ಸುಮಶರನ ಬಾಣಗಳು
ಜೀವಿಗಳಲ್ಲಿ ಮೂಲ ಪ್ರವೃತ್ತಿ ತಮ್ಮ ರಕ್ಷಣೆ ಮತ್ತು ಸಂತತಿ ಬೆಳೆಸುವದು ಮತ್ತು ತನ್ನ ಸಮಾಜದಲ್ಲಿ ಒಂದು ಗುರುತಿಸುವಿಕೆ ಪಡೆಯುವುದು .
ಗಂಡು ಹೆಣ್ಣಿನ ಆಕರ್ಷಣೆ ಪ್ರೇಮ ,ಕಾಮ ,ಮಾತೃ ವಾತ್ಸಲ್ಯ ,ಪುತ್ರ ವಾತ್ಸಲ್ಯ ಇತ್ಯಾದಿ ಇವುಗಳ ಬೇರೆ ಬೇರೆ ಪ್ರಕಟಣೆಗಳು . ನಮ್ಮ ಶರೀರದಲ್ಲಿ ಇದಕ್ಕೆಂದೇ ವ್ಯವಸ್ಥಿತವಾದ ಕಾರ್ಯಾಂಗ ಇದೆ .
ಲಾಕ್ ಡೌನ್ ಸಮಯದಲ್ಲಿ ಟಿ ವಿ ಯಲ್ಲಿ ಒಳ್ಳೆಯ ಯಕ್ಷಗಾನ ನೋಡುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದೇನೆ . ನಮ್ಮ ಕಲಾವಿದರ ಅರಿವಿನ ಆಳ ,ವಾಕ್ ಸಂಪತ್ತು ಭಾಗವತರ ಸಂಗೀತ ಸಾಹಿತ್ಯ ಜ್ಞಾನ ಮತ್ತು ಚೆಂಡೆ ಮದ್ದಳೆ ವಾದಕರ ಲಯ ಜ್ಞಾನ ಇತ್ಯಾದಿ ನೋಡಿ ನಿಜಕ್ಕೂ ಬೆರಗಾಗಿರುವೆನು . ಇವರಲ್ಲಿ ಬಹಳ ಮಂದಿ ನಿಜಕ್ಕೂ ವಿಶ್ವ ವಿದ್ಯಾಲಯಗಳ ಗೌರವ ಉಪಾಧಿಗಳಿಗೆ ಅರ್ಹರು .
ಹೆಚ್ಚಿನ ಪ್ರಸಂಗಗಳಲ್ಲಿ ಶೃಂಗಾರ ರಸ ಇದ್ದೇ ಇರುವುದು . ಒಳ್ಳೆಯ ನಾಟ್ಯ ಹಾವಭಾವ ಪ್ರದರ್ಶನಕ್ಕೆ ಪೂರಕ ಮತ್ತು ನೋಡುಗರಿಗೆ ಅದು ಅಪ್ಯಾಯ ಮಾನ . ಮಕ್ಕಳು ಮಾತ್ರ ಇಂತಹ ಸೀನ್ ಬಂದಾಗ ನಿದ್ದೆ ಮಾಡಿ ಯುದ್ಧ ಆರಂಭವಾಗುವಾಗ ಎದ್ದು ಕಣ್ಣು ಕಣ್ಣು ಬಿಟ್ಟು ನೋಡುವರು . ಶೃಂಗಾರಕ್ಕೆ ಅಧಿಪನಾದ ಕಾಮ ದೇವ ಅಥವಾ ಮನ್ಮಥ ನ ಹೆಸರು ಆಗಾಗ ಬರುವುದು.ನೇರವಾಗಿ ಅವನ ಅವಶ್ಯ ಇಲ್ಲದಿದ್ದರೂ ವಿಷ್ಣು ವಿನ ಪ್ರಸ್ತಾಪ ಬರುವಾಗ ಕೆಲವೊಮ್ಮೆ ಪ್ರಾಸಕ್ಕೆ ,ಇನ್ನು ಕೆಲವೊಮ್ಮೆ ಶಬ್ದ ಉತ್ಪತ್ತಿ ಆನಂದಕ್ಕೆ ಕಂತು ಪಿತ ,ಕಂದರ್ಪ ಜನಕ ,ಸುಮಶರ ಪಿತ ಇತ್ಯಾದಿ ,ಅವನು ಕಾಮನ ತಂದೆ ಎಂದು ಭಾಗವತರು ಹಾಡುವರು .
