ಈರುಳ್ಳಿ ಅಥವಾ ನೀರುಳ್ಳಿ ಈಗ ಹಚ್ಚದೇ ಕಣ್ಣೀರು ತರಿಸುತ್ತಿದೆ . ಎಲ್ಲಿಯೂ ಒಳ್ಳೆಯ ನೀರುಳ್ಳಿ ಸಿಗುತ್ತಿಲ್ಲ .ಸಿಕ್ಕರೂ ದರ ಕೇಳಿಯೇ ಕಣ್ಣೀರು ಬರುವಂತಿದೆ . ನಮ್ಮ ಆಸ್ಪತ್ರೆ ಇರುವ ಎ ಪಿ ಎಂ ಸಿ ರಸ್ತೆಯಲ್ಲಿ ಹಲವು ಜೀನಸು ಅಂಗಡಿಗಳು ಇದ್ದು ,ಎಲ್ಲಾ ಕಡೆ ಎಡ ತಾಕಿದೆ . ಕೆಲವು ಅಂಗಡಿಗಳು ಈ ಐಟಂ ತರಿಸುವುದೇ ನಿಲ್ಲಿಸಿವೆ . ಕಾರಣ ಬರುತ್ತ್ತಿರುವ ಮಾಲು ಕಳಪೆ ಮಟ್ಟದ್ದು .ಇನ್ನು ಕೆಲವು ಅಂಗಡಿಗಳು ಸಾಂಬಾರ್ ಈರುಳ್ಳಿ ಎಂಬ ಸಣ್ಣ ನೀರುಳ್ಳಿ ಮಾತ್ರ ಮಾರುತ್ತಿವೆ . ನಾನು ಯಾವ ವ್ಯವಹಾರಕ್ಕೂ ನಾಲಾಯಕ್ಕು ಆಗಾಗ ನನ್ನ ಮನೆಯವರು ಸೋದಾಹರಣ ಹೇಳಿ ಹೇಳಿ ನನ್ನಲ್ಲಿ ಕೀಳರಿಮೆ ಉಂಟು ಮಾಡಿರುತ್ತಾರೆ . ಅದನ್ನು ಹುಸಿ ಮಾಡಲು ಎಂದು ಪುತ್ತೂರಿನ ಸರ್ವ ಮಾಲ್ ,ಮಾರ್ಟ್ ಮತ್ತು ಅಂಗಡಿಗಳಿಗೆ ಭೇಟಿ ನೀಡಿದೆ .ಆದರೆ ವಧು ಅನ್ವೇಷಿಸುವ ಊರಿನ ಕೃಷಿಕ ಯುವಕರ ಸ್ಥಿತಿ ಆಯಿತು .ಎಲ್ಲಿಯೂ ಒಳ್ಳೆಯ ನೀರುಳ್ಳಿ ಪತ್ತೆ ಇಲ್ಲ . ಕೊನೆಗೆ ಮೊನ್ನೆ ಸೋಮವಾರ ಪುತ್ತೂರು ಸಂತೆ ಗೆ ಭೇಟಿ ಇತ್ತು ಎರಡು ಸುತ್ತು ಹೊಡೆದೆ . ಕೋವಿಡ್ ನಂತರ ಸಂತೆಗೆ ಭೇಟಿ ಇದುವೇ ಮೊದಲು . ಅಲ್ಲಿ ನನ್ನ ಕೆಲವು ರೋಗಿಗಳು ನನ್ನನ್ನು ನೋಡಿ ನಮಸ್ಕಾರ ಮಾಡಿ ಕನಿಕರ ಸೂಚಿಸಿದರು .'ಪಾಪ ಡಾಕ್ಸ್ರಿಗೆ ಪ್ರಾಕ್ಟೀಸ್ ಕಮ್ಮಿ ಆಗಿರ ಬೇಕು ,ಕಡಿಮೆಗೆ ತರಕಾರಿ ಕೊಳ್ಳ್ಳುವಾ ಎಂದು ಬಂದಿರ ಬೇಕು ' ಎಂಬ ಮುಖ ಭಾವ ..
