ಅಧ್ಯಾಪಕರ ನೆನಪು
"ಅರಿವೇ ಗುರು "
"ಕೆಟ್ಟ ವಿದ್ಯಾರ್ಥಿ ಎಂದು ಇಲ್ಲ ,ಕೆಟ್ಟ ಅಧ್ಯಾಪಕರು ಮಾತ್ರ ಇರುವರು "
ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವನ್ನು ಕನ್ಯಾನ ದಲ್ಲಿ ಆಯಿತು .ಎರಡನ್ನೂ ತಾಲೂಕು ಬೋರ್ಡ್ ನಡೆಸುತ್ತಿದ್ದು ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಬೋರ್ಡ್ ಹೈ ಸ್ಕೂಲ್ ಎಂದು ಕರೆಯುತ್ತಿದ್ದರು . ಸ್ಥಳೀಯವಾಗಿ ನೇಮಕ ಇತ್ಯಾದಿ ಆಗುತ್ತಿದ್ದುದರಿಂದ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು ಎನ್ನ ಬಹುದು . ಅವು ಈಗ ಸರಕಾರಿ ಶಾಲೆಗಳಾಗಿವೆ . ಈ ಮಾರ್ಪಾಡೇ ಅವುಗಳ ಅವನತಿಗೆ ಒಂದು ಕಾರಣ ಎನ್ನ ಬಹುದು .ಅಳಿಕೆಯಂತಹ ಖಾಸಗಿ ಶಾಲೆಯನ್ನೂ ಮೀರಿಸಿ ದ ಫಲಿತಾಂಶ ನಮ್ಮಲ್ಲಿ ಬರುತ್ತಿತ್ತು .
ಮೊದಲ ಎರಡು ತರಗತಿಗಳಲ್ಲಿ ಅಕ್ಷರ ,ಒತ್ತಕ್ಷರ ,ಸಂಖ್ಯೆ ಮಗ್ಗಿ ಇತ್ಯಾದಿ ಕಲಿಸುತ್ತಿದ್ದರು . ಮೂರರಿಂದ ಸಮಾಜ ವಿಜ್ಞಾನ ಗಣಿತ ಹೀಗೆ ಆರಂಭ ಆಗುವುದು . ಹೆಚ್ಚಿನ ಅಧ್ಯಾಪಕರು ಪಠ್ಯ ಪುಸ್ತಕ ಒಂದು ಕೈಯಲ್ಲಿ ಮತ್ತು ಇನ್ನೊಂದರಲ್ಲಿ ಬೆತ್ತ ಹಿಡಿದು ಓದುತ್ತಾ ಹೋಗುವರು . ಅವರಿಗೆ ಮುಖ್ಯ ಎನಿಸಿದ ಮತ್ತು ಅರ್ಥ ಆಗದೇ ಇದ್ದರೆ ಪುನಃ ಓದುವರು ಮತ್ತು ಅರ್ಥ ಆಯಿತಾ ,ಅಂಡರ್ ಸ್ಟಾಂಡ್ ಇತ್ಯಾದಿ ಹೇಳುವರು . ಉದಾ ; ಮಹಾತ್ಮಾ ಗಾಂಧಿಯವರು ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು .. ಈ ವಾಕ್ಯವನ್ನು ಪೂರ್ಣವಾಗಿ ಓದುವರು ,ಆಮೇಲೆ ಮಹಾತ್ಮಾ ಗಾಂಧಿಯವರು ಏನು ಮಾಡಿದರು ? ಆಗ ನಾವು ಸ್ವಾತಂತ್ರ್ಯ ತಂದು ಕೊಟ್ಟರು ಎನ್ನ ಬೇಕು . ಯಾರು ತಂದು ಕೊಟ್ಟರು? ಗಾಂಧಿ ತಂದು ಕೊಟ್ಟರು . ಯಾರಿಗೆ ತಂದು ಕೊಟ್ಟರು ? ಭಾರತಕ್ಕೆ ತಂದುಕೊಟ್ಟರು . ನಡುವೆ ಯಾರಾದರೂ ಹುಡುಗರ ಮನಸ್ಸು ಕ್ಲಾಸ್ ನಲ್ಲಿ ಇಲ್ಲಾ ಎಂದು ಅನಿಸಿದರೆ ' ಕೃಷ್ಣಪ್ಪಾ ಸ್ಟ್ಯಾಂಡ್ ಅಪ್ ,ಗಾಂಧಿ ಏನು ಮಾಡಿದರು ? "
"ಉಪವಾಸ ಮಾಡಿದರು ಸರ್"
ನಿನ್ನ ತಲೆ ,ನೀನು ಕ್ಲಾಸಿನಲ್ಲಿ ಇಲ್ಲ ,ನಿಲ್ಲು ಬೆಂಚಿನ ಮೇಲೆ "
ಇಲ್ಲಿ ಅಧ್ಯಾಪಕರೂ ಓದಿ ಬಂದಿರುವುದಿಲ್ಲ .ಪಠ್ಯ ಪುಸ್ತಕ ಓದಿ ಅದನ್ನೇ ಪುನರಾವೃತ್ತಿ ಮಾಡುವರು . ಇದು ಪೂರ್ಣ ನಿಷ್ಪ್ರಯೋಜಕ ಎಂದು ನಾನು ಹೇಳುವುದಿಲ್ಲ . ಆದರೆ ಒಳ್ಳೆಯ ಮಾದರಿ ಅಲ್ಲ. ನನ್ನ ಒಂಬತ್ತನೇ ತರಗತಿಯಲ್ಲಿ ನಡೆದ ಸಂಗತಿ .ಚರಿತ್ರೆ ಅಧ್ಯಾಪಕರು ಇದೇ ರೀತಿ ಓದಿ ಪಾಠ ಮಾಡುವವರು . ಮೈಸೂರಿನ ಇತಿಹಾಸ .
