ಇನ್ನು ನನ್ನ ಮುಖ್ಯ ಕಾರ್ಯ ಭೂಮಿಕೆ ರೈಲ್ವೆ ಆಸ್ಪತ್ರೆ ಪೆರಂಬೂರಿಗೆ ಬರೋಣ .ಇದು ಪೆರಂಬೂರ್ ಕ್ಯಾರಿಯೇಜ್ ವರ್ಕ್ಸ್ ನ ದಕ್ಷಿಣಕ್ಕೆ ಅಯ್ಯನಾವರಂ ನಲ್ಲಿ ಇತ್ತು .ಆದರೂ ಪೆರಂಬೂರು ರೈಲ್ವೆ ಆಸ್ಪತ್ರೆ ಎಂದೇ ಪ್ರಸಿದ್ಧ .ಈ ಆಸ್ಪತ್ರೆಯಲ್ಲಿ ಡಾ ಟಿ ಜೆ ಚೆರಿಯನ್ ಎಂಬ ಖ್ಯಾತ ಹೃದ್ರೋಗ ತಜ್ಞರು ಇದ್ದರು .ಅವರು ಈ ಆಸ್ಪತ್ರೆ ಹೃದ್ರೋಗ ಕಾಯಿಲೆಗಳ ದಕ್ಷಿಣ ಭಾರತದ ಪಥ ದರ್ಶಕ ಕೇಂದ್ರ ವಾಗುವಂತೆ ಮಾಡಿದರಲ್ಲದೆ ಆಸ್ಪತ್ರೆಯಲ್ಲಿ ಕಾರ್ಯ ಶಿಸ್ತು ಮತ್ತು ಕ್ಷಮತೆ ಯ ಒಂದು ಪರಂಪರೆಯನ್ನು ಹುಟ್ಟು ಹಾಕಿದರು.. ಕೆಲಸ ಗಳ್ಳರಿಗೆ ಇಲ್ಲಿ ಬದುಕಲೇ ಸಾಧ್ಯವಿಲ್ಲ ಎಂಬ ಪ್ರತೀತಿ ಇತ್ತು .
ನಾನು ೧೯೮೪ ರಿಂದ ೧೯೯೨ ರ ವರೆಗೆ ಕೆಲವು ದಿನಗಳನ್ನು ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ಕಳೆದುದನ್ನು ಬಿಟ್ಟರೆ ಬಹುಪಾಲು ಸೇವೆ ಡಿಸ್ಪೆನ್ಸರಿ ಯಲ್ಲಿ ಆಗಿತ್ತು ..ನಾನು ಈ ಆಸ್ಪತ್ರೆಯ ಮೆಡಿಸಿನ್ ವಿಭಾಗ ಕ್ಕೆ ಸೇರಿಕೊಂಡೆನು ವಿಭಾಗದ ಮುಖ್ಯಸ್ಥರು ಡಾ ಜಿ ಸಿ ರಾಜು .ಸಜ್ಜನರು ,ಮೃದುಭಾಷಿ ಮತ್ತು ಸಂಕೋಚ ಸ್ವಭಾವದವರು .ವಿಭಾಗದಲ್ಲಿ ಅವರಿಗೆ ಸಹಕರಿಸಲು ರೈಲ್ವೆ ವೈದ್ಯಕೀಯ ಸೇವೆಯ ವೈದ್ಯರು ಮತ್ತು ರೆಸಿಡೆಂಟ್ ವೈದ್ಯರು ಇದ್ದರು .
ಡಾ ಜಿ ಸಿ ರಾಜು
ದಕ್ಷಿಣ ರೈಲ್ವೆ ಯಲ್ಲಿ ಡಾ ಯೋಗಿ ಮಲ್ಹೋತ್ರಾ ಎಂಬ ಮುಖ್ಯ ವೈದ್ಯಾಧಿಕಾರಿ ಇದ್ದರು.
