ಬೆಂಬಲಿಗರು

ಮಂಗಳವಾರ, ಜನವರಿ 31, 2023

ದಕ್ಷಿಣಾ ಮೂರ್ತಿ ನೆನಪು

                    Vintage Vignettes: Remembering V. Dakshinamoorthy - India Art Review 

ಮೊನ್ನೆ ಸಾಯಂಕಾಲ ಮಾತೃಭೂಮಿ ಮಲಯಾಳಂ ಚಾನೆಲ್ ನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು . ವಿದುಷಿ ಒಬ್ಬರು ಮಲಯಾಳಂ ಸಿನಿಮಾ ದ  ಪ್ರಸಿದ್ಧ ಸಂಗೀತ ನಿರ್ದೇಶಕ ದಿ . ದಕ್ಷಿಣಾ ಮೂರ್ತಿ ಅವರ ಜನಪ್ರಿಯ  ಹಾಡುಗಳ ಶಾಸ್ತ್ರೀಯ ಸಂಗೀತ ಹಿನ್ನಲೆ ಯ ಬಗ್ಗೆ  ಸಾದೋಹರಣ ಪ್ರಸ್ತುತ ಪಡಿಸುತ್ತಿದ್ದರು .ಹೆಚ್ಚಿನ ಗೀತೆಗಳು ನನಗೆ ಪರಿಚಿತವಾಗಿದ್ದು ಒಂದು ರಿವಿಶನ್ ಆದಂತೆ ಆಯಿತು . ದಕ್ಷಿಣಾ ಮೂರ್ತಿ ಶಾಸ್ತ್ರೀಯ ಸಂಗೀತ ಹಿನ್ನಲೆ ಯವರು ,ಸಹಜವಾಗಿಯೇ ಅವರ ಹಾಡುಗಳಲ್ಲಿಅದರ ಛಾಪು . ಪ್ರಸಿದ್ಧ ಕವಿ ಶ್ರೀಕುಮಾರನ್ ತಂಬಿ ಅವರ ಅನೇಕ ಗೀತೆಗಳಿಗೆ ಅವರು ಸ್ವರ ಹಾಕಿರುವರು . ಯೇಸುದಾಸ್ ಮತ್ತು ಅವರ ತಂದೆ ಆಗಸ್ಟಿನ್  ,ಇಳಯರಾಜ ಮುಂತಾದವರು ಇವರ ಗರಡಿಯಲ್ಲಿ ಪಳಗಿದವರು . 

ಆ ಕಾರ್ಯಕ್ರಮದಲ್ಲಿ ಎರಡು ಹಾಡುಗಳು ನನ್ನ ಇಷ್ಟದವು . 

ಒಂದು ಸಂಧ್ಯೆಕ್ಕೆಂದಿನು ಸಿಂಧೂರಮ್ (ರಚನೆ ಶ್ರೀಕುಮಾರನ್ ತಂಬಿ ).ಅದರ ಭಾವಾರ್ಥ ಹೀಗಿದೆ 

ಸಂಧ್ಯೆಗೆ ಏಕೆ ಸಿಂಧೂರ (ಸಾಯಂಕಾಲಕ್ಕೆ ಏಕೆ ಕುಂಕುಮ ಬೊಟ್ಟು )

ಬೆಳದಿಂಗಳಿಗೆ ಏಕೆ ವೈಡೂರ್ಯ 

ಕಾಡಿಗೇಕೆ  ಗೆಜ್ಜೆ 

ನನ್ನ ಕಣ್ಮಣಿ ನಿನಗೇಕೆ ಆಭರಣ ?(ನೀನೇ ಆಭರಣ ಎಂಬ ಅರ್ಥ )

ಮೇಲಿನ ಸಾಲುಗಳು ಪ್ರಿಯಕರನು ಪ್ರಿಯೆಯನ್ನು ಉದ್ದೇಶಿಸಿ ಹಾಡುವದು . ಆದರೂ ಆಭರಣದ ಬೇಡಿಕೆ ಇತ್ತ ಪತ್ನಿಯರಯನ್ನು ಸಮಾಧಾನ ಪಡಿಸಲೂ ಇದನ್ನು ಧಾರಾಳ ಬಳಸಿಕೊಳ್ಳ ಬಹುದು . 

ಇನ್ನೊಂದು ಹಾಡು

ಸ್ವಪ್ನ೦ ಗಳ್  ಸ್ವಪ್ನನ್ಗಳೇ ನಿಂಗಲ್ ಸ್ವರ್ಗ ಕುಮಾರಿಗಳಲ್ಲೇ ( ರಚನೆ ವಯಲಾರ್ ರಾಮ ವರ್ಮಾ )

ಇದರ ಭಾವಾರ್ಥ 

ಕನಸುಗಳೇ ನೀವು ಸ್ವರ್ಗ ಕುಮಾರಿಗಳು ಅಲ್ಲವೇ 

ನೀವು ಇಲ್ಲದ ಈ ಜಗವು ನಿಶ್ಚಲ ಶೂನ್ಯ 

ನೀವಿಲ್ಲದ ಜಗದಲಿ 

ದೇವರು ಮನುಜರು ,ಸೌಂದರ್ಯ ಸಂಕಲ್ಪ ಶಿಲೆಗಳು ,ಸುಗಂಧ  ಪುಷ್ಪಗಳು ಇಲ್ಲ 

ಸ್ವರ್ಗದಿಂದ ಇಳಿದು ಬಂಡ ಬಣ್ಣದ ಚಿಟ್ಟೆಗಳು 

ನನಗರಿವಿಲ್ಲದೆಯೇ ಮಾಡುವಿರಿ  ಕೆತ್ತನೆಯಿಲ್ಲದ ನನ್ನ ಮನದ ಬಾಗಿಲು ತೆರೆದು ಕಾಮನಬಿಲ್ಲಿನ ವರ್ಣಗಳ ಚಿತ್ರಣ . 

https://youtu.be/mVndpu2lu7o



ಸೋಮವಾರ, ಜನವರಿ 30, 2023

ರಾಜ (ಗಾನ )ಯೋಗ

 

                                                                                       ನಿನ್ನೆ ಪುತ್ತೂರಿನ ಜೈನ ಭವನದಲ್ಲಿ ತ್ರಿವಾಂಕೋರ್ ರಾಜ ಮನೆತನದ  ರಾಜಕುಮಾರ ರಾಮ ವರ್ಮ ಅವರ ಸಂಗೀತ ಯಾಗ (ಅಶ್ವ ಮೇಧ ಯಾಗದಂತೆ ; ಸಂಗೀತ ಅಶ್ವ ತನ್ನನ್ನು ಹಿಡಿಯಿರಿ ಎಂದು ಹೇಳುವಂತಿತ್ತು ). ಹೇಳಿಕೇಳಿ ರಾಜರು ,ಸ್ವಾತಿ ತಿರುನಾಳ್ ವಂಶಜರು ;ಅವರ ಬತ್ತಳಿಕೆಯಲ್ಲಿ ಹಲವು ನಾದ ಬಾಣಗಳು . 

ರಾಮ ವರ್ಮಾ ಬಾಲಮುರಳಿ ಕೃಷ್ಣ ಅವರ ಶಿಷ್ಯರು .ಅವರ ಛಾಪು ಎದ್ದು ಕಾಣಿಸುವುದು ಸಹಜ .ಹಸನ್ಮುಖ ,ಪ್ರತಿ ಕೃತಿ ಆರಂಭದಲ್ಲಿ ಯೂ ಅದರ ಕಿರು ಪರಿಚಯ . ಮುಖ ಚಹರೆ ಬದಲಿಸದೆ ಸಂಗೀತ ಸ್ವರ ದ ಏರಿಳಿತ ಪ್ರಸ್ತುತಿ ;ತಾರಕಕ್ಕೆ ಕಡಿಮೆ ಮಂದ್ರ ಜಾಸ್ತಿ . ,ಕನ್ನಡವೂ ಸೇರಿ  ಎಲ್ಲಾ ಭಾಷೆಯ ಕೃತಿಗಳ ಅರ್ಥ ಅವರಿಗೆ ಕರತಮಾಲಕ . ಶುದ್ಧ ಸಾಹಿತ್ಯ .ಸಾಹಿತ್ಯಕ್ಕೆ ತಕ್ಕಂತೆ ಅಭಿನಯ .ಉದಾ;ಕೊಳಲನೂದುತ ಬಂದ  ಎಂದು ಹಾಡುವಾಗ ಮಾಡಿ ತೋರಿಸುವರು . ನಿನ್ನೆಯ ಕಚೇರಿಯಲ್ಲಿ ದಾಸ ಸಾಹಿತ್ಯಕ್ಕೆ   ಪ್ರಾಧಾನ್ಯತೆ . 

