ಬನ್ನಿರಿ ನೋಡಿರಿ ಆನಂದ ಪಡಿರಿ
ಬಾಲ್ಯದಲ್ಲಿ ಕೆಲವು ಹವ್ಯಾಸಗಳು ಇದ್ದವು . ಅವುಗಳಲ್ಲಿ ಒಂದು ನೋಟೀಸ್ ಸಂಗ್ರಹಿಸುವುದು . ಊರಲ್ಲಿ ಯಕ್ಷಗಾನ ಬಯಲಾಟ ಇದ್ದರೆ ಗಾಡಿಯಲ್ಲಿ ಮೈಕ್ ಇಟ್ಟು "ಬನ್ನಿರಿ ನೋಡಿರಿ ಆನಂದ ಪಡಿರಿ ".ಅಣ್ಣನಕುಲೆ ಅಕ್ಕನಕುಲೆ ಬಲೆ ತೂಲೆ ಒಂಜೇ ಒಂಜಿ ಪ್ರದರ್ಶನ "ಎಂದು ಉದ್ಘೋಷಣೆ ಮಾಡುತ್ತಾ ಹೋಗುವರು .ಅವರ ಹಿಂದೆಯೇ ನಾವು ಮಕ್ಕಳು ಓಡಿ ನೋಟೀಸ್ ಹೆಕ್ಕುವೆವು .ಹೆಚ್ಚು ಸಿಕ್ಕರೆ ಸಂತೋಷ ,ಇಲ್ಲವಾದರೆ ನಿರಾಸೆ . ಬಣ್ಣ ಬಣ್ಣದ ನೋಟೀಸ್ . ವಿದ್ಯುತ್ ದೀಪಗಳಿಂದ ಅಲಂಕೃತವಾದ ರಂಗ ಸಜ್ಜಿಕೆ (ಇದು ಆಗ ಒಂದು ಆಕರ್ಷಣೆ ,ಯಾಕೆಂದರೆ ಮನೆಗಳಲ್ಲಿ ಇನ್ನೂ ಕರೆಂಟ್ ಇರಲಿಲ್ಲ )ಯಲ್ಲಿ' ಕಾಂತಾ ಬಾರೆ ಬುಧಾ ಬಾರೆ ",ದೇವಪೂಂಜ ಪ್ರತಾಪ ",'ಪಾಪಣ್ಣ ವಿಜಯ ಗುಣ ಸುಂದರಿ "ಶ್ವೇತ ಕುಮಾರ ಚರಿತ್ರೆ "ಇತ್ಯಾದಿ ಪ್ರಸಂಗಗಳ ಹೆಸರು ಹೇಳಿ ನೋಡಿ ಆನಂದಿಸಿರಿ ಎಂಬ ಅಹ್ವಾನ ವೂ ನೋಡದೇ ನಿರಾಶರಾಗದಿರಿ ಎಂಬ ಎಚ್ಚರಿಕೆಯೂ ಈ ನೋಟೀಸ್ ಗಳ ಮುಖ್ಯ ಒಕ್ಕಣೆ .
ಇನ್ನು ವಿಟ್ಲ ಪೇಟೆಯಲ್ಲಿ ಟೆಂಟ್ ಸಿನೆಮಾ ಆರಂಭವಾದ ಮೇಲೆ ,ಹೊಸ ಚಿತ್ರ ಬಂದಾಗ ಒಬ್ಬ ವ್ಯಕ್ತಿ ಸೈಕಲ್ ನಲ್ಲಿ ಬಂದು ಅಂಗಡಿ ಗೋಡೆಗಳಿಗೆ ಪೋಸ್ಟರ್ ಹಚ್ಚಿ ,ನೋಟೀಸ್ ಕೊಟ್ಟು ಹೋಗುತ್ತಿದ್ದನು . ರಾಜಹಂಸ ಥೀಯೇಟರ್ ನಲ್ಲಿ ಇಂದಿನಿಂದ 'ಉಳಗಂ ಸುಟ್ಟ್ರು ಬನ್ ವಾಲಿಬನ್' ಎರಡು ದೇಖಾವೆ ,ತಪ್ಪದೇ ನೋಡಿರಿ ಇತ್ಯಾದಿ . ಕನ್ನಡ ಸಿನೆಮಾ ಬಂದರೆ ನಮಗೆ ನಮ್ಮ ದೊಡ್ಡಪ್ಪ ನಟಿಸಿದ್ದರೆ ಅವರ ಹೆಸರು ನೋಟೀಸ್ ನಲ್ಲಿ ಕಂಡು ತುಂಬಾ ಖುಷಿ ಮತ್ತು ಹೆಮ್ಮೆ . ಅಂತಹ ನೋಟೀಸ್ ನಮ್ಮ ಸೇಫ್ಟಿ ಲಾಕರ್ ನಲ್ಲಿ ಭದ್ರವಾಗಿ ಇರುವುದು .
