ಬೆಂಬಲಿಗರು

ಸೋಮವಾರ, ಮಾರ್ಚ್ 16, 2026

ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು

 ಆಂಗ್ಲ ಭಾಷೆಯಲ್ಲಿ ಮೂರು ಮುಖ್ಯ 'P' ಗಳು Polyuria (ಹೆಚ್ಚು ಮೂತ್ರ ಶಂಕೆ ),Polydipsia (ಅರದ ದಾಹ )Polyphagia (ತಣಿಯದ ಹಸಿವು ) ಮಧು ಮೇಹದ ಮುಖ್ಯ ಲಕ್ಷಗಳು ಎಂದು ವರ್ಣಿಸುತ್ತಾರೆ . 

ಅತೀ ಮೂತ್ರ ಮತ್ತು ದಾಹ ಏಕೆ ?

ಮೂತ್ರ ಪಿಂಡಗಳು ಅನಪೇಕ್ಷಿತ ವಸ್ತುಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವಾಗ ಜತೆಗೆ ಹೋದ  ಗ್ಲುಕೊಸನ್ನು ಪುನಃ  ವಾಪಸು ಹೀರಿಕೊಳ್ಳುತ್ತವೆ . ಆದರೆ ಇದಕ್ಕೆ ಒಂದು ಪರಿಮಿತಿ ಇದೆ . ರಕ್ತದ ಗ್ಲುಕೊಸ ಪ್ರಮಾಣ 180 mg /dl  ಗಿಂತ ಜಾಸ್ತಿ ಇದ್ದರೆ ಅದು ಮೂತ್ರದಲ್ಲಿ ವಿಸರ್ಜನೆ ಆಗಿ ಹೋಗುತ್ತದೆ . ಸರ್ಪದಲ್ಲಿ ಯಾಗ ದಲ್ಲಿ  ತಕ್ಷಕನ ಜತೆ ಇಂದ್ರನು ಬಂದಂತೆ glucose ಜತೆ ನೀರೂ ಹೋಗುತ್ತದೆ . ಇದರಿಂದ ಉಂಟಾದ ನಿರ್ಜಲತೆ ಮತ್ತು ರಕ್ತದಲ್ಲಿ ಏರಿದ ಸಕ್ಕರೆ ಪ್ರಮಾಣ  ಇವೆರಡು ಸೇರಿ ರಕ್ತದ ಸಾಂದ್ರತೆ ಯನ್ನು ಏರಿಸುತ್ತವೆ . ನಮ್ಮ ಮೇದುಳಿನಲ್ಲಿ ದಾಹದ ಕೇಂದ್ರ ಎಂದು ಇದೆ . ರಕ್ತದ  ಸಾಂದ್ರತೆ ಏರಿದೊಡನೆ ಅದು ನೀರು ಕುಡಿಯಲು ಪ್ರೇರೇಪಿಸುತ್ತದೆ . ಅದೇ ಬಾಯಾರಿಕೆ . 

ತಣಿಯದ ಹಸಿವು 

ಕವಿಯೊಬ್ಬ ಸಮುದ್ರದ ನಡುವೆ  "water water everywhere nor any drop to drink' ಎಂದು ಹೇಳಿದಂತೆ ಮಧುಮೇಹ ದಲ್ಲಿ ಇನ್ಸುಲಿನ್ ಕೊರತೆ ಮತ್ತು ಪ್ರತಿರೋಧ ದಿಂದ ರಕ್ತದಲ್ಲಿ ಯಥೇಚ್ಛ ಸಕ್ಕರೆ ಇದ್ದರೂ ಜೀವಕೋಶ ಗಳಿಗೆ ಪ್ರವೇಶ  ಇಲ್ಲದ ಕಾರಣ ,ಮೇದುಳಿನಲ್ಲಿ ಇರುವ ಹಸಿವಿನ ಕೇಂದ್ರ ನಮ್ಮನ್ನು ಹೆಚ್ಚು ಹೆಚ್ಚು  ಆಹಾರ ಸೇವಿಸಲು ಪ್ರೇರೇಪಿಸುವುದು .

ಇವಲ್ಲದೆ ಇನ್ನೂ ಕೆಲವು ರೋಗ ಲಕ್ಷಣಗಳು ಇವೆ . 

ಶರೀರ ಬಚ್ಚುವುದು ಅಥವಾ ತೂಕ ಇಳಿಕೆ . 

ಜೀವಕೋಶಗಳಿಗೆ ಗ್ಲುಕೊಸ  ಸರಬರಾಜು ಆಗದ ಕಾರಣ ಶಕ್ತಿಯ ಉರುವಲು ಆಗಿ ಅನ್ಯ ಮಾರ್ಗಗಳನ್ನು ಹುಡುಕ ಬೇಕಾಗುತ್ತದೆ .(ಈಗಿನ ಎಲ್ ಪಿ ಜಿ ಸಮಸ್ಯೆ ಯಂತೆ ). ಅದಕ್ಕಾಗಿ ಶರೀರ  ಶೇಖರಿತ ಕೊಬ್ಬು ಮತ್ತು ಮಾಂಸ ಖಂಡಗಳನ್ನು ಜೀರ್ಣಿಸಿ ಶಕ್ತಿ ಉತ್ಪಾದನೆಗೆ ಪ್ರಯತ್ನಿಸುವುದು . ಇದರಿಂದ ಮತ್ತು ಮೇಲೆ ವಿವರಿಸಿದ ನಿರ್ಜಲತೆ ಯೂ ಸೇರಿ ಶರೀರ ಬಡವಾಗುವುದು . 

ಜನನಾಂಗಗಳ ಫಂಗಸ್ ಸೋಂಕು , ಗುಣವಾಗದ ಗಾಯಗಳು (ರೋಗ ನಿರೋಧಕ ಶಕ್ತಿ ಕುಂದುವಿಕೆ ಯಿಂದ )ದೃಷ್ಟಿ ಮಂಜು ಕೂಡಾ ಮಧು ಮೇಹದ ಆರಂಭ ಸೂಚನೆ ಇರ ಬಹುದು .

 

ಶುಕ್ರವಾರ, ಮಾರ್ಚ್ 13, 2026

ಶಕ್ತಿ ಚಕ್ರ

 ಶಕ್ತಿಯ ಮೂಲ ಸೂರ್ಯ . ಅವನ  ಕಿರಣಗಳ ಮೂಲಕ ಶಕ್ತಿ  ಸಸ್ಯ ರಾಶಿಯ ಮೇಲೆ ಬಿದ್ದು ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯುವುದು .ಈ  ಮೂಲಕ ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಸೇರಿಸಿ ಶಕ್ತಿ ಸಂಚಯಿತ ಪಿಷ್ಟ ಅಥವಾ ಕಾರ್ಬೋ ಹೈಡ್ರೇಟು ಉತ್ಪಾದನೆ . 

ನಮ್ಮ ಆಹಾರದಲ್ಲಿ ಸೇವನೆ ಆದ ಪಿಷ್ಟ ಕರುಳಿನಲ್ಲಿ ಪಚನ ಗೊಂಡು ಗ್ಲುಕೋಸ್ ಆಗಿ ಮಾರ್ಪಟ್ಟು ರಕ್ತ ಸೇರುವುದು . ಗ್ಲುಕೋಸ್ ಜೀವಕೋಶಗಳ ಪ್ರವೇಶ ಮಾಡಲು ಬೀಗ ತೆಗೆದು  ಅನುವು ಮಾಡಿ ಕೊಡುವುದು ಇನ್ಸುಲಿನ್ . ಶರೀರದ ನಖ ಶಿಖಾಂತ ಜೀವ ಶ್ವಾಸ ಮೂಲಕ ಸರಬರಾಜಾದ ಆಮ್ಲಜಕವನ್ನು ಉರುವಲಾಗಲಿ ಉಪಯೋಗಿಸಿ  ಕೋಶಗಳಲ್ಲಿ ರಾಸಾಯನಿಕ ಕ್ರಿಯೆ ಮೂಲಕ ಗ್ಲುಕೋಸ್ ಒಡೆಯಲ್ಪಟ್ಟು ಕಾರ್ಬನ್ ಡೈಆಕ್ಸೈಡ್ ,ನೀರು ಮತ್ತು ಶಕ್ತಿ ಬಿಡುಗಡೆ ಆಗುವುದು . ಕಾರ್ಬನ್ ಡೈಆಕ್ಸೈಡ್ ಉಸಿರಿನ ಮೂಲಕ ,ನೀರು ಮೂತ್ರ ಮತ್ತು ಉಸಿರಿನ ಮೂಲಕ ಹೊರ ಹಾಕಲ್ಪಟ್ಟರೆ ಶಕ್ತಿ ಅಂಗೋಪಾಂಗಗಳ ಕಾರ್ಯ ನಿರ್ವಹಣೆಗೆ ವ್ಯಯ ಆಗುವುದು .

ಇದು ಶಕ್ತಿಯ ಚಕ್ರ  

 PHOTOSYNTHESIS | Photosynthesis process ...

 Cellular Respiration | PPT

ಇನ್ಸುಲಿನ್ ಮತ್ತು ಗ್ಲುಕಾಗನ್: ದೇಹದ ಶಕ್ತಿಯ ಸಮತೋಲನದ ರಕ್ಷಕರು

ಪರಿಚಯ

ನಮ್ಮ ದೇಹದಲ್ಲಿ ಶಕ್ತಿಯ ಮೂಲವಾದ ಗ್ಲೂಕೋಸ್ ಅನ್ನು ನಿಯಂತ್ರಿಸುವಲ್ಲಿ ಎರಡು ಪ್ರಮುಖ ಹಾರ್ಮೋನ್‌ಗಳು — ಇನ್ಸುಲಿನ್ ಮತ್ತು ಗ್ಲುಕಾಗನ್ — ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಇವು ಎರಡೂ ಮೇದೋಜೀರಕ ಗ್ರಂಥಿ (Pancreas) ಯಿಂದ ಉತ್ಪತ್ತಿಯಾಗುತ್ತವೆ ಮತ್ತು ಪರಸ್ಪರ ವಿರುದ್ಧ ಕಾರ್ಯನಿರ್ವಹಿಸುತ್ತವೆ.


ಇನ್ಸುಲಿನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಬೀಟಾ ಕೋಶಗಳು (Beta cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ಅದನ್ನು ಕಡಿಮೆ ಮಾಡುವುದು

    • ಗ್ಲೂಕೋಸ್ ಅನ್ನು ಕೋಶಗಳೊಳಗೆ ಸೇರಿಸಿ ಶಕ್ತಿಯಾಗಿ ಬಳಸಲು ಸಹಾಯ ಮಾಡುವುದು

    • ಹೆಚ್ಚುವರಿ ಗ್ಲೂಕೋಸ್ ಅನ್ನು ಗ್ಲೈಕೋಜನ್ ರೂಪದಲ್ಲಿ ಯಕೃತ್ (Liver) ಮತ್ತು ಸ್ನಾಯುಗಳಲ್ಲಿ ಸಂಗ್ರಹಿಸುವುದು

  • ಮಹತ್ವ: ಇನ್ಸುಲಿನ್ ಇಲ್ಲದೆ ದೇಹದ ಕೋಶಗಳು ಗ್ಲೂಕೋಸ್ ಅನ್ನು ಬಳಸಲು ಸಾಧ್ಯವಿಲ್ಲ. ಇದರಿಂದ ಡಯಾಬಿಟಿಸ್ ಮೆಲ್ಲಿಟಸ್ ಎಂಬ ರೋಗ ಉಂಟಾಗುತ್ತದೆ.


ಗ್ಲುಕಾಗನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಆಲ್ಫಾ ಕೋಶಗಳು (Alpha cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾದಾಗ ಅದನ್ನು ಹೆಚ್ಚಿಸುವುದು

    • ಯಕೃತ್‌ನಲ್ಲಿ ಸಂಗ್ರಹವಾಗಿರುವ ಗ್ಲೈಕೋಜನ್ ಅನ್ನು ಪುನಃ ಗ್ಲೂಕೋಸ್ ಆಗಿ ವಿಭಜಿಸಿ ರಕ್ತಕ್ಕೆ ಬಿಡುಗಡೆ ಮಾಡುವುದು

    • ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವುದು, ವಿಶೇಷವಾಗಿ ಉಪವಾಸದ ಸಮಯದಲ್ಲಿ

  • ಮಹತ್ವ: ಗ್ಲುಕಾಗನ್ ಇಲ್ಲದೆ ದೇಹವು ಉಪವಾಸ ಅಥವಾ ಹಸಿವಿನ ಸಮಯದಲ್ಲಿ ಶಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.


ಇನ್ಸುಲಿನ್ ಮತ್ತು ಗ್ಲುಕಾಗನ್ ನಡುವಿನ ಸಮತೋಲನ

  • ಇನ್ಸುಲಿನ್: ಗ್ಲೂಕೋಸ್ ಕಡಿಮೆ ಮಾಡುವುದು

  • ಗ್ಲುಕಾಗನ್: ಗ್ಲೂಕೋಸ್ ಹೆಚ್ಚಿಸುವುದು

  • ಇವು ಎರಡೂ ಸೇರಿ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿ ಇಡುತ್ತವೆ.

  • ಈ ಸಮತೋಲನವೇ ದೇಹದ ಶಕ್ತಿಯ ನಿರ್ವಹಣೆಗೆ ಅತ್ಯಂತ ಅಗತ್ಯ.


ಸಮಾರೋಪ ನೈಜ ಪ್ರಜಾಪ್ರಭತ್ವ ದಲ್ಲಿ ಚೆಕ್ಸ್ ಅಂಡ್ ಬ್ಯಾಲೆನ್ಸ್ ಆಗಿ ನ್ಯಾಯಾಂಗ ,ಪತ್ರಿಕೆಗಳು ವಿರೋಧ ಪಕ್ಷಗಳು ಇರುವಂತೆ ಇನ್ಸುಲಿನ್ ಗೆ ಗ್ಲುಕಾಗನ್ .

ಇನ್ಸುಲಿನ್ ಮತ್ತು ಗ್ಲುಕಾಗನ್ — ಇವು ದೇಹದ ಶಕ್ತಿಯ ರಕ್ಷಕರು. ಇನ್ಸುಲಿನ್ ಗ್ಲೂಕೋಸ್ ಅನ್ನು ಕಡಿಮೆ ಮಾಡಿ ಸಂಗ್ರಹಿಸುತ್ತದೆ, ಗ್ಲುಕಾಗನ್ ಅದನ್ನು ಹೆಚ್ಚಿಸಿ ಬಿಡುಗಡೆ ಮಾಡುತ್ತದೆ. ಇವುಗಳ ಸಮತೋಲನವೇ ಆರೋಗ್ಯಕರ ಜೀವನಕ್ಕೆ ಮೂಲಭೂತ ಅಂಶ.



ಶುಕ್ರವಾರ, ಫೆಬ್ರವರಿ 20, 2026

ಹಿರಿಯರಲ್ಲಿ ಬೀಳುವಿಕೆ ಮತ್ತು ಮೂಳೆ ಮುರಿತ

Our aim should be not only adding years to life but also adding life to years

  

೬೦ ವರ್ಷ ಮೇಲ್ಪಟ್ಟವರ ಪೈಕಿ  ೩೦% ಮಂದಿ ಬೀಳುತ್ತಾರೆ ,ಮತ್ತು ೧೦% ಮಂದಿಗೆ ಮೂಳೆ ಮುರಿತ ಉಂಟಾಗುವುದು . ಹಿರಿಯ ನಾಗರಿಕರಲ್ಲಿ ಇದು  ಗಂಭೀರ ಸಮಸ್ಯೆ . ಒಮ್ಮೆ ಬಿದ್ದವರಿಗೆ ಮತ್ತೆ  ಬಿದ್ದು ಬಿಡುವ ಭಯ ಅಡರಿ ಬಿಟ್ಟು  ಅದೇ ಒಂದು ಕಾಯಿಲೆ ಆಗುತ್ತದೆ .

 ಹಿರಿಯರಲ್ಲಿ ಬೀಳುವಿಕೆಗೆ ಹಲವು ಕಾರಣಗಳು ಇವೆ . ಕೆಲವನ್ನು ಪರಿಶೀಲಿಸುವಾ .