ಕಚೇರಿ ಯಶಸ್ವಿ ಆಗಲು ಸಂಗೀತ ಗಾರರ ತಂಡ ಮತ್ತು ಆಸಕ್ತ  ಪ್ರೇಕ್ಷಕ ಗಣ ಎರಡೂ ಮುಖ್ಯ .ನಿನ್ನೆ ವಯಲಿನ್ ನಲ್ಲಿ ಶ್ರೀ ಎಸ ಅರ ವೇಣು ; ಮುಖದಲ್ಲಿ ಮಾಸದ ತುಂಟ ನಗು .ನನಗೆ ಎಚ್ ಏನ್ ಭಾಸ್ಕರ್ ಅವರ ನಗು ನೆನಪಿಸುತ್ತದೆ . ರಾಮ ವರ್ಮ ಅವರ ಜತೆಗೆ  ಪಳಗಿದ ಇವರಿಗೆ ಅವರ ಮನೋಧರ್ಮ ಸುಪರಿಚಿತ .  ಅವರ ಪಕ್ಕ ವಾದ್ಯ ಕಚೇರಿಯ ಕಳೆ ಏರಿಸಿದ್ದ್ದು ಸತ್ಯ . ಮೃದಂಗ ದಲ್ಲಿ ಶ್ರೀ ಹರಿಕುಮಾರ್ ಮತ್ತು ಘಟಂ ನಲ್ಲಿ ಡಾ ಕಾರ್ತಿಕ್ ಇವರು ಹೇಳಿಕೇಳಿ ಘಟಾನುಘಟಿಗಳು . ಕಚೇರಿ ಉತ್ಸಾಹ  ತಾರಕಕ್ಕೆ  ಹೋಗಲು ಇವರೇ ಕಾರಣ .ಹೊಡಿ ನಗಾರಿ ಮೇಲೆ ಕೈಯ್ಯಾ ಎಂಬ ದಾಸರ  ಕೀರ್ತನೆ ಆರಂಭದಲ್ಲಿ ಕಾರ್ತಿಕ್ ಘಟ   ಘಟಿಸಿದ್ದು ನಗು ಉಕ್ಕಿಸಿತು . 

ರಾಮ ವರ್ಮಾ ಪಕ್ಕ ವಾದ್ಯದವರು ಮತ್ತು ಪ್ರೇಕ್ಷಕರ ನಡುವೆ ಸದಾ ಸಂಹವನ ನಿರತರು . ಇದರಿಂದ ನಿರೀಕ್ಷಿತ ಉತ್ತೇಜನ . ರಾಜಕುಮಾರ ರಾಮ ವರ್ಮಾ ಅವರ    ಸುಮಧುರ ಸಂಗೀತ ವರ್ಷ  ಧಾರೆಯಲ್ಲಿ ಗುಡುಗು ಮಿಂಚುಗಳು ಇಲ್ಲ ,ಅವನ್ನು ತುಂಬಿದ್ದು ತಾಳ ವಾದ್ಯಗಳು . 

ಒಳ್ಳೆಯ ಶ್ರೋತೃಗಳು .ನಿನ್ನೆ ಕೊನೆತನಕ ಎಂದರೆ ರಾತ್ರಿ ಒಂಬತ್ತು ವರೆಗೆ ತುಂಬಿದ  ಸಭಾಂಗಣ . ಕೊನೆಗೆ ಎದ್ದು ನಿಂತು ಕರತಾಡನ . ನೀವು ಯಾವತ್ತು ಕರೆದರೂ ನಾನು ಬರುವೆನು ಎಂದು ಕಲಾವಿದರು ಮನ ತುಂಬಿ ಹೇಳಿದರು . 

ಧ್ವನಿ ವರ್ಧಕ ವ್ಯವಸ್ಥೆ ಬಲು ಉತ್ತಮ ಮಟ್ಟದಲ್ಲಿ ಇತ್ತು . ಪ್ರಾಯೋಜಕರಾದ ಡಾ ಶ್ರೀ ಪ್ರಕಾಶ್ ಕುಟುಂಬ ಮತ್ತು ಅವರಿಗೆ ಸಹಕರಿಸಿದ ಪುತ್ತೂರು ನಿಕ್ಷಿತ್ ಅವರನ್ನು  ಎಷ್ಟು ಕೊಂಡಾಡಿದರೂ ಸಾಲದು . 

ನಿನ್ನೆ ಕಚೇರಿ ತಪ್ಪಿದ್ದರೆ ತುಂಬಲಾರದ ನಷ್ಟ ಆಗುತ್ತಿದದ್ದು ಕ್ಲೀಶೆ ಅಲ್ಲ 

(ನಾನು ಕುಳಿತಲ್ಲಿಂದ ಪಿಟೀಲು ವಾದಕ ವೇಣು ಅವರ ಮುಖ  ಸರಿಯಾಗಿ ಕಾಣಿಸುತ್ತಿರಲಿಲ್ಲ ,ಆದ್ದರಿಂದ ಕಚೇರಿ ಮುಗಿದ ಮೇಲೆ ಪ್ರತ್ಯೇಕ ಫೋಟೋ ತೆಗೆದು ಹಾಕಿದ್ದೇನೆ )

 

ಶನಿವಾರ, ಜನವರಿ 28, 2023

ಸಂಜೀವಿನಿ ಸಿಂಡ್ರೋಮ್

 ನಮ್ಮ ಫಿಸಿಯೋಲಾಜಿ ಪ್ರೊಫೆಸರ್ ಡಾ ನಾರಾಯಣ ಶೆಟ್ಟಿ ಪರೀಕ್ಷೆ ಪೇಪರ್ ಕೊಡುವಾಗ 'ವಿದ್ಯಾರ್ಥಿಗಳು ಬಹುಮಂದಿ ಹನುಮಾನ್ ಸಂಜೀವಿನಿ ಸಿಂಡ್ರೋಮ್ "ಕಾಯಿಲೆಯಿಂದ ಬಳಲುವರು "ಎಂದು ಹೇಳುತ್ತಿದ್ದರು . ಪ್ರಶ್ನೆಗೆ  ತಿಳಿದೋ ತಿಳಿಯದೆಯೋ ನೇರ ಉತ್ತರ ಬರೆಯದೆ ಪುಟಗಟ್ಟಲೆ ಗೀಚುವರು .ಪರೀಕ್ಷಕರು ಅದರಲ್ಲಿ ಸರಿ ಉತ್ತರ ಎಲ್ಲಿ ಇದೆ ಇದೆ ಎಂದು ತಾಳ್ಮೆಯಿಂದ ಹುಡುಕಿ ತೆಗೆದು ಮಾರ್ಕ್ ಕೊಡಬೇಕಾಗುವುದು . 

ಆಸ್ಪತ್ರೆಯಲ್ಲಿ ಕೂಡಾ ಇದು ಆಗಾಗ ಕಾಣಿಸಿ ಕೊಳ್ಳುತ್ತದೆ . ತಮ್ಮ ವೈದ್ಯಕೀಯ ದಾಖಲೆ ಕೇಳಿದಾಗ ರೋಗಿಗಳು ಅಥವಾ ಜತೆಗೆ ಬಂದವರು ಒಂದಿಷ್ಟು ಕಾಗದದ ರಾಶಿಯನ್ನು ನಮ್ಮ ಮೇಜಿನ ಮೇಲೆ ಸುರುವಿ ಬಿಡುವರು .ಅದರಲ್ಲಿ ರೇಷನ್ ಕಾರ್ಡ್ ,ಜೀನಸು ಅಂಗಡಿ ಪಟ್ಟಿ ..ಕೋರ್ಟ್ ವಾಯಿದೆ ನೋಟೀಸ್ ,ಹಿಂದಿನ ಆಸ್ಪತ್ರೆಯ ಬಿಲ್ಲುಗಳು ಇತ್ಯಾದಿಗಳ ನಡುವೆ ಕಷ್ಟ ಪಟ್ಟು ಸಮಯ ವ್ಯಯಿಸಿ ಹುಡುಕಾಡಿದರೆ ನಮಗೆ ಬೇಕಾದ ಪೇಪರ್ ಸಿಕ್ಕಿದರೆ ಪುಣ್ಯ . ಹಾಗೆಯೇ ಇನ್ನು ಕೆಲವರು ತಾವು ಸೇವಿಸುತ್ತಿರುವ ಔಷಧಿಗಳನ್ನೆಲ್ಲಾ ರಾಶಿ ಹಾಕುವುದೂ ಉಂಟು . 

ಇಂದ್ರಜಿತ್ ನ ಬಾಣದಿಂದ ಪ್ರಜ್ಞಾ ಹೀನ ನಾದ  ಲಕ್ಶ್ಮಣ ನನ್ನು ಗುಣಪಡಿಸಲು  ವಾನರ ವೈದ್ಯ ಸುಷೇನ ಸಂಜೀವಿನಿ ಮೂಲಿಕೆ ತರಲು ಹೇಳಿದಾಗ ಹನುಮಂತ ಪರ್ವತದಲ್ಲಿ ಅದನ್ನು ಹುಡುಕಿಕೊಂಡು ಕುಳಿತು ಕೊಳ್ಳುವದು ಯಾರು ಎಂದು ಪರ್ವತವನ್ನೇ ಹೊತ್ತು ತಂದು ಕೊಟ್ಟನೆಂದು ರಾಮಾಯಣದ ಕತೆ .

