ಬೆಂಬಲಿಗರು

ಗುರುವಾರ, ಜೂನ್ 3, 2021

ಕೊಕ್ಕೆ ಹುಳದ ಜೀವನ ಚರಿತ್ರೆ

      ಕೊಕ್ಕೆ ಹುಳದ ಜೀವನ ಚಕ್ರ 

 

 ಪ್ರತಿಯೊಂದು ಕರುಳ ಜಂತುವಿನ ಜೀವನ ಚಕ್ರ ಸಂಕೀರ್ಣವಾಗಿದ್ದು ಪ್ರಕೃತಿಯ ವೈಚಿತ್ರ್ಯವನ್ನು ಸಾರುತ್ತದೆ . ಉದಾಹರಣೆಗೆ  ರಕ್ತ ಹೀರುವ ಕೊಕ್ಕೆ ಹುಳ (Hookworm )ನ್ನು ತೆಗೆದು ಕೊಳ್ಳುವ . ಗಂಡು ಮತ್ತು ಹೆಣ್ಣುಹುಳಗಳು ಕರುಳ ಒಳಗಣ ಮಿಲನದ ಫಲವಾಗಿ ಹೆಣ್ಣು ಹುಳಗಳು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ .ಈ ಮೊಟ್ಟೆಗಳು ಮಲದ ಮೂಲಕ ನೆಲ ಸೇರಿ ಕೆಲ ದಿನಗಳಲ್ಲಿ ಹಂತ ಹಂತವಾಗಿ ಎರಡು ರೂಪದ ಲಾರ್ವಾ ಆಗಿ ಪರಿವರ್ತನೆ ಗೊಳ್ಳುವುದು . ಎರಡನೇ ರೂಪದ ಲಾರ್ವಾ ನಮ್ಮ ಕಾಲಿನ ಗಾಯ ಮತ್ತು ಕೂದಲ ರಂಧ್ರಗಳ ಮೂಲಕ ಶರೀರದ ಪ್ರವೇಶ ಪಡೆಯುವುದು . ಅಲ್ಲಿ ಅದು ರಕ್ತನಾಳಗಳನ್ನು ಪ್ರವೇಶಿಸಿ ಶ್ವಾಸಕೋಶ ಸೇರಿ ,ರಕ್ತ ನಾಳ ಭೇದಿಸಿ ಶ್ವಾಸ ಕೋಶ ,ಶ್ವಾಸ ನಾಳ ಮೂಲಕ ಗಂಟಲು ಸೇರಿ ,ಅನ್ನ ನಾಳದಲ್ಲಿ ಇಳಿದು ತನ್ನ ನಿವಾಸವಾದ ಕರುಳು ಸೇರುವುದು .ಇಲ್ಲಿ ಲಾರ್ವಾ ರೂಪದಿಂದ ಪ್ರಬುದ್ಧ ಗಂಡು ಮತ್ತು ಹೆಣ್ಣು ಕೊಕ್ಕೆ ಹುಳವಾಗಿ ಮಾರ್ಪಡುವುದು .. ಅಲ್ಲಿ ಕರುಳ ಗೋಡೆಗೆ ಆತು ಕೊಂಡು ರಕ್ತ ಹೀರುವುದು . 

ಈ ಹುಳದ ಲಾರ್ವಾ ಚರ್ಮ ಪ್ರವೇಶಿಸಿದ ಭಾಗದ ಸುತ್ತ ಮುತ್ತ ಅಲ್ಲರ್ಜಿ ಯಿಂದ ತುರಿಕೆ ಮತ್ತು ಕೆಂಪು ಉಂಟಾಗ ಬಹುದು .ಶ್ವಾಸ ಕೋಶದ ಮೂಲಕ ನಡೆಯುವ ಸವಾರಿ ಮತ್ತು ಕಟ್ಟೆ  ಪೂಜೆಯಿಂದ ಕೆಮ್ಮು ಮತ್ತು ಅಸ್ತಮಾ ಉಂಟಾಗ ಬಹುದು . ಇವು ಅಲರ್ಜಿ ಅಥವಾ ಅತಿ ಸಂವೇದನೆಯಿಂದ ಉಂಟಾಗುವ ತೊಂದರೆಗಳು . ಕರುಳಿನ ರಕ್ತ ಹೀರುವಿಕೆಯಿಂದ ತೀವ್ರ ತರ ರಕ್ತ ಹೀನತೆ ಉಂಟಾಗ ಬಹುದು . 

                ಇಂತಹ ಪರೋಪಜೀವಿಗಳು ಸೇರಿದಾಗ ಮಾನವ ನ ರಕ್ತದಲ್ಲಿ ಇಯೋಸಿನೋಫಿಲ್ ಎಂಬ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವುದು ;ಇದನ್ನು .ಇಯೋಸಿನೋಫಿಲಿಯಾ ಎನ್ನುವರು . ಇಯೋಸಿನೋಫಿಲಿಯಾ ಎಂಬುದು ಒಂದು ಕಾಯಿಲೆಯಲ್ಲ .ಹಲವು ಕಾಯಿಲೆಗಳಲ್ಲಿ ಅದು ಇರ ಬಹುದು . ಬಹಳ ಮಂದಿ ನನಗೆ ಇಯೋಸಿನೋಫಿಲಿಯಾ ಕಾಯಿಲೆ ಇದೆ ಎಂದು ಬರುತ್ತಾರೆ . 

ಕೊಕ್ಕೆ ಹುಳ ತಡೆಗಟ್ಟಲು ಬಯಲು ಶೌಚ ನಿರ್ಮೂಲನೆ ಮತ್ತು ಪಾದರಕ್ಷೆ ಹಾಕಿ ನಡೆಯುವುದು ಮುಖ್ಯ .ಆದರೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿರುವಾಗ ಎರಡನೇಯದು ಸ್ವಲ್ಪ ಕಷ್ಟ . 

ನಾಯಿ ಮತ್ತು ಬೆಕ್ಕುಗಳಲ್ಲಿಯೂ ಕೊಕ್ಕೆ ಹುಳ ಕಾಟ ಇದ್ದು ಅವುಗಳು ಮನುಷ್ಯರಿಗೆ ಹರಡ ಬಹುದು .ಆದರೆ ಅವು ಹೆಚ್ಚಾಗಿ ಚರ್ಮದ ತುರಿಕೆ ಮತ್ತು ಕೆಂಪು ಉಂಟು ಮಾಡಬಹುದು . ಅವು ಅಲ್ಲಿಯೇ ಕೊನೆಯುಸಿರು ಎಳೆಯುವದು ಸಾಮಾನ್ಯವಾದ್ದರಿಂದ  ಕರುಳಿನ ವರೆಗೆ ತಲುಪುವುದು ಅಪರೂಪ ..ಏನೇ ಇರಲಿ ಸಾಕು ಪ್ರಾಣಿಗಳಿಗೂ ಹುಳದ ಔಷಧ ಆಗಾಗ ಕೊಡುತ್ತಿರ ಬೇಕು 

 

CDC - Hookworm - Biology

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