ಅವರು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ಪ್ರಾರಂಭಿಸುವಲ್ಲಿ ಆಸಕ್ತಿ ವಹಿಸಿ
ನ್ಯಾಷನಲ್ ಬೋರ್ಡ್ ಒಫ್ ಎಕ್ಸಾಮಿನೇಷನ್ಸ್ ಗೆ ನೋಂದಾಯಿತ ಕೋರ್ಸು ಗಳನ್ನು ಆರಂಭಿಸಿದ್ದರು .ಡಾ ಕೆ ವಿ ತಿರುವೆಂಗಡಂ ,ಡಾ ರಂಗಭಾಷ್ಯಮ್ ರಂತಹ ಮೇಧಾವಿಗಳು ಇಲ್ಲಿ ಕಲಿಸಲು ಬರುತ್ತಿದ್ದರು. ನಾನು ಸೇರಿಕೊಂಡ ಮೇಲೆ ಡಾ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿಸ್ಟ್ ),ಡಾ ಸೇತುರಾಮನ್ (ಹೆಮಟೊಲೊಜಿಸ್ಟ್ ),ಡಾ ಪಾರ್ಟಿಕ್ ಯೇಸುಡಿಯನ್ (ಚರ್ಮ ರೋಗ ತಜ್ಞರು ),ಡಾ ಸುಬ್ರಹ್ಮಣ್ಯಂ (ಕ್ಯಾನ್ಸರ್ ತಜ್ಞರು ) ಬರಲಾರಂಭಿಸಿದರು .ಮೇಲೆ ಹೆಸರಿಸಿದವರೆಲ್ಲ ವೈದ್ಯಕೀಯ ಕ್ಷೇತ್ರದ ದಂತ ಕತೆಗಳು .ಅವರ ಸಾಂಗತ್ಯ ದೊರೆತುದು ನಮ್ಮ ಭಾಗ್ಯ ಸಂತ ತ್ಯಾಗರಾಜರು ಹಾಡಿದಂತೆ ದೊರಕುನಾ ಇಟು ವಂಟಿ ಸೇವಾ .ಈ ಹಿರಿಯರಿಂದ ನಾವು ಪಡೆದುದೇ ಹೆಚ್ಚು ,ಮಾಡಿದ ಅವರ ಸೇವೆ ಕಿಂಚಿತ್ .
ನಮ್ಮ ವಿಭಾಗದಲ್ಲಿ ಬೆಳಗ್ಗೆ ಏಳು ಮುಕ್ಕಾಲಕ್ಕೆ ಎಲ್ಲರೂ ಹಾಜರು .ಹಾಜರಿ ಪುಸ್ತಕ ,ಫಿಂಗರ್ ಪ್ರಿಂಟ್ ಯಾವುದೂ ಇಲ್ಲ . ಎಂಟರಿಂದ ಒಂಭತ್ತು ಒಂದು ವೈದ್ಯಕೀಯ ವಿಷಯದ ಬಗ್ಗೆ ಯಾರಾದರೂ ಒಬ್ಬರು ಮೊದಲೇ ನಿಶ್ಚಯಿದಂತೆ ಮಾತನಾಡುವರು .ಅನಂತರ ಮುಖ್ಯಸ್ಥರೊಡಗೂಡಿ ಐ ಸಿ ಯು ಮತ್ತು ಸೆಮಿ ಐ ಸಿ ಯು ರೌಂಡ್ಸ್ .ಆಮೇಲೆ ಹೊರ ರೋಗಿ ವಿಭಾಗ ಪಾಳಿ ಇರುವವರು ಅಲ್ಲಿಗೆ ತೆರಳಿದರೆ ಇತರರು ತಮ್ಮ ತಮ್ಮ ವಾರ್ಡ್ ರೌಂಡ್ಸ್ ಮಾಡುವರು .ಗಂಡಸರ ವಿಭಾಗದಲ್ಲಿ ಅಕ್ಯೂಟ್ ಮತ್ತು ಕ್ರಾನಿಕ್ ಎಂಬ ಎರಡು ವರ್ಗ ಇದ್ದುವು ..ಸೆಮಿ ಈ ಸಿ ಯು ,ಅಕ್ಯೂಟ್ ಮತ್ತು ಕ್ರಾನಿಕ್ ಒಬ್ಬೊಬ್ಬ ವೈದ್ಯರ ಸುಪರ್ದಿಯಲ್ಲಿ .