ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 13, 2020

ಚೆನ್ನೈ ದಿನಗಳು 2

 ನನ್ನ ಮಗ ನಾಲ್ಕು ವರ್ಷಕ್ಕೆ  ಕಾಲು ಇಡುತಿದ್ದ .ಅವನಿಗೆ  ಒಂದು ಶಾಲೆಯ ಏರ್ಪಾಡು  ಆಗಬೇಕು .ನಾವು ಕನ್ನಡಿಗರಾಗಿ ಮಕ್ಕಳಿಗೆ ಮಾತೃಭಾಷೆ ಬರದಿದ್ದರೆ ಹೇಗೆ ಎಂದು ಕಡಿಮೆ ಪಕ್ಷ ಕನ್ನಡ ವನ್ನು ಒಂದು ಭಾಷೆಯನ್ನಾಗಿ  ಕಲಿಸುವ ಶಾಲೆ ಇದೆಯೇ ಎಂದು  ಅನ್ವೇಷಣೆಗೆ  ಹೊರಟೆನು .ನಮ್ಮ ಆಸ್ಪತ್ರೆ ಪಕ್ಕದಲ್ಲಿಯೇ ಅಯ್ಯನಾವರಂ  ಕನ್ನಡ ಸಂಘ ನಡೆಸುವ  ಒಂದು ಶಾಲೆ ಇತ್ತು .. ಅಲ್ಲಿಯ  ಮುಖ್ಯೋಪಾಧ್ಯಾಯಿನಿ ಯವರನ್ನು  ಕಂಡು  ವಿಚಾರಿಸಲು  ನನ್ನ ಭಾಷಾಭಿಮಾನ ಮತ್ತು ಭಾವನಾತ್ಮಕತೆ ಗೆ  ಮೆಚ್ಚುಗೆ ಮತ್ತು ಸಂತಾಪ  ಏಕಕಾಲಕ್ಕೆ  ವ್ಯಕ್ತ ಪಡಿಸಿದರು . ಅದು ಕನ್ನಡ ಶಾಲೆ ಆದರೂ  ಸರಕಾರಿ ಗ್ರಾಂಟ್ ಇರುವ ಸಂಸ್ಥೆ ಆದುದರಿಂದ  ಫೀಸ್  ಇಲ್ಲ .ಈ ಕಾರಣದಿಂದ  ಅಲ್ಲಿ  ಕಲಿಯ ಬರುವ  ಮಕ್ಕಳೆಲ್ಲಾ  ಬಡ ಕುಟುಂಬದಿಂದ  ಬರುವ ತಮಿಳು ಮಕ್ಕಳು .ಅಲ್ಲಿ ಸೇರಿದರೆ  ನನ್ನ ಮಗ ಕನ್ನಡಿಗನಾಗಿಸುವ  ನನ್ನ ಆಶೆ ಈಡೇರುವುದು ಕಷ್ಟ .ಅಲ್ಲದೆ  ವರ್ಗಾವಣೆ  ಇರುವ  ನನಗೆ ಹೋದಲ್ಲೆಲ್ಲ  ಕನ್ನಡ ಶಾಲೆ ಸಿಗದು ಎಂದು ಹಿತೋಪದೇಶ ಮಾಡಿದರು . 

