ರೈಲ್ವೇ ವೈದ್ಯಕೀಯ ಸೇವೆಯಲ್ಲಿದ್ದ ನನಗೆ1992ರಲ್ಲಿ ಚೆನ್ನೈ ಪೆರಂಬೂರು ಆಸ್ಪತ್ರೆಗೆ ವರ್ಗ ಆಯಿತು .ಅದು ಬಹಳ ಪ್ರಸಿದ್ಧ ಆಸ್ಪತ್ರೆ .ತುಂಬಾ ಸಂತೋಷವಾಯಿತು .ಈ ವರ್ಗಾವಣೆಗೆ ಕಾರಣ ಡಾ ಯೋಗಿ ಮಹ್ರೋತ್ರ ,ದಕ್ಷಿಣ ರೈಲ್ವೇ ಮುಖ್ಯ ವೈದ್ಯಾಧಿಕಾರಿ ಅಗಿದ್ದವರು .ಒಮ್ಮೆ ಮಂಗಳೂರಿಗೆ ಇನ್ಸ್ಪೆಕ್ಷನ್ ಗೆ ಬಂದವರು ನಿಮ್ಮಂತಹ ಯುವಕರು ಪೆರಂಬೂರಿಗೆ ಬರಬೇಕು .ಅಲ್ಲಿ ಕಲಿಯುವುದು ಬಹಳ ಇದೆ ಎಂದು ನನ್ನನ್ನು ಪ್ರೋತ್ಸಾಹಿಸಿದ್ದರು .ಅವರಿಗೆ ನಾನು ಚಿರ ಋಣಿ .
ಚೆನ್ನೈ ಆಸ್ಪತ್ರೆಯಲ್ಲಿ ನನ್ನ ಮಿತ್ರ ಡಾ ಪ್ರಸನ್ನ ಕುಮಾರ್ ಸೂಕ್ಷ್ಮಾಣು ಶಾಸ್ತ್ರ ತಜ್ನರಾಗಿ ಕೆಲಸ ಮಾಡುತ್ತಿದ್ದರು.ಹಿರಿಯರಾದ ಕೇಶವ ಪ್ರಸಾದ್ ರಾಯಚುರ್ಕರ್ ರೇಡಿಯೊಲೊಜಿಸ್ಟ್ ಆಗಿದ್ದರು . ನಾನು ಬರುವ ವಿಚಾರ ಅವರಿಗೆ ತಿಳಿಸಿದೆ ..ಮೊದಲಿಗೆ ನಾನೊಬ್ಬನೇ ಪೈಲಟ್ ಆಗಿ ಚೆನ್ನೈ ಗೆ ತೆರಳಿ ಕೆಲಸಕ್ಕೆ ರಿಪೋರ್ಟ್ ಮಾಡಿದೆ .ಪೆರಂಬೂರ್ ಕಾನ್ಸ್ಟೇಬಲ್ ರಸ್ತೆಯಲ್ಲಿ ಒಂದು ಹಳೇ ಕ್ವಾಟರ್ಸ್ ನಲ್ಲಿ ಪ್ರಸನ್ನಕುಮಾರ್ ಇದ್ದರು .ಅವರಿಗೆ ಮದುವೆ ಆಗಿರಲಿಲ್ಲ .ಕೇಶವ್ ಕುಟುಂಬ ಇನ್ನೂ ಮೈಸೂರು ನಲ್ಲಿಯೇ ಇತ್ತು .ಅವರೂ ,ಹೃದಯ ಶಸ್ತ್ರ ತಜ್ಞ ಮೂಸಾ ಕುನ್ಜಿ ಅದೇ ಮನೆಯಲ್ಲಿ ಇದ್ದರು .ನಾನೂ ಅವರೊಡನೆ ಸೇರಿ ಕೊಂಡೆ .ಅದು ಆಸ್ಪತ್ರೆಗೆ ಸಮೀಪ ಇತ್ತು .. ಅವರೊಡನೆ ಕಳೆದ ಮೊದಲ ಚೆನ್ನೈ ದಿನಗಳು ಸಂತೋಷಕರ ಆಗಿದ್ದವು
