ಬೆಂಬಲಿಗರು

ಭಾನುವಾರ, ಜೂನ್ 6, 2021

ಕೊಡೆ

                        ಕೊಡೆ 


       

THULU ORIPUGA-kavyasutha : ಪಣೊಲಿ,ಪಣೋರು ,ಗೊರಬೆ -panoli,panoru,gorabe                                          ಮಳೆ ಗಾಲ ಆರಂಭವಾಗಿದೆ .ಕೊಡೆ ಗಳು ಹೊರಗೆ ಬಂದಿವೆ . 

ಚಿಕ್ಕಂದಿನಲ್ಲಿ ನಾವು ಮನೆಯಲ್ಲಿ ಉಪಯೋಗಿಸುತ್ತಿದ್ದುದು ಗೊರಬೆ .ಮನೆ ಭಾಷೆಯಲ್ಲಿ ಅದನ್ನು ಕಿರಿಂಜೆಲು ಎನ್ನುತ್ತಿದ್ದೆವು . ಇದರಲ್ಲಿ ಎರಡು ವಿಧ ಇದ್ದುವು .ಒಂದು ತೆಂಗಿನ ಓಲೆ (ಮಡಲು)ಯಿಂದ ಮಾಡಿದ್ದು .ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದುದು .ಅದರ ತಲೆ ಭಾಗದಲ್ಲಿ ಹುಂಜದಂತೆ ಒಂದು ಜುಟ್ಟು ಇರುತ್ತಿತ್ತು . ಇನ್ನೊಂದು ತಾಳೆ ಓಲೆಯಿಂದ ಮಾಡಿದುದು . ಹಿರಿಯರು ಮತ್ತು ಕಾರ್ಮಿಕರು ಹೆಚ್ಚಾಗಿ ಉಪಯೋಗಿಸುತ್ತಿದುದು. ಚಿತ್ರದಲ್ಲಿ ಕಾಣುವುದು ಇದುವೇ. ನಮ್ಮ ಮನೆಯ ಹತ್ತಿರ  ರಾಚು ಆಚಾರಿ ಎಂಬವರು ಇದ್ದರು.ಅವರು ಚೆನ್ನಾಗಿ ಗೊರಬೆ ಹಣೆಯುತ್ತಿದ್ದು ನಮ್ಮ ಬೇಡಿಕೆಗಳನ್ನು ಪೂರೈಸುತ್ತಿದ್ದರು . ಜೋರಾಗಿ ಮಳೆ ಬರುವಾಗ ಕೊಡೆಗಿಂತ ಗೊರಬೆ ಉತ್ತಮ .ಕಡೇ ಪಕ್ಷ ಬೆನ್ನು ಬೆಚ್ಚಗೆ ಉಳಿಯುವುದು . 'ಮರಳಿ ಮಣ್ಣಿಗೆ 'ಕಾದಂಬರಿಯಲ್ಲಿ ಸರಸೋತಿಯದ್ದೋ  ಪಾರೋತಿಯದ್ದೋ ಮದುವೆ ದಿಬ್ಬಣ ವನ್ನು ಕಾರಂತರು ವರ್ಣಿಸುವಾಗ ಮಳೆಯಿಂದಾಗಿ  ಮದುವೆ ಮನೆಗೆ ತಲುಪುವಾಗ ಬೆನ್ನು ಮಾತ್ರ ಒದ್ದೆಯಾಗದೆ ಉಳಿದದ್ದು ಎಂದು ಬರೆದ ನೆನಪು . ಶಾಲೆಗೆ ಕೂಡ ಅರ್ಧದಷ್ಟು ಮಕ್ಕಳು ಗೊರಬೆ ಧಾರಿ  ಗಳಾಗಿ  ಬರುತ್ತಿದ್ದರು . ನಮ್ಮ ಕಿವಿ ಗೊರಬೆಯ ಒಳಗೆ ಇರುತ್ತಿದ್ದರಿಂದ  ಮತ್ತು ಮಳೆಯ ಶಬ್ದ ಎರಡೂ ಸೇರಿ ನಮ್ಮನ್ನು ಭಾಗಶಃ  ಕಿವುಡ ರನ್ನಾಗಿ ಮಾಡುವುದು .

