ಬೆಂಬಲಿಗರು

ಶನಿವಾರ, ಜೂನ್ 26, 2021

ಬಾಬು ಪೂಜಾರಿ

                     ಮರೆಯಲಾಗದ ಮಹನೀಯರು  ಶ್ರೀ ಬಾಬು ಪೂಜಾರಿ 


    ಹುಟ್ಟೂರಿಗೆ ಮರಳುವ ಉದ್ದೇಶದಿಂದ ರೈಲ್ವೇ ವೈದ್ಯಾಧಿಕಾರಿ ಹುದ್ದೆಗೆ   ಪೆನ್ಷನ್ ಬರುವ ಅವಧಿಗೂ ಮುನ್ನ ರಾಜೀನಾಮೆ ಕೊಟ್ಟು ಬಂದೆನು.ಮೊದಲಿನಿಂದಲೂ ಅಧ್ಯಾಪಕ ನಾಗಬೇಕೆಂಬ ಹಂಬಲ ಇತ್ತು .ನನ್ನ ಗುರುಗಳು ಕಲಿಸುವುದು ಜ್ನಾನಾರ್ಜನೆಯ ಉತ್ತಮ ಮಾರ್ಗ ಎಂದು ಆಗಾಗ ಹೇಳುತ್ತಿದ್ದರು .(Teaching is the best way of learning). ಆಗ ತಾನೇ ನಿಟ್ಟೆ ಎಜುಕೇಷನ್ ಟ್ರಸ್ಟ್ ನವರು  ದೇರಳಕಟ್ಟೆಯಲ್ಲಿ  ಜಸ್ಯಿಸ್ ಕೆ ಎಸ್ ಹೆಗ್ಡೆ ಅವರ ಹೆಸರಿನಲ್ಲಿ ಹೊಸ ವೈದ್ಯಕೀಯ ಕಾಲೇಜ್ ಆರಂಭಿಸುವ ಯತ್ನದಲ್ಲಿ ಆಸ್ಪತ್ರೆ ಸ್ಥಾಪಿಸಿದ್ದರು . ಅಲ್ಲಿ ಮೆಡಿಸಿನ್ ವಿಭಾಗಕ್ಕೆ ಸೇರಿದೆನು.ಡಾ ಅಮರನಾಥ ಹೆಗ್ಡೆ ಮತ್ತು ಡಾ ಎ ಸಿ ಹೆಗ್ಡೆ ಒಂದೊಂದು ಯೂನಿಟ್ ನ ಮುಖ್ಯಸ್ಥರು . ಪ್ರೊ . ಎ ಸಿ ಹೆಗ್ಡೆ ಹುಬ್ಬಳ್ಳಿಯಲ್ಲಿ ನನ್ನ ಗುರುಗಳಾಗಿ ಇದ್ದವರು .ನಿವೃತ್ತಿ ನಂತರ ಇಲ್ಲಿ ಸೇರಿದ್ದರು . ಡಾ ಅಮರನಾಥ ಹೆಗ್ಡೆ ಮಂಗಳೂರು ಕೆ ಎಂ ಸಿ ಯಲ್ಲಿ ಪ್ರಾಧ್ಯಾಪಕ ಮತ್ತು ಮಂಗಳೂರಿನ ಜನಪ್ರಿಯ ವೈದ್ಯರಾಗಿ ಇದ್ದವರು .ಇಬ್ಬರೂ ಈಗ ಇಲ್ಲ . ಪೆರಂಬೂರು ರೈಲ್ವೇ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರಿಂದ ಆತ್ಮ ವಿಶ್ವಾಸ ಇತ್ತು . ನನ್ನ ಅಧ್ಯಾಪನ ಅನುಭವ ಬಗ್ಗೆ ಇನ್ನೊಮ್ಮೆ ಬರೆಯುವೆನು .

