ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ನಾಲಿಗೆ ಎಂದು ದಾಸರು ಹಾಡಿದ್ದು ವಿನಾ ಕಾರಣ ಕೆಟ್ಟದ್ದನ್ನು ಆಡುವವರಿಗೆ . ಇಲ್ಲಿ ನಾಲಿಗೆ ಯನ್ನು ಮಾತಿನ ಮುಖ್ಯ ಅಂಗ ಎಂದು ವಾಚ್ಯವಾಗಿ ಇದ್ದರೂ ಆಡುವವನನ್ನೇ ಪೂರ್ಣ ಉದ್ದೇಶಿಸಿ ಇರುವುದು . ಸಾಮಾನ್ಯ ತಿಳುವಳಿಕೆ ಇರುವಂತೆ ನಾಲಿಗೆ ಮಾತಿನ ಮೂಲ ಅಲ್ಲ ಅಲ್ಲದೆ ಏಕ ಮಾತ್ರ ಅಂಗವೂ ಅಲ್ಲ .
ವಾಚ್ಯ ಮಾತಿನ ಉಗಮ ಎಡ ಮುಮ್ಮೆದುಳಿನಲ್ಲಿ .ಇಲ್ಲಿ ಬ್ರೋಕ ನ ಕೇಂದ್ರ (ಕಂಡು ಹಿಡಿದ ಫ್ರೆಂಚ್ ವಿಜ್ಞಾನಿ ಹೆಸರು )ಎಂದು ಇದ್ದು ಇಲ್ಲಿ ಆಡುವ ಮಾತಿನ ಕ್ರಿಯಾತ್ಮಕ ಸಂದೇಶ ರಚನೆ ಆಗಿ ನರಗಳ ಮೂಲಕ ಅದು ಕೊರಳಲ್ಲಿ ಇರುವ ಧ್ವನಿ ಪೆಟ್ಟಿಗೆಯ ಮಾಂಸ ಖಂಡಗಳಿಗೆ ರವಾನೆ ಆಗುತ್ತದೆ . ಆದೇಶ ಕ್ಕನುಸಾರ ಸ್ವರ ತಂತುಗಳು ಕಂಪಿಸಿ ಸ್ವರೋತ್ಪಾದನೆ ಆಗುವುದು , ನಮ್ಮ ಆಡಿಯೋ ಸ್ಪೀಕರ್ ಗಳ ಮುಖ್ಯ ಪೆಟ್ಟಿಗೆ ಯಲ್ಲಿ ಆದಂತೆ . ಉತ್ಪಾದಿತ ಶಬ್ದಗಳ ಮೌಲ್ಯ ವರ್ಧನೆ ನಾಲಿಗೆ ,ಬಾಯಿ ,ಹಲ್ಲುಗಳ ಮೂಲಕ ಆಗುವುದಲ್ಲದೆ ,ಮೂಗಿನ ಪಾರ್ಶ್ವಗಳಲ್ಲಿ ಮೂಳೆಗಳಲ್ಲಿ ಖಾಲಿ ಪೆಟ್ಟಿಗೆ ಯಂತೆ ಇರುವ ಸೈನಸ್ (ಇವು ಸೌಂಡ್ ಸಿಸ್ಟಮ್ ನ ಸ್ಪೀಕರ್ ಪೆಟ್ಟಿಗೆ ಗಳಂತೆ ಕಾರ್ಯ ನಿರ್ವಹಿಸುತ್ತವೆ )ಗಳಲ್ಲಿ ಆಗುತ್ತದೆ .
ಆಲಿಸಿದ ಮಾತನ್ನು ಗ್ರಹಣ ಮಾಡುವ ಮೆದುಳಿನ ಕೇಂದ್ರ ಕ್ಕೆ ವರ್ನಿಕೆ ಕೇಂದ್ರ ಎನ್ನುವರು .ಇದು ಬ್ರೋಕನ ಜಾಗಕ್ಕಿಂತ ಸ್ವಲ್ಪ ಹಿಂದುಗಡೆ ಇದ್ದು ಕಿವಿ ಮೂಲಕ ಆಲಿಸಿದ ಮಾತಿನ ಗ್ರಹಣ ಮಾಡುತ್ತದೆ . ಇಲ್ಲಿಂದ ಬ್ರೋಕನ ಜಾಗಕ್ಕೆ ಸಂಪರ್ಕ ಇದೆ . ಮಾತನ್ನು ಉತ್ಪಾದಿಸುವ ಮತ್ತು ಗ್ರಹಿಸುವ ಎರಡು ಮುಖ್ಯ ವಿಭಾಗ ಗಳು ಇವೆ ಎಂದು ತಿಳಿಯಿತಲ್ಲಾ .
ಮೆದುಳಿನಲ್ಲಿ ರಕ್ತ ಹೆಪ್ಪ್ಪು ಗಟ್ಟುವುದು ಅಥವಾ ರಕ್ತ ಸ್ರಾವ ವಾಗಿ ಬ್ರೋಕನ ಕೇಂದ್ರದ ಕೆಲಸ ವ್ಯತ್ಯಯ ಆದರೆ(ಆಡುವ ) ಮಾತು ಬಿದ್ದು ಹೋಗುವುದು . ಕೇಳಿದ್ದು ಅರ್ಥ ಆಗ ಬಹುದು . ವರ್ನಿಕೆ ಕೇಂದ್ರ ಕ್ಕೆ ಮಾತ್ರ ತೊಂದರೆ ಆದರೆ ಆಡುವ ಮಾತು ಬೀಳದು .ಆದರೆ ಆಡಿದ ಮಾತಿಗೆ ಅರ್ಥವಿರದು . ನಮ್ಮ ಬಲ ಭಾಗದ ಅವಯವಗಳ ನಿಯಂತ್ರಣ ಎಡದ ಮೆದುಳಿನಲ್ಲಿ ಇರುವುದರಿಂದ ಸಾಮಾನ್ಯವಾಗಿ ಬಲ ಪಾರ್ಶ್ವ ವಾತ ಆದಾಗ ಮಾತೂ ಬೀಳುವುದು .
ಧ್ವನಿ ಪೆಟ್ಟಿಗೆ ಯ ಕ್ಯಾನ್ಸರ್ ,ಅಥವಾ ನರ ದೌರ್ಬಲ್ಯ ಆದರೆ ಮಾತಿನ ಉತ್ಪಾದನೆ ಸರಿಯಾಗಿ ಆದರೂ ಶಬ್ದ ಗಳು ಹೊರಡವು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