ನಾನು ಚೆನ್ನೈಗೆ ಕಾಲಿಟ್ಟ ಸಮಯ ಕಾವೇರಿ ಗಲಾಟೆ ಏರು ಸ್ಥಿತಿಯಲ್ಲಿ ಇತ್ತು .ಜಯಲಲಿತಾ ಮುಖ್ಯ ಮಂತ್ರಿ . ಕನ್ನಡಿಗರ ಸಂಸ್ಥೆ ,ಅಂಗಡಿ ,ಹೊಟೇಲ್ ಗಳಿಗೆ ಬಲವಾದ ಪೋಲೀಸು ಕಾವಲು ಇತ್ತು .ಅಂಗಡಿ ನಾಮಪಲಕ ಗಳಿಂದ ಬೆಂಗಳೂರು ,ಮೈಸೂರು ಇತ್ಯಾದಿ ಶಬ್ದಗಳನ್ನು ಮಾಲೀಕರೆ ತೆಗೆದು ಹಾಕಿದ್ದರು .ತಮಿಳ್ ನಾಡಿನಲ್ಲಿ ಕನ್ನಡ ನಾಮ ಫಲಕ ಅಪರೂಪ ತಾನೇ .ಹಳೇ ಮದ್ರಾಸ್ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಕಾಸರಗೋಡು ,ಕೊಳ್ಳೇಗಾಲ ಇತ್ಯಾದಿ ಪ್ರದೇಶಗಳು ಸೇರಿದ್ದರಿಂದ ಕನ್ನಡ ಭಾಷಿಕರಿಗೆ ಕೊರತೆ ಇಲ್ಲ ..ಹೋಟೆಲ್ ಗಳು ,ಬೇಕರಿ ,ಆಸ್ಪತ್ರೆ ಕ್ಲಿನಿಕ್ ಗಳು ಕನ್ನಡಿಗರದ್ದು ಸಾಕಷ್ಟು ಸಂಖ್ಯೆಯಲ್ಲಿ ಈಗಲೂ ಇವೆ .ಚೆನ್ನೈ ನಗರದಲ್ಲಿ ನಾನು ಕಂಡು ಕೊಂಡಂತೆ ಬಹಳಷ್ಟು ಕನ್ನಡಿಗರು ತಮ್ಮ ಭಾಷಾ ಮೂಲ ತೋರ್ಪಡಿಸಲು ಇಷ್ಟ ಪಡುತ್ತಿರಲಿಲ್ಲ .ನಾವು ಕನ್ನಡದಲ್ಲಿ ಕೇಳಿದರೆ ತಮಿಳಿನಲ್ಲಿಯೇ ಉತ್ತರ ಕೊಡುತ್ತಿದ್ದರು .
ಅಯ್ಯನಾವರಂ ಮುಖ್ಯ ರಸ್ತೆಯಲ್ಲಿ ಒಂದು ಅಯ್ಯಂಗಾರ ಬೇಕರಿ ಇತ್ತು .ಅವರು ಕನ್ನಡ ವಾರ ಪತ್ರಿಕೆ ಸುಧಾ ,ತರಂಗ ,ಮಾಸ ಪತ್ರಿಕೆ ಮಯೂರ ,ತುಷಾರ ತರಿಸಿ ಕೊಳ್ಳುತ್ತಿದ್ದರು .ಈ ಅಯ್ಯಂಗಾರ್ ಗಳ ಮನೆ ಮಾತು ತಮಿಳು .ಆದರೆ ಕನ್ನಡಕ್ಕೆ ಅವರ ಕೊಡುಗೆ ಅಪಾರ .ಮಾಸ್ತಿ ವೆಂಕಟೇಶ ಅಯ್ಯಂಗಾರ್ ,ಗೊರೂರು ರಾಮಸ್ವಾಮಿ ಅಯ್ಯಂಗಾರ್ .ಕ್ಯಾಪ್ಟನ್ ಗೋಪಿನಾಥ್ ಕೆಲವು ಹೆಸರಿಸ ಬಹುದಾದ ಸಾಧಕರು .
