ಕೆಲ ದಿನಗಳ ಹಿಂದೆ ಶ್ರೀಪತಿ ಮೇಷ್ಟು ತೀರಿಕೊಂಡರು .ಆಗ ನಾನು ಪರವೂರಿನಲ್ಲಿ ಇದ್ದೆ .
ಅವರು ನಮ್ಮ ಊರಿನ ಕಿರಿಂಚಿಮೂಲೆ ಯವರು .ಅವರ ತಂದೆ ಶ್ರೀನಿವಾಸ ರಾಯರು ಎಲಿಮೆಂಟರಿ ಶಾಲೆಯಲ್ಲಿ ನಮ್ಮ ಅಧ್ಯಾಪಕರು .ಶಿಸ್ತಿನ ಸಿಪಾಯಿ . ನಮ್ಮ ಮನೆ ಅಂಗ್ರಿಯಿಂದ ಒಂದು ಮೈಲು ಉತ್ತರಕ್ಕೆ ಗದ್ದೆ ಗಳ ನಡುವಿನ ಕಾಲುದಾರಿ ಯಲ್ಲಿ ನಡೆದರೆ ಕಳಂಜಿಮಲೆ ಗುಡ್ಡದ ತಪ್ಪಲಿನಲ್ಲಿ ಅವರ ಮನೆ . ಅಲ್ಲಿಂದ ಪಶ್ಚಿಮಕ್ಕೆ ಜಲ್ಲಿ ಮಣ್ಣಿನ ರಾಜರಸ್ತೆ , ಕಿರಿಂಚಿ ಮೂಲೆ ,ಕೇಪುಳ ಗುಡ್ಡೆ ಪಂಜಾಜೆ ದಾಟಿ ಕನ್ಯಾನಕ್ಕೆ ಮತ್ತೊಂದು ಮೈಲಿ . ಶ್ರೀಪತಿ ಮೇಷ್ಟ್ರ ತಮ್ಮ ಸುರೇಶ ನನ್ನಿಂದ ಒಂದು ಕ್ಲಾಸ್ ಮೇಲೆ ಆದರೆ ಬಾಲಕೃಷ್ಣ ಒಂದು ವರ್ಷ ಜೂನಿಯರ್ .ಸುರೇಶ ರಾವ್ ಕೋಲ್ ಇಂಡಿಯಾ ದಲ್ಲಿ ಉನ್ನತ ಹುದ್ದೆ ಗೆ ಏರಿ ಈಗ ಮಂಗಳೂರಿನಲ್ಲಿ ನಿವೃತ್ತ ಜೇವನ ನಡೆಸುತ್ತಿದ್ದರೆ ಬಾಲಕೃಷ್ಣ ಅಧ್ಯಾಪಕನಾಗಿ ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತ್ತಿ ಹೊಂದಿ ಕಿರಿಂಚಿ ಮೂಲೆ ಮೂಲ ಮನೆಯಲ್ಲಿ ಇದ್ದಾರೆ .