                     ನರ್ಸರಿ ಶಾಲೆಗೆಂದು  ಮಗನನ್ನು  ಪೆರಂಬೂರಿನ  ಸಂತ  ಮೇರಿ ಶಾಲೆಗೆ  ಸೇರಿಸಿದೆವು ..ನಮ್ಮ ಕ್ವಾರ್ಟರ್ಸ್ ನಿಂದ  ಪೆರಂಬೂರ್ ರೈಲ್ವೆ ಸೇತುವೆ ದಾಟಿ  ಮಾದಾವರಮ್  ರಸ್ತೆಯಲ್ಲಿ ಎರಡು ಕಿಲೋಮೀಟರು  ದೂರ .ಬೆಳಗ್ಗೆ ಮತ್ತು ಸಂಜೆ  ಬಹಳ ಜನ ಸಂದಣಿ ಇರುವ ರಸ್ತೆ .ಆರಂಭದಲ್ಲಿ  ನನ್ನ ಶ್ರೀಮತಿಯವರು ಅವನನ್ನು  ಶಾಲೆಗೆ ಬಿಟ್ಟು ಪುನಃ ಮಧ್ಯಾಹ್ನ  ಕರೆದು ತರುವರು .ಅಲ್ಲಿಯ ರಸ್ತೆಗಳಲ್ಲಿ  ಲಿಡ್ ಇಲ್ಲದ  ಅಪಾಯಕಾರಿ ಮ್ಯಾನ್ ಹೋಲ್  ಗಳು  ಯಥೇಶ್ಚ .ಮಳೆ ಬಂದು ರಸ್ತೆಯಲ್ಲಿ  ನೀರು ತುಂಬಿದರೆ  ರಸ್ತೆಯಲ್ಲಿ ನಡೆಯುವವರು  ಮುಖ್ಯವಾಗಿ ಮಕ್ಕಳು  ಕಾಣದಂತೆ  ಮಾಯವಾಗುವ ಸಾಧ್ಯತೆ ಇತ್ತು . ಅದಕ್ಕೆ ಕೊಡೆಯನ್ನೋ  ಮರದ ಕೋಲನ್ನೋ  ಊರುಗೋಲಾಗಿ  ಉಪಯೋಗಿಸಿ ನಡೆಯ ಬೇಕಿತ್ತು .ಕೆಲವು ದಿನಗಳ ನಂತರ  ಒಬ್ಬ ಸೈಕಲ್ ರಿಕ್ಷಾ  ದವನನ್ನು  ಗೊತ್ತು ಮಾಡಿದೆವು .ಅವನು ಸ್ವಲ್ಪ ಒರಟ ಮತ್ತು  ಮದ್ಯ ಪಾನಿ .ಆದರೆ  ಎಂಜಿನ್ ರಿಕ್ಷಾ ದವರಂತೆ  ಅಲ್ಲ .ಚೆನ್ನೈ ನ  ಆಟೋ ರಿಕ್ಷಾದವರಿಗೆ  ಆಗ  ಸ್ವಜನ ಪಕ್ಷಪಾತ ಇರಲಿಲ್ಲ .ತಮಿಳರಿಗೂ ಅನ್ಯ ಭಾಷಿಕರಿಗೂ ಒಂದೇ ತರಹ ಮೋಸ ಮಾಡುವರು ಮತ್ತು ಜಗಳ ಆಡುವರು .ಒಂದೇ ವ್ಯತ್ಯಾಸ  ನಮಗೆ ಅವರ ಬೈಗಳು ಅರ್ಥ ಆಗುತ್ತಿದ್ದಿಲ್ಲ .ಈಗ  ಓಲಾ  ಆಟೋ ಗಳು ಬಂದ  ಮೇಲೆ ಸ್ಥಿತಿ  ಸುಧಾರಿಸಿದೆ . 