ನಿಜ ಗುರು

ಅಮೇರಿಕಾದಲ್ಲಿ ನಡೆದ  ಸ್ವಾಮಿ ರಂಗನಾಥಾನಂದ ಅವರ ಒಂದು ಸಂದರ್ಶನದಲ್ಲಿ  " ಸ್ವಾಮೀಜಿ ನೈಜ ಧರ್ಮ  ಗುರು (ಸ್ವಾಮಿ)ಮತ್ತು ಕಪಟ ಗುರು (ಸ್ವಾಮಿ)ವಿಗೆ ಏನು ವ್ಯತ್ಯಾಸ .ನಿಜ ಗುರುವನ್ನು ಕಂಡು ಕೊಳ್ಳುವುದು ಹೇಗೆ?"ಎಂದು ಕೇಳಿದಾಗ ಅವರು ಕೊಟ್ಟ ಸರಳ ಉತ್ತರ . 

ನಿಜ ತಾನು  ಗುರು ಅಧ್ಯಯನ ಶೀಲನಾಗಿ ತಾನು ಕೂಡಾ ಸದಾ ವಿದ್ಯಾರ್ಥಿ ಆಗಿರುತ್ತಾನೆ (ನನ್ನ ಟಿಪ್ಪಣಿ :ನಮ್ಮಲ್ಲಿ ಬಹುತೇಕ ಗುರುಗಳು ತಾವು ಸರ್ವಜ್ಞಾನಿ ಎಂದು ತಿಳಿದು ಕೊಂಡು ಯಾವುದೇ ವಿಷಯ ಗೊತ್ತಿಲ್ಲ ,ಅಧ್ಯಯನ ಮಾಡಿ ಅಥವಾ ಯೋಚಿಸಿ ಹೇಳುತ್ತೇನೆ ಎಂದು ಹೇಳುವುದು ಕಡಿಮೆ ). ತಾನು ಬೋಧಿಸಿದ್ದನ್ನು ಸ್ವಯಂ ಪಾಲಿಸುತ್ತಾನೆ . (ಟಿಪ್ಪಣಿ :ಇದು ಬಹಳ ಮುಖ್ಯ  ಇಲ್ಲಿ ಇತರರಿಗೆ ಸರಳ ಜೀವನ ಮಾಡಿ ಎಂದು ತಮ್ಮ ಜೇವನದಲ್ಲಿ ಐಷಾರಾಮಿ ಸಾಧನಗಳನ್ನು ಬಳಸುವುದು ,ಅರಿ ಷಡ್ವೈರಿ  ಗಳನ್ನು ದೂರ ಮಾಡಿ ಎಂದು ಕ್ರೋಧ ಮೋಹ ಗಳನ್ನು ಬಿಡದಿರುವುದು ಕಾಣುತ್ತೇವೆ ). 

ಬಹಳ ಮುಖ್ಯವಾಗಿ ನಿಜ ಗುರುವು ಧರ್ಮವನ್ನು       ಮಾರಾಟದ ಸರಕಾಗಿ ಮಾಡುವದಿಲ್ಲ .(ಟಿಪ್ಪಣಿ ; ಒಂದು ಸಾವಿರ ರುಪಾಯಿಗೆ ಬದುಕುವ ಕಲೆ ,ಎರಡು ಸಾವಿರ ರುಪಾಯಿಗೆ ಸಾಕ್ಷಾತ್ಕಾರ ಇತ್ಯಾದಿ ). ಚುನಾವಣಾ ಕಾಲದಲ್ಲಿ ರಾಜಕಾರಿಣಿಗಳು ಕೊಡುವಂತೆ ದಿಢೀರ್ ಪರಿಹಾರದ ಆಶ್ವಾಸನೆ    ಕೊಡುವುದಿಲ್ಲ . 

ಗುರುವನ್ನು  ಸ್ವೀಕಾರ ಮಾಡುವ ಮೊದಲು ಶಿಷ್ಯನು ಹಗಲಿರುಳು ಹಲವು ದಿನ ಅವರ   ಆಚಾರ ವಿಚಾರಗಳನ್ನು ಕೂಲಂಕುಷ ವಾಗಿ  ಪರಿಶೀಲಿಸ    ಬೇಕು ಎಂದು ರಾಮಕೃಷ್ಣ ಪರಮ ಹಂಸ ರು ಹೇಳಿದ್ದಾರೆ 


ಶುಕ್ರವಾರ, ಜನವರಿ 27, 2023

ಚಿಲ್ಲರೆ ಮನಸು

ಮೊನ್ನೆ ಮಂಗಳೂರಿನಲ್ಲಿ ಮಂಗಳಾದೇವಿಯಿಂದ ಬಿಜೈ ಗೆ ಹೋಗಲು ಹದಿನೈದು ನಂಬರ್ ಬಸ್ ಹತ್ತಿದೆ . ಇಪ್ಪತ್ತು ರೂಪಾಯಿ ನೋಟ್ ಕೊಡಲು ಕಂಡಕ್ಟರ್ ಐದು ರೂಪಾಯಿ ಇದ್ದರೆ ಕೊಡಿರಿ ಎಂದ ;ಚಾರ್ಜ್ ಇಪ್ಪತ್ತೈದು ಇರಬೇಕು ಎಂದು ತಡಕಾಡಿ ಐದು ರೂಪಾಯಿ ನಾಣ್ಯ ಅವನ ಕೈಯ್ಯಲ್ಲಿ ಇಡಲು ನಿಮಗೆ ಹತ್ತು ರೂಪಾಯಿ ಕೊಡ ಬೇಕು ಆಮೇಲೆ ಕೊಡುವೆನು ಎಂದ . ಅಲ್ಲಿಗೆ ಸುರು ಆಯಿತು ನನ್ನ ಮನಸಿನಲ್ಲಿ  ಹೊಯ್ದಾಟ . ಇಳಿಯುವ ರಶಿನಲ್ಲಿ ಅವನನ್ನು ಕೇಳುವುದು ಹೇಗೆ ? ಕಂಕನಾಡಿ ಯಲ್ಲಿ ಆತ ಪಕ್ಕಕ್ಕೆ ಬಂದಾಗ ಕೇಳಿದರೆ 'ಕೊಡುತ್ತೇನೆ ಏನು ಅವಸರ 'ಎಂದು  ಹೇಳಿಯಾನು .ಅಲ್ಲದೆ ಹತ್ತು ರೂಪಾಯಿ ದೊಡ್ಡ ಮೊತ್ತ ಅಲ್ಲ .ಹೀಗೆಲ್ಲಾ ಯೋಚನೆಯಲ್ಲಿ ಬಿಜೈ ಬಂತು ,ಬಾಕಿಯೂ ಸಿಕ್ಕಿತು .ಹಿಂದೆ ಕೆ ಎಸ ಆರ್ ಸಿ ಕಂಡಕ್ಟರ್ ಚಿಲ್ಲರೆ ಇಲ್ಲದಿದ್ದರೆ (ಕೆಲವೊಮ್ಮೆ ಇದ್ದರೂ )ಟಿಕೆಟ್ ಹಿಂದೆ ಬರೆದು ಕೊಡುತ್ತಿದ್ದರು . ಅದು ನಮಗೆ ಮರೆತು ಹೋಗ ಬರದಲ್ಲಾ ಎಂದು ಪ್ರಯಾಣದ ಉದ್ದಕ್ಕ್ಕೂ ಅದರದ್ದೇ ಚಿಂತೆ ಇರುತ್ತಿತ್ತು . ಪ್ರಯಾಣದ ಆನಂದ ಎಲ್ಲಾ ಮಾಯವಾಗುತ್ತಿತ್ತು . ಹೊಸ ಚಪ್ಪಲಿ ಹಾಕಿಕೊಂಡು ದೇವಸ್ಥಾನ ಕ್ಕೆ ಹೋದಾಗ ಹೊರಗಿಟ್ಟ 'ಚಪ್ಪಲೀ ಚಿತ್ತ 'ರಾಗಿ  ಪ್ರಾರ್ಥನೆ ಮಾಡಿದಂತೆ . 

ಹೀಗೆ ಐದು ಹತ್ತು ರುಪಾಯಿಗೆ ಚಿಂತೆ ಮಾಡುವ ನಾವು ಸರಕಾರಿ ಕಚೇರಿಗಳಲ್ಲಿ ಮಾಮೂಲು ಕೊಡುವಾಗ ಹಿಂದೆ ಮುಂದೆ ನೋಡುವುದಿಲ್ಲ . ಕೊಡದೆ ಅಲ್ಲಿ ಕೆಲಸ ಆಗುವುದಿಲ್ಲ . ಕೊಟ್ಟೇ ಕೆಲಸಕ್ಕೆ ಸೇರಿದವರಿಗೆ ಅದನ್ನು ಕೂಡುವ ಚಿಂತೆ ,ಕಾತುರ ಇರುತ್ತದೆ . ನಮ್ಮ ಕೈಯಿಂದ ಮಾಮೂಲು ತೆಗೆದು ಕೊಳ್ಳುವ ಬಹುತೇಕ ಮಂದಿ "ಇದು ನನಗೆ ಎಂದು ತಿಳಿದು ಕೊಂಡಿದ್ದೀರಾ .ಮೇಲಿನವರಿಗೂ ಪಾಲು ಹೋಗ ಬೇಕು "ಎಂದು ತಮ್ಮ ಸುಭಗತೆ ಯನ್ನು ತಿಳಿಯ ಪಡಿಸಲು ಯತ್ನಿಸುವರು . ಅತ್ಯಂತ ಮೇಲಿನವರು ಇವರಿಗೆ ಕೆಲಸ ಕೊಡಿಸುವಾಗ ಸಕ್ರಿಯ ಪಾತ್ರ ವಹಿಸಿದವರು ,ತಾವು ಪರಸ್ಪರ' ಅವನು ಭ್ರಷ್ಟ ಇವನು ಭ್ರಷ್ಟ' ಎಂದು ಹೇಳಿಕೆ ಕೊಡುತ್ತಿರುವವರು .ಅದನ್ನು ಓದಿ ಉದ್ವೇಗದಿಂದ ಪಕ್ಷ ಹಿಡಿದು ನಾವು ಪುನೀತ ರಾಗುವೆವು . ಈ ರೀತಿ ಜನರಿಗೆ ಹೆಚ್ಚು ಹೆಚ್ಚು ತೊಂದರೆ ಕೊಡುವ ಶಕ್ತಿಯುಳ್ಳ ಡಿಪಾರ್ಟ್ಮೆಂಟ್ ನ ಅಧಿಕಾರಿಗಳನ್ನು  ಹೆಚ್ಚಾಗಿ ಧಾರ್ಮಿಕ ಮತ್ತು ಶೈಕ್ಷಣಿಕ  ಸಮಾರಂಭಗಳಿಗೆ  ಕರೆದು ಪ್ರವಚನ ಮಾಡಿಸುವೆವು ,ಅವರೂ ದೇಶ ಭಕ್ತಿ ,ಪ್ರಾಮಾಣಿಕತೆ ಮತ್ತು ಸತ್ಯ ಸಂದತೆ ಬಗ್ಗೆ ಕೊರೆಯುವರು

