ಬೌತೀಸ್ ಸೋಜರ ಕಾರು
ನನಗೆ ತಿಳಿದಂತೆ ಕನ್ಯಾನ ಗ್ರಾಮದ ಮೊದಲನೇ ಕಾರು ಬೌತೀಸ ಸೋಜರದ್ದು . ಕಳಂಜಿ ಮೂಲೆ ಸೆರಗಿನ ಪಂಜಾಜೆ ಯಲ್ಲಿ ಅವರ ಮನೆ ;ಪೇಟೆಗೆ ಸಮೀಪ . ಬಾಡಿಗೆಗೆ ಓಡಿಸುತ್ತಿದ್ದ್ದು ಅದುವೇ ಅವರ ವೃತ್ತಿ . ಆರಂಭದ ಕಾರು ಹ್ಯಾಂಡಲ್(ಕ್ರ್ಯಾಂಕ್ ) ಹಾಕಿ ತಿರುಗಿಸಿ ಸ್ಟಾರ್ಟ್ ಮಾಡುವಂತಹದು .ದಾರಿಯಲ್ಲಿ ನಿಂತರೆ ನಿಲ್ಲಿಸಿ ತಾವೇ ಇಳಿದು ಸ್ಟಾರ್ಟ್ ಮಾಡಬೇಕು . ಅಂತೆಯೇ ಕಾಲ ಕಾಲಕ್ಕೆ ರೇಡಿಯೇಟರ್ ನ ದಾಹ ತೀರಿಸ ಬೇಕು . ಆಮೇಲೆ ಕೀ ಸ್ಟಾರ್ಟ್ ಅಂಬಾಸಡರ್ ಕಾರ್ ಬಂತು .ಬೌತೀಸರು ಕನ್ಯಾನ ಮತ್ತು ವಿಟ್ಲ ದ ನಡುವೆ ಸರ್ವಿಸ್ ನಡೆಸುವರು.ಆಗ ಕನ್ಯಾನದಲ್ಲಿ ರಿಕ್ಷಾ ಜೀಪ್ ಇತ್ಯಾದಿ ಇರಲಿಲ್ಲ .ನಾವು ಹೆಚ್ಚಾಗಿ ಬೈರಿಕಟ್ಟೆಯಿಂದ ವಾಹನ ಹಿಡಿಯುತ್ತಿದ್ದರಿಂದ ಅವರ ಕಾರಿನಲ್ಲಿ ಸಂಚರಿಸಿದ್ದು ಕಡಿಮೆ . ಆದರೂ ಊರಿನವರು ಸಾಮಾನು ಸಾಗಿಸಲು ,ಪೇಟೆಗೆ ಹೋಗಲು ಅವರ ವಾಹನ ತುಂಬಾ ಅನುಕೂಲ ಇತ್ತು . ಸರ್ವಿಸ್ ಕಾರಿನಲ್ಲಿ ಮುಂದೆ ಡ್ರೈವರ್ ಅಲ್ಲದೆ ಕನಿಷ್ಠ ಮೂರು ಪ್ರಯಾಣಿಕರನ್ನು ಹಾಕುತ್ತಿದುದು ಸಾಮಾನ್ಯ . ಇಂತಹ ಸಂದರ್ಭದಲ್ಲಿ ಚಾಲಕರ ಸೊಂಟದ ಬಲ ಭಾಗ ಮಾತ್ರ ಕಾರಿನ ಸೀಟಿನ ಮೇಲೆ ,ಎರಡೂ ತೊಡೆಗಳು ಸಮಾಂತರವಾಗಿ ಬಲದ ಕಡೆ ,ಮೊಣಕಾಲಿನಿಂದ ಕೆಳಗೆ ಎಡಗಡೆ ಕ್ಲಚ್ ,ಬ್ರೇಕ್ ಮತ್ತು ಆಕ್ಸಿಲೇಟರ್ ಸಂಭಾಳಿಸುತ್ತಿತ್ತುದು ಸೋಜಿಗವೇ ಸರಿ . ಆದರೆ ಜನ ಹಾಕದೆ ಇದ್ದರೆ ಖಂಡಿತ ಅವರಿಗೆ ಅಸಲು ಆಗದು .