ಶ್ರೀಪತಿ ರಾಯರು ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ ಬಿ ಎಸ್ಸಿ ಬಿ ಎಡ್ ಮುಗಿಸಿ ಅಧ್ಯಾಪಕರಾಗಿ ಸೇರಿದರು . ಭೌತ ಮತ್ತು ರಸಾಯನ ಶಾಸ್ತ್ರ ಅವರದ್ದು . ಜೀವ ಶಾಸ್ತ್ರಕ್ಕೆ ಕಿರಿಂಚಿ ಮೂಲೆ ಶ್ರೀಧರ ರಾಯರು . ಶ್ರೀಪತಿ ರಾಯರು ತರಗತಿಗೆ ಪಠ್ಯ ಪುಸ್ತಕ ತರುತ್ತಿರಲಿಲ್ಲ .. ಮೊದಲೇ ವಿಷಯ ಅಧ್ಯಯನ ಮಾಡಿ ಬಂದು ಬೋರ್ಡಿನಲ್ಲಿ ಬಣ್ಣ ಬಣ್ಣದ ಚಿತ್ರ ಬಿಡಿಸಿ ಆಕರ್ಷಕ ಠೀವಿ ಮತ್ತು ಮಾತಿನ ಓಘ ದಿಂದ ಪಾಠ ಆರಂಭ ಮಾಡಿದರೆ ವಿದ್ಯಾರ್ಥಿಗಳು ಮಂತ್ರ ಮುಗ್ಧ ರಾಗಿ ಕೇಳುವರು . ಅದುವರೆಗೆ ನಾವು ಪ್ರತ್ಯಕ್ಷ ಕಂಡಿರದ ರಸಾಯನ ಶಾಸ್ತ್ರ ಪ್ರಯೋಗ ಗಳನ್ನು ಮಾಡಿ ತೋರಿಸುತ್ತಿದ್ದರು .ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಮ್ಯಾಂಗನೀಸ್ ಡೈ ಆಕ್ಸೈಡ್ ಪ್ರನಾಳ ದಲ್ಲಿ ಹಾಕಿ ಬಿಸಿ ಮಾಡಿ ಉತ್ಪತ್ತಿಯಾದ ಆಮ್ಲಜನಕದಿಂದ ಕಡ್ಡಿ ಉರಿಸಿ ತೋರಿಸಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತೆ ಇದೆ .ಇವರು ಬರುವ ವರೆಗೆ ಲ್ಯಾಬ್ ಉಪಕರಣಗಳು ಪ್ರಯೋಗಾಲಯದಲ್ಲಿ ಧೂಳು ಹಿಡಿಯುತ್ತಿದ್ದವು . ಭೌತ ಶಾಸ್ತ್ರದ ವೇಗ ವೇಗೋತ್ಕರ್ಷ ,ನ್ಯೂಟನ್ ಚಲನಾ ನಿಯಮಗಳ ಬಗ್ಗೆ ಅವರ ಮಾತುಗಳು ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ .
ಶಾಲೆಯಲ್ಲಿ ಒಂದು ವಿಜ್ಞಾನ ಸಂಘ ಆರಂಭಿಸಿದ್ದು ಕನ್ನಡದಲ್ಲಿ ವಿಜ್ಞಾನ ಲೋಕ ಎಂಬ ಪತ್ರಿಕೆ ನಡೆಸುತ್ತಿದ್ದ ಸುರತ್ಕಲ್ ಕೆ ಆರ್ ಈ ಸಿ ಪ್ರಾಧ್ಯಾಪಕ ಡಾ ಪಾ ದೇವರಾವ್ ಅವರನ್ನು ಉದ್ಘಾಟಗೆ ಕರೆಸಿದ್ದರು , . ಶಾಲೆಯಲ್ಲಿ ಕೈಬರಹದ ಪತ್ರಿಕೆ ಹುಟ್ಟು ಹಾಕಿ ವಿದ್ಯಾರ್ಥಿಗಳಲ್ಲಿ ಬರೆಯುವ ಅಭ್ಯಾಸ ಕ್ಕೆ ಪ್ರೋತ್ಸಾಹ ಕೊಟ್ಟರು .ನಾನು ನಾಸೆರ್ ಚರಿತ ವೆಂಬ ಕಿರು ಪುರಾಣವು ಎಂಬ ಲೇಖನ ಬರೆದ ನೆನಪಿದೆ .(ಈಜಿಪ್ಟ್ ಅಧ್ಯಕ್ಷ ನಾಸೆರ್ ಮೇಲೆ ).ಈಗಲೂ ಶಾಲೆಯ ವಾಚನಾಲಯ ದಲ್ಲಿ ಪತ್ರಿಕೆ ಇದೆ ಎಂದು ಕೇಳಿದ್ದೇನೆ ,