ಚೆನ್ನೈ ನಲ್ಲಿ ಮುಂಬೈಯಂತೆ ಕನ್ನಡ ದಿನ ಪತ್ರಿಕೆ ಇರಲಿಲ್ಲ .ಮನೆಗೆ ಹಿಂದೂ ಆಂಗ್ಲ ದೈನಿಕ ಬರುತ್ತಿತ್ತ್ತು .ಪರ ಊರಿನಲ್ಲಿ ನಮಗೆ ನಮ್ಮ ಭಾಷೆ ,ಸಂಸ್ಕೃತಿ ಬಗ್ಗೆ ಪ್ರೀತಿ ಹೆಚ್ಚುವುದು .ಹಾಗೆ ಅರಸಿ ಹೋದಾಗ ದಾಸ್ ಪ್ರಕಾಶ್ ಹೋಟೆಲ್ ನ ಸ್ಟಾಲ್ ನಲ್ಲಿ ಉದಯವಾಣಿಯ ಬೆಂಗಳೂರು ಆವೃತ್ತಿ ಮತ್ತು ಜನಪ್ರಿಯ ಕನ್ನಡ ಮಾಸ ಪತ್ರಿಕೆ ಮತ್ತು ವಾರಿಕಗಳು ಸಿಗುವ ವಿಚಾರ ತಿಳಿಯಿತು .ಈ ಹೋಟೆಲ್ ಚೆನ್ನೈ ನ ಪೂನಮಲೈ ಹೈ ರೋಡ್ ನ ಆಯಕಟ್ಟು ಜಾಗದಲ್ಲಿ ಇತ್ತು .ಈಗ ಅದನ್ನು ನೆಲಸಮ ಮಾಡಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡುವರೆಂದು ಕೇಳಿರುವೆನು .
ಹಿಂದಿನ ದಾಸ್ ಪ್ರಕಾಶ್ ಹೋಟೆಲ್ .
ನಾನು ವರ್ಗವಾಗಿ ಹೊಸ ಊರಿಗೆ ಹೋದಾಗ ಮೊದಲು ಹುಡುಕುವುದು ಸಾರ್ವಜನಿಕ ಲೈಬ್ರರಿ .ನಾನು ನಮ್ಮ ಹುಟ್ಟ್ಟೂರು ಕನ್ಯಾನ ಗ್ರಾಮದ ಪಂಚಾಯತ್ ಲೈಬ್ರರಿ ಯಿಂದ ಮೊದಲು ಗೊಂಡು ,ಪುತ್ತೂರು ಕೇಂದ್ರ್ರ ಗ್ರಂಥಾಲಲಯ ,ಮೈಸೂರು ,ಹಾಸನ ,ಸಕಲೇಶಪುರ ,ಮಂಗಳೂರು , ಬೆಂಗಳೂರು ಸೌತ್ ಎಂಡ್,ಹುಬ್ಬಳ್ಳಿ ,ಚೆನ್ನೈ ಜಿಲ್ಲಾ ಗ್ರಂಥಾಲಯ ,ಚೆನ್ನೈ ಕೊನ್ನೆಮರಾ ರಾಷ್ಟ್ರೀಯ ಲೈಬ್ರರಿ ,ಪಾಲಕ್ಕಾಡ್ ,ಕೊಜ್ಹಿಕೋಡ್ ನಗರ ಗ್ರಂಥಾಲಯ ಇವುಗಳ ಸದಸ್ಯ ಆಗಿ ನನ್ನ ಜ್ಞಾನ ಭಂಡಾರ ಹೆಚ್ಚಿಸಿ ಕೊಂಡು ದಲ್ಲದೆ ಮನಸ್ಶಾಂತಿ ಪಡೆದಿದ್ದೇನೆ .
ಅಯ್ಯನಾವರಂ ಕನ್ನಡ ಸಂಘ ದವರು ಶಾಲೆ ಮತ್ತು ಗ್ರಂಥಾಲಯಯ ನಡೆಸುತ್ತಿದ್ದರು ನಾನು ಸಂಘದ ಸದಸ್ಯತ್ವ ಪಡೆದು ಈ ಸವಲತ್ತು ಬಳಸಿಕೊಂಡೆನು .