ಹೆಂಗಸರ ವಾರ್ಡ್ ನಲ್ಲಿ ಎರಡು ವಿಭಾಗ .ಇಲ್ಲಿ ಸೇವೆಯ ವೈದ್ಯರು ಮತ್ತು ರೆಸಿಡೆಂಟರು ಎಂಬ ಭೇದ ಇಲ್ಲ .ಎಲ್ಲರಿಗೂ ಒಂದೇ ತರಹ ಕೆಲಸ ಮತ್ತು ಜವಾಬ್ದಾರಿ .ಈ ರೌಂಡ್ಸ್ ಮುಗಿಯುವಾಗ ಮಧ್ಯಾಹ್ನ ೧೨ ಗಂಟೆ ಆಗುವುದು .ಒಬ್ಬರು ನರ್ಸ್ ಮತ್ತು ವಾರ್ಡ್ ಬಾಯ್ ಮಾತ್ರ ನಮ್ಮೊಡನೆ ರೌಂಡ್ಸ್ ನಲ್ಲಿ ಇರುವರು .ಈ ಹೊತ್ತಿನಲ್ಲಿ ಹೊರ ರೋಗ ವಿಭಾಗದಿಂದ ಅಡ್ಮಿಶನ್ ಗೆ ಬಂದ ರೋಗಿಗಳನ್ನು ಪರೀಕ್ಷಿಸಿ ಕೇಸ್ ಶೀಟ್ ಆರ್ಡರ್ ಬರೆಯಬೇಕು .ಆ ಮೇಲೆ ವಾರ್ಡ್ ನಲ್ಲಿ ಬೆನ್ನು ಹುರಿ ನೀರು ತೆಗೆಯುವುದು ,ಹೊಟ್ಟೆ ,ಎದೆ ಯಲ್ಲಿ ನೀರು ಇದ್ದರೆ ತೆಗೆದು ಪರಿಶೋಧನೆಗೆ ಕಳುಹಿಸುವುದು ,ಎದೆಯಲ್ಲಿ ಗಾಳಿ ,ಕೀವು ತುಂಬಿದ್ದವರಿಗೆ ಟ್ಯೂಬ್ ಹಾಕುವುದು ಇತ್ಯಾದಿ ಕೆಲಸ ಸಾಕಷ್ಟು .ಇದರೊಂದಿಗೆ ಕೆಲವು ಕ್ಲಿಷ್ಟ ಕೇಸ್ ಗಳ ಸ್ಕ್ಯಾನ್ ಮಾಡಿಸಲು ಜತೆಗೆ ತೆರಳಿ ರೇಡಿಯೊಲೊಜಿಸ್ಟ್ ರವರೊಂದಿದೆ ಸಲಹೆ ಸಮಾಲೋಚನೆ .ರೇಡಿಯಾಲಜಿ ಯಲ್ಲಿ ಹಿರಿಯ ಮಿತ್ರ ಕೇಶವ್ ಮತ್ತು ಕನಕರಾಜು ಇದ್ದರು .ಈರ್ವರೂ ತುಂಬಾ ಒಳ್ಳೆಯವರು ಮತ್ತು ಸಮಾಧಾನದಿಂದ ಚರ್ಚಿಸುತ್ತಿದ್ದರು . ಲ್ಯಾಬ್ ನಲ್ಲಿ ಮಿತ್ರ ಪ್ರಸನ್ನ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞ ರಾಗಿ ಇದ್ದುದರಿಂದ ರಿಪೋರ್ಟ್ಸ ಗಳನ್ನು ಅವರೊಡನೆ ವಿಶ್ಲೇಷಿಸುವುದು ಸುಲಭ ಆಯಿತು
ಇಷ್ಟೆಲ್ಲ ಆಗುವಾಗ ಮಧ್ಯಾಹ್ನ ಒಂದೂವರೆ ಗಂಟೆ ಆಗುವುದು .ಊಟದ ಶಾಸ್ತ್ರ ಮಾಡುವುದು .ಮತ್ತೆ ಡಿಸ್ಚಾರ್ಜ್ ಆದ ರೋಗಿಗಳ ಡಿಸ್ಚಾರ್ಜ್ ಬರೆಯುವುದು ಮತ್ತು ಅವರಿಗೆ ಸಲಹೆ ಮಾಡುವುದು .ಈ ನಡುವೆ ಐ ಸಿ ಯು ಅಥವಾ ವಾರ್ಡ್ ನಲ್ಲಿ ಯಾರಾದರೂ ಸಡನ್ ಸೀರಿಯಸ್ ಆದರೆ ಬೆಲ್ ಮೊಳಗುವುದು .