ಕೋವಿಡ್ ಪರ್ವದಲ್ಲಿ ಮೇಲಿಂದ ಮೇಲೆ ಕೇಳಿ ಬರುತ್ತಿರುವ ಶಬ್ದ .ಮತ್ತು ಮಾರ್ಕೆಟ್ ನಲ್ಲಿ ಇಮ್ಯೂನಿಟಿ ಬೂಸ್ಟರ್ ಗಳ ಹಾವಳಿ .
ಇಮ್ಯೂ ನಿಟಿ ಎಂದರೆ ರೋಗ ನಿರೋಧಕ ಕ್ರಿಯೆ .ಇದರಲ್ಲಿ ಎರಡು ವಿಧ .ಒಂದು ಜನ್ಮ ದತ್ತ ವಾಗಿ ಬಂದುದು ,ಇನ್ನೊಂದು ಸ್ವಾರ್ಜಿತ .
ನಮ್ಮ ಶರೀರದ ರಕ್ಷಣೆಯ ಸೈನಿಕರು ಬಿಳಿ ರಕ್ತ ಕಣಗಳು .ಬಹು ಕೋಶ ಕೇಂದ್ರ ಗಳು ಇರುವ ನ್ಯೂಟ್ರೋಫಿಲ್ ಅಥವಾ ಪೋಲಿ ಮೋರ್ಪೋ ನ್ಯೂಕ್ಲಿಯರ್ ಸೆಲ್ ಎಂದು ಕರೆಯಲ್ಪಡುವ ಬಿಳಿ ರಕ್ತ ಕಣ
ಮತ್ತು ಒಂದೇ ಕೋಶ ಕೇಂದ್ರ ಇರುವ ಲಿಂಫೋಸೈಟ್ ಎಂಬ ಕಣಗಳು ಮುಖ್ಯ .
ನ್ಯೂಟ್ರೋಪಿಲ್ ಗಳು ವೈರಿಗಳ (ರೋಗಾಣು )ಸೂಚನೆ ಬಂದ ಒಡನೆ ಧಾವಿಸಿ ಸಾದ್ಯವಾದರೆ ಕೊಂದು ತಿನ್ನುತ್ತವೆ .ಒಂದು ವೇಳೆ ಕಾಳಗದಲ್ಲಿ ಹುತಾತ್ಮ ರಾದರೆ ರೋಗಾಣು ನಿರೋಧಕ ರಸಾಯನಿಕಗಳನ್ನು ಹೊರಹಾಕಿ ಸಾಯುತ್ತವೆ .ಸೂಯಿಸೈಡ್ ಬಾಂಬರುಗಳಂತೆ .ಕವಿ ಟೆನ್ನಿಸನ್ ಎಂದಂತೆ 'ours not to reason why,ours but to do and die ' ಅವುಗಳ ಜೀವನ ಸೂತ್ರ .ನಾವು ಕೀವು ಎಂದು ಕರೆಯುವ ವಸ್ತು ವಿನಲ್ಲಿ ಇರುವುದು ರೋಗಾಣು ,ಈ ಸೈನಿಕ ಕಣಗಳ ಮೃತ ದೇಹ ಮತ್ತು ಸತ್ತ ಜೀವ ಕೋಶಗಳು
ನಮ್ಮ ದೇಹದ ಮೂಲೆ ಮೂಲೆಗಳಲ್ಲಿ ಬೇಹುಗಾರ ಜೀವಕೋಶಗಳು(antigen presenting cell )ಇರುತ್ತವೆ .ಇವು ಪರಕೀಯಯರನ್ನು ಕಂಡ ಕೂಡಲೇ ರಾಸಾಯನಿಕ ಸಂಕೇತ ಗಳನ್ನು ಹೊರಡಿಸುತ್ತವೆ
ಅವುಗಳು ಲಿಂಫೋಸೈಟ್ ಗಳಿಗೆ ತಲುಪುತ್ತದೆ . ಲಿಂಫೋಸೈಟ್ ಎರಡು ವಿಧ ಒಂದು ಟಿ ಲಿಂಫೋಸೈಟ್ .ಇನ್ನೊಂದು ಬಿ ಲಿಂಫೋಸೈಟ್ .ಟಿ ಲಿಂಫೋಸೈಟ್ ನಲ್ಲಿ ಮತ್ತೊಮ್ಮೆ ಸಹಾಯಕ(helper ) ಲಿಂಫೋಸೈಟ್ ಮತ್ತು ಮಾರಕ(ಕಿಲ್ಲರ್) ಟಿ ಲಿಂಫೋಸೈಟ್ ಎಂಬ ಪ್ರಭೇಧ ಇದೆ ..ಬೇಹುಗಾರ ಸಂಕೇತಗಳನ್ನು ಸಹಾಯಕ ಟಿ ಲಿಂಫೋಸೈಟ್ ಗ್ರಹಿಸಿ ಮಾರಕ ಟಿ ಲಿಂಫೋಸೈಟ್ ಮತ್ತು ಬಿ ಲಿಂಫೋಸೈಟ್ ಗಳಿಗೆ ರವಾನಿಸುತ್ತದೆ .. ಮಾರಕ ಲಿಂಫೋಸೈಟ್ ಗಳು ಸೈನಿಕರಂತೆ ವೈರಿಯ ಮೇಲೆ ಒಗ್ಗೂಡಿ ಬೀಳುತ್ತವೆ .ಬಿ ಲಿಂಫೋಸೈಟ್ ಗಳು ಆರ್ಡಿನೆನ್ಸ್ ಫ್ಯಾಕ್ಟರಿ ಗಳಂತೆ
ಪ್ಲಾಸ್ಮಾ ಸೆಲ್ ಆಗಿ ಪರಿವರ್ತನೆ ಗೊಂಡು ಆಂಟಿಬಾಡಿ ಅಥವಾ ಪ್ರತಿ ವಿಷ ವನ್ನು ಉತ್ಪತ್ತಿ ಮಾಡಿ ವೈರಿಯನ್ನು ಮಣಿಸಲು ಯತ್ನಿಸುವವು .
