ಆರ್ ಡಿ ಪ್ರಧಾನ್ ಸರಕಾರಿ ಅಧಿಕಾರಿ ಆಗಿ ನೆಹರು ಯುಗದಿಂದ ನರಸಿಂಹ ರಾವ್ ವರೆಗೆ ಕಂಡವರು .ದೇಶದ ಗೃಹ ಕಾರ್ಯದರ್ಶಿ ,ಅರುಣಾಚಲದ ರಾಜ್ಯಪಾಲ ಇತ್ಯಾದಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸೈ ಎನಿಸಿ ಕೊಂಡವರು .ಅವರ ಜೀವನ ಚರಿತ್ರೆ ಬಿಯಾಂಡ್ ಎಕ್ಷ್ಪೆಕ್ಟೇಷನ್ ಕೆಲವು ಮಾಸಗಳ ಹಿಂದೆ ಓದಿ ಸಂತೋಷ ಪಟ್ಟಿದ್ದೇನೆ .ಅದರಲ್ಲಿ ಒಂದು ಘಟನೆಯ ಬಗ್ಗೆ ಬರೆದಿರುವರು .ಪ್ರಧಾನ್ ಅವರು ಆಗಿನ ರಕ್ಷಣಾ ಸಚಿವ ವೈ ಬಿ ಚವಾಣ್ ಅವರ ಕಾರ್ಯದರ್ಶಿ ಆಗಿದ್ದ ಸಮಯ .ನೆಹರೂ ಪ್ರಧಾನ ಮಂತ್ರಿ .ಚೀನಾ ಯುದ್ಧದಲ್ಲಿ ಮುಖ ಭಂಗ ಅನುಭಸಿಸಿ ರಕ್ಷಣಾ ಸಚಿವರಾಗಿದ್ದ ವಿ ಕೆ ಮೆನನ್ ಅವರ ತಲೆದಂಡ ತೆಗೆದು ಕೊಂಡ ಮೇಲೆ ಚವಾಣ್ ಅವರನ್ನು ಮಹಾರಾಷ್ಟ್ರ ದಿಂದ ದೆಹಲಿಗೆ ಕರೆಸಿ ಆ ಸ್ಥಾನಕ್ಕೆ ನಿಯೋಜಿಸಲಾಗಿತ್ತು .
೧೯೬೨ ರ ಡಿಸೆಂಬರ್ ೫ ಪ್ರಧಾನಿ ಅಸ್ಸಾಂ ಸಂದರ್ಶನ ಕೈಗೊಂಡಿದ್ದರು .. ಅಲ್ಲಿ ನಾಲ್ಕನೇ ಸೈನ್ಯ ವಿಭಾಗದ ಕೇಂದ್ರ ಕಚೇರಿಗೆ ಭೇಟಿ ನೀಡುವ ಸಮಯ .ಪ್ರಧಾನಿ ನೆಹರು ,ವೈ ಬಿ ಚವಾಣ್ ,ಕ್ಯಾಬಿನೆಟ್ ಸೆಕ್ರೆಟೇರಿಯಟ್ ನ ಉಪ ಕಾರ್ಯದರ್ಶಿ ಸುಶೀತಲ್ ಬ್ಯಾನರ್ಜಿ ,ಆರ್ ಡಿ ಪ್ರಧಾನ್ ,ಮತ್ತು ಇಂದಿರಾ ಗಾಂಧಿ ಇದ್ದರು .ಇಂದಿರಾ ಗಾಂಧಿ ಆಗ ಯಾವುದೇ ಹುದ್ದೆಯಲ್ಲಿ ಇರಲಿಲ್ಲ ,ಸೇನೆಯ ಭೂಪಟ ಕೋಣೆಯ ಒಳಗೆ ಪ್ರಧಾನಿ ಪ್ರವೇಶಿಸುವ ವೇಳೆ ಬಾಗಿಲಲ್ಲಿ ಇದ್ದ ಸ್ಯಾಮ್ ಮಾಣೆಕ್ ಷಾ ಇಂದಿರಾ ಅವರನ್ನು ತಡೆದು "ಕ್ಷಮಿಸಿ ಅಧಿಕಾರ ಗೋಪ್ಯತೆ ಪ್ರಮಾಣ ಸ್ವೀಕರಿಸದ ವ್ಯಕ್ತಿಯನ್ನು ಒಳ ಬಿಡಲಾಗದು "ಎಂದು ಹೊರಗೇ ನಿಲ್ಲಿಸದರು .ಪರಿಸ್ಥಿತಿ ಯ ಸೂಕ್ಷ್ಮತೆ ಅರಿತ ಚವಾಣ್ ಪ್ರಧಾನ್ ಅವರಿಗೆ ನೀವೂ ಹೊರಗಡೆ ಕುಳಿತು ಇಂದಿರಾ ಅವರಿಗೆ ಕಂಪೆನಿ ನೀಡಿ ಎಂದು ಕಿವಿ ಮಾತು ಹೇಳಿದರು .