ಕೂಡಲೇ ಅಲ್ಲಿ ಧಾವಿಸಿ ಚಿಕಿತ್ಸೆ ಮಾಡುವುದು .ನಂತರ ಮೂರು ಗಂಟೆ ಹೊತ್ತಿಗೆ ಪಿ ಜಿ ಟೀಚಿಂಗ್ ಶುರುವಾಗುವುದು .ಐದು ಐದೂವರೆ ತನಕ ಅದು ನಡೆಯುವುದು .ಆಮೇಲೆ ಬಾಕಿ ಉಳಿದ ವಾರ್ಡ್ ಕೆಲಸ ಬೇರೆ ವಿಭಾಗದಿಂದ ರೆಫರ್ ಆದ ರೋಗಿಗಳನ್ನು ನೋಡಿ ಸಲಹೆ ಮಾಡುವುದು .ಲೈಬ್ರರಿ ಯಲ್ಲಿ ಕ್ಲಿಷ್ಟ ಕೇಸ್ ಗಳ ಬಗ್ಗೆ ಮತ್ತು ಮುಂದಿನ ಕ್ಲಾಸ್ ಜರ್ನಲ್ ಕ್ಲಬ್ ಗೆ ಓದುವುದು .ವಾರಕ್ಕೆ ಒಮ್ಮೆ ಡೆತ್ ಆಡಿಟ್ ಇರುತ್ತಿತ್ತು .
ಎಲ್ಲಾ ಮುಗಿದಾಗ ಸುಸ್ತು ಹೈರಾಣಾಗಿ ಹೋಗುತ್ತಿತ್ತು .ವಾರಕ್ಕೆ ಒಮ್ಮೆ ರಾತ್ರಿ ಪಾಳಿ ಇದ್ದಾಗ ಇಂದು ಬೆಳಿಗ್ಗೆ ಬಂದವರು ನಾಳೆ ಮಧ್ಯಾಹ್ನವೇ ಮನೆಗೆ ತೆರಳುವುದು ಆಗುತ್ತಿತ್ತು.
ರೈಲ್ವೇ ಆಸ್ಪತ್ರೆಯ ಪಿ ಜಿ ವಿಭಾಗಕ್ಕೆ ಪುರಸ್ಕಾರ
ಕೆಳಗಿನ ಚಿತ್ರದಲ್ಲಿ ಮಿತ್ರ ಡಾ ಪ್ರಸನ್ನಕುಮಾರ್ ಬಲದಿಂದ ಮೂರನೆಯವರು
ರೈಲ್ವೆ ಆಸ್ಪತ್ರೆಗೆ ಒಳ್ಳೆಯ ಹೆಸರು ಇತ್ತು .ರೈಲ್ವೆ ನೌಕರ ಮತ್ತು ಅವರ ಕುಟುಂಬದ ಸದಸ್ಯರು ದೇಶದ ಮೂಲೆ ಮೂಲೆಯಿಂದ ಬರುತ್ತಿದ್ದರು .ಇತರರಿಗೂ ಜಾಗ ಇದ್ದಲ್ಲಿ ಚಿಕಿತ್ಸೆ ಕೊಡುತ್ತಿದ್ದೆವು .ಅದಕ್ಕೆ ಭಾರೀ ಬೇಡಿಕೆ ಇತ್ತು .
ನಾನು ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಾಜಿ ರಾಷ್ಟ್ರ ಪತಿ ಕೆ ಆರ್ ನಾರಾಯಣನ್ ಕುಟುಂಬ ಅವರ ಬಂಧುವನ್ನು ನೋಡಲು ,ಶ್ರೀ ಜಾಫರ ಷರೀಫ್ ತಪಾಸಣೆ ಮಾಡಿಸಲು ಬಂದಿದ್ದರು .ತಮಿಳ್ನಾಡಿನ ಬೆಂಕಿ ಉಂಡೆ ರಾಜಕಾರಿಣಿ ವೈಕೋ ತಮ್ಮ ಪಕ್ಷದ ಎಂ ಎಲ್ ಎ ಯೊಬ್ಬರನ್ನು ನೋಡಲು ಬಂದಿದ್ದರು .ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯೊಂದಿಗೆ ಬಹಳ ಮರ್ಯಾದೆಯಿಂದ ನಡೆದು ಕೊಂಡರು .