೧ . ಮಾಂಸ ಖಂಡಗಳ ದೌರ್ಬಲ್ಯ . ವಯಸ್ಸು ಆದಂತೆ ಮಾಂಸ ಖಂಡಗಳ  ಶಕ್ತಿ   ಕುಂದುವುದು . ಗಂಡಸರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಹೆಂಗಸರಲ್ಲಿ ಈಸ್ಟ್ರೋಜನ್ ಕಡಿಮೆ ಯಾಗುವುದು ಒಂದು ಕಾರಣ . ಸರಿಯಾದ ವ್ಯಾಯಾಮ ಇಲ್ಲದೆ ಇರುವುದೂ ಒಂದು ಕಾರಣ .ಹಿಂದೆ ನೆಲದಲ್ಲಿ ಕುಳಿತು ಕೊಳ್ಳುವ (ಊಟಕ್ಕೆ ಸೇರಿ)ಪದ್ಧತಿ ಇತ್ತು .ಇದರಿಂದ ಕುಳಿತು ಏಳುವುದು ಸಹಜ ವ್ಯಾಯಾಮ ಆಗುತ್ತಿತ್ತು .ಈಗ ಮಂಚ  .ಕುರ್ಚಿ ಸೋಫಾ  ಇತ್ಯಾದಿ ಬಂದ ಮೇಲೆ ಸೊಂಟ ಮತ್ತು ತೊಡೆಯ ಮಾಂಸ ಖಂಡಗಳು ವ್ಯಾಯಾಮ ಇಲ್ಲದೆ ಬೇಗ ಸೊರಗುತ್ತವೆ . ಬರೀ ನಡೆಯುವಿಕೆ  ಅಥವಾ ವಾಕಿಂಗ್ ಇದಕ್ಕೆ ಸಾಲುವುದಿಲ್ಲ .ಆದುದರಿಂದ ಇದಕ್ಕೆಂದೇ ಕೆಲವು ವ್ಯಾಯಾಮ ಗಳನ್ನು  ರೂಢಿಸಿ ಕೊಳ್ಳಬೇಕಾಗುತ್ತದೆ .(ಉದಾ Tai chi ಯಂತಹ ).ಮಾಂಸ ಖಂಡಗಳ ಆರೋಗ್ಯಕ್ಕೆ ಒಳ್ಳೆಯ ಸಸಾರ ಜನಕ ಯುಕ್ತ ಆಹಾರದ ಪ್ರಾಮುಖ್ಯತೆ ಇದ್ದೇ ಇದೆ .

೨. ಹಿರಿಯರಲ್ಲಿ ಸಮತೋಲ ಮತ್ತು ರಕ್ಷಣಾತ್ಮಕ  ಕ್ರಿಯೆಗಳು ಕುಂಠಿತ ವಾಗಿರುವುದು 

೩ ದೃಷ್ಟಿ  ಮಾಂದ್ಯ 

೪  ನರಗಳ ದೌರ್ಬಲ್ಯದಿಂದ ಕೆಲವರಲ್ಲಿ  ಕುಳಿತು ಕೊಳ್ಳುವಾಗ ಅಥವಾ ನಿಲ್ಲುವಾಗ  ರಕ್ತದ ಒತ್ತಡ ಹಠಾತ್ ಕಡಿಮೆ ಯಾಗಿ ಮೆದುಳಿಗ ಸಾಕಷ್ಟು ರಕ್ತ ಹೋಗದೆ ಬೀಳುವುದೂ ಇದೆ . ಇದನ್ನು postural hypotension  ಎನ್ನುವರು .

೫  ಸಂಧಿ ಸವೆತ .ಮುಖ್ಯವಾಗಿ ಸೊಂಟ ಮತ್ತು ಮೊಣಕಾಲು . 

೬  ನಿದ್ದೆ ಮಾತ್ರೆ ಸೇವನೆಯಿಂದ ಆಗುವ ಅಮಲು ,ಮದ್ಯ ಪಾನ 

೭ ಹೃದಯ ಸಂಬಂದಿ ಕಾಯಿಲೆಗಳು ,ಬಡಿತದ ಏರು ಪೇರು 

೮ ರಕ್ತದಲ್ಲಿ ಸೋಡಿಯಂ ,ಪೊಯಸ್ಸಿಯಂ ಇತ್ಯಾದಿಗಳ ಕೊರತೆ 

೯  ಮೂತ್ರ ಹಿಡಿದು ಕೊಳ್ಳಲು ಆಗದೇ ಇರುವುದರಿಂದ ಶಂಕೆಗೆ ಓಡುವುದು .

೧೦ ಪಾಲಿ ಫಾರ್ಮಸಿ ಅಥವಾ ಹಲ ಔಷಧಿಗಳ ಸೇವನೆ  

ಇತ್ಯಾದಿ ಬೀಳಲು ಕಾರಣಗಳು ಆದರೆ   ಸುಲಭವಾಗಿ  ಮುರಿತ ಉಂಟಾಗಲು ಎಲುಬು ಟೊಳ್ಳಾಗುವುದು ಕಾರಣ .ವಯಸ್ಸು ಆದಂತೆ ಸ್ತ್ರೀಯರಲ್ಲಿ  ಈಸ್ಟ್ರೋಜೆನ್ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಮುಖ್ಯ ಕಾರಣ . ಎಲುಬು ಸಾಂದ್ರತೆಗೆ ಕ್ಯಾಲ್ಸಿಯಂ ಮುಖ್ಯ ಮತ್ತು ಅದು ರಕ್ತ ಮೂಲಕ ಮೂಳೆ  ಸೇರಲು ವಿಟಮಿನ್ ಡಿ.ಇವೆರಡರ ಕೊರತೆ ಎಲುಬುಗಳನ್ನು  ಶಕ್ತಿ ಹೀನ ಮಾಡಿದರೆ    ವ್ಯಾಯಾಮದ ಕೊರತೆ ,ಕೆಲವು ಔಷಧಿಗಳು ,ಧೂಮ ಪಾನ ಇತ್ಯಾದಿ ಪೂರಕ ಅಂಶಗಳು .

 

 

 

  

 

ಬುಧವಾರ, ಫೆಬ್ರವರಿ 18, 2026

ಹಿರಿಯರ ಆರೋಗ್ಯ

 ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾನ್ಹವೀ ತೋಯಂ ವೈದ್ಯೋ ನಾರಾಯಣೋ ಹರಿಃ 

ಆ ಗಾಗ ಕೇಳಿ ಬರುವ ಶ್ಲೋಕ .  ರೋಗ ಗ್ರಸ್ತ ವಾಗಿ ಜರ್ಜರಿತ  ಶರೀರ ಜರ್ಜರಿತ ವಾದಾಗ ದೇವರೇ ವೈದ್ಯ ,ಗಂಗಾ ಜಲವೇ ದಿವ್ಯ ಔಷಧ .ಮನುಷ್ಯನಿಗೆ  ವಯಸ್ಸಾದಾಗ ಶರೀರ ಶಿಥಿಲ ವಾಗಿ ರೋಗಗಳು ಹುಡುಕಿ ಕೊಂಡು ಬರುತ್ತವೆ .

ವಿನಾ ದೈನ್ಯೇನ ಜೀವಿತಂ ಅನಾಯಸೇನ ಮರಣಂ ಎಂಬ  ಮಂತ್ರ ಎಲ್ಲರಿಗೂ ಅಪ್ಯಾಯಮಾನವಾಗಿ ತೋರುವುದು .

ಆದುದರಿಂದ ಅನಾರೋಗ್ಯ ದೂರ ಇಡುವ ಕೆಲವು ಮಾರ್ಗೋಪಾಯ ಗಳನ್ನು  ಗಮನಿಸುವ .

ಇದರಲ್ಲಿ ಸುಲಭ (?)ಸಾಧ್ಯ  ಸರಿಯಾದ ಸಮತೋಲ ಆಹಾರ ಸೇವನೆ .

 

ಹಿರಿಯರಿಗೆ  ಸಮತೋಲಿತ ಆಹಾರವು ಕಡಿಮೆ ಕ್ಯಾಲೊರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರಬೇಕು.ನಮ್ಮಲ್ಲಿ ಬಹು ಮಂದಿ ಅಕ್ಕಿ ಗಂಜಿ ,ನೀರು ದೋಸೆ ,ಪುಂಡಿ ಇತ್ಯಾದಿ ಆರೋಗ್ಯಕರ ಆಹಾರ ಎಂದು ಹೇಳುತ್ತಾರೆ .ಆದರೆ ಅಕ್ಕಿಯಲ್ಲಿ ಸಕ್ಕರೆ ಅಥವಾ ಕ್ಯಾಲೋರಿ ಜಾಸ್ತಿ .  ಸ್ನಾಯುಗಳ ಸಂರಕ್ಷಣೆಗೆ ಹೆಚ್ಚಿನ ಪ್ರೋಟೀನ್, ಜೀರ್ಣಕ್ರಿಯೆಗೆ ನಾರು, ಹಾಗೂ ಎಲುಬುಗಳ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳ ಮೇಲೆ ಒತ್ತು ನೀಡಬೇಕು. ಮುಖ್ಯ ಅಂಶಗಳಲ್ಲಿ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ (ಮೀನು, ಕೋಳಿ, ಬೀನ್ಸ್), ಮತ್ತು ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು ಸೇರಿವೆ.  ಕೊಬ್ಬು, ಉಪ್ಪು ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ, ಹಾಗೆಯೇ ಮೃದುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

 

ಪ್ರೋಟೀನ್: ಸ್ನಾಯುಗಳ ಭಾರವನ್ನು ಕಾಪಾಡಲು ಅಗತ್ಯ. ಕಡಿಮೆ ಕೊಬ್ಬಿನ ಮಾಂಸ, ಕೋಳಿ, ಮೊಟ್ಟೆ, ಮೀನು, ಬೀನ್ಸ್ ಮತ್ತು ಕಾಯಿ-ಬೀಜಗಳು ಉತ್ತಮ ಮೂಲಗಳು.ಅಕ್ಕಿ ಗೋಧಿ ಯಂತಹ ಏಕ ದಳ  ಧಾನ್ಯಗಳಿಗಿಂತ ಹೆಸರು ಕಡಲೆ ಉದ್ದು ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಥವಾ ಸಸಾರ ಜನಕ ಅಧಿಕ ಎಂಬುದನ್ನು ಗಮನಿಸ ಬೇಕು .

ಹಣ್ಣುಗಳು ಮತ್ತು ತರಕಾರಿಗಳು: ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು, ವಿಶೇಷವಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ನಾರು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ.

ಅಸಂಸ್ಕರಿತ ಇಡೀ ಧಾನ್ಯ ಗಳು .

ಹಾಲು ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲು, ಮೊಸರು  ಕ್ಯಾಲ್ಸಿಯಂ ಹಾಗೂ ವಿಟಮಿನ್ D ಒದಗಿಸಿ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತವೆ.



ಆಹಾರ ಸಂಬಂಧಿತ ಸಲಹೆಗಳು ಮತ್ತು ಗಮನಿಸಬೇಕಾದ ವಿಷಯಗಳು

ನೀರಿನ ಸೇವನೆ: ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗಬಹುದು, ಆದ್ದರಿಂದ ದಿನಪೂರ್ತಿ ಸಾಕಷ್ಟು ದ್ರವಗಳನ್ನು ಕುಡಿಯಬೇಕು.

ಉಪ್ಪು ಮತ್ತು ಸಕ್ಕರೆ ಕಡಿಮೆ ಮಾಡುವುದು: ರುಚಿಗಾಗಿ ಉಪ್ಪಿನ ಬದಲು ಸೊಪ್ಪುಗಳು ಮತ್ತು ಮಸಾಲೆಗಳನ್ನು ಬಳಸಿ; ಸಕ್ಕರೆ ಮತ್ತು ಸಂಸ್ಕರಿಸಿದ  ಆಹಾರಗಳನ್ನು ತಪ್ಪಿಸಬೇಕು.ಉಪ್ಪಿನ ಕಾಯಿ ,ಉಪ್ಪಿನಲ್ಲಿ ಕಾಪಿಟ್ಟ ಹಲಸು ಮಾವು ಮೀನು  ಇತ್ಯಾದಿ ಯಲ್ಲಿ ಉಪ್ಪು ಸಾಂದ್ರೀಕೃತ ವಾಗಿರುತ್ತದೆ  ಎಂದು ಗಮನಿಸ ಬೇಕು  

ಚಿಕ್ಕ ಪ್ರಮಾಣದ, ಹೆಚ್ಚು ಬಾರಿ ಊಟ: 

 

 ಉಪವಾಸ 

 ನಿಯಮಿತವಾಗಿ  ಮಾಡುವ ಉಪವಾಸ ಆರೋಗ್ಯಕ್ಕೆ ಉತ್ತಮ ಎಂದು ಕಂಡು ಬಂದಿದೆ .ಇದು ಆಚೇ ಮನೆ ಸುಬ್ಬಮ್ಮನ ಉಪವಾಸ ದಂತೆ ಬರೀ ಅನ್ನ ಬಿಟ್ಟು ಉಳಿದನ್ನು ಸ್ವಾಹಾ ಮಾಡುವುದು ಆಗಿರ ಬಾರದು ಮತ್ತು ಉಪವಾಸ ಮುರಿದ ಮೇಲೆ ಅದನ್ನು ಹೆಚ್ಚಿನ ಆಹಾರ ಸೇವಿಸಿ ಸಮತೂಕ ಮಾಡಲು ಹೋಗ ಬಾರದು .

(ಮುಂದುವರಿಯುವುದು )

ಮಂಗಳವಾರ, ಫೆಬ್ರವರಿ 17, 2026

ಹಿರಿಯ ರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

 ಸಮಾಜದಲ್ಲಿ ಹಿರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು  ಅವರಿಗೆ  ಕೌಟಿಂಬಿಕ ಬೆಂಬಲ ಕಡಿಮೆ ಯಾಗುತ್ತಿರುವ ಈ ಕಾಲದಲ್ಲಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳ ಬೇಕಾದ ಜವಾಬ್ದಾರಿ ಅವರ ಮೇಲೆ ಇದೆ . 

ಇಂದಿನ ತಥಾಕಥಿತ ನಾಗರೀಕ ಸಮಾಜದ ಕಾಯಿಲೆಗಳಾದ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದ್ರೋಗ ಗಳಲ್ಲದೆ ಹಿರಿಯ ನಾಗರಿಕರಲ್ಲಿ ಕಾಣಿಸಿ ಕೊಳ್ಳುವ ಮೂತ್ರ ಸಂಬಂದಿ  ಸಮಸ್ಯೆ ,ಬೀಳುವಿಕೆ ಮತ್ತು ಮೂಳೆ ಮುರಿತ , ಮಹಿಳೆಯರಲ್ಲಿ  ಋತುಬಂಧ ಸಮಸ್ಯೆಗಳು ಇವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರ ವೊಂದನ್ನು  ೧.೩.೨೦೨೬ ನೇ ಭಾನುವಾರ ಪುತ್ತೂರಿನಲ್ಲಿ ಹಮ್ಮಿ ಕೊಳ್ಳಲಾಗಿದೆ . 

ಹಿರಿಯ ಮೂಳೆ ತಜ್ಞ ಡಾ ಭಾಸ್ಕರ್ ಅವರು ಹಿರಿಯರ ಮೂಳೆ ಮತ್ತು ಸಂಧಿ ವ್ಯಾಧಿಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ,ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯ ಡಾ ಗೋಪಿನಾಥ ಪೈ ಅವರು ಹಿರಿಯ  ಪುರುಷ ಮತ್ತು ಸ್ತ್ರೀಯರ ಮೂತ್ರ ಸಂಬಂದಿ ಸಮಸ್ಯೆಗಳ ಮೇಲೆ ಮತ್ತು ಜನಪ್ರಿಯ ಸ್ತ್ರೀ ರೋಗ ತಜ್ಞೆ ಡಾ ಶ್ರುತಿ ಅಲೆವೂರ್ ಋತುಬಂಧ(ಮುಟ್ಟು ನಿಲ್ಲುವಿಕೆ )ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡುವರು . ಹಿರಿಯ ಫಿಸಿಯೋಥೆರಪಿಸ್ಟ್ ವಿನಯ ಪ್ರಸಾದ್ ಝಾ ಅವರು ಉಪಯುಕ್ತ ವ್ಯಾಯಾಮ ಗಳ  ಪ್ರಾತ್ಯಕ್ಷಿಕೆ ನೀಡುವರು . ಪ್ರಶ್ನೆ ಸಮಾಲೋಚನೆಗೆ ಅವಕಾಶ ಇದೆ . ಜತೆಗೆ ನಾನೂ ಇರುತ್ತೇನೆ .