                           ಪೆರಂಬೂರ್ ಶಾಲೆಯ ಒಂದು ಸಮಾರಂಭದಲ್ಲಿ ಮಗ ನಿತಿನ್ ಮತ್ತು ಅವನ ಸಹಪಾಠಿ 



    ನಮ್ಮ  ಸೈಕಲ್ ರಿಕ್ಷಾದವನಿಗೆ ಮಕ್ಕಳ ಮೇಲೆ ಪ್ರೀತಿ .ಏಳೆಂಟು ಮಕ್ಕಳನ್ನು ಶಾಲೆಗೆ  ಕೊಡೊಯ್ಯುತ್ತಿದ್ದ .ಏರು ರಸ್ತೆ ಅಥವಾ ಚಡಾವು ಬಂದರೆ  ಸೀನಿಯರ್ ಮಕ್ಕಳು  ಇಳಿದು ತಳ್ಳುವರು .ಮಕ್ಕಳಿಗೆ ಅದು ಒಂದು ಆಟ .ಅವರು ಎಂದೂ ಅದರ ಬಗ್ಗೆ  ಗೊಣಗಿದ್ದಿಲ್ಲ .ಪ್ರತಿಯಾಗಿ  ಮಧ್ಯಾಹ್ನ ಬರುವ ವೇಳೆ ರೋಡ್ ಸೈಡ್ ಸಂಚಾರಿ ಹೋಟೆಲ್ ನಲ್ಲಿ  ಗಂಜಿ ಸೇವನೆ ಸಂದರ್ಭದಲ್ಲಿ ಮಕ್ಕಳಿಗೆ  ಸಮೋಸಾ ಕೊಡಿಸುವನು .ಮಕ್ಕಳಿಗೆ ತುಂಬಾ ಖುಷಿ ,ಅಲ್ಲದೆ ನಮ್ಮ ಹುಡುಗ ಅವನಂತೆ ಗಂಜಿ ಸುರ್ ಸುರ್ ಎಂದು  ಕುಡಿಯ ಬೇಕು ಎನ್ನುವನು .ಮಕ್ಕಳಿಗೆ ಒಳ್ಳೆ ರೋಲ್ ಮಾಡೆಲ್ .ಅಲ್ಲದೆ ಅಂತಹ ಕಡೆ  ಸಮೊಸ ತಿಂದು  ರೋಗ ನಿರೋಧಕ ಶಕ್ತಿ ಉಚಿತವಾಗಿ .ಕೆಲವೊಮ್ಮೆ  ಸಂಜೆ ತೀರ್ಥ ಸೇವನೆ ಜಾಸ್ತಿ ಆದರೆ ಮರುದಿನ ರಿಕ್ಷಾ ಕಾಣೆ .ಎರಡು ದಿನ ಬಿಟ್ಟು ಬಂದಾಗ ಕೇಳಿದರೆ ಪಾಟಿಯನ್ನೋ (ಅಜ್ಜಿ ).ಮಾಮಿಯನ್ನೋ (ಅತ್ತೆ)  ಸ್ವರ್ಗ ಲೋಕಕ್ಕೆ  ಮಾತಿನಲ್ಲೇ ಕಳುಸಿಸುತ್ತಿದ್ದ .ಹೆಚ್ಚು ಕೇಳಿದರೆ  ತಮಿಳಿನಲ್ಲಿ ಸಹಸ್ರ ನಾಮಾರ್ಚನೆ  ಆಗುತ್ತಿತ್ತು .ಆದರೆ ನಮ್ಮ ಮೇಲಿನ ಕೋಪ ಮಕ್ಕಳ ಮೇಲೆ ತೋರಿಸುತ್ತಿದ್ದಿಲ್ಲ . 