ರೈಲ್ವೆ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ನಾನು ಇದುವರೆಗೆ ಕಂಡುದಲ್ಲಿ ಅತ್ಯುತ್ಕ್ರಷ್ಟ ಎಂದು ಎದೆ ತಟ್ಟಿ ಹೇಳಬಲ್ಲೆ .ಯಾಕೆಂದರೆ ಅಲ್ಲಿಯ ಕೆಲಸದ ವಾತಾವರಣ ಹಾಗೆ ಇತ್ತು .ಆಲಸ್ಯ ಮತ್ತು ಕಾಲಹರಣಕ್ಕೆ ಅಲ್ಲಿ ಎಡೆ ಇರಲಿಲ್ಲ .ನಾನು ಎಷ್ಟೋ ಸಂಗತಿಗಳನ್ನು ಅವರಿಂದ ಕಲಿತುಕೊಂಡಿರುವೆನು .ಅಲ್ಲಿ ನರ್ಸ್ ಗಳು ,ವೈದ್ಯಕೀಯ ಸಿಬ್ಬಂದಿ ಯಾವತ್ತೂ ಚಲನೆಯಲ್ಲಿ ಇರುತ್ತಿದ್ದರು .ಅವರಿಗೆಲ್ಲ ಮನಸಿನಲ್ಲೇ ನಮಸ್ಕರಿಸುವೆನು .
ನಮ್ಮ ವಿಭಾಗದ ಕಚೇರಿ ಯಲ್ಲಿ ಬಾಲಸುಬ್ರಹ್ಮಣ್ಯಂ ಎಂಬ ಹಿರಿಯರು ಸ್ಟೆನೋ -ಟೈಪಿಸ್ಟ್ ಆಗಿ ಇದ್ದರು .ಖಡಕ್ ಮನುಷ್ಯ .ಅವರು ಅವಿವಾಹಿತರಾಗಿಯೇ ಇದ್ದರು ,ತಾಯಿ ಜತೆಗೆ ಇದ್ದರು .ಅವರಿಗೆ ರೈಲ್ವೆ ಮತ್ತು ಆಸ್ಪತ್ರೆಯ ನಿಯಮಗಳು ಕರಗತ .ಆದರೆ ಶೇಕಡಾ ನೂರು ಪ್ರಾಮಾಣಿಕ ಮತ್ತು ಕೆಲಸ ಪ್ರಿಯ .ಅವರಿಗೆ ಆಸ್ಪತ್ರೆಯ ಮುಖ್ಯಸ್ಥರಿಂದ ಹಿಡಿದು ಕೊನೆಯ ನೌಕರರೂ ಗೌರವ ಕೊಡುತ್ತಿದ್ದರು ಮತ್ತು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದರು .ನಾನು ಮಂಗಳೂರಿನಲ್ಲಿ ಒಂದು ಫ್ಲಾಟ್ ಕೊಳ್ಳಲು ಇಲಾಖೆ ಯಿಂದ ಮುಂಗಡ ಪಡೆಯುವಲ್ಲಿ ನನ್ನ ಪೇಪರ್ ಗಳನ್ನು ಕ್ರಮ ಪ್ರಕಾರ ಸಿದ್ದ ಪಡಿಸಿ ,ಅದು ಮಂಜೂರು ಆದ ಮೇಲೆ ಒಂದು ಫೈಲ್ ನಲ್ಲಿ ಅವೆಲ್ಲವನ್ನು ಕ್ರೋಡೀಕರಿಸಿ ಕೊಟ್ಟಿದ್ದರು ,ಯಾವ ಪ್ರತಿ ಫಲಾಪೇಕ್ಷೆ ಇಲ್ಲದೆ .ಮಧ್ಯಾಹ್ನ ನನ್ನ ,ವಿಭಾಗ ಮುಖ್ಯಸ್ಥ ಮತ್ತು ಬಾಲುರವರ ಊಟ ಅವರ ಕೋಣೆಯಲ್ಲಿ
