ಮೊನ್ನೆ ಭಾನುವಾರ ಮಂಗಳೂರು ಸಂಗೀತ ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದೆ . ಈ ಬಾರಿ ಟ್ರೈನ್ ನಲ್ಲಿ ;ನನ್ನ ಹಳೇ ರೈಲು ಕನೆಕ್ಷನ್ ಒಂದು ;ಈಗ ಮಂಗಳೂರಿಗೆ ರಸ್ತೆ ಮೂಲಕ ಹೋಗುವುದು ದುಸ್ತರ ;ಮಾಣಿಯಿಂದ ಬಿ ಸಿ ರೋಡ್ ವರೆಗೆ ಕಾಮಗಾರಿ ನಡೆಯುವ ಕಾರಣ ಭಾಗಷಃ ಧೂಳು ಮಯ . ಮುಂಜಾನೆ 7.55 ಕ್ಕೆ ಹೊರಡುವ ಕಬಕ ಪುತ್ತೂರು ಮಂಗಳೂರು (6484)ಪ್ಯಾಸೆಂಜರ್ .ಅದಕ್ಕೆ ಎಕ್ಷ ಪ್ರೆಸ್ ಎಂದು ನಾಮಕರಣ ಮಾಡಿದ್ದಾರೆ . ಅದರಿಂದ ಚಾರ್ಜ್ ಮೂವತ್ತು ರೂಪಾಯಿ ಇದೆ . ಪುತ್ತೂರಿನಿಂದ ಎಕ್ಷ ಪ್ರೆಸ್ ಅಥವಾ ಪ್ಯಾಸೆಂಜರ್ ಗೆ ಬಹಳ ವ್ಯತ್ಯಾಸ ಇಲ್ಲ .ನಡುವೆ ಬಿಸಿ ರೋಡ್ ಮತ್ತು ನೇರಳಕಟ್ಟೆ ಎರಡೇ ಸ್ಟೇಷನ್ .
ಟ್ರೈನ್ ನ ಒಳಗಡೆ ಬಹಳ ಸ್ವಚ್ಚತೆ ಇದೆ . ಲೋಕಲ್ ಗಾಡಿಗಳ ಹಾಗೆ ಕಸಕಡ್ಡಿ ಕಾಣಿಸಲಿಲ್ಲ . ಈಗ ರೈಲ್ವೆ ಸ್ಟೇಷನ್ ಮತ್ತು ಬೋಗಿಗಗಳ ಒಳಗಡೆ ಸ್ವಚ್ಛತಾ ಕಾರ್ಯವನ್ನು ಹೊರ ಗುತ್ತಿಗೆ ಮಾಡಿದ್ದಾರೆ .ಹಿಂದೆ ರೈಲ್ವೆ ನೌಕರರರೇ ನಿಭಾಯಿಸುತ್ತಿದ್ದರು . ಭಾನುವಾರ ಆದಕಾರಣ ಪ್ರಯಾಣಿಕರು ಹೆಚ್ಚು ಇರಲಿಲ್ಲ . ಇದ್ದವರೂ ಕೂಡಾ ಮಲಯಾಳದಲ್ಲಿ ಮಾತನಾಡುತ್ತಿದ್ದರು .
9.15 ಕ್ಕೆ ಮಂಗಳೂರು ಸೆಂಟ್ರಲ್ ತಲುಪಿತು .ಬಿ ಸಿ ರೋಡ್ ನಲ್ಲಿ ಕೂಡಾ ಹೆಚ್ಚು ಪ್ರಯಾಣಿಕರು ಹತ್ತಿದಂತೆ ಕಾಣಿಸಲಿಲ್ಲ . ಮಂಗಳೂರು ಸೆಂಟ್ರಲ್ ಸ್ಟೇಷನ್ ನಲ್ಲಿ ಬೇ (ಕೊಲ್ಲಿ )ಲೈನ್ ಎಂಬ ಪ್ರತ್ಯೇಕ ಹಳಿಯಿದೆ .ಬೆಕ್ಕಿನ ಬಿಡಾರ ಬೇರೆ ಎಂಬಂತೆ ಪುತ್ತೂರು ಸುಬ್ರಹ್ಮಣ್ಯ ಲೋಕಲ್ ನಿಲ್ದಾಣ . ಗಾಡಿ ಅಲ್ಲಿ ಬಂದ ಒಡನೆ ಅದರ ಬೋರ್ಡ್ ಮಂಗಳೂರು ಸೆಂಟ್ರಲ್ -ಸುಬ್ರಹ್ಮಣ್ಯ ರಸ್ತೆ(06489) ಎಂದು ಬದಲಾಯಿಸಲ್ಪಟ್ಟಿತು .ಮಂಗಳೂರು ಸ್ಟೇಷನ್ ಸ್ವಚ್ಚತೆ ಕೂಡಾ ಚೆನ್ನಾಗಿದೆ . ಮೇಲ್ಸೇತುವೆಗೆ ಹತ್ತಲು ಲಿಫ್ಟ್ ಸೌಕರ್ಯ ಇದೆ . ಮೊದಲು ನಾನು ಇನ್ಸ್ಪೆಕ್ಷನ್ ಮಾಡಿಕೊಂಡು ಇದ್ದ ಸ್ಟೇಷನ್ .
