ಚಿಮಿಣಿ ದೀಪ
ಚಿಕ್ಕಂದಿನಲ್ಲಿ ಮನೆಯಲ್ಲಿ ವಿದ್ಯುತ್ ಸೌಕರ್ಯ ಇರಲಿಲ್ಲ .ಹತ್ತು ಬುಡ್ಡಿ ದೀಪ ,ಎರಡು ಲಾಂಪ್ ಮತ್ತು ಒಂದೆರಡು ಲಾಟೀನು ಇರುತ್ತಿತ್ತು .ಪ್ರತಿ ದಿನ ಸಾಯಂಕಾಲ ಈ ದೀಪಗಳ ಬತ್ತಿ ಸರಿ ಮಾಡುವುದು ,ಎಣ್ಣೆ ತುಂಬಿಸುವುದು ,ಮತ್ತು ಲಾಂಪ್ ,ಲಾಟೀನುಗಳ ಗಾಜಿನ ಮಸಿ ಒರಸುವುದು ಒಬ್ಬರ ಕೆಲಸ . ಚಿಮಿಣಿ ಬುಡ್ಡಿಗಳ ಕೊರತೆ ಉಂಟಾದರೆ ಸಣ್ಣ ಔಷಧಿ ಬಾಟಲಿನ ಮುಚ್ಚಳ ದಲ್ಲಿ ಒಟ್ಟೆ ಮಾಡಿ ಬತ್ತಿ ಇಳಿಸಿ ಚಿಮಿಣಿ ದೀಪ ತಯಾರು ಮಾಡುತ್ತಿದ್ದೆವು . ಮಕ್ಕಳಿಗೆ ಓದಲು ಇಂತಹ ಸಣ್ಣ ಚಿಮಿಣಿ ದೀಪಗಳು .ನಮ್ಮ ಮನೆ ತುಂಬಾ ಮಕ್ಕಳಿದ್ದು ಇಬ್ಬರಿಗೆ ಒಂದರಂತೆ ಒಂದು ದೀಪ .
ನಾನು ಮತ್ತು ಅಕ್ಕ ಭಾಗ್ಯಲಕ್ಷ್ಮಿ ಒಂದು ದೀಪವನ್ನು ಹೆಚ್ಚಾಗಿ ಷೇರ್ ಮಾಡಿಕೊಳ್ಳುತ್ತಿದ್ದೆವು . ಅವಳು ಓದುವಾಗ ತನ್ನ ಬಳಿ ಕಾಪಿಟ್ಟ ಸಾಂತಣಿ ಪುಳಿಂಕೊಟ್ಟೆ ನನಗೂ ಕೊಟ್ಟು ತಿನ್ನುವಳು . ಇಬ್ಬರೂ ಗಟ್ಟಿಯಾಗಿ ಓದುವೆವು .ನಾವು ಓದುತ್ತಿದ್ದುದು ನಮ್ಮ ಅರಿವಿಗೋ ಅಥವಾ ಹಿರಿಯರನ್ನು ಸಮಾಧಾನ ಪಡಿಸಲೋ ಎಂಬ ಸಂಶಯ ನನಗೆ ಈಗ ಬರುತ್ತಿದೆ .ಇಬ್ಬರೂ ಒಂದೇ ದೀಪದ ಬೆಳಕಿನಲ್ಲಿ ಓದುವಾಗ ಕೊನ್ಫ್ಲಿಕ್ಟ್ಸ್ ಆಫ್ ಇಂಟರೆಸ್ಟ್ ಬರುತ್ತದೆ . ಕೆಲವೊಮ್ಮೆ ದೀಪ ಅವಳ ಬಳಿಗೆ ಹೆಚ್ಚು ಸರಿಸಿದ್ದಾಳೆ ;ನನಗೆ ಕಾಣುವುದಿಲ್ಲ ಎಂದು ಸಣ್ಣ ಜಗಳ ವಾದದ್ದು ಇದೆ .