಪಡಿಸಿದರು . 

ಎಂ ಎಲ್ ವಸಂತಕುಮಾರಿ ಯವರ  ಮತ್ತೊಂದು ದೊಡ್ಡ ಸಾಧನೆ ಹಲವು ಶಿಷ್ಯರನ್ನು ತಯಾರು ಮಾಡಿದ್ದು .ಅವರಲ್ಲಿ ಸುಧಾ ರಘುನಾಥನ್ , ಎ ಕನ್ಯಾಕುಮಾರಿ ,ತ್ರಿಚೂರ್ ರಾಮಚಂದ್ರನ್ ಮತ್ತು ಅವರ ಪತ್ನಿ ಚಾರುಮತಿ  ಮುಂತಾದ ಘಟಾನುಘಟಿಗಳು ಇದ್ದಾರೆ . ಸ್ವಯಂ ಎಂ ಎಲ್ ವಿ ತನ್ನ ತಾಯಿ ,ತಂದೆ ಮತ್ತು ಪ್ರಖ್ಯಾತ ಗಾಯಕ ಜಿ ಏನ್ ಬಾಲಸುಬ್ರಹ್ಮಣ್ಯಂ ಅವರಲ್ಲಿ ಶಿಷ್ಯತ್ವ ಮಾಡಿದವರು . 

ಎಂ ಎಲ್ ವಸಂತಕುಮಾರಿ ,ಎಂ ಎಸ ಸುಬ್ಬಲಕ್ಷ್ಮಿ ಮತ್ತು ಡಿ ಕೆ ಪಟ್ಟಮ್ಮಾಳ್ ಅವರನ್ನು ಮಹಿಳಾ ಸಂಗೀತ ತ್ರಿಮೂರ್ತಿಗಳು ಎಂದು ಕರೆಯುತ್ತಿದ್ದುದರಲ್ಲಿ ಉತ್ಪ್ರೇಕ್ಷೆ ಇಲ್ಲ .. 

 https://youtu.be/bAaP6y1cwag

ಗುರುವಾರ, ಡಿಸೆಂಬರ್ 16, 2021

ನಮ್ಮ ಪ್ರೀತಿಯ ರಾಮ ರಾವು ಮಾಷ್ಟರು

                                                                    


ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀ ರಾಮ ರಾಯರು ಇಂದು ಬಂದಿದ್ದರು. ಹಿರಿಯರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದಾಗ ಸಂತೋಷ ಆಗುವುದು . ರಾಮ ರಾಯರದು ಪಾದರಸದಂತಹ ವ್ಯಕ್ತಿತ್ವ .ಈಗಲೂ ಹಾಗೆಯೇ ಇದ್ದಾರೆ . ಸಣ್ಣ ಪುಟ್ಟ ಸಮಸ್ಯೆಗಳು ಬಿಟ್ಟರೆ ಚೆನ್ನಾಗಿದ್ದಾರೆ ;ಇರಲಿ .

ರಾಮರಾಯರು ನಮ್ಮ ಪಿ ಟಿ ಟೀಚರ್ ಆಗಿ ನಾನು ಮೂರನೆಯೊ ನಾಲ್ಕನೆಯಲ್ಲಿಯೋ ಇರುವಾಗ ಬಂದರು . ಅವರು ಬಂದು ಒಂದು ಕ್ರಾಂತಿಯೇ ನಡೆಯಿತು .ಅದು ವರೆಗೆ ನಮ್ಮ ಕೊನೆಯ ಆಟದ ಪೀರಿಯಡ್ ಒಂದು ಶಾಸ್ತ್ರಕ್ಕೆ ಮಾತ್ರ ಇದ್ದು ,ನಾವು ಕೊತ್ತಣಿಕೆ ಕ್ರಿಕೆಟ್ ,ಕಬ್ಬಡಿ ,ಹುಡುಗಿಯರು ಜಿಬಿಲಿ ಆಡಿ ಸಂತೋಷ ಪಡುತ್ತಿದ್ದೆವು .ಪಾಠವೇ ಮುಖ್ಯ ಆಟ ಅಲ್ಪ ಎಂಬ ಮನೋಭಾವ ವ್ಯಾಪಕ ಆಗಿತ್ತು .ರಾಮ ರಾಯರು ಬಂದದ್ದೇ ,ಕ್ರೀಡಾ ಚಟುವಟಿಕೆಗಳು ಗರಿ ಗೆದರಿ  ಶಾಸ್ಟ್ರೀಯ ಕಬ್ಬಡಿ,ಖೋ ಖೋ ,ಕ್ರಿಕೆಟ್ ಮತ್ತು ವಾಲಿ ಬಾಲ್ ,ಟೆನ್ನಿ ಕೋಯಿಟ್ ಇತ್ಯಾದಿಗಳ ಪರಿಚಯ ಆಯಿತು .ಶಾಲೆಯಲ್ಲಿ ಅಂತರ್ಶಾಲಾ ಕ್ರೀಡಾ ಕೂಟಗಳ ಆಯೋಜನೆ ಆಯಿತು . ಪಾಠ ಪ್ರವಚನ ಗಳಷ್ಟೇ  ಕ್ರೀಡಾ ಚಟುವಟಿಕೆ ಗಳಿಗೆ ಪ್ರಾಶಸ್ತ್ಯ ಬಂತು .

ಜತೆಗೆ ನಮ್ಮ ಶಾಲೆಯಲ್ಲಿಯೂ ಭಾರತ ಸೇವಾ ದಳದ ಶಾಖೆ ಆರಂಭವಾಗಿ ಸಮವಸ್ತ್ರ ,ಡ್ರಿಲ್ ಇತ್ಯಾದಿ ಅಭ್ಯಾಸ ಆಯಿತು .,ನಾನೂ ಸೇವಾ ದಳದಲ್ಲಿ ಇದ್ದು ದಲ್ಲದೆ  ಮೈಸೂರು ನಗರದಲ್ಲಿ ನಡೆದ ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದು ಜಿಲ್ಲೆ ಬಿಟ್ಟು ಹೊರ ಹೋಗಿದ್ದು ಅದೇ ಮೊದಲು .(ಕಾಸರಗೋಡು ತಾಲೂಕು ಬಿಟ್ಟರೆ ). 

 ರಾಮರಾಯರು ಶಿಸ್ತಿಗೆ ಹೆಸರುವಾಸಿ . ತರಲೆ ಮಾಡಿದವರಿಗೆ ಶಾಸ್ತಿ ತಪ್ಪಿದ್ದಲ್ಲ . ಅವರು ಕರೆದಾಗ ಎಲ್ಲ ಮಕ್ಕಳೂ ಭಯ ಭಕ್ತಿಯಿಂದ ಹೋಗುತ್ತಿದ್ದರು . ಈಗಲೂ ಅವರನ್ನು ಕಾಣುವಾಗ ನಾನು ಅಟೆನ್ಷನ್ ಗೆ ಬರುತ್ತೇನೆ .