" ಮೈಸೂರಿನ ಹುಲಿ ಟಿಪ್ಪು ಸುಲ್ತಾನನು ನಾಲ್ಕನೇ ಮೈಸೂರು ಯುದ್ಧದಲ್ಲಿ 1799ನೇ ಫೆಬ್ರುವರಿ 30 ರಂದು ಮಡಿದನು ." ಎಂದು ಪುಸ್ತಕದಲ್ಲಿ ಇತ್ತು .ಅಧ್ಯಾಪಕರು ಅದನ್ನೇ ಮೇಲೆ ಹೇಳಿದಂತೆ ಪುನರಾವೃತ್ತಿ ಮಾಡಿದರು . ನಮ್ಮ ತರಗತಿಯಲ್ಲಿ ಒಬ್ಬ ಜಾಣ ಹುಡುಗ ಎದ್ದು ನಿಂತು "ಸಾರ್ ಫೆಬ್ರುವರಿ ಯಲ್ಲಿ ಮೂವತ್ತು ಇಲ್ಲವಲ್ಲ?"
ಮಾಸ್ಟ್ರು ಕಕ್ಕಾ ಬಿಕ್ಕಿ .ಸುಧಾರಿಸಿ ಕೊಂಡು ಗುಡ್ 'ನಾನು ಯಾರು ಇದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ .ಉಳಿದವರು ನಿದ್ದೆ ಮಾಡುತಿದ್ದ್ರಿರೋ?" ಎಂದರು .
ಇನ್ನೊಮ್ಮೆ ಜೀವ ಶಾಸ್ತ್ರ ಅಧ್ಯಾಪಕರು ಸಸ್ಯ ಮತ್ತು ಪ್ರಾಣಿಗಳಲ್ಲಿಯ ಭೇದ ಗಳ ಪಾಠ ಪುಸ್ತಕ ಓದುತ್ತಾ " ಸಸ್ಯಗಳಲ್ಲಿ ನರ ವ್ಯೂಹ ಇಲ್ಲ .ಏನು ಇಲ್ಲಾ ,ನರ ಮಂಡಲ ಇಲ್ಲ . ಪ್ರಾಣಿಗಳಲ್ಲಿ ಅದು ಇರುತ್ತದೆ ." ಇದನ್ನೇ ಪುನಃ ಪುನಃ ಓದಿದರು .ಒಬ್ಬ ವಿದ್ಯಾರ್ಥಿ " ಹಾಗಾದರೆ ನಾಚಿಕೆ ಮುಳ್ಳು (ಮುಟ್ಟಿದರೆ ಮುನಿ)ಒಂದು ಎಲೆ ಮುಟ್ಟಿದರೆ ಉಳಿದವೂ ಮಡಿಚುವುದು ಹೇಗೆ ?'ಎಂದು ಪ್ರಶ್ನಿಸಿದ . ಅದಕ್ಕೆ ಅಧ್ಯಾಪಕರು "ತಲೆ ಹರಟೆ ,ಹೇಳಿದ್ದನ್ನು ಕೇಳಿಕೊಂಡು ಕುಳಿತುಕೋ .ಇವನು ದೊಡ್ಡ ಬೃಹಸ್ಪತಿ " ಎಂದರು .
