ಏಳು ಸುತ್ತಿನ ಕೋಟೆ
ಬಾಲ್ಯದಲ್ಲಿ ಆಗಾಗ ಕೇಳುತ್ತಿದ್ದ ಕತೆಯ ಪ್ರೋಟೋ ಟೈಪ್ ,. ಏಳು ಕೋಟೆಗಳ ಒಳಗೆ ಒಬ್ಬ ರಾಜಕುಮಾರಿ . ಅವಳನ್ನು ಗೆದ್ದು ಮದುವೆ ಯಾಗುವ ಮನಸುಳ್ಳ ಒಬ್ಬ ರಾಜಕುಮಾರ .ಆದರೆ ಅಲ್ಲಿಗೆ ಹೋಗುವ ದಾರಿ ಸುಗಮ ಅಲ್ಲ . ಮೊದಲನೇ ಕೋಟೆಯ ಬಾಗಿಲಿನಲ್ಲಿ ಒಬ್ಬಳು ಮುದುಕಿ .ಅವಳು ಕೇಳಿದ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟರೆ ಎರಡನೇ ಕೋಟೆಯ ಬಾಗಿಲು ತೆರೆಯುವುದು .ಅಲ್ಲಿ ಒಂದು ಗಿಳಿ .ಅದು ರಾಜಕುಮಾರನಿಗೆ ಒಂದು ಗುಪ್ತ ಸಂಕೇತ ನೀಡುವುದು .ಅದನ್ನು ಕಾವಲುಗಾರರಿಗೆ ಹೇಳಿದರೆ ಆರನೇ ಬಾಗಿಲು ವರೆಗೆ ಹೋಗ ಬಹುದು . ಅಲ್ಲಿ ಏಳು ಹಕ್ಕಿಯಗಳ ಗೂಡುಗಳು, ಏಳನೇ ಹಕ್ಕಿಯ ಕೊರಳೊಳಗೆ ಒಂದು ಮಣಿ . ಆ ಮಣಿಯನ್ನು ತೋರಿಸಿ ಅಜ್ಜಿ ಹೇಳಿದ ಗುಪ್ತ ಸಂಕೇತ ಹೇಳಿದರೆ ರಾಜಕುಮಾರಿಯ ದರ್ಶನ.
ಇಂತಹದೇ ಅನುಭವ ನನಗೆ ನಿನ್ನೆ ಆಯಿತು .ಎಲ್ಲರೂ ಮಾಡುತ್ತಾರೆ ಎಂದು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಕಳುಹಿಸಲು ಎಂದು ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಕ್ಯಾಪ್ ಚಾ ಹಾಕಿದರೆ ತೆರೆಯಲಿಲ್ಲ .ಬದಲಿಗೆ ನಿಮ್ಮ ಮೊಬೈಲ್ ಗೆ ಬಂದ ಲಾಗ್ ಇನ್ ಓ ಟಿ ಪಿ ಹಾಕಿರಿ ಎಂದಿತು .ಮೊಬೈಲ್ ನಲ್ಲಿ ನಾನು ಸಂದೇಶ ಓದು ವಷ್ಟರಲ್ಲಿ ಮೊಬೈಲ್ ದೀಪ ಅರಿತು .ಪುನಃ ಆನ್ ಮಾಡಿದಾಗ ಮೊಬೈಲ್ ಪಿನ್ ಕೇಳಿತು .ಅದನ್ನು ಹಾಕಿ ಮೆಸ್ಸೆಂಜರ್ ಗೆ ಹೋಗಿ ಓ ಟಿ ಪಿ ಕಾಪಿ ಮಾಡಲು ಇನ್ ವ್ಯಾಲಿಡ್ ಎಂದು ಬರಲು ಪುನಃ ಸರಿಯಾಗಿ ನೋಡಿ ಎಂಟರ್ ಮಾಡಲು ನಿಮ್ಮ ಸೆಶನ್ ಮುಗಿದಿದೆ ,ಪುನಃ ಆರಂಭಿಸಿರಿ ಎಂದು ಬಂತು . ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಲಾಗ್ ಇನ್ , ಓ ಟಿ ಪಿ ಯೆಲ್ಲಾ ಆದಾಗ ಮೊದಲನೇ ಬಾಗಿಲು ತೆರೆಯಿತು .