ಅವರ ಇಳಿ ವಯಸ್ಸಿನ ಜೀವನ  ಮನಶಾಂತಿಯಿಂದ ತುಂಬಿರಲಿ .

ಮುಂದೆ ನಾನು ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಇದ್ದ ಸಮಯ ನನ್ನ ಪ್ರಾಥಮಿಕ ಶಾಲೆಗೆ ಒಂದಿಷ್ಟು ಆಟದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದೆ . ಅದನ್ನು ಸ್ವೀಕರಿಸಿದ  ಮುಖ್ಯೋಪಾಧ್ಯಾಯರು ಈಗ ಶಾಲೆಗೆ ಆಟೋಪಕರಣಗಳನ್ನು ಕೊಳ್ಳಲು ಸಾಕಷ್ಟು ಅನುದಾನ ಬರುತ್ತಿದೆ ಎಂದು ತಿಳಿಸಿದಾಗ ಸಂತೋಷ ಆಯಿತು . ಒಂದು ಸಾರಿ ಶಾಲಾ ವಾರ್ಷಿಕೋತ್ಸವಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದಿದ್ದರು .ವೇದಿಕೆಯಿಂದ ನಾನು ಪುಟಾಣಿಗಳಿಗೆ ಒಂದು ಪ್ರಶ್ನೆ ಕೇಳಿದೆ "ಹೆದರದೇ ಹೇಳಿ ನಿಮಗೆ ಆಟ ಹೆಚ್ಚು ಇಷ್ಟವೋ ಪಾಠವೋ ?"ಬಹುಮತ ಆಟಕ್ಕೆ ಬಂತು . ಅದು ಮಕ್ಕಳು . ಅದಕ್ಕೇ ಈಗ ನಲಿ ಕಲಿ ಇತ್ಯಾದಿ ಅಳವಡಿಸಿ ಕೊಂಡಿದ್ದಾರೆ .ಮಕ್ಕಳು ಆಟವಾಡುತ್ತಲೇ ಕಲಿಯಬೇಕು . 

ಒಂದೇ ಬೇಸರ ಹಿಂದೆ ಶಾಲೆಗಳ ಸ್ಕೂಲ್ ಡೇ ಅಹೋರಾತ್ರಿ ನಡೆಯುತ್ತಿದ್ದು ಸುತ್ತು ಮುತ್ತಲಿನ ಗ್ರಾಮದ ಜನರು ಬಂದು ಆನಂದಿಸುತ್ತಿದ್ದರು .ನಾಟಕ ,ಯಕ್ಷಗಾನ ರಾತ್ರಿಯೇ ರೈಸುವುದು .ಈಗ ಸಮಾಜ ವಿರೋಧಿ ಶಕ್ತಿಗಳಿಗೆ ಹೆದರಿ ಹಗಲೇ ನಡೆಸುತ್ತಿದ್ದಾರೆ . ಅದಕ್ಕೆ ಒಂದು ಚಂದ ಇಲ್ಲ ಎಂದು ನನ್ನ ಅನಿಸಿಕೆ .ರಾಮ ರಾವ್ ಮಾಸ್ಟ್ರಂತಹವರು ಇದ್ದರೆ ಇಂತಹ ಪೋಲಿ ಶಕ್ತಿಗಳು ತಲೆ ಎತ್ತಲು ಬಿಡುತ್ತಿರಲಿಲ್ಲ

 

ಮದುರೈ ಮಣಿ ಅಯ್ಯರ್

                              img.discogs.com/nHu7mPbDdB3f6cqSVcu2expB4kg=/fi...

 

ಒಂದು ದಿನ ರಾತ್ರಿ ಆಸ್ಪತ್ರೆ ಕರ್ತವ್ಯ ಮುಗಿಸಿ ದಣಿವಾರಿಸಲು ಪವಡಿಸಿದ್ದೆ ; ಏನೋ ಸಂಗೀತ ಕೇಳುವಾ ಎಂದು ಒಂದು ಸಿ ಡಿ ಹಾಕಿದೆ . ನನಗೆ ಮಂಪರು ,ಅರೆ ನಿದ್ರೆ . ಕಲ್ಯಾಣಿ ರಾಗದ ಕೃತಿ ,ಮದುರೈ ಮಣಿ ಅಯ್ಯರ್ ಧ್ವನಿಯಲ್ಲಿ (ರಾಗಂ ತಾನಂ ಪಲ್ಲವಿ ಇರ ಬೇಕು ).ಕೇಳುತ್ತಾ ಸ್ವರ್ಗದಲ್ಲಿ ವಿಹರಿಸಿದ ಭಾವನೆ ,ವಯಲಿನ್ ನಲ್ಲಿ ಕೂಡಾ ಯಾರೋ ಘಟಾನುಘಟಿ ಇದ್ದರು . ಸುಮಾರು ಒಂದು ವರೆ  ಘಂಟೆ ಒಂದೇ ರಾಗ ,ಒಂದೇ ಕೃತಿ . ಮುಗಿಯುವಾಗ ರಸ ಭಂಗ ಆಗಿ ಎಚ್ಚರ ಆಯಿತು .ಇದು ವರೆಗೆ ನನಗೆ ಅಂತಹ ಅನುಭವ ಆಗಿರಲಿಲ್ಲ ,ಮುಂದೆಯೂ ಆಗಿಲ್ಲ .ಅದು ಮಣಿ ಅಯ್ಯರ್ ಅವರ ಜಾದು . 

ನಾನು ಮಣಿ ಅಯ್ಯರ್ ಅವರನ್ನು ಕಂಡಿಲ್ಲ ,ಕೇಳಿದ್ದು ಮಾತ್ರ . ಅವರು ಒಬ್ಬ ಸಂಗೀತ ಯುಗ ಪುರುಷ . ಜಿ ಏನ್ ಬಾಲಸುಬ್ರಹ್ಮಣ್ಯಮ್ ,ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತು ಮಣಿ ಅಯ್ಯರ್ ಅವರನ್ನು ಸಂಗೀತ ಗಾಯಕ ತ್ರಿಮೂರ್ತಿಗಳು ಎಂದು ಕರೆಯುತ್ತಿದ್ದರು . ಹೆತ್ತವರು ಇಟ್ಟ ಹೆಸರು ಸುಬ್ರಮಣಿಯನ್ .ಪ್ರಸಿದ್ದಿ ಆದುದು ಮಣಿ ಅಯ್ಯರ್ ಎಂದು . ಖ್ಯಾತ ಗಾಯಕ ಟಿ ವಿ ಶಂಕರ ನಾರಾಯಣನ್ ಇವರ ಸೋದರ ಅಳಿಯ ಮತ್ತು ಶಿಷ್ಯ . ಶಂಕರ ನಾರಾಯಣನ್ ಅವರ ತಂದೆ ವೆಂಬು ಅಯ್ಯರ್ ಇವರ ಪಟ್ಟದ ಶಿಷ್ಯ ಮತ್ತು ಕಚೇರಿ  ಸಂಗಾತಿ . 