         ನಾನು ಸೇರಿದುದು ಹೊಸ ಕಾಲೇಜ್ .ಸ್ಥಾಪಕ ರಿಗೆ  ಸಂಸ್ಥೆ ಒಳ್ಳೆಯ ಹೆಸರು ಗಳಿಸ ಬೇಕು ಎಂಬ ಉದ್ದೇಶ ಬಲವಾಗಿತ್ತು .ನುರಿತ ಪ್ರಾಮಾಣಿಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಕೊಂಡಿದ್ದರು . ನನ್ನ ಮೇಲೆ ಬಹಳ ಪ್ರಭಾವ ಬೀರಿದವರು ಶ್ರೀ ಬಾಬು ಪೂಜಾರಿ ಅವರು . ಇವರು ಸುರತ್ಕಲ್  ಕೆ ಆರ್ ಈ ಸಿ (ಈಗಿನ ಎನ್ ಐ ಟಿ ಕೆ )ಯ ಆಡಳಿತ ಕಚೇರಿಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಅಧೀಕ್ಷಕ ರಾಗಿ ನಿವೃತ್ತರಾದವರು . ಶೈಕ್ಷಣಿಕ ಸಂಸ್ಥೆಯಲ್ಲಿನ ತಮ್ಮ  ಅಪಾರ ಆಡಳಿತ ಅನುಭವ ವನ್ನು ಈ ಹೊಸ ಕಾಲೇಜ್ ಗೆ  ಧಾರೆ ಎರೆದರು . ಸರಳ ಆದರೆ ಶಿಸ್ತು ಬದ್ಧ ಉಡುಗೆ ತೊಡುಗೆ ,ಸಮಯ ಪಾಲನೆ ,ಕಾರ್ಯ ಶಿಸ್ತು ಮತ್ತು ನೇರ ( ಕೆಲವೊಮ್ಮೆ ನಿಷ್ಠುರ ಎನಿಸ ಬಹುದಾದ ) ನುಡಿ ತಮಗೆ ಸರಿ ಎಂದು ಕಂಡುದನ್ನು ಕಹಿ ಎನಿಸ ಬಹುದಾದರೂ ಮೇಲಿನವರಿಗೆ ಸಂಕೋಚವಿಲ್ಲದೆ ತಿಳಿಸುವರು . ರೈಲ್ವೇ ಆಸ್ಪತ್ರೆ ಯಲ್ಲಿನ  ಬಾಲಸುಬ್ರಹ್ಮಣ್ಯಂ ಎಂಬುವರ ಬಗ್ಗೆ ಹಿಂದೆ ಬರೆದಿದ್ದೆ . ಅವರನ್ನು ನೆನಪಿಸುತ್ತಿದ್ದರು . 

 

   ಇವರ ಹುಟ್ಟೂರು ಬೆಳ್ಳಾರೆ ಸಮೀಪ ಮಾಡಾವು .ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ನಲ್ಲಿ ದಶಕದ ಮೇಲಿನ ಸಾರ್ಥಕ ಸೇವೆ ಸಲ್ಲಿಸಿ  ನಿವೃತ್ತರಾಗಿ ಈಗ ಸುರತ್ಕಲ್ ಮುಕ್ಕದ ಸಮೀಪ ನೆಲೆಸಿದ್ದಾರೆ .ಅವರು ಅಷ್ಟು ನಿಷ್ಠುರ ರಾಗಿ ಇದ್ದರೂ ಸಿಬ್ಬಂದಿ ಅವರನ್ನು ತುಂಬಾ ಪ್ರೀತಿ ಗೌರವ ದಿಂದ ಕಾಣುತ್ತಿದ್ದರು. ಅವರ ವಿದಾಯ ಕೂಟದಲ್ಲಿ ಬಹಳ ಆತ್ಮೀಯತೆ ಕಂಡು ಬಂತು ,ಹಲವರ ಕಣ್ಣಾಲಿ ತುಂಬಿ ಬಂದಿತ್ತು .

ಒಂದು ಸಂಸ್ಥೆಯ ಶ್ಯೇಯಸ್ಸಿನ ಹಿಂದೆ ಹಲವರ ಪ್ರಮಾಣಿಕ ದುಡಿಮೆ ಇರುತ್ತದೆ . ಈಗ ಈ ಭಾಗದಲ್ಲಿ ಪ್ರಸಿದ್ದವಾಗಿರುವ ಎನ್ ಐ ಟಿ ಕೆ ಮತ್ತು ಕ್ಷೇಮ (ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ )ಎರಡರಲ್ಲೂ  ಕೊಡುಗೆ ಸಲ್ಲಿಸಿರುವ ಬಾಬು ಪೂಜಾರಿ ನಮ್ಮ ಊರಿನವರು ಎಂಬ ಹೆಮ್ಮೆ .ಆಗಾಗ ಅವರನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಿಸುತ್ತೇನೆ .

                      




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