 

ನೇಜಿ ನೆಡುವ ಸಮಯ ಎಲ್ಲರೂ ಸಾಲಾಗಿ ಬಾಗಿ ಗೊರಬೆಗಳ ಸಾಲು ತೇಲುತ್ತ ಇರುವಂತೆ ಕಾಣುವುದು. ಮಳೆ ಇಲ್ಲದ ಸಮಯ ಹುಣಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕೂಡಾ ನೆನಪಿಗೆ ಬರುವುದು.
ಗದ್ದೆ ತೋಟಕ್ಕೆ ಹೋಗುವಾಗ ಗೊರಬೆ ಮರೆತು ಹೋದಾಗ ಹಠಾತ್ ಮಳೆ ಬಂದರೆ ಮುಂಡಿ ಎಲೆ ಸಿಕ್ಕಿದರೆ ಅದನ್ನೇ ತುಂಡು ಮಾಡಿ ತಲೆಗೆ ಹಿಡಿದುಕೊಂಡು ಬರುವುದು .

ಮುಂದೆ ಕೊಡೆ ಬಂತು . ನಮ್ಮ ಊರ ಮಳೆಗೆ ಕೊಡೆ ಮಾನಸಿಕ ರಕ್ಷಣಾ ಭಾವಕ್ಕೆ ಮಾತ್ರ .ಜೋರಾಗಿ ಗಾಳಿ ಮಳೆ ಬಂದರೆ ವರುಣನಿಂದ ನಮ್ಮನ್ನು ರಕ್ಷಿಸದು .ಗದ್ದೆಯ ಹುಣಿಯಲ್ಲಿ ನಡೆಯುವಾಗ ಗಾಳಿ ನಮ್ಮನ್ನು ಕೊಡೆ ಸಹಿತ  ಧರಾ ಶಾಯಿ ಯಾಗಿ ಮಾಡಿದ್ದು ಇದೆ . ಮಳೆಗೆ ಮೈಲು ಗಟ್ಟಲೆ ನಡೆದು ಶಾಲೆಗೆ ತಲುಪುವಾಗ ಕೆಲವು ದಿನ ಚಂಡಿ ಪುಂಡಿ . ವರ್ಷದಲ್ಲಿ ಮೂರು ನಾಲ್ಕು ದಿನವಾದರೂ ಹೆಡ್ ಮಾಸ್ತರು ನಮ್ಮ ಸ್ಥಿತಿ ಗಮನಿಸಿ ರಜೆ ಘೋಷಿಸುವರು .ನಮಗೆ ಭಾರೀ ಖುಷಿ . ತುಂಬಾ ದಿನಗಳ ರಜೆ ಬಂದಾಗ ಯಾವಾಗ ಶಾಲೆ ಶುರು ಆಗುವುದೊ ಎಂಬ ಚಿಂತೆ ,ಶಾಲೆ ಆರಂಭ ಆದ ಮೇಲೆ ರಜೆ ಯಾವಾಗ ಬರುವುದೋ ಎಂಬ ಯೋಚನೆ ಮಕ್ಕಳಿಗೆ ಅನಾದಿ ಕಾಲದಿಂದಲೂ ಇದ್ದದ್ದು .

ಕೊಡೆ ನಮಗೆ ಚಿಕ್ಕಪ್ಪ ಮಂಗಳೂರು ಅಡಿಕೆ ಬಂಡಸಾಲೆ ಯಿಂದ ಬರುವಾಗ ತರುತ್ತಿದ್ದುದು .ಅದರ ಬಟ್ಟೆಯಲ್ಲಿ ಸಿಲ್ವರ್ ಪೈಂಟ್ನಿಂದ ನಮ್ಮ ಹೆಸರು ಬರೆಸುತ್ತಿದ್ದರು .ನಮ್ಮ ಹೆಮ್ಮೆಯ ಸೊತ್ತು .ಈಗಿನಂತೆ ವರ್ಷಕ್ಕೆ ಒಂದು ಕೊಡೆ ಕೊಳ್ಳುವುದು ಇರಲಿಲ್ಲ . ಹಲವು ಭಾರಿ ಅದಕ್ಕೆ ಸರ್ವೀಸ್ ಮಾಡುವುದು . ಕೆಲವೊಮ್ಮೆ ಬಟ್ಟೆಯನ್ನೇ ಬದಲಾಯಿಸುದು .ಮಳೆಗಾಲ ಮುಗಿಯುತ್ತಲೇ ಆಟ್ಟ ಸೇರುವುದು .