ಈ ಸಂಘವು ನಮ್ಮ ಆಸ್ಫತ್ರೆಯ ಸನಿಹದಲ್ಲಿ ಇತ್ತು .ಮುಖ್ಯ ರಸ್ತೆಯ ಒಂದು ಕಡೆ ಆಸ್ಪತ್ರೆ ,ಇನ್ನೊಂದು ಕಡೆ ಯುನೈಟೆಡ್ ಇಂಡಿಯಾ ನಗರ ಎಂಬಲ್ಲಿ ಕನ್ನಡ ಸಂಘ .,ಪಕ್ಕದಲ್ಲಿಯೇ ಅಯ್ಯನವರಂ ತರಕಾರಿ ಸಂತೆ .ಸಂಘ ದಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದರು .ಪುಳಿಯೋಗರೆ ,ಬಿಸಿ ಬೆಲೆ ಬಾತ್ ಮತ್ತು ಮೊಸರನ್ನ್ನ ಖಾಯಂ ಖಾದ್ಯಗಳು .ರುಚಿಕಟ್ಟು ,ಅಚ್ಚುಕಟ್ಟು .ಕನ್ನಡ ಸಂಘದವರು ಕರ್ನಾಟಕಕ ಮಂತ್ರಿಗಳು ,ಸಾಹಿತಿಗಳ ಚೆನ್ನೈ ಆಗಮನದ ಮೇಲೆ ಹದ್ದಿನ ಕಣ್ಣು ಇತ್ತು ಸಂಘಕ್ಕೆ ತಪ್ಪದೆ ಆಹ್ವಾನಿಸುವರು .ಆಗಲೂ ಒಂದು ಕೂಟ ಇರುವುದು .ನಾನು ಇದ್ದಾಗ ಮಂತ್ರಿಗಳಾದ ಎಸ ಎಂ ಯಾಹ್ಯಾ , ಎಚ್ ವಿಶ್ವನಾಥ್ ಬಂದಿದ್ದರು .ಎಚ್ ವಿಶ್ವನಾಥ್ ಸುಶ್ರಾವ್ಯ ವಾಗಿ ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿ ರಂಜಿಸಿದರು . ದಕ್ಷಿಣ ಚೆನ್ನೈ ನ ಟಿ ನಗರದಲ್ಲಿ ಒಂದು ದೊಡ್ಡ ಮತ್ತು ಶ್ರೀಮಂತ ಎನ್ನ ಬಹುದಾದ ಕನ್ನಡ ಸಂಘ ಇದೆ .ಅದಕ್ಕೆ ತನ್ನದೇ ಆದ ಶಾಲೆ ಮತ್ತು ಸಭಾಭವನ ಇದೆ ,ಬಂಧು ಡಾ ಶ್ರೀಕೃಷ್ಣ ಭಟ್ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸ್ಸರ್ ಆಗಿದ್ದವರು ಈ ಸಂಘದ ಪದಾಧಿಕಾರಿ ಆಗಿದ್ದರಿಂದ ಅಲ್ಲಿನ ಕಾರ್ಯಕ್ರಮಗಳಿಗೂ ಅಹ್ವಾನ ಇರುತ್ತಿತ್ತು .ಒಂದು ಭಾರಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಂ ಎಸ ಸುಬ್ಬಲಕ್ಷ್ಮಿ ಮುಖ್ಯ ಅಥಿತಿಗಳಾಗಿದ್ದರು ,ಇನ್ನೊಮ್ಮೆ ಪ್ರಸಿದ್ಧ ನಟಿ ಲಕ್ಷ್ಮಿ ಅವರು . ಈ ಕಲಾವಿದೆ ಚೆನ್ನಾಗಿ ಅರಳು ಹುರಿದಂತೆ ಕನ್ನಡ ಮಾತನಾಡುವುದು ಕಂಡು ದಂಗಾದೆ .