ಎಲ್ಲಿಯಾದರೂ ಅನುಕೂಲ ಕರ ವಾದ ಜಾಗದಲ್ಲಿ ಕ್ವಾಟರ್ಸ್ ಹುಡುಕುವ ಕೆಲಸ ಆರಂಭ ವಾಯಿತು .ಇಲಾಖೆಯಲ್ಲಿ ಇದಕ್ಕೆ ಶಿಫಾರಸು ಇತ್ಯಾದಿ ನಡೆಯುತ್ತದೆ .ನನಗೆ ಅಲ್ಲಿ ಯಾರೂ ಗಾಡ್ ಫಾದರ್ ಇಲ್ಲ ...ಕೊನೆಗೂ ಪಿಲ್ಕಿಂಗ್ಟನ್ ರಸ್ತೆಯ ಒಂದು ಬಂಗ್ಲೆಯ ಮಹಡಿ ಮನೆ ಸಿಕ್ಕಿತು .ಕೆಳಗಡೆ ಎರಡು ಮನೆಗಳು ಇದ್ದವು
ಮಂಗಳೂರಿನ ನನ್ನ ಮನೆ ಸಾಮಾನು ಫಾರ್ಮಸಿಸ್ಟ್ ಮಿತ್ರ ವಿಜಯನ್ ಅವರ ಮತ್ತು ಸಹೋದ್ಯೋಗಿಗಳ ಸಹಾಯದಿಂದ ರೈಲ್ವೆ ವ್ಯಾಗನ್ ಗೆ ತುಂಬಿಸ ಲಾಯಿತು .ಇದರಲ್ಲಿ ದೊಡ್ಡ ವಸ್ತು ಸ್ಟೀಲ್ ಕಪಾಟು ;ಪುತ್ತೂರಿನ ಸೋಜಾ ರ ಅಂಗಡಿಯಿಂದ ೧೯೮೪ ರಲ್ಲಿ ಕೊಂಡದ್ದು ,ಈಗಲೂ ನನ್ನ್ನ ಮನೆಯಲ್ಲಿ ಹಾಗೇ ಇದೆ .ಇನ್ನು ಭಾರದ ವಸ್ತು ಅರೆಯುವ ಕಲ್ಲು .ಈಗಲೂ ಇದೆ ಆದರೆ ಉಪಯೋಗದಲ್ಲಿ ಇಲ್ಲ .ಇನ್ನು ನನ್ನ ಎಲ್ಲಾ ಟ್ರಾನ್ಸ್ಫರ್ ಗಳಲ್ಲಿಯೂ ತೂಕದ ವಸ್ತು ನನ್ನ ಲೈಬ್ರರಿ .ನಾಲ್ಕೈದು ಕಟ್ಟು ಪುಸ್ತಕ ಇದ್ದಿರಬಹುದು .ಇದರ ಜೊತೆ ನನ್ನ ಐರಾವತ ಕವಾಸಾಕಿ ೧೦೦ ಬೈಕ್ .ಇವನ್ನು ನನ್ನ ಮಿತ್ರರ ಮುಖ್ಯವಾಗಿ ಪ್ರಸನ್ನ ಮತ್ತು ಕೇಶವ್ ಅವರ ಸಹಾಯದಿಂದ ಮನೆಗೆ ಸಾಗಿಸಿ ಮನೆ ಸಜ್ಜು ಗೊಳಿಸಲಾಯಿತು .