ಕೊನೆಗೂ ಒಂದು ಮೂಲೆಯಲ್ಲಿ ಉರ್ದು ಮಾತನಾಡುವ ಸಾಹೇಬರಲ್ಲಿ ಪರವಾಗಿಲ್ಲ ಎನ್ನುವ ಮಾಲು ಕಂಡಿತು . ಕಿಲೋ ವಿಗೆ ರೂಪಾಯಿ ಅರುವತ್ತರಂತೆ ೫ ಕೆಜಿ ಕೊಂಡು ,ದಿಗ್ವಿಜಯ ಸಾದಿಸಿದವರಂತೆ ಪಕ್ಕದ ಅಂಗಡಿಯಿಂದ ಸೌತೆ ,ಬದನೆ ,ಹೀರೆ ಮತ್ತು ಮೂಲಂಗಿ ಚೀಲಕ್ಕೆ ಸೇರಿಸಿ ಕೊಂಡು ಆಸ್ಪತ್ರೆಗೆ ಹೋದೆ ದಿನವಿಡೀ ನೀರುಳ್ಳಿ ಚಿತ್ತನಾಗಿದ್ದೆ .
ಸಂಜೆ ಮನೆಗೆ ಸೇರಿದಾಗ ಸೈಕ್ಲೋನ್ ಮಳೆ ಆರಂಭವಾಗಿತ್ತು ಹೆಂಡತಿಯ ಎದುರು ನೀರುಳ್ಳಿ ಇಟ್ಟು ಮೀಸೆ ತಿರುವಾ (ನನಗೆ ಮೀಸೆ ಇಲ್ಲ ) ಎಂದು ಕರೆದರೆ ಅವಳು ಮಹಡಿಯಲ್ಲಿ ಕಿಟಿಕಿ ಬಳಿ ನೀರು ಬೀಳುವುದನ್ನು ನೋಡುತ್ತಿದ್ದಳು .ನೋಡಿ ಮಳೆಗಾಲದಲ್ಲಿ ನೀರು ಸೋರಿ ಗೋಡೆ ಒದ್ದೆಯಾಗುವುದಕ್ಕೆ ನಾನು ನಿನ್ನೆಯಷ್ಟೇ ಹಾಕಿದ ಲೀಕ್ ಪ್ರೂಫ್ ಲೇಪ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ . ನಾನು ನೀರುಳ್ಳಿ ನೀರುಳ್ಳಿ ಎಂದೆ ."ಎಂತದ್ದು ಮಾರಾಯರೆ ನಿಮ್ಮ ನೀರುಳ್ಳಿ . ನಾನು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ .ಒಂದು ದಿನವಾದರೂ ನನ್ನ ಕಾರ್ಯ ನೀವು ಗುರುತಿಸಿ ಪ್ರಶಂಸೆ ಮಾಡಿದ್ದುಂಟಾ .ಇದು ಎಂತ ನೀರುಳ್ಳಿ ?ಎಲ್ಲಾ ಹುಟ್ಟಿದೆ ."ಎಂದು ನನ್ನ ಉಬ್ಬಿದ ನನ್ನ ಬಲೂನ್ ಗಾಳಿ ತೆಗೆದಳು .
ಈ ನೀರುಳ್ಳಿ ಸಾಮಾನ್ಯ ಎಂದು ಭಾವಿಸ ಬೇಡಿ .ದೆಹಲಿಯಲ್ಲಿ ಜನಪ್ರಿಯ ನಾಯಕಿ ದಿ ಸುಷ್ಮಾ ಸ್ವರಾಜ್ ಇದರ ಸಮಸ್ಯೆಯಿಂದ ತಮ್ಮ ಮುಖ್ಯ ಮಂತ್ರಿ ಪದವಿಯನ್ನೇ ಕಳೆದು ಕೊಂಡು ,ಇಲ್ಲಿಯ ವರೆಗೆ ಅವರ ಪಕ್ಷಕ್ಕೆ ಅಲ್ಲಿ ಅಧಿಕಾರ ಮರೀಚಿಕೆಯಾಗಿಯೇ ಉಳಿದಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