ಸೋಮವಾರ, ಜನವರಿ 23, 2023

ಮೊನ್ನೆ ಭಾನುವಾರ ಮಂಗಳೂರು ಸಂಗೀತ ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದೆ . ಈ ಬಾರಿ ಟ್ರೈನ್ ನಲ್ಲಿ ;ನನ್ನ ಹಳೇ ರೈಲು ಕನೆಕ್ಷನ್ ಒಂದು ;ಈಗ ಮಂಗಳೂರಿಗೆ ರಸ್ತೆ ಮೂಲಕ ಹೋಗುವುದು ದುಸ್ತರ ;ಮಾಣಿಯಿಂದ ಬಿ ಸಿ ರೋಡ್ ವರೆಗೆ ಕಾಮಗಾರಿ ನಡೆಯುವ ಕಾರಣ ಭಾಗಷಃ ಧೂಳು ಮಯ . ಮುಂಜಾನೆ  7.55 ಕ್ಕೆ ಹೊರಡುವ ಕಬಕ ಪುತ್ತೂರು ಮಂಗಳೂರು (6484)ಪ್ಯಾಸೆಂಜರ್ .ಅದಕ್ಕೆ ಎಕ್ಷ ಪ್ರೆಸ್ ಎಂದು ನಾಮಕರಣ ಮಾಡಿದ್ದಾರೆ . ಅದರಿಂದ ಚಾರ್ಜ್ ಮೂವತ್ತು ರೂಪಾಯಿ ಇದೆ . ಪುತ್ತೂರಿನಿಂದ ಎಕ್ಷ ಪ್ರೆಸ್ ಅಥವಾ ಪ್ಯಾಸೆಂಜರ್ ಗೆ ಬಹಳ ವ್ಯತ್ಯಾಸ ಇಲ್ಲ .ನಡುವೆ ಬಿಸಿ ರೋಡ್ ಮತ್ತು ನೇರಳಕಟ್ಟೆ ಎರಡೇ ಸ್ಟೇಷನ್ . 

ಟ್ರೈನ್ ನ ಒಳಗಡೆ ಬಹಳ ಸ್ವಚ್ಚತೆ ಇದೆ . ಲೋಕಲ್ ಗಾಡಿಗಳ ಹಾಗೆ ಕಸಕಡ್ಡಿ ಕಾಣಿಸಲಿಲ್ಲ . ಈಗ ರೈಲ್ವೆ ಸ್ಟೇಷನ್ ಮತ್ತು ಬೋಗಿಗಗಳ ಒಳಗಡೆ ಸ್ವಚ್ಛತಾ ಕಾರ್ಯವನ್ನು ಹೊರ ಗುತ್ತಿಗೆ ಮಾಡಿದ್ದಾರೆ .ಹಿಂದೆ ರೈಲ್ವೆ ನೌಕರರರೇ ನಿಭಾಯಿಸುತ್ತಿದ್ದರು . ಭಾನುವಾರ ಆದಕಾರಣ ಪ್ರಯಾಣಿಕರು ಹೆಚ್ಚು ಇರಲಿಲ್ಲ . ಇದ್ದವರೂ ಕೂಡಾ ಮಲಯಾಳದಲ್ಲಿ ಮಾತನಾಡುತ್ತಿದ್ದರು . 

9.15 ಕ್ಕೆ ಮಂಗಳೂರು ಸೆಂಟ್ರಲ್ ತಲುಪಿತು .ಬಿ ಸಿ ರೋಡ್ ನಲ್ಲಿ ಕೂಡಾ ಹೆಚ್ಚು ಪ್ರಯಾಣಿಕರು ಹತ್ತಿದಂತೆ ಕಾಣಿಸಲಿಲ್ಲ . ಮಂಗಳೂರು ಸೆಂಟ್ರಲ್ ಸ್ಟೇಷನ್ ನಲ್ಲಿ ಬೇ (ಕೊಲ್ಲಿ )ಲೈನ್ ಎಂಬ ಪ್ರತ್ಯೇಕ ಹಳಿಯಿದೆ .ಬೆಕ್ಕಿನ ಬಿಡಾರ ಬೇರೆ ಎಂಬಂತೆ ಪುತ್ತೂರು ಸುಬ್ರಹ್ಮಣ್ಯ ಲೋಕಲ್ ನಿಲ್ದಾಣ . ಗಾಡಿ ಅಲ್ಲಿ ಬಂದ ಒಡನೆ ಅದರ ಬೋರ್ಡ್ ಮಂಗಳೂರು ಸೆಂಟ್ರಲ್ -ಸುಬ್ರಹ್ಮಣ್ಯ ರಸ್ತೆ(06489) ಎಂದು ಬದಲಾಯಿಸಲ್ಪಟ್ಟಿತು  .ಮಂಗಳೂರು ಸ್ಟೇಷನ್ ಸ್ವಚ್ಚತೆ ಕೂಡಾ ಚೆನ್ನಾಗಿದೆ . ಮೇಲ್ಸೇತುವೆಗೆ ಹತ್ತಲು ಲಿಫ್ಟ್ ಸೌಕರ್ಯ ಇದೆ . ಮೊದಲು ನಾನು ಇನ್ಸ್ಪೆಕ್ಷನ್ ಮಾಡಿಕೊಂಡು ಇದ್ದ ಸ್ಟೇಷನ್ . 

ಸ್ಟೇಷನ್ ನ ಹೊರಗೆ ಕಾರ್ ಪಾರ್ಕ್ ಫುಲ್ ಆಗಿದೆ .ಈಗ ಎರಡು ಹಂತದ ಪಾರ್ಕಿಂಗ್ ಇದೆ .ಹಿಂದೆ ನಾನು ಇದ್ದಾಗ ಒಂದೆರಡು ಅಂಬಾಸೆಡರ್ ಕಾರ್ ಬಿಟ್ಟರೆ ಪಾರ್ಕಿಂಗ್ ಬಿಕೋ ಎನ್ನುತಿತ್ತು . ಎಂದಿನಂತೆ ಕೊಲ್ಲೂರು ಬಸ್ಸಿನ ಕಂಡಕ್ಟರ್ ಗಳು ತಾರಕ ಸ್ವರದಲ್ಲಿ ಕೊಲ್ಲೂರು ಕೊಲ್ಲೂರು ,ಮುಕಾಂಬಿಕೆಯ್ ಎಂದು ಕೋಗಿ ಮುಖ್ಯವಾಗಿ ಮಲಯಾಳಿ ಪ್ರಯಾಣಿಕರನ್ನು ಆಹ್ವಾನಿಸುತ್ತಿದ್ದಾರೆ . ಹೊರಬರುತ್ತಿರುವ ಪ್ರಯಾಣಿಕರಲ್ಲಿ ಹಿಂದಿ ಭಾಷೆಯವರು ಕೂಡಾ ಅಧಿಕ ಇರುವುದು ಈಗಿನ ವಿಶೇಷ . 