ಇವರ ಬಗ್ಗೆ ಅನೇಕ ಕತೆಗಳು ಇವೆ . ಎಲ್ಲವುಗಳ ಮೂಲ ಸಂದೇಶ  ಇವರು ಜನ ಸಾಮಾನ್ಯರ  ಭಾವನೆಗಳಿಗೆ ಗೌರವ ಕೊಡುತ್ತಿದ್ದರು ಎಂದು . ಎಷ್ಟೋ ಬಾರಿ ಕಚೇರಿ ಮುಗಿಸಲು ಆಗುವಾಗ ಸಭೆಯಿಂದ ಕೋರಿಕೆ ಬಂದರೆ ಅದನ್ನು ಈಡೇರಿಸಿಯೇ ಮಂಗಳ ಹಾಡುತ್ತಿದ್ದರು .ಒಂದು ಭಾರಿ ರೈಲ್ವೆ ಸ್ಟೇಷನ್ ನಲ್ಲಿ ರೈಲಿಗೆ ಕಾಯುತ್ತಿರುವಾಗ ಪೋರ್ಟರ್ ಗಳ  ಅಪೇಕ್ಷೆಯಂತೆ  ಸನಿಹದ ಗುಡಿಯಲ್ಲಿ ರೈಲು ಬರುವ ತನಕ ಹಾಡಿದರಂತೆ  . ಇವರ ಕಲ್ಯಾಣಿ  ರಾಗ ನಿರ್ವಹಣೆ ಕೇಳಲು ರೈಲಿನಲ್ಲಿ ಬಂದ ರಸಿಕರು ತಡವಾದುದರಿಂದ ಅದನ್ನು ಕೇಳಲು ಆಗಲಿಲ್ಲ ಎಂದು ತಿಳಿದು ಅದೇ ಕಚೇರಿಯಲ್ಲಿ ಕಲ್ಯಾಣಿಯನ್ನು ಪುನಃ ಪ್ರಸ್ತುತ ಪಡಿಸಿದರಂತೆ . ಒಂದು ಕಚೇರಿಯಲ್ಲಿ ಪ್ರೇಕ್ಷಕರ ಅಪೇಕ್ಷೆಯಂತೆ ಕ್ಷೀರ ಸಾಗರ ಕೃತಿ ಹಾಡಿ ಮುಗಿಸಿದಾಗ ಸಭೆಯಿಂದ 'ಎಪ್ಪೋ  ವರುವಾರ್ "ಎಂದು ಕೇಳಲು ಇದೋ ಇಪ್ಪೋ ವರುವಾರ್(ಇದೋ ಈಗ ಬರುತ್ತಾರೆ ) ಎಂದು ಗೋಪಾಲಕೃಷ್ಣ ಭಾರತಿಯವರ ಜನಪ್ರಿಯ ಕೃತಿ ಹಾಡಿ    ರಂಜಿಸಿದರಂತೆ . ರಿಕ್ಷಾ ಚಾಲಕರು "  ಸ್ವಲ್ಪ ತಾಳಿ ಮಣಿ ಕಚೇರಿ ಮುಗಿದ ಮೇಲೆ ನಿಮ್ಮನ್ನು ಎಲ್ಲಿ ಬೇಕಾದರೂ ಒಯ್ಯುತ್ತೇವೆ " ಎಂದು ಗಿರಾಕಿಗಳ ಬಳಿ ಹೇಳುತ್ತಿದ್ದರಂತೆ.

ತಿರುವಯ್ಯಾವೂರ್ ತ್ಯಾಗರಾಜ ಉತ್ಸವದಲ್ಲಿ ಎಂ ಎಸ ಸುಬ್ಬಲಕ್ಷ್ಮಿ ಯವರ ನಂತರ ಹಾಡಲು ಅರಿಯಾಕುಡಿ  ರಾಮಾನುಜ ಅಯ್ಯಂಗಾರ್ ಅವರನ್ನು ಕೇಳಲು ಅವರು ಮಣಿಯವನ್ನೇ ಹಾಡಲು ಸೂಚಿಸಿದರಂತೆ ..ಮಹಾತ್ಮಾ ಗಾಂಧಿಯವರ ಅನುಯಾಯಿ ಆಗಿದ್ದ  ಅವರು ಗಾಂಧಿ ಹತ್ಯೆಯ ನಂತರ ಒಂದು ತಿಂಗಳು ಎಲ್ಲಾ ಕಚೇರಿಗಳನ್ನು ರದ್ದು ಪಡಿಸಿದ್ದರು . 

ಖ್ಯಾತ ವೇಣು ವಾದಕ ಟಿ ಆರ್ ಮಹಾಲಿಂಗಂ ಮಣಿ ಅಯ್ಯರ್ ಪಂಡಿತರು ಮತ್ತು ಪಾಮರರು ಇಬ್ಬರನ್ನೂ ಸಮಾನ ತಲುಪಿದ ಕಲಾವಿದ ಎಂದು ಕರೆದಿದ್ದಾರೆ . 

ಇವರ ಇಂಗ್ಲಿಷ್ ನೋಟ್ ಜನಪ್ರಿಯ ಆವಿಷ್ಕಾರ ಆಗಿದ್ದು ಮುಂದೆಯೂ ಹಲವು ಕಲಾವಿದರು ಅದನ್ನು ನುಡಿಸುವದು ಕೇಳಿದ್ದೇನೆ . 

 https://youtu.be/qZDHwkUYbqs

ಬುಧವಾರ, ಡಿಸೆಂಬರ್ 15, 2021

ಮದುವೆ ಮನೆಯ ಸಂಭ್ರಮ

 ಮೊನ್ನೆ ಮುಂಬೈ ಯಲ್ಲಿ ಮದುವೆಗೆ ಹೋಗಿದ್ದೆನಷ್ಟೆ .ಮಂಟಪದ ಬಳಿಯಿಂದ ಕಾರ್ಯ ಕ್ರಮ ವೀಕ್ಷಿಸುವ ಭಾಗ್ಯ ದೊರಕಿತು ;ಇತ್ತೀಚಿನ ದಿನಗಳಲ್ಲಿ ಎತ್ತರದ ಸ್ಟೇಜ್ ನಲ್ಲಿ ನಡೆಯುವ  ಪ್ರಕ್ರಿಯೆ ಗಳಿಗೂ ಕೆಳಗೆ ಕೂತಿರುವ ಅತಿಥಿಗಳಿಗೂ ಯಾವುದೇ ಕನೆಕ್ಷನ್ ಇರುವುದಿಲ್ಲ . ಅಲ್ಲಿ ಮಂಟಪ ಎತ್ತರ ಇರಲಿಲ್ಲ . ಅಲ್ಲಿಯ ನಡಾವಳಿ ನನಗೆ ಹಿಂದಿನ ಮದುವೆಗಳ ನೆನಪುಗಳ ಸರಮಾಲೆ ತಂದಿತು.