ಎಚ್ಐ ವಿ ವೈರಸ್ ಸಹಾಯಕ ಟಿ ಲಿಂಫೋಸೈಟ್ ಗಳನ್ನು ನಾಶ ಮಾಡುವುದರಿಂದ ಇಮ್ಮ್ಯೂನಿಟಿ ಯ ಚೈನ್ ಅಥವಾ ಸಂಕೋಲೆ ತುಂಡಾಗಿ ಕಂಡು ಕೇಳರಿಯದ ಸಣ್ಣ ಪುಟ್ಟ ಸೋಂಕು ರೋಗಗಳಿಂದ ಹಿಡಿದು ಭೀಕರ ಕ್ಯಾನ್ಸರ್ ಕೂಡಾ ತಮ್ಮ ರೋಗಕಾರಕ ಪ್ರತಿಭೆ ಪ್ರಕಟಿಸಲು ಈ ವೈರಸ್ ಪೀಡಿತ ಮನುಷ್ಯನನ್ನು ಆಡುಂಬೊಲವಾಗಿ ಮಾರ್ಪಡಿಸುತ್ತವೆ .ಎಚ್ ಐ ವಿ ಅಂದರೆ ಹ್ಯೂಮನ್ ಇಮ್ಮುನೊ ಡೆಫಿಷಿಯೆನ್ಸಿ ಅಥವಾ ಮಾನವ ಪ್ರತಿರೋಧ ಕುಂಠಿತವಾಗುವ ಕಾಯಿಲೆ
ಒಮ್ಮೆ ಒಂದು ರೋಗಕ್ಕೆ ಪ್ರತಿ ವಿಷ ಅಥವಾ ಆಂಟಿಬಾಡಿ ತಯಾರಿಸಲು ಕಲಿತರೆ ಪುನಃ ಅದೇ ರೋಗ ಭಾದಿಸಿದರೆ ರೆಡಿ ಮೇಡ್ ಅಸ್ತ್ರ ಇರುವುದರಿಂದ ರೋಗ ಮಣಿಸುವುದು ಸುಲಭ .ಇಂದು ನೈಸರ್ಗಿಕ ಇಮ್ಮ್ಯೂನಿಟಿ ಅಥವಾ ರೋಗ ನಿರೋಧಕ ಶಕ್ತಿ ಪಡೆಯುವ ವಿಧಾನ ..ಇನ್ನೊಂದು ನೈಸರ್ಗಿಕ ವಿಧಾನ ತಾಯಿಯಿಂದ ಗರ್ಭಸ್ಥ ಮಗುವಿಗೆ ಬರುವುದು .
ಕೃತಕ ವಿಧಾನ ಗಳು ೧) ವ್ಯಾಕ್ಸೀನ್ .ಇಲ್ಲಿ ರೋಗಾಣು ;ವೈರಸ್ ಅಥವಾ ಬ್ಯಾಕ್ಟೀರಿಯಾ ವನ್ನು ಕೊಂದು ಅಥವಾ ಬಲಹೀನ ಗೊಳಿಸಿ ಮನುಷ್ಯರಿಗೆ ಚುಚ್ಚುಮದ್ದು ಅಥವಾ ಡ್ರಾಪ್ಸ್ ರೂಪದಲ್ಲಿ ಕೊಡುವರು .ಬೇಹುಗಾರ ಕೋಶ ಇದನ್ನು ಗುರಿತಿಸಿ ಸಹಾಯಕ ಟಿ ಲಿಂಫೋಸೈಟ್ ಅಲ್ಲಿಂದ ಬಿ ಲಿಂಫೋಸೈಟ್ ಗೆ ಮಾಹಿತಿ ಹೋಗಿ ಅದು ನಿಜವಾದ ರೋಗಾಣುವೆಂದೇ ಭಾವಿಸಿ ಪ್ರತಿವಿಷ ಉತ್ಪಾದಿಸುವುದು. ಇಲ್ಲಿ ರೋಗಾಣು ಬಲ ಕಳೆದು ಕೊಂಡಿರುವುದರಿಂದ ರೋಗ ಉಂಟಾಗುವುದಿಲ್ಲ ,ಪ್ರತಿರೋಧ ಮಾತ್ರ ಉಂಟಾಗುವುದು .