ಸ್ಟೇಷನ್ ನ ಹೊರಗೆ ಕಾರ್ ಪಾರ್ಕ್ ಫುಲ್ ಆಗಿದೆ .ಈಗ ಎರಡು ಹಂತದ ಪಾರ್ಕಿಂಗ್ ಇದೆ .ಹಿಂದೆ ನಾನು ಇದ್ದಾಗ ಒಂದೆರಡು ಅಂಬಾಸೆಡರ್ ಕಾರ್ ಬಿಟ್ಟರೆ ಪಾರ್ಕಿಂಗ್ ಬಿಕೋ ಎನ್ನುತಿತ್ತು . ಎಂದಿನಂತೆ ಕೊಲ್ಲೂರು ಬಸ್ಸಿನ ಕಂಡಕ್ಟರ್ ಗಳು ತಾರಕ ಸ್ವರದಲ್ಲಿ ಕೊಲ್ಲೂರು ಕೊಲ್ಲೂರು ,ಮುಕಾಂಬಿಕೆಯ್ ಎಂದು ಕೋಗಿ ಮುಖ್ಯವಾಗಿ ಮಲಯಾಳಿ ಪ್ರಯಾಣಿಕರನ್ನು ಆಹ್ವಾನಿಸುತ್ತಿದ್ದಾರೆ . ಹೊರಬರುತ್ತಿರುವ ಪ್ರಯಾಣಿಕರಲ್ಲಿ ಹಿಂದಿ ಭಾಷೆಯವರು ಕೂಡಾ ಅಧಿಕ ಇರುವುದು ಈಗಿನ ವಿಶೇಷ .
ಸ್ಟೇಷನ್ ನಿಂದ ಹೊರಬಿದ್ದು ನಡೆದು ಕೊಂಡೇ ಹೊರಟೆ .ರೈಲ್ವೆ ಕಾಲೋನಿ ಗೆ ಮುಖ್ಯ ರಸ್ತೆಯಿಂದ ಇದ್ದ ಒಳ ರಸ್ತೆಗಳನ್ನು ಬಂದ್ ಮಾಡಿ ಗೋಡೆ ಕಟ್ಟಿದ್ದು ರೇಲ್ವೆ ಪೊಲೀಸ್ ಠಾಣೆ ಯ ಎದುರಿನ ಒಂದೇ ರಸ್ತೆ ತೆರೆದು ಇಟ್ಟಿದ್ದಾರೆ . ರೈಲ್ವೆ ಕಾಲೋನಿ ಪಶ್ಚಿಮಕ್ಕೆ ಪೋಲಿಸ್ ಕ್ವಾರ್ಟರ್ಸ್ ಇದ್ದು ಅಲ್ಲಿಯೂ ಹೀಗೆ ಮಾಡಿರುವರು .ಭದ್ರತಾ ದೃಷ್ಟಿ ಯಿಂದ ಇರ ಬೇಕು . ಮುಂದೆ ಬಂದು ಮುಖ್ಯ ರಸ್ತೆಯಲ್ಲಿ ದಕ್ಷಿಣಕ್ಕೆ ;ಮಂಗಳೂರು ನಗರದ ಉತ್ತಮ ರಸ್ತೆಗಳಲ್ಲಿ ಒಂದು .ಪಾದಚಾರಿ ಗಳಿಗೆ ಸಾಕಷ್ಟು ಜಾಗ ಇಟ್ಟಿರುವರು . ಮುಂದೆ ಆರ್ ಟಿ ಓ ಆಫೀಸ್ ದಾಟಿ ಬಿ ಶೆಟ್ಟಿ ವೃತ್ತ .