ನಿಯಮಿತ  ಆಸನ ವ್ಯವಸ್ಥೆ ಇರುವುದರಿಂದ ದಯವಿಟ್ಟು ೨೬.೨.೨೦೨೬ ರ ಒಳಗೆ ನೋಂದಾಯಿಸಿ ಕೊಳ್ಳಬೇಕಾಗಿ ವಿನಂತಿ . ಇದು ಪೂರ್ಣ ಉಚಿತ . ಕಾರ್ಯಕ್ರಮ ನಂತರ ಊಟದ ವ್ಯವಸ್ಥೆ ಇದೆ .



ಬುಧವಾರ, ನವೆಂಬರ್ 5, 2025

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ 

ಈಗ  ಶಾಲೆ ಕಾಲೇಜ್ ಆಸ್ಪತ್ರೆ ,ಸರಕಾರಿ ಕಚೇರಿ ಬ್ಯಾಂಕ್  ಎಲ್ಲೆಂದರಲ್ಲಿ ಕಂಡು ಬರುವ ಸೂಚನಾ ಫಲಕ . ತಮ್ಮಲ್ಲಿ ಬರುತ್ತಿರುವ ಅತಿಥಿ ,ಗ್ರಾಹಕರ ಲ್ಲಿ  ಕೆಲವರ ಮೇಲೆ ಅಪನಂಬಿಕೆ ಇರುವ ಸೂಚನೆ . ಸರ್ವಾನ್ತರ್ಯಾಮಿ  ಯಾದ ದೇವರನ್ನು ಪ್ರತಿಷ್ಠಿಸಿರುವ ದೇವಾಲಯ ಗಳಲ್ಲಿಯೂ ಇಂತಹ ಎಚ್ಚರಿಕೆ ಇರುವುದು ವಿಪರ್ಯಾಸ . ಗುರುಗಳು ಶಿಷ್ಯರಿಗೆ ತಲಾ ಒಂದು ಬಾಳೆಹಣ್ಣು ಕೊಟ್ಟು ದೇವರು ಇಲ್ಲದ ತಾಣದಲ್ಲಿ ತಿನ್ನಿರಿ ಎಂದು ಹೇಳಿದಾಗ ಎಲ್ಲರೂ ಹಣ್ಣು ಸಹಿತ ವಾಪಸು ಬಂದ ಕತೆ ಕೇಳಿದ್ದೇವೆ . 

      ಮನೆಯಲ್ಲಿ ನಿಜಕ್ಕೂ ನಾಯಿ ಇಲ್ಲದಿದ್ದರೂ ಕಚ್ಚುವ ನಾಯಿ ಇದೆ ಎಂದು ಕೆಲವರು ಬೋರ್ಡ್ ಹಾಕಿ ಕೊಂಡು ಇರುತ್ತಾರೆ .;. ಕಳ್ಳರನ್ನು ಹೆದರಿಸಲು .  ಹಾಗೆಯೇ ಸಿಸಿಟಿವಿ  ಎಚ್ಚರಿಕೆ ಯೂ  ಇರುವ ಸಾಧ್ಯತೆ ಇದೆ . 

ಪರೀಕ್ಷಾ ಕೇಂದ್ರಗಳಲ್ಲಿ ಈಗ ಸಿಸಿಟಿವಿ ಕಡ್ಡಾಯ . ಆದರೂ ಕಾಪಿ ಹೊಡೆಯುವುದು ಕಡಿಮೆ ಆಗಿದೆ ಎಂದು ಎದೆ ತಟ್ಟಿ ಹೇಳುವುದು ಕಷ್ಟ . ನೀವು ಚಾಪೆಯ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೇ ಅಡಗುವವರು ಇದ್ದಾರೆ  ನೆಸೆ ಸಿಟಿ ಈಸ್ ಮದರ್ ಆಫ್ ಇನ್ವೆಂಷನ್ . 

ಸರಕಾರಿ ಕಚೇರಿಗಳಲ್ಲಿ ಇದರ ಅಳವಡಿಕೆಯಿಂದ ಲಂಚದ ಹಾವಳಿ ಕಡಿಮೆ ಆಗಿದೆಯೇ ,ಸಾರ್ವಜನಿಕರೇ ಹೇಳಬೇಕು . ಲಂಚವನ್ನು ಮಧ್ಯವರ್ತಿಗಳ ಮೂಲಕ ,ಕಾಪಿ ಕುಡಿಯುವಾ ಎಂದು ಪಕ್ಕದ ಹೋಟೆಲ್ ನಲ್ಲಿ ಮತ್ತು ಕೆಲವರು ಕಚೇರಿಯ ಶೌಚಾಲಯದಲ್ಲಿ (ಅಲ್ಲಿ ಸಿಸಿಟಿವಿ ಹಾಕುವಂತಿಲ್ಲ )ವಸೂಲು ಮಾಡುವರು ಎಂದು ಕೇಳಿದ್ದೇನೆ  . 

ಸಿಸಿಟಿವಿ ಸಹಾಯದಿಂದ ಅಪರಾಧಿಗಳನ್ನು ಪತ್ತೆ ಹಚ್ಚಿದ ವಾರ್ತೆ ಓದಿದ್ದೇವೆ . ಇತ್ತೀಚೆಗೆ ಕುಟುಂಬ ಕಲಹ ,ಆತ್ಮಹತ್ಯೆ ,ಕೊಲೆ ಇತ್ಯಾದಿ ಅಧಿಕ ಆಗುತ್ತಿರುವುದರಿಂದ  ಇನ್ನು ಎಲ್ಲಾ ಮನೆಗಳ ಒಳಗೂ ಸಿಸಿಟಿವಿ ಕಡ್ಡಾಯ ಮಾಡ ಬಹುದು . 

ಕೆಲವು ಶಾಲೆಗಳಲ್ಲಿ ಸಿಸಿಟಿವಿ  ಲಿಂಕ್ ಮತ್ತು ಪಾಸ್ವರ್ಡ್ ಹೆತ್ತವರಿಗೆ ಕೊಟ್ಟು  ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆಯೋ ಇಲ್ಲವೋ ,ತಮ್ಮ ಮಕ್ಕಳು ತರಗತಿಗಳಲ್ಲಿ  ಆಸಕ್ತಿಯಿಂದ  ಕಲಿಯುವರೋ ಎಂದು ತತ್ಸಮಯ ಗಮನಿಸುವ ವ್ಯವಸ್ಥೆ ಮಾಡಿರುತ್ತಾರೆ ಎಂದು ಕೇಳಿದ್ದೇನೆ . 

ಅಪರಾಧ ಗಳನ್ನು  ತಿಳಿದೂ ತಿಳಿದೂ ಮಾಡಿ ದೇವಾಲಯಗಳಿಗೆ ದೊಡ್ಡ ಕಾಣಿಕೆ ಹಾಕಿ  ಲೇವಾದೇವಿ ಮಾಡುವ ಮಂದಿಗೆ ಸರ್ವನ್ತರ್ಯಾಮಿ ಯ  ಭಯ ಇಲ್ಲದಿದ್ದರೂ ಮಾನವ ನಿರ್ಮಿತ  ಸಿಸಿಟಿವಿ ಯ  ಹೆದರಿಕೆ ಸ್ವಲ್ಪ ಇರಬಹುದು . 

ಹಿಂದೆ ಮನೆ ಕಾವಲಿಗೆ ನಾಯಿ ಸಾಕುತ್ತಿದ್ದೆವು . ಅಪರಿಚಿತರು ಬಂದರೆ ಮಾತ್ರ ಅವು ಬೊಗಳುವವು . ಕತ್ತಲೆಯಲ್ಲಿ ಮನೆಯವರು ಬಂದಾಗಲೂ ಕೆಲವೊಮ್ಮೆ ಬೊಗಳಿದಾಗ "ನಾನಲ್ಲವೇ ನಾಯಿ ,ನೀನ್ಯಾಕೆ ಬೊಗಳುವೆ "ಎನ್ನುವುದು ಸಾಮಾನ್ಯ . ಇನ್ನು ಮನೆ ಮಂದಿಯ ಮುಖ ಚರ್ಯೆ ಯನ್ನು ಸಿಸಿಟಿವಿ ಯಲ್ಲಿ ದಾಖಲಿಸಿ ಅಪರಿಚಿತರು ಬಂದಾಗ ಸೈರನ್ ಮಾಡುವ ವ್ಯವಸ್ಥೆ ಬಂದರೆ  ಕಾವಲು ನಾಯಿ ಸಾಕಣೆ ನಿಲ್ಲ ಬಹುದು  

ಮಂಗಳವಾರ, ಸೆಪ್ಟೆಂಬರ್ 9, 2025

 DR. SULEKHA VARADARAJ ...                                                                               

ಡಾ ಸುಲೇಖಾ ವರದರಾಜ್ ಪುತ್ತೂರು ಇ ಎಸ ಐ  ವೈದ್ಯಾಧಿಕಾರಿ ಯಾಗಿ ಸುಧೀರ್ಘ ಸೇವೆ ಸಲ್ಲಿಸಿ  ಕೆಲ ತಿಂಗಳುಗಳ ಹಿಂದೆ ಸ್ವಯಂ ನಿವೃತ್ತಿ  ಹೊಂದಿದರು . ತಮ್ಮ ಪ್ರಾಮಾಣಿಕ ಸೇವೆಯಿಂದ ಜನಾನುರಾಗಿದ್ದವರು . ಮಕ್ಕಳ ತಜ್ಞೆ ,ಹದಿಹರೆಯದವರ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ವೈದ್ಯಕೀಯ ಸಮ್ಮೇಳನಗಳಲ್ಲಿ ಬಹು ಬೇಡಿಕೆ ಯುಳ್ಳ ವೈದ್ಯೆ . ವೈದ್ಯರಲ್ಲಿ ಸಾಹಿತ್ಯ  ಸಂಗೀತ ಲಲಿತ ಕಲೆಯಲ್ಲಿ ಆಸಕ್ತಿ ಇರುವವವರು ಕಡಿಮೆ ,ಒಂದು ವೇಳೆ ಇದ್ದರೂ ಸಮಯ ಇರುವುದಿಲ್ಲ . ಆದರೆ ಸುಲೇಖಾ ಅವರ ಆಸಕ್ತಿ ಬಹುಮುಖ .. ಸರಿಯಾಗಿ ಅವರ ಪತಿ ಕನ್ನಡ ಪ್ರಾಧ್ಯಾಪಕ ,ಸಾಹಿತಿ ಮತ್ತು ಸಂಗೀತ ಪ್ರಿಯ . ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಮೇಲೆ ತಮ್ಮ ಮನಸಿಗೆ ಹತ್ತಿರವಾದ ವಿಷಯಗಳ ಮೇಲೆ ಸಮಯ ವಿನಿಯೋಗಿಸುತ್ತಿರುವರು . 

ವರದರಾಜ್ ಚಂದ್ರಗಿರಿ  ಮೊನ್ನೆ ಮೊನ್ನೆ ಸೇವಾ ನಿವೃತ್ತಿ ಹೊಂದಿರುವರು .ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಿನ್ಸಿಪಾಲ್ ಅವರ ಸೇವೆಯ ಕೊನೆಯ ಹುದ್ದೆ . ಈ ಕಾಲೇಜು ಯಾವುದೇ ಖಾಸಗಿ ಸಂಸ್ಥೆಗೆ ಕಡಿಮೆ ಇಲ್ಲದಂತೆ ಮಾಡುವಲ್ಲಿ ಇವರ ಕೊಡುಗೆ ಅಮೂಲ್ಯ . ಇವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನೇಕ  .ನಾನೂ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿ ಆನಂದ ಪಟ್ಟಿದ್ದೇನೆ . ಸ್ವಯಂ ಸಾಹಿತಿಯಾದ ಇವರು ಖ್ಯಾತ ಕತೆಗಾರ ದಿ  ವ್ಯಾಸ ಅವರ ಸಮೀಪ ಬಂಧು . ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ ನ ಮುಖ್ಯಸ್ಥನಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ ಗರಿಮೆ ಅವರದು .. ಕಾರ್ಕಳ ಕಾಲೇಜ್ ನಲ್ಲಿ ಇದ್ದಾಗ ಹಿರಿಯ ಸಂಘಟಕ ರಾಮಚಂದ್ರ ಅವರ ಜತೆಗೆ ಇವರು . ನನಗೆ ರಾಮಚಂದ್ರ ಅವರನ್ನು ಪರಿಚಯಿಸಿದವರೇ ಚಂದ್ರಗಿರಿ ಅವರು 

ಚಂದ್ರಗಿರಿ ದಂಪತಿಗಳ ಮನೆಯ ಹೆಸರು ಸಮರಸ . ಅನ್ವಯಾರ್ಥ ,ಸಾಹಿತ್ಯದಲ್ಲಿಯೂ ಬದುಕಿನಲ್ಲಿಯೂ  . ಇಬ್ಬರದೂ ಸರಳ ವ್ಯಕ್ತಿತ್ವ ,ನೇರ ನುಡಿ .  ಪುತ್ತೂರಿಗೆ ಬಂದು ನಾನು ಮತ್ತು ನನ್ನ ಕುಟುಂಬ ದ  ಸಂಪಾದನೆ ಎಂದರೆ ಇಂತಹವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸ್ನೇಹ . ಚಂದ್ರಗಿರಿ ದಂಪತಿಗಳಿಗೆ ಇಬ್ಬರು ಮಕ್ಕಳು . ಮಗ ಉದ್ಯೋಗದಲ್ಲಿ ಇದ್ದು ,ಮಗಳು ವಿದ್ಯಾರ್ಥಿ . 

                ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಈ ದಂಪತಿಗಳು  ತಮ್ಮ  ಹೃದಯಕ್ಕೆ ಹತ್ತಿರವಾದ ಚಟುವಟಿಕೆಗಳಲ್ಲಿ ಪ್ರವೃತ್ತರಾಗಲಿ . ಆಯುರಾರೋಗ್ಯ ಸೌಖ್ಯ ಅವರಿಗಿರಲಿ .  

ಕಣ್ಮರೆಯಾದ ಮೆಚ್ಚಿನ ಶ್ರೀಪತಿ ಮಾಷ್ಟ್ರು

 May be an image of 1 person and smilingಕೆಲ ದಿನಗಳ ಹಿಂದೆ ಶ್ರೀಪತಿ ಮೇಷ್ಟು ತೀರಿಕೊಂಡರು .ಆಗ ನಾನು ಪರವೂರಿನಲ್ಲಿ ಇದ್ದೆ . 

ಅವರು ನಮ್ಮ ಊರಿನ ಕಿರಿಂಚಿಮೂಲೆ ಯವರು .ಅವರ ತಂದೆ ಶ್ರೀನಿವಾಸ ರಾಯರು ಎಲಿಮೆಂಟರಿ ಶಾಲೆಯಲ್ಲಿ ನಮ್ಮ ಅಧ್ಯಾಪಕರು .ಶಿಸ್ತಿನ ಸಿಪಾಯಿ . ನಮ್ಮ ಮನೆ ಅಂಗ್ರಿಯಿಂದ ಒಂದು ಮೈಲು ಉತ್ತರಕ್ಕೆ ಗದ್ದೆ ಗಳ ನಡುವಿನ ಕಾಲುದಾರಿ ಯಲ್ಲಿ ನಡೆದರೆ ಕಳಂಜಿಮಲೆ ಗುಡ್ಡದ ತಪ್ಪಲಿನಲ್ಲಿ ಅವರ ಮನೆ . ಅಲ್ಲಿಂದ ಪಶ್ಚಿಮಕ್ಕೆ ಜಲ್ಲಿ ಮಣ್ಣಿನ ರಾಜರಸ್ತೆ , ಕಿರಿಂಚಿ ಮೂಲೆ ,ಕೇಪುಳ ಗುಡ್ಡೆ  ಪಂಜಾಜೆ ದಾಟಿ ಕನ್ಯಾನಕ್ಕೆ ಮತ್ತೊಂದು ಮೈಲಿ . ಶ್ರೀಪತಿ ಮೇಷ್ಟ್ರ ತಮ್ಮ ಸುರೇಶ ನನ್ನಿಂದ ಒಂದು ಕ್ಲಾಸ್ ಮೇಲೆ ಆದರೆ ಬಾಲಕೃಷ್ಣ ಒಂದು ವರ್ಷ ಜೂನಿಯರ್ .ಸುರೇಶ ರಾವ್ ಕೋಲ್ ಇಂಡಿಯಾ ದಲ್ಲಿ ಉನ್ನತ ಹುದ್ದೆ ಗೆ ಏರಿ ಈಗ ಮಂಗಳೂರಿನಲ್ಲಿ ನಿವೃತ್ತ ಜೇವನ  ನಡೆಸುತ್ತಿದ್ದರೆ  ಬಾಲಕೃಷ್ಣ ಅಧ್ಯಾಪಕನಾಗಿ ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತ್ತಿ ಹೊಂದಿ ಕಿರಿಂಚಿ ಮೂಲೆ ಮೂಲ ಮನೆಯಲ್ಲಿ ಇದ್ದಾರೆ . 