( ಬಾಲು ಮತ್ತು ನಾನು ಮತ್ತು ನಿಂತವರು ಅಟೆಂಡರ್ ಯೋಹಾನನ )
ಆಸ್ಪತ್ರೆಯ ಹೃದ್ರೋಗ ವಿಭಾಗ ಬಹಳ ಪ್ರಸಿದ್ಧ .ಇಲ್ಲಿ ತೆರದ ಹೃದಯ ಚಿಕಿತ್ಸೆ .ಆಂಜಿಯೋಪ್ಲಾಸ್ಟಿ ಇತ್ಯಾದಿಗಳನ್ನು ಆಗಲೇ ಬಹಳಷ್ಟು ಮಾಡಿದ್ದರು .ಅಲ್ಲಿಯ ಚಿಕಿತ್ಸೆಗೆ ವೈಟಿಂಗ್ ಲಿಸ್ಟ್ ದೊಡ್ಡದು ಇರುತ್ತಿತ್ತು .ಹೃದಯಾಘಾತ ಆಗಿ ಬಂದವರನ್ನು ನಮ್ಮ ಮೆಡಿಸಿನ್ ಐ ಸಿ ಯು ನಲ್ಲಿ ನಾವೇ ಉಪಚರಿಸುತ್ತಿದ್ದೆವು .ಹೃದಯ ವಿಭಾಗದಲ್ಲಿ ಆಮೇಲೆ ಕಾದಿರಿಸಿ ಅವರು ಹೋಗ ಬೇಕಿತ್ತು .
ಮೂತ್ರ ಅಂಗ (ನೆಫ್ರಾಲಜಿ) ವಿಭಾಗ ವೂ ಡಯಾಲಿಸಿಸ್ ,ಮೂತ್ರಪಿಂಡ ಜೋಡಣೆ ಸಂಬಂದಿಸಿದ ಚಿಕಿತ್ಸೆಗಳನ್ನು ನಡೆಸುತ್ತಿದ್ದು ಅಲ್ಲಿ ಕನ್ನಡಿಗರೇಆದ ಡಾ ಪ್ರಭಾಕರ ಎಂಬ ತಜ್ಞರು ಇದ್ದರು .ಒಮ್ಮೆ ಅವರು ದೀರ್ಘ ರಜೆಯಲ್ಲಿ ಇದ್ದಾಗ ಕೆಲ ದಿನ ನಾನೇ ಆ ವಿಭಾಗ ನೋಡಿಕೊಂಡು ಇದ್ದೆನು .
ಮಕ್ಕಳ ವಿಭಾಗದಲ್ಲಿ ಡಾ ಎಸ್ ಎಸ್ ರಾವ್ ಎಂಬ ಸಜ್ಜನ ವೈದ್ಯರು ಮುಖ್ಯಸ್ಥರು .ಅವರು ಆಸ್ಪತ್ರೆಯ ಕಂಪ್ಯೂಟರ್ಗಳ ಮೇಲುಸ್ತುವಾರಿ ನೋಡಿ ಕೊಳ್ಳುತ್ತಿದ್ದರು .ಮೂಲತಃ ಉಡುಪಿ ಬಳಿಯವರು .ಆಗಲೇ ಕಂಪ್ಯೂಟರ್ ಬಳಸಿ ಕೊಳ್ಳುತ್ತಿದ್ದ ಆಸ್ಪತ್ರೆ .(೧೯೯೨).
