ಮರೆಯಲಾಗದ ಬ್ಯಾರಿ ಬಂಧುಗಳು
ನನ್ನ ಬಾಲ್ಯದಲ್ಲಿ ಕಂಡ ಒಂದು ವ್ಯಕ್ತಿ ಬಳ್ಳಿ ಬ್ಯಾರಿ .ಅವರಿಗೆ ಆ ಹೆಸರು ಯಾಕೆ ಬಂತು ಎಂದು ಜ್ಞಾಪಕ ಇಲ್ಲ . ಆಗಾಗ ಮನೆಗೆ ಬರುತ್ತಿದ್ದು ಮಹಾತ್ಮಾ ಗಾಂಧಿ ಯವರ ತದ್ರೂಪದಂತೆ ಇದ್ದರು .ಮೃದು ಮಾತು .ಅವರನ್ನು ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು . ನಾವು ಮಕ್ಕಳನ್ನೆಲ್ಲಾ ಒಬ್ಬೊಬ್ಬರನ್ನು ಅಂಗಳದಲ್ಲಿ ಕುಳ್ಳಿರಿಸಿ ಬಾಯಲ್ಲಿ ಮಂತ್ರ ಗುಣು ಗುಣಿಸಿ ಕೈಯಲ್ಲಿ ಒಂದು ಎಲೆಯ ಕಟ್ಟಿನಿಂದ ನಮ್ಮ ತಲೆಗೆ ನೋವಾಗದಂತೆ ಬಡಿಯುತ್ತಿದ್ದರು . ದೃಷ್ಟಿ ತೆಗೆಯುತ್ತಿದ್ದ ವಿಧಾನ .ಆ ಮೇಲೆ ಕೊಟ್ಟ ಕಾಣಿಕೆ ತೆಗೆದು ಕೊಂಡು ಚಾ ಕುಡಿದು ಹೋಗುವರು .
ಇನ್ನೊಂದು ಕಲಾಯಿ ಬ್ಯಾರಿ ಮತ್ತು ಅವರ ತಂಡ .ಎರಡು ವರ್ಷಕ್ಕೊಮ್ಮೆ ಮನೆಗೆ ಅವರನ್ನು ಕರೆಯಿಸುವರು . ಅವರು ಬಂದು ಒಂದು ಮಣ್ಣಿನ ಒಲೆ ನಿರ್ಮಿಸಿ ಒಂದು ತುದಿಗೆ ಚರ್ಮದ ತಿದಿ ,ಇನ್ನೊಂದು ಕಡೆ ಇದ್ದಿಲ ಓಲೆ . ಅವರು ತಿದಿಯಿಂದ ಗಾಳಿ ಹಾಕಿ ಇದ್ದಲು ಕೆಂಪಾಗುವಂತೆ ಮಾಡುವುದನ್ನು ಆಶ್ಚರ್ಯ ದಿಂದ ನೋಡುತ್ತಿದ್ದೆವು . ನಮಗೂ ತಿದಿ ಒತ್ತುವ ಆಸೆ ಆಗುತ್ತಿತ್ತು . ಅವರ ಆಗಮನದೊಂದಿಗೆ ಮನೆಯ ಎಲ್ಲಾ ಹಿತ್ತಾಳೆ ಪಾತ್ರೆ ಹಂಡೆಗಳು ಹೊರ ಬರುವವು . ಅದಕ್ಕೆ ಸತುವನ್ನು ಕಾಸಿ ಬೆಳ್ಳಿಯಂತ ಲೇಪ ಹಾಕಿ ಪಾಲಿಷ್ ಮಾಡಿ ಪಳ ಪಳ ಹೊಳೆಯುವಂತೆ ಮಾಡುವ ಮಾಂತ್ರಿಕರಂತೆ ಕಾಣುತ್ತಿದ್ದರು .ಕಲಾಯಿ ಕೆಲಸಕ್ಕೆ ಒಂದೆರಡು ದಿನ ಬೇಕಾಗುತ್ತಿತ್ತು .ಹಳೇ ಚಿಮಿಣಿ ಮತ್ತು ತೆಂಗಿನ ಎಣ್ಣೆ ಡಬ್ಬಿಗಳ ಬಾಯಿ ತೆಗೆದು ಅದಕ್ಕೆ ಸುಂದರವಾದ ಮುಚ್ಚಳ ಮಾಡಿ ಕೊಡುತ್ತಿದ್ದು ಅದನ್ನು ಅವಲಕ್ಕಿ ಇತ್ಯಾದಿ ಸಂಗ್ರಹ ಮಾಡಿ ಇಡಲು ಉಪಯೋಗಿಸುತ್ತಿದ್ದರು .
ಇನ್ನೊಬ್ಬರು ಬಾಳೆ ಕಾಯಿ ಬ್ಯಾರಿ . ಅವರು ಶ್ರಮ ಜೀವಿ .ಆಗಾಗ ಬಂದು ಬಾಳೆ ಎಲೆ ,ಬಾಳೆಕಾಯಿ ಕೊಂಡು ಹೋಗುವರು .ನಗು ಮುಖ . ವೃತ್ತಿಯಿಂದಾಗಿ ಅವರ ಉಡುಗೆ ತೊಡುಗೆ ಪೂರ್ಣ ಕಲೆಗಳಿಂದ ಕೂಡಿತ್ತು .. ತಮ್ಮ ಖರೀದಿಯನ್ನು ತಲೆ ಹೊರೆಯಲ್ಲಿ ಎರಡು ಮೈಲು ಹೊತ್ತು ಬಸ್ಸಿನ ಟಾಪ್ ನಲ್ಲಿ ಏರಿಸಿ ಪೇಟೆಗೊಯ್ದು ಮಾರಿ ಜೀವನ ಸಾಗಿಸುತ್ತಿದ್ದರು . ಆದರೆ ರೈತರಾಗಲೀ ಅವರಾಗಲಿ ದಿಢೀರಾಗಿ ಯಾರೂ ಶ್ರೀಮಂತರಾದುದುದು ಕಂಡ ನೆನಪಿಲ್ಲ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