ಇನ್ನು ರೇಷನ್ ಶಾಪ್ ಹುಡುಕಾಣ .ಆಗಿನ್ನೂ ಸಕ್ಕರೆ ,ಧಾನ್ಯ ರೇಷನ್ ಅಂಗಡಿಯಲ್ಲಿ ಕೊಳ್ಳುತ್ತಿದ್ದೆವು .ರೇಷನ್ ಕಾರ್ಡ್ ಟ್ರಾನ್ಸ್ಫರ್ ವೋಚರ್ ಮಂಗಳೂರಿನಿಂದ ತಂದುದನ್ನು ಚೆಟ್ ಪೆಟ್ ನ ಆಹಾರ ಇಲಾಖೆ ಆಫೀಸ್ ನಲ್ಲಿ ನಲ್ಲಿ ಕೊಡುವಾಗ ಅರ್ಜಿ ಫಾರಂ ತಮಿಳಿನಲ್ಲಿ ತುಂಬಿಸ ಬೇಕು .ಅಲ್ಲಿ ಖಾಸಗಿ ಬರವಣಿಗೆಯವರು ಇದ್ದರು .ನನಗೆ ಭಯ .ಅವರು ನನ್ನ ಹೆಸರನ್ನು ತಮಿಳೀಕರಿಸಿ ಬದ್ಮಾನಾಭನ್ ಎಂದು ಮಾಡಿದರೆ ? ತಮಿಳಿನಲ್ಲಿ ವ್ಯಂಜನ ಅಕ್ಷರಗಳು ಕಡಿಮೆ .ಕ ಖ ಗ ಘ ಮ ಕ್ಕೆ ಕ ಮತ್ತು ಮ ಮಾತ್ರ .ಉಚ್ಚಾರಣೆ ಸಂದರ್ಭ ನೋಡಿ ಕೊಂಡು ಇರುವುದು .. ಆದರೆ ಗಣಪತಿ ಕಣಪತಿ ಆಗುವುದು .ಪೂರಿ ಭೂರಿ ಆಗುವುದು .ರಾಜ್ಯ ಸರಕಾರದ ಮೊದಲ ಕೆಲಸ ಸುಸೂತ್ರ ಆಯಿತು .ತಮಿಳ್ನಾಡಿನಲ್ಲಿ ಸರಕಾರಿ ಯಂತ್ರ ಉತ್ತಮ ವಾಗಿಯೇ ಇದೆ .ರಾಜಾಜಿ ಕಾಮರಾಜ್ ಮತ್ತು ಅಣ್ಣಾದುರೈ ಅವರ ಆಡಳಿತ ದ ಪಳೆಯುಳಿಕೆಗಳು ಇವೆ .ಆಗ ಜಯಲಲಿತಾ ಮುಖ್ಯ ಮಂತ್ರಿ .
ಇನ್ನು ಗ್ಯಾಸ್ ಸಂಪರ್ಕ ಕೂಡಲೇ ಆಯಿತು .ನಾನು ಕಂಡ ಅತ್ಯುತ್ತಮ ಗ್ಯಾಸ್ ಏಜನ್ಸಿ ಅದು .
ಹಾಲು ಬೇಕಲ್ಲ .ತಮಿಳ್ನಾಡಿನ ಡೈರಿ ಅವಿನ್ .ಅಲ್ಲಿ ಆಗ ಹಾಲಿನ ಕಾರ್ಡ್ ಕೊಡುತ್ತಿದ್ದರು .ಹಾಲಿನ ಕೊರತೆ ಇತ್ತು .ಕರ್ನಾಟಕದಲ್ಲಿಯೂ ಅದೇ ಪರಿಸ್ಥಿತಿ ಇತ್ತು ..ಅವಿನ್ ನವರದು ಆಗ ಪ್ರಿ ಪೈಡ್ ಹಾಲಿನ ಕಾರ್ಡ್ ಮಾತ್ರ ಇತ್ತು .ಹಣ ಕೊಟ್ಟು ಹಾಲು ಕೊಳ್ಳಲು ಅವಕಾಶ ಇರಲಿಲ್ಲ .ಹೊಸ ಕಾರ್ಡ್ ಡೇರಿ ಯಲ್ಲಿ ಮಾತ್ರ ಇಶ್ಯೂ ಮಾಡುತ್ತಿದ್ದರು .