ಸ್ಟೇಷನ್ ನಿಂದ ಹೊರಬಿದ್ದು ನಡೆದು ಕೊಂಡೇ ಹೊರಟೆ .ರೈಲ್ವೆ ಕಾಲೋನಿ ಗೆ ಮುಖ್ಯ ರಸ್ತೆಯಿಂದ ಇದ್ದ ಒಳ ರಸ್ತೆಗಳನ್ನು ಬಂದ್ ಮಾಡಿ ಗೋಡೆ ಕಟ್ಟಿದ್ದು ರೇಲ್ವೆ ಪೊಲೀಸ್ ಠಾಣೆ ಯ ಎದುರಿನ ಒಂದೇ ರಸ್ತೆ ತೆರೆದು ಇಟ್ಟಿದ್ದಾರೆ . ರೈಲ್ವೆ ಕಾಲೋನಿ ಪಶ್ಚಿಮಕ್ಕೆ ಪೋಲಿಸ್ ಕ್ವಾರ್ಟರ್ಸ್ ಇದ್ದು ಅಲ್ಲಿಯೂ ಹೀಗೆ ಮಾಡಿರುವರು .ಭದ್ರತಾ ದೃಷ್ಟಿ ಯಿಂದ ಇರ ಬೇಕು . ಮುಂದೆ ಬಂದು ಮುಖ್ಯ ರಸ್ತೆಯಲ್ಲಿ ದಕ್ಷಿಣಕ್ಕೆ ;ಮಂಗಳೂರು ನಗರದ ಉತ್ತಮ ರಸ್ತೆಗಳಲ್ಲಿ ಒಂದು .ಪಾದಚಾರಿ ಗಳಿಗೆ ಸಾಕಷ್ಟು ಜಾಗ ಇಟ್ಟಿರುವರು . ಮುಂದೆ ಆರ್ ಟಿ ಓ ಆಫೀಸ್ ದಾಟಿ  ಬಿ ಶೆಟ್ಟಿ ವೃತ್ತ .ಇಲ್ಲಿ ಕಾಮಗಾರಿ ನಡೆಯುತ್ತಿದ್ದು  ಸ್ವಲ್ಪ ಮಣ್ಣು ಧೂಳು ಇದೆ . ಭಾರತೀಯ ವಿದ್ಯಾ ಭವನದಲ್ಲಿ ಎಂದಿನಂತೆ ಗಾರ್ಡನ್ ವರೇಲಿ ಸೀರೆ ಸೇಲ್ ಇದೆ .ಮುಂದೆ ಕಾರ್ಪೋರೇಶನ್ ಬ್ಯಾಂಕ್ ಮುಖ್ಯ ಕಚೇರಿ ಯೂನಿಯನ್ ಬ್ಯಾಂಕ್ ಎಂದು ಹೆಸರು ಬದಲಾಯಿಸಿ ಕೊಂಡುದು ಕಂಡು ಹೃದಯ ಭಾರ ಆಯಿತು .ಮುಂದೆ ಬಲ ಬದಿಯಲ್ಲಿ ಇದ್ದ ಅಮೃತ್ ಥೀಯೇಟರ್ ಕಾಣೆಯಾಗಿ ಅಲ್ಲಿ ಬಹು ಮಹಡಿ ಕಟ್ಟಡ ನಿಂತಿದೆ .ಅಲ್ಲಿ ನಾನು ಹಿಂದೆ ನಾಗರಹಾವು ,ಹಿಸ್ ಹೈನೆಸ್ಸ್ ಅಬ್ದುಲ್ಲಾ ಸಿನೆಮಾ ನೋಡಿದ್ದು .ಅದಕ್ಕೆ ತಾಗಿಕೊಂಡು ಹಿಂದೆ ಒಂದು ಮನೆಯಲ್ಲಿ  ಕ್ರಿಶ್ಚಿಯನ್ ಫಾದರ್ ಒಬ್ಬರು ಫ್ರೆಂಚ್  ಭಾಷೆ ಕಲಿಸುತ್ತಿದ್ದ ನೆನಪು . 

ಮುಂದಕ್ಕೆ ಶ್ರೀನಿವಾಸ ಕಾಲೇಜು ನವರ ಶಾಖೆ ,ರೈಲ್ವೆ ಗೇಟ್ .ದಾಟಿ ಹೋದರೆ ಬಲ ಬದಿಯಲ್ಲಿ ಇದ್ದ ಡಾ ಅಮರ ನಾಥ ಹೆಗ್ಡೆ ಯವರ ಬಂಗ್ಲೆ  ಮನೆ  ಕಾಣಿಸಲಿಲ್ಲ . ಒಟ್ಟಿನಲ್ಲಿ ರಸ್ತೆ ಅಗಲವಾಗಿ ಚಂದ ಆಗಿದೆ .ಫುಟ್ ಪಾತ್ ಕೂಡಾ ಇದೆ .ಪುತ್ತೂರಿನಲ್ಲಿ ಫುಟ್ ಪಾತ್ ಬೇಕಾದಲ್ಲಿ ಇಲ್ಲ .ಇಲ್ಲಿ ಜಿಲ್ಲಾ ಕೇಂದ್ರ ಆಗಬೇಕು ಎಂದು ಬೇಡಿಕೆ ಇಡುವವರು ಇಲ್ಲಿನ ಮೂಲ ಸೌಕರ್ಯ ದ ವಿಚಾರದಲ್ಲಿ ಯೋಚನೆ ಮಾಡಿದಂತೆ ಇಲ್ಲ . 

ಹೀಗೆ ಮುಂದೆ ರಾಮಕೃಷ್ಣ ಆಶ್ರಮದ ಕಾಂಪೌಂಡ್ ಒಳಗೆ ಇರುವ ವಿವೇಕಾನಂದ ಸಭಾಭವನ ಕ್ಕೆ ಬಂದು ಕುಳಿತೆ. 

 Mangalore to Kabaka Puttur Long-Distance Trains - Railway Enquiry

 

Mangalore Central

 

 File:Ramakrishna ashram mangalore book stall.jpg - Wikimedia Commons

 

ಶನಿವಾರ, ಜನವರಿ 21, 2023

ವಿಟ್ಲ ಜಾತ್ರೆ





 ಇಂದು ವಿಟ್ಲ ಜಾತ್ರೆ ,ನನ್ನ ಜನ್ಮ ಸೀಮೆಯ ಜಾತ್ರೆ . ಪೀರ್ ಸಾಹಿಬ್ಬರ ಬಸ್ಸಿನಲ್ಲಿ ,ಜಾಗ ಸಿಗದಿದ್ದರೆ ಕಳಂಜಿ ಮಲೆ ಸೆರಗಲ್ಲಿ ಒಳದಾರಿ ನಡೆದು ಮೂಲಕ ವಿಟ್ಲ ಕ್ಕೆ ಹೋಗುವ ಸಂಭ್ರಮ . ಕೇಕುಣ್ಣಾಯರ ಹೊಟೇಲ್ ,ಕಡ್ಲೆ ಮಿಠಾಯಿ,ಚರ್ಮುರಿ ,ಚಿತ್ತುಪ್ಪುಳಿ,ಪುಗ್ಗೆ ,ಸೋಜಿ ,ಡೊಂಬರ ತೊಟ್ಟಿಲು ; ಮೇನೆಯಲ್ಲಿ ವಿಟ್ಲ ಅರಸರನ್ನು ಹೊತ್ತು ಕೊಂಡು ಬರುವ ದೃಶ್ಯ , ದೇವರ ಹೊತ್ತ ಕುಂಬ್ಳೆ ಅಡಿಗಳ ಲಯ ಬದ್ಧ ನಡಿಗೆ .ಗರ್ನಾಲು ,ತೇರು. ಅದೃಷ್ಟವಶಾತ್ ಆಟಕ್ಕೆ ಟಿಕೆಟ್ ಸಿಕ್ಕರೆ ಅಲ್ಲಿಗೆ .. ಇಲ್ಲವಾದಲ್ಲಿ ಸಂಜೆ ಬಂದವರು ಬೆಳಿಗ್ಗಿನ ವರೆಗೆ ಹೇಗೆ ಸಮಯ ಕಳೆದೆವು ?

ಶುಕ್ರವಾರ, ಜನವರಿ 20, 2023


 ರಾಮಕೃಷ್ಣ ಮಿಷನ್ ನ ಮುಖ್ಯಸ್ಥರಾಗಿದ್ದ ಸ್ವಾಮಿ ರಂಗನಾಥಾನಂದ ಅವರ ಮೈ ಲೈಫ್ ಮೈ ವರ್ಕ್ ಓದುತ್ತಿದ್ದೇನೆ .ಸರಳ ಪ್ರಶ್ನೋತ್ತರ ಮಾದರಿಯಲ್ಲಿ ಅಮೂಲ್ಯ ಛಾಯಾ ಚಿತ್ರಗಳನ್ನು ಒಳ ಗೊಂಡಿದೆ . 

ಅದರಿಂದ ಕೆಲವು ವಾಕ್ಯಗಳು . 

ಧನ ಸಂಪಾದನೆಗೆ ಶಕ್ತಿ ಬೇಕು ,ಅದನ್ನು ತ್ಯಾಗ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಬೇಕು . 

ದಾನ ಮತ್ತು ಮಾನ ದ  ದೇವರ ಆರಾಧನೆ ಮಾಡಬೇಕು . ರೋಗಿಗೆ ಚಿಕಿತ್ಸೆ ಮಾಡು ,ಹಸಿದವನಿಗೆ ಆಹಾರ ಅಥವಾ ಉದ್ಯೋಗ . ಇಲ್ಲಿ ಸೇವೆ ಕೊಳ್ಳುವನನ್ನು ಕೀಳಾಗಿ ನೋಡದೆ ಗೌರವದಿಂದ ಕಾಣುವುದು . 

ನಾವು ಬಂಡ ತನವನ್ನು ಬಲಿಷ್ಟ ಮನಸ್ಸು ಎಂದು ತಪ್ಪು ತಿಳಿಯುತ್ತೇವೆ . 