ಸಾಹಿತ್ಯದ ನಂತರ ನನ್ನ ಹುಡುಕಾಟ ಸಂಗೀತ .ಚೆನ್ನೈ ಕರ್ನಾಟಿಕ್ ಸಂಗೀತ ಕಾಶಿ .ಇಲ್ಲಿ ಹತ್ತಾರು ಸಭಾಗಳು ಇವೆ .ದಶಂಬರ್ ಜನವರಿ ಯಲ್ಲಿ ಮಾರ್ಗಳಿ ಸಂಗೀತೋತ್ಸವ ಹಬ್ಬವೇ .ನೂರಾರು ಸಭಾ ಗಳು ,ಸಾವಿರಾರು ಕಲಾವಿದರು .ದೇಶ ವಿದೇಶಗಳಿಂದ ರಸಿಕರು ಚೆನ್ನೈ ಗೆ ಇದಕ್ಕಾಗಿಯೇ ಬರುವರು .ಸುಂದರ ಸಾಲಂಕೃತ ಸಭಾ ಭವನಗಳು .ಆದರೆ ಬಹುತೇಕ ಎಲ್ಲಾ ದಕ್ಷಿಣ ಚೆನ್ನೈ ನಲ್ಲಿ ಇದ್ದವು .ನಾವು ಇದ್ದ ಸ್ಥಳ ಕ್ಕೆ ದೂರ .ವಿಚಾರಿದರೆ ಪೆರಂಬೂರಿನಲ್ಲಿ ಒಂದು ಸಭಾ ಇದೆ ,ಪೆರಂಬೂರ್ ಸಂಗೀತ ಸಭಾ ಎಂದು ಹೆಸರು ..ಪೆರಂಬೂರಿಗೆ ಅಕ್ಕಿ ಬೇಳೆ ಕೊಳ್ಳಲು ಹೋಗಿದ್ದಾಗ ಶಾಂತಿ ಕಾಫಿ ವರ್ಕ್ಸ್ ಎಂಬ ಅಂಗಡಿ ಎದುರು ಈ ಸಭಾ ಕಾರ್ಯಕ್ರಮ ದ ಫಲಕ ಕಂಡು ವಿಚಾರಿಸಲು ಅವರೇ ಅದರ ಕಾರ್ಯದರ್ಶಿ ಎಂದು ತಿಳಿದು ಸದಸ್ಯ ನಾದೆ .ಇದು ಆರ್ಥಿಕ ವಾಗಿ ಶ್ರೀಮಂತ ಸಭಾ ಆಗಿರಲಿಲ್ಲ .ಒಂದು ಸರಕಾರಿ ಶಾಲೆಯಲ್ಲಿ ಕಚೇರಿ ನಡುಸುತ್ತಿದ್ದರು .ಕುಳಿತು ಕೊಳ್ಳಲು ಶಾಲಾ ಬೆಂಚ್ .ಆದರೂ ದೊಡ್ಡ ಕಲಾವಿದರ ಕಚೇರಿ ಕೇಳಿದ್ದೇವೆ. ಬಡ ಸಭಾ ಎಂದು ಯಾವ ಕಲಾವಿದರೂ ಕಡೆಗಣಿಸದೆ ಉತ್ತಮೋತ್ತಮ ಕಾರ್ಯಕ್ರಮ ಕೊಡೊತ್ತಿದ್ದುದು ಗಮನಾರ್ಹ .
ಈ ಕಾರ್ಯಕ್ರಮಗಳಿಗೆ ಬೈಕ್ ನಲ್ಲಿ ತ್ರಿಬ್ಬಲ್ ರೈಡ್ ಹೋಗುವುದು .ಇಲ್ಲವಾದರೆ ಬಸ್ .
ನಾವು
ಸ್ಥಳೀಯ ಭಾಷೆ ಗೊತ್ತಿರದ ದಿದ್ದರೂ ಮುಂಬೈ ,ಹೈದರಾಬಾದ್ ,ಡೆಲ್ಲಿ ,ದುಬಾಯಿನ್ಯೂಯೋರ್ಕ್
ನಗರಗಳಲ್ಲಿ ಸುಧಾರಿಸ ಬಹುದು .ಚೆನ್ನೈ ಯಲ್ಲಿ ಇದ್ದು ತಮಿಳು ಭಾಷೆ ಗೊತ್ತಿರದಿರಲು ಗತಿ
ಗೋವಿಂದ .ರಿಕ್ಷಾ ಬಸ್ ಮತ್ತು ಅಂಗಡಿಗಳಲ್ಲಿ ಬೇರೆ ಭಾಷೆ ಅರಿಯರು .ನಲ್ಲಿ ,ಕುಮಾರನ್
ಅಂತಹ ಪ್ರಸಿದ್ದ ರೇಷ್ಮೆ ಬಟ್ಟೆ ಅಂಗಡಿಗಳಲ್ಲಿ ಮಾತ್ರಾ ಬಹು ಭಾಷಾ ಸೇಲ್ಸ್ ಮ್ಯಾನ್
ಗಳು ಇರುತ್ತಿದ್ದರು .ಅವರು ಗಿರಾಕಿಯ ಮುಖ ನೋಡಿ ಅವರ ಭಾಷೆ ಅರಿತು ಬಲ್ಲವರನ್ನು ನಮ್ಮ
ಸೇವೆಗೆ ಕಳುಹಿಸುವರು .ಶ್ರೀರಂಗಂ ದೇವಸ್ಥಾನ ದಲ್ಲಿಯೂ ಸ್ವಯಂ ಘೋಷಿತ ಅರ್ಚಕರು ಸೇವೆ
ಮಾಡಿಸಲು ಕನ್ನಡಿಗರಿಗೆ ಕನ್ನಡಲ್ಲಿ ದುಂಬಾಲು ಬೀಳುವುದನ್ನು ನೋಡಿದ್ದೇನೆ .ನೀವು
ನಿರಾಕರಿಸಿದರೆ ಅಚ್ಚ ಕನ್ನಡದಲ್ಲಿಯೇ ಶಾಪ ಹಾಕುವರು .