ಮಾಷ್ಟ್ರ ಬಳಿ ಒಂದು ಬೈಸಿಕಲ್ ಇದ್ದು ಕೆಲವೊಮ್ಮೆ ನಮ್ಮನ್ನು ಡಬ್ಬಲ್ ರೈಡ್ ಮಾಡಿ ಕೊಂಡು ಕರೆದೊಯ್ಯುತ್ತಿದ್ದರು . ನಾನು ಹತ್ತನೇ ತರಗತಿಯಲ್ಲಿ ಇರುವಾಗ ಅವರಿಗೆ ಮುಡಿಪ್ಪು ಶಾಲೆಗೆ ವರ್ಗ ಆಗಿ ನಮ್ಮ ಶಾಲೆಗೆ ದೊಡ್ಡ ನಷ್ಟ ಆಯಿತು ಎನ್ನ ಬಹುದು .ಮುಂದೆ ಅವರು ಆರ್ಟ್ಸ್ ವಿಷಯ ಬಾಹ್ಯ ಎಂ ಈ ಮಾಡಿ ಜೂನಿಯರ್ ಕಾಲೇಜು ಅಧ್ಯಾಪಕ ಹುದ್ದೆ ಆಯ್ದು ಪ್ರಿನ್ಸಿಪಾಲ್ ಆಗಿ ನಿವೃತ್ತರಾದವರು ಪುತ್ತೂರಿನಲ್ಲಿ ನೆಲೆಸಿದ್ದರು .. ಇದರಿಂದ ವಿಜ್ಞಾನ ಶಿಕ್ಷಣಕ್ಕೆ ನಷ್ಟ ಆಯಿತು ಎಂದು ನನ್ನ ಅಭಿಪ್ರಾಯ .
ಅಸೌಖ್ಯದ ದಿನಗಳಲ್ಲಿ ವೈದ್ಯನಾಗಿ ನನ್ನ ಗುರುಗಳ ಕಿಂಚಿತ್ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು ನನ್ನ ಸೌಭಾಗ್ಯ .
ಅವರ ಮಕ್ಕಳು , ಅದರಲ್ಲು ಮಗಳು ಸುಪ್ರೀತಾ ಮತ್ತು ಅಳಿಯ ಯಾಜಿ ಯವರು ಶ್ರದ್ಧೆ ಯಿಂದ ಕೊನೆಗಾಲದಲ್ಲಿ ಆರೈಕೆ ಮಾಡಿದ್ದಾರೆ . ಅವರಿಗೆ ಒಳ್ಳೆಯದಾಗಲಿ .
ಬಾಲಂಗೋಚಿ : ನಮ್ಮ ಕಾಲದಲ್ಲಿ ಎರಡು ವರ್ಗದ ಅಧ್ಯಾಪಕರು ಇದ್ದರು . ಮೊದಲನೆಯವರು ಯಾವುದೇ ತಯಾರಿ ಇಲ್ಲದೆ ತರಗತಿಗೆ ಬಂದು ಪಠ್ಯ ಪುಸ್ತಕ (ಅದೂ ಮೊದಲ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಯಿಂದ ) ವಾಚನ ಮಾಡಿ ಆಗಾಗ ಯು ಅಂಡರ್ ಸ್ಟಾಂಡ್ ?ಎನ್ನುವರು (ಅವರಿಗೇ ಅರ್ಥವಾಗಿರ ದಿದ್ದರೂ ),ವಿದ್ಯಾರ್ಥಿಗಳು ಕೋಲೆ ಬಸವನಂತೆ ಯಸ್ ಸರ್ ಎನ್ನುವರು . ಎರಡೇ ವರ್ಗ ಅಧ್ಯಯನ ಮಾಡಿ ಪಠ್ಯ ಪುಸ್ತಕ ಸಹಿತ ಅಥವಾ ರಹಿತ ಬಂದು ಪಾಠ ಮಾಡುವವರು . ಎರಡನೇ ವರ್ಗದವರ ಸಂಖ್ಯೆ ಕಡಿಮೆ ಇದ್ದುದು ನಮ್ಮ ದುರ್ದೈವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