ಅದಕ್ಕೋಸ್ಕರ ಮಾದವರಂ ನಲ್ಲಿ ಇದ್ದ ಡೇರಿ ಗೆ ಹೋಗಿ ಅರ್ಜಿ ಕೊಟ್ಟೆ. ಅಲ್ಲಿಯ ಅಧಿಕಾರಿ ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೀರಿ ,ಮಕ್ಕಳೆಷ್ಟು ಎಲ್ಲ ವಿಚಾರಿಸಿ ನಾನು ಅರ್ಜಿಯಲ್ಲಿ ದಿನಕ್ಕೆ ಒಂದೂವರೆ ಲೀಟರ್ ಕೇಳಿದ್ದಕ್ಕೆ ಅದನ್ನು ಕಟ್ ಮಾಡಿ ಒಂದು ಲೀಟರ್ ಮಾಡಿ ದಯಪಾಲಿಸಿದನು .ಈಗ ಇದನ್ನೆಲ್ಲ ನೆನಸಿ ಕೊಂಡರೆ ಆಶ್ಚರ್ಯ ಆಗುವುದು .ಆದರೆ ಹಾಲಿಗೆ ನಮಗೆ ತತ್ವಾರ ಆಗಲಿಲ್ಲ .ಯಾಕೆಂದರೆ ವಸತಿ ಪ್ರದೇಶದಲ್ಲಿ ಹಾಲಿನ ಅಜ್ಜಿಯರು (ಪಾಟಿ -ತಮಿಳಿನಲ್ಲಿ )ಇರುತ್ತಿದ್ದರು .ಅವರು ತಮ್ಮ ಏರಿಯಾ ದ ಮನೆಯವರ ಹಾಲಿನ ಕಾರ್ಡ್ ಶೇಖರಿಸಿ ಬೂತ್ ನಿಂದ ಹಾಲು ತಂದು ವಿತರಿಸುತ್ತಿದ್ದರು .ತಮ್ಮ ಸೇವೆಗೆ ಹೆಚ್ಚು ಸಂಭಾವನೆ ತೆಗೆದು ಕೊಳ್ಳುತ್ತಿರಲಿಲ್ಲ .ಆದರೆ ಕೆಲವು ಮನೆಯವರು ಊರಿನಲ್ಲಿ ಇಲ್ಲದ ವೇಳೆ ಅವರ ಲೆಕ್ಕದ ಹಾಲನ್ನು ಹೆಚ್ಚು ಬೇಕಾದವರಿಗೆ ಈ ಅಜ್ಜಿಯರು ವಿಲೇವಾರಿ ಮಾಡುತ್ತಿದ್ದರು .ಹಾಲಿನ ಕೊರತೆ ಇದ್ದುದರಿಂದ ಅವರಿಗೆ ದಿವಸದ ಕೊನೆಗೆ ಹಾಲು ಉಳಿಯುತ್ತಿರಲಿಲ್ಲ .ದೊಡ್ಡ ಅಲ್ಯೂಮಿನಿಯಂ ಬಾಣಲೆಯಲ್ಲಿ ಹಾಲಿನ ಪ್ಯಾಕೆಟ್ ತುಂಬಿ ಬರುತ್ತಿದ್ದ ಹಾಲಿನ ಮಂಗಮ್ಮರು ಈಗಲೂ ನೆನಪಿನಲ್ಲಿ ಅಚ್ಚಾಗಿ ಉಳಿದಿದ್ದಾರೆ ( ಮುಂದುವರಿಯುವುದು)
ಎಷ್ಟು ಬದಲಾವಣೆಗಳು ಕಾಲನ ಮಹಿಮೆಯಲ್ಲಿ! ಆದರೆ ಎಲ್ಲವೂ ಉತ್ತಮವಾಯಿತು ಎಂದು ಅರ್ಥವಲ್ಲ
ಪ್ರತ್ಯುತ್ತರಅಳಿಸಿಎಷ್ಟು ಬದಲಾವಣೆಗಳು ಕಾಲನ ಮಹಿಮೆಯಲ್ಲಿ! ಆದರೆ ಎಲ್ಲವೂ ಉತ್ತಮವಾಯಿತು ಎಂದು ಅರ್ಥವಲ್ಲ
ಪ್ರತ್ಯುತ್ತರಅಳಿಸಿಅಕ್ಷರಶಃ ಸತ್ಯ
ಪ್ರತ್ಯುತ್ತರಅಳಿಸಿ