ನನ್ನ ತಂಗಿ ಪದ್ಮಾವತಿ ಪುತ್ತೂರು ಪಾಂಗಾಳಾಯಿ ಯಲ್ಲಿ ಹೊಸ ಮನೆ ನಿರ್ಮಿಸಿದ್ದು ತಿಂಗಳ ಹಿಂದೆ ಸರಳವಾಗಿ ಗೃಹ ಪ್ರವೇಶ ಮಾಡಿದ್ದರು . ಅಣ್ಣನಾದ ನನಗೂ ಆಹ್ವಾನವಿರಲಿಲ್ಲ ;ಅಂತ ನನಗೇನೂ ಬೇಸರವಿಲ್ಲ . ಒಂದನೆಯದಾಗಿ ಇದು ಎರಡನೇ ಮನೆ ಒಕ್ಕಲು .ಎರಡನೆಯದು ಗೃಹ ಪ್ರವೇಶದ ಪ್ರಯುಕ್ತ ಕುಶಲ ಸಂಘದ ವಿಶೇಷ ಅಧಿವೇಶನ ,ಉಪಹಾರ ಸಹಿತ . ಪುತ್ತೂರಿನಲ್ಲಿ ನಗೆ ಪ್ರಿಯರ ಕೂಟ ಇದ್ದು ಅದರ ಪ್ರಧಾನ ಕಚೇರಿ ,ಸರ್ವ ಜನಹಿತ ಸಂಘಟನೆಗಳಿಗೂ ಆಶ್ರಯ ತಾಣ ವಾದ ಅನುರಾಗ ವಠಾರ (ಪುರಂಧರ ಭಟ್ ಮಾಳಿಗೆ ಮನೆ ).ರಾಜೇಶ್ ಪ್ರೆಸ್ ರಘುನಾಥ ರಾಯರು ,ಸುಧಾಮ ಕೆದಿಲಾಯ ,ತುಳಸೀದಾಸ್ ,ಸುಬ್ರಹ್ಮಣ್ಯ ಶರ್ಮ ,ಶಂಕರಿ ಶರ್ಮ,ದತ್ತಾತ್ರೇಯ ರಾವ್ .ಅರ್ತಿಕಜೆ ದಂಪತಿಗಳು ,ರಮೇಶ ಬಾಬು ಇತ್ಯಾದಿ ಹಿರಿಯರು ಇದರಲ್ಲಿ ಇದ್ದಾರೆ . ನಕ್ಕು ಹಗುರಾಗುವ ವೇದಿಕೆ
ಈ ತಂಗಿ ಸಣ್ಣವಳಿರುವಾಗ ಜಡೆಗೆ ಸಿಕ್ಕಿಸುವ ಒಂದು ಐಟಂ ಬಂತು . ಎರಡು ಗೋಲಿಗಳನ್ನು ಒಂದು ಬ್ಯಾಂಡಿನಲ್ಲಿ ಕಟ್ಟಿ ಅದರ ನಡುವೆ ಜಡೆ . ಆಗೆಲ್ಲಾ ಶಾಲೆಗೆ ಹುಡುಗಿಯರು ಎರಡು ಜಡೆ ಹಾಕಿಕೊಂಡು ಹೋಗುವುದು . ಈ ವಸ್ತುವಿಗೆ ಲವ್ ಇನ್ ಟೋಕಿಯೋ ಎಂದು ಕರೆಯುತ್ತಿದ್ದರು . ಆ ಹೆಸರಿನ ಸಿನಿಮಾ ನಾಯಕಿ ಅದನ್ನು ಹಾಕಿಕೊಂಡಿದ್ದ ಕಾರಣ ಇರಬೇಕು .ನನ್ನ ಅಕ್ಕ ತಂಗಿಯರ ಬಾಯಲ್ಲಿ ಅದು ಲವಿನ್ ಟಕಿ ಅದು ಹೃಸ್ವ ವಾಯಿತು . ಒಮ್ಮೆ ತಂದೆಯವರು ವಿಟ್ಲ ಪೇಟೆಗೆ ಹೋಗುವಾಗ ತಮಗೂ ಅದನ್ನು ತಂದು ಕೊಡುವಂತೆ ದುಂಬಾಲು ಬಿದ್ದರು . ತಂದೆಯವರು ವಿಟ್ಲ ಪುತ್ತು ಆಚಾರ್ರ ಫ್ಯಾನ್ಸಿ ಸ್ಟೋರಿಗೆ ತಲುಪುವಾಗ ಅದರ ಹೆಸರು ಟಂಗ್ ಟಕಿ ಎಂದು ಆಯಿತು .ಆದರೂ ಬೇಕಾದ ವಸ್ತು ತೊಂದರೆಯಿಲ್ಲದೇ ಬಂತು .
ನಮ್ಮ ತಾಯಿ ತುಂಬಾ ಕಟ್ಟು ನಿಟ್ಟು . ಜೋಕ್ ಮಾಡಿಕೊಂಡು ಜೋರಾಗಿ ನಗುತ್ತಿದ್ದರೆ ,ಕಣ್ಣು ಅರಳಿಸಿ "ಎಂತ ಹೆದರಿಕೆ ಇಲ್ಲದ ನಗೆ "ಎಂದು ಗದರಿಸುವರು .ನನ್ನ ಮೇಲಂತೂ ಅವರಿಗೆ ಯಾವಾಗಲೂ ಅಪ ಧೈರ್ಯ .ಎಲ್ಲಿಗೆ ಹೋಗುವಾಗಲೂ ಬೆಗುಡು ಬೆಗುಡು ಮಾತನಾಡ (ಅಂದರೆ ಅತಿ ಹಾಸ್ಯ ಬೇಡ )..ಅವರು ಮನಸು ತೆರೆದು ನಕ್ಕದ್ದು ನಾನು ಕಂಡಂತೆ ಬೆಂಗಳೂರಿಗೆ ವಾಲ್ವೊ ಬಸ್ ನ ವಿಡಿಯೋ ದಲ್ಲಿ ಕಾಮನ ಬಿಲ್ಲು ಸಿನಿಮಾ ದಲ್ಲಿ ರಾಜಕುಮಾರ್ ಅಳುತ್ತಿರುವ ಮಗುವಿಗೆ ಸೀರೆ ಉಟ್ಟು ಬಾಟ್ಲಿ ಹಾಲು ಕುಡಿಸುವ ದೃಶ್ಯ ನೋಡಿ . ಹಾಗೆ ನಮ್ಮ ಹಾಸ್ಯ ಪ್ರಜ್ಞೆ ಸುಪ್ತಾವಸ್ಥೆ ಯಲ್ಲಿ ಇದ್ದು ಈಗ ಪ್ರದರ್ಶನ ಗೊಳ್ಳುತ್ತಿವೆ . ತಾಯಿಗೆ ನಾವು ಹತ್ತು ಮಕ್ಕಳು ,ನಮ್ಮನ್ನೆಲ್ಲಾ ಒಂದು ದಾರಿಗೆ ತರಬೇಕಾದರೆ ಅವರು ಪಟ್ಟ ಪಾಡು ಊಹಿಸಿ ಕೊಳ್ಳಿ ..ಗಂಡು ಹುಡುಗರಿಗೆ ಬೆತ್ತದ ರುಚಿ ತೋರಿಸುತ್ತಿದ್ದರೂ ಹುಡುಗಿಯರು ಮದುವೆಯಾಗಿ ಹೋಗುವವವರು ಎಂದು ವಿನಾಯತಿ ಇತ್ತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