                 ಒಂದನೇ ತರಗತಿಗೆ  ಎಲ್ಲಿಗೆ ಸೇರಿಸಲಿ ?ಪೆರಂಬೂರಿನಲ್ಲಿ  ಬಹಳಷ್ಟು  ರೈಲ್ವೆ  ನೌಕರರಿದ್ದರೂ  ಕೇಂದ್ರೀಯ ವಿದ್ಯಾಲಯ ಇರಲಿಲ್ಲ .ಈ ಶಾಲೆಗಳಲ್ಲಿ  ಗುಣಮಟ್ಟದ  ಶಿಕ್ಷಣ ಕಡಿಮೆ ಶುಲ್ಕದಲ್ಲಿ ಕೊಡುವರು .ವರ್ಗಾವಣೆ ಇರುವ ಕೇಂದ್ರ ಸರಕಾರದ  ನೌಕರರ ಮಕ್ಕಳಿಗೆ ಆದ್ಯತೆ .. ಅದರಲ್ಲೂ  ಹೆಚ್ಚು ಬಾರಿ ವರ್ಗಾವಣೆ ಗೊಂಡ  ಸರ್ಟಿಫಿಕೇಟ್ ಇದ್ದರೆ  ಸೀಟ್ ಸಿಗುವ ಸಾಧ್ಯತೆ ಹೆಚ್ಚು . ಗಿಲ್ ನಗರ ಮತ್ತು  ಆವಡಿ  ಯ ಎರಡು ಶಾಲೆಗಳಿಗೆ ಅರ್ಜಿ ಹಾಕಿದೆವು . ಗಿಲ್ ನಗರ ಪೆರಂಬೂರಿಗೆ ಹತ್ತಿರ  ಆದರೂ  ರೈಲ್ವೆ ಸೌಕರ್ಯ ಇಲ್ಲ .ಆವಡಿ ದೂರ ,ಆದರೆ  ಬೇಕಷ್ಟು ಉಪನಗರ  ರೈಲು ಸಂಪರ್ಕ ಇತ್ತ್ತು .ನನ್ನ ರೈಲ್ವೆ ಮಿತ್ರ ಇಂಜಿನಿಯರ್ ಶಶಿಧರನ್  ಪೆರಂಬೂರ್  ಕಾರಿಯೇಜ್  ವರ್ಕ್ಸ್  ನಲ್ಲಿ  ಇದ್ದರು .ಮಲಯಾಳಿ .ಅವರು  ಆವಡಿ ಯಲ್ಲಿ ನಾಲ್ಕು ಕೇಂದ್ರೀಯ ವಿದ್ಯಾಲಯ ಇವೆ ಎಂದು ತನ್ನ ಮಕ್ಕಳನ್ನು ಅಲ್ಲಿ ಸೇರಿಸಿದ್ದೇನೆ ಎಂದು ತಿಳಿಸಿ  ಅರ್ಜಿ ತಂದು ಕೊಟ್ಟರು .ಆವಡಿ  ಯಲ್ಲಿ  ಸೇನಾ ಉಪಕರಣ  ಕಾರ್ಖಾನೆ ,ಸೇನಾ ಬಟ್ಟೆ ತಯಾರಿಕಾ ಕಾರ್ಖಾನೆ ,ಕೇಂದ್ರೀಯ ಮೀಸಲು ಪಡೆ  ಇತ್ಯಾದಿ ನೌಕರಿಗೆ ಬೇರೆ ಬೇರೆ ಕೇಂದ್ರೀಯ ವಿದ್ಯಾಲಯ ಇತ್ತು . ಅವುಗಳಲ್ಲಿ ಒಂದರಲ್ಲಿ  ಮಗನಿಗೆ ಸೀಟ್ ಸಿಕ್ಕಿತು .ಆದರೆ ಪೆರಂಬೂರ್ ಕ್ವಾಟರ್ಸ್ ನಿಂದ  ದಿನಾಲೂ ಹೋಗಿ ಬರುವುದಕ್ಕೆ ಅವನು ಸಣ್ಣವನು .ಅದಕ್ಕೆ ಎಲ್ಲಾ ಸೌಕರ್ಯ ವಿದ್ದ   ಕ್ವಾಟರ್ಸ್ ನ್ನು  ತ್ಯಜಿಸಿ  ಮಗನ ಶಾಲೆಗೆ ಸಮೀಪ  ವೈಷ್ಣವಿ ನಗರ ಎಂಬಲ್ಲಿ  ಬಾಡಿಗೆ ಮನೆ ಮಾಡಿದೆವು .ಅದಕ್ಕೂ ಶಶಿಧರನ್ ಅವರ ಸಹಾಯ ಹಸ್ತ . 