ಮದುವೆ ದಿನ ಸನಿಹ ಸಂಬಂದಿಗಳು  ಮದುಮಗಳ ಆಯತ ಮಾಡುವರು . ಆಮೇಲೆ ಚಿಕ್ಕಮ್ಮ ಅಥವಾ ದೊಡ್ಡಮ್ಮ ಆಗಾಗ ಮಂಟಪಕ್ಕೆ ಬಂದು ಜಡೆ ಮತ್ತು ಅದರ ಮೇಲಿನ ಮಲ್ಲಿಗೆ ಮಾಲೆ ಸ್ವಲ್ಪ ಬಲಕ್ಕೆ ಸರಿಸಿ ಹೋಗುವರು .ಸ್ವಲ್ಪ ಹೊತ್ತಿನಲ್ಲಿ ಸೋದರ ಅತ್ತೆ ಬಂದು ಅದನ್ನು ಎಡಕ್ಕೆ ಸರಿಸುವರು . ತಾಳಿ ಧಾರಣೆ ಆದ ಮೇಲೆ ಅದನ್ನು ಭದ್ರ ಪಡಿಸುವರು . ಮದುಮಗಳ ಸೇವೆ ಯ ನೆಪದಲ್ಲಿ ಅವರ ಹೊಸ ಪಟ್ಟೆ ಸೀರೆ ಮತ್ತು  ತೊಟ್ಟ ಆಭರಣ ಪ್ರದರ್ಶನ ಆಗುವುದು . ಕುಳಿತ ಹೆಣ್ಣು ಮಕ್ಕಳು ಅವರನ್ನು ತಮಾಷೆ ಮಾಡುವಾಗ ಹುಸಿ ಕೋಪ ತೋರಿಸುವರು .ಇಲ್ಲಿ ವರನನ್ನು ಕೇರ್ ಮಾಡುವವರು ಯಾರೂ ಇಲ್ಲ .ಪಾದ ಪೂಜೆ ಯೊಡನೆ ಅದಕ್ಕೆಲ್ಲಾ ಫುಲ್ ಸ್ಟಾಪ್ . ಆಗಿನ ವಧುಗಳಿಗೆ ಇದೆಲ್ಲಾ ಅವಶ್ಯ ವಿತ್ತು.ನಾಚಿಕೆ ಮತ್ತು  ಮುಂದೆ ಹೋಗುವ ಮನೆಯ ಬಗ್ಗೆ ಚಿಂತೆ ಯಿಂದ ಅವರಿಗೆ ತಮ್ಮ ಡ್ರೆಸ್ ಮತ್ತು ಅಲಂಕಾರದ ಬಗ್ಗೆ ಮಂಟಪಕ್ಕೆ ಬಂದ ಮೇಲೆ ಗಮನಿಸಲು ಆಗುತ್ತಿರಲಿಲ್ಲ .

ಇನ್ನು ಕೆಲವು ಮನೆಯ ಹಿರಿಯ ಸ್ತ್ರೀಯರು ಪ್ರೋಸಿಜರ್ ಬಗ್ಗೆ ಕಲ್ಪಿತ ಸಂದೇಹಗಳೊಡನೆ ಆಗಾಗ ಮಂಟಪಕ್ಕೆ ಬಂದು ಪುರೋಹಿತರೊಡನೆ ಮಾತನಾಡುವರು. ಭಟ್ರೆ ಹಾಲು ಒಂದು ಕುಡ್ತೆಯೋ ಎರಡೋ ? ಮಣೆ ಯಾವ ದಿಕ್ಕಿಗೆ ಹಾಕುವುದು ?ಇತ್ಯಾದಿ . ಈ ರೀತಿ ಸಭೆಯ ಗಮನ ಸೆಳೆಯುವರು .ಹಳೇ ತಲೆ ಗಳಾದ ಅವರಿಗೆ ಎಲ್ಲಾ ತಿಳಿದಿದ್ದರೂ  ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಿಕೆ ಗಾಗಿ ಇದೆಲ್ಲಾ . ನಾವು ಮಕ್ಕಳು ಕೂಡಾ ಪನ್ನೀರು ಪ್ರೋಕ್ಷಿಸುವ ಮತ್ತು ಹುಡುಗಿಯರು ಆರತಿ ಎತ್ತುವ ಗೌರವ ಸಿಕ್ಕಿದರೆ ಪದ್ಮಶ್ರೀ ಪದವಿ ಸಿಕ್ಕಿದಷ್ಟೇ ಸಂತೋಷ ಪಡುತ್ತಿದ್ದೆವು .

 

ಮಂಗಳವಾರ, ಡಿಸೆಂಬರ್ 14, 2021

 ಸಂಗೀತ ಕೇಳುವುದು ನನ್ನ ಹವ್ಯಾಸ .ಕರ್ನಾಟಕ ಮತ್ತು ಹಿಂದುಸ್ತಾನಿ  ಶಾಸ್ತ್ರೀಯ ,ಹಳೆಯ ಚಿತ್ರ ಗೀತೆಗಳು ಮುಖ್ಯವಾಗಿ . ಶಾಸ್ತ್ರೀಯ ಸಂಗೀತ ದ  ಆಳವಾದ ಜ್ನಾನ ನನಗೆ ಇಲ್ಲ .ಆದರೆ ಅದನ್ನು ಆನಂದಿಸಲು ಅಡ್ಡಿ ಬರದು. ಕೆಲವು ರಾಗಗಳ ಕೀರ್ತನೆ ಆಲಿಸುವಾಗ ಮನಸು ತುಂಬಿ ಕಣ್ಣಲ್ಲಿ ನೀರು ಬರುವುದುಂಟು .ಸಾರಮತಿ ಅಂತಹ ಒಂದು ರಾಗ .ಈ ರಾಗದಲ್ಲಿ ಇರುವ ಮೋಕ್ಷಮು ಗಲದಾ ಬಲು ಇಷ್ಟ .

ಹಿಂದೆ ಶೇಷಾದ್ರಿಪುರ ರಾಮ ನವಮಿ ಉತ್ಸವ ದಲ್ಲಿ  ಪ್ರಸಿದ್ದ ಗಾಯಕ ಶ್ರೀ ಎಂ ಡಿ ರಾಮನಾಥನ್ ಅವರ ಪ್ರಸ್ತುತಿ ಕೇಳಿ ಸಂತೋಷ ಪಟ್ಟಿದ್ದೇನೆ .ರಾಮನಾಥನ್ ಅವರದು ವಿಶಿಷ್ಟ ವಾದ ಮಂದ್ರವೆನ್ನುವ ಶಾರೀರ ,ನಿಧಾನ ಪ್ರಸ್ತುತಿ ;ಯಾವುದೇ ಅವಸರ ,ಸರ್ಕಸ್ ಇರದು . ಆದರೂ ನನ್ನಂತಹ ಯುವಕರನ್ನೂ ಹಿಡಿದಿಟ್ಟು ಕೊಳ್ಳುವ ಆಕರ್ಷಣೆ ಇತ್ತು.ಕಚೇರಿ ನಡೆಯುತ್ತಿರ ಬೇಕಾದಾದರೆ ಶೋತ್ರುಗಳು ಯಾರಾದರೂ ಹರಟೆ ಹೊಡೆಯುವುದು ಕಂಡರೆ ಹಾಡು ನಿಲ್ಲಿಸಿ ಎಚ್ಚರಿಸುವರು . ಅವರು ಮೋಕ್ಷಮುಗಲದಾ ಕೃತಿ ಹಾಡುವಾಗ ಅನುಪಲ್ಲವಿಯಿಂದ ಆರಂಬಿಸಿ ಆಮೇಲೆ ಪಲ್ಲವಿಗೆ ಬರುತಿದ್ದುದು ವಿಶೇಷ .ನಮ್ಮಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಕೂಡಾ ಕೆಲವರು ಹೀಗೆ ಹಾಡುವುದು ಕೇಳಿದ್ದೇನೆ .

