ತಲೆಯ ಹೇನಿನ ಕಾಟ
"ಏನೂ ಇಲ್ಲದ ತಲೆಯಲ್ಲಿ ಹೇನೂ ಇಲ್ಲವೇ ?"
ಮನೆ ಮನೆಗಳಲ್ಲಿ ಹೆಚ್ಚಾಗಿ ಸಂಜೆ ಹೊತ್ತು ತಲೆಯಿಂದ ಹೇನು ಹೆಕ್ಕುವುದು ಸಾಮಾನ್ಯ ಕಂಡು ಬರುವ ದೃಶ್ಯ ಆಗಿತ್ತು ಮತ್ತು ಕೆಲವು ಕಡೆ ಈಗಲೂ ಇದೆ . ಈ ಹೇನಿನ ಉಪಟಳ ಶತಮಾನಗಳಿಂದ ಜಗತ್ತಿನ ಎಲ್ಲಾ ಕಡೆ ಇದೆ . ಹೇನಿಗೆ ಇಂಗ್ಲಿಷ್ ನಲ್ಲಿ ಲೌಸ್ ಎನ್ನುವರು . ಆ ಭಾಷೆಯಲ್ಲಿ ಒಂದು ಲೌಸಿ ಎಂಬ ನುಡಿಗಟ್ಟು ಇದೆ ಅರ್ಥಾತ್ ಅಸಹ್ಯ ಅಥವಾ ಚೆನ್ನಾಗಿಲ್ಲದ್ದು .. ಹೇನಿನ ಮೊಟ್ಟೆಗೆ ಇಂಗ್ಲಿಷ್ ನಲ್ಲಿ ನಿಟ್ಸ್ ಎನ್ನುವರು . ನಿಟ್ ಪಿಕ್ಕಿಂಗ್ ಎಂಬ ಉಪಯೋಗ ಇದೆ ,ಇದರ ಅರ್ಥ ಯಾವುದಾದರೂ ವಿಷಯವನ್ನು ಒಕ್ಕಿ ಒಕ್ಕಿ(ಕೆದಕಿ ಕೆದಕಿ ) ನೋಡುವದು . ಇದನ್ನೇ ಗೋಯಿಂಗ್ ಓವರ್ ದಿ ಥಿಂಗ್ಸ್ ವಿಥ್ ಫೈನ್ ಟೂತ್ ಕಾಂಬ್ ಎಂದು ಬಳಸುವದೂ ಇದೆ .
ತಲೆಯ ಹೇನು ಒಂದು ಪರಾವಲಂಬಿ ಜೀವಿ . ನೈರ್ಮಲ್ಯ ಕೊರತೆ ಮತ್ತು ಕಿಕ್ಕಿರಿದ ಮನೆಗಳು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಸಹಾಯಕಾರಿ . ಹೆಣ್ಣು ಮಕ್ಕಳಲ್ಲಿ ಇದರ ಉಪಟಳ ಜಾಸ್ತಿ . ತಲೆಯ ಚರ್ಮದಿಂದ ರಕ್ತ ಹೀರಿ ಬದುಕುವ ಇವು ,ಅಲ್ಲಿಯೇ ಮೊಟ್ಟೆ ಇಟ್ಟು ಸಂತಾನ ಬೆಳೆಸುವವು ..ಸ್ವಲ್ಪ ಹಳದಿ ,ಹೆಚ್ಚು ಬಿಳಿ ಇರುವ ಮೊಟ್ಟೆಗಳು ಕೂದಲ ಬುಡಕ್ಕೆ ಅಂಟಿಕೊಂಡು ಇರುವವು .. ಇವು ಮೊದಲು ತರುಣ ಆಮೇಲೆ ಪ್ರಬುದ್ಧ ಆಗುವವು .
ಇವುಗಳ ಕಡಿತದಿಂದ ವಿಪರೀತ ತುರಿಕೆ ಉಂಟಾಗುವದು .
ಹಿಂದೆ ನೈರ್ಮಲ್ಯ ಕೊರತೆಯಿಂದ ಇದರ ಹಾವಳಿ ಸರ್ವ ವ್ಯಾಪಿ ಆಗಿದ್ದು ,ಅದು ಒಂದು ಸಹಜ ಉಪಟಳ ಎಂದು ಎಲ್ಲರೂ ಭಾವಿಸುತ್ತ್ತಿದ್ದರು .ಹೇನು ತೆಗೆಯುವ ಬಾಚಣಿಗೆ ಎಂದೇ ಎಲ್ಲರ ಮನೆಯಲ್ಲಿ ಪ್ರತ್ಯೇಕ ಇರುತ್ತಿತ್ತು .ತಾಯಿ ಸಮಯ ಸಿಕ್ಕಾಗ ಮಗಳನ್ನು ತನ್ನ ಕಾಲ್ಗಳ ನಡುವೆ ಕೂರಿಸಿ ಹೇನು ಹೆಕ್ಕಿ ಅದನ್ನು ಉಗುರುಗಳ ನಡುವೆ ಚಿಟುಕ್ಕೆಂದು ಕೊಲ್ಲು ತ್ತಿದ್ದರು .ಕೆಲವರು ಈ ಕೆಲಸಕ್ಕೆ ಕತ್ತಿ (ಮಚ್ಚು )ಯನ್ನೂ ಬಳಸುತ್ತಿದ್ದರು . ಇದೇ ವೇಳೆಯನ್ನು ಕೆಲವು ತಾಯಿ ಮಕ್ಕಳು ಪರಸ್ಪರ ಗುಟ್ಟು ಮಾತನಾಡಿ ಕೊಳ್ಳಲು ,ಇನ್ನು ಕೆಲವು ಅಮ್ಮಂದಿರು ಮಗ್ಗಿ ಬಾಯಿಪಾಠ ಮಾಡಿಸಲು ಉಪಯೋಗಿಸುವರು .ಕೋಪ ಬಂದಾಗ ಮಗಳ ತಲೆಗೆ ಕುಟ್ಟುವರು .ತಾಯಿ ಮಕ್ಕಳನ್ನು ಸ್ವಲ್ಪ ಹತ್ತಿರ ಮಾಡಿದ ಶ್ರೇಯ ಹೇನಿಗೆ ಸಿಗಬೇಕು . ಪುನರಪಿ ಜನನ ಆಗಿ ಕೆಲವು ದಿನಗಳ ನಂತರ ಇದೇ ಹೇನು ಸಂಹಾರ ಕಾರ್ಯದ ಪುನರಾವರ್ತನೆ ಆಗುವುದು .