೨) ಈಗ ಪ್ರಚಲಿತ ವಿರುವ ಪ್ಲಾಸ್ಮಾ ಥೆರಪಿ ಯಲ್ಲಿ ಇರುವಂತೆ ರೆಡಿ ಮೇಡ್ ಆಂಟಿಬಾಡಿ ಅಥವಾ ಪ್ರತಿವಿಷವನ್ನು ರೋಗದಿಂದ ಗುಣಮುಖ ರಾದವರಿಂದ ರೋಗಿಗೆ ಕೊಡುವುದು .ವ್ಯಾಕ್ಸೀನ್ ಇಲ್ಲದ ಕಾಯಿಲೆಗೆ ಉಪಯುಕ್ತ .
ಇಮ್ಮ್ಯೂನಿಟಿ ಎಂಬುದು ಎರಡು ಅಲಗಿನ ಕತ್ತಿ .ಕೆಲವೊಮ್ಮೆ ಬೇಹುಗಾರ ಜೀವಕೋಶಗಳು ನಮ್ಮದೇ ಶರೀರದ ಕೋಶಗಳನ್ನು ಪರಕೀಯ ಎಂದು ಧಾಳಿ ಮಾಡುವವು .ಅವನ್ನೇ ಆಟೋ ಇಮ್ಮ್ಯೂನ್ ಅಥವಾ ಸ್ವಯಮ್ ಪ್ರತಿರೋಧ ಕಾಯಿಲೆಗಳು ಎಂದು ಕರೆಯುತ್ತಾರೆ .ಥೈರಾಯಿಡ್ ಕಾಯಿಲೆಗಳು ,ಹಲವು ಬಗೆಯ ಸಂಧಿ ವಾತಗಳು ,ರಕ್ತ ಹೀನತೆ ಇತ್ಯಾದಿ ಇದರಿಂದ ಬರಬಹುದು .ಇಂತಹ ಸಂದರ್ಭದಲ್ಲಿ ಬೇಹುಗಾರ ಕೋಶ ,ಮತ್ತು ಲಿಂಫೋಸೈಟ್ ಗಳು ಸ್ರವಿಸುವ ರಾಸಾಯನಿಕ ಸಂಕೇತ ವಸ್ತುಗಳನ್ನು ಮಣಿಸುವ ಪ್ರತಿ ರಾಸಾಯನಿಕ ಬಳಸುತ್ತಾರೆ ..ಕೆಲವು ಕಡೆ ಸ್ಟೀರಾಯ್ಡ್ ಗಳನ್ನು ಉಪಯೋಗಿಸುವರು .ಕೆಲವು ಭಾರಿ ರೋಗಾಣುಗಳ ವಿರುದ್ದದ ಹೋರಾಟಕ್ಕೆ ಉಪಯೋಗಿಸಲು ಉತ್ಪಾದಿಸಲ್ಪಟ್ಟ ಪ್ರತಿ ವಿಷಗಳು ತಮ್ಮ ಕಾರ್ಯ ಮೀರಿ ರೋಗಿಗೇ ಹಾನಿ ಮಾಡಿದ ಸಂದರ್ಭ ವೂ ಇವನ್ನು ಉಪಯೋಗಿಸುವರು .ಕೋವಿಡ್ ನಲ್ಲಿ ಈಗ ಮಾಡುತ್ತಿರುವಂತೆ .
ಸಮ ತೂಕದ ಆಹಾರ ,ನಿಯಮಿತ ವ್ಯಾಯಾಮ ,ಸಕ್ಕರೆ ಕಾಯಿಲೆ ಇದ್ದವರಲ್ಲಿ ಅದರ ಒಳ್ಳೆಯ ಹತೋಟಿ ಇದು ನೈಸರ್ಗಿಕ ಇಮ್ಮ್ಯೂನಿಟಿ ಗೆ ಮುಖ್ಯ
ಉಪಯುಕ್ತ ಮಾಹಿತಿ...ಅಭಿನಂದನೆಗಳು....
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