https://youtu.be/Adqw6GwBPaM

ಭಾನುವಾರ, ಡಿಸೆಂಬರ್ 12, 2021

ಒಂದು ಸಣ್ಣ ಅರ್ಥ ವಿಚಾರ

 ನಾನು ರೈಲ್ವೆ ವೈದ್ಯಾಧಿಕಾರಿ ಆಗಿ ವರ್ಗಾವಣೆ ಗೊಂಡು ಚಾರ್ಜ್ ತೆಗೆದುಕೊಳ್ಳುವಾಗ ಪ್ರತಿಯೊಂದು ಕಡೆ ಹಳೇ ಕಡತಗಳ ರಾಶಿ ಇರುತ್ತಿದ್ದು ಅದರ ವಿಲೇವಾರಿಯ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ . ಅದರಲ್ಲಿ ರೋಗಿಗಳ ವೈಯುಕ್ತಿಕ ದಾಖಲೆ ಅಥವಾ ದೇಶದ ಸುರಕ್ಷತೆಗೆ ಸಂಬಂದಿಸಿದ ಯಾವುದೇ ಮಾಹಿತಿ ಇರುತ್ತಿರಲಿಲ್ಲ . ಒಂದು ಕಡೆ ಇವನ್ನುರದ್ದಿಗೆ ಹಾಕಲು ನಿರ್ಧರಿಸಿದೆ .ನನ್ನ ಫಾರ್ಮಸಿಸ್ಟ್ ಹಾಗೆ ಮಾರುವಂತಿಲ್ಲ ಸರ್ ಮೇಲಿನವರ ಅನುಮತಿ ಬೇಕು ಮತ್ತು ಕೆಲವು ಕೊಟೇಶನ್ ಬೇಕು ಎಂದು ಎಚ್ಚರಿಕೆ ನೀಡಿದರು .ಆಯಿತು ಮೇಲಿನವರಿಗೆ ಬರೆದು ಅನುಮತಿ ಪಡೆದು ,ಒಬ್ಬ ರದ್ದಿಯವನನ್ನು ಕರೆದು ಅವನ ಕೈಯ್ಯಿನಿಂದಲೇ ಹಲವು ಕೊಟೇಶನ್ ಪಡೆದು ಅವನಿಗೇ ಎಲ್ಲಾ ಮಾರಿ ಆಗಿನ ಕಾಲದಲ್ಲಿ ಹತ್ತೋ ಹದಿನೈದೋ ರೂಪಾಯಿ ಸಿಕ್ಕಿ ಅದನ್ನು ಟ್ರೆಜರಿಗೆ ಕಟ್ಟಿಸಿ ದೇಶದ ಸಂಪತ್ತು ಅಣುರೇಣು ಹೆಚ್ಚಿಸಿದೆ . ಆಸ್ಫತ್ರೆಯ ಆಫೀಸು ಕೂಡಾ ಸ್ವಚ್ಛ ಆಯಿತು . 

ಎಚ್ ನರಸಿಂಹಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ (ಕ್ಯಾಬಿನೆಟ್ ಮಂತ್ರಿ ಸ್ಥಾನ )ಪ್ರವಾಸಕ್ಕೆ ರೈಲಿನ  ಪ್ರಥಮ ದರ್ಜೆ   ಸಿ ಗೆ ಅರ್ಹತೆ ಇದ್ದರೂ  ದ್ವಿತೀಯ ತರಗತಿಯಲ್ಲಿ ಪ್ರಯಾಣ ಮಾಡಿ ,ಅಷ್ಟಕ್ಕೇ ಭತ್ತೆ ಪಡೆಯುತ್ತಿದ್ದರು . ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ದಿನಪತ್ರಿಕೆಗಳನ್ನು ಹಳೆಯದಾದ ಮೇಲೆ ಮಾರಿ ಸರಕಾರದ ತಿಜೋರಿಗೆ ಕಟ್ಟುತ್ತಿದ್ದರು .

ಶನಿವಾರ, ಡಿಸೆಂಬರ್ 11, 2021

ಆಧುನಿಕ ರಾಬಿನ್ ಹುಡ್ ಗಳು

                    ಆಧುನಿಕ ರಾಬಿನ್ ಹುಡ್ ಗಳು 

ನಿನ್ನೆ ಮುಂಬೈ ಲಲಿತ್ ಹೊಟೇಲ್ ನಲ್ಲಿ ಉಪಾಹಾರ ಸೇವಿಸುವಾಗ ಒಂದು  ಫಲಕ ಗಮನ ಸೆಳೆಯಿತು . ಇಲ್ಲಿ ಉಳಿಕೆಯಾದ ಆಹಾರ ವಸ್ತುಗಳನ್ನು ಹಸಿದವರಲ್ಲಿ ಹಂಚಲು ರಾಬಿನ್ ಹುಡ್ ಆರ್ಮಿ ಸ್ವಯಂ ಸೇವಾ ಸಂಸ್ಥೆಗೆ ಕೊಡಲಾಗುವುದು ಎಂಬ ಒಕ್ಕಣೆ .

ಪರಿಚಾರಕರಲ್ಲಿ ವಿಚಾರಿಸಲು ಕೋವಿಡ್ ನಿಂದ ಸ್ವಲ್ಪ ವ್ಯತ್ಯಯ ಆಗುವುದು ಬಿಟ್ಟರೆ ಈ ಸೇವೆ ನಡೆಯುತ್ತಿದೆ ಎಂದರು . ರಾಬಿನ್ ಹುಡ್ ಇಂಗ್ಲಾಂಡ್ ನಲ್ಲಿ ದಂತ ಕತೆ,ಸಿರಿವಂತರನ್ನು  ದೋಚಿ  ಬಡ ಬಗ್ಗರಲ್ಲಿ ಹಂಚುತ್ತಿದ್ದ ವೀರ .ನಮ್ಮ ರಾಜ್ಯದ ಗುಡಿಬಂಡೆ ಬೈರೇ ಗೌಡ ,ಕೇರಳದ  ಕಾಯಂ ಕುಳಮ್  ಕೊಚ್ಚುಣ್ಣಿ ಹೆಚ್ಚು ಕಡಿಮೆ ಇಂತಹವರೇ.