ಶ್ರೀಪತಿ ರಾಯರು ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ ಬಿ ಎಸ್ಸಿ  ಬಿ ಎಡ್ ಮುಗಿಸಿ ಅಧ್ಯಾಪಕರಾಗಿ ಸೇರಿದರು  . ಭೌತ ಮತ್ತು ರಸಾಯನ ಶಾಸ್ತ್ರ ಅವರದ್ದು . ಜೀವ ಶಾಸ್ತ್ರಕ್ಕೆ  ಕಿರಿಂಚಿ ಮೂಲೆ ಶ್ರೀಧರ ರಾಯರು . ಶ್ರೀಪತಿ ರಾಯರು ತರಗತಿಗೆ ಪಠ್ಯ ಪುಸ್ತಕ ತರುತ್ತಿರಲಿಲ್ಲ .. ಮೊದಲೇ ವಿಷಯ ಅಧ್ಯಯನ ಮಾಡಿ ಬಂದು  ಬೋರ್ಡಿನಲ್ಲಿ ಬಣ್ಣ ಬಣ್ಣದ ಚಿತ್ರ ಬಿಡಿಸಿ ಆಕರ್ಷಕ ಠೀವಿ ಮತ್ತು ಮಾತಿನ ಓಘ ದಿಂದ  ಪಾಠ ಆರಂಭ ಮಾಡಿದರೆ ವಿದ್ಯಾರ್ಥಿಗಳು ಮಂತ್ರ ಮುಗ್ಧ ರಾಗಿ ಕೇಳುವರು . ಅದುವರೆಗೆ ನಾವು ಪ್ರತ್ಯಕ್ಷ ಕಂಡಿರದ  ರಸಾಯನ ಶಾಸ್ತ್ರ ಪ್ರಯೋಗ ಗಳನ್ನು  ಮಾಡಿ ತೋರಿಸುತ್ತಿದ್ದರು .ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಮ್ಯಾಂಗನೀಸ್ ಡೈ ಆಕ್ಸೈಡ್ ಪ್ರನಾಳ ದಲ್ಲಿ ಹಾಕಿ ಬಿಸಿ ಮಾಡಿ  ಉತ್ಪತ್ತಿಯಾದ ಆಮ್ಲಜನಕದಿಂದ ಕಡ್ಡಿ ಉರಿಸಿ ತೋರಿಸಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತೆ ಇದೆ  .ಇವರು ಬರುವ ವರೆಗೆ ಲ್ಯಾಬ್ ಉಪಕರಣಗಳು ಪ್ರಯೋಗಾಲಯದಲ್ಲಿ ಧೂಳು ಹಿಡಿಯುತ್ತಿದ್ದವು . ಭೌತ ಶಾಸ್ತ್ರದ ವೇಗ ವೇಗೋತ್ಕರ್ಷ ,ನ್ಯೂಟನ್ ಚಲನಾ ನಿಯಮಗಳ ಬಗ್ಗೆ ಅವರ ಮಾತುಗಳು ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ . 

ಶಾಲೆಯಲ್ಲಿ ಒಂದು ವಿಜ್ಞಾನ ಸಂಘ ಆರಂಭಿಸಿದ್ದು  ಕನ್ನಡದಲ್ಲಿ ವಿಜ್ಞಾನ ಲೋಕ ಎಂಬ ಪತ್ರಿಕೆ ನಡೆಸುತ್ತಿದ್ದ ಸುರತ್ಕಲ್  ಕೆ ಆರ್ ಈ ಸಿ ಪ್ರಾಧ್ಯಾಪಕ  ಡಾ ಪಾ ದೇವರಾವ್ ಅವರನ್ನು ಉದ್ಘಾಟಗೆ  ಕರೆಸಿದ್ದರು , .  ಶಾಲೆಯಲ್ಲಿ ಕೈಬರಹದ ಪತ್ರಿಕೆ ಹುಟ್ಟು ಹಾಕಿ ವಿದ್ಯಾರ್ಥಿಗಳಲ್ಲಿ ಬರೆಯುವ ಅಭ್ಯಾಸ ಕ್ಕೆ ಪ್ರೋತ್ಸಾಹ ಕೊಟ್ಟರು .ನಾನು ನಾಸೆರ್ ಚರಿತ ವೆಂಬ ಕಿರು ಪುರಾಣವು ಎಂಬ ಲೇಖನ ಬರೆದ ನೆನಪಿದೆ .(ಈಜಿಪ್ಟ್ ಅಧ್ಯಕ್ಷ ನಾಸೆರ್ ಮೇಲೆ ).ಈಗಲೂ ಶಾಲೆಯ ವಾಚನಾಲಯ ದಲ್ಲಿ ಪತ್ರಿಕೆ ಇದೆ ಎಂದು ಕೇಳಿದ್ದೇನೆ ,

                   ಮಾಷ್ಟ್ರ ಬಳಿ ಒಂದು ಬೈಸಿಕಲ್ ಇದ್ದು ಕೆಲವೊಮ್ಮೆ ನಮ್ಮನ್ನು ಡಬ್ಬಲ್ ರೈಡ್ ಮಾಡಿ ಕೊಂಡು ಕರೆದೊಯ್ಯುತ್ತಿದ್ದರು . ನಾನು ಹತ್ತನೇ ತರಗತಿಯಲ್ಲಿ ಇರುವಾಗ ಅವರಿಗೆ ಮುಡಿಪ್ಪು ಶಾಲೆಗೆ ವರ್ಗ ಆಗಿ ನಮ್ಮ ಶಾಲೆಗೆ ದೊಡ್ಡ ನಷ್ಟ ಆಯಿತು ಎನ್ನ ಬಹುದು .ಮುಂದೆ ಅವರು ಆರ್ಟ್ಸ್ ವಿಷಯ  ಬಾಹ್ಯ  ಎಂ ಈ ಮಾಡಿ ಜೂನಿಯರ್ ಕಾಲೇಜು ಅಧ್ಯಾಪಕ ಹುದ್ದೆ ಆಯ್ದು  ಪ್ರಿನ್ಸಿಪಾಲ್  ಆಗಿ ನಿವೃತ್ತರಾದವರು ಪುತ್ತೂರಿನಲ್ಲಿ ನೆಲೆಸಿದ್ದರು .. ಇದರಿಂದ ವಿಜ್ಞಾನ ಶಿಕ್ಷಣಕ್ಕೆ ನಷ್ಟ ಆಯಿತು ಎಂದು ನನ್ನ ಅಭಿಪ್ರಾಯ . 

 ಅಸೌಖ್ಯದ ದಿನಗಳಲ್ಲಿ  ವೈದ್ಯನಾಗಿ ನನ್ನ ಗುರುಗಳ  ಕಿಂಚಿತ್ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು  ನನ್ನ ಸೌಭಾಗ್ಯ . 

ಅವರ ಮಕ್ಕಳು , ಅದರಲ್ಲು  ಮಗಳು ಸುಪ್ರೀತಾ ಮತ್ತು ಅಳಿಯ ಯಾಜಿ  ಯವರು ಶ್ರದ್ಧೆ ಯಿಂದ ಕೊನೆಗಾಲದಲ್ಲಿ ಆರೈಕೆ ಮಾಡಿದ್ದಾರೆ . ಅವರಿಗೆ  ಒಳ್ಳೆಯದಾಗಲಿ . 

ಬಾಲಂಗೋಚಿ :  ನಮ್ಮ ಕಾಲದಲ್ಲಿ ಎರಡು ವರ್ಗದ ಅಧ್ಯಾಪಕರು ಇದ್ದರು . ಮೊದಲನೆಯವರು ಯಾವುದೇ ತಯಾರಿ ಇಲ್ಲದೆ  ತರಗತಿಗೆ ಬಂದು ಪಠ್ಯ ಪುಸ್ತಕ (ಅದೂ ಮೊದಲ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಯಿಂದ )  ವಾಚನ ಮಾಡಿ ಆಗಾಗ ಯು  ಅಂಡರ್ ಸ್ಟಾಂಡ್ ?ಎನ್ನುವರು (ಅವರಿಗೇ ಅರ್ಥವಾಗಿರ ದಿದ್ದರೂ ),ವಿದ್ಯಾರ್ಥಿಗಳು ಕೋಲೆ ಬಸವನಂತೆ ಯಸ್ ಸರ್ ಎನ್ನುವರು . ಎರಡೇ ವರ್ಗ ಅಧ್ಯಯನ ಮಾಡಿ ಪಠ್ಯ ಪುಸ್ತಕ ಸಹಿತ ಅಥವಾ ರಹಿತ ಬಂದು ಪಾಠ ಮಾಡುವವರು . ಎರಡನೇ ವರ್ಗದವರ ಸಂಖ್ಯೆ ಕಡಿಮೆ ಇದ್ದುದು ನಮ್ಮ ದುರ್ದೈವ 

 

 

 

 

ಮಂಗಳವಾರ, ಮಾರ್ಚ್ 25, 2025

                                     


 

 ಹಿಂದಿನ ಮದ್ರಾಸ್ ಅಥವಾ ಈಗಿನ ಚೆನ್ನೈ ಯನ್ನು ವೈದ್ಯ ಕೀಯ  ಕ್ಷೇತ್ರದ ಕಾಶಿ ಎನ್ನ ಬಹುದು.ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಢಳಿತಾತ್ಮಕ ಕೇಂದ್ರ ಆಗಿದ್ದ ಕಾರಣ ಅಲ್ಲಿ ವೈದ್ಯಕೀಯ ಕಾಲೇಜು ಇತ್ಯಾದಿ ಬಹಳ ಹಿಂದೆಯೇ ಸ್ಥಾಪನೆ ಆಗಿದ್ದವು   . ಟ್ರೋಪಿಕಲ್ ಸ್ಪ್ರೂ ,ಮದ್ರಾಸ್ ಮೋಟಾರ್ ನ್ಯೂರೋನ್ ಡಿಸೀಸ್ ,ಲೀಷ್ಮೆ ನಿಯಾ  ಮುಂತಾದ ಹಲವು ಕಾಯಿಲೆಗಳ ದಾರಿ ತೋರುವ ಅಧ್ಯಯನ ಇಲ್ಲಿಯೇ ಆಗಿತ್ತು . ದಂತ ಕತೆ ಗಳಾದ ವೈದ್ಯಕೀಯ ಶಿಕ್ಷಕ ರಾದ ಡಾ ತಿರುವೆಂಗಡಂ (ಫಿಸಿಷಿಯನ್ ).ಡಾ ಏನ್ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿ),ಡಾ ಸೇತುರಾಮನ್ (ಹೆಮಟೊಲೊಜಿ ),ಡಾ ಎ   ಎಸ ತಂಬೈಯ್ಯ (ಡರ್ಮಟಾಲಜಿ ),ಡಾ ರಾಮ ಮೂರ್ತಿ (ನೂರೋ ಸರ್ಜರಿ ),ಡಾ ರಂಗ ಭಾಷ್ಯಮ್ (ಗ್ಯಾಸ್ಟ್ರೋ ಎಂಟೆರೋ ಸರ್ಜರಿ ) ಕೆಲವು ಹೆಸರುಗಳು . 

ಇವರಲ್ಲಿ ತಿರುವೆಂಗಡಂ ಬಿಟ್ಟರೆ ಉಳಿದವರು  ಹೊಸ ವಿಭಾಗಗಳಿಗೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರು . ನಮ್ಮ ದೇಶದಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ಇಲ್ಲದ ವಿಷಯಗಳ ಅಧ್ಯಯನ ವನ್ನು ವಿದೇಶ (ಮುಖ್ಯವಾಗಿ ಇಂಗ್ಲೆಂಡ್ )ಮಾಡಿ ಪುನಃ ತಾಯಿ ನಾಡಿಗೆ ಬಂದು ಇಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದವರು . 

ಡಾ ಎ  ಎಸ ತಂಬಯ್ಯ  ಇಂಗ್ಲೆಂಡ್ ದೇಶದಲ್ಲಿ ಚರ್ಮ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ವಿಶೇಷ ಅಧ್ಯಯನ ಮಾಡಿ ಮದ್ರಾಸ್ ಮೆಡಿಕಲ್ ಕಾಲೇಜು ವಿಭಾಗ ಆರಂಬಿಸಿದವರು . ಅವರ ಅಧ್ಯಾಪನ ರೀತಿ ಬಲು ಆಕರ್ಷಕ ವಾಗಿದ್ದು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಗ ವಿದ್ಯಾರ್ಥಿಗಳಲ್ಲಿ ಅಷ್ಟು ಜನಪ್ರಿಯವಾಗಿ ಇಲ್ಲದಿದ್ದ ಡರ್ಮಟಾಲಜಿ ಅಧ್ಯಯನ ಕ್ಕೆ ಬರುವಂತೆ ಮಾಡಿತು .ಅವರು ಸೇವೆಯಿಂದ ನಿವೃತ್ತರಾದ ಮೇಲೂ ನಿರಂತರ ಕಲಿಕಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದು ಚೆನ್ನೈ ಯಲ್ಲಿ  ನನಗೂ ಅವರ  ಪಾಂಡಿತ್ಯ ಭರಿತ ಉಪನ್ಯಾಸ ಕೇಳುವ ಅವಕಾಶ ಸಿಕ್ಕಿತ್ತು . 

ಡಾ ತಂಬಯ್ಯ ಅವರ ದಾರಿಯಲ್ಲಿ ನಡೆದು ಬಂದ ಚರ್ಮ ರೋಗ ತಜ್ಞ ಪ್ರಾಧ್ಯಾಪಕ ಡಾ ಪ್ಯಾಟ್ರಿಕ್ ಯೇಸುದಿಯನ್ . ಮದ್ರಾಸ್ ಮೆಡಿಕಲ್ ಕಾಲೇಜು ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ  ಕಿಲ್ಪಾಕ್ ನಲ್ಲಿ  ಕ್ಲಿನಿಕ್ ನಡೆಸುತ್ತಿದ್ದು  ,ಚಿತ್ರ ನಟನಟಿಯರು ,ರಾಜಕಾರಿಣಿಗಳು ಸೇರಿ ದಂತೆ  ಬಹು ಬೇಡಿಕೆಯ ವೈದ್ಯರು. ಆರ್ ಕೆ ಲಕ್ಷ್ಮಣ್ ನ ಕಾಮನ್ ಮ್ಯಾನ್ ನ ವ್ಯಕ್ತಿತ್ವ . ವೈದ್ಯಕೀಯ ಅಲ್ಲದೆ ಇತರ ಸಾಹಿತ್ಯವನ್ನೂ ಚೆನ್ನಾಗಿ ಓದಿ ಕೊಂಡಿದ್ದ ಇವರ ಭಾಷಣಗಳಲ್ಲಿ  ಅವುಗಳಿಂದ ಆಯ್ದ ನುಡಿ ಮುತ್ತುಗಳು ಸಹಜವಾಗಿ ಪುಂಖಾನುಪುಂಖವಾಗಿ ಬಂದು ಕೇಳುಗರ ಕಿವಿ ಮತ್ತು ಮನಕ್ಕೆ ಹಿತವಾಗಿರುತ್ತಿತ್ತು . ಚರ್ಮ ರೋಗ ನಿಧಾನದಲ್ಲಿ ನೋಡುವಿಕೆಗೆ ಆದ್ಯತೆ .ಹಲವು  ಅಪರೂಪದ ಕಾಯಿಲೆಗಳೂ ಸೇರಿ ಚರ್ಮ ರೋಗಗಳ  ಛಾಯಾಚಿತ್ರ ಗಳ  ಸ್ಲೈಡ್ ಗಳ  ಅಮೂಲ್ಯ ಸಂಗ್ರಹ ಅವರ ಬಳಿ ಇತ್ತು .ಆಗಿನ್ನೂ ಪವರ್ ಪಾಯಿಂಟ್ ಬಂದಿರಲಿಲ್ಲ . ಚರ್ಮ ರೋಗ ತಜ್ಞ ಕ್ಕಿಂತ ಹೆಚ್ಚಾಗಿ ಅವರು ಒಬ್ಬ ಪರಿಣತ ಫಿಸಿಷಿಯನ್ ಆಗಿದ್ದರು . ಒಳ ರೋಗಗಳು  ಚರ್ಮದಲ್ಲಿ  ಹಲ ರೂಪದಲ್ಲಿ ಪ್ರಕಟವಾಗುವದು ಸಾಮಾನ್ಯ; ಡಾ ಪ್ಯಾಟ್ರಿಕ್ ಅವುಗಳ ಜಾಡು ಹಿಡಿಯುವುದರಲ್ಲಿ ನಿಸ್ಸೀಮರು . 

ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ನಮ್ಮ ವಿಭಾಗ ಮುಖ್ಯಸ್ಥ ರಾಗಿದ್ದ  ಡಾ ಜಿ ಸಿ ರಾಜು ರವರು ನನ್ನ ಬಳಿ ಡಾ ಪ್ಯಾಟ್ರಿಕ್ ನಮ್ಮ ಆಸ್ಪತ್ರೆಗೆ ವಾರಕ್ಕೊಮ್ಮೆ ಕ್ಲಾಸ್ ತೆಗೆದು ಕೊಳ್ಳಲು ಬರಬಹುದೋ ಎಂದು ವಿಚಾರಿಸುವಂತೆ ಕೇಳಿದರು .ನಾನು ಅವರ ಕ್ಲಿನಿಕ್ ಗೆ ಹೋಗಿ ವಿನಂತಿಸಲು ತಮಗೆ ಪಾಠ ಮಾಡುವುದು ಇಷ್ಟ ವಾದರೂ ಸಮಯಾವಕಾಶ ಕಷ್ಟ ಎಂದು ಮೊದಲು ನಿರಾಕರಿಸಿದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ  ಕ್ಲಿನಿಕ್ ಗೆ ಪುನಃ ಪುನಃ ಎಡತಾಕಿ ಅವರನ್ನು ಒಪ್ಪಿಸಿದೆ . ಸ್ಲೈಡ್ ಸಹಿತವಾದ ಅವರ ಕ್ಲಾಸ್ ವರ್ತ್  ಗೋಲ್ಡ್ ಅನ್ನುತ್ತಾರಲ್ಲ ಹಾಗೆ . ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ,ಮೆಡಿಸಿನ್  ಎಲ್ಲಾ ಕರತಾ ಮಲಕ  . 

ಮೊನ್ನೆ ಇಂಟರ್ನೆಟ್ ನಲ್ಲಿ ಜಾಲಾಡುವಾಗ ಅವರ ಭಾಷಣಗಳ ಸಂಗ್ರಹವೊಂದನ್ನು  "All I should say to my young friends"ಎಂಬ ಶೀರ್ಷಿಕೆಯಲ್ಲಿ ಅವರ ವಿದ್ಯಾರ್ಥಿ ಡಾ ಮುರುಗಸುಂದರಂ ಪ್ರಕಟಿಸಿದ್ದಾರೆ ಎಂದು ತಿಳಿದು ಅದನ್ನು ತರಿಸಿ ಓದುತ್ತಿದ್ದೇನೆ . ಹಿಂದೆ ಅವರ ಉಪನ್ಯಾಸಗಳನ್ನು ಕೇಳಿದ ನೆನಪು ಮತ್ತೆ ಆಯಿತು . ಅವರ ಗುರು ಪ್ರೊ ತಂಬಯ್ಯ  ಆಗಾಗ ಉದ್ಧರಿಸುತ್ತಿದ್ದ  ಫ್ರಾನ್ಸಿಸ್ ಬೇಕನ್ ನ 'Reading makes a full man,Writing an exact man ,Conversation a ready man "ಉಲ್ಲೇಖ ಮಾಡಿ ವೈದ್ಯರಿಗೆ  ಓದುಬರೆಯುವಿಕೆ ಮತ್ತು ಸಂವಹನ ದ  ಪ್ರಾಮುಖ್ಯತೆ ಒತ್ತಿ ಹೇಳಿದ್ದಾರೆ .                                ಇದರಲ್ಲಿ ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ವೈದ್ಯ ವೈದ್ಯ ರ ನಡುವೆ ನೇರ ಸಂವಹನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ .ಒಬ್ಬ ರೋಗಿಯನ್ನು ಹಲವು ಸ್ಪೆಷಲಿಸ್ಟ್ ಗಳು ನೋಡುತ್ತಿದ್ದರೂ ಒಟ್ಟಾಗಿ ರೋಗಿಯ ಬಗ್ಗೆ ಕೂಡಿ ಚರ್ಚಿಸುವುದು ಕಡಿಮೆ ಆಗಿರುವುದು ದುರ್ದೈವ

ಸೋಮವಾರ, ಮಾರ್ಚ್ 24, 2025

ಅಗಲಿದ ಮಹಾ ಚೇತನ


 ಹಿರಿಯ ಚೇತನ ಬಲ್ನಾಡು ಸುಬ್ಬಣ್ಣ ಭಟ್ ಅವರು ನಿಧನರಾದ ವಾರ್ತೆ ಬಂದಿದೆ . ಸಾತ್ವಿಕ ಸಜ್ಜನ ಎಂಬ ಶಬ್ದಗಳಿಗೆ ಅನ್ವರ್ಥರಾಗಿ ಬಾಳಿ ಬದುಕಿದವರು . ಸರ್ವೇ ಜನಾ ಸುಖಿನೋಭವಂತು ಎಂದು ಸರ್ವರಿಗೂ ಉಳಿತನ್ನು ಬಯಸಿದವರು . 

ಒಳ್ಳೆಯ ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . ಇಂದ್ರ ಧನುಷ್ ,ವಿನೋದ ಇತ್ಯಾದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಸುಬ್ಬಣ್ಣನ ತ್ರಿಪದಿಗಳು ಓದುಗರ ಮೆಚ್ಚುಗೆ ಪಡೆದಿದ್ದವು . ಬಹಳ ಮಂದಿಗೆ ತಿಳಿದಿರದ  ಇವರ ಇನ್ನೊಂದು ಆಸಕ್ತಿ ಸಂಖ್ಯಾ ವಿಜ್ಞಾನ .

ನನ್ನಂತಹ ಕಿರಿಯರನ್ನು ಕೂಡಾ ಗುರುತಿಸಿ ಹರಸಿದವರು . ಇವರ ನೆನಪಿಗೆ ನೂರು ನಮನ 

ಶುಕ್ರವಾರ, ಫೆಬ್ರವರಿ 28, 2025

 ಸುಧೀರ್ಘ  ಪ್ರಾಮಾಣಿಕ ಸೇವೆಯ ನಂತರ ಶ್ರೀಮತಿ ಲೀಲಾವತಿ (ಲೀಲಕ್ಕ ) ಇಂದು ಸ್ವಯಮ್ ನಿವೃತ್ತಿ ಪಡೆಯುತ್ತಿದ್ದಾರೆ . ಪುತ್ತೂರಿನ  ಮಾತೆ ಡಾ ಗೌರಿ ಪೈ ಅವರ ಗಿರಿಜಾ ಕ್ಲಿನಿಕ್ ನಲ್ಲಿ ನರ್ಸಿಂಗ್ ಸಹಾಯಕರಾಗಿ ತರಬೇತು ಗೊಂಡು ಆ ಆಸ್ಪತ್ರೆಯಲ್ಲಿ ದಶಕಗಳ ಸೇವೆ ಸಲ್ಲಿಸಿ  ನಂತರ ನಮ್ಮ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ  ನಿರ್ವಹಣೆಯಲ್ಲಿ ಸಹಾಯಕಿ ಯಾಗಿದ್ದ ಇವರು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಚ್ಚು ಮೆಚ್ಚು . 

   ಸದಾ ನಗುಮುಖ ,ತಾಳ್ಮೆ ಮತ್ತು ಸಹಾನುಭೂತಿ ಇವರ ಜನಪ್ರಿಯತೆಯ ಗುಟ್ಟು . ತಮ್ಮಿಂದ ಅಥವಾ ತಮ್ಮ ಬಳಗದಿಂದ ಸಣ್ಣ ಲೋಪವಾದರೂ ಅದನ್ನು ಸಮರ್ಥಿಸ ಹೋಗದೆ  ಕ್ಷಮೆ ಕೇಳುವ ದೊಡ್ಡ ಮನಸು ಇವರದು . ರೋಗಿಗಳ ಸಂಬಂಧಿಕರು ಇವರನ್ನು ತಮ್ಮ ಆಪ್ತ ಬಳಗದವರು ಎಂದು ಪ್ರೀತಿಯಿಂದ ಗುರುತಿಸುವರು .ಗಿರಿಜಾ ಕ್ಲಿನಿಕ್ ನಲ್ಲಿ ಹುಟ್ಟಿ ಈಗ ನಮ್ಮಲ್ಲಿ ಹೆರಿಗೆಗೆ ಬರುವ ಮಹಿಳೆಯರ ಅಮ್ಮ ಅಜ್ಜಿ ಗೆ ಇವರು ಪರಿಚಿತರು . 

 ಆಸ್ಪತ್ರೆ ಸ್ವಾಗತ ಕಾರಿಣಿಯವರಲ್ಲಿ ಹಿರಿಯರಾದ ಇವರು ಮುಂಜಾನೆ ಬಂದೊಡನೆ ಕ್ರಿಕೆಟ್ ಕ್ಯಾಪ್ಟನ್ ನಂತೆ  ಓ ಪಿ ಡಿ  ಸುತ್ತ ಕಣ್ಣು ಹಾಯಿಸಿ  ಎಲ್ಲಿ ಎಲ್ಲಿ ಯಾವ ಫೀಲ್ಡರ್ ಆದೀತು ಎಂದು ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿರ್ಧರಿಸುವರು . ವೀಲ್ ಚೇರ್ ಇತ್ಯಾದಿ ಅವಶ್ಯ ವಿರುವವರಿಗೆ ಅದರ ವ್ಯವಸ್ಥೆ ಮಾಡುವರು . ತುರ್ತು ಇಸಿಜಿ ಇತ್ಯಾದಿ ಬೇಕಾದಲ್ಲಿ ತಾವೇ ಮಾಡಿ ತೋರಿಸುವರು . 

ಇಂತಹ ಮಾನವೀಯತೆ ಮೂರ್ತಿವೆತ್ತ ,ಪ್ರಾಮಾಣಿಕ ಲೀಲಕ್ಕ ಬಿಟ್ಟು ಹೋಗುವುದು ನಿಜಾರ್ಥದಲ್ಲಿ ತುಂಬಲಾರದ ನಷ್ಟ . ಅವರು ಮಾಡಿದ ಸೇವೆ ನಿಜಾರ್ಥದಲ್ಲಿ ದೇವರ ಸೇವೆ  ಮುಂದಿನ ದಿನಗಳು ಅರೋಗ್ಯ ಸುಖ ಶಾಂತಿಯಿಂದ ಇರಲಿ 



 








 

ಸೋಮವಾರ, ಡಿಸೆಂಬರ್ 16, 2024


ನಿನ್ನೆ ಮುಂಜಾನೆ ಪುತ್ತೂರಿನ ವಿವಿದೋದ್ಧೇಶ ತರಬೇತಿ ಸಂಸ್ಥೆ  ಐ ಅರ ಸಿ ಎಂ ಡಿ  ಯ ಆಶ್ರಯದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಬಾ ಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ . ಈ ಸಂಸ್ಥೆಯನ್ನು ನಡೆಸುವವರು ಉತ್ಸಾಹಿ ಯುವ ದಂಪತಿಗಳಾದ ಪ್ರಫುಲ್ಲ ಮತ್ತು ಗಣೇಶ್ . ಹೆಚ್ಚಾಗಿ ನನಗೆ ಸಂಬಂಧ ಪಡದ ಸಭೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತೇನೆ . ಆದರೆ ಈ ದಂಪತಿಗಳು ದಶಕದಿಂದ ನನ್ನ ಆತ್ಮೀಯ ವಲಯದಲ್ಲಿ ಇರುವ ಕಾರಣ ಕೇಳಿದ ಒಡನೇ ಒಪ್ಪಿಕೊಂಡೆ . 

ನಮಗೆ ಅಬಾಕಸ್ ನಂತಹ ಬೌದ್ಧಿಕ ಮೌಲ್ಯ ವರ್ಧನೋಪಾಯ ಶಿಕ್ಷಣ ಇರಲಿಲ್ಲ .ತಾಯಿ ಯವರ ಮಾರ್ಗದರ್ಶನ ದಲ್ಲಿ  ಇಪ್ಪತ್ತು ಇಪ್ಪಾತ್ಲಿ   (೨೦X ೨೦)ವರೆಗೆ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಿನ ವರೆಗೆ ಬಾಯಿಪಾಠ ಆಗಿದ್ದು ,ಈಗ ಕೂಡಾ ಕ್ಯಾಲ್ಕುಲೇಟರ್ ಇಲ್ಲದೇ ಸಣ್ಣ ಪುಟ್ಟ ಕೂಡು ಕಳೆ ಗುಣಿಸು ಮಾಡಬಲ್ಲೆ . ಕ್ಯಾಲ್ಕುಲೇಟರ್ ಈಗ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ  ಪ್ರಾಚೀನ ರೂಪ . ಕೃತಕ ಬುದ್ದಿಮತ್ತೆ  ಯ  ಮೇಲೆ ಪೂರ್ಣ ಅವಲಂಬಿಸಿದರೆ ನೈಸರ್ಗಿಕ ಬುದ್ದಿ ಕುಂಠಿತ ವಾಗ ಬಹುದು . 

ನಿನ್ನೆಯ ಸಭೆಯಲ್ಲಿ ಮದ್ರಾಸ್ ಐ ಐ ಟಿ ಯ ಶ್ರೀ ಸಾಯಿ ಗಣೇಶ್ ಮತ್ತು ಬೆಂಗಳೂರು ಜಿ ಕೆ ವಿ ಕೆ ಯ ಡಾ ಅಶೋಕ್ ಕುಮಾರ್ ಅವರ ಪರಿಚಯ ಆಯಿತು . ಈ ಯುವ ಪ್ರತಿಭಾವಂತರು ಪುಟ್ಟ ಮಕ್ಕಳಿಗೆ ಸ್ವಯಂ ಆಸಕ್ತಿಯಿಂದ  ಗಣಿತ ದಂತಹ ವಿಷಯ ಹೇಳಿಕೊಡುತ್ತದ್ದರು ಎಂದು ತಿಳಿಯಿತು .ಸಣ್ಣ ಮಕ್ಕಳಿಗೆ ಕಳಿಸುವುದು ಕಷ್ಟ ಮತ್ತು ತಾಳ್ಮೆ ಬೇಕು . ತಮ್ಮ ಆತ್ಮ ತೃಪ್ತಿಗಾಗಿ  ವಿದ್ಯರ್ಥಿಗಳನ್ನು ಹುಡುಕಿ ಕಲಿಸುವುದು ಮೆಚ್ಚ ಬೇಕಾದದ್ದು . 

ಶನಿವಾರ, ಡಿಸೆಂಬರ್ 14, 2024

 Dr Dhal Singh Chandel on X ...