ನಾವು ಮೊದಲು ಇದ್ದ ಕ್ವಾರ್ಟರ್ ಗೆ ಮನೆ ಕೆಲಸಕ್ಕೆ ಬರುತ್ತಿದ್ದವಳು ಬಹು ಭಾಷಾ
ಪ್ರವೀಣೆ .ನನ್ನ ಮನೆಯವರು ಉಪ್ಪು ಹುಳಿ ಅಕ್ಕಿ ಬೇಳೆ ಗಳಿಗೆ ತಮಿಳು ಶಬ್ದ ಅವಳಿಂದ
ಕಳಿತಳು .ಇಂಗು ವಿಗೆ ಅವಳ ತಮಿಳ್ ಶಬ್ದ ಎಲ್ಜಿ ಪೆಂಗಾಯಮ್ ಎಂದು ಆಗಿತ್ತು .ನನ್ನ
ಮನೆಯವರು ಅದೇ ಶಬ್ದ ಉಪಯೋಗಿಸುವರು .ಕೊನೆಗೆ ಒಂದು ದಿನ ತಿಳಿಯಿತು .ಇಂಗುವಿಗೆ
ಪೆಂಗಾಯಮ್ ಎನ್ನುವರು .ಎಲ್ಜಿ ಒಂದು ಕಂಪನಿ ಹೆಸರು ಎಂದು .ಕ್ರಮೇಣ ಅಕ್ಕಿ ಅರಸಿ ಆಯಿತು
,ಸಾಸಿವೆ ಕಡುಗು ,ಶುಂಠಿ ಇಂಜಿ ,ಟೊಮೇಟೊ ತಕಾಲಿ ಆಗಿ ಪರಿವರ್ತನೆ ಗೊಂಡವು
ನಾನು
ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ತಮಿಳು ಮಾತನಾಡಲು ಸಹ ವೈದ್ಯರು .ನರ್ಸ್ ಗಳು ಸಹಾಯ
ಮಾಡಿದರು .ನೋವು ಕಾಯಿಲೆಗೆ ನೋಯಿ ,ಶರೀರ ಒಡಂಬು ,ಹೃದಯ ಇರುದಯ, ಜ್ವರ ಕಾಚಲ್ ,ದಮ್ಮು
ಕಟ್ಟುವುದು ಮೂಚ್ ವಾಂಗುದು,ಕಫ ಸಳಿ ,ಸೊಂಟ ನೋವು ಇಡುಪ್ಪು ವಲಿ ,ಶ್ವಾಶ ಕೋಶ
ನೊರೆಯಿಲ್ ಇಂಜೆಕ್ಷನ್ ಊಸಿ ಇತ್ಯಾದಿ ಶಬ್ದ ಕೋಶಗಳು ಬೆಳೆದವು .ನನ್ನ ಸಹೋದ್ಯೋಗಿ
ಕನ್ನಡಿಗ ವೈದ್ಯರು ಒಮ್ಮೆ ಒಬ್ಬ ರೋಗಿಯನ್ನು ಪರೀಕ್ಷೆ ಮಾಡಿ ಮೂಳೆ ತಜ್ಞರಿಗೆ ತೋರಿಸ