ಆರು ವರ್ಷಗಳ ಹಿಂದೆ ಮುಂಬೈಗೆ ಒಂದು ಕಾರ್ಯಕ್ರಮ ನಿಮಿತ್ತ ಹೋದವನು ಮರಳುವಾಗ 

 ರಾತ್ರಿ  ಹತ್ತೂವರೆ ರೈಲು ಮೂರು ಗಂಟೆ ವಿಳಂಬ ವಿದ್ದುದರಿಂದ  ಅಸಹನೆಯಿಂದ 

ಕಾಯುತ್ತಿದ್ದೆ .ಸ್ಟೇಷನ್ ಪರಿಸರದಲ್ಲಿ  ಪ್ರಯಾಣಿಕರು ,ನಿರ್ಗತಿಕರು ,ಭಿಕ್ಷುಕರು 

 ಇತ್ಯಾದಿ   ಎಲ್ಲೆಂದರಲ್ಲಿ ಜಾಗ ಮಾಡಿಕೊಂಡು ಮಲಗಿದ್ದರು . ಸುಮಾರು ಒಂದು 

ಗಂಟೆ ಸಮಯ ಒಂದು ವ್ಯಾನ್ ಬಂದು ಸ್ಟೇಷನ್ ಪೂರ್ವ ಭಾಗದಲ್ಲಿ ನಿಂತಿತು ,

ಕೂಡಲೇ ಮಲಗಿದ್ದವರು ಹಲವರು ಎದ್ದು ಕ್ಯೂ ನಿಂತರು .ಕೆಲವರ ಕೈಯ್ಯಲ್ಲಿ ತಟ್ಟೆ .

ಗಲಾಟೆ ಇಲ್ಲ ,ಗೊಂದಲ ಇಲ್ಲ.ಮುಂಬೈ ಇಲ್ಲದಿದ್ದರೂ ಕ್ಯೂ ಗೆ ಹೆಸರಾದ ನಗರ .

 ( ಇಲ್ಲಿಯ ಜನಸಂಖ್ಯೆ ಯೂ ಇದಕ್ಕೆ ಕಾರಣ ಇರಬಹುದು .ಗೊಂದಲದ 

ನಡುವೆಯೂ ಒಂದು ಶಿಸ್ತು ಇಲ್ಲಿಯ ಜೀವನವನ್ನು ಸಹನೀಯವಾಗಿ ಮಾಡಿದೆ .)

   ವ್ಯಾನ್ ನಿಂದ ಇಳಿದ ಯುವಕರು ಎಲ್ಲರಿಗೂ ಆಹಾರ ವಿತರಣೆ ಮಾಡಿ 

ಯಾವುದೇ ಗೌಜಿ ಗದ್ದಲ ಇಲ್ಲದೆ ಮರಳಿದರು .ಉಂಡವರು ಸಂತೃಪ್ತಿಯಿಂದ ನಿದ್ದೆಗೆ 

ಜಾರಿದರು .ಅಷ್ಟರಲ್ಲಿ ನನ್ನ ಟ್ರೈನೂ ಆಗಮಿಸಿತು .ಗಣೇಶ ಹಬ್ಬವಾದ್ದರಿಂದ ರಶ್ 

ಇತ್ತು .ಕಾದಿರಿಸದ ಬೋಗಿ ಗೆ  ಹತ್ತಲು ಜನ ತಾವೇ ಕ್ಯೂ ಹಚ್ಚಿದರು .ಅಲ್ಲೂ ಒಂದು 

ಶಿಸ್ತು .

ಟ್ರೈನ್ ಏರಿದವನಿಗೆ  ಅಲ್ಲಿ ಅನ್ನ ದಾನವ ಮಾಡುತ್ತಿದ್ದವರ ದೃಶ್ಯ 

.ದಾನವರಾಗುತ್ತಿರುವ ಮನುಜರ ನಡುವೆ ಅನ್ನ ದಾನವ ಮಾಡುವ ಮನುಜರಾರು ?

ವಿಚಾರಿಸಿದಾಗ ತಿಳಿಯಿತು .ಇವರೇ ಅಧುನಿಕ ರಾಬಿನ್ ಹುಡ್ ಗಳು .ಆದರೆ  

ಇವರು ಇರುವವರನ್ನು ಲೂಟಿ ಮಾಡಿ ಇಲ್ಲದವರಿಗೆ ಕೊಡುವವರಲ್ಲ .ಇದ್ದವರಿಂದ 

ಮಿಕ್ಕದ್ದನ್ನು ಇಲ್ಲದವರಿಗೆ ಹಂಚುವವರು .ದೆಹಲಿ ನಗರದಲ್ಲಿ ಕೆಲವು ಸಹೃದಯೀ

ಯುವಕರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಹೋಟೆಲ್ ಕಲ್ಯಾಣ ಮಂಟಪಗಳಲ್ಲಿ 

ಮಿಕ್ಕ ಆಹಾರ ಸಂಗ್ರಹಿಸಿ  ನಿಗದಿತ ಜಾಗಗಳಲ್ಲಿ ಅದನ್ನು ಹಂಚುವರು .ಇದರ 

ಮುಂಬೈ ಶಾಖೆಯ ಕಾರ್ಯವನ್ನೇ ನಾನು ಕಂಡದ್ದು .ಆಹಾರ ಅಲ್ಲದೆ ಚಳಿಗಾಲದಲ್ಲಿ 

ಕಂಬಳಿ ಹಂಚುವ ಕೆಲಸವನ್ನೂ ಮಾಡುವರಂತೆ .

ಈ ಸಂಸ್ಥೆಯ ಶಾಖೆಗಳು ಪಾಕಿಸ್ತಾನ ಸೇರಿ ವಿದೇಶದ ಕೆಲ ದೇಶಗಳಲ್ಲಿ ಕೂಡಾ ಹರಡಿದ್ದು ಇದ್ದು ಪರಸ್ಪರ ಮೈತ್ರಿ ಮಾಡಿ ಕೊಂಡಿವೆ .

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ 

ಕೈಲಾಸ ಬಿನ್ನಾಣವಕ್ಕು ಸರ್ವಜ್ಞ 

ಅವರ ಜಾಲತಾಣ ದಿಂದ ಆರಿಸಿದ ನುಡಿಮುತ್ತುಗಳು
.೧  ಉಪವಾಸದಿಂದ ಸಾಯುವವರ ಸಂಖ್ಯೆ ಕ್ಷಯ ,ಏಡ್ಸ್  ಮತ್ತು ಮಲೇರಿಯಾ 

ಕಾಯಿಲೆಗಳಿಂದ ಒಟ್ಟಾಗಿ ಸಾಯುವವರಿಗಿಂತ ಹೆಚ್ಚು .

೨.ಜಗತ್ತಿನಲ್ಲಿ ತಯಾರಿಸಿದ ಆಹಾರದಲ್ಲ್ಲಿ ಮೂರನೇ ಒಂದು  ಸೇವಿಸಲ್ಪಡುವುದೇ 

ಇಲ್ಲ .