ಇಷ್ಟೆಲ್ಲ ಆಗಿ ನಾನು ಕಳುಹಿಸ ಬೇಕಿದ್ದವರ ಹೆಸರು ,ಅಕೌಂಟ್ ನಂಬರ್ ಮೊತ್ತ ಇತ್ಯಾದಿ ಹಾಕಿದಾಗ ಇದನ್ನು ಕಳುಹಿಸಲು ನಿಮ್ಮ ಮೊಬೈಲ್ ನಲ್ಲಿ ಸೆಕ್ಯೂರಿಟಿ ಓ ಟಿ ಪಿ ಆಪ್ ಡೌನ್ ಲೋಡ್ ಮಾಡಿರಿ ,ಮತ್ತು ಅದರಲ್ಲಿ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿರಿ ಎಂದು ಬಂತು .ಗೂಗಲ್ ಪೇ ಯಲ್ಲಿ ಆಪ್ ಡೌನ್ಲೋಡ್ ಮಾಡಿ activate ಮಾಡಲು ಪುನಃ ಲಾಗ್ ಇನ್ ಹೆಸರು ಮತ್ತು ಪಾಸ್ವರ್ಡ್ ಕೇಳಿತು .ಮುಂದೆ ಮುಂದುವರಿಯಲು ಅವರೇ ಕೊಡುವ ಉಂಡು ಸಂದೇಶ ಅವರಿಗೆ ಎಸ್ ಎಂ ಎಸ್ ಮಾಡಲು ಹೇಳಿತು . ಆಮೇಲೆ ನಾವು ನಮ್ಮ ಪಾಸ್ ವರ್ಡ್ ಪುನಃ ಹಾಕಬೇಕು .ಅಲ್ಲಿಗೆ ಸೆಕ್ಯೂರಿಟಿ ಓ ಟಿ ಪಿ ಆಪ್ ನ ಪಿನ್ ರಚಿಸುವ ಹಕ್ಕು ಬಂತು .ಅದನ್ನು ಎರಡು ಬಾರಿ ಹಾಕಿದಾಗ ನೀವು ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಸೈಟ್ ನಲ್ಲಿ ಪ್ರೊಫೈಲ್ ಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್ ಗೆ ಬಂದ ಓ ಟಿ ಪಿ ಯನ್ನು validate ಸೆಕ್ಯೂರಿಟಿ ಅಪ್ ಪಿನ್ ಎಂಬ ಭಾಗಕ್ಕೆ ಹೋಗಿ ಎಂಟರ್ ಮಾಡಿದಾಗ ಆಪ್ ಕಾರ್ಯ ನಿರತವಾಗುವುದು .ಆಮೇಲೆ ನೀವು ರಚಿಸಿದ ಪಿನ್ ಹಾಕಿ ತೆರೆದು ಒಂದು ಸೆಕ್ಯೂರಿಟಿ ಓ ಟಿ ಪಿ ದಯಪಾಲಿಸು ಎಂದಾಗ ಬರುವ ಸಂಖ್ಯೆಯನ್ನು ನಾವು ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಹಣ ಪಾವತಿ ಹಂತದಲ್ಲಿ ಎಂಟರ್ ಮಾಡಿದಾಗ ಮಾತ್ರ ಕೆಲಸ ಆಯಿತು .
ಇದು ಎಲ್ಲಾ ನಮ್ಮ ಗಳಿಕೆಯ ಸುರಕ್ಷಿತತೆ ಗೆ ಎಂದು ಮಾಡಿದ್ದು ಆದರೂ ದಿನದಿಂದ ದಿನಕ್ಕೆ ಸಂಕೀರ್ಣವೂ ,ನಮ್ಮಂತಹವರಿಗೆ ಕಬ್ಬಿಣದ ಕಡಲೆಯೂ ಆಗಿ , ಬ್ಯಾಂಕಿಂಗ್ ಕೆಲಸ ಮುಗಿಯುವಾಗ ತಲೆ ಚಿಟ್ಟು ಹಿಡಿಯುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