ಇಲ್ಲಿ ಕಾಮಗಾರಿ ನಡೆಯುತ್ತಿದ್ದು ಸ್ವಲ್ಪ ಮಣ್ಣು ಧೂಳು ಇದೆ . ಭಾರತೀಯ ವಿದ್ಯಾ ಭವನದಲ್ಲಿ ಎಂದಿನಂತೆ ಗಾರ್ಡನ್ ವರೇಲಿ ಸೀರೆ ಸೇಲ್ ಇದೆ .ಮುಂದೆ ಕಾರ್ಪೋರೇಶನ್ ಬ್ಯಾಂಕ್ ಮುಖ್ಯ ಕಚೇರಿ ಯೂನಿಯನ್ ಬ್ಯಾಂಕ್ ಎಂದು ಹೆಸರು ಬದಲಾಯಿಸಿ ಕೊಂಡುದು ಕಂಡು ಹೃದಯ ಭಾರ ಆಯಿತು .ಮುಂದೆ ಬಲ ಬದಿಯಲ್ಲಿ ಇದ್ದ ಅಮೃತ್ ಥೀಯೇಟರ್ ಕಾಣೆಯಾಗಿ ಅಲ್ಲಿ ಬಹು ಮಹಡಿ ಕಟ್ಟಡ ನಿಂತಿದೆ .ಅಲ್ಲಿ ನಾನು ಹಿಂದೆ ನಾಗರಹಾವು ,ಹಿಸ್ ಹೈನೆಸ್ಸ್ ಅಬ್ದುಲ್ಲಾ ಸಿನೆಮಾ ನೋಡಿದ್ದು .ಅದಕ್ಕೆ ತಾಗಿಕೊಂಡು ಹಿಂದೆ ಒಂದು ಮನೆಯಲ್ಲಿ ಕ್ರಿಶ್ಚಿಯನ್ ಫಾದರ್ ಒಬ್ಬರು ಫ್ರೆಂಚ್ ಭಾಷೆ ಕಲಿಸುತ್ತಿದ್ದ ನೆನಪು .
ಮುಂದಕ್ಕೆ ಶ್ರೀನಿವಾಸ ಕಾಲೇಜು ನವರ ಶಾಖೆ ,ರೈಲ್ವೆ ಗೇಟ್ .ದಾಟಿ ಹೋದರೆ ಬಲ ಬದಿಯಲ್ಲಿ ಇದ್ದ ಡಾ ಅಮರ ನಾಥ ಹೆಗ್ಡೆ ಯವರ ಬಂಗ್ಲೆ ಮನೆ ಕಾಣಿಸಲಿಲ್ಲ . ಒಟ್ಟಿನಲ್ಲಿ ರಸ್ತೆ ಅಗಲವಾಗಿ ಚಂದ ಆಗಿದೆ .ಫುಟ್ ಪಾತ್ ಕೂಡಾ ಇದೆ .ಪುತ್ತೂರಿನಲ್ಲಿ ಫುಟ್ ಪಾತ್ ಬೇಕಾದಲ್ಲಿ ಇಲ್ಲ .ಇಲ್ಲಿ ಜಿಲ್ಲಾ ಕೇಂದ್ರ ಆಗಬೇಕು ಎಂದು ಬೇಡಿಕೆ ಇಡುವವರು ಇಲ್ಲಿನ ಮೂಲ ಸೌಕರ್ಯ ದ ವಿಚಾರದಲ್ಲಿ ಯೋಚನೆ ಮಾಡಿದಂತೆ ಇಲ್ಲ .
ಹೀಗೆ ಮುಂದೆ ರಾಮಕೃಷ್ಣ ಆಶ್ರಮದ ಕಾಂಪೌಂಡ್ ಒಳಗೆ ಇರುವ ವಿವೇಕಾನಂದ ಸಭಾಭವನ ಕ್ಕೆ ಬಂದು ಕುಳಿತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