ತಮಗೆ ಅವಮಾನ ಆಯಿತು ಎಂದು ಗುಮ್ಮನೆ ಕುಳಿತ ಇಂದಿರಾ ಗಾಂಧಿ ಅಲ್ಲಿ ಸೌಜನ್ಯಕ್ಕೆ ಕೊಡ ಮಾಡಿದ ಚಹಾ ಮತ್ತು ಮ್ಯಾಗಜಿನ್ ನಿರಾಕರಿಸಿದರು .ಇದು ಮಾಣೆಕ್ ಷಾ ಮೇಜರ್ ಜನರಲ್ ಆಗಿದ್ದಾಗ ನಡೆದ ಘಟನೆ ,ಪ್ರಧಾನಿ ಮಗಳಾದರೇನು ?ನೆಹರೂ ಅವರೂ ಈ ಘಟನೆಯನ್ನು ತಮಗೆ ಆದ ಅವಮಾನ ಎಂದು ತಿಳಿದ ಹಾಗೆ ಇಲ್ಲ .
ಮಾಣೆಕ್ ಷಾ ೧೯೭೧ ರ ಪಾಕಿಸ್ತಾನದ ವಿರುದ್ಧ ಜಯದ ರೂವಾರಿ .ಆದರೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಕೇಳಿದೊಡನೆ ಅವರು ಯುದ್ಧಕ್ಕೆ ಸಮ್ಮತಿಸಿರಲಿಲ್ಲ .ಸೈನ್ಯಕ್ಕೆ ಸಿದ್ದ ಗೊಳ್ಳಲು ತಮ್ಮದೇ ಲೆಕ್ಕದ ಸಮಯ ಕೇಳಿ ಆಮೇಲೆ ಹಸಿರು ನಿಶಾನೆ ತೋರಿದರು .
ಇದೇ ಮಾಣೆಕ್ ಷಾ ಮೇಜರ್ ಜನರಲ್ ಆಗಿದ್ದಾಗ ಆಗಿನ ರಕ್ಷಣಾ ಸಚಿವ ವಿ ಕೆ ಮೆನನ್ ಸೇನೆಯ ಮುಖ್ಯಸ್ಥ ಜನರಲ್ ತಿಮ್ಮಯ್ಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಥಟ್ಟನೆ ಅವರು ಕೊಟ್ಟ ಉತ್ತರ "ಮಂತ್ರಿಗಳೇ ನನ್ನ ಹಿರಿಯ ಅಧಿಕಾರಿ ಬಗ್ಗೆ ಅಭಿಪ್ರಾಯ ಕೊಡಲು ನನಗೆ ಅಧಿಕಾರ ಇಲ್ಲ .ನಾಳೆ ನೀವು ನನ್ನ ಬ್ರಿಗೇಡಿಯರ್ ಮತ್ತು ಕರ್ನಲ್ ಗಳಲ್ಲಿ ನನ್ನ ಬಗ್ಗೆ ಕೇಳುವಿರಿ ,ಸೈನ್ಯದ ಶಿಸ್ತಿಗೆ ಇದು ತರವಲ್ಲ .ಮುಂದೆ ಇಂತಹದನ್ನು ಮಾಡ ಬೇಡಿರಿ "
ಷಾ ಅವರ ಕೆಲವು ನುಡಿ ಮುತ್ತುಗಳು
"ಯಾವನಾದರೂ ನನಗೆ ಸಾವಿನ ಭಯ ಇಲ್ಲ ಎಂದು ಹೇಳಿದರೆ ಒಂದೋ ಅವನು ಸುಳ್ಳು ಹೇಳುತ್ತಿರುವನು ಇಲ್ಲಾ ಅವನು ಒಬ್ಬ ಗೂರ್ಖಾ ಆಗಿರುವನು "
ಇನ್ನೆರಡು ಅನುವಾದಿಸದೆ ಕೆಳಗೆ ಕೊಟ್ಟಿರುವೆನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