ನನ್ನ ತಂಗಿ ಪದ್ಮಾವತಿ ಪುತ್ತೂರು ಪಾಂಗಾಳಾಯಿ ಯಲ್ಲಿ  ಹೊಸ ಮನೆ ನಿರ್ಮಿಸಿದ್ದು ತಿಂಗಳ ಹಿಂದೆ ಸರಳವಾಗಿ ಗೃಹ ಪ್ರವೇಶ ಮಾಡಿದ್ದರು . ಅಣ್ಣನಾದ ನನಗೂ ಆಹ್ವಾನವಿರಲಿಲ್ಲ ;ಅಂತ ನನಗೇನೂ ಬೇಸರವಿಲ್ಲ . ಒಂದನೆಯದಾಗಿ ಇದು ಎರಡನೇ ಮನೆ ಒಕ್ಕಲು .ಎರಡನೆಯದು ಗೃಹ ಪ್ರವೇಶದ  ಪ್ರಯುಕ್ತ ಕುಶಲ ಸಂಘದ ವಿಶೇಷ ಅಧಿವೇಶನ ,ಉಪಹಾರ ಸಹಿತ . ಪುತ್ತೂರಿನಲ್ಲಿ ನಗೆ ಪ್ರಿಯರ ಕೂಟ ಇದ್ದು ಅದರ ಪ್ರಧಾನ ಕಚೇರಿ  ,ಸರ್ವ ಜನಹಿತ ಸಂಘಟನೆಗಳಿಗೂ ಆಶ್ರಯ ತಾಣ ವಾದ  ಅನುರಾಗ ವಠಾರ (ಪುರಂಧರ ಭಟ್ ಮಾಳಿಗೆ  ಮನೆ ).ರಾಜೇಶ್ ಪ್ರೆಸ್  ರಘುನಾಥ ರಾಯರು ,ಸುಧಾಮ ಕೆದಿಲಾಯ ,ತುಳಸೀದಾಸ್ ,ಸುಬ್ರಹ್ಮಣ್ಯ ಶರ್ಮ ,ಶಂಕರಿ ಶರ್ಮ,ದತ್ತಾತ್ರೇಯ ರಾವ್  .ಅರ್ತಿಕಜೆ ದಂಪತಿಗಳು ,ರಮೇಶ ಬಾಬು ಇತ್ಯಾದಿ ಹಿರಿಯರು ಇದರಲ್ಲಿ ಇದ್ದಾರೆ . ನಕ್ಕು ಹಗುರಾಗುವ ವೇದಿಕೆ

ಈ ತಂಗಿ ಸಣ್ಣವಳಿರುವಾಗ ಜಡೆಗೆ ಸಿಕ್ಕಿಸುವ ಒಂದು ಐಟಂ ಬಂತು . ಎರಡು ಗೋಲಿಗಳನ್ನು ಒಂದು ಬ್ಯಾಂಡಿನಲ್ಲಿ ಕಟ್ಟಿ ಅದರ ನಡುವೆ ಜಡೆ . ಆಗೆಲ್ಲಾ ಶಾಲೆಗೆ ಹುಡುಗಿಯರು ಎರಡು ಜಡೆ ಹಾಕಿಕೊಂಡು ಹೋಗುವುದು . ಈ ವಸ್ತುವಿಗೆ ಲವ್ ಇನ್ ಟೋಕಿಯೋ ಎಂದು ಕರೆಯುತ್ತಿದ್ದರು . ಆ ಹೆಸರಿನ  ಸಿನಿಮಾ ನಾಯಕಿ ಅದನ್ನು ಹಾಕಿಕೊಂಡಿದ್ದ ಕಾರಣ ಇರಬೇಕು .ನನ್ನ ಅಕ್ಕ ತಂಗಿಯರ ಬಾಯಲ್ಲಿ ಅದು ಲವಿನ್ ಟಕಿ ಅದು ಹೃಸ್ವ ವಾಯಿತು . ಒಮ್ಮೆ ತಂದೆಯವರು ವಿಟ್ಲ ಪೇಟೆಗೆ ಹೋಗುವಾಗ ತಮಗೂ ಅದನ್ನು ತಂದು ಕೊಡುವಂತೆ ದುಂಬಾಲು ಬಿದ್ದರು . ತಂದೆಯವರು  ವಿಟ್ಲ ಪುತ್ತು  ಆಚಾರ್ರ ಫ್ಯಾನ್ಸಿ ಸ್ಟೋರಿಗೆ ತಲುಪುವಾಗ ಅದರ ಹೆಸರು ಟಂಗ್  ಟಕಿ ಎಂದು ಆಯಿತು .ಆದರೂ ಬೇಕಾದ ವಸ್ತು ತೊಂದರೆಯಿಲ್ಲದೇ ಬಂತು . 

ನಮ್ಮ ತಾಯಿ ತುಂಬಾ ಕಟ್ಟು ನಿಟ್ಟು . ಜೋಕ್ ಮಾಡಿಕೊಂಡು ಜೋರಾಗಿ ನಗುತ್ತಿದ್ದರೆ ,ಕಣ್ಣು ಅರಳಿಸಿ "ಎಂತ ಹೆದರಿಕೆ ಇಲ್ಲದ ನಗೆ "ಎಂದು ಗದರಿಸುವರು .ನನ್ನ ಮೇಲಂತೂ ಅವರಿಗೆ ಯಾವಾಗಲೂ ಅಪ ಧೈರ್ಯ .ಎಲ್ಲಿಗೆ ಹೋಗುವಾಗಲೂ ಬೆಗುಡು ಬೆಗುಡು ಮಾತನಾಡ (ಅಂದರೆ ಅತಿ ಹಾಸ್ಯ ಬೇಡ )..ಅವರು ಮನಸು ತೆರೆದು ನಕ್ಕದ್ದು ನಾನು ಕಂಡಂತೆ  ಬೆಂಗಳೂರಿಗೆ ವಾಲ್ವೊ ಬಸ್ ನ  ವಿಡಿಯೋ ದಲ್ಲಿ ಕಾಮನ ಬಿಲ್ಲು ಸಿನಿಮಾ ದಲ್ಲಿ ರಾಜಕುಮಾರ್ ಅಳುತ್ತಿರುವ ಮಗುವಿಗೆ ಸೀರೆ ಉಟ್ಟು ಬಾಟ್ಲಿ ಹಾಲು ಕುಡಿಸುವ ದೃಶ್ಯ ನೋಡಿ . ಹಾಗೆ ನಮ್ಮ ಹಾಸ್ಯ ಪ್ರಜ್ಞೆ ಸುಪ್ತಾವಸ್ಥೆ ಯಲ್ಲಿ ಇದ್ದು ಈಗ ಪ್ರದರ್ಶನ ಗೊಳ್ಳುತ್ತಿವೆ . ತಾಯಿಗೆ ನಾವು ಹತ್ತು ಮಕ್ಕಳು ,ನಮ್ಮನ್ನೆಲ್ಲಾ  ಒಂದು ದಾರಿಗೆ ತರಬೇಕಾದರೆ ಅವರು ಪಟ್ಟ ಪಾಡು ಊಹಿಸಿ ಕೊಳ್ಳಿ ..ಗಂಡು ಹುಡುಗರಿಗೆ ಬೆತ್ತದ ರುಚಿ ತೋರಿಸುತ್ತಿದ್ದರೂ ಹುಡುಗಿಯರು ಮದುವೆಯಾಗಿ ಹೋಗುವವವರು ಎಂದು ವಿನಾಯತಿ ಇತ್ತು

ಭಾನುವಾರ, ಡಿಸೆಂಬರ್ 8, 2024

  ಪಾಸ್ ಫೈಲ್ 

ನಾವು ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಸಮಯ; ದೊಡ್ಡ ರಜೆ ಕಳೆದು ತರಗತಿ ಆರಂಭವಾಗುವ ದಿನ ಈಗಿನಂತೆ ವಿದ್ಯಾರ್ಥಿಗಳನ್ನು  ಸ್ವಾಗತಿಸುವ ಪರಿಪಾಡಿ ಇರಲಿಲ್ಲ . ಕ್ಲಾಸ್ ಅಧ್ಯಾಪಕರು ಹಾಜರಿ ಪಟ್ಟಿಯಿಂದ ಹೆಸರು ಕೂಗಿ ಕರೆಯುವರು .ಅವರೆಲ್ಲಾ ಪಾಸ್ .ತಮ್ಮ ಸ್ಲೇಟು ಕಡ್ಡಿ ಸರಂಜಾಮು ಹೊತ್ತುಕೊಂಡು ಮೇಲಿನ ಕ್ಲಾಸ್ ಇರುವ ಕೊಠಡಿಗೆ ಹೋಗಬೇಕು . ಹೆಸರು ಕರೆಯದೇ ಇದ್ದವರು  ಫೈಲು . ಯಾರೆಲ್ಲ ಫೈಲು ಕೊನೆಗೇ ತಿಳಿಯುವುದು .ನಮ್ಮ ಮಿತ್ರರು ಪಾಸ್ ಆಗದಿದ್ದರೆ ಅವರ ಜತೆ ತಪ್ಪುವುದು ಎಂಬ ಬೇಸರ . ಆ ದಿನ ಕ್ಲಾಸ್ ಇಲ್ಲ . ಮರಳುವ ದಾರಿಯಲ್ಲಿ ಹೊಲಗದ್ದೆಯಲ್ಲಿ ಕೆಲಸ ಮಾಡುವವರು ಎಲ್ಯಣ್ಣೇರ್ ಪಾಸಾ ಎಂದು ಕೇಳುವರು . ಪಾಸಾಗಲಿ ಫೈಲು ಅಗಲೀ ಈಗಿನ ಹಾಗೆ ಹೊಗಳಿ ಏರಿಸುವ ಅಥವಾ ಹೀಗೆಳೆಯುವ ಪದ್ಧತಿ ಇರಲಿಲ್ಲ . ಫಲಿತಾಂಶ ದಿಂದ ಹತಾಶೆ ಗೊಂಡು ಆತ್ಮ ಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು .ಈಗಿನ ಸರಕಾರಿ ಶಾಲೆಗಳಂತೆ ಕಡ್ಡಾಯ  ಹೋಲ್ ಸೇಲ್ ಪಾಸ್ ಮಾಡುವ ಪದ್ಧತಿ ಇರಲಿಲ್ಲ . 

ಪಾಸ್ ಆದರೆ ಮೇಲ್ತರಗತಿಯಲ್ಲಿ ಇರುವ ನಮ್ಮ ಮಿತ್ರರ ಬಳಿ ಅವರ ಉಪಯೋಗಿಸಿದ ಟೆಕ್ಸ್ಟ್ ಬುಕ್ ಅರ್ಧ ಬೆಲೆಗೆ ಖರೀದಿಸುತ್ತಿದ್ದೆವು . ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಪಠ್ಯ ಪುಸ್ತಕ ಬದಲಾಗುತ್ತಿದ್ದವು . ನಾನು ನನ್ನ ಸೀನಿಯರ್  ಮುದ್ಕುಂಜ ದಿವಾಕರ ಪ್ರಭುಗಳ ಬಳಿ  ಪುಸ್ತಕ ಕೊಳ್ಳುತ್ತಿದ್ದೆ .ಅವರು ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದರು

ಹೈ ಸ್ಕೂಲ್ ನಲ್ಲಿ ಕೂಡಾ ಇದೇ ರೀತಿ ಇತ್ತು . ಎಸ ಎಸ ಎಲ್ ಸಿ ಪರೀಕ್ಷೆ ಫಲಿತಾಂಶ ನವಭಾರತ ದಿನ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗುತ್ತಿತ್ತು .ಶಾಲೆಗೆ ಆಮೇಲೆ ಬರುತ್ತಿತ್ತು ಎಂದು ನೆನಪು . ಪೇಪರ್ ನಲ್ಲಿ ಮೊದಲು ಫಸ್ಟ್ ಕ್ಲಾಸ್ ನ ಅಡಿಯಲ್ಲಿ ,ಆಮೇಲೆ ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಕೆಳಗೆ ನಮ್ಮ ನಂಬರ್ ಇದೆಯೇ ಎಂದು ಹುಡುಕುತ್ತಿದ್ದೆವು .

ಶನಿವಾರ, ಡಿಸೆಂಬರ್ 7, 2024

ಯಾನ್ಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ 

ಇಂದು ಕುಕ್ಕೆ ಷಷ್ಟಿ . ಷಷ್ಟಿ ಸಮಯ ಸುಬ್ರಹ್ಮಣ್ಯದ ಬಳಿ ಕುಳ್ಕುಂದ ದಲ್ಲಿ ಜಾನುವಾರು ಸಂತೆ ನಡೆಯುತ್ತಿತ್ತು . ಘಟ್ಟದ ಮೇಲಿನಿಂದ ದನ ,ಎತ್ತು ,ಎಮ್ಮೆ ಮತ್ತು ಕೋಣಗಳನ್ನು ತಂದು ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದು ನಮ್ಮ ಜಿಲ್ಲೆಯ ರೈತರು ತಮಗೆ ಬೇಕಾದ ರಾಸುಗಳನ್ನು ಖರೀದಿಸಿ ಒಯ್ಯುತ್ತಿದ್ದರು . ಜಾತ್ರೆಗಾಗಿ ಪಶುಗಳನ್ನು ಪೋಷಿಸಿ ದಷ್ಟ ಪುಷ್ಟ ರನ್ನಾಗಿಸುತ್ತಿದ್ದಲ್ಲದೆ , ಕೊಂಬು ಕಿವಿ,ಮೂಗಿಗೆ ಅಲಂಕಾರ ಮಾಡಿರುತ್ತಿದ್ದರು. ಕೋಣಗಳ ಮೈಯ್ಯಿಂದ ಕೂದಲು ತೆಗೆದು ಎಣ್ಣೆ ಹಚ್ಚಿ ಫಳ ಫಳ ಹೊಳೆಯುವಂತೆ ಮಾಡುತ್ತಿದ್ದರು.  ಬ್ಯೂಟಿ ಪಾರ್ಲರ್ ನಿಂದ ಹೊರ ಬಂದ ಪಶುಯಗಳಂತೆ .ಉಳುಮೆಗಾಗಿ ಎತ್ತು ಮತ್ತು ಕೋಣಗಳ ಜೋಡಿಯನ್ನು ಅವರೇ ಮಾಡಿ ತರುತ್ತಿದ್ದು ಆಯ್ಕೆ ಸುಲಭ . ಸುಬ್ರಹ್ಮಣ್ಯದ ಜೋಡಿ ಬಹಳ ಪ್ರಸಿದ್ದ .ಅದಕ್ಕೇ ಒಂದು ತುಳು ಚಲ ಚಿತ್ರದಲ್ಲಿ ಯಾನುಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ ಎಂಬ ಪ್ರೇಮ ಗೀತೆ ಇದೆ . 

         ಕುಳ್ಕುಂದ ಜಾತ್ರೆಗೆ ನಾನು ಬಾಲ್ಯದಲ್ಲಿ ತಂದೆಯವರ ಜೊತೆಗೆ ಹೋದ ನೆನಪು ಇದೆ . ಅಲ್ಲಿ ಗೋಣಿ ಚೀಲ ಹಾಸಿ ಕೊಂಡು , ಚಳಿಗೆ (ಷಷ್ಟಿ ಸಮಯ ಭಾರೀ ಚಳಿ ಇರುತ್ತಿತ್ತು )ಕಂಬಳಿ ಹೊದ್ದು ಚಹಾ ಹೀರುತ್ತಿರುವ ಘಟ್ಟದ ಮೇಲಿನ ಕನ್ನಡ ಮಾತನಾಡುವ ವ್ಯಾಪಾರಿಗಳು .ಅವರೊಡನೆ  ಚೌಕಾಸಿ ಮಾಡುತ್ತಿರುವ ಗಿರಾಕಿಗಳು .ಹಿಂದೆ ಖರೀದಿಸಿದ ಜಾನುವಾರುಗಳನ್ನು ರಸ್ತೆ ಗುಂಟ ನಡೆಸಿ ಕೊಂಡೇ ಮನೆಗೆ ಬರುತ್ತಿದ್ದು ,ಕಾಲಾಂತರ ದಲ್ಲಿ ಟೆಂಪೋ ಗಳು ಬಳಕೆಗೆ ಬಂದವು

ಜಾನುವಾರು ಗಳಲ್ಲದೆ , ವಿವಿಧ ವಿನ್ಯಾಸದ ಕಂಬಳಿಗಳು , ಪಶು ಅಲಂಕಾರ ಸಾಧನಗಳು ಕೂಡಾ ಜಾತ್ರೆಯಲ್ಲಿ ಸಿಗುತ್ತಿದ್ದವು .

ನಿನ್ನೆ ಫೇಸ್ ಬುಕ್ ನಲ್ಲಿ ಸಹೋದರಿ ಒಬ್ಬರು ಜಯಂತ ಕಾಯ್ಕಿಣಿ ಯವರನ್ನು ಉಲ್ಲೇಖಿಸಿ ,"ಹೇಳಿ ಮಾಡಿಸಿದ ಜೋಡಿ ಎಂದರೆ ಚಪ್ಪಲಿ ಮಾತ್ರ ,ಬೇರೆಲ್ಲಾ ಹೋದಣಿಕೆ ಮಾತ್ರ " ಎಂಬ ಮಾತನ್ನು ಷೇರ್ ಮಾಡಿದ್ದು  ಸತ್ಯ ಎನಿಸಿತು .