೩.೮೨% ಉಪವಾಸ ವಿರುವವರು ಆಹಾರ ಮಿಗತೆ ಇರುವ ನಾಡಿನಲ್ಲಿಯೇ 

ಇರುವರು 

೪ ಜಗತ್ತಿನಲ್ಲಿ ಹತ್ತು ಸೆಕುಂಡುಗಳಿಗೆ ಒಂದು ಮಗು ಉಪವಾಸದಿಂದ ಸಾಯುತ್ತಿದೆ .

ಇವರ ಬಗ್ಗೆ ಹೆಚ್ಚು ಮಾಹಿತಿಗೆ www. robinhoodarmy.com  ಗೆ ಲಾಗ್ ಮಾಡಿರಿ 
         

 ಇಂತಹ ರಾಬಿನ್ ಹುಡ್ ಗಳ ಸಂತತಿ ಸಾವಿರವಾಗಲಿ .

ಶುಕ್ರವಾರ, ಡಿಸೆಂಬರ್ 10, 2021

ಮುಂಬೈ ತಾರಾ ಹೊಟೇಲ್ ನಲ್ಲಿ "ಮುನಿಸು ತರವೇ"

 ಮುಂಬೈ ತಾರಾ ಹೊಟೇಲ್ ನಲ್ಲಿ "ಮುನಿಸು ತರವೇ"

                       



                                


ನಿನ್ನೆ ಮುಂಬೈ ಯಲ್ಲಿ ನನ್ನ ಆಪ್ತ ಮಿತ್ರ ಡಾ  ಜೀವನ್ ರಾಮ್ ಮಗಳ ಮದುವೆ . ನಮಗೆ ವಸತಿ ,ಮದುವೆ ಸಮಾರಂಭ ಎಲ್ಲಾ ವಿಮಾನ ನಿಲ್ದಾಣ ಬಳಿ ಇರುವ ಪಂಚ ತಾರಾ ಹೋಟೆಲ್ ಲಲಿತ್ ನಲ್ಲಿ . ಮುಂಬೈ ನಾನು ಮೆಚ್ಚುವದು ಅಲ್ಲಿ ಗೊಂದಲದ ನಡುವೆಯೂ ಇರುವ ಒಂದು ಶಿಸ್ತಿಗಾಗಾಗಿ  ಮತ್ತು ಅಲ್ಲಿ  ದುಡಿಮೆಗೆ ಇರುವ ಅವಕಾಶ ಮತ್ತು ಆದ್ಯತೆಗಾಗಲಿ . 

ಅದಿರಲಿ ಮದುವೆಗೆ ಸ್ಯಾಕ್ಸೋಫೋನ್ ವಾದನ ನುಡಿಸದವರು ಓರ್ವ ಮಹಿಳೆ .ಚೆನ್ನಾಗಿಯೇ ನುಡಿಸಿದರು ;ಮುಖ್ಯ ಕಾರ್ಯಕ್ರಮಕ್ಕೆ ಅನುಗುಣವಾಗಿ ಕೃತಿಗಳ ಆಯ್ಕೆ ಮಾಡಿ ನುಡಿಸಿದರು .ಉದಾ ಮದುಮಗಳನ್ನು ಕರೆ ತರುವಾಗ ಭಾಗ್ಯದ ಲಕ್ಷ್ಮಿ ಬಾರಮ್ಮಾ ಇತ್ಯಾದಿ ..ಕನ್ನಡ ದೇವರ ನಾಮಗಳೇ ಹೆಚ್ಚು ಇದ್ದವು .;ಜತೆಗೆ ಸುಬ್ರಾಯ ಚೊಕ್ಕಾಡಿಯವರ ಜನಪ್ರಿಯ ಕೃತಿ ಮುನಿಸು ತರವೇ ಮುಗುದೆ ಪ್ರಸ್ತುತ ಪಡಿಸಿದ್ದು ವಿಶೇಷ . ಅಂದ ಹಾಗೆ ಹುಡುಗಿ ನಮ್ಮ ಊರಿನವಳು ,ವರ ಸಿಂಧಿ ಎರಡೂ ಸಂಪ್ರದಾಯದಲ್ಲಿ ನಡೆದ ಚಿಕ್ಕ ಚೊಕ್ಕ ಆತ್ಮೀಯ ಕಾರ್ಯಕ್ರಮ. 

ಕೊನೆಗೆ ಸ್ಯಾಕ್ಸೋಫೋನ್ ವಾದಕಿಯನ್ನು  ಭೇಟಿಯಾಗಿ ಅಭಿನಂದನೆ ಸಲ್ಲಿಸಿ ,ಅನುಮತಿ ಪಡೆದು ಭಾವಚಿತ್ರ ತೆಗೆದೆ .ಉಡುಪಿ ಮೂಲದವರಾದ ಇವರ ಹೆಸರು  ಶ್ರೀಮತಿ ಹರಿಣಾಕ್ಷಿ , ಘಾಟ್ಕೋಪರ್ ನಲ್ಲಿ ನೆಲೆಸಿದ್ದಾರೆ

ಮಂಗಳವಾರ, ನವೆಂಬರ್ 30, 2021

ಬಿಟ್ಸ್ ಪಿಲಾನಿ ಮತ್ತು ಮಿರ್ಜಾ ಇಸ್ಮಾಯಿಲ್

                                                            
 Diwan Sir Mirza Ismail.jpg

BITS Pilani Starts Online Classes for MBA – PaGaLGuYಇತ್ತೀಚಿಗೆ ಬಿಡುಗಡೆ ಆದ ಹಿರಿಯರು ಡಾ ಸಿ ಎಸ ಶಾಸ್ತ್ರೀ ಅವರ ಕೃತಿ "ಸಂಚಾರ ವಿಚಾರ ಓದುತ್ತಿದ್ದೇನೆ . ಭೌತ ಶಾಸ್ತ್ರ ದಲ್ಲಿ ಉನ್ನತ ಅಧ್ಯಯನ ಮಾಡಿ ದೇಶದ ಹೆಸರಾಂತ ಶಿಕ್ಷಣ ಸಂಸ್ಥೆ ಗಳಲ್ಲಿ ದುಡಿದು ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ . ಅವರ ಬಾಲ್ಯದಲ್ಲಿ ,ವಿದ್ಯಾರ್ಥಿ ದೆಸೆಯಲ್ಲಿ ಮತ್ತು ಮುಂದೆ ತನಗಾಗಿ ಮತ್ತು ಹೆತ್ತವರ ಸಂತೋಷಕ್ಕಾಗಿ ನಡೆಸಿದ ಹಲವು ಯಾತ್ರೆಗಳ ಬಗ್ಗೆ ಬರೆದಿದ್ದು , ಹಿಂದಿನ ಮತ್ತು ಈಗಿನ ಸಮಾಜ ,ಜೀವನ ಮತ್ತು ಆಚರಣೆಗಳ ತುಲನಾತ್ಮಕ ವಿಶ್ಲೇಷಣೆ ಇದೆ .ಪುಸ್ತಕ ಓದಿಸಿ ಕೊಂಡು ಹೋಗುತ್ತದೆ . 