ಮದುವೆ ದಿಬ್ಬಣದಲ್ಲಿ ಕೊಡೆ ಮುಖ್ಯ ವಸ್ತು .ನನ್ನ ಮದುವೆ ದಿನ ಅದನ್ನು ಕೊಂಡು ಹೋಗಲು ಬಿಟ್ಟು ಹೋಗಿತ್ತು . ಕಡೆಗೆ ಹುಡುಗಿಯ ಕೊಡೆಯನ್ನೇ ತತ್ಕಾಲ ತೆಗೆದು ಕೊಂಡೆವು .ಕೊಡೆ ಇಲ್ಲದ್ದ ಮಾಣಿಗೆ (ಗಂಡಿಗೆ) ಕೂಸಿನ (ಹುಡುಗಿಯ )ಕೊಡೆ .ಎಂಬುದು ಒಳ್ಳೆಯ ಪನ್ ಆಯಿತು .

ಎ ಜೆ ಗಾರ್ಡ್ನರ್  ಅವರ ಅಂಬ್ರೆಲ್ಲ ಮೋರಲ್ಸ್ ಎಂಬ ಪ್ರಸಿದ್ದ ಲಲಿತ ಪ್ರಬಂಧ ಇದೆ .ಇದರಲ್ಲಿ ಸಮಾರಂಭ ,ಚರ್ಚ್ ಇತ್ಯಾದಿ ಗಳಿಗೆ  ಹೋಗಿ ವಾಪಾಸು ಬರುವಾಗ ಗಡಿಬಿಡಿ ಯಲ್ಲಿ  ನಾವು ನಮ್ಮ ಹಳೇ ಕೊಡೆ ಬದಲಿಗೆ ಇನ್ಯಾರದೋ ಹೊಸ ಕೊಡೆ ತಪ್ಪಿ ತೆಗೆದು ಕೊಳ್ಳುವುದು ,ನಂತರ ಅರ್ಧ ದಾರಿಯಲ್ಲಿ ಅದನ್ನು ನೋಡಿ "ಛೇ ತಪ್ಪಾಯಿತಲ್ಲಾ ,ಇದ್ಯಾರದೋ ಬೇರೆ ಕೊಡೆ "ಎಂದು ಕೊಂಡು ಪುನಃ ಹೋಗಿ ಮರಳಿಸುವಾ ಎಂದು ಆತ್ಮ ಸಾಕ್ಷಿ ಹೇಳುವುದು . ವಾಸ್ತವ ಪ್ರಜ್ನೆ" ನಾನು ಪುನಃ ಹೋಗುವಷ್ಟರಲ್ಲಿ  ಇದರ ಯಜಮಾನ ಇನ್ಯಾರದೋ ಕೊಡೆ ತೆಗೆದು ಕೊಂಡು ಮನೆಗೆ ಹೋಗಿರುವನು .ಇದು ನನಗೇ ಆಯಿತು.ನಾನು ಉದ್ದೇಶ ಪೂರ್ವಕ ಬದಲಿಸಿದ್ದು ಅಲ್ಲವಲ್ಲ .(ಯಾಕೆಂದರೆ ಇದು ಹೊಸ ಕೊಡೆ !)"ಎಂದು ಸಮಜಾಯಿಷಿ ನೀಡುವುದು .ದೇವಸ್ಥಾನಕ್ಕೆ ಹೊಸಾ ಕೊಡೆ ತೆಗೆದು ಕೊಂಡು ಹೋದರೆ ನಮ್ಮ ಮನಸು ಹೊರಗೆ ಇಟ್ಟ ಕೊಡೆ ಮೇಲೇ ಇರುವುದರಿಂದ ಛತ್ರಿ ಚಿತ್ತರಾಗಿ ಭಾಗವಂತನನ್ನು ಪ್ರಾರ್ಥಿಸುತ್ತೇವೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