ಮೂರನೇ ತರಗತಿಗೆ ನನಗೆ ಮಡಿಯಾಲ ಶ್ರೀನಿವಾಸ ರಾವ್ ಅಧ್ಯಾಪಕರು .ಅವರು ಪಠ್ಯ ಓದಿ ಬಂದು ವಿಶ್ಲೇಷಿಸಿ ಪಾಠ ಮಾಡುವರು .ಸಂಜೆ ತರಗತಿಯ ಹೊರಗೆ ಆಲದ ಮರದ ಅಡಿಯಲ್ಲಿ ಚಂದಮಾಮ ಮತ್ತು ಇತರ ಕತೆ ಪುಸ್ತಕ ಓದುವರು .ನಮ್ಮಲ್ಲಿ ಓದುವ ಹವ್ಯಾಸ ಬೆಳೆಸಿದವರು ಅವರು ಎಂಟನೇ ತರಗತಿ ವರೆಗೆ ಕಲಿತ ಶಿಕ್ಷಕ ತರಬೇತಿ ಆಗದ ಶಿಕ್ಷಕರು . ಶಿಸ್ತು ಪಾಲನೆಗೆ ಹೆಸರಾದವರು .ಅವರ ಮಗ ಶ್ರೀಪತಿ ರಾಯರು ನನಗೆ ಹೈ ಸ್ಕೂಲ್ ನಲ್ಲಿ ವಿಜ್ಞಾನ ಅಧ್ಯಾಪಕರು . ತಂದೆಯಂತೆ ಮಗ . ಪೂರ್ವ ತಯಾರಿ ಮಾಡಿ ಬರುವರು ..ಪ್ರಯೋಗ ಶಾಲೆ ಇದೆಯೆಂದು ತಿಳಿದದ್ದು ಅವರಿಂದ .ತರಗತಿ ಗೆ ಆರಂಭಕ್ಕೆ ಮೊದಲೇ ಬಂದು ಸಂಬಂಧ ಪಟ್ಟ ಚಿತ್ರ ವರ್ಣಮಯವಾಗಿ ಬೋರ್ಡ್ ನಲ್ಲಿ ಬರೆಯುವರು .ಸಾಧ್ಯವಾದ ಪ್ರಯೋಗ ಮಾಡಿ ತೋರಿಸುವರು .ಪಠ್ಯ ಪುಸ್ತಕ ತರಗತಿಯಲ್ಲಿ ಓದುತ್ತಿರಲಿಲ್ಲ.
ಹೈ ಸ್ಕೂಲ್ ನಲ್ಲಿ ಕಮ್ಮಜೆ ಸುಬ್ಬಣ್ಣ ಭಟ್ (ಅವರು ಜೂನಿಯರ್ ಕಾಲೇಜು ಅರ್ಥ ಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕ ಹೊಂದಿದ್ದರೂ ಹೈ ಸ್ಕೂಲ್ ತರಗತಿಗೆ ಪಾಠ ಮಾಡುತ್ತಿದ್ದರು )ಇಂಗ್ಲಿಷ್ ಪಾಠ ವನ್ನು ಹೇಗೆ ಮಾಡ ಬಹುದು ಎಂದು ತೋರಿಸಿ ಕೊಟ್ಟರು .ಅಧ್ಯಯನ ಮಾಡಿ ಕ್ಲಾಸ್ ಗೆ ಬರುವರು .ನಮ್ಮಲ್ಲಿ ಸಾಹಿತ್ಯದ ಅಭಿರುಚಿ ಕೆರಳಿಸುವ ಪಾಠ .. ಮತ್ತು ಸಣ್ಣ ಸಣ್ಣ ವಿವರವೂ ಮನದಟ್ಟು ಮಾಡುವರು .ಉದಾಹರಣೆಗೆ ಸ್ಯಾಂಡ್ ವಿಚ್ ಎಂಬ ಶಬ್ದ ಬಂತು .ನಾವು ಹಳ್ಳಿ ಮಕ್ಕಳು ಕೇಳಿಯೂ ನೋಡಿಯೂ ಇಲ್ಲದ ವಸ್ತು .ಬೋರ್ಡಿನಲ್ಲಿ ಎರಡು ಬ್ರೆಡ್ ತುಂಡು ಚಿತ್ರ ಬರೆದು ನಡುವೆ ಪದಾರ್ಥ ಹಾಕಿ ಇದು ಎಂದು ವಿವರಿಸುವರು .ಅದೇ ರೀತಿ ಹೈ ಸ್ಕೂಲ್ ನಲ್ಲಿ ಶ್ರೀನಿವಾಸ ಉಪಾಧ್ಯ (ಹೆಡ್ ಮಾಸ್ಟರ್ ),ಪ್ರೈಮರಿಯಲ್ಲಿ ಜನಾರ್ಧನ ಶೆಟ್ಟರು ಅಧ್ಯಾಪನ ಎಂದರೆ ಏನು ಎಂದು ತೋರಿಸಿ ಕೊಟ್ಟವರು .ಪೂರ್ವಭಾವೀ ಅಧ್ಯಯನ ಮಾಡಿ ತರಗತಿಗಳಿಗೆ ಅಧ್ಯಾಪಕರು ಬರುತ್ತಿದ್ದುದು ಬಹಳ ಕಡಿಮೆ ,.
ನನಗೂ ಅಧ್ಯಾಪಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು . ಈಗಲೂ ನನ್ನ ಹಳ್ಳಿಯ ಶಾಲೆಯ ಎಲ್ಲಾ ಅಧ್ಯಾಪಕರ ಮೇಲೆ ನನಗೆ ಗೌರವ ಮತ್ತು ಪ್ರೀತಿ ಇದೆ :ಮತ್ತು ತಮ್ಮ ಅರಿವಿಗನುಗುಣವಾಗಿ ಪ್ರಮಾಣಿಕ ಕೆಲಸ ಮಾಡಿದ್ದಾರೆ.ಆದರೆ ಅರಿವ ಅರಿತು ಕುತೂಹಲ ಅರಳಿಸಿ ಮಾಡಿದವರು ಬೆರಳೆಣಿಕೆಯಷ್ಟು ಎಂದು ಈಗ ಅರಿವಾಗುತ್ತಿದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