ಬೇಕು ಎಂದು ತಮ್ಮದೇ ತಮಿಳ್ ನಲ್ಲಿ ಉಂಗಳುಕ್ ಮೂಳೆ ನೋಯಿ ಇರುಕ್ಕು .ಮೂಳೆ
ಡಾಕ್ಟರುಕ್ಕು ಕಾಮಿಕುಕ್ಕೊಂಗೋ ಎಂದಾಗ ರೋಗಿ ಕಕ್ಕಾ ಬಿಕ್ಕಿ .ತಮಿಳಿನಲ್ಲಿ ಮೂಳೆ
ಎಂದರೆ ಮೆದುಳು ! ರೌಂಡ್ಸ್ ನಲ್ಲಿ ರೋಗಿಗಳೊಡನೆ ತಮಿಳು ಭಾಷೆಯಲ್ಲಿ ಮಾತನಾಡಲು ಮೋಡ
ಮೊದಲು ಕಷ್ಟವಾಗಿ ಉಸಿರು ಕಟ್ಟಿದಂತೆ ಆಗುತ್ತಿತ್ತು .ಆಗೊಮ್ಮೆ ಈಗೊಮ್ಮೆ ಕನ್ನಡ ಬಲ್ಲ
ರೋಗಿಗಳು ಸಿಕ್ಕಾಗ ಮುಖವರಳಿ ಉಸಿರು ನಿರಾಳ ಆಗಿತ್ತಿತ್ತು .
ಚೆನ್ನೈ
ಗೆ ಬರುವ ಮೊದಲೇ ಮಂಗಳೂರಿನಲ್ಲಿ ಒಂದು ಕಲರ್ ಟಿವಿ ಕಂತಿನಲ್ಲಿ ಕೊಂಡಿದ್ದೆ .ಅಲ್ಲಿ
ಡೆಲ್ಲಿ ಕಾರ್ಯಕ್ರಮ ಗಳು ಮಾತ್ರ ಮಂಗಳೂರಿನಿಂದ ರಿಲೇ ಆಗುತ್ತಿದ್ದವು .ಶುಕ್ರವಾರ
ರಾತ್ರಿ ಚೆನ್ನೈ ಕೇಂದ್ರದ ಚಿತ್ರ ಗೀತೆಗಳ ಕಾರ್ಯಕ್ರಮ ಒಲಿಯುಮ್ ಒಲಿಯುಮ್ ಮರು ಪ್ರಸಾರ
ಮಾಡುತ್ತಿದ್ದರು .ಅದರಲ್ಲಿ ತಮಿಳು ಚಿತ್ರ ಗೀತೆಗಳ ಕೊನೆಗೆ ದೃಷ್ಟಿ ತಾಗದಂತೆ ಒಂದು
ಕನ್ನಡ ಚಿತ್ರಗೀತೆಯೂ ಇರುತ್ತಿತ್ತು ..ಆ ಕಾಲದಲ್ಲಿ ತಪ್ಪದೇ ನೋಡುತ್ತಿದ್ದ
ಕಾರ್ಯಕ್ರಮ ರಾಮಾಯಾಣ ,ಸುರಭಿ ಮತ್ತು ಕೆಲವೊಮ್ಮೆ ಹಿಂದಿ ಸಿಕ್ಕಿದರೆ ಕನ್ನಡ ಚಲನ
ಚಿತ್ರಗಳು .ಕ್ರಿಕೆಟ್ ಇದ್ದೆ ಇತ್ತು ಅನ್ನಿ .