ಇನ್ನು ಕೆಲವು ಕಿಡಿಗೇಡಿ ನೋಟೀಸ್ ಗಳು ಸಿಗುತ್ತಿದ್ದವು .ಯಾವುದಾದರು ಪ್ರಸಿದ್ಧ ತೀರ್ಥ ಕ್ಷೇತ್ರದ ಮಹಿಮೆ ಬಗ್ಗೆ ಮೊದಲು ಉಲ್ಲೇಖ . ಆಮೇಲೆ ಈ ನೋಟೀಸ್ ಓದಿದದವರು ಇದರ ನೂರು ಪ್ರತಿ ಮಾಡಿ ಹಂಚುವುದು . ಹಾಗೆ ಮಾಡಿದ ಒಬ್ಬರಿಗೆ ಲಾಟರಿಯಲ್ಲಿ ಲಕ್ಷ ಹೊಡೆದಿರುವುದು ,ಉಢಾಫೆ ಮಾಡಿ ಮಾಡದೇ ಇದ್ದವರಿಗೆ ಲಕ್ವಾ ಹೊಡೆದಿರುವುದು ;ಇತ್ಯಾದಿ .ಮೊದಲು ಇಂತಹ ಎಚ್ಚರಿಕೆ ಪತ್ರ ನೋಡಿ ನಾವು ಕೆಲವು ಕಾಪಿ ಮಾಡಿದ್ದೂ ಇದೆ .ಆ ಮೇಲೆ ಹಿರಿಯರಿಗೆ ತಿಳಿದು ಅದನ್ನು ನಿಲ್ಲಿಸಿದ ನೆನಪು .
ಇನ್ನು ನೋಟೀಸ್ ಗಳ ಹೊರತಾಗಿ ಕೆಲವು ಅಮೂಲ್ಯ ಸಂಗ್ರಹಗಳು ಇದ್ದವು .
ನವಿಲು ಗರಿಗಳು ಒಂದು .ಆಗೆಲ್ಲಾ ಈಗಿನ ಹಾಗೆ ಕರ್ಕಶವಾಗಿ ಕೂಗಿ ಕೊಂಡು ಬರುವ ನವಿಲುಗಳು ಅಪರೂಪ;ನೋಡೇ ಇಲ್ಲ ಎನ್ನ ಬಹುದು . ಆದುದರಿಂದ ನವಿಲು ಗರಿ ಸಿಕ್ಕಿದರೆ ಪುಸ್ತಕದ ಒಳಗೆ ಇಟ್ಟರೆ ಅದು ಮರಿ ಹಾಕುವುದು ಎಂಬ ನಂಬಿಕೆ ಇತ್ತು .
ಇನ್ನು ಸೋಡಾ ಬಾಟ್ಲಿ ಯ ಗೋಲಿ , ಬಸ್ ಟಿಕೆಟ್ ಪುಸ್ತಕದ ಕೌಂಟರ್ ಫಾಯಿಲ್ , ನೂಲುಸುತ್ತುವ ಕಾಗದದ ಓಟೆ (ಇದನ್ನು ನಾವು ಟೆಲಿಫೋನ್ ಮಾಡಲು ಉಪಯೋಗಿಸುತ್ತಿದ್ದೆವು ಮತ್ತು ಅದನ್ನು ಊದಿ ಸಿಳ್ಳೆ ಹಾಕುತ್ತಿದ್ದೆವು )ಇವೆಲ್ಲಾ ನಮ್ಮ ಆಸ್ತಿ .
ಸಣ್ಣ ಸಣ್ಣ ವಸ್ತುಗಳು ,ತರುತ್ತಿದ್ದ ಸಂತೋಷ ಬಲು ದೊಡ್ಡದು . ಚಿನ್ನ ಚಿನ್ನ ಆಸೈ . ಸಂತೋಷ ಸಾಪೇಕ್ಷ ವಾದುದು . ಮಕ್ಕಳಿಗೆ ಆದ ಸಂತೋಷ ಹಿರಿಯರಿಗೆ ಆದ ಸಂತೋಷಕ್ಕಿಂತ ಸಣ್ಣದಲ್ಲ ;ಹಿರಿಯರು ಸಂತೋಷಿಸುವ ವಿಷಯಗಳು ಮತ್ತು ವಸ್ತುಗಳು ಇವುಗಳಿಂತ ಮಿಗಿಲಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