ಮಂಗಳವಾರ, ಡಿಸೆಂಬರ್ 3, 2024

ಕಣ್ಣೀರ ಕತೆ

  



ಈರುಳ್ಳಿ ಅಥವಾ ನೀರುಳ್ಳಿ ಈಗ  ಹಚ್ಚದೇ ಕಣ್ಣೀರು ತರಿಸುತ್ತಿದೆ . ಎಲ್ಲಿಯೂ ಒಳ್ಳೆಯ ನೀರುಳ್ಳಿ ಸಿಗುತ್ತಿಲ್ಲ .ಸಿಕ್ಕರೂ ದರ ಕೇಳಿಯೇ ಕಣ್ಣೀರು ಬರುವಂತಿದೆ . ನಮ್ಮ ಆಸ್ಪತ್ರೆ ಇರುವ ಎ ಪಿ ಎಂ ಸಿ ರಸ್ತೆಯಲ್ಲಿ ಹಲವು ಜೀನಸು ಅಂಗಡಿಗಳು ಇದ್ದು ,ಎಲ್ಲಾ ಕಡೆ ಎಡ ತಾಕಿದೆ . ಕೆಲವು ಅಂಗಡಿಗಳು ಈ ಐಟಂ ತರಿಸುವುದೇ ನಿಲ್ಲಿಸಿವೆ . ಕಾರಣ ಬರುತ್ತ್ತಿರುವ ಮಾಲು ಕಳಪೆ ಮಟ್ಟದ್ದು .ಇನ್ನು ಕೆಲವು ಅಂಗಡಿಗಳು ಸಾಂಬಾರ್ ಈರುಳ್ಳಿ ಎಂಬ ಸಣ್ಣ ನೀರುಳ್ಳಿ ಮಾತ್ರ ಮಾರುತ್ತಿವೆ . ನಾನು ಯಾವ ವ್ಯವಹಾರಕ್ಕೂ ನಾಲಾಯಕ್ಕು ಆಗಾಗ ನನ್ನ ಮನೆಯವರು ಸೋದಾಹರಣ ಹೇಳಿ ಹೇಳಿ ನನ್ನಲ್ಲಿ ಕೀಳರಿಮೆ ಉಂಟು ಮಾಡಿರುತ್ತಾರೆ . ಅದನ್ನು ಹುಸಿ ಮಾಡಲು ಎಂದು ಪುತ್ತೂರಿನ ಸರ್ವ ಮಾಲ್ ,ಮಾರ್ಟ್ ಮತ್ತು ಅಂಗಡಿಗಳಿಗೆ ಭೇಟಿ ನೀಡಿದೆ .ಆದರೆ ವಧು ಅನ್ವೇಷಿಸುವ ಊರಿನ ಕೃಷಿಕ  ಯುವಕರ ಸ್ಥಿತಿ ಆಯಿತು .ಎಲ್ಲಿಯೂ ಒಳ್ಳೆಯ ನೀರುಳ್ಳಿ  ಪತ್ತೆ ಇಲ್ಲ . ಕೊನೆಗೆ ಮೊನ್ನೆ ಸೋಮವಾರ ಪುತ್ತೂರು ಸಂತೆ ಗೆ ಭೇಟಿ ಇತ್ತು ಎರಡು ಸುತ್ತು ಹೊಡೆದೆ . ಕೋವಿಡ್ ನಂತರ ಸಂತೆಗೆ ಭೇಟಿ ಇದುವೇ ಮೊದಲು . ಅಲ್ಲಿ ನನ್ನ ಕೆಲವು ರೋಗಿಗಳು ನನ್ನನ್ನು ನೋಡಿ ನಮಸ್ಕಾರ ಮಾಡಿ ಕನಿಕರ ಸೂಚಿಸಿದರು .'ಪಾಪ ಡಾಕ್ಸ್ರಿಗೆ ಪ್ರಾಕ್ಟೀಸ್ ಕಮ್ಮಿ ಆಗಿರ ಬೇಕು ,ಕಡಿಮೆಗೆ ತರಕಾರಿ  ಕೊಳ್ಳ್ಳುವಾ ಎಂದು ಬಂದಿರ ಬೇಕು ' ಎಂಬ ಮುಖ ಭಾವ .. 

ಕೊನೆಗೂ ಒಂದು ಮೂಲೆಯಲ್ಲಿ ಉರ್ದು ಮಾತನಾಡುವ ಸಾಹೇಬರಲ್ಲಿ ಪರವಾಗಿಲ್ಲ ಎನ್ನುವ ಮಾಲು ಕಂಡಿತು . ಕಿಲೋ ವಿಗೆ ರೂಪಾಯಿ ಅರುವತ್ತರಂತೆ ೫ ಕೆಜಿ ಕೊಂಡು ,ದಿಗ್ವಿಜಯ ಸಾದಿಸಿದವರಂತೆ ಪಕ್ಕದ ಅಂಗಡಿಯಿಂದ ಸೌತೆ ,ಬದನೆ ,ಹೀರೆ ಮತ್ತು ಮೂಲಂಗಿ ಚೀಲಕ್ಕೆ ಸೇರಿಸಿ ಕೊಂಡು ಆಸ್ಪತ್ರೆಗೆ ಹೋದೆ ದಿನವಿಡೀ ನೀರುಳ್ಳಿ ಚಿತ್ತನಾಗಿದ್ದೆ . 

ಸಂಜೆ  ಮನೆಗೆ ಸೇರಿದಾಗ ಸೈಕ್ಲೋನ್ ಮಳೆ ಆರಂಭವಾಗಿತ್ತು   ಹೆಂಡತಿಯ ಎದುರು ನೀರುಳ್ಳಿ ಇಟ್ಟು  ಮೀಸೆ ತಿರುವಾ (ನನಗೆ ಮೀಸೆ ಇಲ್ಲ ) ಎಂದು ಕರೆದರೆ ಅವಳು ಮಹಡಿಯಲ್ಲಿ ಕಿಟಿಕಿ ಬಳಿ ನೀರು ಬೀಳುವುದನ್ನು ನೋಡುತ್ತಿದ್ದಳು .ನೋಡಿ ಮಳೆಗಾಲದಲ್ಲಿ  ನೀರು ಸೋರಿ ಗೋಡೆ ಒದ್ದೆಯಾಗುವುದಕ್ಕೆ ನಾನು ನಿನ್ನೆಯಷ್ಟೇ ಹಾಕಿದ ಲೀಕ್ ಪ್ರೂಫ್ ಲೇಪ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ . ನಾನು ನೀರುಳ್ಳಿ ನೀರುಳ್ಳಿ ಎಂದೆ ."ಎಂತದ್ದು ಮಾರಾಯರೆ ನಿಮ್ಮ ನೀರುಳ್ಳಿ . ನಾನು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ .ಒಂದು ದಿನವಾದರೂ ನನ್ನ ಕಾರ್ಯ ನೀವು ಗುರುತಿಸಿ ಪ್ರಶಂಸೆ ಮಾಡಿದ್ದುಂಟಾ .ಇದು ಎಂತ ನೀರುಳ್ಳಿ ?ಎಲ್ಲಾ ಹುಟ್ಟಿದೆ ."ಎಂದು ನನ್ನ ಉಬ್ಬಿದ ನನ್ನ ಬಲೂನ್ ಗಾಳಿ  ತೆಗೆದಳು . 

ಈ ನೀರುಳ್ಳಿ ಸಾಮಾನ್ಯ ಎಂದು ಭಾವಿಸ ಬೇಡಿ .ದೆಹಲಿಯಲ್ಲಿ ಜನಪ್ರಿಯ ನಾಯಕಿ ದಿ ಸುಷ್ಮಾ ಸ್ವರಾಜ್ ಇದರ ಸಮಸ್ಯೆಯಿಂದ ತಮ್ಮ ಮುಖ್ಯ ಮಂತ್ರಿ ಪದವಿಯನ್ನೇ ಕಳೆದು ಕೊಂಡು ,ಇಲ್ಲಿಯ ವರೆಗೆ ಅವರ ಪಕ್ಷಕ್ಕೆ ಅಲ್ಲಿ ಅಧಿಕಾರ ಮರೀಚಿಕೆಯಾಗಿಯೇ ಉಳಿದಿದೆ 

ಮಾತಿನ ಸಂಕೀರ್ಣತೆ

                                                                  Tool Module: The Human Vocal ApparatusSpeech and Brain | direct                                                                                                                    

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ನಾಲಿಗೆ ಎಂದು ದಾಸರು ಹಾಡಿದ್ದು ವಿನಾ ಕಾರಣ   ಕೆಟ್ಟದ್ದನ್ನು ಆಡುವವರಿಗೆ . ಇಲ್ಲಿ ನಾಲಿಗೆ ಯನ್ನು ಮಾತಿನ ಮುಖ್ಯ ಅಂಗ ಎಂದು ವಾಚ್ಯವಾಗಿ ಇದ್ದರೂ ಆಡುವವನನ್ನೇ ಪೂರ್ಣ ಉದ್ದೇಶಿಸಿ ಇರುವುದು . ಸಾಮಾನ್ಯ ತಿಳುವಳಿಕೆ ಇರುವಂತೆ  ನಾಲಿಗೆ ಮಾತಿನ ಮೂಲ ಅಲ್ಲ  ಅಲ್ಲದೆ ಏಕ ಮಾತ್ರ ಅಂಗವೂ ಅಲ್ಲ . 

ವಾಚ್ಯ ಮಾತಿನ ಉಗಮ ಎಡ ಮುಮ್ಮೆದುಳಿನಲ್ಲಿ .ಇಲ್ಲಿ ಬ್ರೋಕ ನ ಕೇಂದ್ರ (ಕಂಡು ಹಿಡಿದ ಫ್ರೆಂಚ್ ವಿಜ್ಞಾನಿ ಹೆಸರು )ಎಂದು ಇದ್ದು ಇಲ್ಲಿ ಆಡುವ ಮಾತಿನ ಕ್ರಿಯಾತ್ಮಕ ಸಂದೇಶ ರಚನೆ ಆಗಿ ನರಗಳ ಮೂಲಕ ಅದು ಕೊರಳಲ್ಲಿ ಇರುವ ಧ್ವನಿ ಪೆಟ್ಟಿಗೆಯ ಮಾಂಸ ಖಂಡಗಳಿಗೆ ರವಾನೆ ಆಗುತ್ತದೆ . ಆದೇಶ ಕ್ಕನುಸಾರ ಸ್ವರ ತಂತುಗಳು ಕಂಪಿಸಿ ಸ್ವರೋತ್ಪಾದನೆ ಆಗುವುದು , ನಮ್ಮ ಆಡಿಯೋ ಸ್ಪೀಕರ್ ಗಳ ಮುಖ್ಯ ಪೆಟ್ಟಿಗೆ ಯಲ್ಲಿ ಆದಂತೆ . ಉತ್ಪಾದಿತ ಶಬ್ದಗಳ ಮೌಲ್ಯ ವರ್ಧನೆ ನಾಲಿಗೆ  ,ಬಾಯಿ ,ಹಲ್ಲುಗಳ ಮೂಲಕ ಆಗುವುದಲ್ಲದೆ ,ಮೂಗಿನ ಪಾರ್ಶ್ವಗಳಲ್ಲಿ  ಮೂಳೆಗಳಲ್ಲಿ  ಖಾಲಿ ಪೆಟ್ಟಿಗೆ ಯಂತೆ ಇರುವ ಸೈನಸ್ (ಇವು ಸೌಂಡ್ ಸಿಸ್ಟಮ್ ನ  ಸ್ಪೀಕರ್ ಪೆಟ್ಟಿಗೆ ಗಳಂತೆ ಕಾರ್ಯ ನಿರ್ವಹಿಸುತ್ತವೆ )ಗಳಲ್ಲಿ ಆಗುತ್ತದೆ . 

ಆಲಿಸಿದ ಮಾತನ್ನು ಗ್ರಹಣ ಮಾಡುವ ಮೆದುಳಿನ ಕೇಂದ್ರ ಕ್ಕೆ  ವರ್ನಿಕೆ ಕೇಂದ್ರ ಎನ್ನುವರು .ಇದು ಬ್ರೋಕನ ಜಾಗಕ್ಕಿಂತ ಸ್ವಲ್ಪ ಹಿಂದುಗಡೆ ಇದ್ದು ಕಿವಿ ಮೂಲಕ ಆಲಿಸಿದ ಮಾತಿನ ಗ್ರಹಣ ಮಾಡುತ್ತದೆ . ಇಲ್ಲಿಂದ ಬ್ರೋಕನ ಜಾಗಕ್ಕೆ ಸಂಪರ್ಕ ಇದೆ . ಮಾತನ್ನು ಉತ್ಪಾದಿಸುವ ಮತ್ತು ಗ್ರಹಿಸುವ ಎರಡು ಮುಖ್ಯ  ವಿಭಾಗ ಗಳು ಇವೆ ಎಂದು ತಿಳಿಯಿತಲ್ಲಾ . 

ಮೆದುಳಿನಲ್ಲಿ  ರಕ್ತ ಹೆಪ್ಪ್ಪು ಗಟ್ಟುವುದು ಅಥವಾ ರಕ್ತ ಸ್ರಾವ ವಾಗಿ ಬ್ರೋಕನ ಕೇಂದ್ರದ ಕೆಲಸ ವ್ಯತ್ಯಯ ಆದರೆ(ಆಡುವ ) ಮಾತು ಬಿದ್ದು ಹೋಗುವುದು . ಕೇಳಿದ್ದು ಅರ್ಥ ಆಗ ಬಹುದು . ವರ್ನಿಕೆ ಕೇಂದ್ರ ಕ್ಕೆ ಮಾತ್ರ  ತೊಂದರೆ ಆದರೆ ಆಡುವ ಮಾತು ಬೀಳದು .ಆದರೆ ಆಡಿದ ಮಾತಿಗೆ ಅರ್ಥವಿರದು . ನಮ್ಮ ಬಲ ಭಾಗದ ಅವಯವಗಳ ನಿಯಂತ್ರಣ ಎಡದ ಮೆದುಳಿನಲ್ಲಿ ಇರುವುದರಿಂದ ಸಾಮಾನ್ಯವಾಗಿ  ಬಲ ಪಾರ್ಶ್ವ ವಾತ ಆದಾಗ ಮಾತೂ ಬೀಳುವುದು . 

ಧ್ವನಿ ಪೆಟ್ಟಿಗೆ ಯ ಕ್ಯಾನ್ಸರ್ ,ಅಥವಾ ನರ ದೌರ್ಬಲ್ಯ ಆದರೆ ಮಾತಿನ ಉತ್ಪಾದನೆ ಸರಿಯಾಗಿ ಆದರೂ ಶಬ್ದ ಗಳು ಹೊರಡವು .

ಸೋಮವಾರ, ಡಿಸೆಂಬರ್ 2, 2024

ಸಹಿ ನೆನಪಿನ ಸಿಹಿ

ನನ್ನ ಪತ್ನಿ ಶ್ರಮ ಜೀವಿ ಮತ್ತು ಸದಾ ಕ್ರಿಯಾ ಶೀಲೆ . ಏನಾದರೂ ಮಾಡುತಿರು ತಮ್ಮ ಎಂದು ಕವಿ ಹೇಳಿದ ರೀತಿ . ಹಾಗೆ ಮೊನ್ನೆ ನನಗೆ ಬ್ಯಾಂಕ್ ನಿಂದ  ಕೆ ವೈ ಸಿ ಅಪ್ಡೇಟ್ ಮಾಡಿ ಎಂದು ಒಂದು  ಓಲೆ ಬಂತು . ಸರಿ ನನ್ನದು ಮತ್ತು ಪತ್ನಿಯ ಕೆ ವೈ ಸಿ ದಾಖಲೆ ಪ್ರತಿ ಗಳಿಗೆ ಸಹಿ ಹಾಕಿಸ ಬೇಕಿತ್ತು . ಯಾವಾಗ ನೋಡಿದರೂ ಅವಳ ಕೈಯಲ್ಲಿ ಏನಾದರೂ ಇರುತ್ತಿದ್ದು ಹೊಂಚು ಹಾಕಿ ಕಾದು ನೋಡಿ ಸಹಿ ಹಾಕಿಸಿ ಕೊಂಡಾಗ ನಿಟ್ಟುಸಿರು . 

ಬಾಲ್ಯದಲ್ಲಿ ಶಾಲೆಯಿಂದ ಪ್ರೋಗ್ರೆಸ್ ರಿಪೋರ್ಟ್ ಅಂತ ವರ್ಷಕ್ಕೆ ಎರಡು ಬಾರಿ ಕೊಟ್ಟು ಹೆತ್ತವರ ಸಹಿ ಹಾಕಿಸಲು ಕಳುಹಿಸುತ್ತಿದ್ದರು ಕನ್ನಡ ಮೀಡಿಯಂ ನ ನಾವು ಅದನ್ನು ಪ್ರೋಕ್ರಿ ರಿಪೋರ್ಟ್ ಎನ್ನುತ್ತಿದ್ದೆವು  . ದಿನವಿಡೀ ಏನಾದರೂ ಒಂದು ಕೆಲಸ ಮಾಡಿರುತ್ತಿದ್ದ ತಂದೆಯವರನ್ನು ಕಾಡಿ ರಾತ್ರಿ ಹೊತ್ತು ಚಿಮಿಣಿ ದೀಪದ ಬೆಳಕಿನಲ್ಲಿ  ಸಹಿ ಹಾಕಿಸಿ ಕೊಳ್ಳುತ್ತಿದ್ದೆವು . ನಾವು ತುಂಬಾ ಮಕ್ಕಳು ಇದ್ದು ಸರಕಾರಿ ಆಫೀಸ್ ನಲ್ಲಿ ಫೈಲ್ ಗಳಿಗೆ ಸಹಿ ಹಾಕುವ ರೀತಿ ಇತ್ತು ಎನ್ನ ಬಹುದು . ನಮಗೆ ಮಾರ್ಕ್ ಎಷ್ಟು ಸಿಕ್ಕಿದೆ  ಎಂದು ಅವರು ಎಂದೂ ಚಿಂತೆ ಮಾಡಿದವರಲ್ಲ .ಕಡಿಮೆ ಅಂಕ ಸಿಕ್ಕಿದರೆ ಕೆಂಪು ಗೆರೆ ಹಾಕುವ ಪದ್ಧತಿ .ಕೆಲವೊಮ್ಮೆ ನಿನಗೆ ಯಾಕೆ ಕಡಿಮೆ ಕೆಂಪು ಗೆರೆ ಎಂದು ಕೇಳುವರು . ಮಕ್ಕಳು ಬುದ್ದಿವಂತರಾದರೆ ತೋಟ ಗದ್ದೆ ನೋಡಿಕೊಳ್ಳಲು ಯಾರೂ ಸಿಗಲಿಕ್ಕಿಲ್ಲ ಎಂಬ ಭಾವನೆ ಇತ್ತು . 