ಚೆನ್ನೈ
ದೂರದರ್ಶನದಲ್ಲಿ ಆಗಲೇ ಮೂರು ಪ್ರಸಾರ ಕೇಂದ್ರಗಳು ಇದ್ದವು .ಮನೆಯ ಮೇಲೆ ಆಂಟೆನಾ
ನಿಲ್ಲಿಸುವ ಕಲೆ ಕರಾಗಗತ ಆಗಿತ್ತು .ಚೆನ್ನೈ ನಲ್ಲಿ ಮೂರು ಕೇಂದ್ರಗಳು ಇದ್ದುದರಿಂದ
ಎಕ್ಸ್ಟ್ರಾ ಕಡ್ಡಿಗಳು ಬೇರೆ ದಿಕ್ಕಿಗೆ ಬೇಕಿತ್ತು .ತಮಿಳರು ಸಿನೆಮಾ ಪ್ರಿಯರು .ಅಲ್ಲಿ
ರಜನಿಕಾಂತ್ ಕಮಲಹಾಸನ್ ಚಿತ್ರಗಳಿಗೆ ಕೊನೆಯ ದಿನವೂ ಬ್ಲಾಕ್ ಮಾರ್ಕೆಟ್ ನಡೆಯುವುದು
.ಎಂತಾ ಕಾರ್ಯಕ್ರಮ ಇರಲಿ -ಹುಟ್ಟು ಹಬ್ಬದಿಂದ ವೈಕುಂಠ ಸಮಾರಾಧನೆ - ಮೈಕಾಸುರನು ತಮಿಳು
ಸಿನೆಮಾ ಹಾಡುಗಳನ್ನು ಹಾಡುತ್ತಿರುವನು .ಶುಕ್ರವಾರ ಸಂಜೆ ನಾನು ಆಸ್ಪತ್ರೆಯಿಂದ ಮನೆಗೆ
ಮರಳುವ ಸಮಯ ಒಲಿಯುಮ್ ಒಲಿಯುಮ್ ಸಮಯ .ಎಲ್ಲಾ ಮನೆಯ ಟಿ ವಿ ಗಳೂ ಒಕ್ಕೊರಲಿನಿಂದ ಕೋರಸ್
ನಂತೆ ಹಾಡುವುದು ಕೇಳಿ ರೋಮಾಂಚನ ಆಗುತ್ತಿತ್ತು .ಆಗಿನ ಜನಪ್ರಿಯ ತಮಿಳ್ ಹಾಡುಗಳು
ರಕ್ಕಮ್ಮಾ ಕೈಯ್ಯ ತಟ್ಟು .ಪಾಂಡಿಯನಾ ಕೊಕ್ಕ ಕೊಕ್ಕ , ಚಿನ್ನ ಚಿನ್ನ ಅಸೆ .ರುಕ್ಮಣೀ
ರುಕ್ಕ್ಕುಮಣಿ ,ಉಸಿಲಂಪಟ್ಟಿ ಪೆಂಕುಟ್ಟಿ ಇತ್ಯಾದಿ .. ಈ ಹೊತ್ತಿನಲ್ಲಿ ಎಲ್ಲರೂ ಟಿ ವಿ ಯ
ಮುಂದೆಯೇ ಇರುವರು . ಡಿ ಡಿ ೩ ರಲ್ಲಿ ಶುಕ್ರವಾರ ಏನ್ ಡಿ ಟಿ ವಿ ಯವರು ನಡೆಸಿ
ಕೊಡುತ್ತಿದ್ದ ವರ್ಲ್ಡ್ ದಿಸ್ ವೀಕ್ ತಪ್ಪದೆ ನೋಡುತ್ತಿದ್ದೆವು .ಅದರಲ್ಲಿ ಅಪ್ಪನ್
ಮೆನನ್ ಎಂಬ ಒಳ್ಳೆಯ ಆಂಕರ್ ಇದ್ದರು .ಕ್ರಿಕೆಟ್ ಮತ್ತು ಟೆನಿಸ್ ಆಟ ಕುಟುಂಬದವರೆಲ್ಲಾ
ಸೇರಿ ನೋಡುವೆವು . ತಮಿಳ್ ಹಬ್ಬಗಳಂದು ಪಟ್ಟಿ ಮಂನ್ರಮ್ ಎಂಬ ಒಳ್ಳೆಯ ಕಾರ್ಯಕ್ರಮ ಇದ್ದೆ
ಇರುತ್ತಿತ್ತು .ಯಾವುದಾದರೂ ಒಂದು ವಿಷಯ ತೆಗೆದುಕೊಂಡು ಪರ ಮತ್ತು ವಿರುದ್ಧ ತಂಡಗಳಾಗಿ