          ನಮ್ಮ  ಮನೆಯ ಸುತ್ತ ಮುತ್ತ  ಆರ್ಡಿನೆನ್ಸ್  ಕಾರ್ಖಾನೆ ನೌಕರ ರು .ಹೆಚ್ಚಿನವರು  ಮಲಯಾಳಿಗಳು ,ಮಿಕ್ಕವರು ತಮಿಳರು .ಕನ್ನಡಿಗರು ಅಪರೂಪ ಆದರೂ ಇದ್ದರು. ನಮ್ಮ ಪಕ್ಕದ ಮನೆಯಲ್ಲಿ  ಶಂಕರ ನಾರಾಯಣನ್ ಮತ್ತು  ಅವರ ಪತ್ನಿ ಸರಸ್ವತಿ (ಸರಸು ಆಂಟಿ ) ಇದ್ದರು .ಮಲಯಾಳಿಗಳು .ಅವರು ನಮಗೆ ಮಾಡಿದ ಉಪಕಾರ  ಅಷ್ಟಿಟ್ಟಲ್ಲ  .ಆರ್ಡಿನೆನ್ಸ್ ಫ್ಯಾಕ್ಟರಿ  ನೌಕರರ ಮಕ್ಕಳನ್ನು  ಕೇಂದ್ರೀಯ ವಿದ್ಯಾಲಯ ಗಳಿಗೆ  ಕರೆದು ಕೊಂಡು ಹೋಗಲು  ಅವರ ಬಸ್ ಬರುತ್ತಿತ್ತು .ಅದರಲ್ಲಿ ನಮ್ಮ ಮಗನಿಗೆ ಅವರ ಕೇರ್ ಒಫ್  ಪಾಸ್ ಮಾಡಿಸಿ ಕೊಡಿಸಿದರು .ಪಕ್ಕದಲ್ಲಿ  ವಾಸವಿದ್ದ ಅವರ ಬಂದುಗಳ ಮಗಳು ಅದೇ ಶಾಲೆಗೆ ಹೋಗುತ್ತಿದ್ದಳು .ಅವಳು ನನ್ನ ಮಗನನ್ನು ತನ್ನ ಒಡ ಹುಟ್ಟಿದ ತಮ್ಮನಂತೇ  ಸಂತೋಷದಿಂದ ಶಾಲೆಗೆ ಕೂಡಿ ಕೊಂಡು ಹೋಗಿ ಬಂದು ಮಾಡುವಳು . ನೋಡಿ ಆಗೆಲ್ಲಾ ಜನರು ಒಬ್ಬರಿಗೊಬ್ಬರು  ಆಗುವರು .ಈಗಿನಷ್ಟು ಹಣ ಚಲಾವಣೆ ಇರಲಿಲ್ಲ . 

ವೈಷ್ಣವಿ ನಗರ ಕ್ಕೆ  ಸಮೀಪ ಅಣ್ಣಾ ನೂರ್ ನಲ್ಲಿ  ಉಪನಗರ ರೈಲ್ವೆ ನಿಲ್ದಾಣ ಇತ್ತು .ಪಕ್ಕದಲ್ಲಿ  ರೈಲ್ವೆ ಕಾರ್ ಶೆಡ್ .(ಉಪನಗರ ರೈಲುಗಳ ನಿಲುಗಡೆ ,ದುರಸ್ತಿ ತಾಣ )ನಮ್ಮ ಬಾಡಿಗೆ ಮನೆಯಿಂದ ಒಂದೂವರೆ ಕಿಲೋಮೀಟರ್ .ನನ್ನ ಮೋಟಾರ್ ಸೈಕಲ್ ನಲ್ಲಿ  ಅಲ್ಲಿಗೆ ತೆರಳಿ  ,ಬೈಕ್ ಸ್ಟಾಂಡ್ ನಲ್ಲಿ ಬೈಕ್ ಇತ್ತು ರೈಲು ಹಿಡಿದು ಪೆರಂಬೂರಿಗೆ ಹೋಗುತ್ತಿದ್ದೆ . ನಿಲ್ದಾಣದಿಂದ  ಆಸ್ಪತ್ರೆಗೆಗೆ  ಒಂದೂವರೆ ಕಿಲೋ ಮೀಟರ್ ನಡಿಗೆ .ರಾತ್ರಿ ಪಹಳಿ  ಕರ್ತವ್ಯ ಇದ್ದಾಗ ನಾನು ಮನೆಯಿಂದ ಎರಡು ದಿನ ದೂರ ಇರುತ್ತಿದ್ದೆ .ಆಗ ಮೊಬೈಲ್ ಫೋನ್ ಇಲ್ಲ .ಲ್ಯಾಂಡ್ ಲೈನ್ ಫೋನೂ ಇರಲಿಲ್ಲ .ಅಕ್ಕ  ಪಕ್ಕದವರು ಸಹಾಯ ಮಾಡುತ್ತಿದ್ದರು .ಮಗನಿಗೆ ಅಸೌಖ್ಯ ಆದರೆ  ಕಾರ್ ಶೆಡ್ ಡಿಸ್ಪೆನ್ಸರಿ ಯಲ್ಲಿ  ಪರಿಚಯದ ಒಳ್ಳೆಯ ಡಾಕ್ಟರ್ ರಾಧಾ ಇದ್ದರು . 