ಸುಮಾರು ಒಂದೂವರೆ ದಶಕಗಳು ಇವರು  ಪ್ರತಿಷ್ಠಿತ ಬಿಟ್ಸ್ ಪಿಲಾನಿ (Birla Institute  of Technology )ಯಲ್ಲಿ ಅಧ್ಯಾಪನ ನಡೆಸಿದ್ದು ,ವಿಶ್ರಾಂತ ರಾದ ಮೇಲೆ ಅಲ್ಲಿಗೆ ಭೇಟಿ ನೀಡಿದಾಗ ಹಳೆಯ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಜತೆ ಭೇಟಿ ಬಗ್ಗೆ ಆತ್ಮೀಯ ವಿವರಣೆ ಇದೆ . ಜೈಪುರ ಬಗ್ಗೆ ಕೂಡಾ . 

ಬಿಟ್ಸ್ ಪಿಲಾನಿ ಮತ್ತು ರಾಜಸ್ತಾನದ ವಿಶ್ವ ವಿದ್ಯಾಲಯ ,ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ನಮ್ಮವರೇ ಆದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಅಮೂಲ್ಯ ಕೊಡುಗೆ ಇದೆ ಎಂಬುದು ನಮಗೆ ಹೆಮ್ಮೆಯ ವಿಷಯ . ಮೈಸೂರು ಸರಕಾರದಲ್ಲಿ ಸುಧೀರ್ಘ ಕಾಲ ದೀವಾನರಾಗಿ ಒಳ್ಳೆಯ  ಆಡಳಿತ ನೀಡಿ ವಿರಮಿಸಿದ ಅವರನ್ನು ಜೈಪುರ ಕೈಬೀಸಿ ಕರೆಯಿತು ,ಅಲ್ಲಿನ ಮಹಾರಾಜ ಎರಡನೇ  ಸವಾಯಿ ಮಾನ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಆಗಿ ಹೋದರು . ಶಿಕ್ಷಣ ,ಅರೋಗ್ಯ ಮತ್ತು ಮೂಲ ಭೂತ ಸೌಕರ್ಯ ಇವಕ್ಕೆ ಒತ್ತು  ನೀಡಿ ಎಲ್ಲರ ಮನ ಗೆದ್ದರು .  ಜೈಪುರದ ಮುಖ್ಯ ರಸ್ತೆಗೆ ಇವರ ಹೆಸರು ನೀಡಲಾಗಿದೆ . ೧೯೪೫ ರಲ್ಲಿ ಜಯಪುರದಲ್ಲಿ ಲೇಖಕ ,ಪ್ರಭಂದಕಾರ ಮತ್ತು ಕಾದಂಬರಿಕಾರರ (PEN )ಸಮ್ಮೇಳನ ನಡೆಸಿ ಅದರ ಅಧ್ಯಕ್ಷತೆ ತಾವೇ ವಹಿಸಿ ಯಶಸ್ವೀ ಗೊಳಿಸಿದರು . 

ತಮ್ಮ ವೃತ್ತಿ ಜೀವನ ಅನುಭವಗಳನ್ನು "My Public Life "ಎಂಬ ಹೊತ್ತಿಗೆಯಲ್ಲಿ ನಿರೂಪಿಸಿದ್ದು ಎಲ್ಲರೂ ಓದ ಬೇಕಾದ ಗ್ರಂಥ . ಉದ್ಯಮಿ ಘನ ಶ್ಯಾಮ ದಾಸ್ ಬಿರ್ಲಾ ತಮ್ಮ ಹುಟ್ಟೂರಾದ ಪಿಲಾನಿ ಯಲ್ಲಿ ಒಂದು ಇಂಟೆರ್ ಮೀಡಿಯೇಟ್ ಕಾಲೇಜು ತೆರೆಯುವ ಹಂಬಲದಿಂದ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ,ಅವರು ಕಾಂಗ್ರೆಸ್ ಮತ್ತು ಗಾಂಧೀಜಿ ಯವರ ಹಿತೈಷಿಗಳು ಎಂಬ ಕಾರಣಕ್ಕೆ ದೆಹಲಿಯ ಬ್ರಿಟಿಷ್ ಸರಕಾರದ  ರಾಜಕೀಯ ವ್ಯವಹಾರ ವಿಭಾಗದ ಅವಕೃಪೆಯಲ್ಲಿ ಇದ್ದರು ಎಂಬ ಕಾರಣಕ್ಕೆ ಜೈಪುರ ಸರಕಾರ ಅದನ್ನು ಪರಿಗಣಿಸಲು ಹಿಂದೇಟು ಹಾಕಿತ್ತು . ಆದರೆ ಮಿರ್ಜಾ ಧೈರ್ಯದಿಂದ ಮಹಾರಾಜರನ್ನು ಒಪ್ಪಿಸಿ ಬಿರ್ಲಾ ಅವರಿಗೆ ಹಸಿರು ನಿಶಾನೆ ತೋರಿಸಿದ್ದೇ ಮುಂದೆ ಬಿಟ್ಸ್ ಪಿಲಾನಿ ಯ ಹುಟ್ಟಿಗೂ ಕಾರಣ ಆಯಿತು .ಮೈಸೂರು ಮಹಾರಾಜಾ ಕಾಲೇಜಿನಲ್ಲ್ಲಿ ಪ್ರಿನ್ಸಿಪಾಲ್ ಆಗಿ ಪ್ರಸಿದ್ಧರಾಗಿದ್ದ ಜೆ ಸಿ ರೋಲೋ ಅವರನ್ನು ಜೈಪುರಕ್ಕೆ ಕರೆಸಿ ಶಿಕ್ಷಣ ಇಲಾಖೆಯ ಸಲಹೆಗಾರರನ್ನು ಆಗಿ ನೇಮಿಸಿದರು .ಮುಂದಕ್ಕೆ ರಾಜಪುತಾನಾ ವಿಶ್ವ ವಿದ್ಯಾಲಯದ ಹುಟ್ಟಿಗೆ ಕಾರಣವಾಯಿತು . ಅದಲ್ಲದೆ ಮೈಸೂರು ಸೇವೆಯಲ್ಲಿ ಇದ್ದ ಹಿರಣ್ಯಯ್ಯ ಎಂಬುವರನ್ನು  ಕರೆಸಿ ಜೈಪುರ ಆಡಳಿತದಲ್ಲಿ ಪ್ರಜಾ ಭಾಗಿತ್ವದ ರೂಪು ರೇಷೆ ನಿರ್ಧಾರ ಮಾಡುವ ಲ್ಲಿ  ಅಧ್ಯಯನ ಮಾಡಿ ಸಲಹೆ ನೀಡುವಂತೆ ಕೇಳಿದ್ದ ಲ್ಲದೆ ಅದನ್ನು ಯಶಸ್ವಿ ಯಾಗಿ ಜಾರಿಗೆ ತಂದರು .