ಮಾತನಾಡುವರು .ಒಬ್ಬರು ಮಾಡರೇಟರ್ .ಸೊಲೊಮನ್ ಪಾಪಯ್ಯ ಎಂಬ ಪ್ರೊಫೆಸ್ಸರ್ ಜನಪ್ರಿಯ
ಅಧ್ಯಕ್ಷರು .ಮುಂದೆ ಕನ್ನಡದಲ್ಲಿಯೂ ಹಿರೇಮಗಳೂರ್ ಕಣ್ಣನ್ ಮುಂತಾದವರು ಇಂತಹ ಕಾರ್ಯಕ್ರಮ
ಮಾಡುವುದು
ಚೆನ್ನೈ ನಲ್ಲಿ ನಾವು ನೋಡಿದ ಮೊದಲ ಸಿನೆಮಾ ರೋಜಾ .ಪುರುಷ್ವಕಾಮ್ ನ ಅಭಿರಾಮಿ ಚಿತ್ರ
ಮಂದಿರ ..ಪರಿಚಯದವರು ಟಿಕೆಟ್ ಕೊಡಿಸಿದ್ದರು .ಒಳ್ಳೆಯ ಸೌಂಡು ಸಿಸ್ಟಮ್ ಇರುವ ಟಾಕೀಸ್ ನ
ಅನುಭವ ಆಯಿತು .ನಮ್ಮ ಬೆನ್ನ ಹಿಂದಿನಿಂದಲೇ ಗುಂಡು ಹಾರಾಟದ ಶಬ್ದ ,ಮಾತುಗಳು ,ಹಾಡುಗಳು
ಬರುತ್ತಿದ್ದಂತೆ ಭಾಸವಾಗುತ್ತಿತ್ತು .ಈಗ ಈ ಥೀಯೇಟರ್ ಶಾಪಿಂಗ್ ಮಾಲ್ ಆಗಿದೆ .ಮುಂದೆ
ಜೆಂಟಲ್ಮ್ಯಾನ್ ,ಭಾಷಾ ,ಸತಿ ಲೀಲಾವತಿ ಚಿತ್ರ ನೋಡಿ ಸಂತೋಷ ಪಟ್ಟೆವು .ಮಗನಿಗೆ ಈ
ಚಿತ್ರಗಳ ಕ್ಯಾಸೆಟ್ ತರಿಸಿ ಹಾಡಿಗೆ ಡಾನ್ಸ್ ಮಾಡುವುದು ಇಷ್ಟದ ಟೈಮ್ ಪಾಸ್ ಆಯಿತು .
ಚೆನ್ನೈ ಯಲ್ಲಿ ನಾಟಕಗಳೂ ಜನಪ್ರಿಯ .ಚೋ ರಾಮ ಸ್ವಾಮಿ ,ವೈ ಜಿ ಮಹೇಂದ್ರ ಮತ್ತು ಎಸ
ವಿ ಶೇಖರ್ ಅವರ ನಾಟಕಗಳನ್ನು ಇಷ್ಟ ಪಡುತ್ತಿದ್ದರು .ಎಸ ವಿ ಶೇಖರ್ ಅವರ ಒಂದು ನಾಟಕ
ನೋಡಿದ ನೆನಪು .ಆಗ ಜಯಲಲಿತಾ ಮುಖ್ಯ ಮಂತ್ರಿ .ಚನ್ನಾ ರೆಡ್ಡಿ ರಾಜ್ಯಪಾಲ .ಅವರಿಬ್ಬರಿಗೂ
ಎಣ್ಣೆ ಸೀಗೆ ..ಆ ನಾಟಕದಲ್ಲಿ ಅಡಿಗೆಯವನನ್ನು ಸೂತ್ರಧಾರಿ ಇಂದು ಟಿಫನ್ ಗೆ ಏನು ಎಂದು
ಕೇಳಿದ್ದಕ್ಕೆ ಪೂರಿ (ತಮಿಳಿನ ಭೂರಿ) ಚನ್ನಾ ಎಂದು ಉತ್ತರ ಬಂತು .ಅದಕ್ಕೆ ಸೂತ್ರಧಾರಿ
(ಸ್ವಯಂ ಎಸ ವಿ ಶೇಖರ್ ) ಅಮ್ಮಾಕು (ಅಮ್ಮ ಜಯಲಲಿತನಿಗೆ )ಚನ್ನಾ ಪುಡಿಕಾದು ತೆರಿಯಾದ
ಎಂದು ಮರು ಪ್ರಶ್ನೆ ಹಾಕಿದಾಗ ನಗೆಯ ಅಲೆ.