ನಾವು ಎಲ್ಲಾ ಮತದವರನ್ನೂ ಗೌರವಿಸುತ್ತೇವೆ .ಅಂತೆಯೇ ನಾಸ್ತಿಕರನ್ನೂ . ಅವರನ್ನು ಗೌರವಿಸುವಾಗ ಅವರ ಸನ್ನಡತೆಯ ವ್ಯಕ್ತಿತ್ವ ವನ್ನು ನೋಡುತ್ತೇವೆಯೇ ಹೊರತು ಅವರ ಮತ ನಂಬಿಕೆಯನ್ನು ಅಲ್ಲ . 

ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಎಂದು ಕರೆಯುವ ಬದಲು ಮತ ನಿರಪೇಕ್ಷ ಎಂದು ಕರೆಯ ಬೇಕಿತ್ತು ,

ನಮ್ಮ ರಾಜಕಾರಿಣಿಗಳು ಪಶ್ಚಿಮ ದೇಶಗಳ ಫುಟ್ ಬಾಲ್ ಆಟಗಾರರಂತೆ ಚೆಂಡನ್ನು ತುಳಿಯುವ ಬದಲು ಆಟಗಾರ ರ ನ್ನೇ ಆಕ್ರಮಣ ಮಾಡುವ ಹಾಗೆ ನಿಜ ಸಮಸ್ಯೆಗಳ ಮೇಲೆ ಯುದ್ಧ ಮಾಡದೇ ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಸಲು ನೋಡುತ್ತಿರುವುದು ವಿಷಾಧನೀಯ . 

ಕರ್ಮಯೋಗ ಎಂದರೆ ಯಾವನಾದರೂ ಕಷ್ಟದಲ್ಲಿ ಇದ್ದರೆ ಅದು ಅವನ ಕರ್ಮ ಎಂದು ಕೈತೊಳೆದು ಕೊಳ್ಳುವುದು ಅಲ್ಲ .ಅವನಿಗೆ ಸಹಾಯ ಮಾಡುವುದೂ ಸೇರಿದೆ . 

(ಮುಂದು ವರಿಯುವುದು )

ಗುರುವಾರ, ಜನವರಿ 19, 2023

ಪುತ್ತೂರು ಮಂಗಳೂರು ರೈಲ್ವೇ ವೇಳಾಪಟ್ಟಿ

ಟ್ರೈನ್ ಸಂಖ್ಯೆ           ಹೊರಡುವ ವೇಳೆ                ತಲುಪುವ ಸ್ಟೇಷನ್ 

                                                                      ಸಮಯ                           

16511                  5.42                            ಮಂಗಳೂರು ಸೆಂಟ್ರಲ್                                                                                                7.10

16585                7.02                                  ಮಂಗಳೂರು ಸೆಂಟ್ರಲ್                                                                                            9.02

0684                   7.55                                  ಮಂಗಳೂರು ಸೆಂಟ್ರಲ್                                                                                                                           9.25

07377                 11.20                                   ಮಂಗಳೂರುಜಂಕ್ಷನ್                                                                                            12.40                                                               0684                  14.25                                      ಮಂಗಳೂರು ಸೆಂಟ್ರಲ್                                                                                                 16.25

16575                  15.10                                  ಮಂಗಳೂರು   ಜಂಕ್ಷನ್                                                                                    16.30

 16515                 15.10                                     ಮಂಗಳೂರು  ಜಂಕ್ಷನ್                                                                                                16.35

16539                  15.10                                      ಮಂಗಳೂರು ಜಂಕ್ಷನ್                                                                                                    16.40

6486                   20.15                                         ಮಂಗಳೂರು ಸೆಂಟ್ರಲ್                                                                                                  22.15

ಮಂಗಳೂರು ಮುಖ್ಯ ನಿಲ್ದಾಣವನ್ನು ಸೆಂಟ್ರಲ್ ಎಂದೂ ಪಡೀಲ್ ನಲ್ಲಿ ಇರುವ ಹಳೆಯ ಕಂಕನಾಡಿ ಸ್ಟೇಷನ್ ಅನ್ನು ಮಂಗಳೂರು ಜಂಕ್ಷನ್ ಎಂದೂ ಕರೆಯುವರು.ಪುತ್ತೂರು ಸ್ಟೇಷನ್ ಕಬಕ ಪುತ್ತೂರು ಎಂದು ಕರೆಯಲ್ಪಡು ವುದು . ಟ್ರೈನ್ ಸಂಖ್ಯೆ 16515 ಮತ್ತು 16575 ವಾರದಲ್ಲಿ ತಲಾ ಮೂರು ದಿನ ಮತ್ತು  16279 ಉಳಿದ ಒಂದು ದಿನ ಇರುವುದು . 

ಕೋವಿಡ್ ಕಾಲದ ನಂತರ  ಪ್ಯಾಸೆಂಜರ್ ಟ್ರೈನುಗಳನ್ನೂ ಎಕ್ಷ ಪ್ರೆಸ್ ಎಂದು ಕರೆದು ಎಲ್ಲಾ ಟ್ರೈನುಗಳಲ್ಲಿಯೂ ಕಾದಿರಿಸದ ಎರಡನೇ ದರ್ಜೆ ಟಿಕೆಟ್ ಗೆ ರೂಪಾಯಿ 30 ಇದೆ . UTS       ಆಪ್  ಮೂಲಕ ನಾವೇ ಟಿಕೆಟ್ ಖರೀದಿಸ ಬಹುದು .ಇಲ್ಲವೇ ಸ್ಟೇಷನ್ ಕೌಂಟರ್ ನಿಂದ ಕೊಳ್ಳಬಹುದು .

ಸೋಮವಾರ, ಜನವರಿ 16, 2023

 ರಾ ರಾ ರಾಜೀವ ಲೋಚನ 

ಮೊನ್ನೆ ಕದ್ರಿ ಪಾರ್ಕ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋದ ವಿಷಯ ಬರೆದಿದ್ದೆ . ಅಲ್ಲಿಂದ ಹೊರ ಬಂದು  ಆಕಾಶವಾಣಿ /ಕದ್ರಿ ಪಾರ್ಕ್ ಬಸ್ ಸ್ಟಾಂಡ್ ಗೆ ಬಂದು ೧೫ ನಂಬರ್ ಬಸ್ಸಿನಲ್ಲಿ ಹದಿನೈದು ರೂಪಾಯಿ ತೆತ್ತು ಮಂಗಳಾ ದೇವಿ ಗೆ ಬಂದೆ . ಅಲ್ಲಿ ಸ್ವರಲಯ ಸಾಧನಾ ಸಂಸ್ಥೆಯವರು ರಾಮಕೃಷ್ಣ ಮಿಷನ್ ನವರ ಸಹಯೋಗದಲ್ಲಿ ಪ್ರಸಿದ್ಧ ವಯೊಲಿನ್ ವಾದಕ ಸಹೋದರರಾದ ಗಣೇಶ್ ಮತ್ತು ಕುಮರೇಶ್ ಅವರ ದ್ವಂದ್ವ ಪಿಟೀಲು ವಾದನ ಕಚೇರಿ ಸಂಕ್ರಾಂತಿ ಹಬ್ಬದ ನಿಮಿತ್ತ ಏರ್ಪಡಿಸಿದ್ದರು . ರಾಮಕೃಷ್ಣ ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಮರಗಳ ಹಸಿರಿನ ನಡುವೆ ವಿವೇಕಾನಂದ ಆಡಿಟೋರಿಯಂ ಇದೆ ;ಅಲ್ಲಿ ಕಾರ್ಯಕ್ರಮ . ನಮ್ಮ ಬೆಂಡರವಾದಿ ಸುಬ್ರಹ್ಮಣ್ಯ ಶರ್ಮರ ಮಗ ರಾಘವ ಶರ್ಮ ಈ ಕಾರ್ಯಕ್ರಮದ ಬಗ್ಗೆ ವಾರದ ಹಿಂದೆ ತಿಳಿಸಿದ್ದರು . ದೇವಳದ ಪಕ್ಕದಲ್ಲಿ  ಇರುವ ಶ್ರೀದೇವಿ ರೆಸ್ಟೋರೆಂಟ್ ನಲ್ಲಿ ರುಚಿಯಾದ ಒಂದು ಸ್ಟ್ರಾಂಗ್ ಚಹಾ ಸೇವನೆ ;ಹೋಟೆಲ್ ಧಣಿ ನಗುಮುಖ ದವರು ,ಗ್ರಾಹಕ ಸ್ನೇಹಿ . 