ಒಂದು ಪ್ರಸಂಗ ಉಲ್ಲೇಖಿಸುವೆನು .ನಾನು ಅಲ್ಲಿ ಸೇರಿ ಎರಡನೇ ದಿನ ನನಗೆ ಕ್ವಾರ್ಟರ್ ಹುಡುಕುವ ಕೆಲಸ ಇದ್ದುದರಿಂದ ರೌಂಡ್ಸ್ ಮುಗಿಸಿ ಬಾಸ್ ಅನುಮತಿ ಪಡೆದು ಹೊರ ಹೋಗಿದ್ದೆನು .ಮರುದಿನ ನಾನು ಬಂದೊಡನೆ ನಮ್ಮಲ್ಲಿ ರೆಸಿಡೆಂಟ್ ಆಗಿದ್ದ ಡಾ ಬಾಲಸುಬ್ರಹ್ಮಣ್ಯಂ ನನ್ನೊಡನೆ "ಸಾರ್ ನೀವು ನಿನ್ನೆ ಡಿಸ್ಚಾರ್ಜ್ ಮಾಡಿದ ರೋಗಿಗಳ ಡಿಸ್ಚಾರ್ಜ್ ಸಮ್ಮರಿ ಮತ್ತು ಸಲಹೆ ಬರೆಯದೆ ಹೋಗಿದ್ದೀರಿ .ಇಲ್ಲಿಯ ರೀತಿ ರಿವಾಜಿಗೆ ಅದು ವಿರುದ್ಧ "ಎಂದು ಸ್ವಲ್ಪ ಜೋರಾಗಿಯೇ ಹೇಳಿದಾಗ ನಾನು ಅವಾಕ್ಕಾದೆ .ಸ್ವಲ್ಪ ಬೇಸರ ಆದರೂ ಮುಂದೆ ಅಲ್ಲಿನ ಕೆಲಸ ಶಿಸ್ತು ಅದು ಸರಿ ಎಂದು ಹೇಳಿತು ..ಈ ತರುಣ ವೈದ್ಯರು ಈಗ ಚೆನ್ನೈ ನ ಪ್ರಸಿದ್ಧ ನೆಫ್ರೊಲೊಜಿಸ್ಟ್ ಮತ್ತು ನನ್ನ ಮಿತ್ರರು . ಇನ್ನೊಬ್ಬ ಇಂತಹ ತರುಣ ವೈದ್ಯ ಡಾ ಪದ್ಮನಾಭನ್ .ಸಜ್ಜನ ಮತ್ತು ಮೃದು ಭಾಷಿ ಮತ್ತು ಕಠಿಣ ಪರಿಶ್ರಮಿ .ಈಗ ಬೆಂಗಳೂರಿನಲ್ಲಿ ಖ್ಯಾತ ನೆಫ್ರೊಲೊಜಿಸ್ಟ್ .ಡಾ ಕೀರ್ತಿ ವಾಸನ್ ಎಂಬ ನನಗೆ ಬಹಳ ಪ್ರಿಯ ರೆಸಿಡೆಂಟ್ ವೈದ್ಯರು ಇದ್ದರು ,ತುಂಬಾ ಹಾಸ್ಯ ಪ್ರಜ್ಞೆ . ಅವರು ತಮಾಷೆಗೆ ಹೇಳುತ್ತಿದ್ದ ಒಂದು ಮಾತು ಯಾವಾಗಲೂ ನೆನಪಿಗೆ ಬರುತ್ತದೆ . "ಸಾರ್ ನಮ್ಮ ಎಲ್ಲಾ ಪ್ರಯತ್ನದ ನಂತರವೂ ರೋಗಿ ಬದುಕಿ ಉಳಿದನು."ಅವರು ಈಗ ಇಂಗ್ಲೆಂಡ್ ನಲ್ಲಿ ನರ ರೋಗ ವೈದ್ಯರಾಗಿ ಕೆಲಸ ಮಾಡುತ್ತಿರುವರು .ಕನ್ನಡಿಗರೇ ಆದ ಡಾ ಸಂದೀಪ್ ಗ್ಯಾಸ್ಟ್ರೋ ಎಂಟೆರೊಲೊಜಿಸ್ಟ್ ಆಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು ನನಗೆ ಹತ್ತಿರ ಇರುವರು . ಡಾ ತನುಜಾ ಕಾರ್ಡಿಯೋಲಾಜಿಸ್ಟ್ ,ಡಾ ವಿದ್ಯಾಶಂಕರಿ ವೈದ್ಯಕೀಯ ತಜ್ಞೆಯಾಗಿ ಪೆರಂಬೂರ್ ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾರೆ ,ಡಾ ಆನಿ ಕ್ರಿಟಿಕಲ್ ಕೇರ್ ತಜ್ಞೆಯಾಗಿ ಅಪೊಲೊ ಆಸ್ಪತ್ರೆಯಲ್ಲಿ ಇರುವರು
(ಮುಂದುವರಿಯುವುದು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