        ಒಂದು ದಿನ  ನಮ್ಮ ಹುಡುಗ  ಯಾವತ್ತ್ತು ಬರುವ  ಬಸ್ಸಿನಲ್ಲಿ  ಮಕ್ಕಳೊಡನೆ ಬರಲಿಲ್ಲ .ಪಕ್ಕದ ಮನೆಯ ಹುಡುಗಿ   ಕೂಡ ಶಾಲೆ ಬಿಡುವಾಗ ನನಗೆ ಸಿಗಲಿಲ್ಲ ಎಂದಳು .ಪುಣ್ಯಕ್ಕೆ ಆ ದಿನ ನಾನು ಮನೆಯಲ್ಲಿಯೇ ಇದ್ದೆನು .ಬೈಕ್ ತೆಗೆದು ಕೊಂಡು ಅವನ ಶಾಲೆಯ ಅಕ್ಕ ಪಕ್ಕ ಹುಡುಕಾಡಿದೆನು .ಮನಸ್ಸಿನಲ್ಲಿ ಭಯ .ಈ  ಮಹಾ ನಗರದಲ್ಲಿ  ಎಲ್ಲಿ ಕಳೆದು ಹೋದನೋ ಎಂದು ..ಮನಸಿನಲ್ಲಿ  ಏನೇನೋ ಯೋಚನೆಗಳು .ಪುನಃ  ಮನೆಗೆ ಬಂದಾಗ ಅವನು ವಾಪಸ್ ಆಗಿದ್ದ.  ನಡೆದುದೇನೆಂದರೆ ಆ ದಿನ ಕ್ಲಾಸ್ ಸ್ವಲ್ಪ ಬೇಗ ಬಿಟ್ಟಿತ್ತು .ಅವನು ಯಾವತ್ತೂ ಬರುವ ಬಸ್ಸಿನ  ಬದಲು ಬೇರೆ  ಲೈನ್ ನ ಬಸ್ ಹತ್ತಿದ್ದ .ಅದು ಎಲ್ಲಾ ಕಡೆ ಸುತ್ತು ಹಾಕಿ ವೈಷ್ಣವಿ ನಗರಕ್ಕೆ  ಬರುವುದು .ಅಂತೂ ನಮಗೆಲ್ಲ ಕೆಲವು ಗಂಟೆ  ಟೆನ್ಶನ್ . 

                  ( ಆವಡಿ ಕೇಂದ್ರೀಯ ವಿದ್ಯಾಲಯ ಸ್ಕೂಲ್ ಡೇ ಯಲ್ಲಿ )



            ವೈಷ್ಣವಿ ನಗರದಲ್ಲಿ ಹೆಚ್ಚು ಆರ್ಡಿನೆನ್ಸ್ ಫ್ಯಾಕ್ಟರಿ ನೌಕರರೇ  ಇದ್ದರು .ಅಕ್ಕ ಪಕ್ಕದವರೂ ಅವರೇ .ಅವರಿಗೆ  ರಕ್ಷಣಾ ನೌಕರರಂತೆ  ಕ್ಯಾಂಟೀನ್ ಸೌಕರ್ಯ ಇತ್ತು .ನಮಗೆ ತಮ್ಮ ಖಾತೆಯಿಂದ ಕೆಲವು ದಿನ ಬಳಕೆ ವಸ್ತು ಗಳು ಸಿಗುವಂತೆ ಮಾಡುತ್ತಿದ್ದರು .ನಾವು ಮೊದಲು ಬಾಡಿಗೆಗೆ ಇದ್ದ ಮನೆ ತುಂಬಾ ಸಣ್ಣದು ,ಮತ್ತು  ಕೆಲವೊಮ್ಮೆ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತಿತ್ತು .ಆಗ ನಮ್ಮ ಮನೆಯವರು  ಸಾರ್ವಜನಿಕ  ನಲ್ಲಿಗೆ ಹೋಗುತ್ತಿದ್ದರು .ಸ್ವಲ್ಪ ಸಮಯದಲ್ಲಿ  ಇನ್ನೊಂದು ಅನುಕೂಲಕರ  ಮನೆ ಸಿಕ್ಕಿತು . 