ಕಚೇರಿ ಗೆ ಇನ್ನೂ ಸಮಯ ಇದ್ದುದರಿಂದ ರಾಮಕೃಷ್ಣ ಮಠದ  ಆವರಣದಲ್ಲಿ  ಇರುವ ಬುಕ್ ಸ್ಟಾಲ್ ಗೆ ಹೋಗಿ ಅಲ್ಲಿ ಮಾರಾಟಕ್ಕೆ ಇಟ್ಟಿರುವ ಮಠದ ಪ್ರಕಣೆಗಳ ಮೇಲೆ ಕಣ್ಣಾಡಿಸಿದೆ . ಒಳ್ಳೆಯ ಕೃತಿಗಳು ,ಆಕರ್ಷಕ ಮುದ್ರಣ ,ಕೈಗೆಟುವ ದರ . ಸ್ವಾಮಿ ರಂಗನಾಥನಾನಂದ ಅವರ ಆತ್ಮ ಚರಿತ್ರೆ 'ಮೈ ವರ್ಕ್ಈಸ್ ಮೈ ಲೈಫ್ "ಮತ್ತು ಕುವೆಂಪು ಅವರು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಬಗ್ಗೆ ಬರೆದ "ಯುಗದರ್ಶನ ' ಕೊಂಡು ಕೊಂಡೆನು

                    ಸಭಾ ಭವನಕ್ಕೆ ಬರುವಾಗ ಉದ್ದೇಶಿತ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದು ಆಗಿ ,ಬದಲು ಶ್ರೀ ವಿಠ್ಠಲ ರಾಮಮೂರ್ತಿ ಮತ್ತು  ಶ್ರೀಮತಿ ಪದ್ಮಾ ಶಂಕರ್ ಅವರ ಯುಗಳ ಪಿಟೀಲು ಕಚೇರಿ ಇದೆ ಎಂದು ತಿಳಿಯಿತು . ಇಬ್ಬರೂ ಲಾಲ್ಗುಡಿ ಜಯರಾಮನ್ ಅವರ  ಶಿಷ್ಯರು,ಪ್ರಸಿದ್ದರು  . ಸಭಾ ಭವನ ತುಂಬಿ ತುಳುಕುತ್ತಿತ್ತು . ಕಚೇರಿ ಒಂದು ಗಂಟೆ ತಡವಾಗಿ ಆರಂಭ ಆಯಿತು . 

ಗರುಡ ಧ್ವನಿ ರಾಗದ ವರ್ಣದೊಂದಿಗೆ ಆರಂಭ ,ನಂತರ  ನಿತ್ಯ ಹಸಿರು ಹಂಸ ಧ್ವನಿ ಕೃತಿ 'ವಾತಾಪಿ ಗಣಪತಿ ;,ಜಯಂತ ಶ್ರೀ ಯಲ್ಲಿ ಮರುಗೇಲರಾ ,ಬಿಲಹರಿ ,ವಾಗೀಶ್ವರಿ ರಾಗದ ಕೃತಿಗಳು ,ಮುಂದೆ ಮೋಹನದಲ್ಲಿ ವಿಸ್ತಾರವಾಗಿ  ಜನಪ್ರಿಯ ರಾ ರಾ ರಾಜೀವ ಲೋಚನ ,ತನಿ ಆವರ್ತನ ,ಜಗದೋದ್ಧಾರನಾ ,ಮಾನಸ ಸಂಚರರೇ ,ವಂದೇ ಮಾತರಂ (ದೇಶ್ ರಾಗದಲ್ಲಿ ),ತಿಲ್ಲಾನ ಮತ್ತು ಮಂಗಳ ಭಾಗ್ಯದ ಲಕ್ಷ್ಮಿ ಯೊಂದಿಗೆ . ಆಸಕ್ತ ಕೇಳುಗರಿಂದ ತುಂಬಿದ ಸಭಾಭವನ ಕಲಾವಿದರ ಉತ್ಸಾಹ ಇಮ್ಮಡಿ ಗೊಳಿಸಿದ್ದು ಎದ್ದು ತೋರುತ್ತಿತ್ತು . ಕಾರ್ಯಕ್ರಮ ಮುಗಿಯುವಾಗ ರಾತ್ರಿ ಎಂಟು ಗಂಟೆ . 

ರಾ ರಾ  ರಾಜೀವ ಲೋಚನ ಕೇಳಲು ಹಿತ .  ರಾ ರಾ (ಬಾ ಬಾ )ಎಂದು "ಆಪ್ತ ಮಿತ್ರ "ಚಿತ್ರದಲ್ಲಿ ರೋಷಯುಕ್ತ ಪ್ರೀತಿಯಿಂದ ಕರೆಯುವ ಹಾಡಿನ ತರಹ ಅಲ್ಲ .ಪೂರ್ಣ ಸೌಮ್ಯತೆ ಮತ್ತು ಭಕ್ತಿ ಭಾವ ಮಾತ್ರ ಮತ್ತು ರಾ ಶಬ್ದದ ರಾಗಯುಕ್ತ ಸ್ವಾಗತ . ಪುರಂದರ ದಾಸ ರ ಕೃತಿ ರಾಗೀ ತಂದಿರಾ ದಲ್ಲಿ ಕೂಡಾ ರಾ ಮತ್ತು ರಾಗಿಯನ್ನು ಬುದ್ದಿವಂತಿಕೆಯಿಂದ ಬಳಸಿರುವದು ಗಮನಿಸಿರ ಬಹುದು .ತಮಿಳಿನಲ್ಲಿಯೂ ಕಾ ವಾ ವಾ ಕಂದ ವಾ ಎನ್ನೈ ಕಾವಾ ವೇಲವಾ ಎಂದು ಮುರುಗನನ್ನು ಕರೆಯುವ ಚಂದದ ಪದ್ಯ ಇದ್ದು ,ಇಲ್ಲಿ ವಾ (ಬಾ )ಶಬ್ದ ಹಿತವಾಗಿ ,ಅರ್ಥಪೂರ್ಣವಾಗಿ ಪುನರಾವೃತ್ತಿ ಆಗುವುದು ಕಾಣಬಹುದು




ನಿನ್ನೆ ಮುಂಜಾನೆ ದಿನಚರಿ

 ನಿನ್ನೆ ೧೫. ೧. ೨೩ ಮುಂಜಾನೆ ಪುತ್ತೂರು ಹುಬ್ಬಳ್ಳಿ ಬಸ್ ನಲ್ಲಿ ಮಂಗಳೂರಿಗೆ ಪ್ರಯಾಣ . ಮಾಣಿ ಕಲ್ಲಡ್ಕ ನಡುವೆ ಅಲ್ಲಲ್ಲಿ ಹೊಸ ಕಾಂಕ್ರೀಟ್ ರಸ್ತೆ  ಬಿಟ್ಟು ಕೊಟ್ಟಿರುವರು :ಉಳಿದಂತೆ ಧೂಳು ಮಯ . ಒಂದು ಗಂಟೆಯಲ್ಲಿ ಎಂದರೆ ೮. ೪೫ ಕ್ಕೆಲ್ಲಾ ಬಿಜೈ ಕೆ ಎಸ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ .  ರಸ್ತೆ ಬದಿ  ಹೊಸತಾದ ರಸ್ತೆ ಬದಿ ಫುಟ್ ಪಾತ್ ನಲ್ಲಿ  ಕದ್ರಿ ಪಾರ್ಕ್ ನತ್ತ  ನಡಿಗೆ .ಚಳಿಗಾಲದ ಹಿತವಾದ ಸಮುದ್ರ ಮಾರುತ ;ಭಾನುವಾರ ವಾದುದರಿಂದ ಆಲಸ್ಯದಿಂದ ಹೊರ ಬರುತ್ತಿರುವ ಜನರು . ಬಿಜೈ  ಚರ್ಚ್ ಬಳಿ ಮಾತ್ರ ಸ್ವಲ್ಪ ಸಂದಣಿ . 

ಕದ್ರಿ ಪಾರ್ಕ್ ಈಗ ತಕ್ಕ ಮಟ್ಟಿಗೆ ಸುಂದರ ವಾಗಿದೆ .ಹಳೆಯ ಜಿಂಕೆ  ಪಾರ್ಕ್ ನಲ್ಲಿ ಈಗ ಪ್ರಾಣಿಗಳು ಇಲ್ಲ .ಗಿಡ ಮರಗಳು ಹೆಚ್ಚು ಕಾಣಿಸುತ್ತವೆ . ಒಳಗೆ ಮತ್ತು ಹೊರಗೆ ಕೂಡಲು ಒಳ್ಳೆಯ ಆಸನ ವ್ಯವಸ್ಥೆ ಇದೆ .ಹೊರಗಡೆ ಟೇಬಲ್ ಕೂಡಾ ಇದ್ದು ಯುವಕ ಯುವತಿಯರು ಲ್ಯಾಪ್ ಟಾಪ್ ಇಟ್ಟು ಕೊಂಡು ವರ್ಕ್ ಫ್ರಮ್ ಗಾರ್ಡನ್ ನಲ್ಲಿ ಮಗ್ನ ರಾದರೆ ,ಇನ್ನು ಕೆಲವರು ಚೆಸ್ ಆಟದಲ್ಲಿ . 

ಗುಡ್ಡದ ಪಶ್ಚಿಮ ಗಡಿಯಲ್ಲಿ  ಸರ್ಕ್ಯೂಟ್ ಹೌಸ್ ಗೆ ತಾಗಿ ಕೊಂಡು ಇರುವ ಲಯನ್ಸ್ ಸಭಾ ಭವನದಲ್ಲಿ ಗಾಂಧಿ ವಿಚಾರ ವೇದಿಕೆ ಯ  ಕಾರ್ಯಕ್ರಮ . ಗಾಂಧಿ ಟೊಪ್ಪಿ ಹಾಕಿಕೊಂಡು ಓಡಾಡುತ್ತಲಿರುವ ಕಾರ್ಯಕರ್ತರು . ದೂರದ ಕೊಪ್ಪಳ ,ಬೆಂಗಳೂರು ,ಬೆಳಗಾವಿ ಮತ್ತು ಕಲಬುರ್ಗಿ ಯಿಂದಲೂ ಆಗಮಿಸಿದ್ದ ಪ್ರತಿನಿಧಿಗಳು . ಮಿತ್ರರಾದ ಕ್ಸೆವಿಯರ್ ಡಿ ಸೋಜಾ ,ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಶಿವಪ್ರಸಾದ್ ಭಟ್ ಸಿಕ್ಕಿದರು .ಶಿವಪ್ರಸಾದ್ ದೂರದ ನೆಟ್ಟಣ ಕೊಂಬಾರಿನಿಂದ ಆಗಮಿಸಿಸಿದ್ದರು . 