ಕನ್ಯಾನದಲ್ಲಿ ಆಗ ಎಲ್ಲರಿಗೂ ಇದ್ದ ಡಾಕ್ಟರ್ ಡಾ ಮಹಾದೇವ ಶಾಸ್ತ್ರಿಗಳು ಒಬ್ಬರೇ .ಯಾರ ಮನೆಯಲ್ಲಿಯಾದರೂ ರಾತ್ರಿ ಹೊತ್ತು ಗಂಭೀರ ಅಸೌಖ್ಯ ಆದರೆ ಸೂಟೆ ಹಿಡಿದುಕೊಂಡು ಬೌತೀಸರ ಮನೆಗೆ ಓಟ .(ಆಗ ಫೋನ್ ಇರಲಿಲ್ಲ )ಅವರನ್ನು ಎಬ್ಬಿಸಿ ಮಹಾದೇವ ಶಾಸ್ತ್ರಿಗಳ ಮನೆಗೆ . ಮನೆ ವರೆಗೆ ಮಾರ್ಗಗಳು ಇರುತ್ತಿದುದು ಕಡಿಮೆ ಆಗಿದ್ದ ಆ ದಿನಗಲ್ಲಿ ಗದ್ದೆ ಹುಣಿ ,ತಡಮ್ಮೆ ಮತ್ತು ಒರುಂಕು ದಾಟಿ ಡಾಕ್ಟರರು ಮನೆಗೆ ಬಂದು ಪರೀಕ್ಷೆ ಮಾಡಿ ಉಪಚಾರ ಮಾಡುವರು . ಇಲ್ಲಿ ವಿಶೇಷ ಎಂದರೆ ಇಬ್ಬರೂ ಅಪರಾತ್ರಿ ತೊಂದರೆ ಕೊಟ್ಟುದಕ್ಕೆ ಗೊಣಗಿದ್ದು ಇಲ್ಲ .ಮತ್ತು ರಾತ್ರಿ ಮನೆಯಲ್ಲಿ ಹಣ ಇಲ್ಲದ ಸಂದರ್ಭಗಳೇ ಹೆಚ್ಚಾಗಿದ್ದು ಎಲ್ಲೆ ಕೊರ್ಪೆ ಎಂದು ಕರೆದು ಕೊಂಡು ಬಂದವರು ಹೇಳುವರು ,ಇವರು ಗೊಣಗದೇ ಹೋಗುವರು .ವಾಪಾಸು ಡಾಕ್ಟ್ರ ಜತೆ ಬೌತಿಸರು ಮಾತ್ರ ,ಅವರನ್ನು ಮತ್ತು ಅವರ ಪೆಟ್ಟಿಗೆಯನ್ನು ತಲುಪಿಸಿ ಮನೆಗೆ ಮರಳುವರು .ಇಂತಹ ಸಂದರ್ಭ ಅನೇಕ .ಅಂತೂ ತಮ್ಮ ಸೇವೆಯಿಂದ ದೇವ ಪಾದ ಸೇರ ಹೊರಟಿದ್ದ ಅನೇಕರ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದರು .
ಕೆಲ ವರ್ಷಗಳ ವೃದ್ಧಾಪ್ಯದಿಂದ ಸೊಂಟದ ಎಲುಬು ಮುರಿದು ನಮ್ಮಆಸ್ಪತ್ರೆಯಲ್ಲಿ ಅದನ್ನು ಸರಿ ಪಡಿಸಿ ಹೋದವರು ,ಕೆಲ ತಿಂಗಳುಗಳ ನಂತರ ಮನೆಯಲ್ಲಿ ತೀರಿ ಕೊಂಡರು . ಅವರ ಏಕೈಕ ಪುತ್ರ ಕೆಲವು ತಿಂಗಳುಗಳ ಹಿಂದೆ ಆಸ್ಪತ್ರೆಗೆ ಹೋಗುವಾಗ ದ್ವಿಚಕ್ರ ಅಪ ಘಾತದಿಂದ ಮೃತ ಪಟ್ಟ ವಾರ್ತೆ ನಮಗೆಲ್ಲ ಆಘಾತ ಉಂಟು ಮಾಡಿದೆ .ಯಾಕೆ ನಿರ್ದಯನಾದೆಯೋ ಶ್ರೀ ಹರಿಯೇ ?
ಈಗಲೂ ವಿಟ್ಲ ಪೇಟೆಯಲ್ಲಿ ಕನ್ಯನ ಕನ್ಯನ ಎಂದು ಊರವರ ಕರೆಯುತ್ತಿದ್ದ ಬೌತೀಸರ ನೆನಪಾಗುವದು ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