ಕೇಂದ್ರೀಯ ವಿದ್ಯಾಲಯ ನನ್ನ ಮಗನಿಗೆ ಇಷ್ಟ ವಾಯಿತು .ಅಲ್ಲಿ ಒಳ್ಳೆಯ ಶಿಕ್ಷಕರು ಇದ್ದರಲ್ಲದೆ ಪಠ್ಯೇತರ ಚಟುವಟಿಕೆ ಗಳಿಗೆ  ಪ್ರೋತ್ಸಾಹ ಇತ್ತು  .ನಾನು ಆಸ್ಪತ್ರೆ  ಕೆಲಸದಲ್ಲಿ  ಬ್ಯುಸಿ ಯಾಗಿ ಇರುತ್ತಿದ್ದೆನು  ಮತ್ತು ಪ್ರಯಾಣದಲ್ಲಿ ಸಮಯ ಶಕ್ತಿ ವ್ಯಯ ಆಗುತ್ತಿತ್ತು .ನನ್ನ ಮನೆಯವರೇ  ಅವನ  ಅವಶ್ಯಕತೆ ಗಳನ್ನು ನೋಡಿಕೊಳ್ಳುತ್ತಿದ್ದರು . ಅಕ್ಕ ಪಕ್ಕದಲ್ಲಿ ಆಟವಾಡಲು ಮಕ್ಕಳು ಇದ್ದರು .

ಮಕ್ಕಳ ಮನಸ್ಸು ಬಲು ಸೂಕ್ಷ್ಮ . ನನ್ನ ಮಗನಿಗೆ ಒಳ್ಳೆಯ ಅಂಕಗಳು ಬರುತ್ತಿದ್ದವು .ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಇತ್ತು .ಒಂದು ದಿನ ರಾತ್ರಿ ಮಲಗಿದ್ದಾಗ ಬಿಕ್ಕಳಿಸುತ್ತಿದ್ದನು .ಏಕೇಂದು ವಿಚಾರಿಸಲು ಈ ವರ್ಷ ಸ್ಕೂಲ್ ಡೇ ಯಲ್ಲಿ ನನಗೆ ಒಂದೂ ಬಹುಮಾನ ಇಲ್ಲ .ಬೇರೆಲ್ಲರಿಗೆ ಇದೆ .,ನಾವು ಅವನಿಗೆ ಸಮಾಧಾನ ಮಾಡಿ ಮುಂದಿನ ವರ್ಷ ಬರುವುದು ಎಂದೆವು .ಮುಂದೆ ಬಹುಮಾನಗಳು ಬಂದುವು .ನಾನು ಮುಂದೆ ಕೆಲವು ಶಾಲೆಗಳಲ್ಲಿ ಅತಿಥಿಯಾಗಿ ಬಹುಮಾನ ವಿತರಣೆ ಮಾಡುವಾಗ ಪಡೆಯುವವರ  ಪಟ್ಟಿ ಬಹಳ ದೊಡ್ಡದು ಇರುತ್ತಿತ್ತು .ಏನಾದರೂ ಒಂದು ಕಾರಣ ಕಾಣಿಸಿ  ಎಲ್ಲರಿಗೂ ಉಡುಗೊರೆ ಸಿಗುವಂತೆ ಮಾಡುತ್ತಿದ್ದರು .ನಮಗೆ ಎಷ್ಟು ಕೊಟ್ಟರೂ ಮುಗಿಯುವುದಿಲ್ಲ ಎಂದು ಯೋಚನೆ ಬರಬಹುದು ,ಆದರೆ ಮಕ್ಕಳ ಮೊಗದಲ್ಲಿ  ಸಂತಸ ಕಂಡರೆ ಅದೆಲ್ಲ ಮರೆಯಾಗುವುದು 