ಇಂತಹ ಅಧ್ಯಯನ ಕ್ರಾಸ್ ಲರ್ನಿಂಗ್ ಗೆ ಕಾರಣ ವಾದದ್ದು ಅನೇಕ ಬಾರಿ . ಉದಾಹರಣೆಗೆ ನಾನು ರನ್ನನ ಗಧಾ ಯುದ್ಧದ ,'ಆ ರವಮಂ ನಿರಸ್ತ ಘನ ರವಮಂ ನಿರ್ಜಿತ ಕಂಠೀ ರವ ರವಮಂ ,ಕೋಪಾರುಣ ನೇತ್ರಮ್ ಕೇಳ್ದಾ ನೀರೊಳಗಿದ್ದೂಬೆಮರ್ತನುರಾಗಪತಾಕಮ್"ಗಟ್ಟಿಯಾಗಿ ಬಾಯಿಪಾಠ ಮಾಡುವಾಗ ಅವಳು ' ಇಂಡಿಯ ಈಸ್ ರಿಚ್ ಕಂಟ್ರೀ ಇನ್ಹಬೀಟೆಡ್ ಬೈ ಪೂರ್ ಪೀಪುಲ್; ಟುಡೇಸ್ ಲುಕ್ಷುರಿ ಈಸ್ ಟುಮರೋಸ್ ನೆಸೇಸಿಟಿ" ಎಂದು ಎಕನಾಮಿಕ್ಸ್ ನೋಟ್ಸ್ ಕಂಠ ಪಾಟ ಗಟ್ಟಿಯಾಗಿ ಮಾಡುವಳು .ಇದರಿಂದ ನನ್ನ ಪದ್ಯ ಅವಳಿಗೂ ಅವಳ ನೋಟ್ಸ್ ನನಗೂ ತಪ್ಪದೇ ಬರುವುದು , ನಮಗೆ ಬೇಕಾದ್ದು ಅಲ್ಲ.
ಚಿಮಿಣಿ ದೀಪಗಳಿಗೆ ಹಾತೆಗಳು ಆತ್ಮಹತ್ಯೆ ಮಾಡಿಕೊಳ್ಳಲು ಬರುವವು . ಅವುಗಳ ಮೃತ ಶರೀರ ನಮ್ಮ ಪಠ್ಯ ಪುಸ್ತಕಗಳ ಪುಟಗಳ ಒಳಗಡೆ ಶಾಶ್ವತ ಸ್ಮಾರಕ ಪಡೆಯುವವು . ನೊಣಂಪ್ರತಿ ಎಂಬ ಶಬ್ದ ಹುಟ್ಟಿದ್ದೇ ಹೀಗೆ . ಇನ್ನುಳಿದ ಕೀಟಗಳನ್ನು ಹಲ್ಲಿಗಳು ಹೊಂಚು ಹಾಕಿ ತಿನ್ನುವುವು . ಇವುಗಳೆಲ್ಲ ಜೀವಿಗಳ ನಡುವೆ ನಮ್ಮ ಅನ್ಯೋನ್ಯ ಬಾಳು .ಹಲವು ಬಾರಿ ಚಿಮಿಣಿ ದೀಪದ ಎದುರು ಓದುವುದಕ್ಕೆ ಕುಳಿತಲ್ಲಿಯೇ ನಿದ್ದೆ ತೂಗಿ ನಮ್ಮ ತಲೆ ಗೂದಲಿಗೆ ಬೆಂಕಿ ಹಿಡಿದು ವಾಸನೆ ಬರುವಾಗ ಎಚ್ಚರ ಆದದ್ದು ಇದೆ
ಸಂಜೆ ಹೊತ್ತು ಒಂದು ದೀಪವನ್ನು ಒಲೆಯ ಬೆಂಕಿಯ ಸಹಾಯದಿಂದ ಹಚ್ಚಿ ,ಮತ್ತೆ ಅದರ ಬೆಳಕನ್ನು ಒಂದೊಂದಾಗಿ ಇತರ ದೀಪಗಳಿಗೆ ಹಂಚುವುದು ಜ್ನಾನವನ್ನು ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುವ ಕ್ರಿಯೆಯನ್ನು ಸಂಕೇತಿಸುವುದು.ಬಚ್ಚಲು ಮನೆಗೊ ಹಿತ್ತಿಲಿಗೋ ಹೋಗುವಾಗ ಕೈಯಲ್ಲಿ ಒಂದು ಚಿಮ್ಮಿಣಿ ದೀಪ ,ಆದರೆ ದೀಪದ ಕೆಳಗೆ ಕತ್ತಲೆಯೇ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