ನನ್ನ ಪತ್ನಿ ಶ್ರಮ ಜೀವಿ ಮತ್ತು ಸದಾ ಕ್ರಿಯಾ ಶೀಲೆ . ಏನಾದರೂ ಮಾಡುತಿರು ತಮ್ಮ ಎಂದು ಕವಿ ಹೇಳಿದ ರೀತಿ . ಹಾಗೆ ಮೊನ್ನೆ ನನಗೆ ಬ್ಯಾಂಕ್ ನಿಂದ ಕೆ ವೈ ಸಿ ಅಪ್ಡೇಟ್ ಮಾಡಿ ಎಂದು ಒಂದು ಓಲೆ ಬಂತು . ಸರಿ ನನ್ನದು ಮತ್ತು ಪತ್ನಿಯ ಕೆ ವೈ ಸಿ ದಾಖಲೆ ಪ್ರತಿ ಗಳಿಗೆ ಸಹಿ ಹಾಕಿಸ ಬೇಕಿತ್ತು . ಯಾವಾಗ ನೋಡಿದರೂ ಅವಳ ಕೈಯಲ್ಲಿ ಏನಾದರೂ ಇರುತ್ತಿದ್ದು ಹೊಂಚು ಹಾಕಿ ಕಾದು ನೋಡಿ ಸಹಿ ಹಾಕಿಸಿ ಕೊಂಡಾಗ ನಿಟ್ಟುಸಿರು .
ಬಾಲ್ಯದಲ್ಲಿ ಶಾಲೆಯಿಂದ ಪ್ರೋಗ್ರೆಸ್ ರಿಪೋರ್ಟ್ ಅಂತ ವರ್ಷಕ್ಕೆ ಎರಡು ಬಾರಿ ಕೊಟ್ಟು ಹೆತ್ತವರ ಸಹಿ ಹಾಕಿಸಲು ಕಳುಹಿಸುತ್ತಿದ್ದರು ಕನ್ನಡ ಮೀಡಿಯಂ ನ ನಾವು ಅದನ್ನು ಪ್ರೋಕ್ರಿ ರಿಪೋರ್ಟ್ ಎನ್ನುತ್ತಿದ್ದೆವು . ದಿನವಿಡೀ ಏನಾದರೂ ಒಂದು ಕೆಲಸ ಮಾಡಿರುತ್ತಿದ್ದ ತಂದೆಯವರನ್ನು ಕಾಡಿ ರಾತ್ರಿ ಹೊತ್ತು ಚಿಮಿಣಿ ದೀಪದ ಬೆಳಕಿನಲ್ಲಿ ಸಹಿ ಹಾಕಿಸಿ ಕೊಳ್ಳುತ್ತಿದ್ದೆವು . ನಾವು ತುಂಬಾ ಮಕ್ಕಳು ಇದ್ದು ಸರಕಾರಿ ಆಫೀಸ್ ನಲ್ಲಿ ಫೈಲ್ ಗಳಿಗೆ ಸಹಿ ಹಾಕುವ ರೀತಿ ಇತ್ತು ಎನ್ನ ಬಹುದು . ನಮಗೆ ಮಾರ್ಕ್ ಎಷ್ಟು ಸಿಕ್ಕಿದೆ ಎಂದು ಅವರು ಎಂದೂ ಚಿಂತೆ ಮಾಡಿದವರಲ್ಲ .ಕಡಿಮೆ ಅಂಕ ಸಿಕ್ಕಿದರೆ ಕೆಂಪು ಗೆರೆ ಹಾಕುವ ಪದ್ಧತಿ .ಕೆಲವೊಮ್ಮೆ ನಿನಗೆ ಯಾಕೆ ಕಡಿಮೆ ಕೆಂಪು ಗೆರೆ ಎಂದು ಕೇಳುವರು . ಮಕ್ಕಳು ಬುದ್ದಿವಂತರಾದರೆ ತೋಟ ಗದ್ದೆ ನೋಡಿಕೊಳ್ಳಲು ಯಾರೂ ಸಿಗಲಿಕ್ಕಿಲ್ಲ ಎಂಬ ಭಾವನೆ ಇತ್ತು .
ತಂದೆ ಸಿಗದಿದ್ದರೆ ಅಜ್ಜನವರನ್ನು ಕಾಡಿ ಸಹಿ ಮಾಡಿಸಿ ಕೊಳ್ಳುತ್ತಿದ್ದೆವು .ಅಜ್ಜ ಮತ್ತು ತಂದೆ ಹಳೆಯ ಮೋಡಿ ಅಕ್ಷರದಲ್ಲಿ ಸಹಿ ಮಾಡುವರು .ಸಹಿ ಮಾಡುವ ಮೊದಲು ಒಂದು ರಫ್ ಕಾಗದ ದಲ್ಲಿ ಮಾಡಿ ನೋಡುವರು . ಆಮೇಲೆ ಮೋಡಿ ಅಕ್ಷರದಲ್ಲಿ ಅಜ್ಜನ ಸಹಿ ಅಂಗ್ರಿ ಮಹಾಬಲ ಭಟ್ಟನ ರುಜು ಎಂಬುದು ಲಿಂಗ್ರಿ ಮಹಾಚಲ ಚಟ್ಟನ ರುಜು ಆಗುತ್ತಿತ್ತು . ಏನೇ ಇದ್ದರೂ ನಮಗೆ ಪರೀಕ್ಷೆಯಲ್ಲಿ ಪಾಸ್ ಆಗುವಾಗ ಆದದ್ದಕ್ಕಿಂತ ಹೆಚ್ಚು ನಿರಾಳತೆ ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ ಬಿದ್ದಾಗ ಆಗುತ್ತಿತ್ತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