ವೈಷ್ಣವಿ ನಗರ ದಲ್ಲಿ  ನಮ್ಮ ಎರಡನೇ ಮನೆ ಓಣಿಯಲ್ಲಿ  ಒಬ್ಬರು  ಬ್ರಿಟ್ಟಾನಿಯ  ಬಿಸ್ಕತ್  ಫ್ಯಾಕ್ಟರಿ ಯಲ್ಲಿ ಕೆಲಸದಲ್ಲಿ ಇದ್ದರು .ಅವರ ಹೆಂಡತಿ ಮೀನಾ ಮಾಮಿ .ಫ್ಯಾಕ್ಟರಿ ಯಿಂದ ಸೆಕೆಂಡ್ಸ್ ಬಿಸ್ಕತ್ ಕಡಿಮೆ ಕ್ರಯಕ್ಕೆ  ತಂದು ಕೊಡುವರು .ರಜೆಯಲ್ಲಿ  ಹೆಂಡತಿ ಮಗ  ಊರಿಗೆ ಹೋದಾಗ ಪಕ್ಕದ ಮನೆಯವರು ಊಟ ತಿಂಡಿ ಕೊಡುವರು .ನಮ್ಮ  ಮನೆಯಲ್ಲಿ ಕೇಬಲ್ ಟಿ ವಿ ಇರಲಿಲ್ಲ .ಕ್ರಿಕೆಟ್ ಮ್ಯಾಚ್ ನೋಡಲು ಪಕ್ಕದ ಮನೆ ಆಶ್ರಯ . 

  ಹತ್ತಿರದ  ಬಸ್ ಸ್ಟಾಪ್ ವೈಷ್ಣವಿ ನಗರ .ಆದರೂ ಎಲ್ಲಾ ಸಿಟಿ ಬಸ್ ಗಳಿಗೆ ಸ್ಟಾಪ್ ಇರಲಿಲ್ಲ .ಪಕ್ಕದಲ್ಲಿ ತಿರುಮಲೆ ಒಯಲ್ ಇತ್ತು .ಅಲ್ಲಿ ಎಲ್ಲಾ ಬಸ್ ನಿಲ್ಲುವುವು .ಅಲ್ಲಿಗೆ ಒಂದು ಒಳ ದಾರಿ ಇತ್ತು ..ಆ ದಾರಿ ಬದಿಯಲ್ಲಿ ಒಬ್ಬರು ಸಂಗೀತ ಟೀಚರ್ ಇದ್ದರು .ಅವರು ಮಗನಿಗೆ ಸಂಗೀತ ಓನಾಮ ಮಾಡಿದರು ..ತಿರುಮಲೆ ಒಯಲ್ ನಿಂದ  ಪೆರಂಬೂರಿಗೆ  ೨೩ ನಂಬರ್ ಬಸ್ .ಅಂಬತ್ತೂರ್  ಮೂಲಕ ಅಯ್ಯನಾವರಂ (ಜಾಯಿಂಟ್ ಆಫೀಸ್ ಸ್ಟಾಪ್ ) ,ಪುರುಶ್ವಾಕಮ್  ,ಮೂಲಕ ಪ್ಯಾರಿಸ್ ಗೆ ..ಹಲವು ಬಾರಿ ಈ ಬಸ್ಸಿನಲ್ಲಿ ಹೋಗಿದ್ದೇನೆ .     (ಮುಂದುವರಿಯುವುದು )

    ಬಾಲಂಗೋಚಿ : ಮುಂದೆ ನಮ್ಮ ಮಗ ಕನ್ನಡ ಚೆನ್ನಾಗಿ ಓದಿ  ಬರೆಯಲು    ಕಲಿತಿರುವನು       

 

3 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ...ಬಾಲ್ಯ ನೆನಪುಗಳನ್ನು ಮರುಕಲಿಸದಲ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈ ಮೇಲಿನ ಬಾಲಂಗೋಚಿಯ ಸಾಕ್ಷಿ ಬೇಕಾದಲ್ಲಿ ಮೇಲಿನ ಕಾಮೆಂಟನ್ನು ಓದಿ. :)
      ನಿಮ್ಮೆಲ್ಲರ ಜೀವನದ ಈ ತುಣುಕುಗಳು ಓದಿ ಬಹಳ ಖುಷಿ ಆಯಿತು. ಹಾಗೆ ಇನ್ನಷ್ಟು ಮಾತುಕತಗೆ ಅವಕಾಶವಾಯಿತು.

      ಅಳಿಸಿ
  2. ಬರವಣಿಗೆ ಮುಂದಿನ ಸಂಚಿಕೆಯನ್ನು ಕಾಯುವಂತೆ ಮಾಡುತ್ತಿದೆ....

    ಪ್ರತ್ಯುತ್ತರಅಳಿಸಿ