 ಕಾರ್ಯಕ್ರಮ ಶ್ರೀ ಎಂ ಜಿ ಹೆಗ್ಡೆ ಅವರ ಕೃತಿ 'ಮಿನುಗು ನೋಟ'ದ  ಬಿಡುಗಡೆ . ಗಾಂಧಿಯವರ ಬಗ್ಗೆ ನಡೆಯುತ್ತಿದೆ ಎನ್ನಲಾದ ತಪ್ಪು ಮಾಹಿತಿಗಳ ಪ್ರಚಾರಕ್ಕೆ ಅಧ್ಯಯನ ಮತ್ತು ಆಧಾರ ಸಹಿತ ಉತ್ತರ ಕೊಡುವ ಪ್ರಯತ್ನ . 

ಶ್ರೀ ಸುಧೀಂದ್ರ ಕುಲಕರ್ಣಿ ಯವರು ಮಹಾತ್ಮಾ ಗಾಂಧಿ ಬಗ್ಗೆ ಅಧ್ಯಯನಕ್ಕಾಗಿ ದಕ್ಷಿಣ ಆಫ್ರಿಕಾ ದಲ್ಲಿನ ಅವರ ಟಾಲ್ಸ್ಟಾಯ್ ಮತ್ತು ಫೀನಿಕ್ಸ್ ಆಶ್ರಮ ,ಆಫ್ರಿಕಾ ಇತರ ದೇಶಗಳು ಮತ್ತು ಭಾರತದಲ್ಲಿ ಸಾಬರಮತಿ ಮತ್ತು ಸೇವಾಗ್ರಾಮ ಅಧ್ಯಯನ ಸಂದರ್ಶನ ಮತ್ತು ಅವರ ಕುರಿತ ಕೃತಿಗಳ ಆಳವಾದ ಅಧ್ಯಯನ ಮಾಡಿದವರು .ತಮ್ಮ ಮಾತಿನ ಆರಂಭದಲ್ಲಿಯೇ ಗಾಂಧಿಯವರ ಬಗ್ಗೆ ವಿಮರ್ಶೆ ಟೀಕೆ ಯನ್ನು ಸ್ವೀಕರಿಸ ಬೇಕು ಆದರೆ ಆಧಾರ ರಹಿತ ಆರೋಪಗಳನ್ನು ದ್ವೇಷ ಕೋಪ ರಹಿತವಾಗಿ ಉತ್ತರಿಸ ಬೇಕು ;ಗಾಂಧೀಜಿ ಮಡುತ್ತಿದ್ದುದೂ ಹಾಗೆಯೆ ಎಂದರು . 

ಮುಖ್ಯ ಕಾರ್ಯಕ್ರಮ ಬಳಿಕ ಸಂವಾದ ಕಾರ್ಯಕ್ರಮ ಕೂಡಾ ಇತ್ತು . ಆರೋಗ್ಯಕರ ತೆರೆದ ಮನಸಿನ ವಿಚಾರ  ವಿನಿಮಯ ಇಂದಿನ ತುರ್ತು ಅವಶ್ಯ .

ಸಭಯಲ್ಲಿ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗ್ಡೆ ಯವರನ್ನು ಭೇಟಿಯಾದದ್ದು ಬಹಳ ಸಂತೋಷ . ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸಿದವರು . 




 

ಮಂಗಳವಾರ, ಜನವರಿ 3, 2023

ಬೆಲ್ಲನ ಅರೆ ಮುಖ ವಾತ

 Facial nerve paralysis, Bell's palsy Facial nerve paralysis, Bell's palsy, 3D illustration showing male with one-sided facial nerve paralysis bell's palsy stock pictures, royalty-free photos & images              ಮುಖದ ಮಾಂಸ ಖಂಡಗಳಿಗೆ ಸಂದೇಶ ವಾಹಕವಾಗಿ ಮೆದುಳಿಂದ ಬರುವ ನರಕ್ಕೆ ಫೇಶಿಯಲ್ ನರ (ಮುಖದ ನರ )ಎನ್ನುವರು . ಮುಖದ ಮಾಂಸ ಖಂಡಗಳಿಗೆ,ಕಣ್ಣೀರ ಗ್ರಂಥಿ ಮತ್ತು ಲಾಲಾ ಗ್ರಂಥಿ ಗಳಿಗೆ  ಸಂದೇಶ ವಾಹಕ , ಕಿವಿಯ ಭಾಗದ ಸ್ಪರ್ಶ ಜ್ಞಾನ ಗ್ರಾಹಕ ವಾಗಿ ಕೆಲಸ ಮಾಡುವುದು . ಎಡ ಮತ್ತು ಬಲ ಎಂದು  ಫೇಶಿಯಲ್ ನರಗಳು ಇವೆ . 

ಕೆಲವೊಮ್ಮೆ ಕಾಯಿಲೆಯಿಂದ ಈ ನರ ದ ಸುತ್ತ ನೀರು ತುಂಬಿ ನರ ಹಾಯ್ದು ಬರುವ ತಲೆ ಬುರುಡೆಯ ಸಪೂರವಾದ ರಂದ್ರ ನಾಳಗಳಲ್ಲಿ ಒತ್ತಿದಂತೆ ಆಗಿ ಕಾರ್ಯದಲ್ಲಿ ಅಸ್ತವ್ಯಸ್ತ ಉಂಟಾಗುವುದು . ಇದರಿಂದ ಒಂದು ಪಾರ್ಶ್ವದ ಮುಖ ಸ್ನಾಯುಗಳು ಸಂಪೂರ್ಣ ಅಥವಾ ಭಾಗಶಃ ಕಾರ್ಯ ವಿಮುಖ ವಾಗಿ  ,ಕಣ್ಣು ಪೂರ್ತಿ ಮುಚ್ಚಲು ಅಸಾಧ್ಯ ವಾಗುವುದು ,ಬಾಯಿ ತೆರೆದಾಗ ಆರೋಗ್ಯವಾಗಿ ಇರುವ ಪಾರ್ಶ್ವಕ್ಕೆ ಎಳೆಯಲ್ಪಡುವದು . ರೋಗ ಪೀಡಿತ ಪಾರ್ಶ್ವದ ಕಣ್ಣಿನಲ್ಲಿ ಕಣ್ಣೀರು ಉತ್ಪತ್ತಿ ಕಡಿಮೆ ಆಗುವುದು .ಕಿವಿಯಲ್ಲಿ ನೋವು ಬರ ಬಹದು . ಬಾಯ ರುಚಿ ಗ್ರಹಣ ವ್ಯತ್ಯಯ ಆಗ ಬಹದು . 

ಈ ಕಾಯಿಲೆ ಬಹು ಪಾಲು ಸ್ವಯಮ್ ವಾಸಿ ಆಗುವುದಾದರೂ ,ಆರಂಭದಲ್ಲಿ ಸ್ಟೀರಾಯ್ಡ್ ಔಷಧಿಗಳನ್ನು  ಕೊಡುವದುದರಿಂದ ಸ್ವಲ್ಪ ಬೇಗನೇ ಆಗುವುದು . ಕಣ್ಣಿನ ರಕ್ಷಣೆಗೆ ಕೃತಕ ಕಣ್ಣೀರ ಹನಿಗಳನ್ನು ಕೊಡುವರು . ಫಿಸಿಯೋ ಥೆರಪಿ ಅಥವಾ ಕೃತಕ ವ್ಯಾಯಾಮ ಕೂಡಾ ಸಹಾಯ ಆಗುವದು . 

ಈ ರೋಗದ ಬಗ್ಗೆ ಬಹಳ ಹಿಂದೆಯೇ ಅರಿವು ಇದ್ದರೂ ಸರ್ ಚಾರ್ಲ್ಸ್ ಬೆಲ್ ಎಂಬ ಸ್ಕಾಟಿಷ್ ವಿಜ್ಞಾನಿ ೧೮೨೧ ರಲ್ಲಿ ಇದರ ಬಗ್ಗೆ ರೋಯಲ್ ಸೊಸೈಟಿ ಯಲ್ಲಿ ವಿವರವಾದ ವೈಜ್ಞಾನಿಕ ಪ್ರಬಂಧ ಮಂಡಿಸಿ ಮನ್ನಣೆ ಗಳಿಸಿದುದರಿಂದ ಕಾಯಿಲೆಗೆ ಬೆಲ್ಸ್ ಪಾಲ್ಸಿ (ಬೆಲ್ಲನ ಅರೆ ಮುಖ ವಾತ ) ಎಂದು ಹೆಸರಾಯಿತು