ಈ ಕಾಟಕ್ಕೆ ಈಗ ಒಳ್ಳೆಯ ಔಷಧಿಗಳು ಬಂದಿವೆ . ಪೆರ್ಮೆಥ್ರಿನ್ ನ ೧% ಲೋಷನ್ , ೧% ಲಿಂಡೇನ್ , ೦.೫% ಮ್ಯಾಲಾಥಿಯೊನ್ ಮತ್ತು ೦.೫% ಐವರ್ ಮೆಕ್ಟಿನ್ ಲೋಷನ್ ಇತ್ಯಾದಿ .ಇವುಗಳನ್ನು ಸಾಮಾನ್ಯ ಶಾಂಪೂ ಉಪಯೋಗಿಸಿ ಒಣಗಿಸಿದ ತಲೆಗೆ ಹಚ್ಚಿ ೧೦ ನಿಮಿಷಗಳ ಕಾಲ ಬಿಟ್ಟು ಕೂದಲು ತೊಳೆಯ ಬೇಕು .ತಲೆಯನ್ನು ಬಗ್ಗಿಸಿ ತೊಳೆಯುವುದರಿಂದ ಶರೀರಕ್ಕೆ ಔಷಧಿ ಸೇರದಂತೆ ಮಾಡ ಬಹುದು . ಇವುಗಳಲ್ಲಿ ಹೆಚ್ಚಿನ ಔಷಧಿಗಳು ಮೊಟ್ಟೆಗಳನ್ನು ಸಂಪೂರ್ಣ ನಾಶ ಮಾಡವು ,ಆದುದರಿಂದ ೧೦ ದಿನ ಬಿಟ್ಟು ಪುನಃ ಔಷಧಿ ಪ್ರಯೋಗ ಮಾಡುವುದು .ಕಣ್ಣಿನ ಒಳಗೆ ಔಷಧಿ ಹೋಗದಂತೆ ನೋಡಿ ಕೊಳ್ಳ ಬೇಕು .ಕಣ್ಣ ರೆಪ್ಪೆಗೆ ವ್ಯಾಸಲಿನ್ ಹಚ್ಚುವುದರಿಂದ ಹೇನು ನಿವಾರಿಸ ಬಹುದು .
ಮನುಷ್ಯರ ಮತ್ತು ಪ್ರಾಣಿಗಳ ಹೇನುಗಳು ಬೇರೆ .ಪ್ರಾಣಿಗಳ ಹೇನು ನಮ್ಮ ತಲೆಗೆ ಬಾರದು ;ಆದರೂ ಸಾಕು ಪ್ರಾಣಿಗಳ ಮೈಯಲ್ಲಿ ನಮ್ಮ ತಲೆಯಿಂದ ಬಿದ್ದ ಹೇನು ಮತ್ತು ಮೊಟ್ಟೆ ಇರ ಬಹುದು . ಮನುಜರ ಹೇನು ತಲೆಯಿಂದ ಹೊರ ಬಿದ್ದ ಕೆಲವು ಗಂಟೆಗಳಲ್ಲಿ ಸಾವನ್ನು ಅಪ್ಪುವುದು . ನಮ್ಮ ಬಟ್ಟೆಗಳಲ್ಲಿ ಹೇನಿನ ಮೊಟ್ಟೆ ಇರುವುದರಿಂದ ಕುದಿಯುವ ಬಿಸಿ ನೀರಿನಲ್ಲಿ ಅದ್ದಬೇಕು . ಬಿಸಿ ನೀರಿನಲ್ಲಿ ಹಾಕ ಬಾರದ ಬಟ್ಟೆಗಳನ್ನು ಡ್ರೈ ವಾಶ್ ಮಾಡಿ ಎರಡು ವಾರ ಚೀಲದ ಒಳಗೆ ಇಡಬೇಕು . ಬಾಚಣಿಕೆ ಯನ್ನು ಸ್ವಚ್ಛ ವಾಗಿ ಇಡಬೇಕಲ್ಲದೆ ಒಬ್ಬರದ್ದು ಅವರೇ ಉಪಯೋಗಿಸುವುದು ಉತ್ತಮ ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