ಇದರ ಬಗ್ಗೆ ಅಧ್ಯಯನ ಮಾಡಲಾಗಿ ಮನ್ಮಥನು ಬ್ರಹ್ಮ ದೇವನ ಪುತ್ರನೆಂದೂ ,ಶಿವನ ಕೋಪಕ್ಕೆ ತುತ್ತಾಗಿ ಭಸ್ಮ ಆದವನು ಮತ್ತೆ ಕೃಷ್ಣಾವತಾರದಲ್ಲಿ ರೋಹಿಣಿ ಹೊಟ್ಟೆಯಲ್ಲಿ ಪ್ರದ್ಯುಮ್ನನಾಗಿ ಜನಿಸಿದನೆಂದೂ ತಿಳಿಯಿತು .ಆದರೂ ಮನ್ಮಥನಿಗೆ ಈ ಎರಡನೇ ಜನ್ಮದಾತನೇ ತಂದೆಯೆಂದು ಹೇಳುವುದು ಲೋಕ ರೂಢಿ ಆಯಿತು .
ಮನ್ಮಥನ ಬಳಿ ಐದು ಕುಸುಮ ಶರಗಳು . ಕೆಲವರಿಗೆ ಒಂದೇ ಸಾಕು .ಕೆಲವರಿಗೆ ಐದು ಇದ್ದರೂ ಪರಿಣಾಮ ಬೀರದು .ಆ ಸಂದರ್ಭ ವೈದ್ಯರು ಮತ್ತು ಔಷಧಿ ಅವಶ್ಯಕತೆ ಬರುವುದು .. ಐದು ಬಾಣಗಳು ಲಂಭಿನಿ ,ತಾಪಿನಿ ,ದ್ರಾವಿನಿ ,ಮಾರಿನಿ ಮತ್ತು ಬೋಧಿನಿ . ಅದರಲ್ಲಿರುವ ಪಂಚ ಪುಷ್ಪಗಳು ಅರವಿಂದ (ಬಿಳಿ ತಾವರೆ ).ಅಶೋಕ ,ಚೂತ (ಮಾವಿನ ಹೂ ),ನವ ಮಾಲಿಕಾ (ಮಲ್ಲಿಗೆ)ಮತ್ತು ನೀಲೋತ್ಪಲ (ನೀಲ ತಾವರೆ ). ನಮ್ಮಲ್ಲಿ ಮದುವೆ ಸಮಾರಂಭಕ್ಕೆ ಮಲ್ಲಿಗೆ ಹೂ ಬಹಳ ಮುಖ್ಯ ಇದಕ್ಕೇ ಇರ ಬೇಕು .
ವಂಶ ಮುಂದುವರಿಯಲು ಮನ್ಮಥನ ಸಹಾಯ ಅತ್ಯವಶ್ಯಕ . ಅವನ ಐದು ಶರಗಳಿಗೆ ವೈಜ್ಞಾನಿಕ ಭಾಷೆಯಲ್ಲಿ ಫೋಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ , ಲ್ಯೂಟಿನೈಸಿಂಗ್ ಹಾರ್ಮೋನ್ (ಇವು ಮೆದುಳಿನಲ್ಲಿ ಮತ್ತು ತಲೆಯೊಳಗಿನ ಪಿಟ್ಯೂಟರಿ ಗ್ರಂಥಿಯಲ್ಲಿ ಉತ್ಪತ್ತಿ ಆಗುವವು ),ಟೆಸ್ಟೋಸ್ಟ್ರೆರೋನ್ ,ಇಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ( ಅಂಡಾಶಯ ಮತ್ತು ವೃಷಣಗಳಲ್ಲಿ ಪ್ರಧಾನವಾಗಿ ತಯಾರಾಗುವವು ) ಎನ್ನುವರು . ಗಂಡಿನಲ್ಲಿ ಹೆಣ್ಣು ಹಾರ್ಮೋನು ಮತ್ತು ಹೆಣ್ಣಿನಲ್ಲಿ ಗಂಡು ಹಾರ್ಮೋನ್ ಸ್ವಲ್ಪ ಇರುವದು ,ಮತ್ತು ನಿಜಾರ್ಥ ದಲ್ಲಿ ನಾವೆಲ್ಲ ನಾರೀಶ್ವರರರು (ಅರ್ಧ ಅಲ್ಲ ಮುಕ್ಕಾಲೋ ಕಾಲೋ ). ಇವುಗಳ ಪರಿಣಾಮ ವಯಸ್ಸಿಗೆ ಬಂದಾಗ ಪ್ರೀತಿ ಪ್ರೇಮ ,ಇತ್ಯಾದಿ ನೈಸರ್ಗಿಕ ಪ್ರಕಟಣೆಗಳು .ನಾವೇ ನಿರ್ಮಿಸಿದ ಸಮಾಜ ಸುಲಲಿತವಾಗಿ ನಡೆಯಲು ನಾವು ಅದಕ್ಕೆ ಹಾಕಿ ಕೊಂಡ ಕಟ್ಟು ಪಾಡುಗಳು ವಿವಾಹ ,ಕುಟುಂಬ ಇತ್ಯಾದಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