ತಂದೆ ಸಿಗದಿದ್ದರೆ ಅಜ್ಜನವರನ್ನು ಕಾಡಿ ಸಹಿ ಮಾಡಿಸಿ ಕೊಳ್ಳುತ್ತಿದ್ದೆವು .ಅಜ್ಜ ಮತ್ತು ತಂದೆ ಹಳೆಯ ಮೋಡಿ ಅಕ್ಷರದಲ್ಲಿ ಸಹಿ ಮಾಡುವರು .ಸಹಿ ಮಾಡುವ ಮೊದಲು ಒಂದು ರಫ್ ಕಾಗದ ದಲ್ಲಿ  ಮಾಡಿ ನೋಡುವರು . ಆಮೇಲೆ ಮೋಡಿ ಅಕ್ಷರದಲ್ಲಿ ಅಜ್ಜನ ಸಹಿ  ಅಂಗ್ರಿ ಮಹಾಬಲ ಭಟ್ಟನ ರುಜು ಎಂಬುದು ಲಿಂಗ್ರಿ ಮಹಾಚಲ ಚಟ್ಟನ  ರುಜು ಆಗುತ್ತಿತ್ತು . ಏನೇ ಇದ್ದರೂ ನಮಗೆ ಪರೀಕ್ಷೆಯಲ್ಲಿ ಪಾಸ್ ಆಗುವಾಗ ಆದದ್ದಕ್ಕಿಂತ ಹೆಚ್ಚು ನಿರಾಳತೆ  ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ ಬಿದ್ದಾಗ  ಆಗುತ್ತಿತ್ತು

ಶುಕ್ರವಾರ, ನವೆಂಬರ್ 22, 2024

ಹೃದಯಾಘಾತ ಬಗ್ಗೆ  ಎಲ್ಲರೂ ಕೇಳಿದ್ದೇವೆ .ಹೃದಯದ ಮಾಂಸಖಂಡ ಗಳಿಗೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಹಠಾತ್ ಬಂದ್ ಆದರೆ ಹೃದಯದ ಕಾರ್ಯದಲ್ಲಿ ವ್ಯತ್ಯಯ ಆಗಿ , ರಕ್ತ ತಡೆಯ ಗಂಭೀರತೆಯನ್ನು ಹೊಂದಿಕೊಂಡು  ಎದೆ ನೋವಿನಿಂದ ಹಿಡಿದು ಸಾವು ಕೂಡಾ ಸಂಭವಿಸುವುದು . ಸಂಭವದ ಕ್ಷಿಪ್ರತೆಯಿಂದ ಆಘಾತ ಎಂಬ ವಿಶೇಷಣ .

ಅದರಂತೆ ಮೆದುಳಿನ ಆಘಾತ ಅಥವಾ ಸ್ಟ್ರೋಕ್  ಎಂಬ ಕಾಯಿಲೆ ಇದೆ . ಇಲ್ಲಿ ಮಾತ್ರ ಮೂರು ಮುಖ್ಯ ಪ್ರಭೇದ ಇವೆ .ಒಂದು ; ಹೃದಯಾಘಾತದಲ್ಲಿ ಆಗುವಂತೆ ಮೆದುಳಿನ ರಕ್ತ  ನಾಳಗಳು ಕೊಬ್ಬು ಶೇಖರಣೆಯಿಂದ ಸ್ಥಳೀಯ ವಾಗಿ ರಕ್ತ ಹೆಪ್ಪು ಗಟ್ಟುವಿಕೆಗೆ ಆಹ್ವಾನ ಕೊಟ್ಟು ರಕ್ತ ಸರಬರಾಜಿನಿಂದ ವಂಚಿತವಾದ ಸುತ್ತ ಮುತ್ತಲಿನ ಮೆದುಳಿನ ಜೀವಕೋಶಗಳು ನಿಷ್ಕ್ರಿಯ ಗೊಳ್ಳುವವು . ಎರಡು ; ರಕ್ತ ನಾಳಗಳು ಹಠಾತ್ ಒಡೆದು ಮೆದುಳಿನ ರಕ್ತಸ್ರಾವ ಆಗುವುದು . ಮೂರು ; ಕೆಲವು  ಕಾಯಿಲೆಗಳಲ್ಲಿ ಹೃದಯ ಒಳಗೆ ಹೆಪ್ಪು ಗಟ್ಟಿದ ರಕ್ತದ ತುಣುಕುಗಳನ್ನು ಮೆದುಳಿಗೆ ಹೋಗುವ ರಕ್ತ ನಾಳಗಳ ಮೂಲಕ ಹೋಗಿ ತಟಸ್ಥ ಉಂಟು ಮಾಡುವುದು .

 ಬಲ ಬಾಗದ ದೊಡ್ಡ ಮೆದುಳು ಶರೀರದ  ಎಡ   ಭಾಗವನ್ನೂ  ಮತ್ತು  ಎಡ ಪಾರ್ಶ್ವದ ದೊಡ್ಡ ಮೆದುಳು ಬಲ ಭಾಗ ಮತ್ತು ಮಾತನ್ನು ನಿಯಂತ್ರಿಸುತ್ತವೆ.  ಎಡ ಮೆದುಳು ಆಘಾತ ಆದರೆ ಬಲ ಪಾರ್ಶ್ವ ವಾಯು ಅಥವಾ ಲಕ್ವಾ ಉಂಟಾಗುತ್ತದೆ . ಅದೇ ತರಹ ಎಡ ಮೆದುಳಿನ ಕ್ಷಮತೆ ಕುಂದಿದಾಗ ಮಾತಾಡುವ, ಅರ್ಥ ಮಾಡಿಕೊಳ್ಳವ ಶಕ್ತಿ ಬೀಳ ಬಹುದು . ಅದೇ ರೀತಿ  ಹಿಮ್ಮೆದುಳಿಗೆ ಹಾನಿ ಆದರೆ ದೃಷ್ಟಿ ಹೋಗ ಬಹುದು . ಕಣ್ಣುಗಳು ಸರಿ ಇದ್ದರೂ ದೃಷ್ಟಿ ಗ್ರಹಣ  ವ್ಯತ್ಯಯದಿಂದ ಬರುವ ಕುರುಡು ತನ.ಸಿಟಿ ಸ್ಕ್ಯಾನ್  ಅಥವಾ ಎಂ ಆರ್ ಐ ಯಿಂದ ಮೆದುಳಿನ ಆಘಾತ ವನ್ನು ಪತ್ತೆ ಮಾಡುವರು .

ಅಧಿಕ ರಕ್ತದ ಒತ್ತಡ ,ಕೊಲೆಸ್ಟ್ರಾಲ್ ಇತ್ಯಾದಿ ಮೆದುಳಿನ ಆಘಾತಕ್ಕೆ ಸಾಮಾನ್ಯ ಕಾರಣಗಳು .ಹೃದಯಾಘಾತದಲ್ಲಿ ಮಾಡುವಂತೆ ಔಷಧಿ ನೀಡಿ ಹೆಪ್ಪು ಕರಗಿಸುವುದು ಮತ್ತು ರಕ್ತ ನಾಳಗಳ ಮೂಲಕ ಕೊಳಾಯಿ ಹಾಯಿಸಿ ಹೆಪ್ಪು ತೆಗೆದು ಸ್ಟೆಂಟ್ ಹಾಕುವುದು ಇಲ್ಲಿಯೂ ಇದೆ . ಮೆದುಳಿನ ಆಘಾತದಲ್ಲಿ ಕಾಯಿಲೆ ಮೆದುಳಿನಲ್ಲಿ ಇದ್ದರೂ ರೋಗ ಲಕ್ಷಣ ಅವಯವಗಳಲ್ಲಿ  ಇರುವುದು . ಕೈಕಾಲುಗಳು ಉಪಯೋಗಿಸದೆ ಮರಗಟ್ಟಿ ಹೋಗದ ಹಾಗೆ ಅವಕ್ಕೆ ಪಿಸಿಯೋ ತೆರಪಿ ಅಥವಾ ವೈಜನಿಕ ವ್ಯಾಯಾಮ  ಕೊಡುವರದರೂ ಮುಖ್ಯ ಚಿಕಿತ್ಸೆ ಮೆದುಳಿಗೆ ಆಗ ಬೇಕು . ಫ್ಯೂಸ್ ಹೋದಾಗ ಅದನ್ನು ಸರಿಪಡಿದೇ ಬಲ್ಬ್ ಹಾಕಿ ಪ್ರಯೋಜನ ವಿಲ್ಲ .

 

ಬುಧವಾರ, ನವೆಂಬರ್ 20, 2024

ಬಿಬೇಕ್ ದೇಬ್ ರಾಯ್ ಅವರ ಮಹಾಭಾರತ ದಲ್ಲಿ ಗೀತೋಪದೇಶ ಓದುತ್ತ್ತಿದ್ದೆ . ಎಲ್ಲಾ ವೇದಾಂತಿಗಳು ಪುರಾವರ್ತಿಸುವ ಫಲಾ ಪೇಕ್ಷೆ  ನಿನ್ನ ಕರ್ತವ್ಯ ಮಾಡು , ಸುಖ ಬಂದಾಗ ಅತಿ ಹಿಗ್ಗದಿರು ,ಕಷ್ಟ ಬಂದಾಗ ಕುಗ್ಗದಿರು ,ಅದೇ ನೈಜ ಯೋಗವಸ್ಥೆ ಇತ್ಯಾದಿ ವಾಕ್ಯಗಳ ರಿವಿಶನ್  ಆಯಿತು .ಲೋಕದಲ್ಲಿ ಇದನ್ನು ಬೋಧಿಸುವ ಪ್ರಾಜ್ಞರು ಸನ್ಯಾಸಿಗಳು ಬಹಳ ಮಂದಿ ಇದ್ದಾರೆ .ಆದರೆ ತಮ್ಮ ನಡವಳಿಕೆಯಲ್ಲಿ ಇದನ್ನು ಅಳವಡಿಸಲು ಅವರಿಗೂ ಸಾಧ್ಯವಾಗುವುದಿಲ್ಲ .  ಷಡ್ವೈರಿ ಗಳಿಂದ ದೂರವಿರಿ ಎಂದು ವೇದಿಕೆಯಿಂದ ಪ್ರಚಿಸುವವರು ತಮ್ಮ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಹುಲು ಮಾನವರಂತೆ  ಕೋಪಾವೇಶದಿಂದ ಶಾಪ ಹಾಕುವರು , ಆಸ್ತಿಗಾಗಿ ಕೋರ್ಟ್ ಕಟ್ಟಳೆ ಅಲೆ ಯುವರು . 

ಇದನ್ನೆಲ್ಲಾ ಮೀರಿದ ಯೋಗಾವಸ್ಥೆ ಅಪರೂಪಕ್ಕೆ  ಕಂಡರೆ ಅದು  ಜನ ಸಾಮಾನ್ಯರಲ್ಲಿಯೇ .ಮೊನ್ನೆ ನಾನು ಓದಿದ ಬನ್ನಂಜೆ ಯವರ ಆತ್ಮ ಚರಿತ್ರೆ ಯಲ್ಲಿ ತಮ್ಮ ಆತ್ಮೀಯರಾದ  ಉದ್ಯಮಿ ಒಬ್ಬರ ಹೋಟೆಲ್ ಅಗ್ನಿಗೆ ಆಹುತಿ ಆದಾಗ ಅಲ್ಲಿದ್ದ ಹತ್ತು ಲಕ್ಷ ರೂಪಾಯಿ ಭಸ್ಮ ವಾಯಿತು ;ಅದನ್ನು ತಿಳಿದು ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ,ಹಿಂದಿನ ದಿನ ಅದನ್ನು ಯಾರಾದರೂ ಬಡವರಿಗೆ ಕೊಡ ಬಹುದಿತ್ತು ಎಂದು ಕೊಂಡರಂತೆ . 

ನನ್ನ ಕೈ ಎಣಿಕೆಯ ರೋಗಿಗಳಲ್ಲಿ ಇಂತಹ ಸ್ಥಿತ ಪ್ರಜ್ಞತೆ ಕಂಡಿದ್ದೇನೆ .ಹಿಂದೆ ಕ್ಯಾನ್ಸರ್ ಪೀಡಿತ ಓರ್ವ ಮಹಿಳೆ ಬಗ್ಗೆ ಬರೆದಿದ್ದೆ . ಇಂತಹದೇ ಓರ್ವ ಮಹಾ ಮಹಿಮ ದಿ  ವಿಶ್ವನಾಥ ಸಾಲಿಯಾನ್ ಮತ್ತು ಅವರ ಪತ್ನಿ ದಿ ಪಾರ್ವತಿ .,ಇವರು ಪುತ್ತೂರಿನ ಮಂಜಲ್ ಪಡ್ಪು ವಿನಲ್ಲಿ ಹೋಟೆಲ್ ವಿಶ್ವಾಸ್ ಎಂಬ  ಉದ್ಯಮ ನಡೆಸುತ್ತಿದ್ದು ಜನಪ್ರಿಯ ರಾಗಿದ್ದರು . ಜನ ಸಾಮಾನ್ಯರ ಮೆಚ್ಚಿನ ಹೋಟೆಲ್ . ಹಿಂದೆ ಕಟ್ಟಿಗೆಯಲ್ಲಿ ಅಡಿಗೆ ಇದ್ದಾಗ ಹೊಗೆ ಸೇವನೆಯಿಂದ ಇರ ಬೇಕು .ಅವರಿಗೆ ತೀವ್ರತರ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು .  ಕಾಯಿಲೆ ಎಷ್ಟೇ ತೀವ್ರವಾಗಿ ಇರಲಿ ಒಂದೇ ಒಂದು ದಿನ ಅವರು ಮುಖ ಗಂಟು ಹಾಕಿದ್ದಾಗಲಿ ,ಗೊಣಗಿದ್ದಾಗಲೀ ಇಲ್ಲ . ಕೃತಜ್ಞತಾ ಭಾವ ಸೂಚಿಸುವ ಮುಖಭಾವ ಮಾತ್ರ ನಾನು ಕಂಡದ್ದು . ರೋಗ ತೀವ್ರವಾಗಿ ಅವರು ಅಸು ನೀಗಿದಾಗ ಅವರನ್ನು ಬಲ್ಲವರು ಕಂಬನಿ ಮಿಡಿದರು . ಇವರ ಪತ್ನಿ ದಿ ಪಾರ್ವತೀ ಅಮ್ಮ ನವರು ಗುಣದಲ್ಲಿ ಇವರದೇ ಪಡಿಯಚ್ಚು . ವರ್ಷಗಳ ಹಿಂದೆ ಭಾರೀ ಮಳೆಗೆ ಧರೆ ಕುಸಿದು ಇವರೂ ಜತೆಗೆ ಮಲಗಿದ್ದ ಮೊಮ್ಮಗ ಧನುಷ್ ಅಸು ನೀಗಿದಾಗ ಊರಿಗೆ ಊರೇ ಮರುಗಿತ್ತು .ಒಳ್ಳೆಯವರಿಗೆ ಯಾಕೆಇಂತಹ ಪರೀಕ್ಷೆ ?

ಈಗ ಮಗ ಮಹೇಶ್ ಹೋಟೆಲ್ ಮುಂದುವರಿಸುತ್ತಿತ್ತು ಹಿರಿಯರ ಸದ್ಗುಣಗಳು ಅವರಲ್ಲಿಯೂ ಎದ್ದು ಕಾಣುತ್ತದೆ .